ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪಪ್ರಕರಣದ 14 ಜನ ಅಪರಾಧಿಗಳನ್ನು ಮತ್ತು ಕೊಲೆ ಆರೋಪದ 11 ಜನರನ್ನು ಅವಧಿಗೂ ಮುನ್ನ ಬಿಡುಗಡೆ ಮಾಡಲು ಅನುಮತಿ ನೀಡಿದ ಕಾರಣವನ್ನು ವಿವರಿಸುವಂತೆ ಗುಜರಾತ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕೇಳಿದೆ ಎಂದು ಪಿಟಿಐ ವರದಿ ಮಾಡಿದೆ.
11 ಅಪರಾಧಿಗಳಿಗೆ ಕ್ಷಮಾದಾನ ನೀಡುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸ್ವತಃ ಬಾನೋ ಅವರೇ ಸಲ್ಲಿಸಿದ ಅರ್ಜಿಗಳನ್ನು ಆಲಿಸುವಾಗ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠವು ಅಭಿಪ್ರಾಯವನ್ನು ವ್ಯಕ್ತಪಡಿಸಿತು.
”ಆ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು ಮತ್ತು ಹಲವಾರು ಜನರನ್ನು ಕೊಲ್ಲಲಾಯಿತು” ಎಂಬುದನ್ನು ಪೀಠವು ಗಮನಿಸಿತು. ನೀವು ಈ ಪ್ರಕರಣವನ್ನು ಸಾಮಾನ್ಯವಾದ ಸೆಕ್ಷನ್ 302 [ಕೊಲೆ] ಪ್ರಕರಣದಂತೆ ನೋಡಬೇಡಿ. ಸೇಬನ್ನು ಕಿತ್ತಳೆ ಹಣ್ಣುಗಳೊಂದಿಗೆ ಹೋಲಿಸಿದಂತೆ ಹತ್ಯಾಕಾಂಡವನ್ನು ಒಂದೇ ಕೊಲೆಯೊಂದಿಗೆ ಹೋಲಿಸಲಾಗುವುದಿಲ್ಲ. ಅಪರಾಧಗಳು ಸಾಮಾನ್ಯವಾಗಿ ಸಮಾಜ ಮತ್ತು ಸಮುದಾಯದ ವಿರುದ್ಧ ನಡೆಯುತ್ತವೆ. ಅಸಮಾನರನ್ನು ಸಮಾನವಾಗಿ ಪರಿಗಣಿಸಲಾಗುವುದಿಲ್ಲ ಎಂದು ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಿಳಿಹೇಳಿದೆ.
”ಶೀಘ್ರ ಬಿಡುಗಡೆಗಾಗಿ ಅಪರಾಧಿಗಳ ಅರ್ಜಿಗಳನ್ನು ನಿರ್ಧರಿಸುವಾಗ ಪ್ರಕರಣದ ಹಿನ್ನೆಲೆಯನ್ನು ಮನಸ್ಸಿನಿಂದ ನೋಡಬೇಕು. ಇಂದು ಬಿಲ್ಕಿಸ್ ಆದರೆ ನಾಳೆ ಅದು ಯಾರಿಗಾದರೂ ಆಗಬಹುದು.. ಸಂತ್ರಸ್ತರಿಗೆ ನೀವು ಏನು ಪರಿಹಾರ ವದಿಗಿಸಿದ್ದೀರಿ ಎನ್ನುವುದನ್ನು ತೋರಿಸದಿದ್ದರೆ, ನಾವು ನಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ನ್ಯಾಯಾಲಯವು ಗುಜರಾತ್ ಸರ್ಕಾರ ಹೇಳಿದೆ.
ಇದನ್ನೂ ಓದಿ: ಬಿಲ್ಕಿಸ್ ಅತ್ಯಾಚಾರಿಗಳಿಗೆ ಕ್ಷಮಾದಾನ ನೀಡಿದ ದಾಖಲೆಗಳನ್ನು ಸಲ್ಲಿಸಿ: ಗುಜರಾತ್ ಸರ್ಕಾರಕ್ಕೆ ಸುಪ್ರಿಂ ತಾಕೀತು
ಕೇಂದ್ರ ಮತ್ತು ಗುಜರಾತ್ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರು, ಮಾರ್ಚ್ 27 ರಿಂದ ಸುಪ್ರೀಂ ಕೋರ್ಟ್ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಮನವಿ ಸಲ್ಲಿಸಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಎಂದು ಪಿಟಿಐ ವರದಿ ಮಾಡಿದೆ. ಅಂದು, ಅಪರಾಧಿಗಳಿಗೆ ವಿನಾಯತಿ ನೀಡುವ ಕುರಿತು ಮೂಲ ಕಡತಗಳೊಂದಿಗೆ ಸಿದ್ಧವಾಗಿರುವಂತೆ ಗುಜರಾತ್ ಸರ್ಕಾರಕ್ಕೆ ನ್ಯಾಯಾಲಯ ಹೇಳಿತ್ತು.
ವಿಭಾಗೀಯ ಪೀಠವು ಆ ಆದೇಶವನ್ನು ಅನುಸರಿಸಿ, ಸರ್ಕಾರದ ನಿಲುವು ನ್ಯಾಯಾಲಯದ ನಿಂದನೆಯಾಗಿದೆ ಎಂದು ಟೀಕಿಸಿತು. ಏಕೆಂದರೆ ಸರ್ಕಾರ ನ್ಯಾಯಾಲಯದ ಆದೇಶದ ವಿರುದ್ಧ ನಡೆದುಕೊಂಡಿದೆ. ಮರುಪರಿಶೀಲನೆ ಮಾಡಿರುವ ಫೈಲ್‌ಗಳನ್ನು ಇನ್ನೂ ಸಲ್ಲಿಸುತ್ತಿಲ್ಲ ಎಂದು ಬಾರ್ ಮತ್ತು ಪೀಠವು ವರದಿ ಮಾಡಿದೆ.
”ಇಂದು ಫೈಲ್‌ಗಳನ್ನು ನಮಗೆ ತೋರಿಸುವುದರಲ್ಲಿ ಏನು ಸಮಸ್ಯೆ? ನೀವು ಯಾಕೆ ದೂರ ಸರಿಯುತ್ತಿದ್ದೀರಾ? ನೀವು ವಿಮರ್ಶೆಯನ್ನು ಸಲ್ಲಿಸಿಲ್ಲ; ನಾವು ನಿಮ್ಮನ್ನು ಎಂದಿಗೂ ನಿಲ್ಲಿಸಲ್ಲ” ಎಂದು ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿದೆ.
ಗುಜರಾತ್ ಸರ್ಕಾರದ ನಿಲುವಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದ ಮಾತ್ರಕ್ಕೆ ಅದನ್ನೇ ಮಾಡಬೇಕು ಎಂದಲ್ಲ ಎಂದು ವಿಭಾಗೀಯ ಪೀಠ ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಮೇ 2 ರಂದು ನಡೆಯಲಿದೆ.
ಏನಿದು ಪ್ರಕರಣ?
ಫೆಬ್ರವರಿ 27, 2002ರಂದು ಗುಜರಾತ್‌ನ ತುಂಬಾ ಕೋಮು ಗಲಭೆಗಳು ಭುಗಿಲೆದ್ದಿದ್ದವು. ಗಲಭೆ ಸಂಸ್ಕೃತಿಯ ಅವಿಭಾಜ್ಯ ಎಂದಾಗಿರುವ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಕೊಲೆಗಳು ಪೊಲೀಸರ ಕಣ್ಗಾವಲಿನಲ್ಲಿಯೇ ನಡೆದವು. ದಿನ ಬೆಳಗಾಗಿ ಮುಖನೋಡುತ್ತಿದ್ದ ನೆರೆಹೊರೆಯವರು ಧರ್ಮದ ಅಮಲಿನಲ್ಲಿ ರಾಕ್ಷಸರಿಗಿಂತ ವಿಪರೀತವಾಗಿ ವರ್ತಿಸಿದರು.
ಗಲಭೆಯಿಂದ ರಕ್ಷಿಸಿಕೊಳ್ಳಲು ಕುಟುಂಬ ಸಮೇತ ಟ್ರಕ್‌ನಲ್ಲಿ ಹೋಗುತ್ತಿದ್ದಾಗ ಎದುರಾದ ಗಲಭೆಕೋರರು ಬಿಲ್ಕಿಸ್ ಬಾನೋ ಕೈಯಿಂದ ಅವಳ 3 ವರ್ಷದ ಮಗುವನ್ನು ಎಳೆದುಕೊಂಡು ನೆಲಕ್ಕೆ ಚಚ್ಚಿ ಕೊಂದರು. 5 ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಮೇಲೆ, ಅವಳನ್ನು ದಿನಲೂ ನೋಡುತ್ತಿದ್ದ ಗಂಡಸರು ಒಬ್ಬರಾದ ಮೇಲೆ ಒಬ್ಬರಂತೆ ಅತ್ಯಾಚಾರವೆಸಗಿದರು. ಗಾಡಿಯಲ್ಲಿದ್ದ ಬಿಲ್ಕಿಸ್ ಕುಟುಂಬದ 7 ಸದಸ್ಯರನ್ನು ಕೊಲೆ ಮಾಡಿದರು. ಬಿಲ್ಕಿಸ್ ಕೂಡ ಸತ್ತಿರಬಹುದೆಂದುಕೊಂಡ ಕೊಲೆಗಡುಕರು ಹೊರಟುಹೋದರು. ಆ ಕರಾಳ ಹಿಂಸೆಯ ಮಧ್ಯೆ ಬದುಕುಳಿದ ಬಿಲ್ಕಿಸ್ ತನ್ನ ಗಾಯಗಳನ್ನು ದಿನವೂ ಕೆದಕುವ ಭಯಾನಕ ನೆನಪುಗಳ ವಾತಾವರಣದಲ್ಲಿ ನ್ಯಾಯಕ್ಕಾಗಿ ಮುಳ್ಳಿನ ಹಾದಿ ತುಳಿದಳು.
ಸಂಪೂರ್ಣವಾಗಿ ಸರ್ಕಾರದ ಕೈಗೊಂಬೆಯಾಗಿದ್ದ ಪೊಲೀಸರು ಅವಳ ಕಂಪ್ಲೇಂಟನ್ನು ಕಡೆಗಣಿಸಿದರು. ಅನಿವಾರ್ಯವಾಗಿ ಅವಳು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ ನಂತರ ಸುಪ್ರೀಂ ಕೋರ್ಟ್ 2003ರಲ್ಲಿ ಸಿಬಿಐಗೆ ವಿಚಾರಣೆಯನ್ನು ಒಪ್ಪಿಸಿತು. ಆದರೆ ನಿರಂತರವಾಗಿ ಭಯದ ನೆರಳಲ್ಲಿ ಬದುಕುತ್ತಿದ್ದ ಬಿಲ್ಕಿಸ್‌ಳ ಮನವಿಯ ಮೇರೆಗೆ ಕೇಸನ್ನು ನೆರೆ ರಾಜ್ಯವಾದ ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಯಿತು. ವಿಚಾರಣೆ ನಂತರ 20 ಜನರ ಪೈಕಿ 13 ಜನರನ್ನು ಅಪರಾಧಿಗಳು ಎಂದು ತೀರ್ಪು ನೀಡಿದ ಕೋರ್ಟ್ 11 ಜನರಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತು. 2017ರಲ್ಲಿ ಬಾಂಬೆ ಹೈಕೋರ್ಟ್ ಈ ತೀರ್ಮಾನವನ್ನು ಎತ್ತಿ ಹಿಡಿಯಿತು. ಅತ್ಯಾಚಾರಿ, ಕೊಲೆಗಡುಕರು ಕೊನೆಗೂ ಜೈಲು ಸೇರಿದ್ದರು.


