Homeಮುಖಪುಟವಾಟ್ಸ್‌ಅಪ್‌ ವಂಚನೆ ಜಾಲ: ನಾಲ್ವರು ಖದೀಮರು ಅರೆಸ್ಟ್‌

ವಾಟ್ಸ್‌ಅಪ್‌ ವಂಚನೆ ಜಾಲ: ನಾಲ್ವರು ಖದೀಮರು ಅರೆಸ್ಟ್‌

ಯೂಟ್ಯೂಬ್‌ ವಿಡಿಯೊ ಲೈಕ್ ಮಾಡಿದರೆ ದುಡ್ಡುಕೊಡುತ್ತೇವೆ ಎನ್ನುವ ಸಂದೇಶಗಳ ಕುರಿತು ಎಚ್ಚರವಿರಲಿ!

- Advertisement -
- Advertisement -

ಯೂಟ್ಯೂಬ್ ವಿಡಿಯೋಗಳನ್ನು ಲೈಕ್ ಮಾಡಿದರೆ ದುಡ್ದು ಕೊಡುತ್ತೇವೆ, ಹೂಡಿಕೆ ಮಾಡಿದರೆ ಹೆಚ್ಚಿನ ಆದಾಯ ಸಿಗುತ್ತದೆ ಎಂಬ ಭರವಸೆ ನೀಡಿ ವಾಟ್ಸ್‌ಅಪ್‌ ಮೂಲಕ ದೇಶಾದ್ಯಂತ ಜನರನ್ನು ವಂಚಿಸುತ್ತಿದ್ದ ಗ್ಯಾಂಗ್‌ನ ನಾಲ್ವರನ್ನು ಮುಂಬೈನ ಚುನಭಟ್ಟಿ ಪೊಲೀಸರು ಬಂಧಿಸಿದ್ದಾರೆ.

“ಅರೆಕಾಲಿಕ ಉದ್ಯೋಗದ ಆಫರ್‌ ಬಂದಿತ್ತು, ಯೂಟ್ಯೂಬ್ ವಿಡಿಯೊಗಳನ್ನು ಲೈಕ್‌ ಮಾಡಿದರೆ ಹಣ ಕೊಡುವುದಾಗಿ ಹೇಳಿದ್ದರು” ಎಂದು ಮಾರ್ಚ್‌ನಲ್ಲಿ ದಾಖಲಾದ ದೂರಿನಲ್ಲಿ ಮಹಿಳೆಯೊಬ್ಬರು ವಿವರಿಸಿದ್ದಾರೆ.

ಮೆಸೇಜ್‌ ಕಳಿಸಿದವರು ಈ ಮಹಿಳೆಗೆ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಿಕೊಳ್ಳಲು ಸೂಚಿಸಿದ್ದರು. ಜೊತೆಗೆ ಈ ಮಹಿಳೆಗೆ ಲಿಂಕ್‌ ಕಳುಹಿಸಿದ್ದರು. ಸದರಿ ಮಹಿಳೆಯು ಲಿಂಕ್ ಕ್ಲಿಕ್ ಮಾಡಿದಾಗ, ಅದು ಮತ್ತೊಂದು ವೆಬ್‌ಸೈಟ್‌ಗೆ ಕರೆದೊಯ್ಯಿತು. ಬ್ಯಾಂಕ್ ವಿವರಗಳನ್ನು ಮತ್ತು ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನೀಡುವಂತೆ ಆ ವೆಬ್‌ಸೈಟ್‌ನಲ್ಲಿ ಸೂಚಿಸಲಾಗಿತ್ತು.

“ಮಹಿಳೆಗೆ ಕಳುಹಿಸಲಾದ ಯೂಟ್ಯೂಬ್ ವೀಡಿಯೊ ಲೈಕ್‌ ಮಾಡಿದ್ದಕ್ಕೆ ಪ್ರತಿ ಲೈಕ್‌ಗೆ 150 ರೂ. ನೀಡಲಾಯಿತು” ಎಂದು ವಲಯ 6ರ ಡಿಸಿಪಿ ಹೇಮರಾಜ್ ರಜಪೂತ್ ಮಾಹಿತಿ ನೀಡಿದ್ದಾರೆ.

