Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ:ಕೋಲಾರ ಜಿಲ್ಲೆ: ಮತ್ತೆ ಪಾರಮ್ಯ ಸಾಧಿಸಲಿದೆಯೇ ಕಾಂಗ್ರೆಸ್? ಜೆಡಿಎಸ್- ಬಿಜೆಪಿ ಪರಿಸ್ಥಿತಿ ಹೀಗಿದೆ

ಕೋಲಾರ ಜಿಲ್ಲೆ: ಮತ್ತೆ ಪಾರಮ್ಯ ಸಾಧಿಸಲಿದೆಯೇ ಕಾಂಗ್ರೆಸ್? ಜೆಡಿಎಸ್- ಬಿಜೆಪಿ ಪರಿಸ್ಥಿತಿ ಹೀಗಿದೆ

2018ರ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಕಡೆ ಕಾಂಗ್ರೆಸ್ ಜಯಗಳಿಸಿದರೆ, ಒಂದು ಕಡೆ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮತ್ತು ಒಂದು ಕಡೆ ಜೆಡಿಎಸ್ ಜಯ ಗಳಿಸಿತ್ತು.

- Advertisement -
- Advertisement -

ಕೋಲಾರ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿವೆ. ಮೂರು ಪ.ಜಾ ಮೀಸಲು ಕ್ಷೇತ್ರಗಳಾದರೆ ಮೂರು ಸಾಮಾನ್ಯ ಕ್ಷೇತ್ರಗಳಾಗಿವೆ. 2018ರ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಕಡೆ ಕಾಂಗ್ರೆಸ್ ಜಯಗಳಿಸಿದರೆ, ಒಂದು ಕಡೆ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮತ್ತು ಒಂದು ಕಡೆ ಜೆಡಿಎಸ್ ಜಯ ಗಳಿಸಿತ್ತು. ಆಗ ಬಿಜೆಪಿಗೆ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯನವರು ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೆ ಕಾರಣವಾಗಿದ್ದ ಕೋಲಾರದಲ್ಲಿ ಎಂದಿನಂತೆ ಈ ಬಾರಿಯೂ ರಾಜಕೀಯ ಗರಿಗೆದರಿದೆ. ಕಾಂಗ್ರೆಸ್ ತನ್ನ ಪಾರಮ್ಯ ಮುಂದುವರೆಸಲು ಬಯಸಿದರೆ, ಜೆಡಿಎಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ. ಇನ್ನು ಬಿಜೆಪಿ ಈ ಬಾರಿ ಒಂದೆರೆಡು ಸೀಟ್ ಗೆಲ್ಲಲು ಕಸರತ್ತು ನಡೆಸುತ್ತಿದೆ. ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಸ್ಥಿತಿಗತಿ ಹೀಗಿದೆ.

ಮಾಲೂರು ವಿಧಾನಸಭಾ ಕ್ಷೇತ್ರ

ಮಾಲೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿತ್ತು ಅಂತಲೇ ಹೇಳಬಹುದು. 14 ವಿಧಾನಸಭಾ ಚುನಾವಣೆಗಳಲ್ಲಿ 8 ಬಾರಿ ಕಾಂಗ್ರೆಸ್ ಜಯಗಳಿಸಿದೆ. ಜನತಾಪಕ್ಷ, ಜನತಾದಳ, ಜೆಡಿಎಸ್ ತಲಾ ಒಂದೊಂದು ಬಾರಿ ಗೆಲುವು ಸಾಧಿಸಿದರೆ ಬಿಜೆಪಿ ಎರಡು ಬಾರಿ ಜಯಭೇರಿ ಬಾರಿಸಿದೆ. ಒಮ್ಮೆ ಸ್ವತಂತ್ರ ಅಭ್ಯರ್ಥಿ ಗೆಲುವು ಕಂಡಿದ್ದಾರೆ. ವಿಶೇಷ ಎಂದರೆ ಆರು ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ರನ್ನರ್ ಅಪ್ ಆಗಿದ್ದಾರೆ.

ಮಾಲೂರು ಕ್ಷೇತ್ರದಲ್ಲಿ ಎಸ್‌ಸಿ-ಎಸ್‌ಟಿ ಮತಗಳು ಅಧಿಕವಾಗಿದ್ದು 65,000ದಷ್ಟಿವೆ. ಒಕ್ಕಲಿಗ ಸಮುದಾಯದ್ದು ಕೂಡ 60,000ದಷ್ಟಿವೆ. ಇತರೆ ಹಿಂದುಳಿದ ವರ್ಗದವರ 50,000 ಮತಗಳಿದ್ದರೆ, ಮುಸ್ಲಿಮರು 15,000ಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷದ ಕೆ.ವೈ ನಂಜೇಗೌಡರು ಸದ್ಯ ಶಾಸಕರಾಗಿದ್ದು, ಜನರ ಕೈಗೆ ಸಿಗುತ್ತಾರೆ, ಒಂದಷ್ಟು ಅನುದಾನ ತಂದಿದ್ದಾರೆ ಎಂಬ ಮಾತಿದೆ. ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

2013ರಲ್ಲಿ ಜೆಡಿಎಸ್‌ನಿಂದ ಗೆಲುವು ಕಂಡಿದ್ದ ಮಾಜಿ ಶಾಸಕ ಮಂಜುನಾಥ್ ಗೌಡರವರು 2018 ರಲ್ಲಿ ಸೋತ ನಂತರ 2019ರಿಂದಲೇ ಜೆಡಿಎಸ್ ಪಕ್ಷದೊಂದಿಗೆ ಮುನಿಸು ಹೊಂದಿದ್ದರು. ಆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿಯವರ ಪರ ಕೆಲಸ ಮಾಡಿದರು. ಕೊನೆಗೆ ಪಕ್ಷ ತೊರೆದು ಬಿಜೆಪಿ ಸೇರಿ ಟಿಕೆಟ್ ಗಿಟ್ಟಿಸಿದ್ದಾರೆ.

ಅತ್ತ ಕೆ.ಎಸ್ ಮಂಜುನಾಥ್ ಗೌಡ ಜೆಡಿಎಸ್ ತೊರೆಯುತ್ತಲೇ ಜೆಡಿಎಸ್ ಪಕ್ಷವು ಜಿ.ಇ ರಾಮೇಗೌಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರಿಗೆ ಟಿಕೆಟ್ ಘೋಷಿಸಿದೆ. ಸ್ಥಳೀಯರಾದ ರಾಮೇಗೌಡರು ಈ ಮುಂಚೆ ಬಿಜೆಪಿಯಲ್ಲಿದ್ದರು. ಮಾಸ್ತಿಯ ಜಿ.ಪಂ ಸದಸ್ಯರಾಗಿದ್ದರು. 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆನಂತರ ಕಾಂಗ್ರೆಸ್ ಸೇರಿದ್ದ ಅವರು ಸದ್ಯ ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ.

ಬಿಜೆಪಿಯ ಯುವ ಮುಖಂಡರಾದ, ಮಾಜಿ ಬಿಬಿಎಂಪಿ ಸದಸ್ಯರಾದ ಹೂಡಿ ವಿಜಯ್ ಕುಮಾರ್‌ರವರು ಬಿಜೆಪಿ ಟಿಕೆಟ್ ಸಿಗದುದ್ದರಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದಾರೆ. ಅವರು ಸಹ ಸಾಕಷ್ಟು ಪೈಪೋಟಿ ಕೊಡುತ್ತಿದ್ದಾರೆ.

ಎಲ್ಲಾ ಅಭ್ಯರ್ಥಿಗಳು ಒಕ್ಕಲಿಗರೇ ಆಗಿರುವುದರಿಂದ ಒಕ್ಕಲಿಗ ಮತಗಳು ಹಂಚಿಹೋಗುವ ಸಾಧ್ಯತೆಯಿದೆ. ಹಾಗಾಗಿ ದಲಿತರು, ಮುಸ್ಲಿಮರು ಮತ್ತು ಇತರ ಹಿಂದುಳಿದ ಮತಗಳು ಯಾರ ಕೈಹಿಡಿಯಲಿವೆಯೊ ಅವರಿಗೆ ಗೆಲುವಿನ ಸಾಧ್ಯತೆ ಹೆಚ್ಚಾಗಿದೆ. ಸದ್ಯ ಬಿಜೆಪಿಯಲ್ಲಿ ಬಂಡಾಯವಿರುವುದು ಕಾಂಗ್ರೆಸ್‌ಗೆ ವರವಾಗುವ ಲಕ್ಷಣಗಳಿವೆ.

ಬಂಗಾರಪೇಟೆ (ಪ.ಜಾ ಮೀಸಲು ಕ್ಷೇತ್ರ)

ಸಾಮಾನ್ಯ ಕ್ಷೇತ್ರವಾಗಿದ್ದ ಬಂಗಾರಪೇಟೆಯನ್ನು 1967ರಲ್ಲಿ ಬೇತಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲಾಗಿತ್ತು. 1972ರವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದ ಬೇತಮಂಗಲವು ಆನಂತರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಬದಲಾಯಿತು. 2008ರಲ್ಲಿ ಬೇತಮಂಗಲವನ್ನು ಬಂಗಾರಪೇಟೆಯ ಪ.ಜಾ. ಮೀಸಲು ಕ್ಷೇತ್ರವನ್ನಾಗಿ ಮರುವಿಂಗಡನೆ ಮಾಡಲಾಗಿದೆ.

ಬಂಗಾರಪೇಟೆ ಕ್ಷೇತ್ರವು ಅತಿ ಹೆಚ್ಚು ದಲಿತ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಇಲ್ಲಿ ಸುಮಾರು 70-80 ಸಾವಿರದಷ್ಟು ಎಸ್‌ಸಿ ಮತಗಳಿವೆ. ಎರಡನೇ ಸ್ಥಾನದಲ್ಲಿ ಒಕ್ಕಲಿಗರಿದ್ದು ಸುಮಾರು 40 ಸಾವಿರದಷ್ಟು ಮತಗಳಿವೆ. ಕುರುಬರು, ಪಳ್ಳೀಗ ಎಂದು ಕರೆಯುವ ತಿಗಳ ಸಮುದಾಯ ಮತ್ತು ಮುಸ್ಲಿಮರು ನಂತರದ ಸ್ಥಾನದಲ್ಲಿದ್ದಾರೆ. ಈ ಸಮುದಾಯಗಳ ತಲಾ 18-20 ಸಾವಿರ ಮತಗಳಿವೆ ಎನ್ನಲಾಗುತ್ತಿದೆ. ದಲಿತರಲ್ಲಿ ಸುಮಾರು 10 ಸಾವಿರ ಜನಸಂಖ್ಯೆಯಿರುವ ಭೋವಿ ಸಮುದಾಯದ ಮತದಾರರು ಇದ್ದಾರೆ.

ಸತತ ಎರಡು ಬಾರಿ ಶಾಸಕರಾಗಿರುವ ಪ.ಜಾ ಸಮುದಾಯದ ಎಸ್.ಎನ್ ನಾರಾಯಣಸ್ವಾಮಿಯವರು ಕಾಂಗ್ರೆಸ್ ಟಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಲು ಮುಂದಾಗಿದ್ದಾರೆ.

ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿರುವಾಗಲೇ ಬಂಗಾರಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಭೋವಿ ಸಮುದಾಯದ ಮಲ್ಲೇಶ್ ಬಾಬುರವರಿಗೆ ಟಿಕೆಟ್ ಘೋಷಿಸಿದೆ.

ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಭೋವಿ ಸಮುದಾಯದ ಎಂ. ನಾರಾಯಣಸ್ವಾಮಿಯವರು ಇದೀಗ ಬಿಜೆಪಿ ಟಿಕೆಟ್ ಗಿಟ್ಟಿಸಿದ್ದಾರೆ. ಅವರಿಗೆ ಟಿಕೆಟ್ ಸಿಗುವುದಿಲ್ಲ, ಪಕ್ಷಾಂತರ ಮಾಡುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಬಿಜೆಪಿ ಮತ್ತೆ ಅವರಿಗೆ ಮಣೆ ಹಾಕಿದೆ.

ಜೆಡಿಎಸ್ -ಬಿಜೆಪಿ ಭೋವಿ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ. ಹಾಗಾಗಿ ಕಳೆದ ಮೂರು ಚುನಾವಣೆಗಳಲ್ಲಿನ ಫಲಿತಾಂಶ ನೋಡಿದರೆ ಈ ಬಾರಿಯೂ ಕಾಂಗ್ರೆಸ್‌ನ ಎಸ್.ಎನ್ ನಾರಾಯಣಸ್ವಾಮಿಯವರು ಗೆಲುವು ಸಾಧಿಸುವ ಸೂಚನೆ ಕಂಡು ಬರುತ್ತದೆ.

ಕೆಜಿಎಫ್ (ಪ.ಜಾ ಮೀಸಲು ಕ್ಷೇತ್ರ)

ಕೆಜಿಎಫ್‌ನಲ್ಲಿ ದಲಿತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಎಸ್‌ಸಿ, ಎಸ್‌ಟಿ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಜನರ ಮತಗಳು ಅಂದಾಜು ಒಂದು ಲಕ್ಷದಷ್ಟಿವೆ. 15 ಸಾವಿರ ಮುಸ್ಲಿಮ್ ಮತಗಳು, ಒಕ್ಕಲಿಗರು ಮತ್ತು ರೆಡ್ಡಿಗಳು ಸೇರಿ 30,000 ದಷ್ಟು ಮತಗಳಿವೆ. ಇತರ ಹಿಂದುಳಿದ ವರ್ಗಗಳ ಸುಮಾರು 50,000 ಮತಗಳಿದ್ದು, ಉಳಿದವರದ್ದು 15,000 ಮತಗಳಿವೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷವು ಹಾಲಿ ಶಾಸಕಿ ರೂಪಕಲಾ ಶಶಿಧರ್‌ರವರಿಗೆ ಟಿಕೆಟ್ ನೀಡಿದೆ. ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕೆಲಸಗಳು, ಸದನದಲ್ಲಿ ಕ್ಷೇತ್ರದ ಕುರಿತು ಮಾತನಾಡಿರುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ಅವರ ತಂದೆ ಕೆ.ಎಚ್ ಮುನಿಯಪ್ಪನವರ ಪ್ರಭಾವ ಇಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ.

ಲಂಚ ತೆಗೆದುಕೊಂಡ ಪ್ರಕರಣ ಎದುರಿಸುತ್ತಿರುವ ಸಂಪಂಗಿಯವರು ಈ ಬಾರಿಯೂ ಸ್ಪರ್ಧಿಸುತ್ತಿಲ್ಲ. ಹಾಗಾಗಿ ಮತ್ತೆ ಬಿಜೆಪಿ ಟಿಕೆಟ್ ಅವರ ಮಗಳಾದ ಅಶ್ವಿನಿ ಸಂಪಗಿಯವರಿಗೆ ಸಿಕ್ಕಿದೆ. ಕಳೆದ ಬಾರಿ ಅವರು 40 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ಅಲ್ಲದೆ ಸಂಪಂಗಿ ಕುಟುಂಬ ಹೊರಗಿನವರಾಗಿದ್ದು ಕ್ಷೇತ್ರದತ್ತ ತಿರುಗಿ ನೋಡುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅದು ಬಿಜೆಪಿಗೆ ಇರಿಸು ಮುರಿಸು ತಂದಿದೆ.

ಎಸ್.ರಾಜೇಂದ್ರನ್‌ರವರು ಆರ್‌ಪಿಐ ಅಭ್ಯರ್ಥಿಯಾಗಿದ್ದಾರೆ. ಅವರು ಕೊನೆಯ ಬಾರಿಗೆ ಶಾಸಕರಾಗಿದ್ದು 2004ರಲ್ಲಿ. 2008ರ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿ ಕೇವಲ 3,320 ಮತಗಳಿಂದ ಸೋತಿದ್ದ ಅವರು ನಂತರದ ಚುನಾವಣೆಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿಲ್ಲ. ಈ ಬಾರಿಯಾದರೂ ಗೆಲುವು ಸಾಧಿಸಿ ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸುವ ತವಕದಲ್ಲಿದ್ದಾರೆ.

ಜೆಡಿಎಸ್ ಪಕ್ಷವು ವಿ.ಎಂ ರಮೇಶ್ ಬಾಬು ಎಂಬುವವರಿಗೆ ಟಿಕೆಟ್ ನೀಡಿದೆ. ಕೆಜಿಎಫ್‌ನಲ್ಲಿ ಜೆಡಿಎಸ್ ಪಕ್ಷದ ಹಿಡಿತವಿಲ್ಲ. ಅದರಲ್ಲಿಯೂ ಹಿಂದಿನ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಎಂ ಭಕ್ತವತ್ಸಲಂರವರು ನಿಧನರಾದ ನಂತರ ಜೆಡಿಎಸ್ ಇಲ್ಲಿ ಕಳೆಗುಂದಿದೆ. ಹಾಗಾಗಿ ಇಲ್ಲಿ ಈ ಬಾರಿಯೂ ರೂಪಕಲ ಶಶಿಧರ್‌ರವರಿಗೆ ಗೆಲುವಿನ ಸಾಧ್ಯತೆ ಹೆಚ್ಚಿದೆ.

ಶ್ರೀನಿವಾಸಪುರ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಇದುವರೆಗೂ 13 ಚುನಾವಣೆಗಳು ನಡೆದಿದ್ದರೂ ಕೇವಲ ಐವರು ಶಾಸಕರನ್ನು ಮಾತ್ರ ಕಂಡ ವಿಶಿಷ್ಟ ಕ್ಷೇತ್ರವಿದು. ಅದರಲ್ಲಿಯೂ 8 ಬಾರಿ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಜಯ ಕಂಡಿದ್ದಾರೆ. ಹಾಗಾಗಿ ಅದನ್ನು ಕಾಂಗ್ರೆಸ್‌ನ ಭದ್ರಕೋಟೆ ಎಂತಲೇ ಹೇಳಬಹುದು. 1983 ರಿಂದ ಅಂದರೆ ಸತತ 9 ಚುನಾವಣೆಗಳಲ್ಲಿ ಈ ಕ್ಷೇತ್ರವು ಕಾಂಗ್ರೆಸ್‌ನ ಕೆ.ಆರ್ ರಮೇಶ್ ಕುಮಾರ್ ವರ್ಸಸ್ ಜೆಡಿಎಸ್‌ನ ವೆಂಕಟಶಿವಾರೆಡ್ಡಿಯವರ ನಡುವಿನ ಪೈಪೋಟಿಗೆ ಸಾಕ್ಷಿಯಾಗಿದೆ. 2018ರ ಚುನಾವಣೆ ಹೊರತುಪಡಿಸಿ ಉಳಿದ ಯಾವ ಚುನಾವಣೆಯಲ್ಲಿಯೂ ಯಾರೂ ಸಹ ಸತತ ಎರಡನೇ ಬಾರಿಗೆ ಶಾಸಕರಾಗಲು ಸಾಧ್ಯವಾಗಿರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರಾದ ಕೆ.ಆರ್ ರಮೇಶ್ ಕುಮಾರ್‌ರವರು 2013 ಮತ್ತು 2018ರಲ್ಲಿಯೂ ಗೆಲ್ಲುವ ಮೂಲಕ ಆ ಸಂಪ್ರದಾಯವನ್ನು ಮುರಿದಿದ್ದಾರೆ. ಅಲ್ಲದೆ ಈ ಬಾರಿ ಹ್ಯಾಟ್ರಿಕ್ ಸಾಧನೆ ಮಾಡಲು ಮತ್ತೆ ಕಣಕ್ಕೆ ಧುಮುಕಿದ್ದಾರೆ.

75 ವರ್ಷದ ವೆಂಕಟಶಿವಾರೆಡ್ಡಿಯವರು ತಮ್ಮ ಜೀವಮಾನದ 5ನೇ ಗೆಲುವು ಕಾಣುವ ಹಂಬಲದಲ್ಲಿದ್ದಾರೆ. 2018ರಲ್ಲಿ ಎರಡನೇ ಬಾರಿ ಸೋತಿರುವ ಅವರು ಆ ಅನುಕಂಪದಲ್ಲಿ ಗೆಲುವಿನ ಕನಸು ಕಾಣುತ್ತಿದ್ದಾರೆ. ಜೆಡಿಎಸ್ ಮತ್ತೆ ಅವರನ್ನು ಅಭ್ಯರ್ಥಿಯನ್ನಾಗಿದೆ.

ಬಿಜೆಪಿಯು ಗುಂಜೂರು ಶ್ರೀನಿವಾಸ ರೆಡ್ಡಿಯವರಿಗೆ ಟಿಕೆಟ್ ನೀಡಿದೆ. ಆದರೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಅವರ ವರ್ಚಸ್ಸು ಹೆಚ್ಚಿಲ್ಲ. ಹಾಗಾಗಿ ಡಮ್ಮಿ ಕ್ಯಾಂಡಿಡೇಟ್ ಹಾಕುವ ಮೂಲಕ ಬಿಜೆಪಿಯು ಈ ಬಾರಿ ರಮೇಶ್ ಕುಮಾರ್‌ರವರನ್ನು ಶತಾಯಗತಾಯ ಸೋಲಿಸಲು ಪಣತೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಇದೆ.

ಶ್ರೀನಿವಾಸಪುರದಲ್ಲಿಯೂ ದಲಿತ ಸಮುದಾಯಗಳ ಮತಗಳು ಅಧಿಕ ಸಂಖ್ಯೆಯಲ್ಲಿವೆ. ಎಸ್‌ಸಿ ಮತ್ತು ಎಸ್‌ಟಿ ಸೇರಿ 70,000 ಮತಗಳಿವೆ ಎನ್ನಲಾಗುತ್ತಿದೆ. ನಂತರದ ಸ್ಥಾನದಲ್ಲಿ ರೆಡ್ಡಿ ಮತ್ತು ಒಕ್ಕಲಿಗರು ಇದ್ದು ತಲಾ 30,000 ಮತಗಳನ್ನು ಹೊಂದಿದ್ದಾರೆ. ಸುಮಾರು 16,000ದಷ್ಟು ಮುಸ್ಲಿಂ ಮತಗಳಿವೆ. ಇನ್ನುಳಿದಂತೆ ಕುರುಬ, ಬಲಿಜ, ತಿಗಳ ಇತ್ಯಾದಿ ಹಿಂದುಳಿದ ವರ್ಗದ 50,000ದಷ್ಟು ಮತಗಳಿವೆ. ಬ್ರಾಹ್ಮಣ, ಶೆಟ್ರು ಸೇರಿದಂತೆ ಇತರರು ಸುಮಾರು 5-10 ಸಾವಿರ ಮತಗಳಿವೆ.

ಮುಳಬಾಗಿಲು (ಪ.ಜಾ ಮೀಸಲು ಕ್ಷೇತ್ರ)

ಮುಳಬಾಗಿಲಿನಲ್ಲಿಯೂ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಸ್‌ಸಿ, ಎಸ್‌ಟಿ ಮತಗಳು ಸುಮಾರು 60,000ದಷ್ಟಿದ್ದು ಒಕ್ಕಲಿಗ ಮತಗಳು 50,000ದಷ್ಟಿವೆ. ಮುಸ್ಲಿಮರ 35,000ಕ್ಕೂ ಹೆಚ್ಚಿನ ಮತಗಳಿವೆ ಎನ್ನಲಾಗಿದ್ದು ಇತರ ಹಿಂದುಳಿದ ವರ್ಗಗಳ 50,000 ಮತ್ತು ಉಳಿದ ಸಮುದಾಯಗಳ 10,000 ಮತಗಳಿವೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಳಬಾಗಿಲು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಡಾ. ಬಿ.ಸಿ ಮುದ್ದುಗಂಗಾಧರ್ ಎಂಬುವವರ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿತ್ತು. ಆದರೆ 10 ಗಂಟೆಗಳಲ್ಲಿ ಅವರನ್ನು ಬದಲಿಸಿ ಆದಿನಾರಾಯಣ ಎಂಬುವವರಿಗೆ ಕಾಂಗ್ರೆಸ್ ಬಿ ಫಾರಂ ನೀಡಿದೆ. ಇದಕ್ಕೆ ಕಾರಣರಾದ ವ್ಯಕ್ತಿ ಕೊತ್ತೂರು ಮಂಜುನಾಥ್!

ಮುಳಬಾಗಿಲು ವಿಧಾನಸಭಾ ಕ್ಷೇತ್ರ 2008ರಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು. ಆ ಚುನಾವಣೆಯಲ್ಲಿ ಆಗ ಕಾಂಗ್ರೆಸ್ ಅಭ್ಯರ್ಥಿ ಅಮರೇಶ್‌ರವರು ಜೆಡಿಎಸ್‌ನ ಎನ್ ಮುನಿನಂಜಪ್ಪನವರನ್ನು 1,854 ಮತಗಳಿಂದ ಮಣಿಸಿ ಶಾಸಕರಾದರು. ಆದರೆ 2013ರ ವೇಳೆಗೆ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟವರು ಕೊತ್ತೂರು ಮಂಜುನಾಥ್. ಕಾಂಗ್ರೆಸ್ ಟಿಕೆಟ್ ನೀಡದಿದ್ದುದರಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವರು 73,146 ಮತಗಳನ್ನು ಪಡೆದು ಜೆಡಿಎಸ್ ಅಭ್ಯರ್ಥಿ ಮುನಿನಂಜಪ್ಪರನ್ನು 33,734 ಮತಗಳ ಭಾರೀ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾದರು.

ಬೈರಾಗಿ ಎಂಬ ಹಿಂದುಳಿದ ಜಾತಿಯ ಕೊತ್ತೂರು ಮಂಜುನಾಥ್‌ರವರು ಬುಡಗ ಜಂಗಮ ಜಾತಿ ಹೆಸರಿನಲ್ಲಿ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪಡೆದಿದ್ದಾರೆ ಎಂಬ ದೂರಿನಿಂದಾಗಿ ಅವರು 2018ರಲ್ಲಿ ಸ್ಪರ್ಧಿಸಲಾಗಲಿಲ್ಲ. ಅವರು ಪಕ್ಷೇತರ ಅಭ್ಯರ್ಥಿ ಹೆಚ್.ನಾಗೇಶ್‌ರವರಿಗೆ ಬೆಂಬಲ ನೀಡಿ ಗೆಲ್ಲಿಸಿದರು. ಈ ಬಾರಿ ಕೋಲಾರದಲ್ಲಿ ಸ್ಪರ್ಧಿಸಿರುವ ಕೊತ್ತೂರು ಮಂಜುನಾಥ್ ತಮ್ಮ ಬೆಂಬಲಿಗ ಆದಿನಾರಾಯಣರನ್ನು ಗೆಲ್ಲಿಸುವ ಹೊಣೆ ಸಹ ಹೊತ್ತಿದ್ದಾರೆ.

ಜೆಡಿಎಸ್ ಪಕ್ಷವು ಸಮೃದ್ಧಿ ಮಂಜುನಾಥ್‌ ನವರಿಗೆ ಟಿಕೆಟ್ ನೀಡಿದೆ. ಅವರು ಕಳೆದ ಬಾರಿ ಪೈಪೋಟಿ ನೀಡಿ ಸೋಲನಪ್ಪಿದ್ದರು. ಸೋತರೂ ಕ್ಷೇತ್ರದಲ್ಲಿಯೇ ಉಳಿದು ಕೆಲಸ ಮಾಡಿದ್ದಾರೆ. ಈ ಬಾರಿ ಗೆದ್ದು ತೀರುವ ಹಠ ತೊಟ್ಟಿದ್ದಾರೆ.

ಬಿಜೆಪಿಗೆ ಮುಳಬಾಗಿಲಿನಲ್ಲಿ ಯಾವುದೇ ನೆಲೆ ಇಲ್ಲ. ಅದು ಶಿಗೇಹಳ್ಳಿ ಸುಂದರ್‌ ಎಂಬುವವರಿಗೆ ಟಿಕೆಟ್ ನೀಡಿದೆ. ಹಾಗಾಗಿ ಕೋಲಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ನಡೆಯಲಿದೆ.

ಕೋಲಾರ

ಕೋಲಾರದಿಂದ ಇದುವರೆಗೆ ಮೂವರು ಮುಸ್ಲಿಂ ಅಭ್ಯರ್ಥಿಗಳು ಆರಿಸಿ ಬಂದಿದ್ದಾರೆ. ಆದರೆ 1990ರಲ್ಲಿ ಅಡ್ವಾಣಿಯವರು ರಥಯಾತ್ರೆ ಕೈಗೊಂಡ ನಂತರ ಇಲ್ಲಿ ಮುಸ್ಲಿಂ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗಿಲ್ಲ.

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಸಮುದಾಯದ ಮತಗಳು ಮೊದಲನೇ ಸ್ಥಾನದಲ್ಲಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿ 60,000ಕ್ಕೂ ಹೆಚ್ಚು ಮತಗಳಿವೆ ಎನ್ನಲಾಗುತ್ತಿದೆ. ಮುಸ್ಲಿಮರು ಎರಡನೇ ಸ್ಥಾನದಲ್ಲಿದ್ದು ಸುಮಾರು 40,000 ದಷ್ಟು ಮತಗಳಿವೆ. ಒಕ್ಕಲಿಗರು 30,000ದಷ್ಟು ಇದ್ದರೆ ಕುರುಬರು 20,000ಕ್ಕೂ ಹೆಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯನವರು ಸ್ಪರ್ಧಿಸದ ಕಾರಣ ಕೊತ್ತೂರು ಮಂಜುನಾಥ್ ಕೋಲಾರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ವೈಯಕ್ತಿಕ ವರ್ಚಸ್ಸು ಹೊಂದಿರುವ ಅವರು ಅಹಿಂದ ಮತಗಳನ್ನು ನಂಬಿದ್ದಾರೆ.

ದೊಡ್ಡ ಟೊಮ್ಯಾಟೋ ಮಂಡಿ ನಡೆಸುವ ಸಿ.ಎಂ.ಆರ್ ಶ್ರೀನಾಥ್ ರವರಿಗೆ ಜೆಡಿಎಸ್ ಟಿಕೆಟ್ ಘೋಷಿಸಿದೆ. ಒಕ್ಕಲಿಗ ಮತ್ತು ಮುಸ್ಲಿಂ ಮತಗಳ ಮೇಲೆ ಅವರು ಕಣ್ಣಿಟ್ಟಿದ್ದಾರೆ.

ಬಿಜೆಪಿ ಪಕ್ಷ ಸೇರಿರುವ ವರ್ತೂರು ಪ್ರಕಾಶ್‌ ಅಭ್ಯರ್ಥಿಯಾಗಿದ್ದಾರೆ. 2008 ಮತ್ತು 2013ರಲ್ಲಿ ಎರಡು ಬಾರಿ ಶಾಸಕನಾಗಿರುವ ಅವರು ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಕಾತುರರಾಗಿದ್ದಾರೆ. ಕುರುಬ ಸಮುದಾಯದ ಅವರು ದಲಿತ ಮತ್ತು ಮುಸ್ಲಿಂ ಮತಗಳನ್ನು ಸೆಳೆಯಲು ರಣತಂತ್ರ ರೂಪಿಸುತ್ತಿದ್ದಾರೆ.

ಕೋಲಾರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಇಲ್ಲಿ ಮೂರು ಪಕ್ಷಗಳಿಗೂ ಗೆಲುವಿನ ಸಾಧ್ಯತೆಯಿದ್ದು, ಯಾರೇ ಗೆದ್ದರೂ ಅಂತರ ಮಾತ್ರ ಕಡಿಮೆ ಇರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮಂಡ್ಯ ಜಿಲ್ಲೆ: ಜೆಡಿಎಸ್-ಕಾಂಗ್ರೆಸ್ ಸಮಬಲದ ಹೋರಾಟ – ಇರುವುದೊಂದು ಕ್ಷೇತ್ರ ಕಳೆದುಕೊಳ್ಳುವ ಭೀತಿಯಲ್ಲಿ ಬಿಜೆಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...