Homeಮುಖಪುಟಬಿಜೆಪಿ ಸೇರಿದ ಎಲ್.ಆರ್ ಶಿವರಾಮೇಗೌಡ: ನಾಗಮಂಗಲ ಕ್ಷೇತ್ರದ ಸ್ಥಿತಿಗತಿ ಹೀಗಿದೆ

ಬಿಜೆಪಿ ಸೇರಿದ ಎಲ್.ಆರ್ ಶಿವರಾಮೇಗೌಡ: ನಾಗಮಂಗಲ ಕ್ಷೇತ್ರದ ಸ್ಥಿತಿಗತಿ ಹೀಗಿದೆ

- Advertisement -
- Advertisement -

ಮಾಜಿ ಸಂಸದ, ಜೆಡಿಎಸ್‌ ನಿಂದ ಉಚ್ಛಾಟನೆಯಾಗಿದ್ದ ಹಿರಿಯ ಮುಖಂಡ ಎಲ್.ಆರ್ ಶಿವರಾಮೇಗೌಡ ಇಂದು ಬೆಂಗಳೂರಿನಲ್ಲಿ ಬಿಜೆಪಿ ಪಕ್ಷ ಸೇರಿದ್ದಾರೆ. ತಮ್ಮ ಪುತ್ರ ಮತ್ತು ಅಭಿಮಾನಿಗಳೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಡಾ.ಸುಧಾಕರ್, ಗೋಪಾಲಯ್ಯ ಮತ್ತು ಸಿ.ಟಿ ರವಿಯವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ಅವರಿಗೆ ನಾಗಮಂಗಲ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಸ್ಥಿತಿಗತಿ ಹೇಗಿದೆ ಎಂಬುದನ್ನು ನೋಡೋಣ.

ಹೊಡಿ-ಬಡಿ ರಾಜಕಾರಣಕ್ಕೆ ಕುಖ್ಯಾತಿಯಾದ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ದೇವೇಗೌಡರ ಕುಟುಂಬದ್ದೇ ಪ್ರಾಬಲ್ಯ. ನಾಗಮಂಗಲ ತಾಲ್ಲೂಕಿನ ಜೊತೆಗೆ ಮದ್ದೂರು ತಾಲ್ಲೂಕಿನ ಕೊಪ್ಪ ಜಿ.ಪಂ ಕ್ಷೇತ್ರ ಮತ್ತು ಬೆಸಗರಹಳ್ಳಿ ಜಿ.ಪಂನ ಕೆಲ ಗ್ರಾಮಗಳು ಸಹ ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಅಲ್ಲಿ ಮೂವರು ಘಟಾನುಘಟಿಗಳು ಚುನಾವಣೆ ಎದುರಿಸುತ್ತಿರುವ ಕಾರಣ ಈ ಬಾರಿ ಪೈಪೋಟಿ ಜೋರಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಒಕ್ಕಲಿಗ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹುತೇಕ ಒಕ್ಕಲಿಗರ ಆರಾಧ್ಯ ಸ್ಥಳ ಆದಿಚುಂಚನಗಿರಿ ನಾಗಮಂಗಲ ತಾಲ್ಲೂಕಿನಲ್ಲಿದೆ. ಜಿಲ್ಲೆಯ ರಾಜಕಾರಣವನ್ನು ಪ್ರಭಾವಿಸಿದ ಮಠ ಅದಾಗಿದೆ. ಅದೆಲ್ಲದರ ನಡುವೆಯೂ ನಾಗಮಂಗಲದಲ್ಲಿ ಈ ಹಿಂದೆ ಒಕ್ಕಲಿಗರ ಹೊರತಾಗಿ ಕುರುಬ ಸಮುದಾಯದ ಇಬ್ಬರು ಶಾಸಕರಾಗಿ ಆಯ್ಕೆಯಾಗಿರುವುದು ವಿಶೇಷ.