“ನೀವು ರೂ. 1,300 ಗಳಿಸಿದ್ದೀರಿ. 7,500 ರೂ. ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಡೆಬಿಟ್ ಮಾಡಲಾಗುತ್ತದೆ ಎಂಬ ಸಂದೇಶಗಳನ್ನು ಆರೋಪಿಗಳು ಕಳುಹಿಸಿದ್ದರು. ನಂತರ ಆರೋಪಿಗಳು ರೂ. 12,000 ನಂತರ 25,000 ಮತ್ತು ರೂ. 50,000 ಹೂಡಿಕೆ ಮಾಡಲು ಹೇಳಿದರು. ಹೆಚ್ಚಿನ ಆದಾಯದ ಭರವಸೆ ನೀಡಿದರು, ಆದರೆ ಮಹಿಳೆಯು 4.3 ಲಕ್ಷ ರೂ. ನಷ್ಟ ಅನುಭವಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಹೀಗೆಯೇ ಮೋಸಹೋದ ಇನ್ನು ಮೂವರನ್ನು ಚುನಭಟ್ಟಿ ಪೊಲೀಸ್ ಠಾಣೆಯ ಸೈಬರ್ ಸೆಲ್, ತನಿಖೆಯ ಸಮಯದಲ್ಲಿ ಪತ್ತೆ ಹಚ್ಚಿದೆ. ಘಾಟ್ಕೋಪರ್‌ನ ಪಂತ್ ನಗರ, ಮಾಟುಂಗಾ ಮತ್ತು ಚುನಾಭಟ್ಟಿಯಲ್ಲಿ ಮೋಸಹೋದ ವ್ಯಕ್ತಿಗಳನ್ನು ಗುರುತಿಸಲಾಗಿದೆ.

ಪೋನ್‌ ಕರೆಗಳ ವಿವರ, ಐಪಿ ವಿಳಾಸ ಮತ್ತು ಹಣವನ್ನು ವರ್ಗಾಯಿಸಿದ ಬ್ಯಾಂಕ್ ಖಾತೆಗಳ ವಿವರಗಳನ್ನು ಬೆನ್ನು ಹತ್ತಿದ ಪೊಲೀಸರು, ಪಿಯೂಸ್ ಸೋನಿ, ರಾಜ್‌ಕುಮಾರ್ ಸೋನಿ, ಅರ್ಜುನ್ ಸೋನಿ ಮತ್ತು 17 ವರ್ಷದ ಯುವಕನನ್ನು ರಾಜಸ್ಥಾನದ ಅಲ್ವಾರ್‌ನಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. 30 ಫೋನುಗಳು ಮತ್ತು 30 ಸಿಮ್ ಕಾರ್ಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟು 97 ಲಕ್ಷ ರೂ.ಗಳೊಂದಿಗೆ 24 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ.

ವಾಟ್ಸ್‌ಅಪ್‌ ಮೂಲಕ ಹೇಗೆ ವಂಚಿಸುತ್ತಾರೆ?

ಸಾಮಾಜಿಕ ಮಾಧ್ಯಮಗಳನ್ನು ಬಳಸಿ ವಂಚನೆ ಮಾಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಈ ವಂಚನೆಯ ಜಾಲಗಳು ಕಾಲಕಾಲಕ್ಕೆ ಹೊಸ ಹೊಸ ರೂಪದಲ್ಲಿ ಬರುತ್ತವೆ. ಈಗ ಯೂಟ್ಯೂಬ್‌ ವಿಡಿಯೊ ಲೈಕ್ ಮಾಡಿದರೆ ಹಣ ನೀಡುತ್ತೇವೆ ಎಂಬ ಆಮಿಷದೊಂದಿಗೆ ವಂಚನೆಯ ಜಾಲ ಹಬ್ಬುತ್ತಿದೆ.

ಉದ್ಯೋಗ ಕಡಿತದಿಂದಲೋ ಅಥವಾ ಉದ್ಯೋಗವಕಾಶಗಳಿಲ್ಲದೆಯೋ ತೊಂದರೆ ಸಿಲುಕಿರುವವರು ಈ ವಂಚನೆಗೆ ಬಲಿಯಾಗುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ವಿಡಿಯೊವನ್ನು ಲೈಕ್ ಮಾಡಿದರೆ, ತಲಾ ಒಂದು ಲೈಕ್‌ಗೆ 50 ರೂಪಾಯಿ ನೀಡುತ್ತೇವೆ ಎಂಬ ಆಮಿಷದೊಂದಿಗೆ ಸ್ಕ್ಯಾಮರ್‌ಗಳು (ವಂಚಕರು) ನಿಮ್ಮನ್ನು ಸಂಪರ್ಕಿಸುತ್ತಾರೆ, ಈ ಕುರಿತು ಎಚ್ಚರ ವಹಿಸಬೇಕಿದೆ. ಇಲ್ಲವಾದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್‌ ಗೋತಾ ಹೊಡೆಯುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ‘ದಿ ಎಕನಾಮಿಕ್ ಟೈಮ್ಸ್‌’ ವರದಿ ಮಾಡಿದೆ.

