ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿರುವ ಕಾಂಗ್ರೆಸ್ ಪಕ್ಷವು ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಯಾರಿಗೆ ಎಂಬುದನ್ನು ಇನ್ನೂ ಗುಟ್ಟಾಗಿಯೇ ಇಟ್ಟಿದೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರಿಗೆ ಕನಕಪುರ ಟಿಕೆಟ್ ನೀಡಿದ್ದು, ಅವರು ಚನ್ನಪಟ್ಟಣದಿಂದಲೂ ಸ್ಪರ್ಧಿಸುತ್ತಾರೆ ಎಂಬ ಗುಸುಗುಸುಗಳು ಆರಂಭಗೊಂಡಿವೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿ ಎನಿಸಿಕೊಂಡಿದ್ದ ಪ್ರಸನ್ನಗೌಡರವರು ಮೊದಲ ಪಟ್ಟಿಯಲ್ಲಿ ಹೆಸರಿಲ್ಲದಿರುವುದರಿಂದ ಬೇಸತ್ತು ಇಂದು ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಪಕ್ಷ ಸೇರಿದ್ದಾರೆ.
ಚನ್ನಪಟ್ಟಣ ಸ್ವಾಭಿಮಾನಿ ಕಾರ್ಯಕರ್ತರು ದೂರವಾಗುತ್ತಿರುವ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಅವರು ಅಭ್ಯರ್ಥಿ ಅಂತ ಸುದ್ದಿ ಬಂದಿದ್ದು ಸಂತಸದ ಸುದ್ದಿ ಎಂದು ಸ್ವಾಭಿಮಾನಿ ಕಾಂಗ್ರೆಸ್ ಚನ್ನಪಟ್ಟಣ ಎಂಬ ಖಾತೆ ಹೆಸರಿನಲ್ಲಿ ಹಲವಾರು ಪೋಸ್ಟ್‌ಗಳು ಹರಿದಾಡಿವೆ.

ಈ ಹಿಂದೆ ಚಿತ್ರನಟಿ ರಮ್ಯಾ ದಿವ್ಯಸ್ಪಂದನ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಕೋಲಾರದಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಲು ನಿರ್ಧರಿಸಿರುವ ಎಚ್.ಡಿ ಕುಮಾರಸ್ವಾಮಿಯವರಿಗೆ ಟಕ್ಕರ್ ಕೊಡಲು ಇಲ್ಲಿ ರಮ್ಯಾರನ್ನು ಕಣಕ್ಕಿಳಿಸಲಾಗುತ್ತಿದೆ. ಹೋರಾಟ ಕೊಟ್ಟು ಸೋತರೂ ಕೂಡ ಅವರನ್ನು ಎಂಎಲ್‌ಸಿ ಮಾಡಲಾಗುತ್ತದೆ ಎಂಬುದಾಗಿ ಮಾಧ್ಯಮಗಳು ಬರೆದವು. ಆದರೆ ಡಿ.ಕೆ ಸುರೇಶ್ ಆ ವರದಿಗಳನ್ನು ನಿರಾಕರಿಸಿದ್ದಾರೆ. ಇನ್ನು ಹೆಚ್.ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ರಮ್ಯಾರವರು ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟು ಮತದಾರರು 2,30,000 ದಷ್ಟು ಮತದಾರರಿರುವ ಚನ್ನಪಟ್ಟಣದಲ್ಲಿ ಒಕ್ಕಲಿಗ: 1,05,000, ಎಸ್‌ಸಿ: 40,000, ಮುಸ್ಲಿಂ; 35,000, ಲಿಂಗಾಯಿತ: 11,000, ಕುರುಬರು: 8,000 ಮತ್ತು ಇತರೆ ಸಮುದಾಯದ 31,000 ದಷ್ಟು ಮತಗಳಿವೆ.
ಚಿತ್ರನಟರಾಗಿದ್ದ ಸಿ.ಪಿ ಯೋಗಿಶ್ವರ್ ಚನ್ನಪಟ್ಟಣದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಅವರು ನಂತರ ಕಾಂಗ್ರೆಸ್ ಸೇರಿ 2004 ಮತ್ತು 2008ರ ಚುನಾವಣೆಗಳಲ್ಲಿ ಗೆಲುವು ಪಡೆದರು. ಆದರೆ ಆಪರೇಷನ್ ಕಮಲದ ಬಲೆಗೆ ಬಿದ್ದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ 2009ರಲ್ಲಿ ಉಪಚುನಾವಣೆ ಎದುರಿಸಿ ಜೆಡಿಎಸ್‌ನ ಅಶ್ವಥ್ ಎಂ.ಸಿ ಎದುರು ಕೇವಲ 2 ಸಾವಿರ ಮತಗಳಿಂದ ಸೋಲು ಅನುಭವಿಸಿದರು. ಆದರೆ ಅಷ್ಟಕ್ಕೆ ಸುಮ್ಮನಾಗದೆ ಶತಗತಾಯ ಗೆಲ್ಲಬೇಕೆಂದು ಹಠತೊಟ್ಟಿದ್ದರು. ಅಷ್ಟರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಅಶ್ವಥ್‌ರವರು ಸಹ ಆಪರೇಷನ್ ಕಮಲದ ಬಲೆಗೆ ಬಿದ್ದಾಗ ಚನ್ನಪಟ್ಟಣಕ್ಕೆ 2011ರಲ್ಲಿ ಮತ್ತೆ ಉಪಚುನಾವಣೆ ಎದುರಾಯಿತು. ಆಗ ಬಿಜೆಪಿಯಿಂದ ಸಿ.ಪಿ ಯೋಗಿಶ್ವರ್ ಕಣಕ್ಕಿಳಿದರೆ, ಚುನಾವಣೆಗೆ ಕೇವಲ 9 ದಿನ ಇರುವಾಗ ಜೆಡಿಎಸ್‌ನಿಂದ ಎಸ್.ಎಲ್ ನಾಗರಾಜುರವರನ್ನು ಅಭ್ಯರ್ಥಿ ಎಂದು ಘೋಷಿಸಲಾಯಿತು. ಹಾಗಾಗಿ ಯೋಗಿಶ್ವರ್ ಗೆಲುವು ಸಾಧಿಸಿ ಮಂತ್ರಿಯಾದರು. ಆದರೆ ಅವರ ಪಕ್ಷಾಂತರ ಪರ್ವ ಮಾತ್ರ ನಿಲ್ಲಲಿಲ್ಲ. ಎರಡೇ ವರ್ಷದಲ್ಲಿ ಬಿಜೆಪಿ ತೊರೆದ ಅವರು 2013ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿಯವರನ್ನು ಸೋಲಿಸಿದರು. ನಂತರ ಮತ್ತೆ ಬಿಜೆಪಿ ಸೇರಿ 2018ರಲ್ಲಿ ಎಚ್.ಡಿ ಕುಮಾರಸ್ವಾಮಿ ಎದುರು ಸೋತರು. 2019ರಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸಲು ಕೆಲಸ ಮಾಡಿದ್ದಕ್ಕಾಗಿ ಎಂಎಲ್‌ಸಿಯಾದ ಅವರು ಮತ್ತೊಮ್ಮೆ ಮಂತ್ರಿ ಸಹ ಆದರು. ಆದರೆ ಮಂತ್ರಿಗಿರಿ ಬಹಳ ದಿನ ಉಳಿಯಲಿಲ್ಲ. ಈಗ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಅವರು ಮತ್ತೆ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕುಮಾರಸ್ವಾಮಿ ಕೈಗೆ ಸಿಕ್ಕ ಕ್ಷೇತ್ರ
2004ರಿಂದ ಜೆಡಿಎಸ್ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿತ್ತು. ಆದರೆ ಆಗ ಕಾಂಗ್ರೆಸ್‌ನಲ್ಲಿದ್ದ ಸಿ.ಪಿ ಯೋಗಿಶ್ವರ್ ಅದಕ್ಕೆ ಅವಕಾಶ ನೀಡಿರಲಿಲ್ಲ. ಆದರೆ 2009ರಲ್ಲಿ ಯೋಗಿಶ್ವರ್ ಬಿಜೆಪಿಗೆ ಪಕ್ಷಾಂತರ ಮಾಡಿದಾಗ ಜೆಡಿಎಸ್‌ನ ಅಶ್ವಥ್‌ಗೆ ಶಾಸಕ ಸ್ಥಾನ ದಕ್ಕಿತು. ಆದರೆ ನಂತರ ಎರಡೇ ವರ್ಷದಲ್ಲಿ ಅವರು ಸಹ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರಿದರು. ನಂತರದ ಉಪಚುನಾವಣೆಯಲ್ಲಿ ಜೆಡಿಎಸ್‌ನ ಎಸ್.ಎಲ್ ನಾಗರಾಜು ಸೋಲು ಅನುಭವಿಸಿದರು. ಆ ನಂತರ ಅವರಿಗೆ ಟಿಕೆಟ್ ನಿರಾಕರಿಸಲಾಯಿತು. ಒಂದು ವೇಳೆ ಅವರು ಗೆದ್ದರೆ ಮತ್ತೆ ಆ ಸೀಟನ್ನು ನಾಗರಾಜು ಬಿಟ್ಟು ತಮಗೆ ಬೇಕಾದವರಿಗೆ ಕೊಡಲು ಸಾಧ್ಯವಿಲ್ಲ ಎಂಬುದು ಕುಮಾರಸ್ವಾಮಿಯವರ ಇಂಗಿತವಾಗಿತ್ತು ಎಂಬ ಆರೋಪ ಸಹ ಇದೆ. 2013ರಲ್ಲಿ ಜೆಡಿಎಸ್‌ನಿಂದ ಅನಿತಾ ಕುಮಾರಸ್ವಾಮಿಯವರೆ ಕಣಕ್ಕಿಳಿದರೂ ಸಹ ಗೆಲುವು ಕೈಗೆ ಸಿಗಲಿಲ್ಲ. ಅವರ ಎದುರು 6,464 ಮತಗಳಿಂದ ಸಿ.ಪಿ ಯೋಗಿಶ್ವರ್ ಗೆಲುವು ಸಾಧಿಸಿದರು. ಈ ಕ್ಷೇತ್ರವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ಎಚ್.ಡಿ.ಕೆ 2018ರ ಚುನಾವಣೆಯಲ್ಲಿ ರಾಮನಗರದ ಜೊತೆಗೆ ಚನ್ನಪಟ್ಟಣದಿಂದಲೂ ಸಹ ಕಣಕ್ಕಿಳಿದರು ಮತ್ತು ಎರಡೂ ಕಡೆ ಗೆಲುವು ಸಾಧಿಸಿದರು. ಕೊನೆಗೂ ಚನ್ನಪಟ್ಟಣ ಜೆಡಿಎಸ್ ಫ್ಯಾಮಿಲಿಯ ವಶವಾಯಿತು. ಮುಂಬರುವ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿಂದ ಸ್ಪರ್ಧಿಸಲು ಸಿದ್ದತೆ ನಡೆಸಿದ್ದಾರೆ. ಅದಕ್ಕಾಗಿಯೇ ರಾಮನಗರಕ್ಕೆ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯವರನ್ನು ತಂದಿದ್ದಾರೆ.
ಕಾಂಗ್ರೆಸ್ ಸ್ಥಿತಿಗತಿ
ಚನ್ನಪಟ್ಟಣ ಕಾಂಗ್ರೆಸ್ ಹಿಡಿತದಲ್ಲಿದ್ದ ಕ್ಷೇತ್ರ. 1952ರಿಂದ ಇಲ್ಲಿ 7 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಆದರೆ ಯಾವಾಗ 2008ರಲ್ಲಿ ಯೋಗಿಶ್ವರ್ ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿದರೋ ಆಗಿನಿಂದ ಇಲ್ಲಿ ಕಾಂಗ್ರೆಸ್ ಮಂಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ಕಾಂಗ್ರೆಸ್ ಮುಖಗಳಿಲ್ಲ. 2018ರ ಕೊನೆಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್.ಎಂ ರೇವಣ್ಣನವರು ಪಡೆದ ಮತಗಳು ಕೇವಲ 30,208. ಕನಕಪುರದಲ್ಲಿ ಪಾರಮ್ಯ ಸಾಧಿಸಿರುವ ಡಿ.ಕೆ ಸಹೋದರರು, ರಾಮನಗರ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವಂತೆ ಮಾಡುವುದಕ್ಕೋಸ್ಕರ, ಚನ್ನಪಟ್ಟಣವನ್ನು ತೆಕ್ಕೆಗೆ ತೆಗೆದುಕೊಳ್ಳಲು ತಂತ್ರ ಹೆಣೆಯುತ್ತಿದ್ದಾರೆ. ಅದರ ಭಾಗವಾಗಿಯೇ, ಕಾಂಗ್ರೆಸ್ ತೊರೆದುಹೋಗಿ ಇತ್ತೀಚೆಗೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾಗಿರುವ ಹಲವರನ್ನು ಕಾಂಗ್ರೆಸ್‌ಗೆ ವಾಪಸ್ ಕರೆತರುವ ಬಗ್ಗೆ ಒಳಗೊಳಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಆ ಭಾಗವಾಗಿ ಸಿ.ಪಿ ಯೋಗಿಶ್ವರ್ ಕೂಡ ಕಾಂಗ್ರೆಸ್‌ಗೆ ಬರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ಯೋಗಿಶ್ವರ್‌ರವರದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿತ್ತು. ಅದೆಲ್ಲವೂ ಅವರು ಬಿಜೆಪಿ ಬಿಡುತ್ತಾರೆ ಎನ್ನುವ ಸೂಚನೆಯಾಗಿದೆ. ಆದರೆ ಯೋಗಿಶ್ವರ್ – ಡಿ.ಕೆ ಸಹೋದರರು ಒಮ್ಮೊಮ್ಮೆ ಹಾವು – ಮುಂಗುಸಿಯಂತೆಯೂ ಆಡುತ್ತಾರೆ. ಒಮ್ಮೊಮ್ಮೆ ಚೆನ್ನಾಗಿರುತ್ತಾರೆ. ಹಾಗಾಗಿ ಯಾವುದನ್ನು ಈಗಲೇ ಹೇಳಲು ಸಾಧ್ಯವಾಗುತ್ತಿಲ್ಲ.
ಇನ್ನು ಪ್ರಸನ್ನಗೌಡರವರು ಸೇರಿದಂತೆ ಚನ್ನಪಟ್ಟಣದ ಕಾಂಗ್ರೆಸ್ ಟಿಕೆಟ್‌ಗಾಗಿ 8 ಜನ ಅರ್ಜಿ ಸಲ್ಲಿಸಿದ್ದರು. ತಯಾರಿ ನಡೆಸಿದ್ದಾರೆ. ಬೋರ್‌ವೆಲ್ ರಂಗನಾಥ್, ಡಿ.ಕೆ ಕಾಂತರಾಜು, ಭಗತ್ ರಾಮ್, ಕರುಣಾಕರ್, ಚಂದ್ರ ಸಾಗರ್ ಅರ್ಜಿ ಸಲ್ಲಿಸಿದ ಪ್ರಮುಖರಾಗಿದ್ದಾರೆ.
ಬಿಜೆಪಿ ಪರಿಸ್ಥಿತಿ
ಬಿಜೆಪಿ ಪಕ್ಷವು ಇಲ್ಲಿ ಜಯ ಗಳಿಸಿರುವುದು ಕೇವಲ ಒಮ್ಮೆ ಮಾತ್ರ. ಅದು 2011ರ ಉಪಚುನಾವಣೆಯಲ್ಲಿ ಸಿ.ಪಿ ಯೋಗೇಶ್ವರ್ ಗೆದ್ದದ್ದು. ಎರಡು ವರ್ಷಗಳಲ್ಲಿಯೇ ಅವರು ಪಕ್ಷ ಬಿಟ್ಟು ಸಮಾಜವಾದಿ ಪಕ್ಷ ಸೇರಿದ್ದರು. ಆ ನಂತರ 2017ರಲ್ಲಿ ಅವರು ಮತ್ತೆ ಬಿಜೆಪಿಗೆ ಬಂದರಾದರೂ 2018ರಲ್ಲಿ ಸೋಲು ಕಂಡಿದ್ದಾರೆ. ಹಾಗಾಗಿ ಇಲ್ಲಿ ಒಂದು ಪಕ್ಷವಾಗಿ ಬಿಜೆಪಿ ಗೆದ್ದಿದೆ ಎನ್ನುವುದಕ್ಕಿಂತ ಸಿ.ಪಿ ಯೋಗೇಶ್ವರ್‌ರವರ ವರ್ಚಿಸ್ಸಿನಿಂದ ಗೆಲ್ಲಲಾಗಿತ್ತು ಎನ್ನುವುದು ಸೂಕ್ತ. ಈಗಾಗಲೇ ಹೇಳಿದಂತೆ ಅವರು ಜೆಡಿಎಸ್ ಬಿಟ್ಟು ಉಳಿದೆಲ್ಲ ಪಕ್ಷಗಳಿಗೆ ಹೋಗಿ ಚುನಾವಣೆಗೆ ನಿಂತು ಗೆದ್ದಿದ್ದಾರೆ ಮತ್ತು ಸೋತಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿಗೆ ಯೋಗಿಶ್ವರ್ ಹೊರತುಪಡಿಸಿ ಮತ್ತೆ ಯಾರೂ ಗಟ್ಟಿ ನಾಯಕರೂ ಕಾಣುತ್ತಿಲ್ಲ. ಈ ನಡುವೆ ಯೋಗೇಶ್ವರ್ ಸಹ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದರು. ಇಡೀ ರಾಮನಗರ ಜಿಲ್ಲೆಯಲ್ಲಿಯೇ ಬಿಜೆಪಿ ಫೈಟ್ ಮಾಡಬಹುದಾದ ಕ್ಷೇತ್ರ ಚನ್ನಪಟ್ಟಣವಾಗಿದೆ. ಆದರೆ ಬಿಜೆಪಿಯಿಂದ ಯೋಗೀಶ್ವರ್‌ಗೆ ಟಿಕೆಟ್ ಸಿಗುವುದು ಡೌಟ್ ಎನ್ನಲಾಗುತ್ತಿದೆ.
ಇನ್ನು ಡಿ.ಕೆ ಸಹೋದರರ ಭಾವ ಸಿ.ಪಿ ಶರತ್ ಚಂದ್ರರವರು ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಕ್ಷ ಸೇರಿದ್ದು, ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.
ನಗರಸಭೆ ಫಲಿತಾಂಶ
ಕಳೆದ ವರ್ಷ ನಡೆದ ಚನ್ನಪಟ್ಟಣ ನಗರಸಭೆ ಚುನಾವಣೆಯಲ್ಲಿ 31 ವಾರ್ಡ್‌ಗಳ ಪೈಕಿ ಜೆಡಿಎಸ್ 16 ವಾರ್ಡ್‌ಗಳಲ್ಲಿ ಗೆದ್ದು ಅಧಿಕಾರ ಹಿಡಿದಿದೆ. ಕಾಂಗ್ರೆಸ್ 7 ಮತ್ತು ಬಿಜೆಪಿ 7 ವಾರ್ಡ್‌ಗಳಿಗೆ ಸೀಮಿತವಾಗಿವೆ. 1 ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ. ಈ ಫಲಿತಾಂಶ ಜೆಡಿಎಸ್ ಪರವಾಗಿರುವಂತೆ ಕಾಣುತ್ತಿದೆ.
ಸದ್ಯಕ್ಕೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ನ ಎಚ್.ಡಿ ಕುಮಾರಸ್ವಾಮಿ ಮತ್ತು ಸಿ.ಪಿ ಯೋಗೇಶ್ವರ್ ನಡುವೆ ನೇರ ಹಣಾಹಣಿಯಂತೆ ಕಂಡುಬರುತ್ತಿದೆ. ಎಚ್.ಡಿ ಕುಮಾರಸ್ವಾಮಿಯವರು ಬಹಳ ಆತ್ಮವಿಶ್ವಾಸದಿಂದ ಕಣಕ್ಕಿಳಿದಿದ್ದಾರೆ. ಇನ್ನು ಯೋಗೇಶ್ವರ್ ಶತಾಯ ಗತಾಯ ಗೆಲ್ಲಲೇಬೇಕೆಂದು ನಿರ್ಧರಿಸಿದ್ದಾರೆ. ಇವರಿಬ್ಬರ ಫೈಟ್ ನಡುವೆ ಲಾಭ ಪಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆ. ಆದರೆ ಡಿ.ಕೆ ಸಹೋದರರು ಹೆಚ್.ಡಿ ಕುಮಾರಸ್ವಾಮಿಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆಯೇ ಅಥವಾ ವಿರೋಚಿತ ಹೋರಾಟ ನೀಡುತ್ತಾರೆಯೇ ಕಾದು ನೋಡಬೇಕಿದೆ.
ಇದನ್ನೂ ಓದಿ: ‘ಬಿಜೆಪಿಗೆ ಮತ ಹಾಕಲ್ಲ’: ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಪ್ರತಿಜ್ಞೆ


