Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿತ್ರದುರ್ಗ: ಬಿಜೆಪಿ ಕಳೆದುಕೊಳ್ಳುವುದೆಷ್ಟು? ಕಾಂಗ್ರೆಸ್ ಪಡೆದುಕೊಳ್ಳುವುದೆಷ್ಟು?

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿತ್ರದುರ್ಗ: ಬಿಜೆಪಿ ಕಳೆದುಕೊಳ್ಳುವುದೆಷ್ಟು? ಕಾಂಗ್ರೆಸ್ ಪಡೆದುಕೊಳ್ಳುವುದೆಷ್ಟು?

- Advertisement -
- Advertisement -

ಕೋಟೆ ನಾಡು ಚಿತ್ರದುರ್ಗದಲ್ಲಿ ಬಿಸಿಲಿನ ಝಳದ ಜೊತೆಗೆ ರಾಜಕಾರಣವೂ ರಂಗೇರಿದೆ. ಜಿಲ್ಲೆಯಲ್ಲಿ ಚಿತ್ರದುರ್ಗ ಸೇರಿ, ಹಿರಿಯೂರು, ಹೊಸದುರ್ಗ ಸಾಮಾನ್ಯ ಕ್ಷೇತ್ರಗಳಿದ್ದರೆ, ಚಳ್ಳಕೆರೆ, ಮೊಳಕಾಲ್ಮೂರು ಪ.ಪಂ ಮೀಸಲು ಕ್ಷೇತ್ರ ಮತ್ತು ಹೊಳಲ್ಕೆರೆ ಪ.ಜಾ ಮೀಸಲು ಕ್ಷೇತ್ರಗಳಿವೆ. ಕಳೆದ ಬಾರಿ ಚಿತ್ರದುರ್ಗದ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಚಳ್ಳಕೆರೆ ಹೊರತುಪಡಿಸಿ ಉಳಿದ 5 ಕಡೆ ಬಿಜೆಪಿ ಗೆದ್ದಿತ್ತು. ಕಾಂಗ್ರೆಸ್ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ಮತ್ತೆ ಪಾರುಪತ್ಯ ಸಾಧಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ತನ್ನ ಶಾಸಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಶ್ರಮ ಹಾಕಿದರೆ, ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದೆ. ಮೂರು ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತಹ ಚಿತ್ರದುರ್ಗದ ವಿಧಾನಸಭಾ ಕ್ಷೇತ್ರಗಳ ಸ್ಥಿತಿಗತಿ ಹೀಗಿದೆ.

ಚಿತ್ರದುರ್ಗ (ಸಾಮಾನ್ಯ ಕ್ಷೇತ್ರ)

ಚಿತ್ರದುರ್ಗ ಕ್ಷೇತ್ರದಲ್ಲಿ ಒಟ್ಟು 2,60,000 ಮತಗಳಿದ್ದು ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಲಿಂಗಾಯಿತ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಉಳಿದಂತೆ ಪ.ಜಾತಿಯ 60,000, ಪ.ಪಂಗಡದ 33,000 ಮತಗಳಿವೆ. ಮುಸ್ಲಿಂ ಸಮುದಾಯದ 46,000 ಮತಗಳಿದ್ದು, ಒಕ್ಕಲಿಗ ಮತ್ತು ಕುರುಬ ಸಮುದಾಯದ ಮತಗಳು ಗಣನೀಯ ಸಂಖ್ಯೆಯಲ್ಲಿವೆ.

