‘ಮೋದಿ ಸರ್‌ನೇಮ್’ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್ ಕೋರ್ಟ್ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಕಾಂಗ್ರೆಸ್ ನಾಯಕ, ವಯನಾಡ್ ಸಂಸದ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಸ್ಥಾನ ಅನರ್ಹಗೊಳಿಸಲಾಗಿದೆ. ಈ ಬೆನ್ನಲ್ಲೇ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಬಿಜೆಪಿ ನಾಯಕಿ ಖುಷ್ಬು ಸುಂದರ್ ಅವರು ಮೋದಿ ಸರ್‌ನೇಮ್‌ನ್ನು ಭ್ರಷ್ಟಾಚಾರಕ್ಕೆ ಲಿಂಕ್ ಮಾಡಿದ ಹಳೆಯ ಟ್ವೀಟ್ ವೈರಲ್ ಆಗಿದೆ. ಈ ಬಗ್ಗೆ ಶನಿವಾರ ಖುಷ್ಬು ಅವರು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.
ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ಉಪನಾಮದ ಬಗ್ಗೆ ಮಾಡಿದ ಹೇಳಿಕೆಗಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಈ ಟ್ವೀಟ್ ಮಹತ್ವ ಪಡೆದುಕೊಂಡಿದೆ. ಶುಕ್ರವಾರ, ದೋಷಾರೋಪಣೆಯ ಆಧಾರದ ಮೇಲೆ ಗಾಂಧಿ ಅವರನ್ನು ಲೋಕಸಭೆಯ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು.
ಗಾಂಧಿ ವಿರುದ್ಧದ ಕ್ರಮ ಸೇಡಿನ ರಾಜಕಾರಣ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ., ಆದರೆ ಸ್ಕ್ರೋಲ್ ಜೊತೆ ಮಾತನಾಡುವ ಕಾನೂನು ತಜ್ಞರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳು ಮೋದಿ ಸರ್‌ನೇಮ್ ಹೊಂದಿರುವ ಎಲ್ಲರನ್ನು ದೂಷಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಖುಷ್ಬು ಸುಂದರ್ ಅವರು 2018ರಲ್ಲಿ ಪೋಸ್ಟ್ ಮಾಡಿದ್ದ ಟ್ವೀಟ್ ಶನಿವಾರ ಮತ್ತೆ ಮುನ್ನಲೆಗೆ ಬಂದಿದೆ. ಅಲ್ಲಿ ಅವರು ಲಲಿತ್ ಮೋದಿ ಮತ್ತು ನೀರವ್ ಮೋದಿಯನ್ನು ಉಲ್ಲೇಖಿಸಿದ್ದಾರೆ – ವಂಚನೆ ಆರೋಪದಲ್ಲಿ ಪರಾರಿಯಾಗಿರುವ ಉದ್ಯಮಿಗಳು. “ಮೋದಿ ಎಂದರೆ ಭ್ರಷ್ಟಾಚಾರ”, “ಮೋದಿಯ ಅರ್ಥವನ್ನು ಭ್ರಷ್ಟಾಚಾರ ಎಂದು ಬದಲಾಯಿಸೋಣ … ಅದೇ ಉತ್ತಮವಾಗಿದೆ” ಎಂದು ಸುಂದರ್ ಪೋಸ್ಟ್ ಮಾಡಿದ್ದರು.
Yahan #Modi wahan #Modi jahan dekho #Modi..lekin yeh kya?? Har #Modi ke aage #bhrashtachaar surname laga hua hai..toh baat ko no samjho..#Modi mutlab #bhrashtachaar..let's change the meaning of #Modi to corruption..suits better..#Nirav #Lalit #Namo = corruption..👌👌😊😊
— KhushbuSundar (@khushsundar) February 15, 2018
ಕರ್ನಾಟಕದಲ್ಲಿ 2019ರ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿಯವರು, ”ನನ್ನ ಬಳಿ ಒಂದು ಪ್ರಶ್ನೆ ಇದೆ. ನೀರವ್ ಮೋದಿ ಇರಬಹುದು, ಲಲಿತ್ ಮೋದಿ ಇರಬಹುದು ಅಥವಾ ನರೇಂದ್ರ ಮೋದಿ ಇರಬಹುದು. ಎಲ್ಲ ಕಳ್ಳರ ಹೆಸರಿನಲ್ಲಿಯೂ ಮೋದಿ ಎಂದು ಏಕೆ ಇದೆ? ಎಂದು ಹೇಳಿದ್ದರು. ಖುಷ್ಬು ಅವರ ಟ್ವೀಟ್‌ನಲ್ಲೂ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಹೋಲುವ ಬರಹವಿದೆ.
ಶನಿವಾರ ಪಿಟಿಐ ಜೊತೆ ಮಾತನಾಡಿದ ಖುಷ್ಬು ಅವರು ತಮ್ಮ ಟ್ವೀಟ್‌ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ”ನಾನು ಈ ಕಾಮೆಂಟ್ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿದ್ದೆ. ನಾನು ಅಲ್ಲಿಯ ನಾಯಕರನ್ನು ಅನುಸರಿಸುತ್ತಿದ್ದೆ ಮತ್ತು ಆ ಪಕ್ಷದ ಭಾಷೆಯಲ್ಲಿಯೇ ಮಾತನಾಡುತ್ತಿದ್ದೆ” ಎಂದು ಹೇಳಿದ್ದಾರೆ.
”ಈಗ ಕಾಂಗ್ರೆಸ್‌ನವರು ನನ್ನ ಹಳೆಯ ಟ್ವೀಟ್‌ಗಳನ್ನು ತರಾಟೆಗೆ ತೆಗೆದುಕೊಂಡಿರುವುದನ್ನು ನೋಡಿದರೆ ಅವರು ಎಷ್ಟು ಹತಾಶವಾಗಿದೆ ಎಂಬುದನ್ನು ತೋರಿಸುತ್ತದೆ. ಭ್ರಷ್ಟಾಚಾರದ ಆರೋಪ ಮಾಡುವುದಕ್ಕೂ ಯಾರನ್ನಾದರೂ ಕಳ್ಳ ಎಂದು ಕರೆಯುವುದಕ್ಕೂ ವ್ಯತ್ಯಾಸವಿದೆ. ಧೈರ್ಯವಿದ್ದರೆ ನನ್ನ ವಿರುದ್ಧ ಕೇಸು ದಾಖಲಿಸಿ” ಎಂದು ಖುಷ್ಬು ಟ್ವೀಟ್‌ನಲ್ಲಿ ಹೇಳಿದ್ದಾರೆ.
How more desperate can they be!! A 5 yr old tweet is what now @INCIndia is taking to defend themselves? I as a spokesperson for the CONgress than was speaking the same language of @RahulGandhi . Just followed the line of this man. Why raise a question to my party? File a case on…
— KhushbuSundar (@khushsundar) March 25, 2023
ಈ ಮಧ್ಯೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಗಾಂಧಿ ಅವರು, ”ತಮ್ಮ ವಿರುದ್ಧದ ಕ್ರಮಗಳಿಗೆ ಹೆದರುವುದಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿ ನಡುವಿನ ಸಂಬಂಧಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವುದನ್ನು ಮುಂದುವರಿಸುತ್ತೇನೆ” ಎಂದು ಪ್ರತಿಪಾದಿಸಿದರು. ಸಂಸತ್ತಿನಲ್ಲಿ ಅದಾನಿ ಬಗ್ಗೆ ಮಾತನಾಡಲು ಪ್ರಧಾನಿ ಹೆದರಿದ್ದರಿಂದ, ತಮ್ಮನ್ನು ಅನರ್ಹಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅದಾನಿ ವಂಚನೆ ಬಗ್ಗೆ ಹಿಂಡೆನ್‌ಬರ್ಗ್ ವರದಿ ಮಾಡಿದ ಬೆನ್ನಲ್ಲೇ ಜನವರಿಯಿಂದ ಅದಾನಿ ಸಂಸ್ಥೆಗಳ ಷೇರುಗಳು ಕುಸಿದಿವೆ. ಅದಾನಿ ವಿರುದ್ಧ ತನಿಖೆಗೆ ಆದೇಶಿಸುವಂತೆ ಪ್ರತಿಪಕ್ಷಗಳು ಆಗ್ರಹಿಸುತ್ತಿದ್ದರೂ ಸರ್ಕಾರ ಮಾತನಾಡುತ್ತಿಲ್ಲ. ಅದಾನಿ ಸಮೂಹದ ಸಂಸ್ಥಾಪಕ ಗೌತಮ್ ಅದಾನಿಗೆ ಪ್ರಧಾನಿ ಒಲವು ತೋರುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.


