Homeಕರ್ನಾಟಕಅಭ್ಯರ್ಥಿ ಆಯ್ಕೆ: ಗೋತಾ ಹೊಡೆದ ಬಿಜೆಪಿಯ ಅವಸರದ ಪ್ರಯೋಗ

ಅಭ್ಯರ್ಥಿ ಆಯ್ಕೆ: ಗೋತಾ ಹೊಡೆದ ಬಿಜೆಪಿಯ ಅವಸರದ ಪ್ರಯೋಗ

- Advertisement -
- Advertisement -

ಮೇ ಹತ್ತರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗಳಿಗೆ ಒಟ್ಟು 224 ಸ್ಥಾನಗಳ ಪೈಕಿ 212 ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದ ಬಳಿಕ ಭುಗಿಲೆದ್ದ ಬಂಡಾಯದಿಂದ ಆಳುವ ಬಿಜೆಪಿಯು ಕಂಗಾಲಾಗಿದೆ. ಪಕ್ಷದ ಟಿಕೆಟ್ ಸಿಗದಿರುವ ಆಕಾಂಕ್ಷಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸುವುದು ಪ್ರತಿಯೊಂದು ಚುನಾವಣೆಯಲ್ಲಿ ಮತ್ತು ಪ್ರತಿಯೊಂದು ಪಕ್ಷದಲ್ಲಿ ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ, ರಾಜ್ಯದಲ್ಲಿ ಬಿಜೆಪಿಯು ಎದುರಿಸುತ್ತಿರುವಂತದ್ದು ’ಸಾಮಾನ್ಯ’ ಎಂದು ಪರಿಗಣಿಸಲಾಗುವುದಕ್ಕಿಂತ ಖಂಡಿತವಾಗಿಯೂ ಹೆಚ್ಚೇ ಆಗಿದೆ ಮತ್ತು ಪಕ್ಷದೊಳಗಿನ ಕೆಲವು ನಿರ್ದಿಷ್ಟ ಅಲ್ಲೋಲಕಲ್ಲೋಲಗಳಿಗೆ ಇದು ರೋಗಲಕ್ಷಣದಂತೆ ಕಂಡುಬರುತ್ತಿದೆ.

ಈ ಬಾರಿ ಬಿಜೆಪಿಯು ಯಥಾಸ್ಥಿತಿಯನ್ನು ಮುರಿದು, ತನ್ನ ಅಭ್ಯರ್ಥಿಗಳ ಪಟ್ಟಿಯು ಹಲವಾರು ಹೊಸಮುಖಗಳೊಂದಿಗೆ ಅಚ್ಚರಿಯನ್ನು ಹೊಂದಿರಲಿದೆ ಎಂಬ ಭಾವನೆ ಮೂಡಿಸಲು ಯತ್ನಿಸಿತ್ತು. ಆದರೆ, ಅಂತಿಮವಾಗಿ ಬಹು ನಿರೀಕ್ಷಿತ ಪಟ್ಟಿಯ ಘೋಷಣೆಯಾದಾಗ ಅದು ಆರಂಭಿಕ ನಿರೀಕ್ಷೆಗಿಂತ ವ್ಯತಿರಿಕ್ತವಾಗಿತ್ತು. ಕೆಲವು ಹೊಸಮುಖಗಳಿದ್ದು, 16 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಯಿತು. ಆದರೆ, ಈ ಬದಲಾವಣೆಗಳು, ಕರ್ನಾಟಕದಲ್ಲಿ ಪ್ರಯೋಗ ಮಾಡುವಲ್ಲಿ ಬಿಜೆಪಿಯ ಶಕ್ತಿಗೆ ಬದಲಾಗಿ, ಅದರ ಸೀಮಿತತೆಯನ್ನು ಹೆಚ್ಚಾಗಿ ಪ್ರತಿಫಲಿಸುತ್ತವೆ. ಗಂಭೀರವಾದ ರಾಚನಿಕ ಅಥವಾ ಸಂಘಟನಾತ್ಮಕ ದೌರ್ಬಲ್ಯಗಳು ಮತ್ತು ಆಳವಾದ ಗುಂಪುಗಾರಿಕೆಯ ಬಿರುಕುಗಳನ್ನು ಹೊಂದಿರುವ ರಾಜ್ಯದಲ್ಲಿ ಪಕ್ಷವು ಸಾಹಸವನ್ನು ತೋರಲು ಅವಸರ ಮಾಡಿರುವಂತೆ ಕಾಣುತ್ತದೆ.

ದಾಖಲೆಯಲ್ಲಿ ಅಭ್ಯರ್ಥಿಗಳ ಯಾದಿಯು ಹಲವು ಹೊಸ ಮುಖಗಳನ್ನು ಹೊಂದಿದೆಯಾದರೂ, ಅವರಲ್ಲಿ ಹೆಚ್ಚಿನವರನ್ನು, ಕಳೆದ ಬಾರಿ ಪಕ್ಷವು ಸೋತಿದ್ದ ಅಥವಾ ಈ ಬಾರಿಯೂ ಗೆಲ್ಲುವ ಆಸೆ ಹೆಚ್ಚೇನೂ ಇಲ್ಲದ ಕ್ಷೇತ್ರಗಳಲ್ಲಿ ನಿಲ್ಲಿಸಲಾಗಿದೆ. ಹೆಚ್ಚುಕಡಿಮೆ ಇಡೀ ಹಳೆ ಮೈಸೂರು ಪ್ರದೇಶದ ಪರಿಸ್ಥಿತಿ ಇದಾಗಿದೆ. ಹೊಸಮುಖಗಳೆಂದು ಪರಿಗಣಿಸಲಾದವರಲ್ಲಿ, ಹಾಲಿ ಶಾಸಕರು ನಿವೃತ್ತಿ ಘೋಷಿಸಿರುವ ಕ್ಷೇತ್ರಗಳಲ್ಲಿ ನಿಲ್ಲಿಸಲಾಗಿರುವವರನ್ನೂ ಸೇರಿಸಲಾಗಿದೆ. (ಉದಾಹರಣೆಗೆ: ಉಡುಪಿ ಜಿಲ್ಲೆಯ ಕುಂದಾಪುರ ಕ್ಷೇತ್ರ.) ಅಥವಾ ಹಾಲಿ ಶಾಸಕರು ಗಂಭೀರವಾದ ಆರೋಪಗಳಲ್ಲಿ ಸಿಲುಕಿಹಾಕಿಕೊಂಡು ಅವರನ್ನು ಮತ್ತೆ ನಿಲ್ಲಿಸಲು ಪಕ್ಷಕ್ಕೆ ಸಾಧ್ಯವಾಗದಂತಹ ಕ್ಷೇತ್ರಗಳಲ್ಲಿ ನಿಂತವರು. (ಉದಾಹರಣೆಗೆ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರ.) ಅದಲ್ಲದೇ, ಹೊಸಮುಖಗಳಲ್ಲಿ ಇಬ್ಬರು ಗಂಭೀರವಾದ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸಿದವರು ಮತ್ತೊಬ್ಬರು ಬಹುಕೋಟಿ ಹಣಕಾಸು ಹಗರಣದಲ್ಲಿ ಬಂಧಿತರಾಗಿದ್ದ ಮಾಜಿ ಸರಕಾರಿ ಅಧಿಕಾರಿ ಸೇರಿದ್ದಾರೆ. ಯಾದಿಯಲ್ಲಿ ’ಜಾತಿ ಸಮತೋಲನ’ ಕಾಯ್ದುಕೊಳ್ಳಲು ಅವರನ್ನು ಸೇರಿಸಲಾಗಿದೆ ಎಂದು ಪಕ್ಷವು ಸಮರ್ಥಿಸಿಕೊಂಡಿದೆ.

ಅದೇ ರೀತಿಯಲ್ಲಿ ಹಾಲಿ ಶಾಸಕರನ್ನು ಕೈಬಿಟ್ಟಿರುವ ಬಗ್ಗೆ ಬಹಳಷ್ಟನ್ನು ಹೇಳಿಕೊಳ್ಳಲಾಗುತ್ತಿದೆಯಾದರೂ, ವಾಸ್ತವವು ಬಹಳಷ್ಟು ಬೇರೆಯಾಗಿದೆ. ಈ ಯಾವ ಪ್ರಕರಣಗಳಲ್ಲೂ ಪಕ್ಷವು ಒಂದು ತಾತ್ವಿಕ ಗಟ್ಟಿ ನಿಲುವಿನಿಂದ ಅಪಾಯವನ್ನು ಎಳೆದುಕೊಂಡಂತೆ ಕಾಣುವುದಿಲ್ಲ. ಕೆಲವು ಕಡೆ ಕೈಬಿಡಲಾದ ಹಾಲಿ ಶಾಸಕರು ಪಕ್ಷವು ಕರಾವಳಿ ಕರ್ನಾಟಕದಲ್ಲಿ ಇರುವಂತೆ ಪಕ್ಷಕ್ಕೆ ಗೆಲ್ಲುವ ಆತ್ಮವಿಶ್ವಾಸ ಇರುವಂಥ ಕ್ಷೇತ್ರಗಳಿಗೆ ಸೇರಿದವರು ಅಥವಾ ಪಕ್ಷದ ಅಭ್ಯರ್ಥಿಗಳು ಮತ್ತೆ ಆಯ್ಕೆಯಾಗುವ ಅತ್ಯಲ್ಪ ಸಾಧ್ಯತೆ ಇರುವ ಕ್ಷೇತ್ರಗಳಿಗೆ ಸೇರಿದವರು. ಪಕ್ಷದ ಮಾಧ್ಯಮ ನಿರ್ವಾಹಕರು ಬಿತ್ತಲು ಯತ್ನಿಸಿದಂತೆ ಈ ಇಡೀ ’ದಿಟ್ಟ, ಹೊಸ ಪ್ರಯೋಗ’ವು ಈ ರೀತಿಯಲ್ಲಿ ನೆಲಕಚ್ಚಿದೆ. ಆದರೆ, ಇದಕ್ಕಿಂತ ಹೆಚ್ಚು ಕುತೂಹಲಕಾರಿಯಾದುದೆಂದರೆ, ಈ ಸೀಮಿತವಾದ ಪ್ರಯೋಗವು ಕೂಡಾ ಪಕ್ಷದಲ್ಲಿ ಉಂಟುಮಾಡಿರುವ ಬಂಡಾಯದ ಪ್ರಮಾಣ ಮತ್ತು ಅದರ ತೀವ್ರತೆ. ಬಿಜೆಪಿಯಾಗಲೀ, ಕರ್ನಾಟಕದ ಬೇರೆ ಯಾವುದೇ ಪಕ್ಷವಾಗಲೀ ಇಲ್ಲಿಯವರೆಗೆ, ಬಿಜೆಪಿಯು ಈಗ, ಪಕ್ಷದ ಅಭ್ಯರ್ಥಿಗಳ ಹೆಸರು ಬಹಿರಂಗವಾದ ಬಳಿಕ ಎದುರಿಸುತ್ತಿರುವ ಬಂಡಾಯ ಅಥವಾ ಹಿನ್ನಡೆಯನ್ನು ಎದುರಿಸಿಲ್ಲ.

ಪ್ರತಿಭಟನೆಗಳು, ರಾಜೀನಾಮೆಗಳು, ಪಕ್ಷಾಂತರಗಳು ಮತ್ತು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಬೆದರಿಕೆಗಳ ಕತೆಗಳು ಪಕ್ಷದ ನಾಯಕತ್ವವನ್ನು ಅಲುಗಾಡಿಸುತ್ತಿವೆ. ಕೆಲವು ಅಸಮಾಧಾಗೊಂಡಿರುವ ನಾಯಕರ ಬೆಂಬಲಿಗರು ಪ್ರಧಾನಿ ನರೇಂದ್ರ ಮೋದಿಯ ಭಾವಚಿತ್ರವನ್ನು ಕಿತ್ತುಹಾಕುವ ಮತ್ತು ಪಕ್ಷದ ಧ್ವಜಕ್ಕೆ ಬೆಂಕಿಹಚ್ಚುವ ಮಟ್ಟಕ್ಕೂ ಹೋಗಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುನಗುಂದದಲ್ಲಿ ಕೈ-ಕಮಲ ಅಭ್ಯರ್ಥಿಗಳಿಗೆ ನಡುಕ ಹುಟ್ಟಿಸಿರುವ ಪಕ್ಷೇತರ ಅಭ್ಯರ್ಥಿ

ಈ ಬಂಡಾಯವು ಕರ್ನಾಟಕದಲ್ಲಿ ಬಿಜೆಪಿ ವಿಸ್ತರಿಸುತ್ತಿರುವ ರೀತಿಗೆ ಸಂಬಂಧಿಸಿದಂತೆ ಗಂಭೀರವಾದ ವಿರೋಧಾಭಾಸವನ್ನು ಬಯಲುಮಾಡಿದೆ. ಬಿಜೆಪಿಯು ಒಂದು ಶಿಸ್ತುಬದ್ಧ ಪಕ್ಷ ಎಂಬ ರಾಷ್ಟ್ರವ್ಯಾಪಿ ಪ್ರತಿಪಾದನೆಗೆ ಹೊರತಾಗಿ, ಕರ್ನಾಟಕದಲ್ಲಿ ಅದು ಅತ್ಯಂತ ಅರ್ಥವಿಲ್ಲದ ಮಾತಾಗಿ, ಅಶಿಸ್ತಿನ ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದರ ಮೂಲಕ ಬೆಳೆದಿದೆ. ಹಲವು ವರ್ಷಗಳಿಂದ ಅದು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅತೃಪ್ತರು ಮತ್ತು ಅಧಿಕಾರದಾಹಿಗಳನ್ನು ಸೇರಿಸಿಕೊಳ್ಳುವುದರ ಮೂಲಕ ಇದನ್ನು ಸಾಧಿಸಿದೆ. ಪಕ್ಷದೊಂದಿಗೆ ಯಾವುದೇ ತಾತ್ವಿಕ ನಂಟಿಲ್ಲದ ಈ ನಾಯಕರು ಸಹಜವಾಗಿಯೇ ದಿಟ್ಟ ಪ್ರಯೋಗವನ್ನು ಮಾಡುವ ಬಿಜೆಪಿ ಹೈಕಮಾಂಡಿನ ಯೋಜನೆಗೆ ಸಹಕರಿಸಲು ಒಪ್ಪುತ್ತಿಲ್ಲ. ರಾಜ್ಯ ಬಿಜೆಪಿಯು ಬೀದಿಗಳಲ್ಲಿ ಪಕ್ಷದ ಕೋಮುವಾದಿ ಅಜೆಂಡಾವನ್ನು ನಡೆಸುವ ಹಲವಾರು ಹಿಂದುತ್ವದ ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸಿದೆ. ಹಲವಾರು ಗಂಭೀರ ಪ್ರಕರಣಗಳನ್ನು ತಮ್ಮ ಮೇಲೆ ಎಳೆದುಕೊಂಡಿರುವ ಈ ನಾಯಕರು ಈಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಮೂಲಕ ಕೊಳ್ಳೆಯಲ್ಲಿ ತಮ್ಮ ಪಾಲು ಕೇಳುತ್ತಿದ್ದಾರೆ.

ಇವೆಲ್ಲವುಗಳಿಗಿಂತ ಹೆಚ್ಚಾಗಿ ಪಕ್ಷವು 2008 ಮತ್ತು 2018ರಲ್ಲಿ ಬಹುಮತ ಪಡೆಯಲು ವಿಫಲವಾದಾಗ, ಸರಕಾರ ರಚಿಸಲು ಬೇಕಾದ ಸಂಖ್ಯಾಬಲ ಕ್ರೋಢೀಕರಿಸಲು ವಿರೋಧ ಪಕ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಪಕ್ಷಾಂತರವನ್ನು ಪ್ರಚೋದಿಸಿತ್ತು. ಇಂಥ ವಲಸಿಗರು ಮತ್ತು ಬೀದಿ ಮಟ್ಟದ ಮುಖಂಡರೇ ಬಹುತೇಕ ರಾಜ್ಯದಾದ್ಯಂತ ಪಕ್ಷದ ಮಧ್ಯಮ ಹಂತದ ನಾಯಕತ್ವವನ್ನು ವಹಿಸಿದ್ದು ಇವರುಗಳ ಮೇಲೆ ಬಿಜೆಪಿ ತೀವ್ರ ಅವಲಂಬಿತವಾಗಿದೆ. ಇಂಥ ಅಶಿಸ್ತಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ನಾಯಕತ್ವವು ಒಂದು ಸಣ್ಣಮಟ್ಟದ ’ಶಿಸ್ತಿನ ಟಿಕೆಟ್ ಹಂಚಿಕೆ’ಗೆ ಹೊರಟಾಗ ಅದು ನಿರೀಕ್ಷಿತವಾಗಿಯೇ ಹಿಂದೇಟು ಹೊಡೆಯಿತು.

ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಯೋಗ ಮಾಡುವ ಬಿಜೆಪಿಯ ಯೋಜನೆಯು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ತೀರಾ ಅವಲಂಬಿತವಾಗಿದೆ ಎಂಬ ವಾಸ್ತವದ ಜೊತೆಯೂ ಪಕ್ಷ ರಾಜಿ ಮಾಡಿಕೊಳ್ಳಬೇಕಾಯಿತು. ಅವರ ಹೊರತು ಪ್ರಬಲ ಲಿಂಗಾಯತ ಸಮುದಾಯದ ಬೆಂಬಲವನ್ನು ಲೆಕ್ಕಹಾಕಲು ಸಾಧ್ಯವಿಲ್ಲ. ತನ್ನ ಸಂಬಂಧಿಕರು ಮಾತ್ರವಲ್ಲದೆ, ತನ್ನದೇ ಆದ ನಾಯಕರು ಮತ್ತು ಕಾರ್ಯಕರ್ತರ ಜಾಲವನ್ನು ಹೊಂದಿರುವ ಹಳೆಯ ಹುಲಿ ಯಡಿಯೂರಪ್ಪ ಅವರು ಅಭ್ಯರ್ಥಿ ಯಾದಿಯಲ್ಲಿ ತನ್ನ ಬೆಂಬಲಿಗರಿಗೆ ಸಾಕಷ್ಟು ಪ್ರಾತಿನಿಧ್ಯ ದೊರಕಿಸಿಕೊಡಲು ತೀವ್ರ ಚೌಕಾಶಿ ಮಾಡಿದರು.

ಇದೇ ಹೊತ್ತಿನಲ್ಲಿ ’ಆಪರೇಷನ್ ಕಮಲ’ದ ವೇಳೆ ಬಿಜೆಪಿ ಸೇರಿದ್ದ ಪ್ರತಿಪಕ್ಷಗಳ ಪಕ್ಷಾಂತರಿಗಳು ಬಿಜೆಪಿಯಲ್ಲಿ ಚೌಕಾಶಿ ಮಾಡಬಲ್ಲ ಬಲವಾದ ಗುಂಪಾಗಿ ಬೆಳೆದರು. ತಮಗೆ ಮಾತ್ರವಲ್ಲದೇ, ತಮ್ಮ ಕೆಲವು ಬೆಂಬಲಿಗರಿಗೂ ಅವರು ಟಿಕೆಟ್ ಬೇಡಿಕೆಯಿಟ್ಟರು. ಈ ಗುಂಪಿನಲ್ಲಿ ಅತ್ಯಂತ ಬಲವಾದ ಧ್ವನಿ ಎಂದರೆ ಬೆಳಗಾವಿಯ ರಮೇಶ್ ಜಾರಕಿಹೊಳಿ. ಅವರು ಹೆಚ್ಚು ಕಡಿಮೆ ಪಕ್ಷವನ್ನೇ ಬ್ಲಾಕ್‌ಮೇಲ್ ಮಾಡಿ, ತಮಗೆ ಮಾತ್ರವಲ್ಲದೇ, ಪಕ್ಷಾಂತರಿಗಳು ಮತ್ತು ಅವರ ಬೆಂಬಲಿಗರಿಗೂ ಟಿಕೆಟ್ ಸಿಗವಂತೆ ಮಾಡಲು ಶಕ್ತರಾದರು. ನೆರೆಯ ಕ್ಷೇತ್ರಗಳಲ್ಲಿ ಕೂಡಾ ಅವರ ಪ್ರಭಾವವನ್ನು ಪರಿಗಣಿಸಿ ಪಕ್ಷವು ಅವರ ಒತ್ತಡಕ್ಕೆ ಬಹುತೇಕ ಮಣಿಯಬೇಕಾಯಿತು. ಆದರೆ, ಇದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೊರಹೋಗುವುದಕ್ಕೆ ಕಾರಣವಾಯಿತು. ಯಾರ ಎದುರು ಪ್ರಬಲ ಬಿಜೆಪಿಯೇ ದುರ್ಬಲವಾಗಿ ಕಂಡಿತೋ, ಅಂತಾ ಜಾರಕಿಹೊಳಿ ಅಶ್ಲೀಲ ವಿಡಿಯೋ ಪ್ರಕರಣದ ಕಾರಣದಿಂದ ರಾಜೀನಾಮೆ ನೀಡಬೇಕಾಗಿ ಬಂದಿದ್ದ ಮಾಜಿ ಸಚಿವ.