ಆರಂಭದಲ್ಲಿ ಚಿತ್ರದುರ್ಗ ಕಾಂಗ್ರೆಸ್ ನೆಲೆಯಾಗಿತ್ತು. 1994 ಮತ್ತು 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ್ದ ಜಿ.ಎಚ್ ತಿಪ್ಪಾರೆಡ್ಡಿಯವರು 2004ರಲ್ಲಿ ಕಾಂಗ್ರೆಸ್ ಸೇರಿ ಹ್ಯಾಟ್ರಿಕ್ ಸಾಧಿಸಿದ್ದರು. ಆದರೆ 2008ರಲ್ಲಿ ಜೆಡಿಎಸ್ ಅಭ್ಯರ್ಥಿ ಬಸವರಾಜನ್ ಎದುರು ಸೋಲು ಕಂಡರು. ನಂತರ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಅಭ್ಯರ್ಥಿಯಾಗಿ 2013 ಮತ್ತು 2018ರಲ್ಲಿ ಜಯಗಳಿಸಿ, 5ನೇ ಬಾರಿಗೆ ಶಾಸಕರಾಗಿರುವ ಅವರು ಚಿತ್ರದುರ್ಗವನ್ನು ಬಿಜೆಪಿಯ ಭದ್ರಕೋಟೆಯಾಗಿಸಿದ್ದಾರೆ.

ಕಳೆದ ಮೂರು ಚುನಾವಣೆಗಳ ವಿವರ

2008ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಸವರಾಜನ್ 55,906 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದ್ದರು. ಮೊದಲ ಸೋಲು ಕಂಡ ಕಾಂಗ್ರೆಸ್‌ನ ಜಿ.ಎಚ್ ತಿಪ್ಪಾರೆಡ್ಡಿ 39,584 ಮತಗಳನ್ನು ಪಡೆದರೆ, ಬಿಜೆಪಿಯ ಜಿ.ಎಸ್ ಮಂಜುನಾಥ ಕೇವಲ 37,571 ಮತಗಳಿಗೆ ಕುಸಿದಿದ್ದರು.

2013ರ ಚುನಾವಣೆಯ ವೇಳೆಗೆ ಜಿ.ಎಚ್ ತಿಪ್ಪಾರೆಡ್ಡಿ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಕಣಕ್ಕಿಳಿದಿದ್ದರು. 62,228 ಮತಗಳನ್ನು ಪಡೆದು ಗೆಲುವಿನ ಹಳಿಗೆ ಮರಳಿದ ಅವರು ಜೆಡಿಎಸ್‌ನ ಬಸವರಾಜನ್ (35,510) ರನ್ನು ಮಣಿಸಿದರು. ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದಿದ್ದ ಜಿ.ಎಸ್. ಮಂಜುನಾಥ 30,729 ಮತಗಳಿಗೆ ಸೀಮಿತರಾದರು.

2018ರಲ್ಲಿ ಜಿ.ಎಚ್ ತಿಪ್ಪಾರೆಡ್ಡಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಅವರು 82,896 ಮತಗಳನ್ನು ಪಡೆದರೆ ಕೆ.ಸಿ ವೀರೇಂದ್ರ ಪಪ್ಪಿ (ಜೆಡಿಎಸ್) 49,911 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದರು. ಕಾಂಗ್ರೆಸ್‌ನ ಷಣ್ಮುಖಪ್ಪ 49,014 ಮತಗಳಿಗೆ ಸೀಮಿತಗೊಂಡಿದ್ದರು.