1985ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಎಚ್.ಟಿ ಕೃಷ್ಣಪ್ಪನವರು ಜನತಾ ಪಕ್ಷದಿಂದ ಸ್ಪರ್ಧಿಸಿ, ಕಾಂಗ್ರೆಸ್ ಪಕ್ಷದ ಎಲ್.ಆರ್ ಶಿವರಾಮೇಗೌಡ ಮತ್ತು ಪಕ್ಷೇತರ ಅಭ್ಯರ್ಥಿ ಟಿ.ಎಂ ಚಂದ್ರಶೇಖರ್‌ರವರನ್ನು ಮಣಿಸುತ್ತಾರೆ. ಆ ಮೂಲಕ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ. ಅಲ್ಲದೆ ಆರೋಗ್ಯ, ಅಬಕಾರಿ ಮತ್ತು ವೈದ್ಯಕೀಯ ಶಿಕ್ಷಣದಂತಹ ಮಹತ್ವದ ಖಾತೆಗಳನ್ನು ನಿಭಾಯಿಸುತ್ತಾರೆ.

1989ರಲ್ಲಿ ಎಲ್.ಆರ್ ಶಿವರಾಮೇಗೌಡರಿಗೆ ಕಾಂಗ್ರೆಟ್ ಟಿಕೆಟ್ ದೊರೆಯುವುದಿಲ್ಲ. ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್‌ನ ಟಿ.ಎಂ ಚಂದ್ರಶೇಖರ್ ಮತ್ತು ಜನತಾದಳದ ಹೆಚ್.ಟಿ ಕೃಷ್ಣೇಗೌಡರ ಎದುರು ಭರ್ಜರಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸುತ್ತಾರೆ. 1994ರಲ್ಲಿಯೂ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಆ ಸಂದರ್ಭದಲ್ಲಿ ಜನತಾದಳದಿಂದ ಎಚ್.ಟಿ ಕೃಷ್ಣಪ್ಪ, ಕಾಂಗ್ರೆಸ್‌ನಿಂದ ನರಸೇಗೌಡ ಮತ್ತು ಬಿಜೆಪಿಯಿಂದ ಧರಣೇಂದ್ರಬಾಬು ಸ್ಪರ್ಧಿಸುತ್ತಾರೆ. ನಾಲ್ಕೂ ಜನರ ನಡುವಿನ ಕಾಳಗದಲ್ಲಿ ಎಲ್.ಆರ್ ಶಿವರಾಮೇಗೌಡ ಗೆದ್ದು ಬರುತ್ತಾರೆ. ಬಿಜೆಪಿಯ ಧರಣೇಂದ್ರಬಾಬುರವರು 27,768 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆಯುತ್ತಾರೆ. ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಅತ್ಯಧಿಕ ಮತ ಗಳಿಸಿದ್ದು ಈ ಚುನಾವಣೆಯಲ್ಲಿ ಮಾತ್ರ. ಆಗ ಬಿಜೆಪಿ ಎನ್ನುವುದಕ್ಕಿಂತ ಧರಣೇಂದ್ರಬಾಬುರವರ ವೈಯಕ್ತಿಕ ವರ್ಚಸ್ಸಿಗೆ ಅಷ್ಟು ಮತಗಳು ಬಿದ್ದಿರುತ್ತವೆ.

ಚಲುವರಾಯಸ್ವಾಮಿ ವರ್ಸಸ್ ಶಿವರಾಮೇಗೌಡ

1999ರ ಚುನಾವಣೆ ವೇಳೆಗೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಎಲ್.ಆರ್ ಶಿವರಾಮೇಗೌಡರು ಕಾಂಗ್ರೆಸ್ ಪಕ್ಷ ಸೇರಿ ಸ್ಪರ್ಧಿಸುತ್ತಾರೆ. ಆದರೆ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದ ಚಲುವರಾಯಸ್ವಾಮಿಯವರು ತಮ್ಮ ಮೊದಲ ಯತ್ನದಲ್ಲಿಯೇ ಜಯ ಸಾಧಿಸುತ್ತಾರೆ. 2004ರಲ್ಲಿಯೂ ಸಹ ಇವರಿಬ್ಬರ ನಡುವೆ ಕಾದಾಟ ನಡೆಯುತ್ತದೆ. ಜೆಡಿಎಸ್‌ನ ಚಲುವರಾಯಸ್ವಾಮಿಯವರು ಮತ್ತೆ ಗೆಲುವು ಸಾಧಿಸಿ, ಆರೋಗ್ಯ ಇಲಾಖೆ ಮತ್ತು ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ.

2008ರ ಚುನಾವಣೆ ವೇಳೆಗೆ ಚಲುವರಾಯಸ್ವಾಮಿಯವರು ಮೂರನೇ ಬಾರಿಗೆ ಸ್ಪರ್ಧಿಸುತ್ತಾರೆ. ಆಗ ಕಾಂಗ್ರೆಸ್ ಪಕ್ಷವು ಕೆ.ಸುರೇಶ್‌ಗೌಡರಿಗೆ ಟಿಕೆಟ್ ನೀಡುತ್ತದೆ. ಅವರು 69,259 ಮತಗಳನ್ನು ಪಡೆಯುವ ಮೂಲಕ 5,493 ಮತಗಳ ಅಂತರದಿಂದ ಚಲುವರಾಯಸ್ವಾಮಿಯವರನ್ನು (63,766 ಮತಗಳು) ಮಣಿಸಿ ಶಾಸಕರಾಗುತ್ತಾರೆ. ಸೋತ ಚಲುವರಾಯಸ್ವಾಮಿಯವರು 2009ರಲ್ಲಿ ನಡೆಯುವ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಅಂಬರೀಶ್‌ರನ್ನು ಮಣಿಸಿ ಸಂಸದರಾಗುತ್ತಾರೆ.

2013ರಲ್ಲಿ ಮತ್ತೆ ಜೆಡಿಎಸ್‌ನ ಚಲುವರಾಯಸ್ವಾಮಿ ಮತ್ತು ಕಾಂಗ್ರೆಸ್‌ನ ಸುರೇಶ್‌ಗೌಡರ ನಡುವೆ ಹಣಾಹಣಿ ನಡೆಯುತ್ತದೆ. ಚಲುವರಾಯಸ್ವಾಮಿಯವರು 89,203 ಮತಗಳನ್ನು ಪಡೆದು, 20,363 ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಸುರೇಶ್‌ಗೌಡರಿಗೆ 38,840 ಮತಗಳು ಲಭಿಸುತ್ತವೆ. ಚಲುವರಾಯಸ್ವಾಮಿಯವರಿಂದ ತೆರವಾದ ಸಂಸತ್ ಸ್ಥಾನಕ್ಕೆ ಚಿತ್ರನಟಿ ರಮ್ಯಾರವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ.

2018ರ ವೇಳೆಗೆ ದೇವೇಗೌಡರ ಕುಟುಂಬವು ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿ ಚಲುವರಾಯಸ್ವಾಮಿಯವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ. ಹಾಗಾಗಿ ಕಾಂಗ್ರೆಸ್‌ನಲ್ಲಿದ್ದ ಸುರೇಶ್‌ಗೌಡರು ಜೆಡಿಎಸ್ ಸೇರುತ್ತಾರೆ. ಇವರಿಬ್ಬರ ನಡುವೆ ಮತ್ತೆ ಸ್ಪರ್ಧೆ ನಡೆಯುತ್ತದೆ. ಆದರೆ ಚಲುವರಾಯಸ್ವಾಮಿ ದೇವೇಗೌಡರಿಗೆ ದ್ರೋಹ ಮಾಡಿದರು ಎಂಬ ಆರೋಪ, ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂಬ ಒಕ್ಕಲಿಗರ ಅಲೆಯಲ್ಲಿ ಜೆಡಿಎಸ್‌ನ ಸುರೇಶ್‌ಗೌಡರು 47,667 ಮತಗಳ ಬೃಹತ್ ಅಂತರದಿಂದ ಗೆದ್ದುಬರುತ್ತಾರೆ. ಅವರು 1,12,396 ಮತಗಳನ್ನು ಪಡೆದರೆ ಚಲುವರಾಯಸ್ವಾಮಿ ಕೇವಲ 64,729 ಮತಗಳಿಗೆ ಕುಸಿಯುತ್ತಾರೆ. ಬಿಜೆಪಿಯ ಪಾರ್ಥಸಾರಥಿ ಗೌಡ ಕೇವಲ 1,915 ಮತಗಳಿಗೆ ಸೀಮಿತರಾಗುತ್ತಾರೆ.

ಅಂದಾಜು ಜಾತಿವಾರು ಮತಗಳು

ಅಂದಾಜು 2,23,000 ಒಟ್ಟು ಮತಗಳಿರುವ ನಾಗಮಂಗಲದಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಂತೆ ಇಲ್ಲಿಯೂ ಒಕ್ಕಲಿಗ ಮತಗಳೆ ಅಧಿಕ ಸಂಖ್ಯೆಯಲ್ಲಿವೆ. ಪರಿಶಿಷ್ಟ ಜಾತಿ ಮತ್ತು ಕುರುಬ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಮುಸ್ಲಿಂ ಮತಗಳು ಸಹ ಗಣನೀಯ ಸಂಖ್ಯೆಯಲ್ಲಿವೆ.

ಒಕ್ಕಲಿಗರು: 1,00,000; ಪರಿಶಿಷ್ಟ ಜಾತಿ: 34,000; ಮುಸ್ಲಿಂ: 20,000; ಕುರುಬ: 18,000; ಲಿಂಗಾಯಿತ: 10,000; ಒಬಿಸಿ ಮತ್ತು ಇತರರು: 40,000

ಹಾಲಿ ಪರಿಸ್ಥಿತಿ

ಹಾಲಿ ಶಾಸಕರಾದ ಕೆ.ಸುರೇಶ್ ಗೌಡರವರು ನಿರೀಕ್ಷಿತ ಮಟ್ಟದಲ್ಲಿ ನಾಗಮಂಗಲದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂಬ ಆರೋಪಗಳು ಕೇಳಿಬರುತ್ತವೆ. ನಿರೀಕ್ಷಿತ ಮಟ್ಟದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಿಲ್ಲ, ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಲ್ಲ ಎಂಬ ದೂರುಗಳಿವೆ. ಹಿಂದಿನ ಚಲುವರಾಯಸ್ವಾಮಿಯವರ ಆಡಳಿತದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳಾಗಿದ್ದವು. ಆದರೆ ಈಗಿನ ಶಾಸಕರು ಕೆಲಸವನ್ನು ಮಾಡಿಲ್ಲ, ಕೈಗೂ ಸಿಗುವುದಿಲ್ಲ ಎಂದು ಜನ ದೂರುತ್ತಾರೆ. ಶಾಸಕರ ಮೇಲಿನ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದೆ. ಇಂತಹ ಸಮಯದಲ್ಲಿ ಜೆಡಿಎಸ್ ಪಕ್ಷವು ಸುರೇಶ್‌ಗೌಡರಿಗೆ ಮತ್ತೆ ಟಿಕೆಟ್ ಘೋಷಿಸಿದೆ.

