Homeಕರ್ನಾಟಕಪುಲ್ವಾಮಾ: ಮೌನ ಮತ್ತು ಕಿರುಚಾಟ

ಪುಲ್ವಾಮಾ: ಮೌನ ಮತ್ತು ಕಿರುಚಾಟ

- Advertisement -
- Advertisement -

ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರು ಪುಲ್ವಾಮಾ ಘಟನೆಯ ಬಗ್ಗೆ ಆಸ್ಪೋಟಿಸಿದ ಭೀಕರ ಸತ್ಯವು ಎರಡು ಕಾರಣಗಳಿಂದ ಕರ್ನಾಟಕದಲ್ಲಿ ಚರ್ಚೆಗೆ ಒಳಗಾಗಲಿಲ್ಲ. ಮೊದಲನೆಯದು ಕರ್ನಾಟಕದ ಚುನಾವಣೆಯ ಗದ್ದಲ. ಎರಡನೆಯದು ಬಹುತೇಕ ಮಾರಾಟವಾಗಿರುವ ಮತ್ತು ಮತೀಕರಣಗೊಂಡಿರುವ ಮಾಧ್ಯಮಗಳು, ಇದರ ಚರ್ಚೆಯಲ್ಲಿ ಆಸಕ್ತಿ ತೋರದೆ ಹೋಗಿರುವುದು. ಈ ಚರ್ಚೆ ಮಾಡಿದರೆ, ತಾವು ಬೆಂಬಲಿಸುವ ಪಕ್ಷ ಮತ್ತು ಸರ್ಕಾರಗಳೇ ದೋಷದ ಕಟಕಟೆಯಲ್ಲಿ ನಿಂತುಬಿಡುವುದೆಂದು ಅವುಗಳಿಗೆ ತಿಳಿದಿರುವುದು. ಮೂರನೆಯದು ಜನರೂ ಈ ಬಗ್ಗೆ ಸಂವೇದನಾಶೀಲತೆ ಕಳೆದುಕೊಂಡಿರುವುದು.

ಸತ್ಯಪಾಲ್ ಮಲಿಕ್, (ಅವರ ಹೆಸರಲ್ಲಿ ಸತ್ಯ ಎಂಬ ಶಬ್ದವಿರುವುದು ಮಾರ್ಮಿಕ) ತಮ್ಮ ‘ದಿ ವೈರ್’ ಸಂದರ್ಶನದಲ್ಲಿ ಬಾಯಿಬಿಟ್ಟಿರುವ ಎರಡು ಸಂಗತಿಗಳೆಂದರೆ, 1. ನಮ್ಮ ಸೈನಿಕರನ್ನು ಪುಲ್ವಾಮಾದ ನಿರ್ದಿಷ್ಟ ರಸ್ತೆಯಲ್ಲಿ ಸಾಗಿಸುವುದು ಅಪಾಯಕರ; ಆಕ್ರಮಣವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರೂ, ಅವರನ್ನು ಸಾಗಿಸಲು ಯಾವುದೇ ವಿಮಾನವನ್ನು ಒದಗಿಸಲಿಲ್ಲ. 2. ಪುಲ್ವಾಮಾ ದುರಂತದಲ್ಲಿ 40 ಸೈನಿಕರು ಜೀವ ಕಳೆದುಕೊಂಡ ಬಳಿಕ, ಇದು ಸರ್ಕಾರದ ಪ್ರಮಾದದಿಂದಾದ ದುರಂತ ಎಂದು ಪ್ರಧಾನಮಂತ್ರಿಯವರಿಗೆ ಹೇಳಿದಾಗ, ಅವರು ನೀನು ಈ ಬಗ್ಗೆ ಮಾತಾಡಬೇಡ, ಸುಮ್ಮನಿರು ಎಂದು ಬಾಯಿ ಮುಚ್ಚಿಸಿದರು ಎಂಬುದು.

ಈ ಸಂಗತಿಗಳು ದಿಟವೇ ಆಗಿದ್ದರೆ ಎರಡು ಸಂಶಯಗಳಿಗೆ ಅನುವು ಮಾಡಿಕೊಡುತ್ತಿದೆ. 1. ಅವು ಚುನಾವಣೆಯ ದಿನಗಳಾಗಿದ್ದರಿಂದ, ಸರ್ಕಾರವು ಈ ದುರ್ಘಟನೆ ಆಗುವುದಕ್ಕೆ ಅನುವು ಮಾಡಿಕೊಟ್ಟಿತ್ತು. 2. ದುರ್ಘಟನೆ ಆದ ಬಳಿಕ ಅದರ ಭಾವನಾತ್ಮಕ ಫಾಯದೆಯನ್ನು ಎತ್ತಿಕೊಂಡು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಬಯಸಿತ್ತು. ಈ ಶಂಕೆಗೆ ಪೂರಕವಾದ ಸಂಗತಿಯೆಂದರೆ, ಬಿಜೆಪಿಯ ಬೆಂಬಲಿಗ ಮಾಧ್ಯಮಕರ್ತನಾದ ಆರ್ನಾಬ್, ಪುಲ್ವಾಮಾ ಘಟನೆಯ ಸುದ್ದಿ ಬಂದಾಗ ಸಂತೋಷದಿಂದ ಕೇಕೆ ಹಾಕುವಂತಹ ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದು. ಹೀಗೆ ಈ ಪ್ರಕರಣದಲ್ಲಿ ಗುಪ್ತವಾದ ಮೌನ ಮತ್ತು ಕೇಕೆಯ ಎರಡು ಆಯಾಮಗಳಿವೆ.

ನನಗೆ ಈ ಸಂದರ್ಶನದಲ್ಲಿ ಎದ್ದು ಕಂಡ ಸಂಗತಿಯೆಂದರೆ, ಈ ಆಸ್ಫೋಟಕ ಸತ್ಯವನ್ನು ಹೇಳುವಾಗ, ಮೂಲತಃ ಬಿಜೆಪಿಯಿಂದ ಬಂದವರಾದ ಸತ್ಯಪಾಲ್ ಮಲಿಕರ ಮುಖದಲ್ಲಿ ಕಂಡ ವಿಷಾದಕರ ದೃಢತೆ. ಪ್ರಭುತ್ವಕ್ಕೆ ಅಪ್ರಿಯವಾದ ಸತ್ಯವನ್ನು ಹೇಳುವವರಲ್ಲಿ ಇಂದು ಹಲವು ನ್ಯಾಯಾಧೀಶರು ಅಧಿಕಾರಿಗಳು ಎದುರಾಳಿಗಳು ಕೊಲೆಯಾಗುತ್ತಿರುವ ಸನ್ನಿವೇಶದಲ್ಲಿ, ಸಂವಿಧಾನದ ಪ್ರತಿನಿಧಿಯಾಗಿದ್ದ ಒಬ್ಬ ರಾಜ್ಯಪಾಲ ಈ ಭೀಕರವಾದ ಸತ್ಯವನ್ನು ಬಹಿರಂಗಗೊಳಿಸುತ್ತಿದ್ದಾರೆ. ಬಹಿರಂಗಗೊಳಿಸಿದ ಬಳಿಕ ಬರಲಿರುವ ಪರಿಣಾಮಗಳ ಬಗ್ಗೆ ತಿಳಿದಿದ್ದರೂ ಹೆದರದೆ ಹೇಳುತ್ತಿದ್ದಾರೆ. ಸತ್ಯಪಾಲರು ಈ ಹಿಂದೆ ಕೂಡ ಸರ್ಕಾರವು ರೈತವಿರೋಧಿ ಕಾಯಿದೆಗಳನ್ನು ತಂದಾಗ ಇದು ತಪ್ಪು ಎಂದು ರಾಜ್ಯಪಾಲ ಪದವಿಯಲ್ಲಿದ್ದೇ ಹೇಳಿದವರು. ಅವರ ಈ ಸತ್ಯವನ್ನು ಬಲಿಷ್ಠ ಪ್ರಭುತ್ವಕ್ಕೆ ಮುಖದ ಮೇಲೆ ಹೇಳುವ ಈ ದೃಢತೆಯು ಪಂಪಭಾರತದಲ್ಲಿ ಕರ್ಣನ ರಹಸ್ಯವನ್ನು ದುರ್ಯೋಧನನಿಗೆ ಹೇಳುವ ಸತ್ಯಂತಪ ಋಷಿಯ ಪ್ರಕರಣವನ್ನು ನೆನಪಿಸುತ್ತದೆ. ದ್ರೌಪದಿಗೆ ಮಾಡುವ ಅಪಮಾನ ಮತ್ತು ಬರಲಿರುವ ಯುದ್ಧದಿಂದ ಆಗುವ ಅನಾಹುತವನ್ನು ಚಕ್ರವರ್ತಿ ದುರ್ಯೋಧನನಿಗೂ, ಅದಕ್ಕೆ ನೈತಿಕವಾಗಿ ಬೆಂಬಲಕೊಟ್ಟ ಧೃತರಾಷ್ಟ್ರನಿಗೂ, ಕೌರವ ಪಕ್ಷದಲ್ಲೇ ಇದ್ದ ಸಂಜಯ ಮತ್ತು ವಿದುರರು ಹೇಳುವ ಪ್ರಸಂಗಗಳನ್ನು ಸಹ ನೆನಪಿಸುತ್ತದೆ. ವಾಸ್ತವವಾಗಿ ಆಳುವ ಸರ್ಕಾರಗಳು ಜನಬೆಂಬಲ ಗಳಿಸಲು ದೇಶಕ್ಕೆ ಹಾನಿಯಾಗುವಂತಹ ಕಾರ್ಯ ಮಾಡಿದರೆ, ಅದು ತಪ್ಪೆಂದು ಸುದ್ದಿಮಾಧ್ಯಮಗಳು ಅಧಿಕಾರಕ್ಕೆ ಸತ್ಯವನ್ನು ನುಡಿಯಬೇಕು. ಆದರೆ ಈ ಪ್ರಸಂಗದಲ್ಲಿರುವ ವೈರುಧ್ಯವೆಂದರೆ, ಪ್ರಭುತ್ವದ ಪಿತೂರಿ ಮತ್ತು ದೇಶಕ್ಕಾಗುವ ನಷ್ಟವನ್ನು ಆಳುವ ಪಕ್ಷದಲ್ಲಿರುವ ವ್ಯಕ್ತಿಯೇ ಹೇಳಿದ್ದು ಮತ್ತು ಪತ್ರಕರ್ತರು ಇದನ್ನು ಹೇಳದೆ ಹೋಗಿದ್ದು. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳನೋಡುವ, ಬಡ ಕುಟುಂಬಗಳಿಂದ ಹೋದ ಸೈನಿಕರನ್ನು ಬಲಿಗೊಟ್ಟು ಅಧಿಕಾರ ಉಳಿಸಿಕೊಳ್ಳುವ ಈ ನೀತಿಯು, ಹೃದಯಹೀನತೆ ಮಾತ್ರವಲ್ಲ, ಅದನ್ನು ಮುಚ್ಚಿಟ್ಟು ಭಾರತದ ಮಾಧ್ಯಮಗಳ ಅಪ್ರಾಮಾಣಿಕತೆ ಕ್ರೌರ್ಯವೂ ಆಗಿದೆ.

