Homeಕರ್ನಾಟಕಪಿರಿಯಾಪಟ್ಟಣ ಕ್ಷೇತ್ರ ಸಮೀಕ್ಷೆ: ಗುರು-ಶಿಷ್ಯರ ಕಾಳಗದಲ್ಲಿ ಗದ್ದುಗೆ ಯಾರಿಗೆ?

ಪಿರಿಯಾಪಟ್ಟಣ ಕ್ಷೇತ್ರ ಸಮೀಕ್ಷೆ: ಗುರು-ಶಿಷ್ಯರ ಕಾಳಗದಲ್ಲಿ ಗದ್ದುಗೆ ಯಾರಿಗೆ?

ಕಾಂಗ್ರೆಸ್ಸಿನ ಕೆ.ವೆಂಕಟೇಶ್ ಸಜ್ಜನಿಕೆಗೆ ಹೆಸರಾದರೆ, ಜೆಡಿಎಸ್ಸಿನ ಕೆ.ಮಹದೇವ್ ಲೂಸ್ ಟಾಕ್ ಗಳಿಂದಾಗಿ ಚರ್ಚೆಯಲ್ಲಿದ್ದಾರೆ

- Advertisement -
- Advertisement -

ರಾಜ್ಯ ರಾಜಕಾರಣದ ಪ್ರಮುಖ ಪಲ್ಲಟಗಳನ್ನು ಗುರುತಿಸುವುದಾದರೆ, ಸಿದ್ದರಾಮಯ್ಯನವರು ಜೆಡಿಎಸ್ ಸಖ್ಯ ಕಳಚಿಕೊಂಡು ಕಾಂಗ್ರೆಸ್ ಸೇರಿದ ಸಮಯವನ್ನು ಉಲ್ಲೇಖಿಸದೆ ಇರಲಾಗದು. 2006 ನಂತರದಲ್ಲಿ ಸಿದ್ದರಾಮಯ್ಯನವರ ರಾಜಕಾರಣದ ವರ್ಚಸ್ಸು ಏರಿಕೆಯಾಯಿತು. ಜನತಾ ಪರಿವಾರದಲ್ಲಿ ರಾಜಕೀಯ ಪಟ್ಟುಗಳನ್ನು ಕಲಿತು, ಜೆಡಿಎಸ್ಸಿನಿಂದ ಹೊರ ಬಂದ ಸಿದ್ದರಾಮಯ್ಯನವರು, ಒಂದಿಷ್ಟು ರಾಜಕೀಯ ಧುರೀಣರನ್ನು ಕಾಂಗ್ರೆಸ್ಸಿಗೆ ಕರೆತಂದರು. ಅಂಥವರಲ್ಲಿ ಪಿರಿಯಾಪಟ್ಟಣವನ್ನು ಪ್ರತಿನಿಧಿಸುತ್ತಿದ್ದ ಕೆ.ವೆಂಕಟೇಶ್ ಒಬ್ಬರು.

ಸಿದ್ದರಾಮಯ್ಯನವರನ್ನು ಹಿಂಬಾಲಿಸಿ ಬಂದ ಕೆ.ವೆಂಕಟೇಶ್ ಐದು ಬಾರಿ ಶಾಸಕರಾಗಿ ಆಯ್ಕೆಯಾದವರು. ಕಾಂಗ್ರೆಸ್ಸಿಗೆ ಸೇರಿದ ಬಳಿಕವೂ ಎರಡು ಬಾರಿ ಸತತ ಗೆದ್ದು ಒಂದು ಸಲ ಸೋಲು ಕಂಡವರು. ಹಿರಿಯ ರಾಜಕಾರಣಿ ವೆಂಕಟೇಶ್, ಕಾಂಗ್ರೆಸ್ಸಿಗೆ ಸೇರಿಕೊಂಡಾಗ ಅವರ ಶಿಷ್ಯ ಕೆ.ಮಹದೇವ್ ಜೆಡಿಎಸ್ಸಿನಲ್ಲಿಯೇ ಉಳಿದರು. ವೆಂಕಟೇಶ್ ಶಾಸಕರಾಗಿದ್ದ ಅವಧಿಯಲ್ಲಿ ಮಹದೇವ್ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿದ್ದರು. ಗುರು-ಶಿಷ್ಯರೆಂದೇ ಇಬ್ಬರನ್ನು ಕ್ಷೇತ್ರದಲ್ಲಿ ಗುರುತಿಸಲಾಗಿತ್ತು. ಯಾವಾಗ ವೆಂಕಟೇಶ್ ಅವರು ಜೆಡಿಎಸ್ಸಿಗೆ ಗುಡ್ ಬೈ ಹೇಳಿದರೋ, ಆಗ ಅವರ ಸ್ಥಾನದಲ್ಲಿ ಮಹದೇವ್ ಬಂದು ಕುಳಿತರು. ಪಕ್ಷದಲ್ಲಿ ಗುರುತಿಸಿಕೊಂಡ ಅವರಿಗೆ ಜೆಡಿಎಸ್ ವರಿಷ್ಠರು ಟಿಕೆಟ್ ಕೂಡ ನೀಡಿದರು. ಆದರೆ 2008 ಮತ್ತು 2013ರ ಚುನಾವಣೆಗಳೆರಡರಲ್ಲೂ ಮಹದೇವ್ ಅವರು ತಮ್ಮ ಗುರುವನ್ನು ಮಣಿಸಲು ಸಾಧ್ಯವಾಗಲಿಲ್ಲ. ಗೆಲುವಿನ ಸಮೀಪಕ್ಕೆ ಬಂದು ಎರಡು ಸಲವೂ ಮುಗ್ಗರಿಸಿದರು. 2018ರ ವೇಳೆಗೆ ಹತಾಷರಾಗಿದ್ದ ಅವರು ಮತ್ತೊಮ್ಮೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾದರು. “ಎರಡು ಸಲ ಸೋತಿದ್ದೇನೆ, ಈ ಬಾರಿಯೂ ಸೋತರೆ ವಿಷ ಕುಡಿಯಬೇಕಾಗುತ್ತದೆ’’ ಎಂದು ಭಾವುಕವಾಗಿ ನುಡಿದರು. ಅಂದಿನ ಸನ್ನಿವೇಶಗಳ ಜೊತೆಗೆ ಮತದಾರರಲ್ಲಿ ಮೂಡಿದ್ದ ಅನುಕಂಪ ಮಹದೇವ್ ಅವರಿಗೆ ವರದಾನವಾಯಿತು. ಹೀಗಾಗಿ 7,493 ಮತಗಳ ಅಂತರದಲ್ಲಿ ಗೆದ್ದರು. ಪಿರಿಯಾಪಟ್ಟಣದಲ್ಲಿ ತೆನೆಹೊತ್ತ ಮಹಿಳೆ ಮತ್ತೆ ಮರುಜೀವ ಪಡೆದಳು.

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರವು ಮೊದಲಿನಿಂದಲೂ ಜೆಡಿಎಸ್- ಕಾಂಗ್ರೆಸ್ಸಿನ ರಣಕಣ. ತಂಬಾಕು ಬೆಳೆಯೇ ಇಲ್ಲಿನ ಜನತೆಯ ಆದಾಯದ ಮೂಲ. ಕೊಡಗು ಜಿಲ್ಲೆಯ ಗಡಿಯವರೆಗೆ ಹಬ್ಬಿರುವ ಪಿರಿಯಾಪಟ್ಟಣಕ್ಕೆ `ಶಕ್ತಿ ದೇವತೆಗಳ ನಾಡು’ ಎಂಬ ಬಿರುದೂ ಇದೆ. ಟಿಬೆಟಿಯನ್ ಕ್ಯಾಂಪ್ ಇರುವ ಬೈಲುಕುಪ್ಪೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಟ್ಟಿದೆ. ಕಾಡಂಚಿನ ಗ್ರಾಮಗಳಲ್ಲಿ ಆದಿವಾಸಿಗಳಿದ್ದಾರೆ. ಹೀಗೆ ಹಲವು ವಿಶಿಷ್ಟಗಳಿಗೆ ಹೆಸರಾಗಿರುವ ಪಿರಿಯಾಪಟ್ಟಣದಲ್ಲಿ ಒಕ್ಕಲಿಗರ ಅಭ್ಯರ್ಥಿಗಳು ಪ್ರಾಬಲ್ಯ ಹೊಂದಿದ್ದಾರೆ. ಆದರೆ ಉಳಿದ ಸಮುದಾಯಗಳ ಮತಗಳು ಇವರ ಭವಿಷ್ಯವನ್ನು ನಿರ್ಧಾರ ಮಾಡುತ್ತವೆ.

ಜಾತಿ ಸಮೀಕರಣವೇ ಈ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿನ ಗುಟ್ಟು. ಒಂದು ಅಂದಾಜಿನ ಪ್ರಕಾರ ಒಕ್ಕಲಿಗರು 45,000, ಕುರುಬರು 39,000, ಉಪ್ಪಾರರು 16,000, ಪರಿಶಿಷ್ಟ ಜಾತಿ 25,000, ಪರಿಶಿಷ್ಟ ಪಂಗಡ 14,000, ಲಿಂಗಾಯತರು 12000, ಅಲ್ಪಸಂಖ್ಯಾತರು 14,000, ಇತರೆ ಸಮುದಾಯಗಳ 30,000 ಮತದಾರರಿದ್ದಾರೆಂದು ಹೇಳಲಾಗುತ್ತಿದೆ. ಈ ಬಾರಿ ಕುರುಬ ಸಮುದಾಯದ ಮುಖಂಡ, ಮಾಜಿ ಸಂಸದ, ಮಾಜಿ ಶಾಸಕ ಸಿ.ಎಚ್.ವಿಜಯಶಂಕರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದರಿಂದ ಜಾತಿ ಸಮೀಕರಣದ ಲೆಕ್ಕಾಚಾರ ಬಿರುಸಾಗುತ್ತಿದೆ.

