Homeಕರ್ನಾಟಕಗುಂಡ್ಲುಪೇಟೆ ಕ್ಷೇತ್ರ ಸಮೀಕ್ಷೆ; ಬಂಡಾಯದ ಬಿಸಿಯಲ್ಲಿ ನಿರಂಜನ್, ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಗಣೇಶ್ ಪ್ರಸಾದ್

ಗುಂಡ್ಲುಪೇಟೆ ಕ್ಷೇತ್ರ ಸಮೀಕ್ಷೆ; ಬಂಡಾಯದ ಬಿಸಿಯಲ್ಲಿ ನಿರಂಜನ್, ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಗಣೇಶ್ ಪ್ರಸಾದ್

- Advertisement -
- Advertisement -

ಚಾಮರಾಜನಗರ ಜಿಲ್ಲೆಯ ರಾಜಕಾರಣದಲ್ಲಿ ಮತ್ತು ಜಿಲ್ಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಸಕ್ತ ರಾಜಕಾರಣಿಗಳ ಪೈಕಿ ಮೂವರನ್ನು ಹೆಸರಿಸದೆ ಇರಲಾಗದು. ಈಗ ಬಿಜೆಪಿಯಲ್ಲಿರುವ ವಿ.ಶ್ರೀನಿವಾಸ ಪ್ರಸಾದ್, ಕಾಂಗ್ರೆಸ್ಸಿನ ನಾಯಕರಾದ ಎಚ್.ಎಸ್.ಮಹದೇವ ಪ್ರಸಾದ್ ಮತ್ತು ಆರ್.ಧ್ರುವನಾರಾಯಣ- ಈ ಮೂವರು ಚಾ.ನಗರ ಜಿಲ್ಲೆಯ ಪ್ರಸ್ತುತ ರಾಜಕಾರಣ ಪ್ರಮುಖ ಮುಖಗಳು. ಕಾಂಗ್ರೆಸ್ ವಿಚಾರದಲ್ಲಂತೂ ಮಹದೇವ್ ಪ್ರಸಾದ್ ಮತ್ತು ಧ್ರುವನಾರಾಯಣ ಅವರ ಕೆಲಸ ಅವಿಸ್ಮರಣೀಯ. ಆದರೆ ಈ ಇಬ್ಬರೂ ಈಗ ನಿಧನರಾಗಿದ್ದಾರೆ. ಶ್ರೀನಿವಾಸ ಪ್ರಸಾದ್ ಅವರು ವಯಸ್ಸಿನ ಕಾರಣಕ್ಕೆ ಮೆತ್ತಗಾಗುತ್ತಿದ್ದರೂ ಚುನಾವಣೆ ಕಣದಲ್ಲಿ ಒಂದಿಷ್ಟು ಪ್ರಚಾರ ನಡೆಸುತ್ತಿದ್ದಾರೆ. ಆದರೆ ಧ್ರುವ ಮತ್ತು ಮಹದೇವ ಪ್ರಸಾದ್ ಅವರ ಅನುಪಸ್ಥಿತಿಯಂತೂ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರು ಮಹದೇವ ಪ್ರಸಾದ್. ಐದು ಬಾರಿ ಶಾಸಕರಾಗಿದ್ದ ಮಹದೇವ ಪ್ರಸಾದ್‌ ಅವರು ವಿಧಾನಸಭಾ ಸದಸ್ಯರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕ್ಷೇತ್ರ ಹಾಗೂ ಜಿಲ್ಲೆಗೆ ಮಾಡಿರುವ ಕೆಲಸಗಳನ್ನು ಇಲ್ಲಿನ ಜನ ಈಗ ಸ್ಮರಿಸುತ್ತಾರೆ. ಆದರೆ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಅವರ ಹಠಾತ್ ನಿಧನದ ಬಳಿಕ ಅನೇಕ ಪಲ್ಲಟಗಳು ಕ್ಷೇತ್ರದಲ್ಲಾದವು.

2017ರಲ್ಲಿ ನಡೆದ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಮಹದೇವ್ ಪ್ರಸಾದ್ ಅವರ ಪತ್ನಿ ಗೀತಾ ಮಹದೇವ ಪ್ರಸಾದ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಅನುಕಂಪದ ಅಲೆಯ ಕಾರಣ ಗೀತಾ ಅವರು ಗೆದ್ದರು. ಆದರೆ ಮಹದೇವ ಪ್ರಸಾದ್ ಕುಟುಂಬದೆದುರು ಮೂರು ಬಾರಿ ಸೋಲು ಕಂಡಿದ್ದ ಬಿಜೆಪಿಯ ಸಿ.ಎಸ್.ನಿರಂಜನಕುಮಾರ್ ಅವರಿಗೆ 2018ರ ವಿಧಾನಸಭಾ ಚುನಾವಣೆ ಕೈ ಹಿಡಿಯಿತು. ಕಾಂಗ್ರೆಸ್ಸಿನ ಮತಗಳು ಹಲವು ಕಾರಣಗಳಿಗೆ ಚದುರಿ ಹೋಗಿ ನಿರಂಜನ್ ಮೊದಲ ಬಾರಿಗೆ ಗೆಲುವಿನ ನಗೆಬೀರಿದರು.

ಇದನ್ನೂ ಓದಿರಿ: ಪಿರಿಯಾಪಟ್ಟಣ ಕ್ಷೇತ್ರ ಸಮೀಕ್ಷೆ: ಗುರು-ಶಿಷ್ಯರ ಕಾಳಗದಲ್ಲಿ ಗುದ್ದುಗೆ ಯಾರಿಗೆ?

ಈವರೆಗಿನ ಚುನಾವಣೆಯನ್ನು ಸಂಕ್ಷಿಪ್ತವಾಗಿ ನೋಡುವುದಾದರೆ 1957, 1962ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮತ್ತು 1967, 1972ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎಸ್.ನಾಗರತ್ನಮ್ಮ ಸತತ ನಾಲ್ಕು ಸಲ ಗೆದ್ದಿದ್ದರು. ಆದರೆ 1978ರಲ್ಲಿ ಪಕ್ಷೇತರ ಅಭ್ಯರ್ಥಿ ಎಚ್.ಕೆ.ಶಿವರುದ್ರಪ್ಪ ಅವರು, ಪಕ್ಷೇತರರಾಗಿ ಮತ್ತೆ ಸ್ಪರ್ಧಿಸಿದ್ದ ನಾಗರತ್ನಮ್ಮನವರನ್ನು ಸೋಲಿಸಿದ್ದರು. ಆದರೆ 1985, 1989, 1994ರಲ್ಲಿ ಕಾಂಗ್ರೆಸ್‌ನಿಂದ ಮೂರು ಸಲ ರತ್ನಮ್ಮ ಸತತವಾಗಿ ಮರು ಆಯ್ಕೆಯಾದರು. ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್‌ ಆಗಿದ್ದ ಹೆಗ್ಗಳಿಕೆ ಮಾಜಿ ಸಚಿವೆ ನಾಗರತ್ನಮ್ಮ ಅವರಿಗೆ ಸಲ್ಲುತ್ತದೆ.

1985, 1989ರಲ್ಲಿ ನಾಗರತ್ನಮ್ಮನವರಿಗೆ ಜನತಾ ಪರಿವಾರದ ಮಹದೇವ ಪ್ರಸಾದ್ ಪ್ರತಿಸ್ಪರ್ಧಿಯಾಗಿದ್ದರು. ರತ್ನಮ್ಮನವರಿಗೆ ಪೈಪೋಟಿ ನೀಡಿದ್ದ ಮಹದೇವ ಪ್ರಸಾದ್ 1994ರ ಚುನಾವಣೆಯಲ್ಲಿ ಮೊದಲ ಸಲ ವಿಧಾನಸಭೆ ಪ್ರವೇಶಿಸಿದರು. 1994ರಲ್ಲಿ ಜನತಾ ದಳದಿಂದ, 1999ರಲ್ಲಿ ಜೆಡಿಯುನಿಂದ, 2004ರಲ್ಲಿ ಜೆಡಿಎಸ್‌ನಿಂದ ಸತತವಾಗಿ ಆಯ್ಕೆಯಾಗಿ ಬಂದ ಎಚ್.ಎಸ್.ಎಂ., ರಾಜಕೀಯ ಪಲ್ಲಟಗಳ ನಡುವೆ, ಸಿದ್ದರಾಮಯ್ಯನವರನ್ನು ಹಿಂಬಾಲಿಸಿ 2008ರಲ್ಲಿ ಕಾಂಗ್ರೆಸ್ ಸೇರಿಕೊಂಡರು. 2008, 2013ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಆಯ್ಕೆಯಾದರು. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಚಿವರು ಆಗಿದ್ದ ಅವರು ಹಠಾತ್ ನಿರ್ಗಮಿಸಿದ್ದರಿಂದ 2017ರಲ್ಲಿ ಉಪಚುನಾವಣೆ ಎದುರಾಯಿತು. ಎಂ‌.ಸಿ.ಮೋಹನ್ ಕುಮಾರಿ (ಗೀತಾ ಮಹದೇವಪ್ರಸಾದ್) ಅವರಿಗೆ ಟಿಕೆಟ್ ನೀಡಿದ್ದ ಕಾಂಗ್ರೆಸ್ 12,077 ಮತಗಳ ಮತಗಳ ಅಂತರದಲ್ಲಿ ಗೆದ್ದಿತು. ಅಂದಹಾಗೆ 2008ರಿಂದ ಮಹದೇವ ಪ್ರಸಾದ್ ಅವರಿಗೆ ಪೈಪೋಟಿ ನೀಡುತ್ತಾ ಬಂದವರು ಸಿ.ಎಸ್.ನಿರಂಜನಕುಮಾರ್.

ಮೂಲತಃ ಕಾಂಗ್ರೆಸ್ಸಿನಲ್ಲಿದ್ದವರು ನಿರಂಜನ್. 2006ರಲ್ಲಿ ಕಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಅವರ ತಂದೆ ಶಿವಮಲ್ಲಪ್ಪ ಕಂಟ್ರಾಕ್ಟರ್‌ ಆಗಿದ್ದರು. ಕಬ್ಬಳ್ಳಿ ಭಾಗದಲ್ಲಿ ಒಂದಿಷ್ಟು ಕೆಲಸಗಳನ್ನು ಮಾಡಿಸಿದ್ದರು. ಇದು ನಿರಂಜನ್ ಅವರು ಜಿಪಂ ಪ್ರವೇಶಿಸಲು ಸುಲಭವಾಗಿಸಿತು. 2008ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿ ಸೇರಿಕೊಂಡರು. 2,203 ಮತಗಳ ಅಂತರದಲ್ಲಿ 2008ರ ವಿಧಾನಸಭಾ ಚುನಾವಣೆಯಲ್ಲಿ ಸೋತರು. 2013ರಲ್ಲಿ ಬಿಜೆಪಿ ಒಡೆದು ಹೋಗಿ ಕೆಜೆಪಿ ಹುಟ್ಟಿಕೊಂಡಿತ್ತು. ಕೆಜೆಪಿಯಿಂದ ಸ್ಪರ್ಧಿಸಿದ್ದ ನಿರಂಜನ್ 7,675 ಮತಗಳಿಂದ ಸೋತರು. ಮೊದಲೇ ಹೇಳಿದಂತೆ ಉಪಚುನಾವಣೆಯಲ್ಲಿ ಮತದಾರರು ಇವರನ್ನು ಕೈ ಹಿಡಿಯಲಿಲ್ಲ. 2018ರ ಚುನಾವಣೆಯ ವೇಳೆಗೆ ಹಲವು ಸಮುದಾಯಗಳು ಇವರ ಬೆನ್ನೆಲುಬಾಗಿ ನಿಂತವು. ಸತತ ಸೋಲಿನ ಅನುಕಂಪದಲ್ಲಿ ನಿರಂಜನ ಅವರು ಗೀತಾ ಮಹದೇವ ಪ್ರಸಾದ್ ವಿರುದ್ಧ 16,684 ಮತದಂತದಲ್ಲಿ ಗೆಲುವಿನ ನಗೆ ಬೀರಿದರು.

ಗೀತಾ ಸೋಲು ಮತ್ತು ಗಣೇಶ್ ಪ್ರಸಾದ್ ಎಂಟ್ರಿ

2018ರ ಚುನಾವಣೆಯಲ್ಲಿ ನಿರಂಜನ್ ಅವರನ್ನು ಅನುಕಂಪ ಕೈ ಹಿಡಿಯುವುದರ ಜೊತೆಗೆ ಇತರ ಕಾರಣಗಳು ಗೀತಾ ಅವರ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದವು. ರೈತ ಸಂಘಟನೆಗಳು, ಕನ್ನಡಪರ ಮತ್ತು ದಲಿತ ಸಂಘಟನೆಯ ಒಂದಿಷ್ಟು ಮಂದಿ ಸೋಲಿನ ಅನುಕಂಪದ ಹಿನ್ನೆಲೆಯಲ್ಲಿ ನಿರಂಜನ್ ಅವರನ್ನು ಬೆಂಬಲಿಸಿದ್ದವು ಎನ್ನಲಾಗುತ್ತದೆ. ದಲಿತ ನಾಯಕ ಶ್ರೀನಿವಾಸ ಪ್ರಸಾದ್ ಅವರನ್ನು ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿತು ಎಂಬ ಸಿಟ್ಟು ದಲಿತರಲ್ಲೂ ಇತ್ತು. ಮತ್ತೊಮ್ಮೆ ಗೀತಾ ಅವರು ಗೆದ್ದರೆ ಪುಟ್ಟರಂಗಶೆಟ್ಟರಿಗೆ ಸಚಿವ ಸ್ಥಾನ ತಪ್ಪುತ್ತದೆ ಎಂಬ ಭಯದಲ್ಲಿ ಉಪ್ಪಾರ‌ ಸಮುದಾಯದ ಮತಗಳು ಬಿಜೆಪಿಗೆ ಹೋದವು ಎಂದು ಕ್ಷೇತ್ರದ ನಾಡಿಮಿಡಿತ ಬಲ್ಲವರು ಹೇಳುತ್ತಾರೆ.

ನಿರಂಜನ್ ಅವರೇನೋ ಗೆದ್ದರು. ಆದರೆ ಆನಂತರದಲ್ಲಿ ಕ್ಷೇತ್ರದಲ್ಲಿ ಸವಾಲುಗಳನ್ನು ಪಕ್ಷದೊಳಗೆಯೇ ಎದುರಿಸುವಂತಾಗಿದೆ. ಮಹದೇವ್ ಪ್ರಸಾದ್ ಮತ್ತು ಗೀತಾ ಅವರ ಅಧಿಕಾರವಧಿಯಲ್ಲಿ ಮಂಜೂರಾಗಿದ್ದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿರಲಿಲ್ಲ. ಈ ನಿಟ್ಟಿನಲ್ಲಿ ನಿರಂಜನ್ ಒಂದಿಷ್ಟು ಕೆಲಸ ಮಾಡಿದ್ದಾರೆ. ಸಿಸಿ ರಸ್ತೆ ಕಾಮಗಾರಿ, ಸಮುದಾಯ ಭವನಗಳ ನಿರ್ಮಾಣದಂತಹ ಕಾರ್ಯಗಳನ್ನು ನೆರವೇರಿಸಿದ್ದಾರೆ. ಆದರೆ ಶಾಶ್ವತವಾಗಿ ಉಳಿಯುವ ಕೆಲಸಗಳಿಗೆ ನಿರಂಜನ್ ಕೈ ಹಾಕಿದ್ದು ಕಡಿಮೆ. ಅದರ ಜೊತೆಗೆ ಭ್ರಷ್ಟಾಚಾರ ಕಲೆಯೂ ಅವರ ಕೈಗೆ ಮೆತ್ತಿಕೊಂಡಿದೆ. ಮತ್ತೊಂದೆಡೆ ನಿರಂಜನ್ ಸುತ್ತಲಿನ ಕೆಲ ಮಂದಿ ಪಕ್ಷದೊಳಗೆ ಭಿನ್ನಮತ ಸ್ಫೋಟಿಸಲು ಕಾರಣವಾಗಿದ್ದಾರೆ.

ಚಾಮುಲ್‌ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿಯೊಳಗಿನ ಬೇಗುದಿ ಹೊರಬಿದ್ದಿತ್ತು. ಮೈಸೂರು–ಚಾಮರಾನಗರ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಂ.ಪಿ.ಸುನಿಲ್‌ ಅವರು ಪಕ್ಷದ ಬೆಂಬಲಿತರಾಗಿ ಚಾಮುಲ್‌ ನಿರ್ದೇಶಕ ಸ್ಥಾನಕ್ಕೆ ಅಭ್ಯರ್ಥಿಯಾಗಲು ಬಯಸಿದ್ದರು. ಇದಕ್ಕೆ ನಿರಂಜನಕುಮಾರ್‌ ಸಮ್ಮತಿ ಇರಲಿಲ್ಲ. ತನಗೆ ಟಿಕೆಟ್‌ ಸಿಗಲಿಲ್ಲ ಎಂದು ಸ್ವತಂತ್ರವಾಗಿ ಸ್ಪರ್ಧಿಸಿ ಸುನಿಲ್‌ ಗೆದ್ದು ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು. ಸುನಿಲ್ ಮತ್ತು ನಿರಂಜನ್ ಬಣಗಳ ನಡುವಿನ ಗುದ್ದಾಟ ಟಿಕೆಟ್ ಹಂಚಿಕೆಯ ವೇಳೆಗೆ ಮತ್ತೆ ಮುನ್ನೆಲೆಗೆ ಬಂದಿತು. ಸುನಿಲ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಮತ್ತೆ ನಿರಂಜನ್‌ಗೆ ಮಣೆ ಹಾಕಿದ್ದರಿಂದ ಪಕ್ಷೇತರವಾಗಿ ಕಣಕ್ಕೆ ಧುಮುಕಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿರುವ ಕಡಬೂರು ಮಂಜುನಾಥ್‌ ಅವರೂ ಬಿಜೆಪಿಯಲ್ಲಿದ್ದವರು. ನಿರಂಜನ ಗೆಲುವಿಗೆ 2018ರಲ್ಲಿ ಶ್ರಮಿಸಿದ್ದರು. ಆದರೆ ನಿರಂಜನ್ ಜೊತೆಯಲ್ಲಿ ಇವರ ಸಂಬಂಧವೂ ಹಳಸಿದೆ.

ಚಾಮರಾನಗರ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಂ.ಪಿ.ಸುನಿಲ್‌

ಮಂಜುನಾಥ್ ಜೆಡಿಎಸ್ ಅಭ್ಯರ್ಥಿಯಾಗಿ, ಸುನಿಲ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ನಿರಂಜನ್ ಅವರಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ. ತಾವು ಗೆಲ್ಲುವುದಕ್ಕಿಂತ ನಿರಂಜನ್ ಅವರನ್ನು ಸೋಲಿಸಬೇಕೆಂಬ ಹಠಕ್ಕೆ ಈ ಇಬ್ಬರೂ ಬಿದ್ದಂತಿದೆ. ಕೆಲವರಿಗೆ ಮಾತ್ರ ಮಣೆ ಹಾಕಿ, ಇನ್ನುಳಿದವರ ಕೈ ಮೇಲಾಗದಂತೆ ನಿರಂಜನ್ ವರ್ತಿಸಿದರು ಎಂಬುದು ಇವರ ಸಿಟ್ಟಿನ ಮೂಲ. ಬಿಜೆಪಿಯ ಎಷ್ಟು ಮತಗಳನ್ನು ಈ ಇಬ್ಬರು ಕೀಳುತ್ತಾರೆಂಬುದು ಫಲಿತಾಂಶವನ್ನು ನಿರ್ಧರಿಸುತ್ತದೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ.

ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿರುವ ಎಚ್‌.ಎಂ.ಗಣೇಶಪ್ರಸಾದ್‌ ಅವರು ಮಹದೇವ್ ಪ್ರಸಾದ್- ಮೋಹನ್ ಕುಮಾರಿಯವರ ಪುತ್ರ. ತಾಯಿಯ ಸೋಲಿನ ನಂತರ ಕ್ಷೇತ್ರದಲ್ಲಿ ಪಕ್ಷವನ್ನು ಮತ್ತೆ ಬಲಪಡಿಸುವ ಕೆಲಸವನ್ನು ಗಣೇಶ್ ಮಾಡಿದ್ದಾರೆ. ಹೀಗಾಗಿಯೇ ಅನಾಯಾಸವಾಗಿ ಅವರಿಗೆ ಟಿಕೆಟ್ ದಕ್ಕಿದೆ. ದಾನ- ಧರ್ಮದಲ್ಲಿ ಗಣೇಶ್ ಎತ್ತಿದ ಕೈ. ದುಡ್ಡಿಗೆ ಆಸೆ ಬೀಳುವವರಲ್ಲ ಎಂಬ ಇಮೇಜ್‌ ಇವರಿಗಿದೆ. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳಿಗೆ ನೆರವು ನೀಡಿದ ಕೀರ್ತಿ ಗಣೇಶ್‌ಗೆ ಸಲ್ಲುತ್ತದೆ‌. ಯಾರಾದರೂ ಕಷ್ಟವೆಂದು ಹೋದರೆ ಕೈಲಾದಷ್ಟು ಹಣವನ್ನು ಕೈಗಿಡುವ ಮೂಲಕ ಜನಮನ್ನಣೆ ಗಳಿಸುತ್ತಿದ್ದಾರೆ.‌ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಉದಾರವಾಗಿ ಕೊಡುಗೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಚುನಾವಣಾ ಕಣದಲ್ಲಿರುವ ಅವರು ಕಳೆದ ಐದು ವರ್ಷಗಳಿಂದ ಅಖಾಡದಲ್ಲಿ ತಾಲೀಮು ನಡೆಸಿದ್ದಾರೆ. ಬಿಜೆಪಿಯೊಳಗಿನ ಒಡಕು ಮತ್ತು ಕಾಂಗ್ರೆಸ್ಸಿನತ್ತ ಸಾಂಪ್ರದಾಯಿಕ ಮತಗಳು ಮತ್ತೆ ಮರಳುತ್ತಿರುವ ಸೂಚನೆಗಳು ದೊರಕುತ್ತಿರುವುದರಿಂದ ಕ್ಷೇತ್ರದಲ್ಲಿ ಗಣೇಶ್ ‘ಕೈ’ ಒಂದಿಷ್ಟು ಮೇಲಾದಂತೆ ಕಾಣುತ್ತಿದೆ.

ಅಂದಹಾಗೆ ಈಗ ಕಣದಲ್ಲಿರುವ ಈ ನಾಲ್ವರು ಪ್ರಬಲ ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಕ್ಷೇತ್ರವನ್ನು ಆಳಿರುವ ಬಹುತೇಕರು ಲಿಂಗಾಯತರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡರಲ್ಲೂ ಲಿಂಗಾಯತರು ಇಲ್ಲಿ ಗುರುತಿಸಿಕೊಂಡಿದ್ದಾರೆ. 70,000 ಲಿಂಗಾಯತರು, 20,000 ಉಪ್ಪಾರರು, 15,000 ನಾಯಕರು, 20,000 ಕುರುಬರು, ಪರಿಶಿಷ್ಟ ಜಾತಿಗಳ 40,000 ಮತದಾರರಿದ್ದಾರೆಂದು ಅಂದಾಜಿಸಲಾಗಿದೆ. ಲಿಂಗಾಯತ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಗಣೇಶ್‌ ಅವರತ್ತ ಹರಿದುಬಂದರೆ ಅವರ ಗೆಲುವು ಸುಲಭವಾಗುತ್ತದೆ. ಅಂತಿಮವಾಗಿ ಕೊನೆಯ ಮೂರು ದಿನಗಳಲ್ಲಿ ಹಣಾಹಣಿಯೂ ಜೋರಾಗುತ್ತದೆ. ಹಾಗಾದಾಗ ಗಣೇಶ್- ನಿರಂಜನ್ ನಡುವೆ ಕತ್ತುಕತ್ತಿನ ಕಾಳಗ ಏರ್ಪಡುತ್ತದೆ.

ಇದನ್ನೂ ಓದಿರಿ: ಹನೂರು ಕ್ಷೇತ್ರ ಸಮೀಕ್ಷೆ: ಕುಟುಂಬ ಪ್ರತಿಷ್ಠೆಯ ಕಣದಲ್ಲಿ ಜೆಡಿಎಸ್ ಅಭ್ಯರ್ಥಿ ಸವಾಲಾಗಬಲ್ಲರೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...