ಹಿಂದುಳಿದ ಮುಸ್ಲಿಮರಿಗೆ ನೀಡಲಾಗುತ್ತಿದ್ದ 2B ಮೀಸಲಾತಿಯನ್ನು ಕಿತ್ತು EWS ಕೋಟಾಗೆ ಸೇರಿಸುವ ಮೂಲಕ ಕರ್ನಾಟಕದ ಸಾಮಾಜಿಕ ನ್ಯಾಯದ ಪರಂಪರೆಯ ಮೇಲಿನ ಬಿಜೆಪಿ ದಾಳಿಯನ್ನು ಖಂಡಿಸುತ್ತೇವೆ ಎಂದು ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ಹೇಳಿದೆ.
ಈ ಕೂಡಲೇ ಹಿಂದುಳಿದ ಮುಸ್ಲಿಂಮರಿಗೆ ನೀಡಲಾಗುತ್ತಿದ್ದ 2B ಮೀಸಲಾತಿಯನ್ನು ಪುನಃ ಸ್ಥಾಪಿಸಸಬೇಕು. ಇಲ್ಲದಿದ್ದಲ್ಲಿ ಬಿಜೆಪಿಯ ಅವನತಿ ಖಚಿತ ಎಂದು AISA, ASA, ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಒಕ್ಕೂಟ, Collective, DVP, GIO, KVS, SIO ಮತ್ತು ಪರಿವರ್ತನ ವಿದ್ಯಾರ್ಥಿ ಸಂಘಟನೆಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ SIO ರಾಜ್ಯ ಮುಖಂಡ ಝೀಶಾನ್ ಸಿದ್ದಿಕಿ, “ಕೇಂದ್ರ ಗೃಹ ಮಂತ್ರಿಗಳಾದ ಅಮಿತ್ ಶಾ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಸ್ಲಿಂಮರಿಗೆ ಧರ್ಮಾಧಾರಿತ ಮೀಸಲಾತಿ ನೀಡಲಾಗುತ್ತಿದೆ, ಆಂಧ್ರ ಸರ್ಕಾರ ಸಹ ರದ್ದು ಮಾಡಿದೆ ಎಂಬ ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ. ಆದರೆ, ಆಂಧ್ರ ಪ್ರದೇಶದಲ್ಲಿ ಮುಸ್ಲಿಂಮರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ನ್ಯಾಯಾಲಯಗಳು ರದ್ದುಗೊಳಿಸಿದಕ್ಕೆ ಕಾರಣ ಮೀಸಲಾತಿಯನ್ನು ನೀಡಲು ಪಾಲಿಸಬೇಕಿದ್ದ ಪ್ರಕ್ರಿಯೆಯನ್ನು ಪಾಲಿಸಲಾಗಿಲ್ಲ ಎಂಬ ಕಾರಣಗಳಿಗೆ. ಆದರೆ, ಕರ್ನಾಟಕದಲ್ಲಿ ಇದಕ್ಕೆ ಬೇರೆಯದೇ ಹಿನ್ನಲೆಯಿದೆ. ಕರ್ನಾಟಕದಲ್ಲಿ ಮುಸ್ಲಿಂಮರಿಗೆ ಅವರು ಸಾಮಾಜಿಕವಾಗಿ-ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂಬ ಕಾರಣಕ್ಕೆ ಮೀಸಲಾತಿ ನೀಡಲಾಗುತ್ತಿದೆ” ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಮುಸ್ಲಿಂ ಸಮುದಾಯವು ಸಾಮಾಜಿಕ-ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆಯೇ ಎಂಬ ಯಾವುದೇ ಆಧ್ಯಯನವನ್ನು ಕೈಗೊಳ್ಳದೆ ಮತ್ತು ಯಾವ ಸಮಿತಿಯ ಶಿಫಾರಸ್ಸಿಲ್ಲದೆ ಅವರಿಗೆ ಮೀಸಲಾತಿಯನ್ನು ಒದಗಿಸಲಾಗಿದೆ ಎಂದು ಹೇಳುತ್ತಿರುವುದು ಸುಳ್ಳು. ಮುಸ್ಲಿಂಮರಿಗೆ ಮೀಸಲಾತಿಯನ್ನು ನೀಡಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಶಿಫಾರಸ್ಸು ಮಾಡಿತ್ತು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಳ್ಳು ನುಡಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಂಬುದನ್ನು ಸ್ಪಷ್ಟವಾಗಿ ಜನರ ಮುಂದಿರಿಸಿದೆ.
