ತೆಲಂಗಾಣದ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ ನೀಡಲು ನಿರ್ಧರಿಸಿದೆ. ಮೇ 10ರಂದು ನಡೆಯುವ ಚುನಾವಣೆಯಲ್ಲಿ ತನ್ನ ಮಿತ್ರ ಪಕ್ಷವು ಕಣದಲ್ಲಿರುವುದರಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಬಿಆರ್‌ಎಸ್ ತೀರ್ಮಾನಿಸಿದೆ.
ಬಿಆರ್‌ಎಸ್ ಪಕ್ಷವು ಈ ಹಿಂದೆ ಟಿಆರ್‌ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಹೆಸರಿನಲ್ಲಿತ್ತು. ರಾಷ್ಟ್ರೀಯ ರಾಜಕೀಯಕ್ಕೆ ಕಾಲಿಡುವುದಕ್ಕಾತಿ ತನ್ನ ಹೆಸರನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಮರುನಾಮಕರಣ ಮಾಡಿತು. ಬಿಆರ್‌ಎಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದೆಂದು ನಿರೀಕ್ಷಿಸಲಾಗಿತ್ತು.
ಆದರೆ ಜೆಡಿಎಸ್, ಬಿಆರ್‌ಎಸ್‌ನ ಮಿತ್ರ ಪಕ್ಷವಾಗಿದೆ. ಜೊತೆಗೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಾಕಷ್ಟು ಸಮಯದ ಕೊರತೆ ಬಿಆರ್‌ಎಸ್‌ಗೆ ಎದುರಾಯಿತು. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ಅದು ನಿರ್ಧರಿಸಿತ್ತು ಎಂದು ಬಿಆರ್‌ಎಸ್ ಮೂಲಗಳು ಶುಕ್ರವಾರ ತಿಳಿಸಿವೆ.
ಸಾಕಷ್ಟು ಸಿದ್ಧತೆ ಮತ್ತು ಯೋಜನೆ ಇಲ್ಲದೆ ಚುನಾವಣೆ ಎದುರಿಸಲು ಪಕ್ಷವು ಒಲವು ಹೊಂದಿಲ್ಲ ಎಂದು ಮೂಲಗಳು ಹೇಳಿದ್ದು, ನೆರೆಯ ಮಹಾರಾಷ್ಟ್ರದಲ್ಲಿ ನೆಲೆಯೂರಲು ಬಿಆರ್‌ಎಸ್ ಮಾಡುತ್ತಿರುವ ಪ್ರಯತ್ನಗಳನ್ನು ಉಲ್ಲೇಖಿಸಲಾಗಿದೆ.
ಬಿಆರ್‌ಎಸ್ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಇದುವರೆಗೆ ಮಹಾರಾಷ್ಟ್ರದ ನಾಂದೇಡ್ ಪ್ರದೇಶದಲ್ಲಿ ಎರಡು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಏಪ್ರಿಲ್ 24 ರಂದು ಛತ್ರಪತಿ ಸಂಭಾಜಿ ನಗರದಲ್ಲಿ (ಔರಂಗಾಬಾದ್) ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಭಾಷಣ ಮಾಡಿದ್ದರು.
ಜೆಡಿಎಸ್ ಅಭ್ಯರ್ಥಿಗಳು ಕೋರಿದರೆ, ಆದರೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ಅವರನ್ನು ಬೆಂಬಲಿಸಿ ಪ್ರಚಾರ ಮಾಡುವ ಬಗ್ಗೆ ಚಂದ್ರಶೇಖರ್ ರಾವ್ ಯೋಚಿಸಬಹುದು.
ತಾನು ಪ್ರಚಾರ ಮಾಡುವುದರಿಂದ ಬಿಜೆಪಿ ವಿರೋಧಿ ಮತಗಳ ವಿಭಜನೆಯಾದರೆ ಕರ್ನಾಟಕದಲ್ಲಿ ಬಿಜೆಪಿಗೆ ವರದಾನವಾಗಲಿದೆ ಎಂಬ ಅಭಿಪ್ರಾಯದ ಬಗ್ಗೆಯೂ ಬಿಆರ್‌ಎಸ್ ಕಳವಳ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಟಿಆರ್‌ಎಸ್ ಹೆಸರನ್ನು ಬಿಆರ್‌ಎಸ್ ಎಂದು ಬದಲಾಯಿಸಲು ಹೈದ್ರಾಬಾದ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲೂ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಯವರು ಪಾಲ್ಗೊಂಡಿದ್ದರು ಎಂಬುದು ಗಮನಾರ್ಹ.
‘ಭಾರತ್ ರಾಷ್ಟ್ರ ಸಮಿತಿ’ ಪಕ್ಷವನ್ನು ಪ್ರಾರಂಭಿಸಿದ ತೆಲಂಗಾಣ ಭವನದಲ್ಲಿ ನಡೆದ ಸಮಾರಂಭದಲ್ಲಿ ಜೆಡಿಎಸ್‌ನ 20 ಶಾಸಕರು ಸಹ ಭಾಗವಹಿಸಿದ್ದರು. ಇಷ್ಟೆ ಅಲ್ಲದೆ ತಮಿಳುನಾಡಿನ ದಲಿತ ನಾಯಕ ತಿರುಮಾವಲವನ್ ಅವರ ಪಕ್ಷದ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ)ಯ ಇಬ್ಬರು ಸಂಸದರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಮೇ 10ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಗುರುವಾರ ಅಂತ್ಯಗೊಂಡಿದೆ.
ಇದನ್ನೂ ಓದಿರಿ: ರಾಷ್ಟ್ರ ರಾಜಕಾರಣದ ಗುರಿ: ಟಿಆರ್‌ಎಸ್ ಅನ್ನು ‘ಭಾರತ ರಾಷ್ಟ್ರ ಸಮಿತಿ’ಯನ್ನಾಗಿ ಪರಿವರ್ತಿಸಿದ ತೆಲಂಗಾಣ ಸಿಎಂ ಕೆಸಿಆರ್