ಕೊನೆಯದಾಗಿ, ಒಂದು ರಾಜಿಯಾಗಿ ಮೂಡಿಬಂದ ಈ ಅಭ್ಯರ್ಥಿ ಪಟ್ಟಿಯು ಪ್ರತಿಯೊಂದು ಬಣದಲ್ಲಿಯೂ ಅಸಮಾಧಾನ ಉಂಟುಮಾಡಿದೆ. ದೊಡ್ಡದಾಗಿ ಕಣ್ಣಿಗೆ ರಾಚುವುದೆಂದರೆ, ಕರ್ನಾಟಕದ ಚುನಾವಣೆಗಳ ನೇರ ಉಸ್ತುವಾರಿ ವಹಿಸಿಕೊಂಡಿರುವ ಅತ್ಯಂತ ಪ್ರಬಲ ಹೈಕಮಾಂಡಿನ ಇಮೇಜು ಕೂಡಾ, ತನ್ನ ಇಚ್ಚೆಯಂತೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗಲೀ, ಬಂಡಾಯವನ್ನು ಶಮನ ಮಾಡುವುದಕ್ಕಾಗಲೀ ಶಕ್ತವಾಗಲಿಲ್ಲ. ನಾಯಕತ್ವದ ಒಂದು ಗುಂಪು ಅಭ್ಯರ್ಥಿ ಯಾರೇ ಆಗಿದ್ದರೂ, ಬಂಡಾಯ ಅಭ್ಯರ್ಥಿಗಳು ಇದ್ದರೂ ಪಕ್ಷದ ಚಿಹ್ನೆಗೆ ಮತಹಾಕುವ ಬೆಂಬಲಿಗರ ನೆಲೆಯನ್ನು ಕಟ್ಟಿದ್ದೇವೆ ಎಂದು ನಂಬಿದ್ದು, ನಿಶ್ಚಿಂತವಾಗಿದೆ. ಹಾಗಿದ್ದರೆ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಂತಹ ಶುದ್ಧ ದಾಖಲೆ ಹೊಂದಿರುವವರು ಮತ್ತು ಪಕ್ಷದ ನಿಷ್ಠಾವಂತರನ್ನು ಬಲಿ ಕೊಟ್ಟು ಗಂಭೀರ ಆರೋಪ ಹೊಂದಿರುವವರು ಮತ್ತು ಪಕ್ಷಾಂತರಿಗಳು ಅಭ್ಯರ್ಥಿಗಳ ಯಾದಿಯಲ್ಲಿ ಸ್ಥಾನ ಪಡೆದಿರುವುದು ಏಕೆ ಎಂಬುದು ಬಿಜೆಪಿಯ ಈ ತೋಪಾಗಿರುವ ಪ್ರಯೋಗದ ಇನ್ನೊಂದು ಅರ್ಥವಾಗದ ಅಂಶ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...