Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬಾಗಲಕೋಟೆ: ಚರಂತಿಮಠ ವಿರುದ್ಧ ತಿರುಗಿಬಿದ್ದ ಸಂಘ ಪರಿವಾರದ ನಾಯಕರು; ಸುಲಭವಾಗಲಿದೆಯೇ...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬಾಗಲಕೋಟೆ: ಚರಂತಿಮಠ ವಿರುದ್ಧ ತಿರುಗಿಬಿದ್ದ ಸಂಘ ಪರಿವಾರದ ನಾಯಕರು; ಸುಲಭವಾಗಲಿದೆಯೇ ಮೇಟಿಯವರ ಗೆಲುವು?

- Advertisement -
- Advertisement -

ಈಮೊದಲು ಬಿಜಾಪುರ ಜಿಲ್ಲೆಯ ಅವಿಭಾಜ್ಯವಾಗಿದ್ದ ಬಾಗಲಕೋಟೆ ಭಾರತದ 50ನೇ ಸ್ವಾತಂತ್ರ್ಯ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ 1997ರಲ್ಲಿ ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು. ವಿಜಾಪುರ ಜಿಲ್ಲೆಯಿಂದ ಹೋಳಾದ ಬಾಗಲಕೋಟೆ ಜಿಲ್ಲೆಯು ಬಾದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ ಮತ್ತು ಮುಧೋಳ- ಈ 6 ತಾಲ್ಲೂಕುಗಳನ್ನು ಹೊಂದಿದೆ. 2018ರಲ್ಲಿ ಗುಳೇದಗುಡ್ಡ, ಇಲಕಲ್ಲ ಮತ್ತು ರಬಕವಿ-ಬನಹಟ್ಟಿ- ಈ 3 ಹೊಸ ತಾಲ್ಲೂಕು ಕೇಂದ್ರಗಳು ಸೃಷ್ಟಿಯಾಗಿವೆ.

ಒಂದು ಕಾಲದಲ್ಲಿ ಪ್ರಸಿದ್ಧ ಚಾಲುಕ್ಯ ರಾಜವಂಶವು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯನ್ನು ಆಳಿತು. ಇಂತಹ ಐತಿಹಾಸಿಕ ಹಿನ್ನಲೆಯ ಬಾಗಲಕೋಟೆ ಜಿಲ್ಲೆಯು ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ ಹಾಗೂ ಮಹಾಕೂಟದಂತಹ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ.

ಬಾಗಲಕೋಟೆ ವಿಜಯನಗರ ದೊರೆಗಳ, ಪೇಶ್ವೆಗಳ, ಮೈಸೂರಿನ ಹೈದರಾಲಿ, ಮರಾಠ ಆಡಳಿತಗಾರರು ಹಾಗೂ ಅಂತಿಮವಾಗಿ 1818ರಲ್ಲಿ ಬ್ರಿಟಿಷ್ ಆಳ್ವಿಕೆಗೆ ಒಳಗಾಯಿತು. 1865ರಲ್ಲಿ ಪುರಸಭೆಯಾಗಿ ಅಸ್ತಿತ್ವಕ್ಕೆ ಬಂದಿತು. ಬಾಗಲಕೋಟೆಯು ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಏಕೀಕರಣ ಚಳುವಳಿಗಳಿಗೆ ಕೇಂದ್ರವಾಗಿತ್ತು.

ಬಿ.ಟಿ ಮೂರ್ನಾಳ್

1978-79ರ ಸುಮಾರಿಗೆ ಭೀಕರ ಬರಗಾಲ ಇತ್ತು; ಜೊತೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಆಗಿತ್ತು. ಈ ಸಂದರ್ಭದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ವಿಜಯಪುರಕ್ಕೆ ಬಂದಾಗ ಬಾಗಲಕೋಟೆಯ ಜನರು ಅವರಿಗೆ ಬಂಗಾರದಿಂದ ತುಲಾಭಾರ ಮಾಡಿ ಅದನ್ನ ರಾಷ್ಟ್ರರಕ್ಷಣಾ ನಿಧಿಗೆ ನೀಡಿದ ಹೃದಯವಂತಿಕೆ ಮೆರೆದಿದ್ದರು.

