Homeಕರ್ನಾಟಕಹನೂರು ಕ್ಷೇತ್ರ ಸಮೀಕ್ಷೆ: ಕುಟುಂಬ ಪ್ರತಿಷ್ಠೆಯ ಕಣದಲ್ಲಿ ಜೆಡಿಎಸ್ ಅಭ್ಯರ್ಥಿ ಸವಾಲಾಗಬಲ್ಲರೆ?

ಹನೂರು ಕ್ಷೇತ್ರ ಸಮೀಕ್ಷೆ: ಕುಟುಂಬ ಪ್ರತಿಷ್ಠೆಯ ಕಣದಲ್ಲಿ ಜೆಡಿಎಸ್ ಅಭ್ಯರ್ಥಿ ಸವಾಲಾಗಬಲ್ಲರೆ?

ಲಿಂಗಾಯತ ಸಮುದಾಯ ಪ್ರಾಬಲ್ಯವಿರುವ ಹನೂರಿನಲ್ಲಿ ಒಕ್ಕಲಿಗ ಸಮುದಾಯದ ಆರ್.ನರೇಂದ್ರ ಹ್ಯಾಟ್ರಿಕ್ ಗೆಲುವು ಸಾಧಿಸಿರುವುದು ವಿಶೇಷ

- Advertisement -
- Advertisement -

ಕರ್ನಾಟಕದ ಮತದಾರರು ವ್ಯಕ್ತಿಗಿಂತ ಪಕ್ಷವನ್ನು ಪರಿಗಣಿಸುತ್ತಾರೆಂದು ಕೆಲವು ಸಮೀಕ್ಷೆಗಳು ಹೇಳುತ್ತವೆ. ಆದರೆ ಹನೂರು ವಿಧಾನಸಭಾ ಕ್ಷೇತ್ರವು ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆಯ ಕ್ಷೇತ್ರ. ಮಾಜಿ ಶಾಸಕರುಗಳಾದ ದಿವಂಗತ ರಾಜೂಗೌಡ ಮತ್ತು ಎಚ್.ನಾಗಪ್ಪ ಕುಟುಂಬವೇ ಇಲ್ಲಿನ ರಾಜಕಾರಣದ ಕ್ಷೇತ್ರ ಬಿಂದು.

ಹೆಚ್ಚೆಂದರೆ 12,000 ಒಕ್ಕಲಿಗ ಮತದಾರರಿರುವ ಈ ಕ್ಷೇತ್ರದಲ್ಲಿ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಮಾರು 45,000 ಲಿಂಗಾಯಿತರಿದ್ದರೂ ಒಕ್ಕಲಿಗ ಸಮುದಾಯದ ರಾಜೂಗೌಡ ಕುಟುಂಬ ಮೇಲುಗೈ ಸಾಧಿಸಿರುವುದು ಇಲ್ಲಿನ ವಿಶೇಷ. ಲಿಂಗಾಯತ ಸಮುದಾಯದ ನಾಗಪ್ಪ ಕುಟುಂಬ ಕ್ಷೇತ್ರವನ್ನು ತನ್ನ ತಕ್ಕೆಗೆ ಮರಳಿ ಪಡೆಯಲು ಸತತ ಯತ್ನಿಸುತ್ತಿದೆ.

ರಾಜೂಗೌಡ ಮತ್ತು ನಾಗಪ್ಪ ಕುಟುಂಬವಷ್ಟೇ ದಶಕಗಳ ಕಾಲ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸುತ್ತಾ ಬಂದಿವೆ. ಈಗಲೂ ಅಷ್ಟೇ ಎರಡು ಕುಟುಂಬಗಳ ನಡುವೆಯೇ ರಾಷ್ಟ್ರೀಯ ಪಕ್ಷಗಳ ಟಿಕೆಟ್ ಹಂಚಿಕೆಯಾಗಿದೆ. ಒಂದು ಕಾಲಕ್ಕೆ ಹನೂರು ವಿಧಾನಸಭಾ ಕ್ಷೇತ್ರವೂ ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಭದ್ರಕೋಟೆಯಾಗಿತ್ತು. ಆದರೆ ನಾಗಪ್ಪನವರು ಕಾಡುಗಳ್ಳ ವೀರಪ್ಪನ್ ಗುಂಡಿಗೆ ಬಲಿಯಾದ ಬಳಿಕ, ಅವರ ಪತ್ನಿ ಪರಿಮಳಾ ನಾಗಪ್ಪ ಸತತವಾಗಿ ಪಕ್ಷ ನಿಷ್ಠೆಯನ್ನು ಬದಲಿಸುತ್ತಾ ಬಂದಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.

ಇಲ್ಲಿ ಜಾತಿ ಸಮೀಕರಣಕ್ಕಿಂತ ಎರಡು ಕುಟುಂಬಗಳ ಪ್ರತಿಷ್ಠೆಯೇ ಚುನಾವಣಾ ಫಲಿತಾಂಶದ ಫ್ಯಾಕ್ಟರ್ ಆಗಿತ್ತು. ಆದರೆ ಜೆಡಿಎಸ್ಸಿನಲ್ಲಿ ಸಕ್ರಿಯವಾಗಿರುವ, ಕಳೆದ ಚುನಾವಣೆಯಲ್ಲಿ ಸೋತಿಸುವ ರಿಯಲ್ ಎಸ್ಟೇಟ್ ಉದ್ಯಮಿ, ಕುರುಬ ಸಮುದಾಯದ ಎಂ.ಆರ್.ಮಂಜುನಾಥ್ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಸುತ್ತಾಡಿದ್ದಾರೆ. ಕೊರೊನಾ ಸಮಯದಲ್ಲಿ ಒಂದಿಷ್ಟು ಕಾಣೆಯಾಗಿದ್ದು ಬಿಟ್ಟರೆ, ಮಂಜುನಾಥ್ ತನ್ನದೇ ಕಾರ್ಯಕರ್ತರನ್ನು ತೆಕ್ಕೆಯಲ್ಲಿ ಇಟ್ಟುಕೊಂಡಿರುವ ಅಭ್ಯರ್ಥಿಯಾಗಿದ್ದಾರೆ. 2018ರ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲು ಮಂಜುನಾಥ್ ಪ್ರವೇಶ ಕಾರಣವಾಗಿತ್ತು. ಈ ಬಾರಿಯೂ ಮಂಜುನಾಥ್ ಅವರನ್ನು ಜೆಡಿಎಸ್ ಕಣಕ್ಕಿಳಿಸಿದ್ದು, ಮತ್ತೆ ನೆಲೆಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.

ರಾಜೂಗೌಡರ ಪುತ್ರ ಆರ್.ನರೇಂದ್ರ ಅವರು ಕಾಂಗ್ರೆಸ್ಸಿನಿಂದ ಮೂರು ಬಾರಿ ಸತತವಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ನೀಡಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಬಿಟ್ಟರೆ, ಉಳಿದೆರಡು ಅವಧಿಯಲ್ಲಿ ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂಬ ಆರೋಪಗಳಿವೆ. ಆದರೆ ನರೇಂದ್ರ ಅವರು ಹೇಳುವುದೇ ಬೇರೆ. “ಬಿಜೆಪಿಯಂತಹ ಭ್ರಷ್ಟ ಸರ್ಕಾರ ಇನ್ನೊಂದಿಲ್ಲ. ನಮ್ಮ ಕ್ಷೇತ್ರಕ್ಕೆ ನೀಡಬೇಕಾದ ಅನುದಾನವನ್ನು ನೀಡುತ್ತಿಲ್ಲ’’ ಎಂದು ಆರೋಪಿಸುತ್ತಾ ಬಂದಿದ್ದಾರೆ.

ಹನೂರು ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ 50,000, ಪರಿಶಿಷ್ಟ ಪಂಗಡದ 35,000, ಲಿಂಗಾಯತರು 45,000, ತಮಿಳು ಭಾಷಿಕರು 20,000, ಕುರುಬರು 20,000, ಕ್ರಿಶ್ಚಿಯನ್ನರು 10,000, ಉಪ್ಪಾರರು 13,000, ಒಕ್ಕಲಿಗರು 12,000, ಮುಸ್ಲಿಮರು 9,000, ಇತರ ಸಮುದಾಯದ 12,000 ಮತದಾರರು ಇದ್ದಾರೆಂದು ಅಂದಾಜಿಸಲಾಗಿದೆ. ಸಾಮಾನ್ಯ ಕ್ಷೇತ್ರವಾದ ಇಲ್ಲಿ ಲಿಂಗಾಯತರು ಗಣನೀಯವಾಗಿ ಇದ್ದರೂ ನರೇಂದ್ರ ಅವರನ್ನು ಸೋಲಿಸಲು ಸಾಧ್ಯವಾಗುತ್ತಿಲ್ಲ.

ಲಿಂಗಾಯತರು ಹೆಚ್ಚಿರುವ ಕಾರಣಕ್ಕೆ ವಸತಿ ಸಚಿವ ವಿ.ಸೋಮಣ್ಣವರ ಕಣ್ಣು ಈ ಕ್ಷೇತ್ರದ ಮೇಲಿತ್ತು. 2018ರ ಚುನಾವಣೆಯಲ್ಲಿಯೂ ಇಲ್ಲಿಂದ ಸ್ಪರ್ಧಿಸುವ ಆಸಕ್ತಿಯನ್ನು ಸೋಮಣ್ಣ ತೋರಿದ್ದರು. ಆದರೆ ನಾಗಪ್ಪನವರ ಪತ್ನಿ, ಪರಿಮಳಾ ನಾಗಪ್ಪ ಅದಕ್ಕೆ ಒಪ್ಪಲಿಲ್ಲ. ಕ್ಷೇತ್ರದ ಮೇಲೆ ಕುಟುಂಬದ ಹಿಡಿತವನ್ನು ಬಿಟ್ಟುಕೊಡಲು ಅವರು ಸಿದ್ಧವಿರಲಿಲ್ಲ. ಹೀಗಾಗಿ ಯಾವುದಾದರೊಂದು ಪಕ್ಷದಲ್ಲಿ ನಾಗಪ್ಪ ಕುಟುಂಬ ಸ್ಪರ್ಧಿಸುತ್ತಾ ಬಂದಿದೆ. ಸೋಲುಗಳನ್ನು ಕಂಡರೂ ಎರಡನೇ ಅತಿಹೆಚ್ಚು ಮತಪಡೆಯುವಲ್ಲಿ ನಾಗಪ್ಪ ಕುಟುಂಬ ಸಫಲವಾಗಿದೆ.

ವಿ.ಸೋಮಣ್ಣ ಮತ್ತು ಪರಿಮಳಾ ನಾಗಪ್ಪ

ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡು ಬೆಳೆದ ದಿವಂಗತ ಎಚ್.ನಾಗಪ್ಪ ಮತ್ತು ಕಾಂಗ್ರೆಸ್ಸಿನಲ್ಲಿದ್ದ ದಿವಂಗತ ರಾಜೂಗೌಡರ ನಡುವೆಯೇ ಹಲವು ಚುನಾವಣೆಗಳಲ್ಲಿ ಪೈಪೋಟಿ ನಡೆದಿರುವುದನ್ನು ಕ್ಷೇತ್ರದ ಚುನಾವಣಾ ಇತಿಹಾಸ ಹೇಳುತ್ತದೆ. 1967ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿದ್ದ ಎಚ್‌ ನಾಗಪ್ಪ, 1972ರಲ್ಲಿ ಆರ್‌ ರಾಜೇಗೌಡ ಗೆಲುವು ಸಾಧಿಸಿದ್ದರು. 1978ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್‌ನ ರಾಜೂಗೌಡ ಗೆದ್ದಿದ್ದರು. ಮತ್ತೆ 1983ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಪಿ.ಶಿವಮೂರ್ತಿ ಗೆಲುವು ಸಾಧಿಸಿದ್ದರು. 1985ರಲ್ಲಿ ಕಾಂಗ್ರೆಸ್‌ ತೊರೆದು ಸ್ವತಂತ್ರವಾಗಿ ಸ್ಪರ್ಧಿಸಿದ್ದ ರಾಜೂಗೌಡರು ಮತ್ತೆ ಗೆದ್ದು ಕ್ಷೇತ್ರದ ಮೇಲೆ ತಮ್ಮ ಪ್ರಾಬಲ್ಯವನ್ನು ಸಾಬೀತು ಮಾಡಿದ್ದರು. ಬಳಿಕ ನಡೆದ 1989ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮರಳಿದ ರಾಜೂಗೌಡ ಮತ್ತೊಮ್ಮೆ ಆಯ್ಕೆಯಾದರು. 1994ರ ಚುನಾವಣೆಯಲ್ಲಿ ಜನತಾ ದಳದ ಎಚ್‌ ನಾಗಪ್ಪ ಗೆದ್ದರೆ, 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಿ ರಾಜುಗೌಡ ಮಗದೊಮ್ಮೆ ಗೆದ್ದಿದ್ದರು.

ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರಾಗಿದ್ದ ನಾಗಪ್ಪ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದನು. ವೀರಪ್ಪನ್ ಕಾರ್ಯಾಚರಣೆ ನಡೆಸುತ್ತಿದ್ದ ಕಾಡಿನ ವ್ಯಾಪ್ತಿಯಲ್ಲೇ ಹನೂರು ಕ್ಷೇತ್ರವಿದೆ. ವೀರಪ್ಪನ್ ಆತಂಕದಲ್ಲೇ ಇಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಕ್ಷೇತ್ರದ ಮಾಜಿ ಶಾಸಕರಾಗಿದ್ದ ಹನೂರು ನಾಗಪ್ಪ ಅವರನ್ನು ಕಾಮಗೆರೆಯ ಅವರ ಮನೆಯಿಂದ 2002ರ ಆಗಸ್ಟ್ ನಲ್ಲಿ ವೀರಪ್ಪನ್ ಅಪಹರಿಸಿದ್ದ. ವೀರಪ್ಪನ್ ವಶದಲ್ಲಿದ್ದಾಗಲೇ ನಾಗಪ್ಪ ಡಿಸೆಂಬರ್ 2002ರಲ್ಲಿ ಚಂಗಡಿ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಘಟನೆ ರಾಜ್ಯದಲ್ಲಿ ತಲ್ಲಣ ಸೃಷ್ಟಿ ಮಾಡಿತು. 2004ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವು ಪರಿಮಳಾ ನಾಗಪ್ಪನವರಿಗೆ ಟಿಕೆಟ್ ನೀಡಿತು. ರಾಜೂಗೌಡ ಅವರ ಪುತ್ರ ನರೇಂದ್ರ ಪ್ರತಿಸ್ಪರ್ಧಿಯಾಗಿದ್ದರು. ಆ ಚುನಾವಣೆಯಲ್ಲಿ ಗೆದ್ದಿದ್ದ ನಾಗಪ್ಪ ಕುಟುಂಬ ಮತ್ತೆ ಇಲ್ಲಿ ಗೆಲುವು ಕಾಣಲಿಲ್ಲ.

2008ರ ವೇಳೆಗೆ ಜೆಡಿಎಸ್ಸಿನೊಂದಿಗೆ ಮುನಿಸಿಕೊಂಡ ಪರಿಮಳಾ ಅವರು ಬಿಎಸ್ಪಿಗೆ ಹಾರಿದರು. ನರೇಂದ್ರ ವಿರುದ್ಧ 23,140 ಮತದಂತರದಲ್ಲಿ ಸೋಲು ಕಂಡಿದ್ದರು. 2013ರಲ್ಲಿ ಯಡಿಯೂರಪ್ಪನವರ ಕೆಜೆಪಿಯಿಂದ ಸ್ಪರ್ಧಿಸುವ ಇಚ್ಛೆ ಪರಿಮಳಾ ಅವರಿಗಿತ್ತು. ಆ ವೇಳೆ ಸೋಮಣ್ಣನವರು ಕೆಜೆಪಿ ಟಿಕೆಟ್ ಪಡೆದು ಹನೂರಿಗೆ ಬರುತ್ತಾರೆಂಬ ಸುದ್ದಿ ಹಬ್ಬಿತು. ಗೊಂದಲದಲ್ಲಿದ್ದ ಪರಿಮಳಾ ಅವರು ಮತ್ತೆ ಜೆಡಿಎಸ್ಸಿಗೆ ಬಂದರು. ಈ ಚುನಾವಣೆಯಲ್ಲಿ 11,549 ಮತಗಳಂತರದಲ್ಲಿ ಮತ್ತೆ ಸೋತರು. ಆ ನಂತರದಲ್ಲಿ ಜೆಡಿಎಸ್ ಟಿಕೆಟ್ ದೊರಕಲಿಲ್ಲ. ನಾಗಪ್ಪ ಕುಟುಂಬ ಬಿಜೆಪಿಗೆ ಹೊರಳಿತು. ಜೆಡಿಎಸ್ ನಿಂದ ಉದ್ಯಮಿ ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಯಿತು. ಬಿಜೆಪಿಯಿಂದ ನಾಗಪ್ಪ ಅವರ ಪುತ್ರ ಡಾ.ಪ್ರೀತನ್ ನಾಗಪ್ಪ ಕಣಕ್ಕಿಳಿದರು. ಭಾರೀ ಪೈಪೋಟಿ ನೀಡಿದ ಪ್ರೀತನ್, ಕೇವಲ 3513 ಮತಗಳ ಅಂತರದಲ್ಲಿ ಸೋತರು. ಪ್ರೀತನ್ ನಾಗಪ್ಪ 56931 ಮತಗಳನ್ನು ಪಡೆದರೆ, ಜೆಡಿಎಸ್ಸಿನ ಎಂ.ಆರ್.ಮಂಜುನಾಥ್ 44,957 ಮತಗಳನ್ನು ಪಡೆದಿರುವುದು ವಿಶೇಷ. ಬಿಎಸ್ಪಿ ಜೊತೆಯಲ್ಲಿ ಜೆಡಿಎಸ್ ಚುನಾವಣಾ ಪೂರ್ವ ಒಪ್ಪಂದ ಮಾಡಿಕೊಂಡಿದ್ದರಿಂದ ಜೆಡಿಎಸ್ ಮತಗಳು ಹೆಚ್ಚಾದವು ಎಂದು ಹೇಳಲಾಗುತ್ತದೆ.

2008, 2013 ಮತ್ತು 2018ರ ಚುನಾವಣೆಗಳಲ್ಲಿ ನರೇಂದ್ರ ಗೆದ್ದಿದ್ದಾರೆ. ನಾಗಪ್ಪ ಕುಟುಂಬಕ್ಕೆ ಕ್ಷೇತ್ರ ಕೈತಪ್ಪಿ ಹೋದರೂ 2018ರ ಚುನಾವಣೆಯಲ್ಲಿ ನಾಗಪ್ಪ ಪುತ್ರ ಪ್ರೀತನ್ ಬಿಜೆಪಿಯಿಂದ ಸ್ಪರ್ಧಿಸಿ ನರೇಂದ್ರ ಅವರಿಗೆ ನಡುಕ ಹುಟ್ಟಿಸಿದ್ದು ಸುಳ್ಳಲ್ಲ.

ಸತತ ಸೋಲುಗಳನ್ನು ಕಂಡಿರುವ ನಾಗಪ್ಪ ಕುಟುಂಬದ ಮೇಲೆ ಕ್ಷೇತ್ರದ ಜನರ ಅನುಕಂಪವಿದೆ. ಆದರೆ ಕ್ಷೇತ್ರದ ಜನರೊಂದಿಗೆ ಉತ್ತಮ ಸಂಪರ್ಕವನ್ನು ನರೇಂದ್ರ ಅವರು ಹೊಂದಿರುವುದನ್ನು ಅಲ್ಲಗಳೆಯಲಾಗದು.

ಬೆಂಗಳೂರಿನಲ್ಲಿ ವೈದ್ಯರಾಗಿರುವ ಪ್ರೀತನ್ ಚುನಾವಣೆ ಸಂದರ್ಭದಲ್ಲಿ ಮಾತ್ರ ಕ್ಷೇತ್ರಕ್ಕೆ ಬರುತ್ತಾರೆಂಬ ಆರೋಪಗಳಿವೆ. ಇದು ಪ್ರೀತನ್ ಮೇಲೆ ಗುಮಾನಿ ಹೆಚ್ಚಿಸಲು ಕಾರಣವಾಗಿದೆ. ಇದರ ಜೊತೆಗೆ ಬಿಜೆಪಿಯಿಂದ ಇನ್ನು ನಾಲ್ವರು ಟಿಕೆಟ್ ಆಕಾಂಕ್ಷಿಗಳಿದ್ದರು. ಅದರಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದವರು ಡಾ.ಎಸ್.ದತ್ತೇಶ್‌ ಕುಮಾರ್‌.

ಚಾಮರಾಜನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ದತ್ತೇಶ್ ಮೂಲತಃ ಉದ್ಯಮಿ, ಕೊಳ್ಳೇಗಾಲದಲ್ಲಿರುವ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ. 2013ರಲ್ಲಿ ನರೇಂದ್ರ ಅವರ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿ, 13,258 ಮತ ಗಳಿಸಿ, ಮೂರನೇ ಸ್ಥಾನದಲ್ಲಿದ್ದರು. 2018ರಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪ್ರೀತನ್ ಅವರಿಗೆ ಪಕ್ಷ ಮಣೆ ಹಾಕಿತು. ನಂತರದಲ್ಲಿ ದತ್ತೇಶ್ ಪಕ್ಷ ಸಂಘಟನೆಯತ್ತ ಗಮನ ಹರಿಸಿದರು. ಜಿಲ್ಲಾ ಉಪಾಧ್ಯಕ್ಷ ಸ್ಥಾನವೂ ಅವರಿಗೆ ದೊರಕಿತು. ಇನ್ನೇನು ಟಿಕೆಟ್ ಸಿಗುತ್ತದೆ ಎಂಬ ಉತ್ಸಾಹದಲ್ಲಿದ್ದಾಗ ಮತ್ತೆ ನಾಗಪ್ಪ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಿತು.

ಇದರಿಂದ ಸಿಟ್ಟಿಗೆದ್ದ ದತ್ತೇಶ್, ಪಕ್ಷ ತೊರೆದು ಕಾಂಗ್ರೆಸ್ ಸೇರುವ ಸೂಚನೆಗಳು ದೊರೆತ್ತಿದ್ದವು. ಆದರೆ ಅಂತಿಮವಾಗಿ ಬಿಜೆಪಿಯಲ್ಲೇ ಉಳಿದು, ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ದತ್ತೇಶ್ ಅವರಂತೆಯೇ ಉದ್ಯಮಿಗಳಾದ ವೆಂಕಟೇಶ್‌, ನಿಶಾಂತ್‌ ಟಿಕೆಟ್‌ಗಾಗಿ ಪೈಪೋಟಿ ನೀಡಿದ್ದರು. ಒಂದೇ ವೇಳೆ ಪ್ರೀತನ್ ಗೆದ್ದರೆ, ಮತ್ತೆ ನಾಗಪ್ಪ ಕುಟುಂಬ ಮೇಲುಗೈ ಸಾಧಿಸುತ್ತದೆ ಎಂಬ ಭಯ ಇತರ ಬಿಜೆಪಿ ಮುಖಂಡರಿಗೆ ಇದ್ದರೆ ಒಳೇಟುಗಳು ಬೀಳುವ ಸಾಧ್ಯತೆ ಇದೆ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ಸಿನಲ್ಲಿ ಈ ಒಡಕು ಇಲ್ಲವಾಗಿದೆ.

ಉಳಿದಂತೆ ಬಿಎಸ್‌ಪಿಯಿಂದ ಮಾದೇಶ, ಎಎಪಿಯಿಂದ ಕೆ.ಹರೀಶ್‌, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದಿಂದ (ಅಠಾವಳೆ) ಟಿ.ಜಾನ್‌ ಪೀಟರ್‌, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಎನ್‌.ಪ್ರದೀಪ್‌ಕುಮಾರ್‌, ಕರ್ನಾಟಕ ಪ್ರಜಾ ಪಾರ್ಟಿಯಿಂದ (ರೈತ ಪರ್ವ) ಜಿ.ಮುರುಗೇಶನ್‌, ಸರ್ವೋದಯ ಕರ್ನಾಟಕ ಪಕ್ಷದಿಂದ ಶೈಲೇಂದ್ರ ಶ್ರೀಕಂಠಸ್ವಾಮಿ, ಕಂಟ್ರಿ ಸಿಟಿಜನ್‌ ಪಾರ್ಟಿಯಿಂದ ಸಿದ್ದಪ್ಪ ಆರ್‌., ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸುರೇಶ್‌ ಎಂ., ಪಕ್ಷೇತರರಾಗಿ ಹನೂರು ನಾಗರಾಜು, ಪ್ರದೀಪ್‌ಕುಮಾರ್‌ ಎಂ, ಮುಜಾಮಿಲ್‌ ಪಾಷಾ, ಟಿ.ಮುತ್ತುರಾಜು, ರಾಜಶೇಖರ್‌, ಸಿ.ಸಿದ್ದಾರ್ಥನ್‌ ಮತ್ತು ಸೆಲ್ವರಾಜ್‌ ಎಸ್‌ ಕಣದಲ್ಲಿದ್ದಾರೆ.

ಮೇಲು ನೋಟಕ್ಕೆ ಬಿಜೆಪಿ- ಕಾಂಗ್ರೆಸ್ ನಡುವೆ ಪೈಪೋಟಿ ಕಂಡು ಬಂದರೂ ಮಂಜುನಾಥ್ ಸುಮ್ಮನೆ ಕೂರುವವರಲ್ಲ. ಹೀಗಾಗಿ ತ್ರಿಕೋನ ಸ್ಪರ್ಧೆ ಏರ್ಪಡುವಂತೆ ಕಾಣುತ್ತಿದೆ. ಒಕ್ಕಲಿಗ ಸಮುದಾಯದ ನರೇಂದ್ರ, ಲಿಂಗಾಯತ ಸಮುದಾಯದ ಪ್ರೀತನ್, ಕುರುಬ ಸಮುದಾಯದ ಮಂಜುನಾಥ್ ನಡುವೆ ವಿವಿಧ ಜಾತಿಗಳ ಮತಗಳು ಹೇಗೆ ವಿಭಜನೆಯಾಗುತ್ತವೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ. ಬಿಜೆಪಿಯೊಳಗೆ ಒಳೇಟು ಹೆಚ್ಚಾದರೆ ಕುಟುಂಬ ಪ್ರತಿಷ್ಠೆಯ ಕಣದಲ್ಲಿ ನರೇಂದ್ರ ಅವರು ಮರು ಆಯ್ಕೆಯಾಗುವ ಸಾಧ್ಯತೆಯೂ ನಿಚ್ಚಳವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಕೇಂದ್ರ ಸರ್ಕಾರ

ವರ್ಷದ ಹಿಂದೆ, ಅಂದರೆ 2025ರ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರು ಬುಧವಾರ (ಜು.8) ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಸುನಾಲಿ...

ಬೆಂಗಳೂರಿನ ಜ್ವಲಂತ ನಾಗರಿಕ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಪ್ರತಿನಿತ್ಯ ಎದುರಿಸುತ್ತಿರುವ ನರಕಸದೃಶ ಸಮಸ್ಯೆಗಳ ವಿರುದ್ಧ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೃಹತ್ ‘ಜನಾಕ್ರೋಶ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ‘ಜನಾಕ್ರೋಶ...

ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3 ಸಾವಿರ LPG ಸಿಲಿಂಡರ್

ಮಹಾರಾಷ್ಟ್ರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರಕೃತಿಯ ವಿಕೋಪದ ನಡುವೆ ರಾಯಗಢ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್...

ಹೈದರಾಬಾದ್‌| ಪವನ್‌ ಕಲ್ಯಾಣ್‌ ಟೀಕಿಸಿದ ಯೂಟ್ಯೂಬರ್ ರಾವಣ್ ಮೇಲೆ ಯುಎಪಿಎ ಕೇಸ್; ನಿವಾಸದಲ್ಲಿ ಪೊಲೀಸರ ಶೋಧ

ತೆಲುಗು ಯೂಟ್ಯೂಬರ್, ಸಾಮಾಜಿಕ ಕಾರ್ಯಕರ್ತ ರಾವಣ್‌ (ಬಚಲಕೂರಿ ಜೋಸೆಫ್) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿರುವ ಯೂಟ್ಯೂಬರ್ ರಾವಣ್ ನಿವಾಸದಲ್ಲಿ...

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...