ಸುರೇಶ್‌ಗೌಡ ಮತ್ತು ಚಲುವರಾಯಸ್ವಾಮಿ

ಮತ್ತೆ ಅಸೆಂಬ್ಲಿ ಕಣಕ್ಕೆ ಶಿವರಾಮೇಗೌಡ

ಎಲ್.ಆರ್ ಶಿವರಾಮೇಗೌಡರು 1989 ಮತ್ತು 1994ರಲ್ಲಿ ಎರಡು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆಯಾಗಿದ್ದರು. ತದನಂತರದ ಚುನಾವಣೆಗಳಲ್ಲಿ ಸೋತಿದ್ದರು. ಆದರೆ 2018ರಲ್ಲಿ ಸಿ.ಎಸ್ ಪುಟ್ಟರಾಜುರವರು ಶಾಸಕರಾದ ಕಾರಣಕ್ಕೆ ತೆರವಾದ ಮಂಡ್ಯ ಸಂಸತ್ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಎಲ್.ಆರ್ ಶಿವರಾಮೇಗೌಡರು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದು ಗೆಲುವು ಸಾಧಿಸುತ್ತಾರೆ. ಆದರೆ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಜೆಡಿಎಸ್ ಟಿಕೆಟ್ ಸಿಗುವುದಿಲ್ಲ. ಬದಲಿಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ ಸೋಲುತ್ತಾರೆ. ಆನಂತರ ಶಿವರಾಮೇಗೌಡರು ಜಿ.ಮಾದೇಗೌಡರ ವಿರುದ್ಧ ಲಘುವಾಗಿ ಮಾತನಾಡಿದ ಕಾರಣ ಜೆಡಿಎಸ್ ಅವರನ್ನು ಉಚ್ಚಾಟಿಸುತ್ತದೆ. ಇದರಿಂದ ಕುಪಿತಗೊಂಡಿರುವ ಅವರು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಜೆಡಿಎಸ್ ಪಕ್ಷದ ಸುರೇಶ್ ಗೌಡರನ್ನು ಸೋಲಿಸಲು ಪಣ ತೊಟ್ಟಿದ್ದಾರೆ. ಅದಕ್ಕೆ ಅವರ ಮಗ ಕೂಡ ಸಾಥ್ ನೀಡುತ್ತಿದ್ದು ಈಗ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಪಕ್ಷ ಸೇರಿದ್ದಾರೆ.

ಚಲುವರಾಯಸ್ವಾಮಿ ತಯಾರಿಗಳು

ಮಾಜಿ ಸಚಿವ ಚಲುವರಾಯಸ್ವಾಮಿಯವರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಆಯುರ್ವೇದಿಕ್ ಕಾಲೇಜು ಸ್ಥಾಪನೆ, ಮಾರ್ಕೋನಹಳ್ಳಿ ಡ್ಯಾಂನಿಂದ ಕುಡಿಯುವ ನೀರು ತಂದಿದ್ದು, ನಾಗಮಂಗಲಕ್ಕೆ ಆರ್‌ಟಿಓ ಕಚೇರಿ ತಂದಿದ್ದು ಸೇರಿ ತಾನು ಶಾಸಕ-ಸಚಿವನಾಗಿದ್ದಾಗ ಮಾಡಿದ ಕೆಲಸಗಳನ್ನು ಮುಂದಿಟ್ಟುಕೊಂಡು ಚುನಾವಣಾ ತಯಾರಿ ನಡೆಸಿದ್ದಾರೆ. ಪ್ರತಿ ಗ್ರಾಮಗಳಲ್ಲಿಯೂ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ರಣತಂತ್ರ ಹೆಣೆಯುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಪ್ರಭಾವಿ ನಾಯಕರಾಗಿರುವ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬೆಳೆಸುವ ಜವಾಬ್ದಾರಿ ಹೊತ್ತಿರುವ ಅವರಿಗೆ ಗೆಲ್ಲಬೇಕಿರುವ ಒತ್ತಡವಿದೆ. ಹಾಗಾಗಿ ಅವರಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ.

ಬಿಜೆಪಿಯ ಫೈಟರ್ ರವಿ ನಡೆಯೇನು?

ಹಾಲಿ ಮತ್ತು ಮಾಜಿ ರೌಡಿಗಳು ಸಾಲುಸಾಲಾಗಿ ಬಿಜೆಪಿ ಸೇರುತ್ತಿದ್ದಾರೆ. ಅದರ ಭಾಗವಾಗಿ ಫೈಟರ್ ರವಿ (ಮಲ್ಲಿಕಾರ್ಜುನ) ಬಿಜೆಪಿ ಸೇರಿ ನಾಗಮಂಗಲದ ಬಿಜೆಪಿ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದರು. ಸಮಾಜಸೇವೆ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಹಣ ಹರಿಸಿರುವ ಅವರು, ಒಂದಷ್ಟು ಯುವಕರನ್ನು ಜೊತೆಗಿಟ್ಟುಕೊಂಡು ಕ್ಷೇತ್ರ ಸುತ್ತುತ್ತಿದ್ದಾರೆ. ಈ ಹಿಂದೆ ಸುರೇಶ್ ಗೌಡರ ಜೊತೆಗಿದ್ದು ಚುನಾವಣೆಗಳಲ್ಲಿ ತನು-ಮನ-ಧನ ಸಹಾಯ ಮಾಡಿದ್ದರು. ಫೈಟರ್ ರವಿ ಈಗ ಅವರಿಂದ ದೂರವಾಗಿದ್ದಾರೆ. ಸುರೇಶ್ ಗೌಡರು ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸುತ್ತ, ಈ ಚುನಾವಣೆಯಲ್ಲಿ ತಾನು ಸೋತರೂ ಸರಿಯೇ, ಆದರೆ ಸುರೇಶ್ ಗೌಡರು ಗೆಲ್ಲಬಾರದು ಎಂದು ಪ್ರತಿಜ್ಞೆ ಮಾಡಿದ್ದರು. ಆದರೆ ಈಗ ಶಿವರಾಮೇಗೌಡರು ಬಿಜೆಪಿ ಸೇರಿರುವುದರಿಂದ ಫೈಟರ್‌ ರವಿಯವರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆಯಾಗಿದೆ. ಈಗಾಗಲೇ ಬಹಳಷ್ಟು ಹಣ ಖರ್ಚು ಮಾಡಿರುವ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.

ಫೈಟರ್ ರವಿ

ಅನಿಕೇತನ್ ಗೌಡ ಎಂಬ ಯುವ ಮುಖಂಡ ಪಕ್ಷೇತರರಾಗಿ ಚುನಾವಣೆಗೆ ನಿಲ್ಲುವ ಸೂಚನೆ ನೀಡಿದ್ದರು. ಆದರೆ ಮದಗಜಗಳ ಕಾಳಗದಲ್ಲಿ ತಾನು ಪೈಪೋಟಿ ಕೊಡುವುದು ಕಷ್ಟ ಎಂಬ ಅರಿವುಂಟಾಗಿ ಹಿಂದೆ ಸರಿದಿದ್ದಾರೆ. ಇನ್ನು ಕೆಆರ್‌ಎಸ್ ಪಕ್ಷದಿಂದ ರಮೇಶ್‌ಗೌಡರು ಕಣಕ್ಕಿಳಿಯುವ ಸಾಧ್ಯತೆಯಿದೆ.

2023ರಲ್ಲಿ ಗೆಲುವಿನ ಸಾಧ್ಯತೆ ಯಾರಿಗೆ?

ಕಳೆದ ಚುನಾವಣೆಯಲ್ಲಿ ಎಚ್‌ಡಿಕೆ ಸಿಎಂ ಆಗುತ್ತಾರೆ ಎಂಬ ಅಲೆ ಇತ್ತು. ದೇವೇಗೌಡರು ಚಲುವರಾಯಸ್ವಾಮಿ ವಿರುದ್ಧ ಹರಿಹಾಯ್ದಿದ್ದರು. ಇದೆಲ್ಲದರ ಪರಿಣಾಮ ಜೆಡಿಎಸ್‌ನ ಸುರೇಶ್‌ಗೌಡರು ಭಾರೀ ದೊಡ್ಡ ಅಂತರದಲ್ಲಿ ಗೆದ್ದಿದ್ದರು. ಆದರೆ ಸದ್ಯ ಆಡಳಿತ ವಿರೋಧಿ ಅಲೆ ಅವರನ್ನು ಕಾಡುತ್ತಿದೆ. ಅಲ್ಲದೆ ಅಂದು ಅವರೊಟ್ಟಿಗೆ ಇದ್ದ ಶಿವರಾಮೇಗೌಡ ಮತ್ತು ಫೈಟರ್ ರವಿ ಸದ್ಯ ಬಿಜೆಪಿ ಸೇರಿ ಅವರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಜೆಡಿಎಸ್ ಮುಖಂಡರಾದ ಅಪ್ಪಾಜಿಗೌಡರು ದೂರವಾಗಿದ್ದಾರೆ. ಇದರಿಂದ ಸುರೇಶ್ ಗೌಡರು ಕಂಗಾಲಾಗಿದ್ದಾರೆ. ಮತ್ತೊಮ್ಮೆ ದೇವೇಗೌಡರ ಕುಟುಂಬವೆ ತನ್ನನ್ನು ಕಾಪಾಡುತ್ತದೆ ಎಂದು ನಂಬಿದ್ದಾರೆ.

ಇನ್ನೊಂದೆಡೆ ಚಲುವರಾಯಸ್ವಾಮಿಯವರು ಗೆಲುವಿನ ಭರವಸೆಯಲ್ಲಿದ್ದಾರೆ. ಕಳೆದ ಚುನಾವಣೆಯ ಸೋಲಿನ ಅನುಕಂಪ, ಈ ಹಿಂದೆ ಮಾಡಿರುವ ಅಭಿವೃದ್ಧಿ ಕೆಲಸಗಳು, ಸಿದ್ದರಾಮಯ್ಯನವರ ಪರವಾಗಿ ಕ್ಷೇತ್ರದಲ್ಲಿರುವ ಅಲೆಯನ್ನು ನಂಬಿಕೊಂಡು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇನ್ನು ಬಿಜೆಪಿಯಿಂದ ಕಣಕ್ಕೆ ಎಲ್.ಆರ್ ಶಿವರಾಮೇಗೌಡರು ಮತ್ತು ಫೈಟರ್ ರವಿ ಎಂಟ್ರಿ ಕೊಟ್ಟಿರುವುದು ಚಲುವರಾಯಸ್ವಾಮಿಯವರಿಗೆ ವರವಾಗಿ ಪರಿಣಮಿಸಿದೆ. ಏಕೆಂದರೆ ಅವರಿಬ್ಬರೂ ಸಹ ಕಾಂಗ್ರೆಸ್‌ಗಿಂತ ಹೆಚ್ಚಾಗಿ ಜೆಡಿಎಸ್ ಮತಗಳನ್ನು ಸೆಳೆದುಕೊಳ್ಳಲಿದ್ದಾರೆ. ಹಾಗಾಗಿ ಮತ ವಿಭಜನೆಯಾಗಿ ತನ್ನ ಗುರಿ ಸುಲಭವಾಗಲಿದೆ ಎಂಬುದು ಅವರ ಲೆಕ್ಕಾಚಾರ.

ಶಿವರಾಮೇಗೌಡರು ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಲು ಸಿದ್ಧವಾಗಿದ್ದಾರೆ. ಇನ್ನು ಫೈಟರ್ ರವಿಯಂತೂ ಸುರೇಶ್ ಗೌಡರನ್ನು ಸೋಲಿಸಿ ಪಾಠ ಕಲಿಸುವ ಉಮೇದಿನಲ್ಲಿದ್ದಾರೆ. ಇದಿಷ್ಟು ಚಲುವರಾಯಸ್ವಾಮಿಯವರು ಸದ್ಯದ ಮಟ್ಟಿಗೆ ಮೇಲುಗೈ ಸಾಧಿಸಿರುವುದನ್ನು ಸೂಚಿಸುತ್ತದೆ. ಆದರೆ ಚುನಾವಣೆ ಹತ್ತಿರವಾದಂತೆ ದೇವೇಗೌಡರು ಯಾವ ದಾಳ ಉರುಳಿಸುತ್ತಾರೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ಕುಂದಾಪುರ: ಚುನಾವಣಾ ಕಣದಿಂದ ಹಿಂದೆಸರಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ – ಕ್ಷೇತ್ರದ ಪರಿಸ್ಥಿತಿ ಹೀಗಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read