ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್‌ನಲ್ಲಿ ಪದವಿಪೂರ್ವ ವಿದ್ಯಾರ್ಥಿಯೊಬ್ಬ ಶುಕ್ರವಾರ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಫೆಬ್ರವರಿಯಿಂದ ಇಲ್ಲಿಯವರೆಗೆ ಸದರಿ ಸಂಸ್ಥೆಯಲ್ಲಿ ಘಟಿಸಿರುವ ನಾಲ್ಕನೇ ಪ್ರಕರಣ ಇದಾಗಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿ ದಾಖಲಿಸಿಕೊಂಡಿದ್ದು, ಡೆತ್‌ನೋಟ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಹಿಂದಿನ ಮೂರು ಪ್ರಕರಣಗಳಲ್ಲಿಯೂ ಸಹ ವಿದ್ಯಾರ್ಥಿಗಳು ಡೆತ್‌ನೋಟ್‌ಗಳನ್ನು ಬಿಟ್ಟು ಹೋಗಿದ್ದಾರೆ” ಎಂದು ತನಿಖಾಧಿಕಾರಿಯೊಬ್ಬರು ‘ಹಿಂದೂಸ್ತಾನ್ ಟೈಮ್ಸ್’ಗೆ ತಿಳಿಸಿದ್ದಾರೆ.
ಈ ವರ್ಷ ಐಐಟಿ-ಮದ್ರಾಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ನಾಲ್ಕನೇ ವಿದ್ಯಾರ್ಥಿ ಪ್ರಕರಣ ಇದಾಗಿದೆ. 2018ರಿಂದ 11 ಪ್ರಕರಣಗಳು ಇಲ್ಲಿ ಘಟಿಸಿವೆ. ಮಾರ್ಚ್ 31ರಂದು ಸಂಶೋಧನಾ ವಿದ್ಯಾರ್ಥಿ ಸಚಿನ್ ಕುಮಾರ್ ಜೈನ್ ಅವರು ತಮ್ಮ ವಾಟ್ಸ್‌ಅಪ್‌ನಲ್ಲಿ “ನನ್ನನ್ನು ಕ್ಷಮಿಸಿ, ಸರಿಯಾಗಿಲ್ಲ. ಸಾಕು” ಎಂದು ಅಪ್‌ಡೇಟ್ ಮಾಡಿ ಸಾವಿಗೆ ಶರಣಾಗಿದ್ದರು.
ಮಾರ್ಚ್ 14 ರಂದು ಇನ್ಸ್‌ಟಿಟ್ಯೂಟ್‌ನಲ್ಲಿ ಮೂರನೇ ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಫೆಬ್ರವರಿ 13ರಂದು, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಎರಡನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದನು.
ಐಐಟಿ-ಮದ್ರಾಸ್ ಶುಕ್ರವಾರ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ವಿದ್ಯಾರ್ಥಿಯು ತನ್ನ ಹಾಸ್ಟೆಲ್ ಕೋಣೆಯಲ್ಲಿ ಮಧ್ಯಾಹ್ನ ನಿಧನರಾಗಿದ್ದಾರೆಂದು ಹಂಚಿಕೊಳ್ಳಲು ದುಃಖವಾಗುತ್ತಿದೆ” ಎಂದಿದೆ.
“ಸಂಸ್ಥೆಯು ತನ್ನದೇ ಆದ ಒಬ್ಬರನ್ನು ಕಳೆದುಕೊಂಡಿದೆ ಮತ್ತು ವೃತ್ತಿಪರ ಸಮುದಾಯವು ಉತ್ತಮ ವಿದ್ಯಾರ್ಥಿಯನ್ನು ಕಳೆದುಕೊಂಡಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದೆ.
“ಪೋಷಕರಿಗೆ ಮಾಹಿತಿ ನೀಡಲಾಗಿದೆ. ಐಐಟಿ ಮದ್ರಾಸ್, ಒತ್ತಡದಲ್ಲಿರುವ ವಿದ್ಯಾರ್ಥಿಗಳನ್ನು ಪೂರ್ವಭಾವಿಯಾಗಿ ಗುರುತಿಸಲು ಮತ್ತು ಸಹಾಯ ಮಾಡಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಾವು ಈ ಕ್ರಮಗಳನ್ನು ಹೆಚ್ಚಿಸಲು ಮುಂದಾಗಿದ್ದೇವೆ” ಎಂದು ಹೇಳಿದೆ.
ಸಂಸ್ಥೆಯು ‘ಹ್ಯಾಪಿನೆಸ್ ವೆಬ್‌ಸೈಟ್’ ಅನ್ನು ಪ್ರಾರಂಭಿಸಿದೆ ಮತ್ತು ವಿದ್ಯಾರ್ಥಿಗಳ ಕ್ಷೇಮವನ್ನು ವಿಚಾರಿಸುತ್ತಿದೆ ಎಂದು ಐಐಟಿ-ಎಂ ನಿರ್ದೇಶಕ ವಿ ಕಾಮಕೋಟಿ ಹೇಳಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
“ಕೋವಿಡ್ -19ರ ನಂತರ ಕ್ಯಾಂಪಸ್ ಅನ್ನು ಪುನಾರಂಭಿಸಿದಾಗ, ನಮಗೆ ನಾವು ಊಹಿಸಲಾಧ್ಯವಾದಂತಹ ಸಂಖ್ಯೆಯ ದುರದೃಷ್ಟಕರ ಘಟನೆಗಳು ಎದುರಾಗಿವೆ” ಎಂದು ಐಐಟಿ-ಮದ್ರಾಸ್‌ನ 64ನೇ ಇನ್‌ಸ್ಟಿಟ್ಯೂಟ್ ದಿನದಂದು ಕಾಮಕೋಟಿ ಹೇಳಿದ್ದರು.
“ವಿದ್ಯಾರ್ಥಿಗಳನ್ನು, ವಿಶೇಷವಾಗಿ ಖಿನ್ನತೆಗೆ ಒಳಗಾದ ಅಥವಾ ಒತ್ತಡಕ್ಕೊಳಗಾದವರನ್ನು ಮೇಲ್ವಿಚಾರಣೆ ಮಾಡಲು ವ್ಯವಸ್ಥೆಯನ್ನು ರೂಪಿಸಬೇಕು. ಈ ವಿಚಾರವಾಗಿ ಶಿಕ್ಷಣ ಸಚಿವಾಲಯ ಕ್ರಮ ವಹಿಸುವಲ್ಲಿ ವಿಫಲವಾಗಿದೆ” ಎಂದು ಹಲವಾರು ಐಐಟಿ ಹಳೆಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿರಿ: ಐಐಟಿ ಬಾಂಬೆ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ಸಹಪಾಠಿಯ ಬಂಧನ