ಹಾಲಿ ಪರಿಸ್ಥಿತಿ

ಬಿಜೆಪಿಯಿಂದ ಮತ್ತೆ ಜಿ.ಎಚ್ ತಿಪ್ಪಾರೆಡ್ಡಿಯವರೇ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷವು ಚಿತ್ರನಟ ದೊಡ್ಡಣ್ಣನವರ ಅಳಿಯ ಕೆ.ಸಿ ವಿರೇಂದ್ರ ಪಪ್ಪಿಯವರಿಗೆ ಮಣೆ ಹಾಕಿದೆ. ಇಬ್ಬರೂ ಲಿಂಗಾಯಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇನ್ನು ಕಾಂಗ್ರೆಸ್ ಟಿಕೆಟ್ ವಂಚಿತ ವಿಶ್ವಕರ್ಮ ಸಮುದಾಯದ ಮಾಜಿ ಎಂಎಲ್‌ಸಿ ರಘು ಆಚಾರ್ ಬಂಡೆದ್ದು ಜೆಡಿಎಸ್ ಸೇರಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. 2008ರಲ್ಲಿ ಶಾಸಕರಾಗಿದ್ದ, ಮುರುಘಮಠ ವಿವಾದದಲ್ಲಿ ಜೈಲಿಗೆ ಹೋಗಿದ್ದ ಬಸವರಾಜನ್‌ರವರು, ಕಾಂಗ್ರೆಸ್ ಟಿಕೆಟ್ ಸಿಗದಿದ್ದರಿಂದ ತಮ್ಮ ಪತ್ನಿ ಸೌಭಾಗ್ಯ ಬಸವರಾಜನ್‌ರವರನ್ನು ಪಕ್ಷೇತರವಾಗಿ ಕಣಕ್ಕಿಳಿಸಿದ್ದಾರೆ.

ಕೆ.ಸಿ ವಿರೇಂದ್ರ ಪಪ್ಪಿ, ಜಿ.ಎಚ್ ತಿಪ್ಪಾರೆಡ್ಡಿ

ಜೊತೆಗೆ ಆಪ್‌ನಿಂದ ಬಿ.ಈ.ಜಗದೀಶ್, ಬಿಎಸ್‌ಪಿಯ ಪ್ರಕಾಶ್.ಎನ್, ಕೆಆರ್‌ಎಸ್ ಪಕ್ಷದ ಎಂ.ಟಿ.ಚಂದ್ರಣ್ಣ, ಕರ್ನಾಟಕ ಸ್ವಾಭಿಮಾನಿ ರೈತರ ಕಾರ್ಮಿಕರ ಪಕ್ಷದ ಜಿ.ಎಸ್.ನಾಗರಾಜು, ಸಮಾಜವಾದಿ ಪಕ್ಷದ ಎನ್.ಮಂಜಪ್ಪ, ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್.ವಿಜಯ, ಎಸ್‌ಡಿಪಿಐನ ಬಾಳೇಕಾಯಿ ಶ್ರೀನಿವಾಸ.ಹೆಚ್ ಕಣದಲ್ಲಿದ್ದಾರೆ.

ಚಿತ್ರದುರ್ಗದಲ್ಲಿ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಈ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದೆ. ಬಿಜೆಪಿ ಅಭ್ಯರ್ಥಿಗೆ ಆಡಳಿತ ವಿರೋಧಿ ಅಲೆ ಇದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದ ಬಿಸಿ ತಾಗುತ್ತಿದೆ. ಜೆಡಿಎಸ್ ಅಭ್ಯರ್ಥಿಗೆ ಜಾತಿಬಲವಿಲ್ಲದಿರುವುದ ಮತ್ತು ಒಳೇಟಿನ ಭೀತಿ ಕಾಡುತ್ತಿದೆ. ಹಾಗಾಗಿ ಇಲ್ಲಿ ಈ ಮೂವರಲ್ಲಿ ಯಾರು ಬೇಕಾದರೂ ಗೆಲ್ಲಬಹುದಾಗಿದೆ.

ಮೊಳಕಾಲ್ಮೂರು (ಪರಿಶಿಷ್ಟ ಪಂಗಡ ಮೀಸಲು)

ಮೊಳಕಾಲ್ಮೂರು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಕ್ಕೆ 1997ರಲ್ಲಿ ನಡೆದ ಉಪಚುನಾವಣೆಯಲ್ಲಿ ಎನ್.ವೈ ಗೋಪಾಲಕೃಷ್ಣರವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಸಾಧಿಸಿದ್ದರು. ಆನಂತರ 1999, 2004ರಲ್ಲಿಯೂ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದರು. 2008ರಲ್ಲಿ 51,010 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯ ಎಸ್.ತಿಪ್ಪೇಸ್ವಾಮಿ ಯವರನ್ನು (46,044) ಸೋಲಿಸಿ ಸತತ 4ನೇ ಗೆಲುವು ಸಾಧಿಸಿದ್ದರು.

ಆದರೆ 2013ರಲ್ಲಿ ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದ ತಿಪ್ಪೇಸ್ವಾಮಿಯವರು 76,827 ಮತಗಳನ್ನು ಪಡೆದು ಗೋಪಾಲಕೃಷ್ಣರವರಿಗೆ (69,658) ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದರು.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆ: ಬಿಜೆಪಿಯ ಕಳೆಗುಂದಿದ ಹಳೆ ಮುಖಗಳು ವರ್ಸಸ್ ಕಂಗೆಟ್ಟ ಕಾಂಗ್ರೆಸಿಗರು!

2018ರ ಚುನಾವಣೆಯಲ್ಲಿ ಬಾದಾಮಿ ಜೊತೆಗೆ ಮೊಳಕಾಲ್ಮೂರಿನಲ್ಲಿಯೂ ಬಿ.ಶ್ರೀರಾಮುಲು ಬಿಜೆಪಿಯಿಂದ ಸ್ಪರ್ಧಿಸಿದರು. ಎಸ್.ತಿಪ್ಪೇಸ್ವಾಮಿಯವರಿಗೆ ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಕಾಂಗ್ರೆಸ್ ಎನ್.ವೈ ಗೋಪಾಲಕೃಷ್ಣರವರ ಬದಲು ಡಾ.ಯೋಗೇಶ್ ಬಾಬುರವರಿಗೆ ಮಣೆ ಹಾಕಿತು. ಇದರಿಂದ ಬೇಸರಗೊಂಡ ಅವರು ಬಿಜೆಪಿ ಸೇರಿ ಕೂಡ್ಲಿಗಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇತ್ತ ಮೊಳಕಾಲ್ಮೂರಿನಲ್ಲಿಯೂ ಬಿ.ಶ್ರೀರಾಮುಲು ಗೆದ್ದು ಬಂದರು. ಅವರು 84,018 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಡಾ.ಯೋಗೇಶ್ ಬಾಬು 41,973 ಮತಗಳಿಗೆ ಸೀಮಿತಗೊಂಡರು. ಇನ್ನು ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಸ್.ತಿಪ್ಪೇಸ್ವಾಮಿ 41,152 ಮತಗಳನ್ನಷ್ಟೇ ಪಡೆಯಲು ಶಕ್ತರಾದರು.

ಎಸ್.ತಿಪ್ಪೇಸ್ವಾಮಿ, ಎನ್.ವೈ ಗೋಪಾಲಕೃಷ್ಣ

ಸದ್ಯದ ಚುನಾವಣೆಯಲ್ಲಿ ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದರಿಂದ ಮೊಳಕಾಲ್ಮೂರಿನ ಬಿಜೆಪಿ ಟಿಕೆಟ್ ಮತ್ತೆ ಬಿಜೆಪಿ ಸೇರಿದ ಎಸ್.ತಿಪ್ಪೇಸ್ವಾಮಿ ಪಾಲಾಗಿದೆ. ಎನ್.ವೈ ಗೋಪಾಲಕೃಷ್ಣರವರು 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಸೇರಿ ಮೊಳಕಾಲ್ಮೂರು ಅಭ್ಯರ್ಥಿಯಾಗಿದ್ದಾರೆ. ವೀರಭದ್ರಪ್ಪ ಎಂಬುವವರು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಜೊತೆಗೆ ಬಹುಜನ ಸಮಾಜವಾದಿ ಪಕ್ಷದ ಎಮ್.ಓ. ಮಂಜುನಾಥ ಸ್ವಾಮಿ ನಾಯಕ, ಆಮ್ ಆದ್ಮಿ ಪಕ್ಷದ ಎಸ್.ಟಿ.ಹರೀಶ್ ನಾಯಕ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮಲ್ಲಿಕಾರ್ಜುನ ಕಣದಲ್ಲಿದ್ದಾರೆ. ಆದರೆ ಇಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆಯೇ ನೇರಾ ಹಣಾಹಣಿ ನಡೆಯಲಿದೆ.

ಅಂದಾಜು ಒಟ್ಟು ಮತಗಳು: 2,40,000. ಪರಿಶಿಷ್ಟ ಪಂಗಡ- 90,803, ಪರಿಶಿಷ್ಟ ಜಾತಿ- 48,262, ಮುಸ್ಲಿಂ- 12,327 ಲಿಂಗಾಯಿತ- 25,000, ಯಾದವ- 16,000, ಕುರುಬ- 10,000.

ಹಿರಿಯೂರು (ಸಾಮಾನ್ಯ ವಿಧಾನಸಭಾ ಕ್ಷೇತ್ರ)

ಆರಂಭದಲ್ಲಿ ಸಾಮಾನ್ಯ ವಿಧಾನಸಭಾ ಕ್ಷೇತ್ರವಾಗಿದ್ದ ಹಿರಿಯೂರು 1962ರಿಂದ 2008ರವರೆಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿತ್ತು. 2008ರ ನಂತರ ಮತ್ತೆ ಸಾಮಾನ್ಯ ವಿಧಾನಸಭಾ ಕ್ಷೇತ್ರವಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಎಚ್ ರಂಗನಾಥ್‌ರವರು ಈ ಕ್ಷೇತ್ರವನ್ನು 5 ಬಾರಿ ಪ್ರತಿನಿಧಿಸಿದ್ದರು. ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಆರಂಭದಲ್ಲಿ ಕಾಂಗ್ರೆಸ್‌ನಲ್ಲಿದ್ದು ಆನಂತರ ಜನತಾ ಪರಿವಾರ ಸೇರಿದ ಡಿ.ಮಂಜುನಾಥ್‌ರವರು 3 ಬಾರಿ ಗೆಲುವು ಸಾಧಿಸಿ, ಸಚಿವರೂ ಆಗಿದ್ದರು.

ಕೆ.ಪೂರ್ಣಿಮಾ ಶ್ರೀನಿವಾಸ್, ಡಿ.ಸುಧಾಕರ್

2008ರಲ್ಲಿ ಸಾಮಾನ್ಯ ವಿಧಾನಸಭಾ ಕ್ಷೇತ್ರವಾದಾಗ ಚಳ್ಳಕೆರೆಯಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಜೈನ ಸಮುದಾಯದ ಡಿ.ಸುಧಾಕರ್ ಹಿರಿಯೂರಿಗೆ ಬಂದು ಗೆಲುವು ಸಾಧಿಸಿದರು. ಅವರು 2013ರಲ್ಲಿಯೂ ಸಹ ಯಾದವ ಸಮುದಾಯದ ಜೆಡಿಎಸ್‌ನ ಕೃಷ್ಣಪ್ಪನವರನ್ನು ಸೋಲಿಸಿ ಶಾಸಕರಾದರು. ಆದರೆ 2018ರ ವೇಳೆಗೆ ಕೃಷ್ಣಪ್ಪನವರ ಪುತ್ರಿ ಕೆ.ಪೂರ್ಣಿಮಾ ಶ್ರೀನಿವಾಸ್ ಬಿಜೆಪಿ ಸೇರಿ ಜಯ ಕಂಡರು.

