Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬಾದಾಮಿ: ಭೀಮಸೇನ ಚಿಮ್ಮನಕಟ್ಟಿಯವರನ್ನು ಕಾಯುವವೇ ಸಿದ್ದರಾಮಯ್ಯನವರ ಕೆಲಸಗಳು?

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬಾದಾಮಿ: ಭೀಮಸೇನ ಚಿಮ್ಮನಕಟ್ಟಿಯವರನ್ನು ಕಾಯುವವೇ ಸಿದ್ದರಾಮಯ್ಯನವರ ಕೆಲಸಗಳು?

- Advertisement -
- Advertisement -

ಬಾದಾಮಿ ಎಂದರೆ ಎಲ್ಲರಿಗೂ ನೆನಪಾಗುವುದು ಕರ್ನಾಟಕವನ್ನಾಳಿದ ಹೆಮ್ಮೆಯ ಚಾಲುಕ್ಯ ರಾಜ ಮನೆತನ. ಅವರ ರಾಜಧಾನಿ ಬಾದಾಮಿ. ಅಂದು ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿ ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿದೆ. ಇದು ರಾಜ್ಯದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಒಂದಾಗಿದೆ. ಬಾದಾಮಿ ಗುಹಾಲಯ, ಅಗಸ್ತ್ಯ ಸರೋವರ, ಬಾದಾಮಿ ಕೋಟೆ, ಭೂತನಾಥ ದೇವಾಲಯ, ಬಾದಾಮಿ ಬನಶಂಕರಿ ದೇವಸ್ಥಾನ, ಬಾದಾಮಿ ವಸ್ತು ಸಂಗ್ರಹಾಲಯವನ್ನು ಹಾಗೂ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ರಾಜ್ಯ, ದೇಶ ಹಾಗೂ ವಿದೇಶಗಳಿಂದಲೂ ಪ್ರವಾಸಿಗರು ಬಾದಾಮಿಗೆ ಭೇಟಿ ನೀಡುತ್ತಾರೆ.

ಐತಿಹಾಸಿಕ ಹಿನ್ನೆಲೆಯ ಬಾದಾಮಿ ಇದೀಗ ಮತ್ತೊಂದು ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದೆ. 2018ರ ಕಳೆದ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ಪರ್ಧೆಯಿಂದ ಈ ಕ್ಷೇತ್ರ ರಾಜ್ಯದ ಜನರ ಗಮನ ಸೆಳೆದಿತ್ತು. ಅವರ ವಿರುದ್ಧ ಬಿಜೆಪಿಯಿಂದ ಬಿ ಶ್ರೀರಾಮುಲು ಕಣಕ್ಕೆ ಇಳಿದಿದ್ದರು. ಈ ಬಾರಿ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಿಲ್ಲ; ಹಾಗಾಗಿ ಕ್ಷೇತ್ರದಲ್ಲಿ ಆ ಮಟ್ಟಿನ ಕತ್ತುಕತ್ತಿನ ಹೋರಾಟ ನಡೆಯದೇ ಇರಬಹುದು.

ಬಾದಾಮಿ ಕ್ಷೇತ್ರದ ಚುನಾವಣಾ ಇತಿಹಾಸ

1951ರಿಂದ ಈವರೆಗೂ ಬಾದಾಮಿ ಕ್ಷೇತ್ರದಲ್ಲಿ ಒಟ್ಟು 15 ಚುನಾವಣೆಗಳು ನಡೆದಿದ್ದು, ಈ ಪೈಕಿ 10 ಬಾರಿ ಕಾಂಗ್ರೆಸ್ ಗೆಲುವು ಕಂಡಿದೆ. ಬಾಂಬೆ ಕರ್ನಾಟಕದ ಭಾಗವಾಗಿ 1951ರಲ್ಲಿ ನಡೆದ ಮೊದಲ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ವೆಂಕನಗೌಡ ಹನಮಂತ ಗೌಡ ಪಾಟೀಲ (ವಿ.ಎಚ್ ಪಾಟೀಲ) ಬಾದಾಮಿಯ ಮೊದಲ ಶಾಸಕರಾಗಿ ಕಾಂಗ್ರೆಸ್‌ನಿಂದ ಜಯ ಸಾಧಿಸಿದರು.

ಬಾದಾಮಿ ಕ್ಷೇತ್ರ ಮೈಸೂರು ಕರ್ನಾಟಕ ಭಾಗವಾದ ಬಳಿಕ ನಡೆದ ಮೊದಲ ನಾಲ್ಕು ಸಾರ್ವತ್ರಿಕ ಚುನಾವಣೆಗಳಲ್ಲಿ ಮೂರು ಬಾರಿ ಕಾಂಗ್ರೆಸ್ ಜಯ ಕಂಡಿದೆ. 1957ರಲ್ಲಿ ವಿ.ಎಚ್ ಪಾಟೀಲ್ ಮತ್ತೆ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರು. 1962ರಲ್ಲಿ ಕಾಂಗ್ರೆಸ್‌ನಿಂದ ಮಡಿವಾಳಪ್ಪ ರುದ್ರಪ್ಪ ಸ್ಪರ್ಧೆ ಮಾಡಿ ಗೆದ್ದರು. ಆದರೆ, 1967ರ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಪಾಲಿಗೆ ವ್ಯತಿರಿಕ್ತ ಫಲಿತಾಂಶ ಹೊರಬಿದ್ದು, ಪಕ್ಷೇತರ ಅಭ್ಯರ್ಥಿ ಪಿ.ಕೆ ಮಹಾಗುಂಡಪ್ಪ ಗೆದ್ದಿದ್ದರು. 1972ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾವಸಾಹೇಬ್ ದೇಸಾಯಿ ಗೆಲುವು ಕಂಡರು. ಆ ಬಳಿಕ ನಡೆದ 1978ರಿಂದ 2018ರವರೆಗಿನ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಆರು ಬಾರಿ ಜಯ ಕಂಡಿದೆ.

1978ರಿಂದ 2018ರವರೆಗೂ ಚಿಮ್ಮನಕಟ್ಟಿ-ಪಟ್ಟಣಶೆಟ್ಟಿ ಕುಟುಂಬಗಳದ್ದೇ ಪಾರುಪತ್ಯ

1978ರಿಂದ 2018ರ ಅವಧಿಯಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಸತತವಾಗಿ ಎರಡೆರಡು ಅವಧಿಗೆ ಒಂದೊಂದು ಪಕ್ಷಕ್ಕೆ ಈ ಕ್ಷೇತ್ರದ ಮತದಾರರು ಅಧಿಕಾರ ನೀಡಿದ್ದಾರೆ. 1978ರಿಂದ ಚಿಮ್ಮನಕಟ್ಟಿ-ಪಟ್ಟಣಶೆಟ್ಟಿ ಕುಟುಂಬಗಳ ಯುಗವೇ ಆರಂಭವಾಯಿತು. 1978ರಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದ ಬಿ.ಬಿ ಚಿಮ್ಮನಕಟ್ಟಿ ಗೆಲುವು ಸಾಧಿಸಿದರು. ಬಳಿಕ 1983ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚಿಮ್ಮನಕಟ್ಟಿ ಗೆಲುವು ಸಾಧಿಸಿದರು. 1985ರಲ್ಲಿ ಜನಾತಪಕ್ಷದಿಂದ ರಾವಸಾಹೇಬ್ ದೇಸಾಯಿ ಗೆಲುವು ಕಂಡರು. 1989ರಲ್ಲಿ ಜನತಾ ದಳದಿಂದ ಎಂ.ಕೆ ಪಟ್ಟಣಶೆಟ್ಟಿ ಅವರು ಗೆಲುವು ಕಂಡರು. ಮತ್ತೆ 1994, 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ.ಬಿ ಚಿಮ್ಮನಕಟ್ಟಿ ಗೆಲುವು ಸಾಧಿಸಿದರು. 2004 ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿತು. ಎಂ.ಕೆ ಪಟ್ಟಣಶೆಟ್ಟಿ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಬಳಿಕ 2008ರಲ್ಲೂ ಪಟ್ಟಣಶೆಟ್ಟಿ ಗೆಲುವು ಕಾಣುತ್ತಾರೆ. 2013ರಲ್ಲಿ ಬಿ.ಬಿ ಚಿಮ್ಮನಕಟ್ಟಿ ಗೆಲುವು ಸಾಧಿಸಿದರು. 2018ರಲ್ಲಿ ರಾಜ್ಯದ ಚಿತ್ತ ಬಾದಾಮಿಯತ್ತ ನೆಟ್ಟಿತ್ತು. ಏಕೆಂದರೆ ಕಾಂಗ್ರೆಸ್‌ನಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದರು. ಅವರ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿದ್ದ ಬಿ ಶ್ರೀರಾಮುಲು ಸ್ಪರ್ಧಿಸಿದ್ದರು. ಅಂತಿಮವಾಗಿ ಕಾಂಗ್ರೆಸ್ ಪಕ್ಷ ಜಯ ಗಳಿಸಿತು.

ಕಾಂಗ್ರೆಸ್ ಕಟ್ಟಾಳು ಬಿ.ಬಿ ಚಿಮ್ಮನಕಟ್ಟಿ ಕ್ಷೇತ್ರದಲ್ಲಿ ಬೆಳೆದುಬಂದ ಹಾದಿ

ವಕೀಲಿಕೆ ಓದಿದ ಬಿ.ಬಿ ಚಿಮ್ಮನಕಟ್ಟಿ ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ತಮ್ಮ ವಕೀಲಿಕೆಯ ಬುದ್ಧಿಶಕ್ತಿಯನ್ನು ರಾಜಕೀಯದಲ್ಲಿ ಬಳಸಿಕೊಂಡು ಚಾಣಾಕ್ಷ ರಾಜಕಾರಣಿ ಎನಿಸಿಕೊಂಡರು. 26ನೇ ವಯಸ್ಸಿನಲ್ಲೇ (1978ರಲ್ಲಿ) ಕ್ಷೇತ್ರದ ಮತದಾರರ ಮನಗೆದ್ದು ಶಾಸಕರಾಗಿ ಆಯ್ಕೆಯಾದರು. ಆ ಬಳಿಕ ಬಾದಾಮಿಯಲ್ಲಿ ಚಿಮ್ಮನಕಟ್ಟಿಯ ವರ್ಚಸ್ಸು ಹೆಮ್ಮರವಾಗಿ ಬೆಳೆಯುತ್ತಾ ಸಾಗಿತು.

ಬಿ.ಬಿ ಚಿಮ್ಮನಕಟ್ಟಿ

1978ರ ಚುನಾವಣೆ ವೇಳೆಗೆ ಬಾದಾಮಿ ಕ್ಷೇತ್ರದಲ್ಲೂ ಚುನಾವಣೆ ಕಾವು ಜೋರಾಗಿತ್ತು. ಅಷ್ಟೊತ್ತಿಗಾಗಲೇ ಜನತಾ ಪಕ್ಷ ಕೂಡ ಇಲ್ಲಿ ಚೇತರಿಕೆ ಕಂಡಿತ್ತು. ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಬಿ ಚಿಮ್ಮನಕಟ್ಟಿ ಸ್ಪರ್ಧಿಸಿ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆ ವೇಳೆ ಕಿರಿಯ ವಯಸ್ಸಿನ ಶಾಸಕರೆಂಬ ಹೆಗ್ಗಳಿಕೆಯೂ ಅವರದಾಗಿತ್ತು.

ಬಾದಾಮಿಯಲ್ಲಿ ಅತಿ ಹೆಚ್ಚು ಕುರುಬ ಸಮುದಾಯದ ಮತಗಳೇ ಇದ್ದು, ಸಹಜವಾಗಿಯೇ ಮಾಜಿ ಶಾಸಕ ಬಿ.ಬಿ ಚಿಮ್ಮನಕಟ್ಟಿ ಕ್ಷೇತ್ರದಲ್ಲಿ ಒಳ್ಳೆಯ ಹಿಡಿತ ಸಾಧಿಸಲು ಅನುಕೂಲವಾಯಿತು. ಚಿಮ್ಮನಕಟ್ಟಿ ಅವರು ಬಾದಾಮಿ ಕ್ಷೇತ್ರದಿಂದ ಐದು ಬಾರಿ ಶಾಸಕರಾಗುವ ಮೂಲಕ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ಅನಾರೋಗ್ಯದ ಕಾರಣದಿಂದಲೇ ಅವರು ಇಂದು ಚುನಾವಣಾ ರಾಜಕಾರಣದಿಂದ ದೂರ ಉಳಿದಿದ್ದಾರೆ.

2004ರಲ್ಲಿ ಬಾದಾಮಿ ಕ್ಷೇತ್ರದಲ್ಲಿ ಅರಳಿದ ಕಮಲ

2004ರಲ್ಲಿ ನಡೆದ ಚುನಾವಣೆಯಲ್ಲಿ ಎಂ.ಕೆ ಪಟ್ಟಣಶೆಟ್ಟಿ ಅವರು ಬಿಜೆಪಿ ಸೇರಿ, ಮೊದಲ ಬಾರಿಗೆ ಬಿಜೆಪಿಯಿಂದ ಗೆಲುವು ಸಾಧಿಸಿದರು. ಆ ಸಮಯಕ್ಕಾಗಲೇ ಒಮ್ಮೆ ಗೆದ್ದಿದ್ದ ಪಟ್ಟಣಶೆಟ್ಟಿ 2008ರ ವಿಧಾನಸಭಾ ಚುನಾವಣೆಯಲ್ಲೂ ಮತ್ತೊಮ್ಮೆ ಗೆಲುವು ಸಾಧಿಸಿದರು.

ಬಿ.ಬಿ ಚಿಮ್ಮನಕಟ್ಟಿ ಒಟ್ಟು ಹತ್ತು ವರ್ಷಗಳ ಕಾಲ ಅಧಿಕಾರದಿಂದ ದೂರವಿದ್ದರು. ಆ ನಂತರ ಬಂದ 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಕೈ ತಪ್ಪುವ ಸಂದರ್ಭ ಎದುರಾಗಿತ್ತು. ಬಾದಾಮಿ ಕ್ಷೇತ್ರದ ಕುರುಬ ಸಮುದಾಯ ಬಹುಸಂಖ್ಯಾತರು ಚಿಮ್ಮನಕಟ್ಟಿ ಬೆಂಬಲಕ್ಕೆ ನಿಂತ ಪರಿಣಾಮ ಕೊನೆಯ ಕ್ಷಣದಲ್ಲಿ ಚಿಮ್ಮನಕಟ್ಟಿಗೆ ಟಿಕೆಟ್ ಕೊಡಲೇ ಬೇಕಾಯಿತು. ಹತ್ತು ವರ್ಷಗಳ ಬಳಿಕ ಮತ್ತೆ ಚಿಮ್ಮನಕಟ್ಟಿ ಗೆಲುವಿನ ನಗೆ (57,103) ಬೀರಿದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಪಟ್ಟಣಶೆಟ್ಟಿ ಮೂರನೇ ಸ್ಥಾನಕ್ಕೆ (41,957) ಕುಸಿದಿದ್ದರೆ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಹಾಂತೇಶ ಮಮದಾಪೂರ 42,333 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುನಗುಂದದಲ್ಲಿ ಕೈ-ಕಮಲ ಅಭ್ಯರ್ಥಿಗಳಿಗೆ ನಡುಕ ಹುಟ್ಟಿಸಿರುವ ಪಕ್ಷೇತರ ಅಭ್ಯರ್ಥಿ

ರಾಜ್ಯದಲ್ಲಿ ನಡೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಮತ್ತು ಬಿಜೆಪಿಯಿಂದ ಬಿ ಶ್ರೀರಾಮುಲು ಸ್ಪರ್ಧಿಸಿದರು. ಜಾತಿ ರಾಜಕಾರಣದ ತುರುಸಿನ ಪೈಪೋಟಿಯಲ್ಲಿ ಸಿದ್ದರಾಮಯ್ಯ ಅವರು 67,599 ಮತ ಪಡೆದು ಕೇವಲ 1,696 ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ತಮ್ಮ ರಾಜಕೀಯ ಪ್ರಸ್ತುತತೆಯನ್ನು ಕಾಪಾಡಿಕೊಳ್ಳುವುದರಲ್ಲಿ ಯಶಸ್ವಿಯಾದರು. (ಮತ್ತೊಂದು ಕಡೆ ಸ್ಪರ್ಧಿಸಿದ್ದ ಸಿದ್ದರಾಮಯ್ಯನವರು ಚಾಮುಂಡೇಶ್ವರಿಯಲ್ಲಿ ಸೋಲಬೇಕಾಗಿ ಬಂದಿತ್ತು.) ಅವರಿಗೆ ತೀವ್ರ ಪೈಪೋಟಿ ನೀಡಿದ ಶ್ರೀರಾಮುಲು 65,903 ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇಬ್ಬರು ರಾಜ್ಯಮಟ್ಟದಲ್ಲಿ ಪ್ರಭಾವಿ ನಾಯಕರ ನಡುವೆ ಜೆಡಿಎಸ್‌ನ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದ ಹನಮಂತ ಮಾವಿನಮರದ 24,484 ಮತಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಜಾತಿವಾರು ಲೆಕ್ಕಾಚಾರ

ಬಾದಾಮಿ ಕ್ಷೇತ್ರದಲ್ಲಿ ಪುರುಷ ಮತದಾರರ ಸಂಖ್ಯೆ 1,07,074 ಇದ್ದು ಮಹಿಳಾ ಮತದಾರರ ಸಂಖ್ಯೆ 1,05,098 ಇದೆ. ಒಟ್ಟು ಸುಮಾರು 212187. ಕುರುಬ-49,600, ಲಿಂಗಾಯತ-32000, ಎಸ್‌ಸಿ-29,900, ವಾಲ್ಮೀಕಿ-19,500, ಮುಸ್ಲಿಂ-19,000, ದೇವಾಂಗ (ನೇಕಾರ)-15,500, ಗಾಣಿಗ-10,500, ಕ್ಷತ್ರಿಯ ಮರಾಠ-5,700, ವಿಶ್ವಕರ್ಮ-4,600, ರೆಡ್ಡಿ-3,800, ಉಪ್ಪಾರ-2,700, ಕಬ್ಬಲಿಗ-2,650, ಗೊಲ್ಲ-2,250, ಕ್ರಿಶ್ಚಿಯನ್-1450 ಮತ್ತು ಇತರೆ-27,000.

ಸಿದ್ದರಾಮಯ್ಯನವರು ಮಾಡಿದ ಕೆಲಸಗಳಿಂದ ಚಿಮ್ಮನಕಟ್ಟಿಗೆ ಲಾಭವಾಗುವ ಸಾಧ್ಯತೆ

ಬಾದಾಮಿ ಮತಕ್ಷೇತ್ರದಲ್ಲಿ ಕುರುಬ, ಮುಸ್ಲಿಂ, ವಾಲ್ಮೀಕಿ ಹಾಗೂ ಲಿಂಗಾಯತ ಸಮುದಾಯದವರು ನಿರ್ಣಾಯಕ ಮತದಾರರಾಗಿದ್ದಾರೆ. ಹಿಂದಿನ ಸಲ ಸಿದ್ದರಾಮಯ್ಯ ಬಾದಾಮಿ ಮತಕ್ಷೇತ್ರಕ್ಕೆ ಸ್ಪರ್ಧಿಸಿದಾಗ ಕ್ಷೇತ್ರಕ್ಕೆ ಅವರು ಹೊಸಬರು. ಶಾಸಕರಾದ ಮೇಲೆ ಸುಮಾರು ಮೂರು ಸಾವಿರ ಕೋಟಿಗೂ ಅಧಿಕ ಅನುದಾನ ತಂದು, ನಾನಾ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಹಿಂದಿನ ಸಲ ಬಿಜೆಪಿ ಪಕ್ಷದಿಂದ ಶ್ರೀರಾಮುಲು ಪ್ರತಿಸ್ಪರ್ಧಿಯಾಗಿದ್ದರಿಂದ ವಾಲ್ಮೀಕಿ ಸಮುದಾಯ ಮತಗಳು ಕಾಂಗ್ರೆಸ್‌ಗೆ ಅತಿ ಕಡಿಮೆ ಬಂದಿದ್ದವು. ಈಗ ವಾಲ್ಮೀಕಿ ಸಮುದಾಯ ಮತ್ತೆ ಕಾಂಗ್ರೆಸ್‌ನತ್ತ ವಾಲುವ ಸಾಧ್ಯತೆ ಹೆಚ್ಚಿದೆ.

ಸಿದ್ದರಾಮಯ್ಯ ಅವರು 2018ರಲ್ಲಿ ರಕ್ಷಣಾ ಕ್ಷೇತ್ರವನ್ನಾಗಿ ಬಾದಾಮಿಯನ್ನು ಕೊನೆಕ್ಷಣದಲ್ಲಿ ಆಯ್ಕೆ ಮಾಡಿಕೊಂಡಿದ್ದರು. ಅವರ ನಿರೀಕ್ಷೆಯಂತೆ ಬಾದಾಮಿ ಜನರು ಅವರಿಗೆ ರಾಜಕೀಯ ಜೀವನಕ್ಕೆ ಜೀವ ತುಂಬಿದ್ದಾರೆ. ಆದರೆ ಈ ಬಾರಿ ಅವರು ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದಕ್ಕೆ, ಅಭಿಮಾನಿಗಳು ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂಬ ಮನವಿಯನ್ನು ಮಾಡಿದ್ದರು. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ಮತ್ತು ಕ್ಷೇತ್ರದ ಜನತೆ ಬೆಂಗಳೂರಿಗೆ ಬಂದು, ನೀವು ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು, ಯಾವುದೇ ಕಾರಣಕ್ಕೂ ನಿಮ್ಮನ್ನು ನಾವು ಬಿಡುವುದಿಲ್ಲ ಎಂದು ಪಟ್ಟುಬಿಡದೆ ಧರಣಿ-ಪ್ರತಿಭಟನೆಗಳನ್ನು ನಡೆಸಿದ್ದರು.

ಒಂದು ವೇಳೆ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಸ್ಪರ್ಧಿಸದೇ ಇದ್ದರೆ ಕಾಂಗ್ರೆಸ್‌ಗೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದರು.

ಭೀಮಸೇನ ಚಿಮ್ಮನಕಟ್ಟಿಗೆ ಕೈ ಟಿಕೆಟ್

ಇದೀಗ ಬಾದಾಮಿಯಲ್ಲಿ ಮಾಜಿ ಮಂತ್ರಿ ಬಿ.ಬಿ ಚಿಮ್ಮನಕಟ್ಟಿ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ನಂತರದ ಸ್ಥಾನದಲ್ಲಿ ಮಾಜಿ ಸಚಿವ ಬಿ.ಬಿ ಚಿಮ್ಮನಕಟ್ಟಿ ಅವರ ಹೆಸರು ಹೆಚ್ಚು ಪ್ರಚಲಿತದಲ್ಲಿತ್ತು. ಆದರೆ ಅವರ ಅನಾರೋಗ್ಯದ ಕಾರಣದಿಂದ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ನೀಡಲಾಗಿದೆ. ಕುರುಬ ಸಮುದಾಯದ ಮಹೇಶ ಹೊಸಗೌಡರು ಕೂಡ ಅರ್ಜಿ ಹಾಕಿದ್ದರು. ಆದರೆ ಟಿಕೆಟ್ ಸಿಕ್ಕಿಲ್ಲ. ಹಾಗಾಗಿ ಅವರಿಗೆ ಕಾಂಗ್ರೆಸ್ ಮೇಲೆ ಸಹಜವಾದ ಮುನಿಸು ಹುಟ್ಟಿಕೊಂಡಿತ್ತು. ಆದರೆ ಇದು ಬಂಡಾಯವೇಳುವ ಮಟ್ಟಕ್ಕೆ ಹೋಗದಂತೆ ಕ್ಷೇತ್ರದ ಹಾಲಿ ಶಾಸಕ ಸಿದ್ದರಾಮಯ್ಯ ಅವರು ತಡೆದಿದ್ದಾರೆ. ಅಭ್ಯರ್ಥಿ ಚಿಮ್ಮನಕಟ್ಟಿ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಬೇಕು ಎಂದು ತಿಳಿಹೇಳಿದ್ದಾರೆ. ಇನ್ನು ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಚಿಮ್ಮನಕಟ್ಟಿ ವಿರುದ್ಧ ಟಿಕೆಟ್‌ಗಾಗಿ ಫೈಟ್ ನಡೆಸುತ್ತಿದ್ದ ಡಾ. ದೇವರಾಜ್ ಪಾಟೀಲ್ ಈ ಬಾರಿ ಬಾದಾಮಿ ಬಿಟ್ಟು ಬಾಗಲಕೋಟೆ ಕ್ಷೇತ್ರದತ್ತ ಮುಖ ಮಾಡಿದ್ದಾರೆ. ಹಾಗಾಗಿ ಬಂಡಾಯದ ಬಿಸಿಯಂತೂ ಕಾಂಗ್ರೆಸ್‌ಗೆ ಇಲ್ಲ.

ನಂಬಿದ ಸಮುದಾಯಗಳು ಕೈ ಹಿಡಿದರೆ ಗೆಲುವು ಫಿಕ್ಸ್

ಕ್ಷೇತ್ರದಲ್ಲಿ ಚಿಮ್ಮನಕಟ್ಟಿ ಮನೆತನದ ಮೇಲೆ ಕುರುಬ ಸಮುದಾಯಕ್ಕೆ ವಿಶೇಷ ಪ್ರೀತಿ, ಅಭಿಮಾನ ಇದೆ. ಹಾಗಾಗಿ ಸಮುದಾಯದ ಬಹುತೇಕ ಮತಗಳು ಕಾಂಗ್ರೆಸ್ ಅಭ್ಯರ್ಥಿ ಪರ ಬರಲಿವೆ ಎನ್ನುವ ನಿರೀಕ್ಷೆಯಲ್ಲಿ ಭೀಮಸೇನ ಚಿಮ್ಮನಕಟ್ಟಿ ಇದ್ದಾರೆ. ಇನ್ನು ಕಾಂಗ್ರೆಸ್‌ನ ಸಾಂಪ್ರದಾಯಿಕ ಬೆಂಬಲಿಗರಾದ ದಲಿತ, ವಾಲ್ಮೀಕಿ, ಮುಸ್ಲಿಂ, ಕ್ರಿಶ್ಚಿಯನ್ ಮತಗಳು ಕೈ ಹಿಡಿಯುವ ಸಾಧ್ಯತೆ ಇದೆ.

ಭೀಮಸೇನ ಚಿಮ್ಮನಕಟ್ಟಿ ಅವರು ತಮ್ಮ ತಂದೆಯಷ್ಟು ಜನಸಂಪರ್ಕ ಹೊಂದಿಲ್ಲ. ಹಾಗಾಗಿ ಕಾಂಗ್ರೆಸ್‌ಗೆ ಗೆಲುವಿನ ತುತ್ತು ಅಷ್ಟು ಸುಲಭವಾಗಿ ದಕ್ಕುವುದಲ್ಲ. ಚಿಮ್ಮನಕಟ್ಟಿ ಹೆಸರಿನಿಂದ ಬರುವ ಮತಗಳೊಟ್ಟಿಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಬಂದರೆ ಮಾತ್ರ ಚಿಮ್ಮನಕಟ್ಟಿಗೆ ಗೆಲುವು ಸಾಧ್ಯ.

ಜೆಡಿಎಸ್: ದಿಗ್ಗಜರ ಮಧ್ಯೆ ಸೆಣಸಾಡಿ ಸೈ ಎನಿಸಿದ್ದ ಮಾವಿನಮರ ಮತ್ತೆ ಅಖಾಡದಲ್ಲಿ..

2018ರ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಾದಾಮಿ ಕ್ಷೇತ್ರದಲ್ಲಿ ಇಬ್ಬರು ದಿಗ್ಗಜ ನಾಯಕರ ಸ್ಪರ್ಧೆ ಮಾಡಿದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿ ಹನಮಂತ ಮಾವಿನಮರ ಅವರೇ ಅಭ್ಯರ್ಥಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋಲು ಕಂಡ ಬಳಿಕವೂ ಸುಮ್ಮನೆ ಕೂರದ ಮಾವಿನಮರದ, ಕ್ಷೇತ್ರದಲ್ಲಿ ಪಕ್ಷ ಮತ್ತು ಕಾರ್ಯಕರ್ತರನ್ನು ಸಂಘಟಿಸುವಲ್ಲಿ ನಿರಂತರ ಕೆಲಸ ಮಾಡುತ್ತಾ ಬಂದಿದ್ದಾರೆ. ಹನಮಂತ ಮಾವಿನಮತ ಪಂಚಮಸಾಲಿ ಲಿಂಗಾಯತ ಸಮುದಾಯದವರಾಗಿದ್ದಾರೆ.

ಇವರು ಕೇವಲ ಪಂಚಮಸಾಲಿ ಲಿಂಗಾಯತ ಸಮುದಾಯದ ಜೊತೆಗಷ್ಟೇ ಅಲ್ಲದೆ, ಎಲ್ಲ ಸಮುದಾಯದೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಹಾಗಾಗಿ ಈ ಬಾರಿ ಸಿದ್ದರಾಮಯ್ಯ ಇಲ್ಲದ ಅಖಾಡದಲ್ಲಿ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶನ ಮಾಡಲಿದ್ದಾರೆ. ಈ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಆಡಳಿತ ನೋಡಿದ ಬಾದಾಮಿ ಕ್ಷೇತ್ರದ ಜನತೆ ಈ ಯುವ ನಾಯಕನ ಮೇಲೆ ಹೆಚ್ಚು ಭರವಸೆಗಳನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಅಭ್ಯರ್ಥಿ ಆಯ್ಕೆ: ಗೋತಾ ಹೊಡೆದ ಬಿಜೆಪಿಯ ಅವಸರದ ಪ್ರಯೋಗ

ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಬಿಜೆಪಿಯತ್ತ ಹೆಚ್ಚು ಚಲಾವಣೆಯಾಗುತ್ತವೆ. ಹಾಗಾಗಿ ಮಾವಿನಮರದ ಅವರ ಸ್ಪರ್ಧೆ ಬಿಜೆಪಿಗೆ ದೊಡ್ಡ ಹೊಡೆತ ಕೊಡುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಇತರ ಸಮುದಾಯದ ಅತ್ಯಧಿಕ ಮತಗಳನ್ನು ಬಾಚಿಕೊಳ್ಳುವುದರಲ್ಲಿ ಮಾವಿನಮರದ ಯಶಸ್ವಿಯಾದರೆ ಕೈ-ಕಮಲದ ನಡುವೆ ತೆನೆ ಹೊತ್ತ ಮಹಿಳೆ ಎದ್ದು ನಿಲ್ಲುತ್ತಾಳೆ. ರಾಜಕೀಯ ಚದುರಂಗದಲ್ಲಿ ಮಾವಿನಮರದಗೆ ಲಾಟರಿ ಹೊಡೆದರೂ ಅಚ್ಚರಿಯಿಲ್ಲ.

ಮಾವ-ಅಳಿಯನಿಗೆ ತಪ್ಪಿದ ಬಿಜೆಪಿ ಟಿಕೆಟ್; ಇಬ್ಬರ ನಡುವೆ ಮೂರನೆಯವನಿಗೆ ಲಾಭ

ಬಿಜೆಪಿಯಿಂದ ಮಹಾಂತೇಶ್ ಮಮದಾಪುರ ಹಾಗೂ ಅವರ ಮಾವ ಎಂ.ಕೆ.ಪಟ್ಟಣಶೆಟ್ಟಿ ಅವರ ನಡುವೆ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಆದರೆ ಇನ್ನೊಂದೆಡೆ ಈ ಅಳಿಯ-ಮಾವನನ್ನು ಬಿಟ್ಟು ಬಿಜೆಪಿ ಹೊಸ ಮುಖಕ್ಕೆ ಮಣೆಹಾಕಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ.

ಎಂ.ಕೆ ಪಟ್ಟಣಶೆಟ್ಟಿ

ಇದರಿಂದ ಪಟ್ಟಣಶೆಟ್ಟಿ ಹಾಗೂ ಮಮದಾಪುರ ಇಬ್ಬರು ನಾಯಕರು ಬಂಡಾಯ ಏಳುವ ಮುನ್ಸೂಚನೆ ನೀಡಿದ್ದಾರೆ. ಆದರೆ ಜಿಲ್ಲೆಯ ಮತ್ತೋರ್ವ ಬಿಜೆಪಿ ಹಿರಿಯ ನಾಯಕ ಗೋವಿಂದ ಕಾರಜೋಳ ಅವರು ಈ ಇಬ್ಬರಿಗೂ ಸಮಾಧಾನ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಇಬ್ಬರು ನಾಯಕರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯದಿದ್ದರೂ ಪ್ರಚಾರ ಸಂದರ್ಭದಲ್ಲಿ ಕೈಕೊಡುವ ಸಾಧ್ಯತೆ ಹೆಚ್ಚಿದೆ.

ಇನ್ನು ಬಿಜೆಪಿ ಅಭ್ಯರ್ಥಿಯಾಗಿರುವ ಶಾಂತಗೌಡ ಪಾಟೀಲ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದವರು. ಅವರು ಕ್ಷೇತ್ರದ ಪ್ರಮುಖ ಕಾರ್ಯಕರ್ತರು ಹಾಗೂ ಮುಖಂಡರಿಗೆ ಮಾತ್ರ ಪರಿಚಿತರು, ಕ್ಷೇತ್ರದ ಮತದಾರರಿಗೆ ಇವರ ಮುಖ ಪರಿಚಯವೂ ಇಲ್ಲ. ಹೊಸ ಮುಖಗಳಿಗೆ ಟಿಕೆಟ್ ನೀಡಿ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಬಿಜೆಪಿಯ ನೀತಿ ಈ ಕ್ಷೇತ್ರದಲ್ಲಿ ಎಷ್ಟು ಉಪಯೋಗಕ್ಕೆ ಬರುತ್ತದೆ ಈಗಲೇ ಹೇಳಲು ಸಾಧ್ಯವಿಲ್ಲ.

ಒಟ್ಟಿನಲ್ಲಿ ಬಿಜೆಪಿ ಬಂಡಾಯ ಶಮನವಾದರೆ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಸದ್ಯಕ್ಕೆ ಕೈ-ತೆನೆ ನಡುವೆ ಬಿಗ್ ಫೈಟ್ ನಡೆಯುವ ಸೂಚನೆಗಳು ಕಂಡುಬರುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...