ಸಿ.ಎಚ್.ವಿಜಯಶಂಕರ್ ಪಕ್ಕದ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆ ಬಿಜೆಪಿ ಶಾಸಕರಾಗಿದ್ದವರು. ಹುಣಸೂರಿನಲ್ಲಿ ಬಿಜೆಪಿಯ ಖಾತೆ ತೆರೆದ ಶ್ರೇಯಸ್ಸು ಅವರಿಗಿದೆ. ಅಯೋಧ್ಯೆ ವಿವಾದ ಉತ್ತುಂಗದಲ್ಲಿದ್ದ ಅವಧಿಯಲ್ಲಿ ಸಂಸದರಾಗಿಯೂ ಮೈಸೂರಿನಿಂದ ಆಯ್ಕೆಯಾಗಿದ್ದರು. ಪಿರಿಯಾಪಟ್ಟಣವನ್ನೂ ಬಲ್ಲವರಾಗಿದ್ದಾರೆ.

ಮೂಲತಃ ಹಾವೇರಿ ಜಿಲ್ಲೆಯವರಾದ ವಿಜಯ ಶಂಕರ್, ಹುಣಸೂರಿನಲ್ಲಿ ಸಬ್ ಇನ್ ಸ್ಪೆಕ್ಟರ್ ಆಗಿದ್ದ ತಮ್ಮ ಭಾವ ತೀರಿಕೊಂಡಾಗ ಅಕ್ಕನ ಸಂಸಾರಕ್ಕೆ ನೆರವಾಗಲು ವಲಸೆ ಬಂದವರು. ಆರಂಭದಲ್ಲಿ ಸೀಮೆಂಟ್ ಅಂಗಡಿ ನಡೆಸುತ್ತಾ, ಕಾಂಗ್ರೆಸ್ಸಿನಲ್ಲಿ ಗುರುತಿಸಿಕೊಂಡರು. ಬಳಿಕ ಬಿಜೆಪಿಗೆ ಸೇರಿಕೊಂಡರು. ಹುಣಸೂರು ಕ್ಷೇತ್ರದಲ್ಲಿ ಎರಡನೇ ಪ್ರಯತ್ನದಲ್ಲಿ ಗೆದ್ದಿದ್ದರು. 1998ರಲ್ಲಿ, ವಾಜಪೇಯಿ ಅಲೆಯ ಕಾರಣ ಸಂಸದರೂ ಆಗಿದ್ದರು. 2009ರಲ್ಲಿ ಎ.ಎಚ್.ವಿಶ್ವನಾಥ್ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಇವರನ್ನು ಎಂ.ಎಲ್.ಸಿ. ಮಾಡಿ, ಸಣ್ಣ ಕೈಗಾರಿಕೆ ಮತ್ತು ಅರಣ್ಯ ಖಾತೆಯನ್ನೂ ನೀಡಿತ್ತು. 2019ರ ವೇಳೆಗೆ ಕಾಂಗ್ರೆಸ್ಸಿಗೆ ಬಂದಿದ್ದ ಇವರಿಗೆ ಲೋಕಸಭಾ ಚುನಾವಣೆ ವೇಳೆ ಮೈಸೂರು- ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿತು. ಮತ್ತೆ ಸೋಲು ಕಂಡ ವಿಜಯಶಂಕರ್ ಬಿಜೆಪಿಗೆ ಮರಳಿದರು. ಈಗ ಪಿರಿಯಾಪಟ್ಟಣದಿಂದ ಟಿಕೆಟ್ ಪಡೆದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವಿಜಯಶಂಕರ್ ಅವರನ್ನು ಜೆಡಿಎಸ್ಸಿನ ಅಭ್ಯರ್ಥಿ ಮಹದೇವ್ ಅವರೇ, ಒಳಕಾರಣ ಮಾಡಿ ಇಲ್ಲಿಗೆ ಕರೆತಂದಿದ್ದಾರೆಂಬ ಗುಮಾನಿಗಳು ವ್ಯಕ್ತವಾದವು. ಯಾಕೆಂದರೆ ಇಲ್ಲಿ ಕುರುಬರ ಮತಗಳನ್ನು ಒಡೆದರೆ ಗೆಲುವು ಸುಲಭ ಎಂಬ ಲೆಕ್ಕಾಚಾರದಲ್ಲಿ ಮಹದೇವ್ ಇದ್ದಾರೆಂದು ಶಂಕಿಸಲಾಗಿತ್ತು. ಆದರೆ ವಿಜಯಶಂಕರ್ ಒಂದಿಷ್ಟು ಸಜ್ಜನಿಕೆಯನ್ನು ಉಳಿಸಿಕೊಂಡಿದ್ದಾರೆ. ಕೊನೆಕ್ಷಣದಲ್ಲಿ ಕ್ಷೇತ್ರಕ್ಕೆ ಬಂದರೂ ಬಿರುಸಿನ ಸಂಚಾರ ನಡೆಸಿದ್ದಾರೆ. ಇಲ್ಲಿ ಇನ್ನೊಬ್ಬರ ಗೆಲುವಿಗೆ ಕಾರಣವಾಗಬೇಕೆಂಬುದಕ್ಕಿಂತ ತಾನೇ ಗೆಲ್ಲಬೇಕೆಂಬ ಹಠದಲ್ಲಿ ವಿಜಯಶಂಕರ್ ಇದ್ದಾರೆ. ಆದರೆ ಈ ಕ್ಷೇತ್ರದ ಇತಿಹಾಸ ಮತ್ತು ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಕಾಂಗ್ರೆಸ್ ಮತ್ತು ಜಾ.ದಳ ನಡುವೆಯಷ್ಟೇ ಪ್ರಬಲ ಕದನ ಏರ್ಪಡುವುದು ಸ್ಪಷ್ಟವಾಗುತ್ತಿದೆ.

ಈವರೆಗಿನ ಚುನಾವಣೆಗಳ ಪೈಕಿ ಒಂದು ಭಾರಿ ಮಾತ್ರ ಇಲ್ಲಿ ಬಿಜೆಪಿ ಖಾತೆ ತೆರೆದಿದೆ. ಸಂಕ್ಷಿಪ್ತವಾಗಿ ಚುನಾವಣಾ ಇತಿಹಾಸವನ್ನು ನೋಡುವುದಾದರೆ 1957ರಲ್ಲಿ ಕಾಂಗ್ರೆಸ್ಸಿನ ಎನ್.ಆರ್.ಸೋಮಣ್ಣ, 1962ರಲ್ಲಿ ಕಾಂಗ್ರೆಸ್ಸಿನ ಕೆ.ಎಂ.ದೇವಪ್ಪ, 1967ರಲ್ಲಿ ಪಕ್ಷೇತರ ಅಭ್ಯರ್ಥಿ ಎಚ್.ಎಂ.ಚೆನ್ನಬಸವಪ್ಪ, 1972ರಲ್ಲಿ ಕಾಂಗ್ರೆಸ್ಸಿಗೆ ಬಂದು ಸ್ಪರ್ಧಿಸಿದ ಎಚ್.ಎಂ.ಚನ್ನಬಸಪ್ಪ, 1978 ಮತ್ತು 1983ರಲ್ಲಿ ಜನತಾ ಪಾರ್ಟಿಯ ಕೆ.ಎಸ್.ಕಾಳಮರಿಗೌಡ ಗೆದ್ದಿದ್ದರು.

1985ರಲ್ಲಿ ಕೆ.ವೆಂಕಟೇಶ್ ಅವರ ಪ್ರವೇಶ ಕ್ಷೇತ್ರಕ್ಕೆ ಆಯಿತು. ಜನತಾ ಪಾರ್ಟಿ ಅವರಿಗೆ ಟಿಕೆಟ್ ನೀಡಿತು. ವೆಂಕಟೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಎಲ್.ಆನಂದ್ ಅವರನ್ನು 9,813 ಮತಗಳ ಅಂತರದಲ್ಲಿ ಮಣಿಸಿದರು. 1989ರಲ್ಲಿ ಕಾಳಮರಿಗೌಡರು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದರು. ಜನತಾ ದಳದಿಂದ ಸ್ಪರ್ಧಿಸಿದ್ದ  ಎಸ್.ಎಂ.ಅನಂತರಾಮು ಭಾರೀ ಅಂತರದಲ್ಲಿ ಸೋತರು. 1994ರಲ್ಲಿ ವೆಂಕಟೇಶ್ ಅವರಿಗೆ ಮತ್ತೆ ಜನತಾ ದಳ ಟಿಕೆಟ್ ನೀಡಿತು. ಕಾಂಗ್ರೆಸ್ಸಿನ ಕಾಳಮರಿಗೌಡರಿಗೆ 18,785 ಮತಗಳ ಅಂತರದಲ್ಲಿ ಸೋಲುಣಿಸಿ ಎರಡನೇ ಬಾರಿ ಗೆಲುವು ಸಾಧಿಸಿದರು. 1999ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಖಾತೆ ತೆರೆಯಿತು. ಎಚ್.ಸಿ.ಬಸವರಾಜು ಅವರು ಕಾಂಗ್ರೆಸ್ ಅಭ್ಯರ್ಥಿ ಕಾಳಮರಿಗೌಡರಿಗೆ ಪೈಪೋಟಿ ನೀಡಿ, 3079 ಮತಗಳ ಅಂತರದಲ್ಲಿ ಗೆಲುವು ಪಡೆದರು. 2004ರಲ್ಲಿ ವೆಂಕಟೇಶ್ ಮತ್ತೆ ತಮ್ಮ ಹಿಡಿತಕ್ಕೆ ಕ್ಷೇತ್ರವನ್ನು ಪಡೆದರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಅವರು ಕಾಂಗ್ರೆಸ್ಸಿನ ಕೆ.ಚಂದ್ರೇಗೌಡರಿಗೆ 8985 ಮತಗಳಂತರದಲ್ಲಿ ಸೋಲುಣಿಸಿದರು.

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿನ ಈವರೆಗಿನ ಚುನಾವಣೆಗಳು ಮತ್ತು ಫಲಿತಾಂಶಗಳು

ಸಿದ್ದರಾಮಯ್ಯನವರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ವೆಂಕಟೇಶ್ ಅವರಿಗೆ 2008ರಲ್ಲಿ ಪ್ರತಿಸ್ಪರ್ಧಿಯಾಗಿದ್ದು ತಮ್ಮ ಶಿಷ್ಯನೇ ಆದ ಕೆ.ಮಹದೇವ್. ಒಕ್ಕಲಿಗ ಸಮುದಾಯದ ಈ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟು ವೆಂಕಟೇಶ್ ಕೇವಲ 879 ಮತಗಳ ಅಂತರದಲ್ಲಿ ಪ್ರಾಯಾಸದ ಗೆಲುವು ಪಡೆದುಕೊಂಡರು. 2013ರಲ್ಲೂ ಗುರು- ಶಿಷ್ಯರ ಕಾಳಗ ಏರ್ಪಟ್ಟಿತು. ಆ ಚುನಾವಣೆಯಲ್ಲೂ ವೆಂಕಟೇಶ್ ಅವರ ಗೆಲುವಿನ ಅಂತರ ದೊಡ್ಡ ಮಟ್ಟದಲ್ಲೇನೂ ಇರಲಿಲ್ಲ. ಕೇವಲ 2,088 ಮತದಂತರದಲ್ಲಿ ವೆಂಕಟೇಶ್ ಗೆದ್ದರು. ಎರಡು ಸಲ ಸೋತಿದ್ದ ಮಹದೇವ್ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದರು. ಮತದಾರರ ಮುಂದೆ ಅಸಹಾಯಕತೆ ತೋಡಿಕೊಂಡರು. ಅನುಕಂಪ ವರ್ಕೌಟ್ ಆಯಿತು. 7,493 ಮತಗಳ ಅಂತರದಲ್ಲಿ ಮಹದೇವ್ ಮೊದಲ ಸಲ ಗೆದ್ದರು. ಈಗ ಮತ್ತೆ ಜೆಡಿಎಸ್ಸಿನಿಂದ ಹುರಿಯಾಳಾಗಿದ್ದಾರೆ.

2018ರ ಚುನಾವಣೆಯಲ್ಲಿ ವೆಂಕಟೇಶ್ ಸೋಲಲು ಕಾರಣವಾದ ಅಂಶಗಳೇನು?

ಕೆ.ಮಹದೇವ್ ಮೇಲಿನ ಅನುಕಂಪ ಒಂದು ಕಡೆಯಾದರೆ, ಕೆಲವು ಒಳರಾಜಕಾರಣಗಳು ವೆಂಕಟೇಶ್ ಸೋಲಿಗೆ ಕಾರಣವಾದವು ಎನ್ನುತ್ತಾರೆ ಕ್ಷೇತ್ರವನ್ನು ಬಲ್ಲವರು.

2018ರಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾಗಿದ್ದ ಮಂಜುನಾಥ್ ಕೊನೆಕ್ಷಣದಲ್ಲಿ ಚುನಾವಣಾ ಕಣದಲ್ಲಿ ನಿಷ್ಕ್ರಿಯರಾದರು. ಮಧ್ಯರಾತ್ರಿಯೇ ಜಾಗ ಖಾಲಿ ಮಾಡಿದರು. ಬಿಜೆಪಿ ಮತ್ತು ಜೆಡಿಎಸ್ ನಡುವೆ ಮಾತುಕತೆಗಳು ನಡೆದಿದ್ದವು ಎಂದು ಊಹಿಸಲಾಗುತ್ತದೆ. ಕ್ಯಾಂಡಿಟೇಟ್ ಸರಿ ಇಲ್ಲ  ಎಂಬ ಕಾರಣಕ್ಕೆ ಬಿಜೆಪಿಯ ಸಾಂಪ್ರದಾಯಿಕ ಮತಗಳು ಜೆಡಿಎಸ್ಸಿಗೆ ಬೋನಸ್ ಆಗಿ ಬಂದವು. ಬಿಎಸ್ಪಿ ಮತ್ತು ಜೆಡಿಎಸ್ ನಡುವೆ ಚುನಾವಣಾ ಪೂರ್ವದಲ್ಲಿಯೇ ಒಪ್ಪಂದವಾಗಿದ್ದರಿಂದ ಬಿಎಸ್ಪಿ ಅಭ್ಯರ್ಥಿ ಕಣದಲ್ಲಿ ಇರಲಿಲ್ಲ.

ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಸರ್ಕಾರದ ಮೇಲೆ ಲಿಂಗಾಯತರ ಸಿಟ್ಟಿತ್ತು. ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಯ ಪ್ರಸ್ತಾಪ ವ್ಯತಿರಿಕ್ತ ಪರಿಣಾಮ ಬೀರಿತ್ತು. ದಲಿತ ನಾಯಕರಾದ ಡಾ.ಜಿ.ಪರಮೇಶ್ವರ್, ವಿ.ಶ್ರೀನಿವಾಸಪ್ರಸಾದ್ ಅವರಿಗೆ ಅನ್ಯಾಯವಾಗಿದೆ ಎಂಬ ಕೂಗು ಎದ್ದಿತ್ತು. ಈ ಎಲ್ಲ ಕಾರಣಗಳು ವೆಂಕಟೇಶ್ ಅವರ ಫಲಿತಾಂಶದ ಮೇಲೆ ಪ್ರಭಾವಿಸಿದವು. ಕಾರಣ ಸಿದ್ದರಾಮಯ್ಯನವರ ಆತ್ಮೀಯರಾಗಿರುವ ವ್ಯಕ್ತಿಗಳಲ್ಲಿ ವೆಂಕಟೇಶ್ ಒಬ್ಬರು. ಹೀಗಾಗಿ ಲಿಂಗಾಯತ, ದಲಿತ ಮತಗಳು ಒಂದಿಷ್ಟು ಚದುರಿ ಹೋಗಿ ಜೆಡಿಎಸ್ಸಿಗೆ ಅನುಕೂಲವಾದವು.

ವೆಂಕಟೇಶ್ ಅವರು ತಾವು ಕ್ಷೇತ್ರಕ್ಕೆ ಕಾಮಗಾರಿಗಳನ್ನು ತಂದರೂ ಅವುಗಳನ್ನು ಮುಗಿಸದೆ ಹಾಗೆಯೆ ಉಳಿಸಿಕೊಂಡಿದ್ದರು. ಮರು ಆಯ್ಕೆಯಾಗಿ, ಈ ಎಲ್ಲ ಕೆಲಸಗಳನ್ನು ಮಾಡುತ್ತೇನೆಂಬ ಅತೀವ ಆತ್ಮವಿಶ್ವಾಸ ಅವರಿಗಿತ್ತು. ಒಳಚರಂಡಿ ನಿರ್ಮಾಣ, 150 ಕೆರೆಗಳಿಗೆ ನೀರು ಹರಿಸುವ ಕಾರ್ಯ- ಪೂರ್ಣಗೊಳ್ಳದೆ ಉಳಿದವು. ಇವು ಕೂಡ ವೆಂಕಟೇಶ್ ಅವರ ಮೇಲೆ ಮತದಾರರು ಕೋಪಗೊಳ್ಳಲು ಕಾರಣವಾದವು.

ಕೆ.ಮಹದೇವ್ ಮರುಆಯ್ಕೆ ಆಗಬಲ್ಲರೇ?

2018ರಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು ಕೆ.ಮಹದೇವ್ ಅವರಿಗೆ ವರದಾನವಾಯಿತು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಿ.ಟಿ.ದೇವೇಗೌಡರೊಂದಿಗೆ ಸೇರಿಕೊಂಡು ಒಂದಿಷ್ಟು ಅನುದಾನವನ್ನು ಕ್ಷೇತ್ರಕ್ಕೆ ತಂದರು. ಆದರೆ ಭ್ರಷ್ಟಾಚಾರದ ವಾಸನೆ ಬಡಿಯಿತು. ಸರ್ಕಾರ ಬಿದ್ದು ಹೋದ ಮೇಲೆ ಅನುದಾನಕ್ಕೆ ಹಿನ್ನೆಡೆಯಾಯಿತು. ನೆರೆ ಪರಿಹಾರ ಸಮರ್ಪಕವಾಗಿ ದೊರಕಲಿಲ್ಲ. ಕೊರೊನಾ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ.

ಜಿ.ಟಿ.ದೇವೇಗೌಡರು ಜೆಡಿಎಸ್ಸಿನೊಂದಿಗೆ ಮುನಿಸು ಬೆಳೆಸಿಕೊಂಡಿದ್ದ ಮಹದೇವ್, ತಾವು ಕೂಡ ಜಿ.ಟಿ.ಡಿಯವರ ಹಿಂಬಾಲಕರಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಕೆ.ಮಹದೇವ್ ಪಕ್ಷದೊಂದಿಗೆ ಅಂತರ ಕಾಯ್ದುಕೊಂಡಿದ್ದರು ಎಂದು ಹೇಳಲಾಗುತ್ತದೆ. ಜಿ.ಟಿ.ದೇವೇಗೌಡರು ಪಕ್ಷ ಬಿಡುತ್ತಾರೆಂಬ ಚರ್ಚೆಗಳು ನಡೆಯುತ್ತಿದ್ದಾಗ ಮಹದೇವ್ ಜಿ.ಟಿ.ಡಿ. ಜೊತೆಯಲ್ಲಿದ್ದರು, ಆದರೆ ಬಹಿರಂಗವಾಗಿ ತೋರಿಸಿಕೊಳ್ಳಲಿಲ್ಲ ಎನ್ನಲಾಗುತ್ತದೆ. ಜಿಟಿಡಿಯವರು ಸಚಿವರಾಗಿದ್ದ  ಅವಧಿಯಲ್ಲಿ ಮಹದೇವ್ ಅವರಿಗೆ ಹೆಚ್ಚಿನ ಸಹಕಾರ ನೀಡಿದ್ದು ಇದಕ್ಕೆ ಕಾರಣವಾಗಿತ್ತು. ಜಿಟಿಡಿಯವರು ಜೆಡಿಎಸ್ಸಿನಿಂದ ಹೊರಬಂದಿದ್ದರೆ ಬಹುಶಃ ಮಹದೇವ್ ಕೂಡ ಪಕ್ಷ ತೊರೆಯುತ್ತಿದ್ದರೆಂದು ಕ್ಷೇತ್ರದ ಮತದಾರರು ಮಾತನಾಡಿಕೊಳ್ಳುತ್ತಾರೆ.

ಕ್ಷೇತ್ರದಲ್ಲಿ ಮಹದೇವ್ ಮೇಲಿರುವ ಸಿಟ್ಟೆಂದರೆ- ಇವರು ವಿವಾದಗಳ ಕೇಂದ್ರವಾಗಿಬಿಟ್ಟಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರು ಅಥವಾ ಹಿಂಬಾಲಕರಿಗಷ್ಟೇ ಮಣೆ ಹಾಕುತ್ತಾರೆ, ಬೇರೆಯವರು ಇರುವಲ್ಲಿ ತಲೆಹಾಕುವುದಿಲ್ಲ ಎಂಬ ಗಂಭೀರ ಆರೋಪ ಇವರ ಮೇಲಿದೆ. ಜೊತೆಗೆ ಅಧಿಕಾರಿಗಳೊಂದಿಗಿನ ವರ್ತನೆ ಸರಿಯಾಗಿಲ್ಲ. ನಾಲಿಗೆ ಕೆಡಿಸಿಕೊಂಡಿದ್ದಾರೆಂಬ ದೂರುಗಳಿವೆ. ಸರ್ವೇ ಇಲಾಖೆಯಲ್ಲಿ ಮಂಜುನಾಥ್ ಎಂಬ ಅಧಿಕಾರಿ ಇದ್ದರು. ಅವರಿಗೆ ಬೆದರಿಕೆ ಹಾಕಿದ್ದಾರೆಂಬ ಪ್ರಕರಣ ಸದ್ದು ಮಾಡಿತ್ತು. ವೈದ್ಯಾಧಿಕಾರಿಯಾಗಿದ್ದ ವೀಣಾ ಅವರೊಂದಿಗೆ ಜಗಳವನ್ನು ಮಹದೇವ್ ಮಾಡಿಕೊಂಡಿದ್ದರು. ಫೋನಿನಲ್ಲಿ ಮಾತನಾಡುವಾಗ ಅಶ್ಲೀಲ ಪದಗಳನ್ನು ಮಹದೇವ್ ಬಳಸುತ್ತಾರೆಂಬ ಟೀಕೆಗಳು ಕ್ಷೇತ್ರದಲ್ಲಿ ಸಹಜವಾಗಿವೆ.

ಜೆಡಿಎಸ್ಸಿನೊಳಗೂ  ಒಳ ಏಟುಗಳು ಇವೆ ಎನ್ನಲಾಗುತ್ತಿದೆ. ಜಿಟಿಡಿ ಪಕ್ಷ ತೊರೆದಿದ್ದರೆ ಮಹದೇವ್ ಕೂಡ ಹೊರಹೋಗುತ್ತಿದ್ದರೆಂಬ ಆಂತರಿಕ ಬೇಗುದಿ ಈಗಲೂ ಇದೆ. ವೈಯಕ್ತಿಕವಾಗಿ ಮಹದೇವ್ ಏನನ್ನೂ ಮಾಡಿಕೊಡಲಿಲ್ಲ ಎಂಬ ಬೇಸರ ಸ್ವಪಕ್ಷೀಯ ಮುಖಂಡರುಗಳಲ್ಲೂ ಇದೆ ಎನ್ನಲಾಗುತ್ತಿದೆ. ಸಣ್ಣಪುಟ್ಟ ಕೆಲಸಗಳಲ್ಲೂ ಶಾಸಕರು ಕೈ ಆಡಿಸುತ್ತಾರೆ, ಅವರ ಗಮನಕ್ಕೆ ಬಾರದೆ ಯಾವುದೇ ಫೈಲ್ ಮೂವ್ ಆಗುವಂತಿಲ್ಲ, ಸಣ್ಣ ಸೌಲಭ್ಯವೂ ಜನರಿಗೆ ಹೋಗುವ ಮುನ್ನ ಶಾಸಕರ ಕಣ್ಗಾವಲು ಇರುತ್ತದೆ. ಇದರಿಂದಾಗಿ ಜೆಡಿಎಸ್ ಮುಖಂಡರಲ್ಲೇ ಶಾಸಕರ ವರ್ತನೆ ಕುರಿತು ಆಕ್ಷೇಪಗಳಿವೆ.

ವೆಂಕಟೇಶ್ ಸಜ್ಜನಿಕೆ ಮತ್ತು ಸದ್ಯದ ಪರಿಸ್ಥಿತಿ

ಕೆ.ವೆಂಕಟೇಶ್ ಹಿರಿಯ ರಾಜಕಾರಣಿ. ಜನಸಾಮಾನ್ಯರೊಂದಿಗೆ ಸಂಪರ್ಕ ಕಡಿಮೆ. ಆದರೆ ತಾವು ಮಾಡಬೇಕಾದ ಕೆಲಸವನ್ನು, ಪ್ರಚಾರದ ಹಂಗಿಲ್ಲದೆ ಸೈಲೆಂಟಾಗಿ ಮಾಡಿ ಮುಗಿಸುವ ಸಜ್ಜನ ರಾಜಕಾರಣಿ ಎಂಬ ಮೆಚ್ಚುಗೆ ಅವರಿಗಿದೆ. ಯಾರನ್ನೂ ವೈಯಕ್ತಿಕವಾಗಿ ನಿಂದಿಸುವ ಗುಣ ಅವರದ್ದಲ್ಲ. ಕೆ.ಮಹದೇವ್ ಲೂಸ್ ಟಾಕ್ ಗಳಿಗೆ ಹೆಸರಾದರೆ ವೆಂಕಟೇಶ್ ಘನತೆಯ ರಾಜಕಾರಣದಲ್ಲಿ ಪಳಗಿದ್ದಾರೆ. ವೆಂಕಟೇಶ್ ಅವರು ಜನರ ಕೈಗೆ ಸಿಗುವುದಿಲ್ಲ  ಎಂಬುದನ್ನು ಬಿಟ್ಟರೆ ಜನಸಾಮಾನ್ಯರಿಗಿರಲಿ, ಅಧಿಕಾರಿಗಳಿಗಿರಲಿ ತೊಂದರೆ ಕೊಟ್ಟ ಅಪವಾದಗಳು ಇವರ ಮೇಲಿಲ್ಲ. ವಿರೋಧ ಪಕ್ಷದಲ್ಲಿದ್ದವರನ್ನು ಟಾರ್ಗೆಟ್ ಮಾಡುವವರಲ್ಲ. ಕೆ.ಮಹದೇವ್ ಮತ್ತು ಅವರ ಪುತ್ರ ತಮ್ಮ ವಿರೋಧಿಗಳನ್ನು ಮುಗಿಸುವ ಯಾವುದೇ ತಂತ್ರವನ್ನು ಮಾಡುತ್ತಾರೆಂಬ ಆರೋಪಗಳಿವೆ. ಆದರೆ ವೆಂಕಟೇಶ್ ಈ ವಿಚಾರದಲ್ಲಿ ಸಭ್ಯ ವ್ಯಕ್ತಿ.

ಭ್ರಷ್ಟಾಚಾರದ ಕಳಂಕ ಹಾಲಿ ಶಾಸಕರ ಮೇಲಿದೆ. ಹೀಗಾಗಿ ಹಿರಿಯವರಾದರೂ ಪರವಾಗಿಲ್ಲ, ವೆಂಕಟೇಶ್ ಇರಲಿ ಎಂಬ ಒಲವು ಕ್ಷೇತ್ರದಲ್ಲಿ ಬಲವಾಗುತ್ತಿದೆ.

ಜಾತಿವಾರು ವಿಚಾರಕ್ಕೆ ಬಂದರೆ ಕುರುಬ ಸಮುದಾಯ ವಿಜಯಶಂಕರ್ ಜೊತೆ ನಿಲ್ಲುತ್ತದೆ ಎಂದು ಸುಲಭವಾಗಿ ಊಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆಂಬ ನಿರೀಕ್ಷೆ ಕುರುಬ ಸಮುದಾಯದಲ್ಲಿದೆ. ಹೀಗಾಗಿ ಕುರುಬ ಸಮುದಾಯ ವೆಂಕಟೇಶ್ ಜೊತೆಯಾಗುವ ಸಾಧ್ಯತೆ ಇದೆ. ಅಲ್ಲದೆ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾದ ಗ್ಯಾಸ್ ಗಣೇಶ್ ಕಾಂಗ್ರೆಸ್ಸಿಗೆ ಬೆಂಬಲ ಘೋಷಿಸಿದ್ದಾರೆ. ವೆಂಕಟೇಶ್ ಅವರು ಒಕ್ಕಲಿಗರಾದ ಕಾರಣ ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಪ್ರಭಾವ ಹೊಂದಿದ್ದಾರೆ. ಹೀಗಾಗಿ 50: 50 ಎನ್ನುವ ರೀತಿ ಮತಗಳು ಒಕ್ಕಲಿಗರ ಹಂಚಿಹೋಗುವ ಸಾಧ್ಯತೆಗಳಿವೆ.

ವೆಂಕಟೇಶ್ ಒಳ್ಳೆಯದನ್ನು ಮಾಡದಿದ್ದರೂ ಕೆಟ್ಟದನ್ನು ಮಾಡಲ್ಲ ಎಂಬ ಅಭಿಪ್ರಾಯ ಜನರಲ್ಲಿದೆ. ಕುರುಬ, ದಲಿತ, ಅಲ್ಪಸಂಖ್ಯಾತರ ಮತಗಳು ಒಡೆದು ಹೋದರೆ ಮಾತ್ರ ಮಹದೇವ್ ಅವರಿಗೆ ಗೆಲುವು ಆಗಬಹುದು. ಈ ನಿಟ್ಟಿನಲ್ಲಿ `ಹಣಾ’ಹಣಿ ನಡೆಯುವುದು ಖಚಿತ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...