ಸ್ವಾತಂತ್ರೋತ್ತರದಲ್ಲಿ ಕರ್ನಾಟಕವು ರಚಿಸಿದ ಎಲ್ ಜಿ ಹಾವನೂರು ಆಯೋಗವೊಂದನ್ನು ಹೊರತುಪಡಿಸಿ ಉಳಿದೆಲ್ಲಾ ಹಿಂದುಳಿದ ವರ್ಗಗಳ ಆಯೋಗಗಳು ಕೂಡ ವಿವಿಧ ಆಯಾಮಗಳನ್ನು ಆಧರಿಸಿ, ಅಧ್ಯಯನ ನಡೆಸಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿಯನ್ನು ನೀಡಬೇಕೆಂದು ಶಿಫಾರಸ್ಸು ಮಾಡಿದೆ. ಇದನ್ನೇ ನಂತರ ಸಾಚಾರ್ ಸಮಿತಿ ವರದಿ ಕೂಡ ಎತ್ತಿಹಿಡಿದಿದೆ ಎಂದರು ಅವರು ತಿಳಿಸಿದರು.
ಬಿಜೆಪಿ ಸರ್ಕಾರವು ಒಳಮೀಸಲಾತಿಯ ಅನುಷ್ಟಾನ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಹೊಸ ಮೀಸಲಾತಿ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯ ಪ್ರವರ್ಗವನ್ನು ಬದಲಿಸುವ ವಿಚಾರ, ಹೀಗೆ ಎಲ್ಲಾ ವಿಚಾರಗಳಲ್ಲಿಯೂ ಮೂರು ವರ್ಷಕ್ಕೂ ಹೆಚ್ಚು ಕಾಲ ಕಣ್ಣು ಮುಚ್ಚಿ ಕುಳಿತು ಈಗ ಚುನಾವಣೆಗೆ ಇನ್ನೇನು ಮೂರು ತಿಂಗಳು ಬಾಕಿ ಉಳಿದಿರುವಾಗ ಮೀಸಲಾತಿ ನೀತಿಯನ್ನು ಬದಲಾಯಿಸಿದೆ ಎಂಬುದನ್ನು ಗಮನಿಸಿದರೆ ತಾನು ನೆಲೆಗೊಂಡಿರುವ ಏಕೈಕ ದಕ್ಷಿಣ ರಾಜ್ಯದಲ್ಲಿಯೂ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೆದರಿ ಬಿಜೆಪಿ ಹೀಗೆ ಮಾಡಿದೆ ಎಂಬುದು ಸ್ಪಷ್ಟ. ಅಂದರೆ ಮೀಸಲಾತಿ ನೀತಿಯ ಹೆಸರಿನಲ್ಲಿ ಚುನಾವಣೆಯಲ್ಲಿ ವೋಟು ಪಡೆಯಲ್ಲಿಕ್ಕೆ ನಡೆಸುತ್ತಿರುವ ಪ್ರಹಸನವಿದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದು ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ಮತ್ತೊಂದು ದಾಳಿ ಎಂಬುದನ್ನು ಅದರಲ್ಲೂ ಮುಖ್ಯವಾಗಿ ಮುಸ್ಲಿಮರ ಶಿಕ್ಷಣದ ಹಕ್ಕಿನ ಮೇಲಿನ ದಾಳಿ ಎಂದು ನಾವು ಅರಿತಿದ್ದೇವೆ. ಹಿಜಾಬ್ ಹೆಸರನಲ್ಲಿ ಗಲಭೆಯೆಬ್ಬಿಸಿ ಮುಸ್ಲಿಂ ಹೆಣ್ಣು ಮಕ್ಕಳನ್ನು ಹಾಗೂ ಮೌಲಾನಾ ಆಜಾದ್ ನ್ಯಾಷನಲ್ ಫೆಲೋಷಿಪ್ ಮತ್ತು ಪಿ.ಹೆಚ್.ಡಿ ಸಂಶೋಧನಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿವೇತನವನ್ನು ರದ್ದುಗೊಳಿಸಿದ್ದರ ಮುಂದುವರಿಕೆಯ ಭಾಗವೇ ಇದಾಗಿದೆ ಎಂದರು.
ಸಂವಿಧಾನದ ಮೂಲ ತತ್ವವಾದ ಸಾಮಜಿಕ-ಆರ್ಥಿಕ ಹಾಗೂ ರಾಜಕೀಯ ನ್ಯಾಯ ಹಾಗೂ ಸಂವಿಧಾನಿಕ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ ಹಾಗೂ ಭ್ರಾತೃತ್ವ ವನ್ನು ಗೌರವಿಸುವ ವಿದ್ಯಾರ್ಥಿ ಸಂಘಟನೆಗಳು ಚುನಾವಣೆ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿ ಒಂದು ಸಮುದಾಯವನ್ನು ಮತ್ತೊಂದರ ವಿರುದ್ಧ ಎತ್ತಿಕಟ್ಟಲು ಬಿಜೆಪಿಯು ನಡೆಸಿರುವ ಹುನ್ನಾರವನ್ನು ಅರಿತಿದ್ದೇವೆ ಹಾಗೂ ಕರ್ನಾಟಕದ ಜನತೆ, ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಈ ಕೋಮು ಸಂಚನ್ನು ಮೀರಿ ಕುವೆಂಪು ಅವರು ಸಾರಿದ ವಿಶ್ವಮಾನವತೆಯನ್ನು ಎತ್ತಿಹಿಡಯಲಿದ್ದಾರೆ ಎಂದು ಕೆವಿಎಸ್ ಸಂಚಾಲಕ ಸರೋವರ್ ಬೆಂಕಿಕೆರೆ ತಿಳಿಸಿದರು.
ನಮ್ಮೆಲ್ಲಾ ವಿದ್ಯಾರ್ಥಿ ಸಂಘಟನೆಗಳು, ಎಲ್ಲಾ ಸಮುದಾಯಗಳ ಜೊತೆಗೆ ಹೆಜ್ಜೆಯನ್ನಿರಿಸುತ್ತಲೇ, ಮೀಸಲಾತಿಯನ್ನೂ ಹಾಗೂ ಆ ಮೂಲಕ ಸಾಮಾಜಿಕ ನ್ಯಾಯವನ್ನೂ ಮುಸ್ಲಿಂಮರಿಗೆ ಮಾತ್ರವಲ್ಲದೇ ಕರ್ನಾಟಕದ ಪ್ರತಿಯೊಬ್ಬರ ಕೈಗೆಟಕುವಂತೆ ಮಾಡಲು ಪಣತೊಡುತ್ತೇವೆ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ AIFRTEಯ ಶಂಶಾಂಕ್ ಎಸ್.ಆರ್, AISAದ ಆರತ್ರಿಕ, GIOನ ಮುಬ್ಬಾರ, ಬೆಂಗಳೂರು ವಿಶ್ವಾವಿದ್ಯಾಲಯ ವಿದ್ಯಾರ್ಥಿ ಸಂಘದ ಲೋಕೇಶ್ ರಾಮ್ ಮತ್ತು ಚಂದ್ರು ಪೆರಿಯಾರ್ ಭಾಗವಹಿಸಿದ್ದರು.
ಇದನ್ನೂ ಓದಿ: ಆಂಧ್ರದಲ್ಲಿಯೂ ಮುಸ್ಲಿಂ ಮೀಸಲಾತಿ ರದ್ದು ಮಾಡಲಾಗಿದೆ: ಸುಳ್ಳು ಹೇಳಿದ ಬೊಮ್ಮಾಯಿ ಸರ್ಕಾರ


