Homeಕರ್ನಾಟಕಬಬಲೇಶ್ವರ ಬಿಜೆಪಿ ಅಭ್ಯರ್ಥಿಯ ಮಗನಿಂದ ಗುಂಡು ಹಾರಿಸಿ ಸಂಭ್ರಮಾಚರಣೆ; ಗೂಂಡಾ ಅಭ್ಯರ್ಥಿ ಎಂದ ಕಾಂಗ್ರೆಸ್

ಬಬಲೇಶ್ವರ ಬಿಜೆಪಿ ಅಭ್ಯರ್ಥಿಯ ಮಗನಿಂದ ಗುಂಡು ಹಾರಿಸಿ ಸಂಭ್ರಮಾಚರಣೆ; ಗೂಂಡಾ ಅಭ್ಯರ್ಥಿ ಎಂದ ಕಾಂಗ್ರೆಸ್

- Advertisement -
- Advertisement -

ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಯಾದ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ಬಬಲೇಶ್ವರ ಕ್ಷೇತ್ರದಲ್ಲಿ ವಿಜುಗೌಡ ಪಾಟೀಲ ಅವರಿಗೆ ಟಿಕೆಟ್‌ ನೀಡಲಾಯಿತು. ಈ ವೇಳೆ ಅವರ ಪುತ್ರ ಸಮರ್ಥ ಗೌಡ ಗಾಳಿಯಲ್ಲಿ ಗುಂಡುಹಾರಿಸಿ ಸಂಭ್ರಮಿಸಿರುವ ವಿಡಿಯೊ ದೃಶ್ಯಗಳನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಬಿಡುಗಡೆ ಮಾಡಿದೆ.

ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ನಡೆಸಿ, ವಿಡಿಯೊ ದೃಶ್ಯಗಳನ್ನು ಬಿಡುಗಡೆ ಮಾಡಿದ್ದಾರೆ. ಕೆಪಿಸಿಸಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಮಾತನಾಡಿದ್ದು, ”ಟಿಕೆಟ್ ಸಿಕ್ಕಿರುವುದಕ್ಕೆ ಗುಂಡು ಹಾರಿಸಿ ಸಂಭ್ರಮಿಸಿರುವ ಬಿಜೆಪಿ ಅಭ್ಯರ್ಥಿ ವಿಜುಗೌಡ ಮತ್ತು ಅವರ ಪುತ್ರ ಸಮರ್ಥಗೌಡ ವಿರುದ್ದ ರಾಜ್ಯ ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಒಬ್ಬ ಗೂಂಡಾ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ತನ್ನ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ ಎಂದು ಅವರು ಆರೋಪ ಮಾಡಿದ್ದಾರೆ.

”ಬಿಜೆಪಿ, ಆರ್‌ಎಸ್‌ಎಸ್‌ನವರು ಯಾವಾಗಲೂ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಮಾತನಾಡುತ್ತಾರೆ, ಇದಕ್ಕೆ ಸೂಕ್ತ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು. ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ತೆರೆಯ ಮುಂದೆ ಮತದಾರರ ಕಾಲಿಗೆ ಬಿದ್ದು, ಮೊಸಳೆ ಕಣ್ಣೀರು ಸುರಿಸಿ ಮತಯಾಚನೆ ಮಾಡುತ್ತಿದ್ದಾರೆ, ತೆರೆಯ ಹಿಂದೆ ಗುಂಡು ಹಾರಿಸಿ ಸಂಭ್ರಮಿಸುತ್ತಿದ್ದಾರೆ” ಎಂದು ಟೀಕಿಸಿದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬಾಗಲಕೋಟೆ: ಚರಂತಿಮಠ ವಿರುದ್ಧ ತಿರುಗಿಬಿದ್ದ ಸಂಘ ಪರಿವಾರದ ನಾಯಕರು; ಸುಲಭವಾಗಲಿದೆಯೇ ಮೇಟಿಯವರ ಗೆಲುವು?

”ಬಿಜೆಪಿಯ ನೈತಿಕ ಅಧಃಪಥನಕ್ಕೆ ಬಿಜೆಪಿ ಅಭ್ಯರ್ಥಿಯ ಗೂಂಡಾ ವರ್ತನೆ ಸಾಕ್ಷಿಯಾಗಿದೆ. ಇವರಿಂದ ಕ್ಷೇತ್ರದ ಜನತೆಯ ಭವಿಷ್ಯ ಆತಂಕದಲ್ಲಿ ಇದೆ” ಎಂದು ಸಂಗಮೇಶ ಅವರು ಹೇಳಿದರು.

”ಗೂಂಡಾ ಸಂಸ್ಕೃತಿಯ ವ್ಯಕ್ತಿ ವಿಜುಗೌಡ ಅವರಿಗೆ ಟಿಕೆಟ್ ನೀಡಲು ಮುಂಚೂಣಿಯಲ್ಲಿ ಶಿಫಾರಸು ಮಾಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿ.ಎಲ್. ಸಂತೋಷ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ತಮ್ಮ ಅಭ್ಯರ್ಥಿಯ ಈ ಕೃತ್ಯದ ಬಗ್ಗೆ ಉತ್ತರಿಸಬೇಕು” ಎಂದು ಆಗ್ರಹಿಸಿದರು.

”ಬಿಜೆಪಿ ಎಷ್ಟೇ ಗೂಂಡಾ ಸಂಸ್ಕೃತಿ ಪ್ರದರ್ಶಿದರೂ ಎಂ.ಬಿ.ಪಾಟೀಲ ಈ ಬಾರಿ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

”ಬಬಲೇಶ್ವರ ಬಿಹಾರ ಆಗಬಾರದು, ಜಂಗಲ್ ರಾಜ್ ಆಗದಂತೆ ತಡೆಯಲು ಮತದಾರರು ಈ ಚುನಾವಣೆಯಲ್ಲಿ ಸುಸಂಸ್ಕೃತ, ಸಭ್ಯ ಹಾಗೂ ಅಭಿವೃದ್ಧಿಯ ಹರಿಹಾರ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ.ಪಾಟೀಲರನ್ನು ಬೆಂಬಲಿಸಬೇಕು” ಎಂದು ಈ ವೇಳೆ ಮನವಿ ಮಾಡಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -