Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ:ಮಂಡ್ಯ ಜಿಲ್ಲೆ: ಜೆಡಿಎಸ್-ಕಾಂಗ್ರೆಸ್ ಸಮಬಲದ ಹೋರಾಟ - ಇರುವುದೊಂದು ಕ್ಷೇತ್ರ ಕಳೆದುಕೊಳ್ಳುವ ಭೀತಿಯಲ್ಲಿ ಬಿಜೆಪಿ

ಮಂಡ್ಯ ಜಿಲ್ಲೆ: ಜೆಡಿಎಸ್-ಕಾಂಗ್ರೆಸ್ ಸಮಬಲದ ಹೋರಾಟ – ಇರುವುದೊಂದು ಕ್ಷೇತ್ರ ಕಳೆದುಕೊಳ್ಳುವ ಭೀತಿಯಲ್ಲಿ ಬಿಜೆಪಿ

ಸದ್ಯಕ್ಕೆ ಮಂಡ್ಯದ 07 ಕ್ಷೇತ್ರಗಳಲ್ಲಿ ಜೆಡಿಎಸ್ 03, ಕಾಂಗ್ರೆಸ್ 03 ಮತ್ತು ಸರ್ವೋದಯ ಕರ್ನಾಟಕ ಪಕ್ಷ ಒಂದು ಕಡೆ ಗೆಲುವು ಸಾಧಿಸುವ ಸಾಧ್ಯತೆಯಿದೆ.

- Advertisement -
- Advertisement -

ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ವಾರವಷ್ಟೇ ಬಾಕಿ ಇದೆ. ಅಂತಿಮ ಹಂತದ ಬಿರುಸಿನ ಪ್ರಚಾರದಲ್ಲಿ ಮೂರು ಪಕ್ಷಗಳು ತೊಡಗಿಸಿಕೊಂಡಿವೆ. ಬೇರು ಬಿಡಲಾಗದ ಹಳೇ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ. ಅದರಲ್ಲಿಯೂ ಮಂಡ್ಯ ಜಿಲ್ಲೆಯಲ್ಲಿ ನೆಲೆಯೂರಲು ಬಿಜೆಪಿ ಯತ್ನಿಸುತ್ತಿದೆ. ಅಮಿತ್ ಶಾ, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಬಂದು ಪ್ರಚಾರ ಮಾಡಿ ಹೋಗಿದ್ದಾರೆ. ಇನ್ನು ಕಾಂಗ್ರೆಸ್ ಕೂಡ ಮಂಡ್ಯ ಜಿಲ್ಲೆಯನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹರಸಾಹಸ ಪಡುತ್ತಿದೆ. ಪ್ರಿಯಾಂಕಾ ಗಾಂಧಿ ವಾದ್ರ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ. ಇನ್ನು ಜೆಡಿಎಸ್ 7 ಕ್ಷೇತ್ರಗಳಲ್ಲಿ 6 ಕಡೆ ತನ್ನ ಶಾಸಕರನ್ನು ಹೊಂದಿದ್ದು, ಆ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಮುಂದಾಗಿದೆ. ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಸ್ಥಿತಿಗಿತಿ ತಿಳಿಯೋಣ.

ಮಂಡ್ಯ ವಿಧಾನಸಭಾ ಕ್ಷೇತ್ರ

ಒಂದು ಉಪ ಚುನಾವಣೆ ಸೇರಿ ಒಟ್ಟು 16 ಚುನಾವಣೆಗಳು ಮಂಡ್ಯದಲ್ಲಿ ನಡೆದಿದ್ದು ಆರು ಬಾರಿ ಕಾಂಗ್ರೆಸ್ ಪಕ್ಷ ಗೆಲುವನ್ನು ಸಾಧಿಸಿದೆ. ಜೆಡಿಎಸ್ 3 ಬಾರಿ, ಜನತಾದಳ ಒಮ್ಮೆ, ಜನತಾಪಕ್ಷ 3 ಬಾರಿ, ಸ್ವತಂತ್ರ ಅಭ್ಯರ್ಥಿಗಳು 2 ಬಾರಿ ಮತ್ತು ಎಜಿಪಿ ಪಕ್ಷ ಒಮ್ಮೆ ಇಲ್ಲಿ ಗೆಲುವು ಸಾಧಿಸಿದ್ದಾರೆ. ಬಹುತೇಕ ಒಕ್ಕಲಿಗ ಸಮುದಾಯದವರೆ ಇಲ್ಲಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 2,35,000 ಮತದಾರರಿದ್ದಾರೆ. ಅದರಲ್ಲಿ ಒಕ್ಕಲಿಗ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಮಾರು 95,000 ಮತಗಳಿವೆ ಎನ್ನಲಾಗಿದೆ. ಎರಡನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಮತಗಳಿದ್ದು ಸುಮಾರು 33,000 ಮತಗಳಿವೆ. ಉಳಿದಂತೆ ಮುಸ್ಲಿಂ 23,000, ಲಿಂಗಾಯಿತ 13,000, ಕುರುಬ 13,000, ಎಸ್‌ಟಿ 8,000 ಮತಗಳಿವೆ. ಇತರೆ ಸಮುದಾಯದ ಸುಮಾರು 50,000 ಮತಗಳಿವೆ ಎನ್ನಲಾಗಿದೆ.

ಹಾಲಿ ಶಾಸಕ ಎಂ ಶ್ರೀನಿವಾಸ್‌ರವರು 2004, 2008 ಮತ್ತು 2018ರಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆರಂಭದಲ್ಲಿ ಸರಳವಾಗಿದ್ದು, ಒಂದಷ್ಟು ಕೆಲಸ ಮಾಡುತ್ತಿದ್ದ, ಎಲ್ಲರ ಕೈಗೂ ಸಿಗುತ್ತಿದ್ದ ಅವರು ಇತ್ತೀಚಿಗೆ ಅನಾರೋಗ್ಯದ ಕಾರಣದಿಂದ ನಿಷ್ಕ್ರಿಯರಾಗಿದ್ದರು. ಅವರಿಗೆ ಟಿಕೆಟ್ ನೀಡಿದ್ದ ಜೆಡಿಎಸ್ ಕೊನೆ ಕ್ಷಣದಲ್ಲಿ ಮೇಲುಕೋಟೆ ಶಾಸಕ ಸಿ.ಎಸ್ ಪುಟ್ಟರಾಜುರವರ ಬೆಂಬಲಿಗ, ಮನ್‌ಮುಲ್‌ ಅಧ್ಯಕ್ಷರಾದ ಬಿ.ಆರ್ ರಾಮಚಂದ್ರರವರಿಗೆ ಮಣೆ ಹಾಕಿತು. ಇದರಿಂದ ಬಂಡಾಯವೆದ್ದ ಎಂ ಶ್ರೀನಿವಾಸ್‌ರವರು ತಮ್ಮ ಅಳಿಯ ಜಿ.ಪಂ ಮಾಜಿಸದಸ್ಯ  ಯೋಗೇಶ್‌, ಶಂಕರೇಗೌಡರ ಮೊಮ್ಮಗ ಮಾಜಿ ಜಿ.ಪಂ ಸದಸ್ಯ ವಿಜಯಾನಂದ, ಮಂಡ್ಯ ಜೆಡಿಎಸ್ ವಕ್ತಾರರಾದ ಮುದ್ದನಘಟ್ಟ ಮಹಾಲಿಂಗೇಗೌಡರ ಸಿಂಡಿಕೇಟ್ ರಚಿಸಿದ್ದಾರೆ. ವಿಜಯಾನಂದರವರನ್ನು ಸ್ವಾಭಿಮಾನಿ ಜೆಡಿಎಸ್ ಹೆಸರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಅವರನ್ನು ಗೆಲ್ಲಿಸುವ ಹೊಣೆ ಹೊತ್ತು ಪ್ರಚಾರ ಆರಂಭಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ 16 ಜನ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಸೋತ ಗಣಿಗ ರವಿಕುಮಾರ್‌ ಮತ್ತೆ ಟಿಕೆಟ್ ಪಡೆದು ಅಭ್ಯರ್ಥಿಯಾಗಿದ್ದಾರೆ. ಉಳಿದ ಎಲ್ಲರೂ ಅವರನ್ನೇ ಬೆಂಬಲಿಸಲು ನಿರ್ಧಿರಿಸಿದ್ದಾರೆ.

ಬಿಜೆಪಿ ಪಕ್ಷವು ಜೆಡಿಎಸ್‌ನಿಂದ ವಲಸೆ ಬಂದಿರುವ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ  ಅಶೋಕ್ ಜಯರಾಂರವರಿಗೆ ಟಿಕೆಟ್ ಘೋಷಿಸಿದೆ. ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಹಾಗಾಗಿ ಖಾತೆ ತೆರೆಯಲು ಬಿಜೆಪಿ ಯತ್ನಿಸುತ್ತಿದೆ.

ಸರ್ವೋದಯ ಕರ್ನಾಟಕ ಪಕ್ಷದಿಂದ ಮಧುಚಂದನ್ ಎಸ್.ಸಿ ಕಣಕ್ಕೆ ಧುಮುಕಿದ್ದಾರೆ. ವಿದೇಶದಲ್ಲಿನ ಉದ್ಯೋಗ ತೊರೆದು ಆರ್ಗಾನಿಕ್ ಮಂಡ್ಯ ಸಂಸ್ಥೆಯ ಮೂಲಕ ಗುರುತಿಸಿಕೊಂಡಿದ್ದ ಮಧುಚಂದನ್ ರೈತ ಸಂಘ ಕಟ್ಟುವಲ್ಲಿ ಸಕ್ರಿಯರಾಗಿದ್ದರು. ಅವರೀಗ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.

ಸದ್ಯ ಮಂಡ್ಯದಲ್ಲಿ ಜೆಡಿಎಸ್, ಜೆಡಿಎಸ್ ಬಂಡಾಯ ಅಭ್ಯರ್ಥಿ, ಕಾಂಗ್ರೆಸ್, ಬಿಜೆಪಿ ಮತ್ತು ಸರ್ವೋದಯ ಕರ್ನಾಟಕ ಪಕ್ಷದ 5 ಅಭ್ಯರ್ಥಿಗಳು ಸಹ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಎಲ್ಲಾ ಅಭ್ಯರ್ಥಿಗಳು ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಹಾಗಾಗಿ ಒಕ್ಕಲಿಗ ಮತಗಳು ಹರಿದು ಹಂಚಿ ಹೋಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಉಳಿದ ಸಮುದಾಯಗಳ ಮತಗಳನ್ನು ಯಾರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬಹುದೊ ಅವರಿಗೆ ಗೆಲುವಿನ ಹೆಚ್ಚಿನ ಸಾಧ್ಯತೆಗಳಿವೆ. ಆ ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ತೆರೆದುಕೊಂಡಿದೆ. ಇನ್ನು ಜೆಡಿಎಸ್‌ ಪಕ್ಷದಲ್ಲಿನ ಬಂಡಾಯವು ಸಹ ಕಾಂಗ್ರೆಸ್‌ಗೆ ವರದಾನವಾಗುವಂತೆ ಕಂಡುಬರುತ್ತಿದೆ.

ಮದ್ದೂರು

ಎರಡು ಉಪಚುನಾವಣೆಗಳು ಸೇರಿದಂತೆ ಒಟ್ಟು 17 ಚುನಾವಣೆಗಳನ್ನು ಕಂಡಿರುವ ಮದ್ದೂರಿನಲ್ಲಿ 9 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ; ಒಮ್ಮೆ ಸ್ವತಂತ್ರ ಅಭ್ಯರ್ಥಿ, ಮೂರು ಬಾರಿ ಜನತಾಪರಿವಾರದ ಅಭ್ಯರ್ಥಿಗಳು ಗೆದ್ದಿದ್ದಾರೆ. ಕಳೆದ 4 ಚುನಾವಣೆಗಳಿಂದ ಜೆಡಿಎಸ್ ಇಲ್ಲಿ ಸತತವಾಗಿ ವಿಜಯ ಪತಾಕೆ ಹಾರಿಸಿದೆ.

ಇದುವರೆಗೂ ಇಲ್ಲಿಂದ ಗೆದ್ದವರೆಲ್ಲ ಒಕ್ಕಲಿಗ ಸಮುದಾಯದವರೇ ಆಗಿದ್ದಾರೆ. ಒಟ್ಟು ಅಂದಾಜು 2,20,000 ಮತದಾರರಿರುವ ಮದ್ದೂರಿನಲ್ಲಿ ಸುಮಾರು 1 ಲಕ್ಷ ಒಕ್ಕಲಿಗ ಮತಗಳಿವೆ ಎನ್ನಲಾಗಿದೆ. ಪರಿಶಿಷ್ಟ ಜಾತಿಯ 36,000 ಮತಗಳು, 12,000 ದಷ್ಟು ಮುಸ್ಲಿಂ ಮತಗಳು, 12,000ದಷ್ಟು ಕುರುಬ ಸಮುದಾಯದ ಮತಗಳು ಮತ್ತು 10,000ದಷ್ಟು ಲಿಂಗಾಯತ ಸಮುದಾಯದ ಮತಗಳಿವೆ ಎನ್ನಲಾಗಿದೆ. ಇತರೆ ಎಲ್ಲಾ ಸಮುದಾಯದ ಸುಮಾರು 50,000 ಮತಗಳು ಕ್ಷೇತ್ರದಲ್ಲಿವೆ ಎನ್ನಲಾಗಿದೆ.