ಈ ಬಾರಿ ಬಿಜೆಪಿಯ ಪೂರ್ಣಿಮಾ ಶ್ರೀನಿವಾಸ್, ಕಾಂಗ್ರೆಸ್‌ನಿಂದ ಡಿ.ಸುಧಾಕರ್, ಜೆಡಿಎಸ್‌ನಿಂದ ಒಕ್ಕಲಿಗ ಸಮುದಾಯದ ಎಂ.ರವೀಂದ್ರಪ್ಪ ಕಣಕ್ಕಿಳಿದಿದ್ದಾರೆ. ಯಾದವ ಸಮುದಾಯ ಕಳೆದ ಚುನಾವಣೆಯಲ್ಲಿ ಪೂರ್ತಿ ಬಿಜೆಪಿ ಜೊತೆ ನಿಂತಿತ್ತು. ಆದರೆ ಈಗ ಇಬ್ಭಾಗವಾಗಿದೆ. ಹಾಗಾಗಿ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾನೇರ ಹಣಾಹಣಿ ನಡೆಯಲಿದೆ.

ಹೊಸದುರ್ಗ (ಸಾಮಾನ್ಯ ವಿಧಾನಸಭಾ ಕ್ಷೇತ್ರ)

5 ಬಾರಿ ಪಕ್ಷೇತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಇತಿಹಾಸ ಹೊಸದುರ್ಗಕ್ಕಿದೆ. ಬಿ.ಜಿ.ಗೋವಿಂದಪ್ಪನವರು ಆರಂಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಆನಂತರ ಕಾಂಗ್ರೆಸ್ ಸೇರಿ ಒಟ್ಟು ಮೂರು ಬಾರಿ ಶಾಸಕರಾಗಿದ್ದಾರೆ. ಇನ್ನು ಈ ಸಾಮಾನ್ಯ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಬೋವಿ ಸಮುದಾಯದ ಗೂಳಿಹಟ್ಟಿ ಶೇಖರ್‌ರವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದ ಅವರು, 2018ರಲ್ಲಿ ಬಿಜೆಪಿ ಸೇರಿ ಶಾಸಕರಾಗಿದ್ದರು. ಈ ಬಾರಿ ಅವರಿಗೆ ಬಿಜೆಪಿ ಟಿಕೆಟ್ ಸಿಗದ ಕಾರಣ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿಕ್ಕನಾಯಕನಹಳ್ಳಿ: ಜೆ.ಸಿ ಮಾಧುಸ್ವಾಮಿಯವರಿಗೆ ನಡುಕ ಹುಟ್ಟಿಸಿರುವ ಎದುರಾಳಿಗಳು

ಲಿಂಗಾಯಿತ ಸಮುದಾಯದ ಎಸ್.ಲಿಂಗಮೂರ್ತಿಯವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಇವರು ಯಡಿಯೂರಪ್ಪ ಬಣದವರಾಗಿದ್ದಾರೆ. ಕುರುಬ ಸಮುದಾಯದ ಬಿ.ಜಿ.ಗೋವಿಂದಪ್ಪನವರಿಗೆ ಮತ್ತೆ ಕಾಂಗ್ರೆಸ್ ಟಿಕೆಟ್ ಲಭಿಸಿದೆ. ಲಿಂಗಾಯಿತ ಸಮುದಾಯದ ತಿಪ್ಪೇಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಪರಿಶಿಷ್ಟ ಜಾತಿಯ ಗೂಳಿಹಟ್ಟಿ ಶೇಖರ್ ಪಕ್ಷೇತರವಾಗಿ ಕಣಕ್ಕಿಳಿಯುತ್ತಿದ್ದಾರೆ.

ಗೂಳಿಹಟ್ಟಿ ಶೇಖರ್‌, ಎಸ್.ಲಿಂಗಮೂರ್ತಿ,ಬಿ.ಜಿ.ಗೋವಿಂದಪ್ಪ

ಗೂಳಿಹಟ್ಟಿ ಶೇಖರ್ ಪಕ್ಷೇತರ ಅಭ್ಯರ್ಥಿಯಾಗಿದ್ದರೂ ಅವರ ಗುರಿ ಬಿಜೆಪಿ ಅಭ್ಯರ್ಥಿ ಸೋಲಿಸುವುದಾಗಿದೆ. ಹಾಗಾಗಿ ಅವರು ಕಾಂಗ್ರೆಸ್ ಅಭ್ಯರ್ಥಿಯ ಪರ ಹೇಳಿಕೆ ನೀಡುತ್ತಿದ್ದಾರೆ. ಲಿಂಗಾಯಿತ ಸಮುದಾಯದ ಮತ ವಿಭಜನೆ, ಬಿಜೆಪಿಯ ಬಂಡಾಯ ಎಲ್ಲವೂ ಕಾಂಗ್ರೆಸ್‌ಗೆ ವರವಾಗುವ ಲಕ್ಷಣಗಳು ಗೋಚಿಸುತ್ತಿವೆ.

ಅಂದಾಜು ಒಟ್ಟು ಮತದಾರರು: 1,90,000. ಪರಿಶಿಷ್ಟ ಜಾತಿ: 40,000, ಪ.ಪಂ: 16,000, ಮುಸ್ಲಿಂ: 13,000.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ (ಪರಿಶಿಷ್ಟ ಜಾತಿ ಮೀಸಲು)

2008ರಿಂದ ಇದು ಪರಿಶಿಷ್ಟ ಜಾತಿ ವಿಧಾನಸಭಾ ಕ್ಷೇತ್ರವಾಗಿದೆ. 2008ರಲ್ಲಿ ಬಿಜೆಪಿಯ ಎಂ.ಚಂದ್ರಪ್ಪನವರು ಜಯ ಗಳಿಸಿದ್ದರು. 2013ರಲ್ಲಿ ಅವರನ್ನು ಕಾಂಗ್ರೆಸ್‌ನ ಹೆಚ್.ಆಂಜನೇಯರವರು ಮಣಿಸಿ ಸಚಿವರೂ ಆಗಿದ್ದರು. 2018ರಲ್ಲಿ ಮತ್ತೆ ಬಿಜೆಪಿಯ ಎಂ.ಚಂದ್ರಪ್ಪನವರು ಗೆಲುವು ಸಾಧಿಸಿದ್ದಾರೆ. ಆದರೆ ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿಲ್ಲವೆಂಬ ಆರೋಪದ ಜೊತೆಗೆ ಆಡಳಿತ ವಿರೋಧಿ ಅಲೆ ಎದ್ದಿದೆ.

ಈ ಬಾರಿಯೂ ಬಿಜೆಪಿಯಿಂದ ಪರಿಶಿಷ್ಟ ಜಾತಿ ಬೋವಿ ಸಮುದಾಯದ ಎಂ.ಚಂದ್ರಪ್ಪ, ಕಾಂಗ್ರೆಸ್‌ನಿಂದ ದಲಿತ ಎಡ ಸಮುದಾಯದ ಹೆಚ್.ಆಂಜನೇಯ ಮತ್ತು ಜೆಡಿಎಸ್‌ನಿಂದ ಲಂಬಾಣಿ ಸಮುದಾಯದ ಇಂದ್ರಜೀತ್ ನಾಯ್ಕ್ ಕಣಕ್ಕಿಳಿದಿದ್ದಾರೆ.

ಎಂ.ಚಂದ್ರಪ್ಪ, ಹೆಚ್.ಆಂಜನೇಯ

ಬಿಜೆಪಿಯಿಂದ ಟಿಕೆಟ್ ವಂಚಿತ ಮಾಜಿ ತಾಲ್ಲೂಕು ಆರೋಗ್ಯ ಅಧಿಕಾರಿಯಾದ ಲಂಬಾಣಿ ಸಮುದಾಯದ ಜಯಸಿಂಹರವರು ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ. ಒಳ ಮೀಸಲಾತಿ ಕಾರಣಕ್ಕೆ ದಲಿತರಲ್ಲಿನ ಲಂಬಾಣಿ ಮತ್ತು ಬೋವಿ ಸಮುದಾಯ ಬಿಜೆಪಿ ಮೇಲೆ ಮುನಿಸಿಕೊಂಡಿದೆ. ಹಾಲಿ ಶಾಸಕರಿಗೆ ಆಡಳಿತ ವಿರೋಧಿ ಅಲೆ ಸಹ ಕಾಡುತ್ತಿದೆ. ಹಾಗಾಗಿ ಕಾಂಗ್ರೆಸ್‌ನ ಆಂಜನೇಯರವರಿಗೆ ಗೆಲುವಿನ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಒಟ್ಟು ಅಂದಾಜು ಮತಗಳು: 2,30,000; ಪರಿಶಿಷ್ಟ ಜಾತಿ: 64,000, ಲಿಂಗಾಯಿತ: 60,000, ಪರಿಶಿಷ್ಟ ಪಂಗಡ: 32,000, ಮುಸ್ಲಿಂ: 14,000, ಯಾದವ; 15,000.

ಚಳ್ಳಕೆರೆ (ಪರಿಶಿಷ್ಟ ಪಂಗಡ ಮೀಸಲು)

ಚಳ್ಳಕೆರೆ ಆರಂಭದಲ್ಲಿ ಪ.ಜಾ ಮೀಸಲು ದ್ವಿಸದಸ್ಯ ಕ್ಷೇತ್ರವಾಗಿತ್ತು. 1962ರಿಂದ 2008ರವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದು, 2008ರಿಂದ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿದೆ.

ಒಟ್ಟು 2,15,000 ಮತದಾರರಿದ್ದು, ಪರಿಶಿಷ್ಟ ಪಂಗಡದ 52,000, ಪ.ಜಾತಿಯ 52,000 ಮತ್ತು ಮುಸ್ಲಿಂ ಸಮುದಾಯದ 12,000 ಮತಗಳಿವೆ.

2008ರಲ್ಲಿ ಬಿಜೆಪಿಯಿಂದ ತಿಪ್ಪೆಸ್ವಾಮಿ ಗೆದ್ದು ಶಾಸಕರಾಗಿದ್ದರು. ಆದರೆ 2013ರಲ್ಲಿ ಕಾಂಗ್ರೆಸ್ ಪಕ್ಷದ ಟಿ.ರಘುಮೂರ್ತಿ ಆಯ್ಕೆಯಾದರು. 2018ರಲ್ಲಿಯೂ ಅವರು ಪುನರಾಯ್ಕೆಯಾದರು. ಆಗ ಜೆಡಿಎಸ್ ಎರಡನೇ ಸ್ಥಾನ ಪಡೆದರೆ, ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು.

ರವೀಶ್‌ಕುಮಾರ್, ಟಿ.ರಘುಮೂರ್ತಿ, ಅನಿಲ್ ಕುಮಾರ್.ಆರ್

ಈ ಚುನಾವಣೆಗೆ ಕಾಂಗ್ರೆಸ್ ಹಾಲಿ ಶಾಸಕ ಟಿ.ರಘುಮೂರ್ತಿಯವರಿಗೆ ಮಣೆ ಹಾಕಿದೆ. ನಿವೃತ್ತ ಉಪ ವಿಭಾಗಾಧಿಕಾರಿ ಅನಿಲ್ ಕುಮಾರ್.ಆರ್ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಕಳೆದ ಬಾರಿ ಸೋಲು ಕಂಡಿದ್ದ ರವೀಶ್‌ಕುಮಾರ್ ಮತ್ತೆ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ಈ ಬಾರಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ನೇರ ಪೈಪೋಟಿ ಕಂಡುಬರುತ್ತಿದೆ. ನೆಲೆಯಿಲ್ಲದ ಬಿಜೆಪಿಗೆ ಮೂರನೇ ಸ್ಥಾನವೇ ಗತಿ ಎಂದು ಹೇಳಲಾಗುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...