ಇದನ್ನೂ ಓದಿ: ಪುಲ್ವಾಮಾ ದಾಳಿ ಕುರಿತ ಸತ್ಯಪಾಲ್ ಹೇಳಿಕೆಗೆ ಪಾಕಿಸ್ತಾನ ಪ್ರತಿಕ್ರಿಯೆ

ಜಗತ್ತಿನಾದ್ಯಂತ ಆಳುವ ಪ್ರಭುತ್ವಗಳು, ತಮ್ಮ ಹಿತಾಸಕ್ತಿಗಾಗಿ ಸೈನಿಕರನ್ನು ಬಲಿಗೊಡುವ ರಾಜಕಾರಣಕ್ಕೆ ಸುದೀರ್ಘ ಚರಿತ್ರೆಯಿದೆ. ಸಾಮಾನ್ಯವಾಗಿ ಅವು ಬಡವರ ರೈತರ ಕೂಲಿಕಾರರ ಮಕ್ಕಳನ್ನು ಸೈನ್ಯಕ್ಕೆ ನೇಮಿಸಿಕೊಳ್ಳುತ್ತಿದ್ದವು. ಅವರಿಗೆ ಒಂದು ಶತ್ರುವನ್ನು ಕಟ್ಟಿಕೊಡುತ್ತಿದ್ದವು. ಶತ್ರುವಿನ ವಿರುದ್ಧ ಹೋರಾಡುವುದು ಧರ್ಮಕ್ಕೆ ಜನಾಂಗಕ್ಕೆ ರಾಷ್ಟ್ರಕ್ಕೆ ಸಲ್ಲಿಸುವ ಪವಿತ್ರ ಕರ್ತವ್ಯ ಎಂದು ನಂಬಿಸುತ್ತಿದ್ದವು. ಒಂದೊಮ್ಮೆ ಹೋರಾಟದಲ್ಲಿ ಸಾವು ಸಂಭವಿಸಿದರೆ ಅದು ದೈವಸ್ವರೂಪಿಯಾದ ದೊರೆಯ ಧರ್ಮದ ದೇಶದ ಜನಾಂಗದ ರಕ್ಷಣೆಗೆ ಸಲ್ಲಿಕೆಯಾದ ಬಲಿದಾನ ಎಂದು ವೈಭವೀಕರಿಸುತ್ತಿದ್ದವು. ಊಳಿಗಮಾನ್ಯ ರಾಜಪ್ರಭುತ್ವಗಳಲ್ಲಿ ಮಾಡಲಾಗುವ ಈ ಸೈನಿಕ ರಾಜಕಾರಣವು ಪ್ರಜಾಪ್ರಭುತ್ವದಲ್ಲೂ ನಡೆಯುತ್ತದೆ ಎನ್ನುವುದೇ ದುರಂತದ ಸಂಗತಿ. ಇದಕ್ಕೆ ಪೂರಕವಾಗಿ ನಮ್ಮ ರಾಜಕೀಯ ಪಕ್ಷಗಳ ಹೆಸರಲ್ಲಿ ಸೇನೆ ದಳ ಎಂಬ ಸೈನಿಕ ಶಬ್ದಗಳೂ ಇವೆ. ಸಾಲದೆಂಬಂತೆ, ಜನರು ತಮ್ಮ ಜತೆ ವಾಸಿಸುವ ಸಹನಾಗರಿಕರನ್ನು ಧರ್ಮ ಭಾಷೆ ಸಂಸ್ಕೃತಿ ಆಹಾರದ ಭಿನ್ನತೆಗಾಗಿ ದ್ವೇಷಿಸುವ, ಕೊಲ್ಲುವ ಅರೆಸೈನಿಕರೂ ಆಗುತ್ತಿರುವುದು ಈ ಯುಗಧರ್ಮದ ದುರಂತ.

ಜರ್ಮನಿ ಪಾಕಿಸ್ತಾನ ಅಮೆರಿಕ ಭಾರತವನ್ನು ಒಳಗೊಂಡಂತೆ, ಯಾವತ್ತೂ ಬಲಪಂಥೀಯ ಪ್ರಭುತ್ವಗಳು ತಮ್ಮ ದುರಾಡಳಿತದಿಂದ ಚುನಾವಣೆ ಸೋಲುವ ಮತ್ತು ಜನಪ್ರಿಯತೆ ತೀವ್ರವಾಗಿ ಕುಗ್ಗಿದ್ದ ಸನ್ನಿವೇಶದಲ್ಲಿ ಯುದ್ಧ ಕೊಲೆ ಹೆಣ ರಕ್ತ ಸಾವುಗಳನ್ನು ಬಯಸುತ್ತವೆ. ಆ ಸಾವು ಸೈನಿಕರದಾಗಿರಬಹುದು, ಪಕ್ಷದ ಕಾರ್ಯಕರ್ತರದಾಗಿರಬಹುದು, ಇಲ್ಲವೇ ಪ್ರಜೆಗಳದ್ದಾಗಿರಬಹುದು. ಇವು ಬಲಪಂಥೀಯ ರಾಷ್ಟ್ರೀಯತೆಗೆ ಯಾವಾಗಲೂ ಪ್ರಬಲವಾದ ಅಸ್ತ್ರಗಳು. ಹೀಗಾಗಿಯೇ ಈಗಲೂ ಚುನಾವಣೆ ಸನ್ನಿವೇಶದಲ್ಲಿ ಆಗುವ ನಿರ್ದಿಷ್ಟ ಧರ್ಮದ ವ್ಯಕ್ತಿಯ ಕೊಲೆ, ಚುನಾವಣೆಯ ಫಲಿತಾಂಶವನ್ನೇ ಬದಲಿಸುತ್ತದೆ. ಕವಿಯೊಬ್ಬ ಹೇಳಿದಂತೆ ‘ರಾಜಕೀಯ ನಾಯಕರು ಧರ್ಮ ದೇಶ ಖತರೇಮೇ ಹೈ ಎಂದು ಬೊಬ್ಬೆ ಹಾಕುತ್ತಿದ್ದಾರಾ? ಹಾಗಿದ್ದಲ್ಲಿ ಬಹುಶಃ ಚುನಾವಣೆಗಳು ಬಂದಿರಬೇಕು’ ಎಂಬುದು ಇಂದಿಗೂ ವಾಸ್ತವವೇ. ತಮ್ಮದೇ ದೇಶದ ಜನರನ್ನು ದಮನಿಸಿ, ಸೈನಿಕರನ್ನು ಯುದ್ಧಕ್ಕೆ ಮತ್ತಿತರ ಅಪಾಯಕ್ಕೆ ದೂಡಿ, ಕೊಲ್ಲಿಸಿ, ತಾನು ಅಧಿಕಾರ ಜನಪ್ರಿಯತೆ ಅನುಭವಿಸುವ ಈ ಸಂಸ್ಕೃತಿ ಪ್ರಜಾಪ್ರಭುತ್ವದ ಘೋರವಾದ ಸತ್ಯವಾಗಿದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ದೆಶ ತೊರೆಯುವುದನ್ನು ಪ್ರಧಾನಿ ಮೋದಿ ತಡೆದಿಲ್ಲ: ಪ್ರಿಯಾಂಕಾ ಗಾಂಧಿ

0
ಹಾಸನ ಜೆಡಿಎಸ್ ಸಂಸದ, ಎನ್‌ಡಿಎ ಎಂಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಭಾರತ ತೊರೆಯುವುದನ್ನು ಪ್ರಧಾನಿ ನರೇಂದ್ರ ಮೋದಿ ತಡೆದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ. ಬುಧವಾರ ಅಸ್ಸಾಂನ...