ಹಾಲಿ ಶಾಸಕರಾದ ಡಿ.ಸಿ ತಮ್ಮಣ್ಣನವರು ತಮ್ಮ ಕೊನೆಯ ಚುನಾವಣೆ ಎಂದುಕೊಂಡು ಜೆಡಿಎಸ್ ಪಕ್ಷದಿಂದ ಚುನಾವಣೆ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಕೆಸಿನೋ ಕ್ಲಬ್‌ಗಳ ಮಾಲೀಕ, ಬಹುಕೋಟಿ ಒಡೆಯ, ಸಮ್ಮಿಶ್ರ ಸರ್ಕಾರ ಪತನದಲ್ಲಿ ಪಾತ್ರ ವಹಸಿದ್ದ ಉದ್ಯಮ ಕದಲೂರು ಉದಯ್‌ರನ್ನು ಪಕ್ಷಕ್ಕೆ ಬರಮಾಡಿಕೊಂಡು ಟಿಕೆಟ್ ಘೋಷಿಸಿದೆ. ಜೆಡಿಎಸ್ ತೊರೆದಿದ್ದ ಎಸ್‌.ಪಿ ಸ್ವಾಮಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ನಾಲ್ಕನೇ ಬಾರಿಗೆ ಶಾಸಕರಾಗಿರುವ, 80 ವರ್ಷ ವಯಸ್ಸಾಗಿರುವ ಡಿ.ಸಿ ತಮ್ಮಣ್ಣನವರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಆದರೆ ಕಾಂಗ್ರೆಸ್ ಟಿಕೆಟ್ ವಂಚಿತ ಎಸ್‌.ಎಂ ಕೃಷ್ಣರವರ ಸಹೋದರನ ಪುತ್ರ ಗುರುಚರಣ್ ಜೆಡಿಎಸ್ ಸೇರಿರುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಹಾಗಾಗಿ ಕಾಂಗ್ರೆಸ್‌ಗೆ ಸ್ವಲ್ಪ ಬಂಡಾಯದ ಬಿಸಿ ತಾಗುತ್ತಿದೆ. ಕದಲೂರು ಉದಯ್ ಒಂದು ವರ್ಷದಿಂದ ಸಮಾಜಸೇವೆ ಹೆಸರಿನಲ್ಲಿ ಸಾಕಷ್ಟು ದುಡ್ಡು ಖರ್ಚು ಮಾಡಿದ್ದಾರೆ. ಹಾಗಾಗಿ ಇಲ್ಲಿ ಡಿ.ಸಿ ತಮ್ಮಣ್ಣ ಮತ್ತು ಕದಲೂರು ಉದಯ್ ನಡುವೆ ನೇರಾ ನೇರ ಹಣಾಹಣಿ ನಡೆಯಲಿದೆ. ಬಿಜೆಪಿಗೆ ಇಲ್ಲಿ ಮೂರನೇ ಸ್ಥಾನ ಸಿಗುವ ಸಾಧ್ಯತೆಯಿದೆ.

ಮಳವಳ್ಳಿ: ಪ.ಜಾ ಮೀಸಲು ಕ್ಷೇತ್ರ

ಮಳವಳ್ಳಿಯಲ್ಲಿ 17 ಚುನಾವಣೆಗಳು ನಡೆದಿದ್ದು, ಕಾಂಗ್ರೆಸ್ 7 ಬಾರಿ, ಜನತಾ ಪಕ್ಷ ಮೂರು ಬಾರಿ, ಜೆಡಿಎಸ್ ಎರಡು ಬಾರಿ, ಜನತಾದಳ, ಜೆಡಿಯು, ಕಿಸಾನ್ ಮಜ್ದೂರ್ ಪಕ್ಷ, ಶೆಡ್ಯೂಲ್ ಕಾಸ್ಟ್ ಫೆಡರೇಷನ್ ಮತ್ತು ಸ್ವತಂತ್ರ ಅಭ್ಯರ್ಥಿಗಳು ತಲಾ ಒಂದು ಬಾರಿ ಗೆಲುವು ಸಾಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ಉಳಿದ ವಿಧಾನಸಭಾ ಕ್ಷೇತ್ರಗಳಿಗಿಂತ ಭಿನ್ನವಾಗಿ ಮಳವಳ್ಳಿಯಲ್ಲಿ ಪರಿಶಿಷ್ಟ ಜಾತಿಯ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಕ್ಷೇತ್ರದಲ್ಲಿ ಒಟ್ಟು ಸುಮಾರು 2,50,000 ಮತಗಳಿದ್ದರೆ ಪರಿಶಿಷ್ಟ ಜಾತಿಯ 75,000 ದಷ್ಟು ಮತಗಳಿವೆ. ಒಕ್ಕಲಿಗರ 70,000, ಲಿಂಗಾಯತರ 30,000 ಮತ್ತು 25,000ದಷ್ಟು ಕುರುಬ ಸಮುದಾಯದ ಮತಗಳಿವೆ. ಮುಸ್ಲಿಂ ಸಮುದಾಯದ 15,000 ಮತಗಳಿದ್ದರೆ ಇತರೆ ಸಮುದಾಯದ ಮತಗಳು 35,000 ಎನ್ನಲಾಗಿದೆ.

ಎರಡನೇ ಬಾರಿಗೆ ಶಾಸಕರಾಗಿರುವ ಅನ್ನದಾನಿಯವರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಅವರು ಸಾಕಷ್ಟು ಅಭಿವೃದ್ದಿ ಮಾಡದಿರುವುದು ಚರ್ಚೆಯ ವಿಷಯವಾಗಿದೆ. ಅವರಿಗೆ ಜೆಡಿಎಸ್ ಟಿಕೆಟ್ ದೊರತಿದೆ.

ಎರಡು ಬಾರಿ ಶಾಸಕರಾಗಿರುವ, ಒಮ್ಮೆ ಸಚಿವರಾಗಿರುವ ಪಿ.ಎಂ ನರೇಂದ್ರ ಸ್ವಾಮಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಈ ಬಾರಿ ಶತಾಯಗತಾಯ ಗೆಲ್ಲಲು ಕಸರತ್ತು ನಡೆಸಿದ್ದಾರೆ. ಬಿಜೆಪಿ ಟಿಕೆಟ್ ವಂಚಿತ ಮಾಜಿ ಸಚಿವ ಬಿ.ಸೋಮಶೇಖರ್ ಕಾಂಗ್ರೆಸ್ ಪಕ್ಷ ಸೇರಿರುವುದು ಅವರಿಗೆ ಕೊಂಚ ಸಹಾಯಕವಾಗಲಿದೆ.

ಭೋವಿ ಸಮುದಾಯದ ಜಿ.ಮುನಿರಾಜುರವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಕ್ಷೇತ್ರದಲ್ಲಿರುವ ಲಿಂಗಾಯಿತ ಮತಗಳು ತನ್ನ ಕೈಹಿಡಿಯುತ್ತವೆ ಎಂದು ಅವರು ಭಾವಿಸಿದ್ದಾರೆ. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ 26,397 ಮತಗಳನ್ನು ಪಡೆದಿದ್ದರು. ಆದರೆ ಕಳೆದ ಚುನಾವಣೆಯ ಸಮಯದಲ್ಲಿ ಮಾಯವಾಗಿದ್ದ ಅವರು ಈಗ ಮತ್ತೆ ಪ್ರತ್ಯಕ್ಷರಾಗಿದ್ದು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಬಿಎಸ್‌ಪಿ ರಾಜ್ಯಾಧ್ಯಕ್ಷರಾದ ಎಂ. ಕೃಷ್ಣಮೂರ್ತಿಯವರು ಕಣದಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರಾ ಹಣಾಹಣಿ ನಡೆಯಲಿದೆ.

ಶ್ರೀರಂಗಪಟ್ಟಣ

ಒಕ್ಕಲಿಗ ಬಾಹುಳ್ಯದ ಈ ಮತ ಕ್ಷೇತ್ರದಲ್ಲಿ ಗೆದ್ದವರು, ಬಿದ್ದವರು ಎಲ್ಲರೂ ಒಕ್ಕಲಿಗರೇ ಆಗಿದ್ದಾರೆ. ಇದುವರೆಗಿನ 16 ಚುನಾವಣೆಗಳಲ್ಲಿ ಕಾಂಗ್ರೆಸ್ 5 ಬಾರಿ ಗೆಲುವು ಕಂಡರೆ, ಜನತಾಪಕ್ಷ 4 ಬಾರಿ, ಜೆಡಿಎಸ್ 4 ಬಾರಿ, ಜನತಾದಳ ಒಮ್ಮೆ ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಮೊದಲ ಬಾರಿಗೆ ಶಾಸಕರಾಗಿರುವ ರವೀಂದ್ರ ಶ್ರೀಕಂಠಯ್ಯನವರು ಸೊಫೆಸ್ಟಿಕೇಟೆಡ್ ವೈಟ್ ಕಾಲರ್ ರಾಜಕಾರಣಿ ಎನಿಸಿಕೊಂಡಿದ್ದಾರೆ. ಅವರು ಜನರ ಕೈಗೆಟುