ಮಣಿಪುರದ ಚುರಾಚಂದ್‌ಪುರ ಜಿಲ್ಲೆಯ ತನ್ನ ಮನೆಗೆ ರಜೆಯ ಮೇಲೆ ತೆರಳಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಕೋಬ್ರಾ ಘಟಕದ ಕಮಾಂಡೋ ಒಬ್ಬರನ್ನು ಶುಕ್ರವಾರ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
204ನೇ ಕೋಬ್ರಾ ಬೆಟಾಲಿಯನ್‌ನ ಡೆಲ್ಟಾ ಕಂಪನಿಯ ಕಾನ್‌ಸ್ಟೆಬಲ್ ಚೋನ್‌ಖೋಲೆನ್ ಹಾಕಿಪ್ ಅವರನ್ನು ಶುಕ್ರವಾರ ಮಧ್ಯಾಹ್ನ 2 ರಿಂದ 3 ಗಂಟೆಯ ನಡುವೆ ಕೊಲ್ಲಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಂಟ್ರಲ್ ರಿಸರ್ವ್ ಪೋಲೀಸ್ ಫೋರ್ಸ್‌ನ ಕೋಬ್ರಾ ಬೆಟಾಲಿಯನ್‌ನ ಕಂಟ್ರೋಲ್ ರೂಮ್‌ಗೆ ಸಂಜೆ 5.50 ವೇಳೆಗೆ ಹಾಕಿಪ್ ಸಾವಿನ ಬಗ್ಗೆ ಅವರ ಸಹೋದರನಿಂದ ಮಾಹಿತಿ ಸಿಕ್ಕಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಹಿಂಸಾಚಾರ ತಾರಕಕ್ಕೇರಿದೆ. ಬುಧವಾರದಿಂದ ಇಲ್ಲಿಯವರಿಗೆ ಕನಿಷ್ಠ 13 ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಇಂಫಾಲ್‌ನ ಪ್ರಾದೇಶಿಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹಿರಿಯ ಅಧಿಕಾರಿ ಶುಕ್ರವಾರ ಮಧ್ಯಾಹ್ನ ‘ಸ್ಕ್ರಾಲ್’ಗೆ ತಿಳಿಸಿದ್ದಾರೆ.
ಇದನ್ನೂ ಓದಿರಿ: ದಾಖಲೆ ರಹಿತ ವಲಸಿಗರ ಪತ್ತೆಗೆ ಮನೆಮನೆ ಸರ್ವೇ: ಮಣಿಪುರ ಸರ್ಕಾರ
ಮಣಿಪುರದ 16 ಜಿಲ್ಲೆಗಳ ಪೈಕಿ ಒಂಬತ್ತು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಸುಮಾರು 20,000 ಜನರು ನಿರಾಶ್ರಿತರಾಗಿದ್ದಾರೆ ಮತ್ತು ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸಬೇಕೆಂಬ ಬಹುಸಂಖ್ಯಾತ ಮೈತೇಯಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಮಣಿಪುರದ ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟವು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ ನಂತರ ಬುಧವಾರ ಹಿಂಸಾಚಾರ ಭುಗಿಲೆದ್ದಿತು.
ಕಳೆದ ತಿಂಗಳು ವಿಚಾರಣೆಯನ್ನು ನಡೆಸಿದ ಮಣಿಪುರ ಉಚ್ಚ ನ್ಯಾಯಾಲಯವು, ಮೈತೇಯಿ ಸಮುದಾಯದ ಬೇಡಿಕೆಯ ಅರ್ಜಿಗಳನ್ನು ಪರಿಗಣಿಸಲು ಮತ್ತು ಅದನ್ನು “ತ್ವರಿತವಾಗಿ” ವಿಲೇವಾರಿ ಮಾಡಲು ಬಿಜೆಪಿ ಸರ್ಕಾರಕ್ಕೆ ಸೂಚಿಸಿತ್ತು.
ಹಾಕಿಪ್‌ನ ಹತ್ಯೆಯ ಹಿನ್ನೆಲೆಯಲ್ಲಿ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಶುಕ್ರವಾರ ಮಣಿಪುರದ ತನ್ನ ಎಲ್ಲಾ ಸಿಬ್ಬಂದಿಗೆ ಸಂದೇಶವನ್ನು ರವಾನಿಸಿದೆ. ರಜೆಯಲ್ಲಿ ಇರುವ ಎಲ್ಲಾ ಸಿಬ್ಬಂದಿ ತಮ್ಮ ಕುಟುಂಬ ಸದಸ್ಯರೊಂದಿಗೆ ಹತ್ತಿರದ ಭದ್ರತಾ ನೆಲೆಗೆ ಬಂದು ತಕ್ಷಣ ವರದಿ ಮಾಡಬೇಕೆಂದು ಸೂಚಿಸಲಾಗಿದೆ. ಅಂತಹ ಸಿಬ್ಬಂದಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಸಿಆರ್‌ಪಿಎಫ್‌ನ ನಾಗಾಲ್ಯಾಂಡ್ ಸೆಕ್ಟರ್ ಆಫೀಸ್‌ಗೆ ತಿಳಿಸಲಾಗಿದೆ.
ಶುಕ್ರವಾರ ಮುಂಜಾನೆ, ಉಗ್ರಗಾಮಿ ಗುಂಪುಗಳು ಮತ್ತು ಭದ್ರತಾ ಪಡೆಗಳ ನಡುವೆ ಮಧ್ಯಂತರ ಗುಂಡಿನ ಚಕಮಕಿಗಳು ನಡೆದಿವೆ. ಚುರಾಚಂದ್‌ಪುರ ಜಿಲ್ಲೆಯ ಕಾಂಗ್‌ವೈ, ಪಕ್ಕದ ಬಿಷ್ಣುಪುರ ಜಿಲ್ಲೆಯ ಫೌಗಕ್‌ಚಾವೊದ ಪಶ್ಚಿಮ ಗುಡ್ಡಗಾಡು, ಇಂಫಾಲ್ ಪೂರ್ವ ಜಿಲ್ಲೆಯ ದೋಲೈತಾಬಿ ಮತ್ತು ಪುಖಾವೊದಲ್ಲಿ ಗುಂಡಿನ ಘರ್ಷಣೆಗಳು ವರದಿಯಾಗಿವೆ.
ಇದನ್ನೂ ಓದಿರಿ: ಮಣಿಪುರ ಹಿಂಸಾಚಾರ: ರೈಲು ಸಂಚಾರ, ಇಂಟರ್ನೆಟ್ ಸ್ಥಗಿತ
ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ 6,000 ಕ್ಕೂ ಹೆಚ್ಚು ಸೈನಿಕರನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ. ರಾಜ್ಯದ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಕೇಂದ್ರದ ಕ್ಷಿಪ್ರ ಕಾರ್ಯಪಡೆಯ ತಂಡಗಳು ಧಾವಿಸಿವೆ.
ಮಣಿಪುರದ ಜನಸಂಖ್ಯೆಯ 60% ರಷ್ಟಿರುವ ಮೈತೇಯಿ ಸಮುದಾಯದ ಸದಸ್ಯರು ಹೆಚ್ಚಾಗಿ ಇಂಫಾಲ್ ಕಣಿವೆಯಲ್ಲಿ ಇದ್ದಾರೆ. ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಿ ಪ್ರಜೆಗಳಿಂದ ದೊಡ್ಡ ಪ್ರಮಾಣದ ಅಕ್ರಮ ವಲಸೆಯಿಂದಾಗಿ ತೊಂದರೆಗಳನ್ನು ಎದುರಿಸುತ್ತಿರುವುದಾಗಿ ಸಮುದಾಯವು ಹೇಳಿಕೊಂಡಿದೆ. ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ನೆಲೆಸಲು ವಲಸಿಗರಿಗೆ ಅವಕಾಶವಿಲ್ಲ.
ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ನೀಡಿದರೆ ಮೈತೇಯಿ ತಮ್ಮ ಭೂ ಸಂಪನ್ಮೂಲಗಳನ್ನು ಸ್ವಾಧೀನ ಮಾಡಿಕೊಳ್ಳಬಹುದು ಎಂದು ಕುಕಿ ಸಮುದಾಯ ಆತಂಕಗೊಂಡಿದೆ.


