ಕರ್ನಾಟಕದ ವಿಧಾನಸಭಾ ಚುನಾವಣೆ ಕೇವಲ ಒಂದು ತಿಂಗಳು ಇರುವಾಗ ಕನ್ನಡದ ಖ್ಯಾತ ನಟರಾದ ದರ್ಶನ್ ತೂಗುದೀಪ ಮತ್ತು ಸುದೀಪ್ ಬಿಜೆಪಿ ಪಕ್ಷ ಸೇರುತ್ತಾರೆ ಎಂಬ ವರದಿಗಳು ಪ್ರಕಟವಾಗುತ್ತಿವೆ. ಹಾಗಾಗಿ ಚುನಾವಣೆ ಸಮಯದಲ್ಲಿ ಸಿನಿಮಾ ನಟರು ರಾಜಕಾರಣಕ್ಕೆ ಬರುವುದು ಎಷ್ಟು ಸರಿ ಎಂಬ ಚರ್ಚೆಗಳು ಸಹ ಆರಂಭವಾಗಿವೆ.
ಕೆಲ ತಿಂಗಳ ಹಿಂದೆ ಸುದೀಪ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆಗ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಚರ್ಚೆಗಳು ಆರಂಭವಾಗಿದ್ದವು. ಆದರೆ ತನಿಖಾ ಸಂಸ್ಥೆಗಳ ಬೆದರಿಕೆಯಿಂದ ಅವರು ಬಿಜೆಪಿ ಸೇರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಖ್ಯಾತ ಬಹುಭಾಷ ನಟ ಪ್ರಕಾಶ್ ರಾಜ್ ಇದು ಸುಳ್ಳು ಸುದ್ದಿ ಇರಬೇಕು ಎಂದಿದ್ದಾರೆ. “ಸುದೀಪ್ ಬಿಜೆಪಿ ಸೇರ್ಪಡೆ ಎಂಬುದು ಕರ್ನಾಟಕದಲ್ಲಿ ಸೋಲುವ ಭಯದಲ್ಲಿ ಭ್ರಷ್ಟ BJP ಪಕ್ಷ ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ. ನಮ್ಮ ಕಿಚ್ಚ ಸಂವೇದನಶೀಲ ನಾಗರೀಕರಾಗಿದ್ದು, ಈ ಸಂಚಿಗೆ ಬಲಿಯಾಗುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
I strongly believe this is a Fake news spread by the desperate ,loosing BJP in Karnataka. @KicchaSudeep is far more sensible Citizen to fall prey ..ಕರ್ನಾಟಕದಲ್ಲಿ ಸೋಲುವ ಭಯದಲ್ಲಿ .. ಭ್ರಷ್ಟ BJP ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ .. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ #justasking https://t.co/kIRmFczTIO
— Prakash Raj (@prakashraaj) April 5, 2023
ಇನ್ನು ಚಿಂತಕ ಕೆ.ಪಿ ಸುರೇಶ್‌ರವರು ದರ್ಶನ್ ಮತ್ತು ಸುದೀಪ್‌ರವರಿಗೆ ಬಹಿರಂಗ ಪತ್ರ ಬರೆದಿದ್ದು ಡಾ.ರಾಜ್‌ಕುಮಾರ್ ಪರಂಪರೆಗೆ ಅವಮಾನ ಮಾಡಬೇಡಿ ಎಂದಿದ್ದಾರೆ. ಅದರ ಪೂರ್ಣ ಪಾಠ ಈ ಕೆಳಗಿನಂತಿದೆ.
“ಸುದೀಪ್- ದರ್ಶನ್ ಅವರೇ, ಅಣ್ಣಾವ್ರು ತೋರಿದ ನೈತಿಕ ಹಾದಿಗೆ ಅಪಚಾರವೆಸಗಬೇಡಿ
ಕನ್ನಡದ ಹೆಮ್ಮೆಯ ನಟರಾದ ಕಿಚ್ಚ ಸುದೀಪ್ ಮತ್ತು ದರ್ಶನ್ ಭಾಜಪ ಸೇರುತ್ತಿರುವ ಸುದ್ದಿ ಬಂದಿದೆ.
ಇದರ ಹಿಂದೆ, ED ಬೆದರಿಕೆ ಇದೆಯೋ ಗೊತ್ತಿಲ್ಲ. ತೆರೆಯ ಮೇಲೆ ಸುಪರ್ ಮ್ಯಾನ್ ಆಗುವ ನಟರು ನಿಜ ಜೀವನದಲ್ಲಿ ಪ್ರಭುತ್ವದ ನೆರಳಿಗೇ ಬೆದರುವುದಿದೆ.
ಆದರೆ ಕನ್ನಡದ ಕಲಾವಿದರಿಗೊಂದು ಧೀಮಂತ ಹಾದಿಯನ್ನು ಡಾ. ರಾಜಕುಮಾರ್, ಮತ್ರು ಅವರ ಮಗ ಅಪ್ಪು ಹಾಕಿಕೊಟ್ಟಿದ್ದಾರೆ. ಕನ್ನಡದ ನಾಡು ನುಡಿಯ ಪರವಾಗಿ ಬೀದಿಗಳಿದು ಜನ ಜಾಗೃತಿ ಮಾಡಿದ ಅಣ್ಣಾವ್ರು , ಯಾವ ರಾಜಕೀಯ ಪಕ್ಷಕ್ಕೂ ಸೇರಲಿಲ್ಲ. ಬೆಂಬಲಿಸಲೂ ಇಲ್ಲ.
“ಅಭಿಮಾನಿ ದೇವರುಗಳು ಎಲ್ಲಾ ಪಕ್ಷಗಳಲ್ಲೂ ಇದ್ದಾರೆ. ಅವರಿಗೆ ಅಪಚಾರ ಮಾಡಲಾರೆ” ಎಂಬ ಖಚಿತ ನಿಲುವು ಅಣ್ಣಾವರಿಗಿತ್ತು.
60ರ ದಶಕದಲ್ಲಿ ಅನಕೃ, ರಾಮಮೂರ್ತಿ ಮುಂತಾದ ಕನ್ನಡದ ಲೇಖಕರ ಆಶಯಕ್ಕೆ ಮನ್ನಣೆ ಕೊಟ್ಟು ಡಾ. ರಾಜಕುಮಾರ್ ಕನ್ನಡದ ಹಿತಾಸಕ್ತಿಗೆ ಕಂಕಣಬದ್ಧರಾಗಿದ್ದರು. ಕೊನೆ ಉಸಿರಿನ ವರೆಗೂ ಹಾಗೆಯೇ ಇದ್ದರು.
ಈ ಆದರ್ಶ- ಸುದೀಪ್, ದರ್ಶನ್ ಅವರೊಳಗೆ ಇಳಿದಿದ್ದರೆ ಅವರು ಈ ನಿರ್ಧಾರದಿಂದ ಹಿಂದೆ ಸರಿಯಬೇಕು.
ಇದಕ್ಕೆ ಇನ್ನೊಂದು ಆಯಾಮವಿದೆ. ಸ್ವತಃ ತಮ್ಮ ಬೀಗರಾದ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ ಕುಮಾರ್ ಅವರು ಜೀವನ ಚೈತ್ರ ಸಿನೆಮಾದಲ್ಲಿ ಹೆಂಡದ ವಿರುದ್ಧ ಸೆಟೆದು ಹೋರಾಡುವ ಪಾತ್ರ ನಿರ್ವಹಿಸಿದ್ದರು.
ಇದು ನೈತಿಕ ನಿಲುವು.
ಕರ್ನಾಟಕದ ಇತಿಹಾಸದಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಕೋಮು ವಿಷ ಹರಡುವ ಕೆಲಸವನ್ನು ಲಜ್ಜೆಗೆಟ್ಟು ಮಾಡಿದ ಪಕ್ಷ ಭಾಜಪ.
ಸ್ವತಃ ದರ್ಶನ್ ಸರಕಾರಿ ಶಾಲೆಗಳ ಇಶ್ಯೂ ಇದ್ದ ಕ್ರಾಂತಿ ಎಂಬ ಸಿನೆಮಾದಲ್ಲಿ ಸೂಪರ್ ಹೀರೋ ಆಗಿ ನಟಿಸಿದ್ದರು. ಆದರೆ ಕನ್ನಡ / ಸರಕಾರಿ ಶಾಲೆಗಳಿಗೆ ಆತ್ಯಂತಿಕ ಕೊಡಲಿಯೇಟು ಕೊಟ್ಟ ಪಕ್ಷ ಭಾಜಪ. ಕನ್ನಡ ಶಿಕ್ಷಣ ಮಾಧ್ಯಮವಾಗದಂತೆ ಸಂಘ ಪರಿವಾರದ ಸಂಸ್ಥೆ ಮೂಲಕ ತಡೆಯೊಡ್ಡಿದ್ದು ಹೌದಷ್ಟೇ.
ಇನ್ನು ಈ ಇಬ್ಬರ ಸಿನೆಮಾಗಳಲ್ಲೂ ಹಿಂದೂ- ಮುಸ್ಲಿಮ್ ಬಾಂಧವ್ಯ ಗಾಢವಾಗಿ ಪ್ರಸ್ತುತಪಡಿಸಿದ ಉದಾಹರಣೆಗಳಿವೆ. ಆದರೆ ಈ ಸರಕಾರ ಹೆಜ್ಜೆ ಹೆಜ್ಜೆಗೆ ಮುಸ್ಲಿಮರನ್ನು ದುಷ್ಟೀಕರಿಸುತ್ತಾ ಮೀಸಲಾತಿಯನ್ನೂ ಕಿತ್ತುಕೊಂಡು ಅವರನ್ನು ಅಂಚಿಗೆ ಸರಿಸುವ ಕೆಲಸ ಮಾಡಿದೆ.
ಉರಿ- ನಂಜು ಸೃಷ್ಟಿ ಸ್ವತಃ ಮಂಡ್ಯದ ನಿರ್ವ್ಯಾಜ ಪ್ರೀತಿ ಪಡೆದಿರುವ ದರ್ಶನ್ ಗೆ ಗೊತ್ತಿರಬಹುದಷ್ಟೇ.
ಹೀಗಿರುವಾಗ ಕರ್ನಾಟಕದ ಜನತೆಗೆ ಪರಮ ಭ್ರಷ್ಟಾಚಾರದ ಮೂಲಕ ದ್ರೋಹ ಬಗೆದಿರುವ ಪಕ್ಷಕ್ಕೆ ಈ ಇಬ್ಬರು ಸೇರುವುದು ರಾಜ್ ಕುಮಾರ್ ಅವರ ಪರಂಪರೆಗೆ ಬಗೆಯುವ ದ್ರೋಹ.
ಈ ಇಬ್ಬರೂ ನೆನಪಿಡಬೇಕಾದ ಇನ್ನೊಂದು ಸತ್ಯವಿದೆ. ಜನಾಗ್ರಹಕ್ಕೆ ತುತ್ತಾಗಿರುವ ಪಕ್ಷಕ್ಕೆ ಈಗ ಸೇರಿದರೆ, ಆ ಪಕ್ಷದೊಂದಿಗೆ ನೀವೂ ಜನರ ತಿರಸ್ಕಾರಕ್ಕೊಳಗಾಗುವುದು ಖಂಡಿತ” ಎಂದು ಕೆ.ಪಿ.ಸುರೇಶ್‌ರವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕರನ್ನು ಬೆದರಿಸಲು ಸಾವಿರಕ್ಕೂ ಹೆಚ್ಚು IT, ED, CBI ಅಧಿಕಾರಿಗಳು ಕರ್ನಾಟಕಕ್ಕೆ: ಸಿದ್ದರಾಮಯ್ಯ


