Homeಮುಖಪುಟಮಹಿಳಾ ಕುಸ್ತಿಪಟುಗಳು ಭಾರತದ ’ಬೇಟಿ’ಗಳಲ್ಲವೇ?

ಮಹಿಳಾ ಕುಸ್ತಿಪಟುಗಳು ಭಾರತದ ’ಬೇಟಿ’ಗಳಲ್ಲವೇ?

- Advertisement -
- Advertisement -

ಭಾರತದ ಪ್ರಧಾನಿಗಳಿಗೆ ಇತ್ತೀಚೆಗೆ ಕರ್ನಾಟಕದ ಮೇಲೆ ಅಪಾರವಾದ ಪ್ರೀತಿಯುಕ್ಕಿದೆ. ಕರ್ನಾಟಕ ಈ ಹಿಂದೆ ಹತ್ತಾರು ಬಗೆಯ ಸಂಕಷ್ಟಗಳಿಗೆ ಗುರಿಯಾದಾಗ ಜನರ ಪಾಲಿಗೆ ಇಲ್ಲವಾಗಿದ್ದ ಈ ದೇಶದ ಪ್ರಧಾನಮಂತ್ರಿಗಳು, ರಾಜ್ಯದಲ್ಲಿ ತಮ್ಮ ಪಕ್ಷದ ದುರಾಡಳಿತ ಮತ್ತು ದ್ವೇಷ ರಾಜಕಾರಣದ ಕಾರಣಕ್ಕೆ ತೀವ್ರ ಜನವಿರೋಧ ಎದುರಿಸುತ್ತಾ ದಯನೀಯ ಸ್ಥಿತಿಯಲ್ಲಿರುವ ತಮ್ಮ ಪಕ್ಷಕ್ಕೆ ಮತ ಯಾಚಿಸಲಿಕ್ಕಾಗಿ ಮಾತ್ರ ಇನ್ನಿಲ್ಲದಂತಹ ಕಸರತ್ತು ಮಾಡುತ್ತಾ ಪದೇಪದೇ ಭೇಟಿ ಕೊಡುತ್ತಿದ್ದಾರೆ. ಈ ಮತಬೇಟೆಯ ಭೇಟಿಗಳ ನಡುವೆ ಅವರಿಗೆ ತಮ್ಮ ’ಬೇಟಿ ಬಚಾವ್’ ಘೋಷಣೆ ಮರೆತೇ ಹೋಗಿರುವಂತಿದೆ. ಏಕೆಂದರೆ, ಭಾರತದ ಹೆಮ್ಮೆಯ ಕುಸ್ತಿಪಟು ಬೇಟಿಯರಿಂದು ದೆಹಲಿಯ ಬೀದಿ ಬದಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

ಈ ಪ್ರಕರಣ ಸಾರ್ವಜನಿಕರ ಕಣ್ಣಿಗೆ ಮೊದಲ ಸಲ ಬಿದ್ದದ್ದು ಜನವರಿ ತಿಂಗಳಿನಲ್ಲೊಮ್ಮೆ ಇದೇ ರೀತಿ ದಿಢೀರೆಂದು ಮಹಿಳಾ ಕುಸ್ತಿಪಟುಗಳು ಬೀದಿಗಿಳಿದಾಗ. ಅಲ್ಲಿಯತನಕ ಈ ಹೆಣ್ಣುಮಕ್ಕಳನ್ನು ನಾವು ಪತ್ರಿಕೆಗಳ ಮುಖಪುಟಗಳಲ್ಲಿ ಮುಖದ ಮೇಲೆ ಹೆಮ್ಮೆಯ ನಗುವಿನೊಂದಿಗೆ, ಕತ್ತಿನಲ್ಲಿ ಹಲವು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಗೆದ್ದ ಪದಕಗಳೊಂದಿಗೆ ಮಾತ್ರ ನೋಡಿ ರೂಢಿಯಿತ್ತು. ಆದರೆ ಮೊದಲ ಬಾರಿಗೆ ಅವರನ್ನು ಕಣ್ಣೀರು ತುಂಬಿದ ಮುಖಗಳೊಂದಿಗೆ ಆಕ್ರೋಶದ ಮಾತುಗಳೊಂದಿಗೆ ಕಂಡಾಗ, ಹಿಂದೆಲ್ಲ ಅವರನ್ನು ಕಂಡಾಗ ಮನಸ್ಸನ್ನು ತುಂಬುತ್ತಿದ್ದ ಸಂತೋಷದ ಸ್ಥಳದಲ್ಲಿ ಆತಂಕ ತುಂಬಿತ್ತು. ಭಾರತೀಯ ಕುಸ್ತಿ ಫೆಡರೇಶನ್‌ನ ಮುಖ್ಯಸ್ಥ ಮತ್ತು ಬಿಜೆಪಿಯ ಸಂಸದ ಬ್ರಿಜ್ ಭೂಷಣ ಸಿಂಗ್ ವಿರುದ್ಧ ಹಾಗೂ ಇತರ ಕೆಲವು ತರಬೇತುದಾರರ ವಿರುದ್ಧ ಲೈಂಗಿಕ ಶೋಷಣೆಯ ಆರೋಪವನ್ನು ಈ ಮಹಿಳಾ ಕುಸ್ತಿಪಟುಗಳು ಮಾಡಿದ್ದಾರೆ. ಜನವರಿಯಲ್ಲಿ ನೀಡಿದ್ದ ದೂರು ಮತ್ತು ಆ ಸಂದರ್ಭದಲ್ಲಿ ನಡೆದ ಮಧ್ಯಸ್ಥಿಕೆಯ ನಂತರ ಪ್ರತಿಭಟನೆಯನ್ನು ಈ ಹೆಣ್ಣುಮಕ್ಕಳು ಹಿಂಪಡೆದಿದ್ದರು.

ವಿನೇಶ್ ಫೋಗಟ್

ಜನವರಿ 18ರಂದು ಟ್ರಿಪಲ್ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಭಾರತದ ಅತ್ಯಂತ ಪ್ರಖ್ಯಾತ ಮಹಿಳಾ ಕುಸ್ತಿಪಟುಗಳಲ್ಲಿ ಒಬ್ಬರಾದ ವಿನೇಶ್ ಫೋಗಟ್ ಅವರ ಆರೋಪಗಳೊಂದಿಗೆ ಸಾರ್ವಜನಿಕವಾಗಿ ಪ್ರತಿಭಟನೆ ಪ್ರಾರಂಭವಾಯಿತು. ವಿನೇಶ್ ಫೋಗಟ್ ಅವರು ಅಂತಹ ಶೋಷಣೆಯನ್ನು ಎಂದಿಗೂ ಎದುರಿಸಲಿಲ್ಲ ಎಂದು ಹೇಳಿದರಾದರೂ, ಆದರೆ ಅನೇಕ ಕುಸ್ತಿಪಟುಗಳು ತಮ್ಮ ಸಾಧಾರಣ ಹಿನ್ನೆಲೆಯಿಂದಾಗಿ ಮುಂದೆ ಬರಲು ಹೆದರುತ್ತಿದ್ದರು ಎಂದು ವಿನೇಶ್ ಹೇಳಿದರು.

ಆ ಸಮಯದಲ್ಲಿ ಕ್ರೀಡಾ ಸಚಿವಾಲಯವು ಜನವರಿ 23ರಂದು ವಿಶ್ವವಿಖ್ಯಾತ ಬಾಕ್ಸರ್ ಎಂ.ಸಿ ಮೇರಿ ಕೋಮ್ ನೇತೃತ್ವದ ಐವರು ಸದಸ್ಯರ ಉಸ್ತುವಾರಿ ಸಮಿತಿಯನ್ನು ರಚಿಸಿತ್ತು ಮತ್ತು ಅದರ ಸಂಶೋಧನೆಗಳನ್ನು ಒಂದು ತಿಂಗಳಲ್ಲಿ ಸಲ್ಲಿಸುವಂತೆ ಕೇಳಿತ್ತು. ನಂತರ, ಇದು ಗಡುವನ್ನು ಎರಡು ವಾರಗಳವರೆಗೆ ವಿಸ್ತರಿಸಿತು ಮತ್ತು ಪ್ರತಿಭಟಿಸಿದ್ದ ಕುಸ್ತಿಪಟುಗಳ ಒತ್ತಾಯದ ಮೇರೆಗೆ ಅದರ ಆರನೇ ಸದಸ್ಯೆಯಾಗಿ ಬಬಿತಾ ಫೋಗಟ್ ಅವರನ್ನು ತನಿಖಾ ಸಮಿತಿಗೆ ಸೇರಿಸಿತು.

ಸಮಿತಿಯು ತನ್ನ ವರದಿಯನ್ನು ಏಪ್ರಿಲ್ ಮೊದಲ ವಾರದಲ್ಲಿ ಸಲ್ಲಿಸಿದೆ, ಆದರೆ ಸಚಿವಾಲಯವು ತನ್ನ ಸಂಶೋಧನೆಗಳನ್ನು ಇನ್ನೂ ಸಾರ್ವಜನಿಕಗೊಳಿಸಿಲ್ಲ. ಆದಾಗ್ಯೂ, ಹಲವಾರು ವಿಚಾರಣೆಗಳ ನಂತರ ಕುಸ್ತಿಪಟುಗಳು ಬ್ರಿಜ್ ಮೋಹನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಕುಸ್ತಿಪಟುಗಳು ಈ ಹಿಂದೆ ಪ್ರಧಾನಿಯ ಮೇಲೆ ನಂಬಿಕೆಯಿರುವ ಕಾರಣ ಕಾನೂನು ಮಾರ್ಗವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದರು, ಆದರೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಪೊಲೀಸರ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಹಲವು ತಿಂಗಳುಗಳ ನಂತರ ಬಿಜೆಪಿಯ ಸದಸ್ಯೆ ಮತ್ತು ಹರಿಯಾಣ ಸರ್ಕಾರದ ಭಾಗವಾಗಿರುವ ಒಲಿಂಪಿಯನ್ ಬಬಿತಾ ಫೋಗಟ್ ಅವರ ಮಧ್ಯಸ್ಥಿಕೆಯಲ್ಲಿ ಕ್ರೀಡಾ ಸಚಿವಾಲಯದಲ್ಲಿ ನಡೆದ ಮಾತುಕತೆ ನಮಗೆ ತೃಪ್ತಿ ತಂದಿಲ್ಲ ಎಂದು ಅವರು ಹೇಳಿದ್ದಾರೆ. ಮೊದಲ ಪ್ರತಿಭಟನೆಯ ಸಂದರ್ಭದಲ್ಲಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಕುಸ್ತಿಪಟುಗಳನ್ನು ಭೇಟಿ ಮಾಡಿ ಅವರ ಆರೋಪಗಳನ್ನು ’ಗಂಭೀರ’ ಎಂದು ಕರೆದಿದ್ದರು. ಆದರೆ, ಗಂಭೀರವಾದ ಆ ಆರೋಪಗಳ ಮೇಲೆ ಇದುವರೆಗೂ ನಿರ್ದಿಷ್ಟವಾದ ಯಾವುದೇ ಕ್ರಮವನ್ನು ಜರುಗಿಸಿಲ್ಲವೆಂಬುದು ಬಹುದೊಡ್ಡ ದುರಂತ!

ಬ್ರಿಜ್ ಭೂಷಣ್ ಶರಣ್ ಸಿಂಗ್

ಇದರಿಂದಾಗಿ, ಭಾರತದ ಅಗ್ರ ಕುಸ್ತಿಪಟುಗಳು ಹೊಸ ಪೊಲೀಸ್ ದೂರಿನೊಂದಿಗೆ ದೆಹಲಿಯ ಜಂತರ್ ಮಂತರ್‌ಗೆ ಮರಳಿದ್ದಾರೆ. ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಏಳು ಮಹಿಳಾ ಕುಸ್ತಿಪಟುಗಳು ಸೆಂಟ್ರಲ್ ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ.

ದೂರಿನ ಆಧಾರದ ಮೇಲೆ ಪ್ರಥಮ ಮಾಹಿತಿ ವರದಿಯನ್ನು ಇನ್ನೂ ದಾಖಲಿಸಲಾಗಿಲ್ಲ. ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಈ ವಿಷಯದ ಬಗ್ಗೆ ಸರ್ಕಾರದ ಸಮಿತಿಯ ವರದಿಯನ್ನು ಇನ್ನೂ ಸಾರ್ವಜನಿಕಗೊಳಿಸದಿರುವುದು ಹತಾಶೆಯಾಗಿದೆ ಎಂದು ಹೇಳುತ್ತಾ “ಮಹಿಳಾ ಕುಸ್ತಿಪಟುಗಳ ಹೇಳಿಕೆಯನ್ನು ದಾಖಲಿಸಿರುವ ವರದಿಯು ಸಾರ್ವಜನಿಕವಾಗಬೇಕೆಂದು ನಾವು ಬಯಸುತ್ತೇವೆ. ಇದು ಸೂಕ್ಷ್ಮ ವಿಷಯವಾಗಿದೆ, ದೂರುದಾರರಲ್ಲಿ ಒಬ್ಬರು ಅಪ್ರಾಪ್ತ ಬಾಲಕಿ” ಎಂದು ಹೇಳಿದ್ದರು.

ಇಷ್ಟೆಲ್ಲ ಆದನಂತರವೂ ಕನಿಷ್ಟ ಒಂದು ಎಫ್‌ಐಆರ್‌ನ್ನೂ ಪೊಲೀಸರು ದಾಖಲಿಸಿರಲಿಲ್ಲ, ಅದನ್ನು ಸಾಧ್ಯವಾಗಿಸಬೇಕಾದರೆ ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕಾಗಿ ಬಂತು.

“ಪೋಡಿಯಂನಿಂದ ಫುಟ್‌ಪಾತ್‌ಗೆ”!

ಪದೇಪದೇ ಪ್ರಯತ್ನಿಸಿದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಪ್ರತಿಭಟನಾನಿರತ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಹೇಳಿದ್ದಾರೆ. “ನಮಗೆ ನ್ಯಾಯ ಸಿಗುವವರೆಗೆ ನಾವು ಇಲ್ಲೇ ಮಲಗುತ್ತೇವೆ ಮತ್ತು ಊಟ ಮಾಡುತ್ತೇವೆ. ಪೋಡಿಯಂನಿಂದ ಫುಟ್‌ಪಾತ್‌ಗೆ,” ಎಂದು ಫೋಗಟ್ ಟ್ವಿಟ್ಟರ್‌ನಲ್ಲಿ ಕುಸ್ತಿಪಟುಗಳು ಫುಟ್‌ಪಾತ್‌ನಲ್ಲಿ ಮಲಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕುಸ್ತಿಪಟುಗಳ ಪ್ರತಿಭಟನೆ: ಬೆಂಬಲಕ್ಕಾಗಿ ದೇಶದ ರೈತರು, ಸಾರ್ವಜನಿಕರಿಗೆ ಬಜರಂಗ್ ಪುನಿಯಾ ಮನವಿ

ಇಷ್ಟೆಲ್ಲ ಸವಾಲುಗಳು ಮತ್ತು ಹತಾಶೆಗಳ ನಡುವೆಯೂ ಗಮನ ಸೆಳೆಯುವ ಆಶಾದಾಯಕವಾದ ಸಂಗತಿಯೆಂದರೆ ಈ ಮಹಿಳಾ ಕುಸ್ತಿಪಟುಗಳ ಸಂಘರ್ಷದ ಸಮಯದಲ್ಲಿ ಅವರನ್ನು ಏಕಾಂಗಿಗಳನ್ನಾಗಿಸದೆ ಅವರ ಪುರುಷ ಸಹೋದ್ಯೋಗಿಗಳು ನಿರಂತರವಾಗಿ ಜೊತೆಗೆ ನಿಂತಿರುವುದು. ’ಜೊತೆಗೆ ನಿಂತಿರುವುದು’ ಎಂದರೆ ಈ ಹೆಣ್ಣುಮಕ್ಕಳ ನೆರಳಿನಲ್ಲಿ ಕಣ್ಣಿಗೆ ಕಾಣದಂತೆ ಸುರಕ್ಷಿತ ವಲಯದಲ್ಲಿ ನಿಂತಿರುವುದಲ್ಲ; ಬದಲಿಗೆ ಅವರೊಂದಿಗೇ ಅವರ ಪಕ್ಕದಲ್ಲೇ ನಿಂತು, ಅವರೊಂದಿಗೇ ತಮ್ಮ ಧಿಕ್ಕಾರವನ್ನು ಗಟ್ಟಿದನಿಯಲ್ಲಿ ಹೇಳುತ್ತಾ, ಅವರೊಂದಿಗೆಯೇ ಫುಟ್‌ಪಾತ್ ಮೇಲೆ ಮಲಗಿ ದಿನಗಳೆದಿರುವುದು. ಪ್ರತಿಭಟನೆಯನ್ನು ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ರವಿ ದಹಿಯಾ ಮತ್ತು ದೀಪಕ್ ಪುನಿಯಾ ಅವರಂತಹ ಹಲವಾರು ಉನ್ನತ ಕುಸ್ತಿಪಟುಗಳು ಬೆಂಬಲಿಸಿದ್ದಾರೆ.

ಬಬಿತಾ ಫೋಗಟ್

“ಬ್ರಿಜ್ ಭೂಷಣ್ ಅವರನ್ನು ಬಂಧಿಸುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ” ಎಂದು ಮಹಿಳಾ ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿರುವ ಕುಸ್ತಿಪಟು ಬಜರಂಗ್ ಪುನಿಯಾ ಹೇಳಿದ್ದಾರೆ. “ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅಥವಾ ಸಂಬಂಧಪಟ್ಟ ಇತರ ಅಧಿಕಾರಿಗಳನ್ನು ಸಂಪರ್ಕಿಸಲು ಮೂರು ತಿಂಗಳಿನಿಂದ ಪ್ರಯತ್ನಿಸುತ್ತಿದ್ದೇವೆ. ಸಮಿತಿಯ ಸದಸ್ಯರು ನಮಗೆ ಪ್ರತಿಕ್ರಿಯಿಸುತ್ತಿಲ್ಲ, ಕ್ರೀಡಾ ಸಚಿವಾಲಯವೂ ಏನನ್ನೂ ಹೇಳಿಲ್ಲ, ಅವರು ನಮ್ಮ ಕರೆಗಳನ್ನು ಸಹ ಸ್ವೀಕರಿಸುವುದಿಲ್ಲ” ಎಂದು ಅವರು ಹೇಳಿದರು.

“ನಾವು ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದೇವೆ ಮತ್ತು ಈಗ ನಮ್ಮ ವೃತ್ತಿಜೀವನವನ್ನು ಪಣಕ್ಕಿಟ್ಟಿದ್ದೇವೆ, ಆದರೆ ಅದಕ್ಕಾಗಿ ನಮಗೆ ಯಾವುದೇ ಪಶ್ಚಾತ್ತಾಪವಿಲ್ಲ, ಮಾನವೀಯತೆ ಇರುವವರು ಮಾಡಬೇಕಾದ ಕೆಲಸವನ್ನೇ ನಾವು ಮಾಡುತ್ತಿದ್ದೇವೆಂಬ ಸಮಾಧಾನವಿದೆ” ಎಂದು ಬಜರಂಗ್ ಪುನಿಯಾ ಹೇಳಿರುವುದನ್ನು ನೋಡಿದರೆ, ಈ ದೇಶದ ಸರ್ಕಾರ ಮತ್ತು ಅದರ ಮುಖ್ಯಸ್ಥಾನಗಳಲ್ಲಿರುವ ಪ್ರಧಾನ ಮಂತ್ರಿ, ಗೃಹಮಂತ್ರಿಗಳಿಗಿಂತ ದೇಶದ ಹೆಣ್ಣುಮಕ್ಕಳು ತಮ್ಮ ದೇಶದ ಪ್ರಜ್ಞಾವಂತ ನಾಗರಿಕರನ್ನು ನಂಬಿದರೇ ನ್ಯಾಯ ಪಡೆಯುವ ಸಾಧ್ಯತೆ ಹೆಚ್ಚಿದೆಯೆಂದು ಅನಿಸದಿರದು.

ದೆಹಲಿ ಮಹಿಳಾ ಆಯೋಗವು ಈ ವಿಷಯದಲ್ಲಿ ಎಫ್‌ಐಆರ್ ದಾಖಲಿಸಲು ವಿಫಲವಾದ ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದೆ. ಎರಡು ದಿನಗಳ ಹಿಂದೆ ದೆಹಲಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದೇವೆ ಎಂದು ಕುಸ್ತಿಪಟುಗಳು ಆಯೋಗಕ್ಕೆ ದೂರು ನೀಡಿದ್ದರು, ಆದರೂ ಅವರ ಎಫ್‌ಐಆರ್ ಇಲ್ಲಿಯವರೆಗೆ ದಾಖಲಾಗಲಿಲ್ಲ.

ತನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ಕುರಿತು ಸರ್ಕಾರಿ ಸಮಿತಿಯ ವರದಿಗಾಗಿ ಕಾಯುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಈವರೆಗೆ ಯಾವ ಕ್ರಮವನ್ನೂ ಕೈಗೊಳ್ಳದ ಭಾರತೀಯ ಕುಸ್ತಿ ಪ್ರಾಧಿಕಾರವು, ಮುಖ್ಯಸ್ಥರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಹೊರಿಸಿರುವ ಅಥ್ಲೀಟ್‌ಗಳು ಹಿಡನ್ ಅಜೆಂಡಾವನ್ನು ಹೊಂದಿದ್ದಾರೆ ಎಂದು ಸಾರ್ವಜನಿಕವಾಗಿ ಹೇಳಿದೆ. ಅಷ್ಟೇಅಲ್ಲದೆ, ಬ್ರಿಜ್ ಭೂಷಣ್ ಕೈಯ್ಯಿಂದ ಹೇಳಿಕೆಯೊಂದನ್ನು ಕೊಡಿಸಿ ಮೇ 7ರಂದು ನಡೆಯುವ ಕುಸ್ತಿ ಫೆಡರೇಷನ್‌ನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಹೇಳಿಸಿದೆ. ಬ್ರಿಜ್ ಭೂಷಣ್ ಅವರು ಸತತವಾಗಿ ಮೂರು ಬಾರಿ ನಾಲ್ಕು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಸ್ಪೋರ್ಟ್ಸ್ ಕೋಡ್ ಪ್ರಕಾರ ಫೆಡರೇಶನ್ ಮುಖ್ಯಸ್ಥರಾಗಿ 12 ವರ್ಷಗಳನ್ನು ಪೂರ್ಣಗೊಳಿಸಿದ ನಂತರ, ಅಂತಹವರು ಉನ್ನತ ಹುದ್ದೆಗೆ ಮತ್ತೆ ಸ್ಪರ್ಧಿಸಲು ಅನರ್ಹರಾಗಿದ್ದಾರೆ. ಅಂದರೆ ಯಾವ ಸ್ಫರ್ಧೆಗೆ ನಿಲ್ಲುವುದು ತಾಂತ್ರಿಕವಾಗಿ ಅಸಾಧ್ಯವೇ ಅಂಥ ಸ್ಥಾನಕ್ಕೆ ಆತನನ್ನು ಸ್ಫರ್ಧಿಸದಿರುವಂತೆ ಮಾಡುತ್ತಿರುವುದೇ ತಾನು ಕೈಗೊಳ್ಳುತ್ತಿರುವ ಕ್ರಮ ಎಂಬಂತೆ ಬಿಂಬಿಸಿಕೊಳ್ಳಲು ಫೆಡರೇಶನ್ ಪ್ರಯತ್ನಿಸುತ್ತಿದೆ. ತನ್ನದೇ ಹೆಮ್ಮೆಯ ಕ್ರೀಡಾಪಟುಗಳ ಹಿತ ಕಾಯಬೇಕಾದ ಸಂಸ್ಥೆಯು ಅವರ ಬೆನ್ನಿಗೆ ಚೂರಿ ಇರಿಯುವ ಕುತಂತ್ರ ಮಾಡುತ್ತಿರುವುದು ಅದರೊಳಗಿನ ರಾಜಕೀಯ ಒಳಸುಳಿಗಳ ದ್ಯೋತಕ!

ವಿನೇಶ್ ಫೋಗಟ್ ಅವರು ದೆಹಲಿಯ ಜಂತರ್‌ಮಂತರ್‌ನಲ್ಲಿ ಸಾರ್ವಜನಿಕ ಪ್ರತಿಭಟನೆಯಲ್ಲಿ ಬ್ರಿಜ್ ಭೂಷಣ್ ಸಿಂಗ್ ಮತ್ತು ತರಬೇತುದಾರರ ವಿರುದ್ಧ ಲೈಂಗಿಕ ಶೋಷಣೆಯ ಆರೋಪಗಳನ್ನು ಮಾಡಿದರು, “ರಾಷ್ಟ್ರೀಯ ಶಿಬಿರಗಳಲ್ಲಿ ಮಹಿಳಾ ಕುಸ್ತಿಪಟುಗಳಿಗೆ ತರಬೇತುದಾರರು ಮತ್ತು ಫೆಡರೇಶನ್ ಅಧ್ಯಕ್ಷರು ಲೈಂಗಿಕ ಕಿರುಕುಳ ನೀಡಿದ್ದಾರೆ. ರಾಷ್ಟ್ರೀಯ ಶಿಬಿರದಲ್ಲಿ ಕನಿಷ್ಟವೆಂದರೂ 10-20 ಹುಡುಗಿಯರು ನನ್ನ ಬಳಿ ಬಂದು ತಮ್ಮ ಕಥೆಗಳನ್ನು ಹೇಳಿದ್ದಾರೆ, ಆದರೆ ಈ ದೇಶದಲ್ಲಿ ನ್ಯಾಯವೆಂಬುದು ಎಲ್ಲರಿಗೂ ದೊರಕುವಂಥದ್ದಲ್ಲ ಎಂದು ನನಗೆ ಈಗಲೇ ಅರ್ಥವಾಗುತ್ತಿರುವುದು” ಎಂದು ಅವರು ಕಣ್ಣೀರು ಹಾಕುತ್ತಾ ಹೇಳುವಾಗ, ’ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರಗಳು ಕೇವಲ ಕಾಮವಾಂಛೆಯಿಂದ ನಡೆಯುವಂಥವಲ್ಲ, ಅವುಗಳ ಹಿಂದೆ ಅಧಿಕಾರದ ಅಹಂ ಇದೆ ಮತ್ತು ಆ ಅಧಿಕಾರವನ್ನು ಶತಾಯಗತಾಯ ತಮ್ಮ ಕೈಯ್ಯಲ್ಲೇ ಉಳಿಸಿಕೊಂಡು ಮಹಿಳೆಯರನ್ನು ಸದಾ ಅಧೀನದಲ್ಲಿ ಇಟ್ಟುಕೊಳ್ಳುವ ಪುರುಷಾಹಂಕಾರವಿದೆ’ ಎಂಬ ಮಹಿಳಾ ಚಳವಳಿಯ ಪರಿಕಲ್ಪನೆಯು ಅಕ್ಷರಶಃ ಸತ್ಯವೆನಿಸುತ್ತದೆ.

ಅನುರಾಗ್ ಠಾಕೂರ್

ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕಿರುಕುಳಕ್ಕೆ ತುತ್ತಾಗಿರುವುದು ಅಧಿಕಾರದ ಏಣಿಶ್ರೇಣಿಯಲ್ಲಿ ಇನ್ನಷ್ಟು ತಳಮಟ್ಟದಲ್ಲಿ ದಲಿತ, ದಮನಿತ, ಆದಿವಾಸಿ, ಅಲ್ಪಸಂಖ್ಯಾತ ಹೆಣ್ಣುಮಕ್ಕಳಾದರೆ ಅಥವಾ ಲೈಂಗಿಕ ವೃತ್ತಿನಿರತರೋ, ಲಿಂಗತ್ವ ಅಲ್ಪಸಂಖ್ಯಾತರೋ ಆದರೆ, ಅದು ಪತ್ರಿಕೆಗಳ ಒಂದು ಸಾಲಿನ ಸುದ್ದಿಯೂ ಆಗದೆ ಕಣ್ಮರೆಯಾಗುವ ವಾಸ್ತವವೇ ನಮ್ಮ ಕಣ್ಣಮುಂದಿರುವುದು. ಹಾಗಾಗಿಯೇ, ಹತ್ರಾಸ್‌ನ ದಲಿತ ಹೆಣ್ಣುಮಗು ಸಾಯುವಷ್ಟರಮಟ್ಟಿಗೆ ಲೈಂಗಿಕ ದೌರ್ಜನ್ಯ ಅನುಭವಿಸಿದ ನಂತರ, ಆ ನಿರ್ಜೀವ ದೇಹವೂ ಸಾಕ್ಷಿಯಾಗದೆ ಪೊಲೀಸರ ಕೈಯ್ಯಲ್ಲಿ ಅನಾಮಿಕವಾಗಿ ಸುಟ್ಟುಬೂದಿಯಾಗಬೇಕಾದ ದುಸ್ಥಿತಿ ನೋಡುತ್ತಿದ್ದೇವೆ. ದಶಕದ ಹಿಂದೆ ನಡೆದ ಖೈರ್ಲಾಂಜಿ ಪ್ರಕರಣದಿಂದ ಹಿಡಿದು ಇತ್ತೀಚಿನ ಜಮ್ಮುವಿನ ಮುಸ್ಲಿಮ್ ಹೆಣ್ಣುಮಗುವಿನ ತನಕ ಅಥವಾ ಗುಜರಾತಿನ ಬಿಲ್ಕೀಸ್‌ಳಿಂದ ಹಿಡಿದು, ಕರ್ನಾಟಕದ ಬಿಜಾಪುರದ ದಲಿತ ಬಾಲಕಿಯ ತನಕ ತಮ್ಮ ಮೇಲಿನ ಅಪರಾಧಗಳಿಗೆ ತಾವೇ ಕಾರಣಗಳೆನ್ನಿನಿಕೊಳ್ಳಬೇಕಾದಂತಹ ಹಲವು ಪಟ್ಟು ಹೆಚ್ಚಿನ ಹಿಂಸೆಯ ಶಿಕ್ಷೆಗೆ ಈ ಹೆಣ್ಣುಮಕ್ಕಳು ತುತ್ತಾಗಿದ್ದಾರೆ.

ಇದೀಗ, ಲಿಂಗ ತಾರತಮ್ಯ ಮತ್ತು ಪುರುಷಾಧಿಪತ್ಯದ ಆಧಾರದಲ್ಲಿ ನಿಂತಿರುವ ಈ ಸಮಾಜವು ಮಹಿಳೆಯರನ್ನು ನಡೆಸಿಕೊಳ್ಳುವುದೇ ಹೀಗೆ ಎಂಬ ಸಂದೇಶ ನಮಗೆ ದೊರೆಯುತ್ತಿದೆ. ಮೋದಿಯವರ ಸೋ ಕಾಲ್ಡ್ ’ಇಂಡಿಯಾ ಶೈನಿಂಗ್’ ಭಾರತವು ಜಗತ್ತಿನಲ್ಲಿ ಫಳಫಳಿಸಲು ಕಾರಣರಾದ ಈ ಹೆಣ್ಣುಮಕ್ಕಳು ಮತ್ತು ಅವರ ಬೆಂಬಲಕ್ಕೆ ನಿಂತ ಪುರುಷ ಕುಸ್ತಿಪಟುಗಳು ಕೂಡಾ ನ್ಯಾಯಕ್ಕಾಗಿ ಬೀದಿಪಾಲಾಗಿದ್ದಾರೆ.

ಮೋದಿಯವರೇ ನಿಮ್ಮ ಬೇಟಿಯರನ್ನು ಬಚಾವು ಮಾಡಲು ನಿಮ್ಮಿಂದ ಆಗಲಿಲ್ಲವಲ್ಲ ಎಂಬ ಪ್ರಶ್ನೆಯನ್ನು ಇಡೀ ದೇಶ ಪ್ರಧಾನಿಯ ಮುಖಕ್ಕೆ ರಾಚುತ್ತಿದೆ. ಆದರೆ ಈ ದೇಶದ ಮಹಿಳೆಯರ ’ಮನದ ಮಾತು’ಗಳನ್ನು ಕೇಳಲು ಅವರಿಗೆ ಸಮಯವೆಲ್ಲಿದೆ? ಅವರಿಗೀಗ ಬೇಟಿಯರಿಗಿಂತ ಮತದ ಬೇಟೆಯೇ ಮುಖ್ಯ!!!

ಮಲ್ಲಿಗೆ ಸಿರಿಮನೆ

ಮಲ್ಲಿಗೆ ಸಿರಿಮನೆ
ಕರ್ನಾಟಕ ಜನಶಕ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...