Homeಕರ್ನಾಟಕಕೊಳ್ಳೇಗಾಲ: ಪ್ರಚಾರ ವೇಳೆ ಹಲವೆಡೆ ಎನ್.ಮಹೇಶ್ ವಿರುದ್ಧ ಮತದಾರರ ಧಿಕ್ಕಾರ

ಕೊಳ್ಳೇಗಾಲ: ಪ್ರಚಾರ ವೇಳೆ ಹಲವೆಡೆ ಎನ್.ಮಹೇಶ್ ವಿರುದ್ಧ ಮತದಾರರ ಧಿಕ್ಕಾರ

- Advertisement -
- Advertisement -

ಕೊಳ್ಳೇಗಾಲ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಎನ್.ಮಹೇಶ್ ಅವರಿಗೆ ಅನೇಕ ಕಡೆಯಲ್ಲಿ ಪ್ರತಿಭಟನೆಯ ಬಿಸಿ ತಟ್ಟುತ್ತಿದೆ. ಕ್ಷೇತ್ರದ ಮತದಾರರು ಘೇರಾವ್ ಹಾಕುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ.

ಬಹುಜನ ಚಳವಳಿಯ ಮೂಲಕ ಮುಂಚೂಣಿಗೆ ಬಂದು ಬಿಎಸ್ಪಿ ರಾಜ್ಯಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದ ಮಹೇಶ್ ಅವರು ಸತತ ಸೋಲುಗಳನ್ನು ಕಂಡಿದ್ದರು. ಈ ಅನುಕಂಪದ ಹಿನ್ನೆಲೆಯಲ್ಲಿ ಮಹೇಶ್ ಅವರನ್ನು 2018ರ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಮತದಾರರು ಬೆಂಬಲಿಸಿದ್ದರು.

ಬಿಎಸ್ಪಿಯಿಂದ ಆಯ್ಕೆಯಾದ ಏಕೈಕ ಶಾಸಕರೂ ಅವರಾಗಿದ್ದರು. ಚುನಾವಣೆ ಮುಂಚಿತವಾಗಿ ಜೆಡಿಎಸ್- ಬಿಎಸ್ಪಿ ಹೊಂದಾಣಿಕೆ ಮಾಡಿಕೊಂಡಿದ್ದರ ಫಲವಾಗಿ, ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎನ್.ಮಹೇಶ್ ಅವರು ಪ್ರಾಥಮಿಕ ಶಿಕ್ಷಣ ಸಚಿವರೂ ಆಗಿದ್ದರು. ಆದರೆ ಮೈತ್ರಿ ಮುರಿದುಬಿದ್ದ ಬಳಿಕ ಎನ್.ಮಹೇಶ್ ಬಿಜೆಪಿ ಪಾಳೆಯದಲ್ಲಿ ಗುರುತಿಸಿಕೊಂಡರು.

ಆಪರೇಷನ್ ಕಮಲ ನಡೆದು ಬಿಜೆಪಿ ಸರ್ಕಾರ ರಚನೆಯಾಗುವ ವೇಳೆ ಕೇಸರಿ ಪಡೆಯ ಜೊತೆಯಲ್ಲಿ ನಿಂತರು. ಇದು ಬಿಎಸ್ಪಿ ರಾಷ್ಟ್ರಾಧ್ಯಕ್ಷೆ ಮಾಯಾವತಿಯವರ ಕಣ್ಣು ಕೆಂಪಾಗಲು ಕಾರಣವಾಗಿತ್ತು. ಬಿಎಸ್ಪಿಯಿಂದ ಉಚ್ಚಾಟನೆಗೆ ಒಳಗಾದರು. ಆದರೆ ಬಿಎಸ್ಪಿಯ ಏಕೈಕ ಶಾಸಕರು ಅವರಾಗಿದ್ದರಿಂದ ಪಕ್ಷಾಂತರ ನಿಷೇಧದ ನಿಯಮಗಳು ಅನ್ವಯವಾಗದೆ ಬಚಾವಾಗಿ ಕ್ಷೇತ್ರದ ಶಾಸಕರಾಗಿ ಮುಂದುವರಿದರು. ಬಳಿಕ ಅಧಿಕೃತವಾಗಿ ಬಿಜೆಪಿ ಸೇರಿಕೊಂಡು ಹಿಂದುತ್ವ ಸಿದ್ಧಾಂತದ ಸಖರಾದರು.

ಹಿಂದುತ್ವ ಸಿದ್ಧಾಂತದ ಪ್ರವರ್ತಕ ವಿ.ಡಿ.ಸಾವರ್ಕರ್ ಜಪವನ್ನು ಎನ್.ಮಹೇಶ್ ಅವರು ಆರಂಭಿಸಿದ್ದು, ದಲಿತ ಮತ್ತು ಇತರ ಹಿಂದುಳಿದ ವರ್ಗಗಳಲ್ಲಿ ಆಕ್ರೋಶ ವ್ಯಕ್ತವಾಗಲು ಕಾರಣವಾಯಿತು. ಈ ಚುನಾವಣೆಯಲ್ಲಿ ಎನ್.ಮಹೇಶ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಪ್ರಚಾರಕ್ಕೆ ಹೋದ ಬಹುತೇಕ ಕಡೆಯಲ್ಲಿ ಎನ್.ಮಹೇಶ್ ವಿರುದ್ಧ ಮತದಾರರು ಧಿಕ್ಕಾರ ಕೂಗುತ್ತಿದ್ದಾರೆ.

“ನೀವು ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಮುಖ್ಯವಾಗಿ ತತ್ವ ಸಿದ್ಧಾಂತವನ್ನು ಗಾಳಿಗೆ ತೂರಿ ಏಕಾಏಕಿ ಬಿಜೆಪಿಗೆ ಹೋದಿರಿ ಎಂಬುದು ನಮ್ಮ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ’’ ಎಂದು `ನಾನುಗೌರಿ.ಕಾಂ’ ಜೊತೆಯಲ್ಲಿ ಮಾತನಾಡಿದ ಕ್ಷೇತ್ರದ ಮತದಾರರೊಬ್ಬರು ತಿಳಿಸಿದರು.

“ದಲಿತ ಮತದಾರರು ಇರುವಲ್ಲಿ ಎನ್.ಮಹೇಶ್ ಅವರಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಅನೇಕರು ಎನ್.ಮಹೇಶ್ ಅವರಿಂದ ದೂರವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ’’ ಎಂದು ಅವರು ಮಾಹಿತಿ ನೀಡಿದರು.
ಕ್ಷೇತ್ರದ ಯಳಂದೂರು ತಾಲ್ಲೂಕಿನ ಮಸಣಪುರ ಗ್ರಾಮದಲ್ಲಿ ಉಪ್ಪಾರ ಸಮುದಾಯದ ಮುಖಂಡರು ಮಹೇಶ್ ಅವರಿಗೆ ಘೇರಾವ್ ಹಾಕಿದ್ದರು. ಈವರೆಗೆ ಗ್ರಾಮಕ್ಕೆ ನೀವು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಒಂದು ದಿನದ ನಂತರ ಗ್ರಾಮಸ್ಥರು ಘಟನೆಗೆ ವಿಷಾದ ವ್ಯಕ್ತಪಡಿಸಿರುವ ವರದಿಯೂ ಆಗಿದೆ.

“ಎನ್. ಮಹೇಶ್ ಸತತವಾಗಿ ಸೋಲುತ್ತಿದ್ದರು ಎಂದು ಜನರು ಬೆಂಬಲಿಸಿದರು. ವರ್ತಕ ಸಮುದಾಯ ಅವರ ಬೆನ್ನೆಲುಬಾಗಿ ನಿಂತಿತು. ಎನ್.ಮಹೇಶ್ ಅವರಂತೆಯೇ ನಿರಂತರವಾಗಿ ಕಾಂಗ್ರೆಸ್ಸಿನ ಎ.ಆರ್.ಕೃಷ್ಣಮೂರ್ತಿಯವರೂ ಸೋಲಿದ್ದಾರೆ. ಎನ್.ಮಹೇಶ್ ಅವರ ಮೇಲೆ ಇದ್ದ ಅನುಕಂಪ ಈಗ ಎ.ಆರ್.ಕೆ.ಯತ್ತ ತಿರುಗಿದೆ’’ ಎಂದು ಮತ್ತೊಬ್ಬ ಮತದಾರರು ಹೇಳಿದರು.

ಕ್ಷೇತ್ರದ ಇರಸವಾಡಿ ಗ್ರಾಮದಲ್ಲಿ, ಕೊಳ್ಳೇಗಾಲ ಪಟ್ಟಣದ ಒಂದು ಕಡೆ ಘೇರಾವ್ ಹಾಕಿರುವ ಘಟನೆ ನಡೆದಿದೆ. ಉಮ್ಮತ್ತೂರು ಗ್ರಾಮದಲ್ಲಿ ದೊಡ್ಡ ಮಟ್ಟದಲ್ಲಿ ವಿರೋಧವನ್ನು ಮಹೇಶ್ ಎದುರಿಸಿದ್ದಾರೆ.

ಉಮ್ಮತ್ತೂರಿಗೆ ಪ್ರಚಾರಕ್ಕೆ ಬಂದಿದ್ದ ಮಹೇಶ್ ಅವರು, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಅಥವಾ ಚಿತ್ರಕ್ಕೆ ಮಾಲಾರ್ಪಣೆ ಮಾಡದೆ, ಬಸವಣ್ಣನವರ ಪುತ್ಥಳಿಯತ್ತ ತೆರಳಿದ್ದು ಇಲ್ಲಿನ ದಲಿತರನ್ನು ಕೆರಳಿಸಿದೆ.

“ಅಂಬೇಡ್ಕರ್ ಅವರಿಗೆ ನಮಿಸದೆ, ನೀವು ಬಸವಣ್ಣನವರ ಪುತ್ಥಳಿಯತ್ತ ಹೋದಿರಿ. ನಿಮಗೆ ಲಿಂಗಾಯತ ಮತಗಳು ಬೇಕೇ, ಹೊರತು ದಲಿತರು ಬೇಡವಾಗಿದ್ದಾರೆ. ಅಂಬೇಡ್ಕರ್ ಅವರನ್ನು ಕಡೆಗಣಿಸಿದ್ದೀರಿ’’ ಎಂದು ಪ್ರತಿರೋಧ ತೋರಿದ್ದಾರೆ.

ಯಳಂದೂರು ಪಟ್ಟಣದ ಗೌತಮ್ ಬಡಾವಣೆಯಲ್ಲಿ ಪ್ರಚಾರಕ್ಕೆ ಬಂದ ವೇಳೆಯೂ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ.

ಮತ್ತೊಂದೆಡೆ ಎನ್.ಮಹೇಶ್ ಬೆಂಬಲಿಗರು ಈ ಘಟನೆಗಳನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಈ ಘೇರಾವ್ ಘಟನೆಗಳ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಇದ್ದಾರೆಂದು ಆರೋಪಿಸುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...