ದಿನಕ್ಕೆ ರೂ. 5000ವರೆಗೆ ನೀವು ಗಳಿಸಬಹುದು ಎಂಬ ಆಮಿಷದೊಂದಿಗೆ ವಾಟ್ಸ್‌ಅಪ್‌, ಲಿಂಕ್ಡ್‌ಇನ್‌ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ವಂಚಕರು ನಿಮ್ಮನ್ನು ಸಂಪರ್ಕಿಸುತ್ತಾರೆ. ಪಾವತಿಯನ್ನು ಮುಂದುವರಿಸಲು, ಅವರು ಆಗಾಗ್ಗೆ ವೈಯಕ್ತಿಕ ಮಾಹಿತಿಯನ್ನು ನೀಡುವಂತೆ ಕೋರುತ್ತಾರೆ. ಸಾಂದರ್ಭಿಕವಾಗಿ ನಿಮ್ಮೊಂದಿಗೆ ವ್ಯವಹರಿಸುತ್ತಾ ಅಸ್ತಿತ್ವದಲ್ಲಿಯೇ ಇಲ್ಲದಿರುವ ಉದ್ಯೋಗಕ್ಕೆ ಪ್ರವೇಶ ಪಡೆಯುವಂತೆ ಅವರು ನಿಮ್ಮನ್ನು ಕಾಡಲಾರಂಭಿಸುತ್ತಾರೆ.

ಈ ವಂಚಕರು ಹೇಗೆ ಕಾರ್ಯನಿರ್ವಹಿಸುತ್ತಾರೆ?

ಕೆಲವೇ ಕೆಲವರಿಗೆ ಉದ್ಯೋಗವಕಾಶಗಳಿವೆ ಎಂಬ ಮಾಹಿತಿಯೊಂದಿಗೆ ವಂಚಕರು ನಿಮಗೆ ಸಂದೇಶ ಕಳುಹಿಸುವ ಮೂಲಕ ಸಂಪರ್ಕ ಸಾಧಿಸುತ್ತಾರೆ. ನಿಮ್ಮ ಉದ್ಯೋಗವನ್ನು ಕಾಯ್ದಿರಿಸಲು ನೀವು ಪ್ರತಿಕ್ರಿಯಿಸಬೇಕಾಗುತ್ತದೆ.

ಬಲಿಪಶುವಾಗಲಿರುವ ವ್ಯಕ್ತಿ, “ಏನು ಕೆಲಸ?” ಎಂದು ಕೇಳಿದಾಗ, “ನೀವು ಇಲ್ಲಿ ಮಾಡಬೇಕಾಗಿರುವ ಕೆಲಸವಿಷ್ಟೇ. ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಲೈಕ್ ಮಾಡಬೇಕು. ನೀವು ಲೈಕ್ ಮಾಡಿದ ಪ್ರತಿ ವಿಡಿಯೊಗೆ ರೂ. ಐವತ್ತು ರೂಪಾಯಿ ಪಾವತಿಸುತ್ತೇವೆ” ಎಂದು ವಂಚಕರು ತಿಳಿಸುತ್ತಾರೆ.

ಈ ಮಾದರಿಯಲ್ಲಿ ನಿಮಗೆ ಸಂದೇಶ ಬರುತ್ತವೆ

ನಕಲಿ ಖಾತೆಗಳ ಮೂಲಕ ಬೋಟ್ ಫಾರ್ಮ್‌ಗಳನ್ನು ಬಳಸಿಕೊಂಡು ನಕಲಿ ಯೂಟ್ಯೂಬ್‌ ಲೈಕ್‌ಗಳನ್ನು ಸೃಷ್ಟಿಸುವುದು ಈ ವಂಚಕರ ವ್ಯವಹಾರ ಮಾದರಿಯಾಗಿದೆ. ಆದರೆ, ಈ ಮಾಹಿತಿಯ ಕೊರತೆಯಿಂದ ಜನರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ.

ಜಾಗತಿಕ ಸಾಮಾಜಿಕ ಮಾಧ್ಯಮ ಅಥವಾ ಇಂಟರ್ನೆಟ್ ಕಂಪನಿಯಲ್ಲಿ ನಮ್ಮ ಕೆಲಸ ನಡೆಯುತ್ತಿದೆ ಎಂದು ನಿಮ್ಮನ್ನು ನಂಬಿಸಲು ಈ ವಂಚಕರು ಪ್ರಯತ್ನಿಸುತ್ತಾರೆ.

ಹೀಗೆ ನಿಮ್ಮನ್ನು ಸಂಪರ್ಕಿಸಿದವರು 150 ರೂಪಾಯಿಯಂತಹ ಸಣ್ಣ ಮೊತ್ತವನ್ನು ಮೊದಲು ನಿಮಗೆ ನೀಡುತ್ತಾರೆ. “ಮೂರು ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕಾಗಿ” ಈ ಹಣವನ್ನು ನಿಮಗೆ ಪಾವತಿಸಿರುತ್ತಾರೆ. ಅವರು ನಿಮಗೆ ಮೂರು ಯೂಟ್ಯೂಬ್‌ ವೀಡಿಯೊಗಳ ಲಿಂಕ್‌ಗಳನ್ನು ಕಳುಹಿಸುತ್ತಾರೆ, ಅವುಗಳನ್ನು ಲೈಕ್‌ ಮಾಡುವಂತೆ ಕೇಳುತ್ತಾರೆ. ನಂತರ ನೀವು ಲೈಕ್‌ ಮಾಡಿರುವ ಸಾಕ್ಷಿಗಾಗಿ ಸ್ಕ್ರೀನ್‌ಶಾಟ್ ಕಳುಹಿಸುವಂತೆ ತಿಳಿಸುತ್ತಾರೆ.

ಈ ಸ್ಕ್ಯಾಮ್‌ ನಂತರದಲ್ಲಿ ಎರಡನೇ ಹಂತಕ್ಕೆ ಹೋಗುತ್ತದೆ. ಇಲ್ಲಿಂದ ನೀವು ತೊಂದರೆ ಸಿಲುಕಿಕೊಳ್ಳಲು ಆರಂಭಿಸುತ್ತೀರಿ. “ನಿಮಗೆ ಹಣ ವರ್ಗಾವಣೆ ಮಾಡಲು ತೊಂದರೆಯಾಗುತ್ತಿದೆ” ಎಂಬ ಉತ್ತರವನ್ನು ಅವರು ನೀಡುತ್ತಾರೆ. ನಿಮಗೆ ಹಣ ವರ್ಗಾಯಿಸಲು ಸುಲಭವಾಗುವಂತೆ ಅಪ್ಲಿಕೇಷನ್‌ ಒಂದನ್ನು ಡೌನ್‌ಲೋಡ್ ಮಾಡಿಕೊಳ್ಳಲು ನಿಮ್ಮಲ್ಲಿ ತಿಳಿಸುತ್ತಾರೆ.

ಈ ಅಪ್ಲಿಕೇಷನ್‌ ಇದೆಯಲ್ಲ- ಅದರ ಮೂಲಕ ನಿಮ್ಮ ಮೊಬೈಲ್‌ ಅಥವಾ ಇನ್ನ್ಯಾವುದೇ ಡಿವೈಸ್‌ ಒಳಗೆ ಈ ವಂಚಕರು ಸುಲಭವಾಗಿ ಪ್ರವೇಶಿಸುತ್ತಾರೆ. ಇದು ಒಂದು ರೀತಿಯಲ್ಲಿ ಮಾಲ್‌ವೇರ್‌ ಸಾಫ್ಟ್‌ವೇರ್‌ ಆಗಿದೆ. ನಿಮಗೆ ಹಣವನ್ನು ಪಾವತಿಸುವ ಕನ್ಫರ್ಮೇಷನ್‌ಗಾಗಿ ಒಂದು ರೂಪಾಯಿ ಕಳಿಹಿಸಲು ಸೂಚಿಸುತ್ತಾರೆ. ಈ ಹಣ ಪಡೆಯುವುದು ಪರಿಶೀಲನೆಗಾಗಿಯಷ್ಟೇ ಎಂದು ನಂಬಿಸುತ್ತಾರೆ. ನೀವಿಷ್ಟು ಮಾಡಿದರೆ ಸಾಕು, ನಿಮ್ಮ ಒಟಿಪಿಗಳಿಗೆ, ಇಮೇಲ್‌ಗೆ, ಬ್ಯಾಂಕ್‌ ಖಾತೆ ಮತ್ತು ಕ್ರೆಡಿಟ್ ಕಾರ್ಡ್‌ಗೆ ಸಂಪೂರ್ಣವಾಗಿ ಪ್ರವೇಶವನ್ನು ಅವರು ಪಡೆಯುತ್ತಾರೆ. ನಿಮ್ಮ ಖಾತೆಯಲ್ಲಿರುವ ಹಣವೆಲ್ಲ ಖೋತಾ ಹೊಡೆಯುತ್ತದೆ.

ಇದನ್ನೂ ಓದಿರಿ: ‘ಎದ್ದೇಳು ಕರ್ನಾಟಕ’ ಅಭಿಯಾನಕ್ಕೆ ಕರೆ; ವಾಟ್ಸ್‌ಅಪ್‌ ಮೂಲಕ ಸಂಪರ್ಕಿಸಲು ಮನವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024: ರಾಹುಲ್ ಗಾಂಧಿ ಸ್ಪರ್ಧೆಗೆ ಒತ್ತಾಯಿಸಿ ಅಮೇಠಿ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ

0
ಅಮೇಠಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಇಲ್ಲಿನ ಪಕ್ಷದ ಜಿಲ್ಲಾ ಸಮಿತಿ ಕಚೇರಿ ಎದುರು ಧರಣಿ ನಡೆಸಿ, ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಬೇಕು...