Homeಕರ್ನಾಟಕಕೆ.ಆರ್.ನಗರ ಕ್ಷೇತ್ರ ಸಮೀಕ್ಷೆ: ಅನುಕಂಪದಲ್ಲಿ `ರವಿ’ ಮೂಡುವರೇ? ಪ್ರಭಾವದಲ್ಲಿ `ಸಾರಾ’ ಗೆಲ್ಲುವರೇ?

ಕೆ.ಆರ್.ನಗರ ಕ್ಷೇತ್ರ ಸಮೀಕ್ಷೆ: ಅನುಕಂಪದಲ್ಲಿ `ರವಿ’ ಮೂಡುವರೇ? ಪ್ರಭಾವದಲ್ಲಿ `ಸಾರಾ’ ಗೆಲ್ಲುವರೇ?

- Advertisement -
- Advertisement -

‘ಭತ್ತದ ಕಣಜ’ ಎಂದೇ ಪ್ರಸಿದ್ಧವಾದ ಕೆ.ಆರ್.ನಗರ, ಕಾವೇರಿ ನದಿಯ ಫಲವನ್ನುಂಡ ಮೈಸೂರು ಜಿಲ್ಲೆಯ ಪ್ರಮುಖ ತಾಲ್ಲೂಕುಗಳಲ್ಲಿ ಒಂದು. ಮಂಡ್ಯ ಲೋಕಸಭಾ ವ್ಯಾಪ್ತಿಗೆ ಒಳಪಟ್ಟಿರುವ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರವು ಮೊದಲಿನಿಂದಲೂ ಕಾಂಗ್ರೆಸ್- ಜೆಡಿಎಸ್ ಪೈಪೋಟಿಯ ನೆಲ.

ಕ್ಷೇತ್ರದಲ್ಲಿ ಸತತವಾಗಿ ಗೆದ್ದು ಬರುತ್ತಿರುವ ಜೆಡಿಎಸ್ಸಿನ ಮಾಜಿ ಸಚಿವ, ಹಾಲಿ ಶಾಸಕ ಸಾ.ರಾ.ಮಹೇಶ್, ದೇವೇಗೌಡರ ಕುಟುಂಬಕ್ಕೆ ಅತ್ಯಾಪ್ತರು. ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರೂ ಆಗಿದ್ದ ಸಾರಾ ಅವರಿಗೆ ಕಳೆದ ಚುನಾವಣೆಯಂತೆ ಈ ಸಲವೂ ಪೈಪೋಟಿ ಎದುರಾಗಿದೆ.

2018ರ ಚುನಾವಣೆಯಲ್ಲಿ 1779 ಮತಗಳ ಅಂತರದಲ್ಲಿ ಸೋಲನ್ನು ಕಂಡಿದ್ದ ಡಿ.ರವಿಶಂಕರ್ ಅವರಿಗೆ ಈ ಸಲವೂ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಕೆಲಸ ಮಾಡಿರುವ ರವಿಶಂಕರ್, ಸಾರಾ ಮಹೇಶ್ ಅವರಿಗೆ ಪ್ರಬಲ ಪೈಪೋಟಿ ನೀಡಬಲ್ಲ ಅಭ್ಯರ್ಥಿ.

ಮಾಜಿ ಸಚಿವ, ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್ ಅವರ ಕರ್ಮಭೂಮಿ ಕೆ.ಆರ್.ನಗರ ಕ್ಷೇತ್ರವಾಗಿತ್ತು. ಒಂದು ಕಾಲಕ್ಕೆ ವಿಶ್ವನಾಥ್ ಅವರು ಇಲ್ಲಿಂದ ಗೆಲ್ಲುತ್ತಾ ಬಂದಿದ್ದರು. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಬಳಿಕ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಜೆಡಿಎಸ್ಸಿನೊಂದಿಗೆ ಸಂಪರ್ಕ ಕಳೆದುಕೊಂಡು, ಸಮ್ಮಿಶ್ರ ಸರ್ಕಾರವನ್ನು ಉಳಿಸಿದವರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಶ್ವನಾಥ್ ನಂತರ ಬಿಜೆಪಿ ಸೇರಿ, ಹುಣಸೂರು ಉಪಚುನಾವಣೆಯಲ್ಲಿ ಸೋತರು. ಒಕ್ಕಲಿಗರು ಮತ್ತು ಕುರುಬ ಸಮುದಾಯದ ಪ್ರಾಬಲ್ಯವಿರುವ ಕೆ.ಆರ್.ನಗರದಲ್ಲಿ ಈಗ ಸಾರಾ ಅವರು ಹಿಡಿತ ಸಾಧಿಸಿದ್ದಾರೆ. 2008, 2013, 2018ರ ಚುನಾವಣೆಗಳಲ್ಲಿ ಜೆ.ಡಿ.ಎಸ್.ನಿಂದ ಪುನಾರಾಯ್ಕೆಯಾಗಿ ಸಚಿವರೂ ಆಗಿ ಕೆಲಸ ಮಾಡಿದ್ದಾರೆ.

ಈವರೆಗಿನ ಚುನಾವಣೆಯನ್ನು ನೋಡುವುದಾದರೆ 1952ರಲ್ಲಿ ಪಕ್ಷೇತರ ಅಭ್ಯರ್ಥಿ ಎಸ್.ಎಚ್.ತಮ್ಮಯ್ಯ, 1957ರಲ್ಲಿ ಕಾಂಗ್ರೆಸ್ಸಿನ ಎಚ್.ಎಂ.ಚನ್ನಬಸಪ್ಪ, 1962ರಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಗೌಡಯ್ಯ, 1967ರಲ್ಲಿ ಪಕ್ಷೇತರಾಗಿ ಕಣಕ್ಕಿಳಿದಿದ್ದ ಎಂ.ಬಸವರಾಜು, 1972ರಲ್ಲಿ ಕಾಂಗ್ರೆಸ್ಸಿನ ಎಚ್.ಬಿ.ಕೆಂಚೇಗೌಡ ಗೆದ್ದಿದ್ದರು. 1978ರಲ್ಲಿ ಇಂದಿರಾ ಕಾಂಗ್ರೆಸ್ ಮೂಲಕ ಕಣಕ್ಕಿಳಿದ ಎ.ಎಚ್.ವಿಶ್ವನಾಥ್ ಜನತಾ ಪಾರ್ಟಿಯ ಎಸ್.ನಂಜಪ್ಪ  ಅವರನ್ನು ಸೋಲಿಸಿದರು. 1983ರಲ್ಲಿ ವಿಶ್ವನಾಥ್ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಜನತಾ ಪಾರ್ಟಿಯ ನಂಜಪ್ಪನವರ ಎದುರು ಸೋಲು ಕಂಡರು. 1985ರಲ್ಲಿಯೂ ಎಸ್.ನಂಜಪ್ಪ ಅವರು ಕಾಂಗ್ರೆಸ್ಸಿನ ವಿಶ್ವನಾಥ್ ಅವರಿಗೆ ಸೋಲುಣಿಸಿದರು. 1989ರಲ್ಲಿ ಎಸ್.ನಂಜಪ್ಪ ಅವರ  ಎದುರು ವಿಶ್ವನಾಥ್ ಭಾರಿ ಅಂತರದಲ್ಲಿ (35,042 ಮತಗಳು) ಜಯಭೇರಿ ಭಾರಿಸಿದರು. 1994ರಲ್ಲಿ  ಎಸ್.ನಂಜಪ್ಪ ಜನತಾ ದಳದ ಹುರಿಯಾಳಾಗಿ 1307 ಮತದಂತರದಲ್ಲಿ ವಿಶ್ವನಾಥ್ ಅವರನ್ನು ಸೋಲಿಸಿದರು. 1999ರಲ್ಲಿ ವಿಶ್ವನಾಥ್, ಜೆಡಿಎಸ್ಸಿನ ಮಂಚನಹಳ್ಳಿ ಮಹಾದೇವ್ ವಿರುದ್ಧ 32993 ಮತಗಳ ಅಂತರದಲ್ಲಿ ದಿಗ್ವಿಜಯ ಸಾಧಿಸಿದ್ದರು. ಆದರೆ ಮಹಾದೇವ್ ಅವರಿಗೆ 2004 ಚುನಾವಣೆ ಕೈಹಿಡಿಯಿತು. ವಿಶ್ವನಾಥ್ ಎದುರು 323 ಮತಗಳ ಕಡಿಮೆ ಅಂತರದಲ್ಲಿ ವಿಜಯ ಪಡೆದರು.

2004ರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸಾ.ರಾ.ಮಹೇಶ್ ಪ್ರವೇಶ ರಾಜಕಾರಣಕ್ಕೆ ಆಯಿತು. ಬಿಜೆಪಿಯಿಂದ ಸ್ಪರ್ಧಿಸಿದ ಅವರಿಗೆ ಈ ಚುನಾವಣೆಯಲ್ಲಿ ಸೋಲಿನ ಅನುಭವವಾಯಿತು. ಒಕ್ಕಲಿಗರು, ಕುರುಬರೇ ಪ್ರಬಲವಾಗಿರುವ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆಲ್ಲಲು ಸಾಧ್ಯವಿಲ್ಲವೆಂದು ಅರಿತ ಸಾರಾ ಜೆಡಿಎಸ್ ಸೇರಿಕೊಂಡರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನಂಬಿಕೆಯನ್ನು ಉಳಿಸಿಕೊಂಡರು. ಗೌಡರ ಕುಟುಂಬದ ನಂಬಿಕಸ್ಥರಾಗಿ ಬೆಳೆದರು. ಜಿ.ಟಿ.ದೇವೇಗೌಡರಷ್ಟೇ ಮೈಸೂರು ಭಾಗದಲ್ಲಿ ಹಿಡಿತವನ್ನು ಹೊಂದಿರುವ ಸಾರಾ, ಜಿಟಿಡಿಯವರಿಗೆ ಹೋಲಿಸಿದೆ ಒಂದು ಕೈ ಹೆಚ್ಚಿನದಾಗಿಯೇ ದೇವೇಗೌಡರ ಕುಟುಂಬಕ್ಕೆ ವಿಧೇಯರು.

2008ರಲ್ಲಿ ಕಾಂಗ್ರೆಸ್ಸಿನ ವಿಶ್ವನಾಥ್ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾದ ಸಾರಾ, 20548 ಮತಗಳ ಅಂತರದಲ್ಲಿ ಮೊದಲ ಸಲ ಗೆಲುವು ಕಂಡರು. ಒಮ್ಮೆ ಒಕ್ಕಲಿಗ, ಒಮ್ಮೆ ಕುರುಬ ಸಮುದಾಯದ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದ ಕ್ಷೇತ್ರದಲ್ಲಿ ಈ ಸಂಪ್ರದಾಯವನ್ನು ಮುರಿದು ಒಕ್ಕಲಿಗರ ಹಿಡಿತಕ್ಕೆ ಕ್ಷೇತ್ರವನ್ನು ಮರಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

2008ರಲ್ಲಿ ಸೋತ ಬಳಿಕ ವಿಶ್ವನಾಥ್ ಅವರು ಲೋಕಸಭಾ ಕ್ಷೇತ್ರದತ್ತ ಹೊರಳಿದರು. ಮೈಸೂರು ಕೊಡಗು ಸಂಸದರಾಗಿ 2009ರಲ್ಲಿ ಗೆದ್ದರು. 2013ರಲ್ಲಿ ದೊಡ್ಡಸ್ವಾಮೇಗೌಡರಿಗೆ ಕೆ.ಆರ್.ನಗರದಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿತು. ಆದರೆ ಸಾರಾ ಈ ಚುನಾವಣೆಯಲ್ಲಿ 15052 ಮತಗಳ ಅಂತರದಲ್ಲಿ ಮರುಆಯ್ಕೆಯಾದರು. 2018ರ ಚುನಾವಣೆ ರೋಚಕವಾಗಿತ್ತು. ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿದ ಡಿ.ರವಿಶಂಕರ್ 1779 ಮತದಂತರದಲ್ಲಿ ಸೋತಿದ್ದರಷ್ಟೇ. ಪ್ರಾಯಾಸದ ಗೆಲುವು ಪಡೆದ ಸಾರಾ ಅವರಿಗೆ ರವಿಶಂಕರ್ ಮತ್ತೆ ಎದುರಾಳಿಯಾಗಿದ್ದಾರೆ.

ಕುರುಬ ಸಮುದಾಯದ ಡಿ.ರವಿಶಂಕರ್ ಅವರು ರಾಜಕೀಯ ಹಿನ್ನೆಲೆಯ ಕುಟುಂಬದವರು. 2013ರಲ್ಲಿ ಸೋತಿದ್ದ ದೊಡ್ಡಸ್ವಾಮಿಗೌಡರ ಪುತ್ರ ರವಿಶಂಕರ್. ಜಿಪಂ ಸದಸ್ಯರಾಗಿ, ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದಾರೆ. ಜನರೊಂದಿಗೆ ಬೆರೆಯಬಲ್ಲವರೂ ಆದ ರವಿಯವರ ಕುಟುಂಬದ ಮೇಲೆ ಅನುಕಂಪವೂ ಇದೆ. ಒಮ್ಮೆ ತಂದೆ, ಮತ್ತೊಮ್ಮೆ ಮಗ ಸೋತಿದ್ದಾರೆ. ಈ ಬಾರಿಯೂ ಸೋತರೆ ದೊಡ್ಡಸ್ವಾಮಿಗೌಡರ ಕುಟುಂಬಕ್ಕೆ ಹ್ಯಾಟ್ರಿಕ್ ಸೋಲಾದಂತೆ ಆಗುತ್ತದೆ.

ಬಿಜೆಪಿ ವಿಚಾರಕ್ಕೆ ಬರುವುದಾದರೆ ಇಲ್ಲಿ ಆ ಪಕ್ಷಕ್ಕೆ ನೆಲೆ ಇಲ್ಲ. ಬಿಜೆಪಿಯ ಸಾಂಪ್ರದಾಯಿಕ ಮತದಾರರಾದ ವೀರಶೈವ, ಲಿಂಗಾಯತರು ಕ್ಷೇತ್ರದಲ್ಲಿ ಗಣನೀಯವಾಗಿ ಇಲ್ಲ. ಬಿಜೆಪಿಯಿಂದ ಒಕ್ಕಲಿಗ ಸಮುದಾಯದ ಹೊಸಹಳ್ಳಿ ವೆಂಕಟೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ತ್ರಿಕೋನ ಸ್ಪರ್ಧೆಯಂತೆ ಕಂಡುಬಂದರೂ ಬಿಜೆಪಿ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುದು ಕ್ಷೇತ್ರದ ಮತದಾರರ ಮಾತು. ಈ ಬಾರಿ ಕೆ.ಆರ್.ನಗರದ ರಣಕಣದಲ್ಲಿ ಎಂಟು ಮಂದಿ ಇದ್ದಾರೆ. ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಜೊತೆಗೆ ಬಿಎಸ್ಪಿಯ ಭರತ್ ಕುಮಾರ್, ಎಎಪಿಯ ಮುರುಗೇಶ್, ಕೆ.ಆರ್.ಎಸ್. ಪಕ್ಷದ ಪರಮೇಶ್, ಉತ್ತಮ ಪ್ರಜಾಕೀಯದ ಕೆ.ಮೋಹನ್, ಪಕ್ಷೇತರ ಅಭ್ಯರ್ಥಿ ಶಿವುಗೌಡ ಕಣದಲ್ಲಿದ್ದಾರೆ.

ಒಂದು ಅಂದಾಜಿನ ಪ್ರಕಾರ 70,000 ಒಕ್ಕಲಿಗರು, 60,000 ಕುರುಬರು, 15,000 ಮುಸ್ಲಿಮರು, 12,000 ಉಪ್ಪಾರ ಶೆಟ್ಟರು, 6000 ಲಿಂಗಾಯತ ಸಮುದಾಯದ ಮತದಾರರಿದ್ದರೆ; ಪರಿಶಿಷ್ಟ ಜಾತಿಯ 30,000, ಪರಿಶಿಷ್ಟ ಪಂಗಡದ 25,000 ಮತಗಳಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಮರು ಯಾವ ಅಭ್ಯರ್ಥಿಯನ್ನು ಕೈಹಿಡಿಯಲಿದ್ದಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ. ಸಾರಾ ಜೊತೆಯಲ್ಲಿ ಒಕ್ಕಲಿಗರು, ರವಿಶಂಕರ್ ಜೊತೆಯಲ್ಲಿ ಕುರುಬರು ನಿಂತುಕೊಳ್ಳುವುದು ಸ್ಪಷ್ಟ. `ಹಣಾ’ಹಣಿಯ ವಿಚಾರದಲ್ಲಿ ಸಾರಾ ಅವರಿಗೆ ಹೋಲಿಸಿದರೆ ರವಿಶಂಕರ್ ಪ್ರಭಾವ ಕಡಿಮೆ.

ಕಳೆದ ಆರು ತಿಂಗಳಿಂದ ಸಾರಾ ಕ್ಷೇತ್ರದಲ್ಲಿಯೇ ಬೀಡುಬಿಟ್ಟಿದ್ದಾರೆ. ಮದುವೆ, ಸಾವು, ನೋವು ಯಾವುದೇ ಸಂಭವಿಸಿದರೂ ಅಲ್ಲಿ ಸಾರಾ ಹಾಜರಿರುತ್ತಾರೆ. ಎಲ್ಲ ಜನರೊಂದಿಗೂ ಒಳ್ಳೆಯ ಸಂಪರ್ಕ ಹೊಂದಿದ್ದಾರೆ. ಜನರಿಗೆ ಸುಲಭವಾಗಿ ಸಿಗುತ್ತಾರೆ. ಕ್ಷೇತ್ರದಲ್ಲಿ  ಎಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿ ಈಗಾಗಲೇ ಪ್ರಚಾರ ನಡೆಸಿದ್ದಾರೆ. ಸಾರಾ ಅವರು ಮಾಡುತ್ತಿರುವ ಕೆಲಸಗಳು, ನಿರಂತರ ಜನಸಂಪರ್ಕ  ಅವರ ಕೈಹಿಡಿಯಲಿವೆ ಎಂದು ಊಹಿಸಲಾಗಿದೆ. ಅಲ್ಲದೆ `ಸಾಲಿಗ್ರಾಮ’ವನ್ನು ತಾಲ್ಲೂಕನ್ನಾಗಿ ಮಾಡಿದ್ದು ಸಾರಾ ಅವರ ಮೇಲೆ ಒಳ್ಳೆಯ ಅಭಿಪ್ರಾಯ ಮೂಡಲು ಕಾರಣವಾಗಿದೆ.

ಇತ್ತ ರವಿಶಂಕರ್ ಸುಮ್ಮನೆ ಕುಳಿತ್ತಿಲ್ಲ.  ಎರಡು ವರ್ಷಗಳಿಂದಲೂ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಕಾರಣ ರವಿಶಂಕರ್ ಅವರಿಗೆ ಮತ್ತೊಂದು ಅವಕಾಶವನ್ನು ಕಾಂಗ್ರೆಸ್ ನೀಡಿರುವುದು ಪಕ್ಕಾ. ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯವನ್ನು ರವಿ ಹೊಂದಿದ್ದಾರೆ. ಜನಾಶೀರ್ವಾದ ಯಾತ್ರೆಯನ್ನು ಕ್ಷೇತ್ರದ್ಯಾಂತ ನಡೆಸಿ, ಮತಯಾಚಿಸುತ್ತಿದ್ದಾರೆ. ಎರಡು ವರ್ಷಗಳಿಂದಲೂ ಕ್ಷೇತ್ರದ ಪ್ರತಿ ಮನೆಗೂ ಭೇಟಿ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಸಾರಾ ಅವರಂತೆಯೇ ಯಾವುದೇ ಸಾವು, ನೋವು, ಶುಭಸಮಾರಂಭಗಳಲ್ಲಿ ರವಿ ಪಾಲ್ಗೊಳ್ಳುತ್ತಾರೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದ ಇವರನ್ನು ಕ್ಷೇತ್ರದ ಜನತೆ ಹೇಗೆ ನೋಡುತ್ತಾರೆಂಬ ಕುತೂಹಲ ಸದ್ಯಕ್ಕೆ ಉಳಿದಿದೆ. ರವಿಯವರ ಮೇಲಿನ ಅನುಕಂಪ ಮತ್ತು ಸಾರಾ ಅವರಿಗಿರುವ ಪ್ರಭಾವದ ಮೇಲೆ ಫಲಿತಾಂಶ ತೋಯ್ದಾಡುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...