ಆಂಧ್ರ ಪ್ರದೇಶದ ಗಡಿಗೆ ಅಂಟಿಕೊಂಡಿರುವ, ಹೆಚ್ಚಾಗಿ ತೆಲುಗು ಭಾಷಿಕರೆ ಇರುವ ತುಮಕೂರು ಜಿಲ್ಲೆಯ ಹಿಂದುಳಿದ ತಾಲ್ಲೂಕು ಎನಿಸಿಕೊಂಡ ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಬಿರುಸು ಪಡೆದಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪಾವಗಡ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ವೆಂಕಟರಮಣಪ್ಪನವರು ಸದ್ಯ ಶಾಸಕರಾಗಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ಅವರು ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದು ತಮ್ಮ ಪುತ್ರ ಹೆಚ್.ವಿ ವೆಂಕಟೇಶ್‌ರವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವಂತೆ ನೋಡಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಸೋಲು ಕಂಡ ಜೆಡಿಎಸ್ ಪಕ್ಷದ ತಿಮ್ಮರಾಯಪ್ಪನವರು ಮತ್ತೆ ಕಣಕ್ಕೆ ಧುಮುಕಿದ್ದಾರೆ. ಕ್ಷೇತ್ರದ ಸ್ಥಿತಿಗತಿ ಹೀಗಿದೆ.
ಇದುವರೆಗೂ ಪಾವಗಡದಲ್ಲಿ 15 ಚುನಾವಣೆಗಳು ನಡೆದಿವೆ. ಅದರಲ್ಲಿ 10 ಬಾರಿ ಕಾಂಗ್ರೆಸ್ ಪಕ್ಷವೇ ಜಯ ಗಳಿಸಿದೆ. ಜೆಡಿಎಸ್ ಎರಡು ಬಾರಿ, ಜನತಾದಳ ಮತ್ತು ಜನತಾ ಪಕ್ಷ ತಲಾ ಒಮ್ಮೆ ಮತ್ತು ಒಂದು ಬಾರಿ ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದಾರೆ. ಈ ಕ್ಷೇತ್ರದ ವಿಶೇಷವೆಂದರೆ ಇಲ್ಲಿ ಯಾರೂ ಸಹ ಸತತವಾಗಿ ಎರಡನೇ ಬಾರಿ ಗೆಲ್ಲಲು ಸಾಧ್ಯವಾಗಿಲ್ಲ.
1951ರಲ್ಲಿ ಮೈಸೂರು ಸಂಸ್ಥಾನದ ಭಾಗವಾಗಿದ್ದಾಗ ಪಾವಗಡ ದ್ವಿಸದಸ್ಯತ್ವ ಹೊಂದಿತ್ತು. ಎರಡೂ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. 1978ರಲ್ಲಿ ಇಂದಿರಾ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವವರೆಗೂ ಕಾಂಗ್ರೆಸ್ ಪಾರುಪತ್ಯ ಮೆರೆದಿತ್ತು. ಆದರೆ 1983ರಲ್ಲಿ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿ ಉಗ್ರನರಸಿಂಹಪ್ಪ ಗೆಲುವು ಕಂಡರು. 1985ರಲ್ಲಿ ಸೋಮ್ಲಾ ನಾಯ್ಕ್ ಜನತಾ ಪಕ್ಷದಿಂದ ಆಯ್ಕೆಯಾಗಿದ್ದರು.
1989ರಲ್ಲಿ ವೆಂಕಟರಮಣಪ್ಪನವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. 1994ರಲ್ಲಿ ಸೋಮ್ಲಾ ನಾಯಕ್ ಜನತಾದಳದಿಂದ ಜಯ ಕಂಡರೆ 1999ರಲ್ಲಿ ಮತ್ತೆ ವೆಂಕಟರಮಣಪ್ಪನವರು ಕಾಂಗ್ರೆಸ್‌ನಿಂದ ಆರಿಸಿಬಂದರು. 2004ರಲ್ಲಿ ಜೆಡಿಎಸ್‌ನ ಕೆ.ಎಂ ತಿಮ್ಮರಾಯಪ್ಪನವರು ಗೆದ್ದುಬಂದರು. 2008ರಲ್ಲಿ ವೆಂಕಟರಮಣಪ್ಪನವರ ಬದಲು ಡಾ.ಗಾಯಿತ್ರಿ ದೇವಿ ಎಂಬುವವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಸೋಮ್ಲಾ ನಾಯ್ಕ್ ಬಿಜೆಪಿ ಸೇರಿ ಅಭ್ಯರ್ಥಿಯಾದರು. ಜೆಡಿಎಸ್‌ನಿಂದ ತಿಮ್ಮರಾಯಪ್ಪನವರು ಕಣಕ್ಕಿಳಿದಿದ್ದರು. ಆದರೆ ವೆಂಕಟರಮಣಪ್ಪನವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಕಂಡು ಮೂರನೇ ಬಾರಿಗೆ ಶಾಸಕರಾದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕೆ ಕುಸಿದಿತ್ತು!
2013ರ ಚುನಾವಣೆಯಲ್ಲಿ ವೆಂಕಟರಮಣಪ್ಪನವರ ಬದಲಿಗೆ ಅವರ ಪುತ್ರ ಹೆಚ್.ವಿ ವೆಂಕಟೇಶ್ ಕಾಂಗ್ರೆಸ್ ಅಭ್ಯರ್ಥಿಯಾದರು. ಜೆಡಿಎಸ್‌ನಿಂದ ತಿಮ್ಮರಾಯಪ್ಪನವರು ಕಣಕ್ಕಿಳಿದರು. ಇಬ್ಬರ ನಡುವಿನ ಪೈಪೋಟಿಯಲ್ಲಿ ತಿಮ್ಮರಾಯಪ್ಪನವರು 4,863 ಮತಗಳ ಅಂತರದಲ್ಲಿ ಗೆದ್ದು ಎರಡನೇ ಭಾರಿಗೆ ಶಾಸಕರಾದರು.
2018ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ವೆಂಕಟರಮಣಪ್ಪನವರು ಕಣಕ್ಕಿಳಿದರು. ಜೆಡಿಎಸ್‌ನ ತಿಮ್ಮರಾಯಪ್ಪನವರು ಎದುರಾಳಿಯಾಗಿದ್ದರು. ಇವರಿಬ್ಬರ ನಡುವಿನ ಜಿದ್ದಾಜಿದ್ದಿನ ಹೋರಾಟದಲ್ಲಿ ವೆಂಕಟರಮಣಪ್ಪನವರು 72,974 ಮತಗಳನ್ನು ಪಡೆದರೆ ತಿಮ್ಮರಾಯಪ್ಪನವರು 72,565 ಮತಗಳನ್ನು ಪಡೆದು ಕೇವಲ 409 ಮತಗಳ ಅಂತರದಿಂದ ಸೋಲುಂಡರು. ವೆಂಕಟರಮಣಪ್ಪ ನಾಲ್ಕನೇ ಬಾರಿಗೆ ಶಾಸಕರಾಗಿ, ಸಚಿವರೂ ಆಗಿದ್ದರು.
ಒಟ್ಟು 2 ಲಕ್ಷ ಮತಗಳಿರುವ ಪಾವಗಡ ಪ.ಜಾ ಮೀಸಲು ಕ್ಷೇತ್ರವಾಗಿದೆ. ಪರಿಶಿಷ್ಟ ಜಾತಿಯ 55,000 ಮತಗಳಿದ್ದರೆ, ಪರಿಶಿಷ್ಟ ಪಂಗಡ 35,000 ಮತಗಳಿವೆ. 10,000 ಮುಸ್ಲಿಂ ಮತಗಳು ಇವೆ ಎನ್ನಲಾಗಿದೆ.
ಹಾಲಿ ಪರಿಸ್ಥಿತಿ
ವೆಂಕಟರಮಣಪ್ಪನವರು ಯಾವುದೇ ಅಹಂ ಇಲ್ಲದೆ ಎಲ್ಲರ ಕೈಗೆ ಸಿಗುತ್ತಾರೆ. ಜನರ ಕೆಲಸಗಳನ್ನು ಮಾಡಿಕೊಡುತ್ತಾರೆ. ಎಲ್ಲರ ಫೋನ್ ತೆಗೆಯುತ್ತಾರೆ ಎಂಬ ಮಾತುಗಳು ಕೇಳಿಬರುತ್ತವೆ. ಆದರೆ ತಮ್ಮ ಊರಿಗೆ ರಸ್ತೆ ಕೇಳಿದ ಯುವಕನ ಕಪಾಳಕ್ಕೆ ಹೊಡೆದಿದ್ದರು, 4 ದಶಕಗಳಿಂದ ಕಾಂಗ್ರೆಸ್‌ನಲ್ಲಿ ಅವರೊಬ್ಬರೆ ಅಧಿಕಾರದಲ್ಲಿದ್ದಾರೆ ಎಂಬ ಆರೋಪಗಳು ಸಹ ಅವರ ಮೇಲಿವೆ. ಅವರ ಕುಟುಂಬ ಸದಸ್ಯರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೊಡಬಾರದು ಎಂಬ ಒತ್ತಾಯವನ್ನು ಸ್ಥಳೀಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮುಂದಿಟ್ಟಿದ್ದರು. ಆದರೆ ಅದಕ್ಕೆ ಸೊಪ್ಪು ಹಾಕದ ಕಾಂಗ್ರೆಸ್ ಅವರು ಪುತ್ರ ಹೆಚ್.ವಿ ವೆಂಕಟೇಶ್‌ರವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿದೆ.
ಜೆಡಿಎಸ್ ಪಕ್ಷವು ಮಾಜಿ ಶಾಸಕ ತಿಮ್ಮರಾಯಪ್ಪನವರಿಗೆ ಮತ್ತೊಂದು ಅವಕಾಶ ನೀಡಿದೆ. ಅವರು ಕ್ಷೇತ್ರದ ಸಂಪ್ರದಾಯದಂತೆ ಈ ಬಾರಿ ಜನ ತನ್ನನ್ನು ಆಯ್ಕೆ ಮಾಡುತ್ತಾರೆ ಎಂದು ನಂಬಿ ಕೆಲಸ ಮಾಡುತ್ತಿದ್ದಾರೆ.
ಕೃಷ್ಣ ನಾಯ್ಕ್ ಎಂಬುವವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಜನಾರ್ದನ ರೆಡ್ಡಿಯ ಕೆಆರ್‌ಪಿಪಿ ಪಕ್ಷದಿಂದ ನೇರಳೇಕುಂಟೆ ನಾಗೇಂದ್ರ ಕುಮಾರ್ ಕಣಕ್ಕಿಳಿದಿದ್ದಾರೆ.
2023ರ ಸಾಧ್ಯತೆಗಳು
ಜೆಡಿಎಸ್ ಪಕ್ಷದ ತಿಮ್ಮರಾಯಪ್ಪ ಅವರು ಪರಿಶಿಷ್ಟ ಜಾತಿಯ ಎಡಗೈ ಸಮುದಾಯದವರಾಗಿದ್ದಾರೆ. ಕಾಂಗ್ರೆಸ್‌ನ ಹೆಚ್.ವಿ ವೆಂಕಟೇಶ್ ಬೋವಿ ಸಮುದಾಯಕ್ಕೆ ಸೇರಿದ್ದಾರೆ. ಕೆಆರ್‌ಪಿಪಿ ಪಕ್ಷದ ನಾಗೇಂದ್ರ ಕುಮಾರ್ ಸಹ ಬೋವಿ ಸಮುದಾಯದವರೆ ಆಗಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯ್ಕ್ ಲಂಬಾಣಿ ಸಮುದಾಯಕ್ಕೆ ಸೇರಿದ್ದಾರೆ. ಆದರೆ ನೇರ ಪೈಪೋಟಿ ಇರುವುದು ಜೆಡಿಎಸ್‌ನ ತಿಮ್ಮರಾಯಪ್ಪ ಮತ್ತು ಕಾಂಗ್ರೆಸ್‌ನ ಹೆಚ್.ವಿ ವೆಂಕಟೇಶ್‌ರವರ ನಡುವೆ. ಇಲ್ಲಿ ಒಮ್ಮೆ ಗೆದ್ದವರು ಮುಂದಿನ ಚುನಾವಣೆಯಲ್ಲಿ ಗೆದ್ದ ಇತಿಹಾಸವಿಲ್ಲ. ಆದರೆ ಹಾಲಿ ಅಭ್ಯರ್ಥಿಗಳಿಬ್ಬರೂ ತಮ್ಮ ಹಿಂದಿನ ಚುನಾವಣೆಯಲ್ಲಿ ಸೋಲು ಕಂಡವರೆ ಆಗಿದ್ದು, ಜನ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಫಲಿತಾಂಶದ ದಿನವೇ ತಿಳಿಯಬಹುದಾಗಿದೆ.
ಇದನ್ನೂ ಓದಿ; ಕೆ.ಆರ್.ನಗರ ಕ್ಷೇತ್ರ ಸಮೀಕ್ಷೆ: ಅನುಕಂಪದಲ್ಲಿ `ರವಿ’ ಮೂಡುವರೇ? ಪ್ರಭಾವದಲ್ಲಿ `ಸಾರಾ’ ಗೆಲ್ಲುವರೇ?