ಪ್ರಸ್ತುತ ಬಾಗಲಕೋಟೆಯ ಚಿತ್ರಣವೇ ಬದಲಾಗಿ ಹೋಗಿದೆ. ಬಾಗಲಕೋಟೆ ಪಟ್ಟಣ ಹೊಸ ಬಾಗಲಕೋಟೆ (ನವನಗರ) ಮತ್ತು ಹಳೆಯ ಬಾಗಲಕೋಟೆ ಪಟ್ಟಣ ಎಂದು ಎರಡು ಭಾಗಗಳಲ್ಲಿ ಹಂಚಿಹೋಗಿದೆ. ಆಲಮಟ್ಟಿ ಅಣೆಕಟ್ಟಿನ ನಿರ್ಮಾಣದಿಂದಾಗಿ ಹಳೆಯ ಪಟ್ಟಣದ ಬಹುತೇಕ ಭಾಗಗಳು ಮುಳುಗಡೆಯಾಗಿದೆ. ಆ ಕಾರಣದಿಂದ ನವನಗರ ನಿರ್ಮಾಣವಾಗಿದ್ದು, ವಿಶಾಲ ರಸ್ತೆಗಳು, ಉದ್ಯಾನಗಳು ಹಾಗೂ ಆಧುನಿಕ ಸೌಲಭ್ಯ ಹೊಂದಿ ಮಾದರಿ ನಗರವಾಗಿ ಇದೀಗ ಗಮನ ಸೆಳೆಯುತ್ತಿದೆ.

ಕೃಷ್ಣೆಯ ಒಡಲು ಸೇರಿದ 192 ಹಳ್ಳಿಗಳು

ಬಾಗಲಕೋಟೆ, ಘಟಪ್ರಭಾ ನದಿತೀರದಲ್ಲಿ ಚಾಚಿಕೊಂಡಿದೆ. ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳು ಹರಿಯುತ್ತವೆ. ಬಾಗಲಕೋಟೆಯು ಮುಳುಗಡೆಯ ನಗರಿ ಅಂತಲೇ ಹೆಚ್ಚು ಖ್ಯಾತಿ ಪಡೆದಿದೆ. ಇಲ್ಲಿ ಕೃಷ್ಣೆಯ ನದಿನೀರು ಲಕ್ಷಾಂತರ ರೈತರ ಆರ್ಥಿಕ ಬದುಕನ್ನು ಹಸನಾಗಿಸಿದ್ದೇನೋ ಸತ್ಯ. ಆದರೆ ಅಷ್ಟೇ ಜನರ ಬದುಕನ್ನೇ ಮೂರಾಬಟ್ಟೆ ಮಾಡಿದ ಅಪಕೀರ್ತಿಯೂ ಹೊಂದಿದೆ. ಜಿಲ್ಲೆಯನ್ನು ಇಂದಿಗೂ ಮುಳುಗಡೆ ಜಿಲ್ಲೆ, ತ್ಯಾಗಿಗಳ ಜಿಲ್ಲೆ ಎಂದೇ ಕರೆಯಲಾಗುತ್ತದೆ. ಕಾರಣ ಅಖಂಡ ವಿಜಯಪುರ ಜಿಲ್ಲೆಯ 192 ಹಳ್ಳಿಗಳು ಕೃಷ್ಣೆಯ ಹಿನ್ನೀರ ಒಡಲಿನಲ್ಲಿ ಮುಳುಗಿವೆ. ಅದಕ್ಕಾಗಿ 136 ಪುನರ್‌ವಸತಿ ಕೇಂದ್ರ ಸ್ಥಾಪಿಸಿ, ಪುನರ್‌ವಸತಿ, ಪುನರ್ ನಿರ್ಮಾಣ ಕಾರ್ಯ ನಡೆದಿದೆಯಾದರೂ ಅದಿನ್ನೂ ಪೂರ್ಣ ಪ್ರಮಾಣದಲ್ಲಾಗಿಲ್ಲ. ಇಂದಿಗೂ ಹಲವಾರು ಹಳ್ಳಿಗಳ ಜನರು, ತಮ್ಮ ಹಳೆಯ ಊರಿನೊಂದಿಗಿನ ಭಾವನಾತ್ಮಕ ಸಂಬಂಧಕ್ಕಾಗಿ ಅದೇ ಊರಿನಲ್ಲಿ ಇದ್ದಾರೆ. ಹಿನ್ನೀರು ಬಂದಾಗ ಹೊಸ ಊರಿಗೆ ಬರುವುದು, ನೀರು ಸರಿದಾಗ ಪುನಃ ಹಳೆಯ ಊರಿಗೆ ಹೋಗಿ ಮನೆ ಸ್ವಚ್ಛ ಮಾಡಿಕೊಂಡು, ದೀಪಹಚ್ಚಿ ಕೆಲದಿನ ವಾಸ ಮಾಡುವ ಕುಟುಂಬಗಳೂ ಇವೆ.

ಸರ್ಕಾರ ಈ ಮುಳುಗಡೆಯ ಜನರಿಗೆ ಪರಿಹಾರವಾಗಿ ಪುಡಿಕಾಸು, ನಾಲ್ಕಡಿ ಜಾಗ ಎನ್ನುವಷ್ಟು ಮನೆ ಕೊಟ್ಟಿರಬಹುದು; ಆದರೆ ಆ ಜನರು ತಮ್ಮ ಸ್ವಂತ ಊರಿನೊಟ್ಟಿಗಿನ ಭಾವನಾತ್ಮ ನಂಟನ್ನು ಹಿಂತಿರುಗಿ ಕೊಡಲು ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ. ಇಂದಿಗೂ ಆ ಜನರು ಆ ನೋವಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ರಾಜಕೀಯ ಇತಿಹಾಸ

1952ರಿಂದ 2018ರವರೆಗೆ ಒಟ್ಟು 15 ಸಾರ್ವತ್ರಿಕ ಚುನಾವಣೆ ಮತ್ತು ಎರಡು ಉಪಚುನಾವಣೆಗಳು ಬಾಗಲಕೋಟೆ ಕ್ಷೇತ್ರದಲ್ಲಿ ಜರುಗಿವೆ. ಆರಂಭದ ಚುನಾವಣೆಗಳಲ್ಲಿ ಕಾಂಗ್ರೆಸ್ ಹಲವು ಬಾರಿ ಗೆದ್ದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತಲೇ ಇದೆ. ಹಾಗಾಗಿ ಇದನ್ನು ಬಿಜೆಪಿಯ ಭದ್ರಕೋಟೆ ಎಂತಲೇ ಕರೆಯಲಾಗುತ್ತದೆ.

ಬಾಗಲಕೋಟೆ ಮತಕ್ಷೇತ್ರದಲ್ಲಿ 1952ರಿಂದ 1978ರವರೆಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಸತತವಾಗಿ ಜಯ ಕಂಡಿದೆ. ಆರಂಭದ ಮೂರು ಚುನಾವಣೆಗಳಲ್ಲಿ ಅಂದರೆ 1952, 1957 ಹಾಗೂ 1962ರ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಬಿ.ಟಿ. ಮುರ್ನಾಳ್ ಹ್ಯಾಟ್ರಿಕ್ ಜಯ ಸಾಧಿಸಿದ್ದರು. ಇದೇ ಬಿ.ಟಿ. ಮುರ್ನಾಳ್ ಎಸ್. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಮಂಟೂರು ಗೂಳಪ್ಪ

52 ಮತ್ತು 57ರಲ್ಲಿ ಸತತ ಎರಡು ಬಾರಿ ರಾಜ್ಯದ ಆಡಳಿತ ಚುಕ್ಕಾಣಿಯನ್ನು ಹಿಡಿದುಕೊಂಡ ಕಾಂಗ್ರೆಸ್, ಮೂರನೇ ಬಾರಿಗೂ ಅಧಿಕಾರಕ್ಕೆ ಬರಲು ಯೋಜನೆ ರೂಪಿಸಿತ್ತು. ಹಾಗಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದ ಎಸ್. ನಿಜಲಿಂಗಪ್ಪ ಅವರಿಗೆ ಮತ್ತೆ ನಾಯಕತ್ವದ ಹೊಣೆ ಹೊರಿಸಲಾಯಿತು. ಅವರ ನೇತೃತ್ವದಲ್ಲಿ 1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ, 208 ಕ್ಷೇತ್ರಗಳಲ್ಲಿ 138 ಗೆದ್ದು ಅಧಿಕಾರದ ಗದ್ದುಗೆಗೇನೋ ಏರಿತು, ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಎಸ್ ನಿಜಲಿಂಗಪ್ಪ ಅವರು ಹೊಸದುರ್ಗದಲ್ಲಿ ಸೋತಿದ್ದರು. ಹೀಗಾಗಿ, ಶಿವಲಿಂಗಪ್ಪ ರುದ್ರಪ್ಪ ಕಂಠಿ ರಾಜ್ಯದ ಆರನೇ ಮುಖ್ಯಮಂತ್ರಿಯಾದರು.

ಎಸ್.ಆರ್. ಕಂಠಿ ಅವರ ಮುಖ್ಯಮಂತ್ರಿ ಸ್ಥಾನ ಬಹುದಿನ ಉಳಿಯಲಿಲ್ಲ. ಮೂರು ತಿಂಗಳು ಮುಗಿಯುವುದರೊಳಗೇ ಒಲ್ಲದ ಮನಸ್ಸಿನಿಂದ ರಾಜೀನಾಮೆ ನೀಡಿದರು. ಏಕೆಂದರೆ, ನಿಜಲಿಂಗಪ್ಪ ಮುಖ್ಯಮಂತ್ರಿಯಾಗಲಿ ಎಂದು ಬಾಗಲಕೋಟೆ ಶಾಸಕ ಬಿ.ಟಿ. ಮುರ್ನಾಳ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎಸ್. ನಿಜಲಿಂಗಪ್ಪ ಹಾಗೂ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಇತರೆ ಇಬ್ಬರ ನಾಮಪತ್ರ ತಿರಸ್ಕಾರವಾಗಿದ್ದರಿಂದ ಎಸ್. ನಿಜಲಿಂಗಪ್ಪ ಅವಿರೋಧವಾಗಿ ಆಯ್ಕೆಯಾಗಿ, ರಾಜ್ಯದ ಮುಖ್ಯಮಂತ್ರಿಯಾದರು.

ಆ ಬಳಿಕ 1967 ಮತ್ತು 1972ರಲ್ಲಿ ನಡೆದ ಚುನಾವಣೆಯಲ್ಲಿ ಬಿ.ಟಿ. ಮುರ್ನಾಳ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮತ್ತೆ ಎರಡು ಅವಧಿಗೆ ಶಾಸಕರಾಗಿ ಆಯ್ಕೆಯಾದರು. 1978ರಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಪರಪ್ಪ ಕಳ್ಳಿಗುಡ್ಡ ಆಯ್ಕೆಗೊಂಡರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬಾದಾಮಿ: ಭೀಮಸೇನ ಚಿಮ್ಮನಕಟ್ಟಿಯವರನ್ನು ಕಾಯುವವೇ ಸಿದ್ದರಾಮಯ್ಯನವರ ಕೆಲಸಗಳು?

ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗೆಲುವಿನ ಓಟ ಸಾಗುತ್ತಿದ್ದಾಗ, 1985ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಬ್ರೇಕ್ ಹಾಕಿದರು. ಮಂಟೂರು ಗೂಳಪ್ಪ ಕಾಂಗ್ರೆಸ್ ಅಭ್ಯರ್ಥಿ ಪರಪ್ಪ ಕಳ್ಳಿಗುಡ್ಡ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಸೋಲು ಕಂಡ ಕಾಂಗ್ರೆಸ್ ಕ್ಷೇತ್ರದಲ್ಲಿ ಮತ್ತೆ ಬಹುಕಾಲದವರೆಗೂ ತಲೆ ಎತ್ತಲೇ ಇಲ್ಲ.

1985ರ ಚುನಾವಣೆಯಲ್ಲಿ ಮಂಟೂರು ಗೂಳಪ್ಪ ಜನತಾ ಪಾರ್ಟಿ ಸೇರಿ ಅಲ್ಲಿಯೂ ಗೆದ್ದು, ಎರಡನೇ ಅವಧಿಗೆ ಶಾಸಕಾರಾದರು. 1989ರ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧೆಗಿಳಿದ ಅಜಯ್ ಕುಮಾರ್ ಸರನಾಯಕ ಅವರು ಗೆದ್ದರು. 1994ರ ಚುನಾವಣೆಯಲ್ಲೂ ಅಜಯ್ ಕುಮಾರ್ ಸರನಾಯಕ ಜನತಾ ದಳದಿಂದ ಗೆಲುವು ಸಾಧಿಸಿದರು.

1994ರ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಬಿಜೆಪಿ ಮೊದಲ ಬಾರಿಗೆ ಸ್ಪರ್ಧಿಸಿ ಸೋಲು ಕಂಡಿತು. ಆದಾದ ಬಳಿಕ 1999ರಿಂದ ನಿರಂತರವಾಗಿ ಬಿಜೆಪಿ ಗೆಲ್ಲುತ್ತಲೇ ಬಂದಿದ್ದು, ಇಂದಿಗೂ ಬಾಗಲಕೋಟೆಯಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರಿದೆ.

ಪಿ.ಎಚ್. ಪೂಜಾರ

1998ರಲ್ಲಿ ನಡೆದ ಉಪಚುನಾವಣೆಯಲ್ಲಿ ಲಿಂಗಾಯತ ರೆಡ್ಡಿ ಸಮುದಾಯದ ಪಿ.ಎಚ್. ಪೂಜಾರ ಅವರು ಅಸ್ಸಾಂ ಗಣ ಪರಿಷತ್ (ಎಜಿಪಿ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡರು. 1999ರ ಚುನಾವಣೆ ವೇಳೆಗೆ ಪೂಜಾರ ಅವರು ಬಿಜೆಪಿ ಸೇರಿ, ಮೊದಲ ಬಾರಿಗೆ ಬಾಗಲಕೋಟೆಯಲ್ಲಿ ಕಮಲ ಅರಳಿಸಿದರು. 2004ರ ವೇಳೆಗೆ ಮುನ್ನೆಲೆಗೆ ಬಂದ ವೀರಣ್ಣ ಚರಂತಿಮಠ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡು ಗೆಲುವಿನ ಓಟ ಮುಂದುವರಿಸಿದರು. ಆ ವೇಳೆ ಬಿಜೆಪಿ ತೊರೆದು ಪಕ್ಷೇತರವಾಗಿ ಸ್ಪರ್ಧಿಸಿದ್ದ ಪಿ.ಎಚ್. ಪೂಜಾರ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ನಂತರದ ದಿನಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸುತ್ತಿದ ಪಿ.ಎಚ್. ಪೂಜಾರ ಮರಳಿ ಬಿಜೆಪಿಯಲ್ಲಿದ್ದಾರೆ.

2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವೀರಣ್ಣ ಚರಂತಿಮಠ ಮತ್ತೆ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಬಾಗಲಕೋಟೆ ಕ್ಷೇತ್ರದಲ್ಲಿ ಮಾಯವಾಗಿದ್ದ ಕಾಂಗ್ರೆಸ್ ಪಕ್ಷ, 2013ರ ಚುನಾವಣೆಯಲ್ಲಿ ಎಚ್.ವೈ. ಮೇಟಿ ಗೆಲ್ಲುವ ಮೂಲಕ ಮತ್ತೆ ಪಕ್ಷ ತಲೆ ಎತ್ತುವಂತೆ ಮಾಡಿದರು. 2018ರ ಕಳೆದ ಚುನಾವಣೆಯಲ್ಲಿ ವೀರಣ್ಣ ಚರಂತಿಮಠ ಅವರ ಗೆಲುವಿನ ಮೂಲಕ ಬಿಜೆಪಿ ಬಾಗಲಕೋಟೆಯನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇದೀಗ ಬಾಗಲಕೋಟೆ ಕ್ಷೇತ್ರ 2023ರ ವಿಧಾನಸಭಾ ಚುನಾವಣೆಯ ರಣಕಣ ಸಿದ್ದವಾಗಿದೆ.

ಮತದಾರರು

ಕ್ಷೇತ್ರದಲ್ಲಿ ಒಟ್ಟು ಅಂದಾಜು 2,36,025 ಮತದಾರರಿದ್ದಾರೆ. ಪುರುಷ ಮತದಾರರು- 1,17,534 ಇದ್ದಾರೆ. ಮಹಿಳಾ ಮತದಾರರು- 1,18,474, ಇತರೆ 17 ಜನ ಇದ್ದಾರೆ.

ಬಿಜೆಪಿ: ಚರಂತಿಮಠ ಅಧಿಕಾರದ ದರ್ಪಕ್ಕೆ ಸಿಡಿದೆದ್ದ ಸಂಘಪರಿವಾರ

ಭೂಮಿ ಫಲವತ್ತಾಗಿದ್ದಾಗ ಫಸಲು ತಾನಾಗಿಯೇ ಬರುತ್ತದೆ ಎನ್ನುವಂತೆ ಬಾಗಲಕೋಟೆ ಮತಕ್ಷೇತ್ರದಲ್ಲಿ ಪಿ.ಎಚ್. ಪೂಜಾರ, ಸೇರಿದಂತೆ ಅನೇಕರು ಸಂಘಪರಿವಾರದ, ಬಿಜೆಪಿಯ ಸಂಘಟನೆ ಮಾಡಿದ್ದರು. 2004ರ ಸಮಯದಲ್ಲಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದ ಪೂಜಾರಗೆ ಟಿಕೆಟ್ ಕೈ ತಪ್ಪಿ ವೀರಣ್ಣ ಚರಂತಿಮಠ ಪಾಲಾಯಿತು. ಆಗ ಸತತವಾಗಿ 2004 ಮತ್ತು 2008ರ ಚುನಾವಣೆಯಲ್ಲಿ ಸುಲಭವಾಗಿ ಚರಂತಿಮಠ ಗೆಲುವು ಸಾಧಿಸಿದರು. ಒಂದುಕಡೆ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆಗಿರುವ ಚರಂತಿಮಠ ಸತತವಾಗಿ ಎರಡು ಬಾರಿ ಶಾಸಕರೂ ಆಗಿದ್ದರು. ಹಾಗಾಗಿ 2013ರ ಚುನಾವಣೆ ಸಂದರ್ಭದಲ್ಲಿ ಚರಂತಿಮಠ ಅವರ ನಡವಳಿಕೆಯಿಂದ ಪಕ್ಷದೊಳಗಿನವರೇ ಬೇಸರ ವ್ಯಕ್ತಪಡಿಸಿದ್ದರಿಂದ ಪಕ್ಷ ತೊರೆದರು. ಇದು ಅವರಿಗೆ ಹಿನ್ನಡೆಯಾಯಿತು. ಆ ಬಾರಿಯ ಚುನಾವಣೆಯಲ್ಲಿ ಸೋಲುಕಂಡರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುನಗುಂದದಲ್ಲಿ ಕೈ-ಕಮಲ ಅಭ್ಯರ್ಥಿಗಳಿಗೆ ನಡುಕ ಹುಟ್ಟಿಸಿರುವ ಪಕ್ಷೇತರ ಅಭ್ಯರ್ಥಿ

2018ರ ಚುನಾವಣೆಯಲ್ಲಿ ಎದುರಾಳಿಯು ಸಿ.ಡಿ ಸುಳಿಯಲ್ಲಿ ಸಿಲುಕಿದ್ದರಿಂದ ಅದರ ಲಾಭ ಪಡೆದು ಮೂರನೇ ಬಾರಿಗೆ ಚರಂತಿಮಠ ಶಾಸಕರಾದರು. ತಮ್ಮ ಅಧಿಕಾರ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿ ಒಳ್ಳೆಯ ಹೆಸರು ಸಂಪಾದಿಸಿದ್ದರೂ ಕೂಡ, ಜನನಾಯಕನಾಗಿ ಜನರ ಜೊತೆ ಹೇಗಿರಬೇಕು ಎನ್ನುವ ಸಾಮಾನ್ಯಜ್ಞಾನವಿಲ್ಲದೇ ವರ್ತಿಸುತ್ತಾರೆ ಎನ್ನುವ ಆರೋಪಗಳು ಅವರ ಮೇಲಿವೆ. ಜನರೊಟ್ಟಿಗೆ ಬೆರೆಯದೇ, ಮನಸೋಇಚ್ಛೆ ಮಾತನಾಡುತ್ತಾರೆ ಎನ್ನುವ ಆಕ್ರೋಶ ಒಂದೆಡೆಯಾದರೆ, ಪಕ್ಷದೊಳಗಿದ್ದ ಕಾರ್ಯಕರ್ತರು ಹಾಗೂ ಬಿಜೆಪಿಯ ಬೆನ್ನಿಗೆ ನಿಲ್ಲುವ ಸಂಘಪರಿವಾರದವರನ್ನು ತನ್ನ ನಡವಳಿಕೆಯಿಂದ ದೂರ ಮಾಡಿಕೊಂಡಿದ್ದಾರೆ.

ಅವರ ಸಹೋದರ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಇದೀಗ ಚರಂತಿಮಠ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಸಂಘಪರಿವಾರದ ಮುಖಂಡರು ಬಹಿರಂಗವಾಗಿಯೇ ಶಾಸಕನ ಸೊಕ್ಕು ಇಳಿಸುತ್ತೇವೆ ಎನ್ನುವ ಹೇಳಿಕೆ ನೀಡುತ್ತಿದ್ದಾರೆ. ಮತ್ತೊಂದು ಕಡೆ ಅನೇಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿ ಮುಖಂಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪ್ರಕಾಶ್ ತಪಶೆಟ್ಟಿಯವರು ಕಾಂಗ್ರೆಸ್ ಸೇರಿದ್ದಾರೆ. ಇನ್ನು ಬಿಜೆಪಿ ಮುಖಂಡ ಪಿ.ಎಚ್. ಪೂಜಾರ ಅವರು ಚರಂತಿಮಠನ ಜೊತೆಗೆ ಪ್ರಚಾರಕ್ಕೂ ತೆರಳುತ್ತಿಲ್ಲ. ಅವರ ಬೆಂಬಲಿಗರೆಲ್ಲರೂ ಇದೀಗ ಪಕ್ಷೇತರ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

ಮಲ್ಲಿಕಾರ್ಜುನ್ ಚರಂತಿಮಠ

ರಾಜ್ಯ ಸರ್ಕಾರ ಜಾರಿ ಮಾಡಿದ ಒಳ ಮೀಸಲಾತಿಯಿಂದ ಬಂಜಾರ ಸಮುದಾಯ ಬಿಜೆಪಿಯ ವಿರುದ್ಧ ತಿರುಗಿ ಬಿದ್ದಿದೆ. ಅದರ ಬಿಸಿ ಚರಂತಿಮಠಗೂ ತಟ್ಟಲಿದೆ. ಏಕೆಂದರೆ ಇತ್ತಿಚೆಗೆ ಚುನಾವಣಾ ಪ್ರಚಾರ ಆರಂಭವಾದ ದಿನವೇ ಬಾಗಲಕೋಟೆಯ ಹಲವು ತಾಂಡಾಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಪ್ರವೇಶವಿಲ್ಲ ಎಂದು ಫಲಕ ಹಾಕಿದ್ದಾರೆ. ಈ ಬಾರಿ ಅದು ಕೂಡ ಚರಂತಿಮಠ ಅವರ ಹಿನ್ನಡೆಗೆ ಕಾರಣವಾಗಲಿದೆ.

ಬಾಗಲಕೋಟೆ ಮತಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಅಧಿಕ ಇರುವುದರಿಂದ ಅದು ಚರಂತಿಮಠಗೆ ಅನಕೂಲ ಆಗುವ ಸಾಧ್ಯತೆ ಇದೆ. ಇನ್ನೂ ನಗರ ಭಾಗದಲ್ಲಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಅವರಿಗೆ ಬಲ ತುಂಬಬಹುದು. ಇನ್ನು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆಗಿರುವುದರಿಂದ ಆ ಸಂಸ್ಥೆಗೆ ಸಂಬಂಧಿಸಿದವರ ಮತಗಳು ಅವರ ಪಾಲಿನ ಬುತ್ತಿಗಂಟಾಗಿ ಉಳಿಯಲಿವೆ.

ಅಣ್ಣ-ತಮ್ಮರ ಗುದ್ದಾಟದಲ್ಲಿ ಕೈ ಅಭ್ಯರ್ಥಿ ಮೇಟಿಯ ಗೆಲುವು ಸುಲಭವಾಗುತ್ತಾ?

ಬಾಗಲಕೋಟೆ ಮತಕ್ಷೇತ್ರದಲ್ಲಿ ಬಹುಸಂಖ್ಯೆಯಲ್ಲಿ ಲಿಂಗಾಯತ, ರೆಡ್ಡಿ ಸಮುದಾಯ ಇರುವುದರಿಂದ ಇಲ್ಲಿ ಅದೇ ಸಮುದಾಯದವರೇ ಶಾಸಕರಾಗಿರುವುದೇ ಹೆಚ್ಚು. ಲಿಂಗಾಯತ, ರೆಡ್ಡಿ ಸಮುದಾಯೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದು ಎಚ್.ವೈ. ಮೇಟಿ ಅವರೇ ಮೊದಲಿಗರು. ಎಚ್.ವೈ. ಮೇಟಿ ಅವರು ಒಟ್ಟು ನಾಲ್ಕು ಬಾರಿ ಶಾಸಕರಾಗಿದ್ದು, ಈ ಹಿಂದೆ ಮತಕ್ಷೇತ್ರವಾಗಿದ್ದ ಗುಳೇದಗುಡ್ಡದಿಂದ ಮೂರು ಬಾರಿ (1989, 1994, 2004) ಶಾಸಕರಾಗಿದ್ದರು. ಆನಂತರ 2008ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡರು. 2013ರ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಮಕಾಡೆ ಮಲಗಿಸಿ ಗೆಲುವು ದಾಖಲಿಸಿದರು. 2013-18ರ ಸಿದ್ಧರಾಮಯ್ಯ ಆಡಳಿತಾವಧಿಯಲ್ಲಿ ಅಬಕಾರಿ ಸಚಿವರಾಗಿದ್ದರು. ಆದರೆ ಅದೇ ಸಮಯದಲ್ಲಿ ಅವರ ಮೇಲೆ ಸಿ.ಡಿ ಆರೋಪ ಕೇಳಿಬಂದಿದ್ದರಿಂದ ನೈತಿಕ ಹೊಣೆಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಬಳಿಕ ನಡೆದ 2018ರ ಚುನಾವಣೆಯಲ್ಲಿ ಜನರು ಅವರನ್ನು ತಿರಸ್ಕರಿಸಿದರು. ಇದೀಗ ಅವರು ಮತ್ತೆ 2023ರ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಎಚ್.ವೈ ಮೇಟಿ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧ್ಯ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದರೂ ಅದು ಸಲೀಸೇನಲ್ಲ. ಏಕೆಂದರೆ ಇದು ಲಿಂಗಾಯತ ರೆಡ್ಡಿ ಸಮುದಾಯದ ಗಟ್ಟಿ ನೆಲ. ಇಲ್ಲಿ ಅಷ್ಟು ಸುಲಭಕ್ಕೆ ಅಹಿಂದ ಅಭ್ಯರ್ಥಿಗೆ ಮತ ನೀಡಲಾರರು. ಹಾಗಾಗಿ ಅವರು ಚುನಾವಣಾ ಅಖಾಡದಲ್ಲಿ ಅಂತಿಮ ಕ್ಷಣದವರೆಗೂ ಹೋರಾಟ ಮಾಡಲೇಬೇಕಾಗಿದೆ. ಇನ್ನು ಅವರು ಶಾಸಕರಾಗಿದ್ದ ಅವಧಿಯಲ್ಲಿ ಅತಿ ಹೆಚ್ಚು ಅನುದಾನವನ್ನು ಕ್ಷೇತ್ರಕ್ಕೆ ತಂದಿರುವ ಕೀರ್ತಿ ಅವರಿಗಿದೆ. ರೈತರ ಅನುಕೂಲಕ್ಕಾಗಿ ಭಗವತಿ ಏತ ನೀರಾವರಿ, ತಿಮ್ಮಾಪುರ ಏತನೀರಾವರಿ ಮೂಲಕ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.

ಹಿರಿಯ ರಾಜಕಾರಣಿ ಎಚ್.ವೈ. ಮೇಟಿ ಅವರ ರಾಜಕೀಯ ನಡೆಯೇ ಮತದಾರರಿಗೆ ಆಪ್ತವಾಗುತ್ತದೆ. ಗೆಲ್ಲಲಿ ಅಥವಾ ಸೋಲಲಿ ಸದಾಕಾಲ ಜನಸಂಪರ್ಕದಲ್ಲಿರುತ್ತಾರೆ. ಕ್ಷೇತ್ರದಲ್ಲಿನ ಎಂತಹದ್ದೇ ಕಾರ್ಯಕ್ರಮವಿದ್ದರೂ ಆಹ್ವಾನವಿದ್ದರೆ ಸಾಕು ಅಲ್ಲಿ ಎಚ್.ವೈ ಮೇಟಿ ಹಾಜರಾಗುತ್ತಾರೆ. ಹೀಗಾಗಿ ಕ್ಷೇತ್ರದ ಜನರು ಅವರನ್ನು ಮೇಟಿ ಮುತ್ಯಾ ಅಂತಲೇ ಪ್ರೀತಿಯಿಂದ ಕರೆಯುತ್ತಾರೆ.

ಸಹೋದರನ ವಿರುದ್ಧ ತೊಡೆ ತಟ್ಟಿದ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ್ ಚರಂತಿಮಠ

ಬಿಜೆಪಿಯಿಂದ ಹೊರಬಂದು ಪಕ್ಷೇತರ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ್ ಚರಂತಿಮಠ ಪ್ರಬಲ ಅಭ್ಯರ್ಥಿ ಎಂದು ಹೇಳಲಾಗದಿದ್ದರೂ, ವೀರಣ್ಣ ಚರಂತಿಮಠ ಸೋಲಿಗೆ ಕಾರಣವಾಗುವ ಎಲ್ಲ ಮುನ್ಸೂಚನೆಯೂ ಕಾಣುತ್ತಿವೆ. ಮಲ್ಲಿಕಾರ್ಜುನ್ ಜೊತೆಗೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಯುವಮುಖಂಡ ಸಂತೋಷ್ ಹೊಕ್ರಾಣಿ ಸೇರಿದಂತೆ ಸಂಘ ಪರಿವಾರದ ಅನೇಕರು ಅವರ ಬೆನ್ನಿಗೆ ನಿಂತಿದ್ದಾರೆ. ವೀರಣ್ಣ ಚರಂತಿಮಠ ಹಾಗೂ ಮಲ್ಲಿಕಾರ್ಜುನ್ ಚರಂತಿಮಠ ನಡುವಿನ ಗುದ್ದಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ. ಮೇಟಿ ಅವರಿಗೆ ಗೆಲುವಿನ ಹಾದಿ ಸುಗಮ ಎಂದು ಹೇಳಲಾಗುತ್ತಿದೆ

ಕಾಂಗ್ರೆಸ್ ಮತ ದೋಚುವರೇ ಜೆಡಿಎಸ್ ಅಭ್ಯರ್ಥಿ ದೇವರಾಜ್ ಪಾಟೀಲ್?

ಡಾ. ದೇವರಾಜ್ ಪಾಟೀಲ್ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು. 2018ರವರೆಗೂ ಬಾದಾಮಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು, ಪ್ರತಿಬಾರಿ ಟಿಕೆಟ್ ಸಿಗದಿದ್ದಾಗ ರೋಸಿಹೋಗಿ ಬಾಗಲಕೋಟೆಯಿಂದಲಾದರೂ ಟಿಕೆಟ್ ಬಯಸಿದ್ದರು. ಆದರೆ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ. ಇದರಿಂದ ಬೇಸರಗೊಂಡು ಪಕ್ಷೇತರ ಅಭ್ಯರ್ಥಿಯಾಗುವುದಾಗಿ ಘೋಷಿಸಿಕೊಂಡರು. ಕೊನೆಯ ಕ್ಷಣದಲ್ಲಿ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ.

ಕುರುಬ ಸಮುದಾಯಕ್ಕೆ ಸೇರಿದ ದೇವರಾಜ್ ಪಾಟೀಲ್ ಅವರು ಸಮುದಾಯದ ಮತಗಳನ್ನು ಸೆಳೆಯುತ್ತಾರಾ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಕ್ಷೇತ್ರದಲ್ಲಿ ರಾಜಕಾರಣಿಯಾಗಿ ಆ ಮಟ್ಟಿನ ವರ್ಚಸ್ಸು ಇಲ್ಲದ ಅವರು ಪ್ರಬಲ ಸ್ಪರ್ಧಿ ಎನಿಸುವುದಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...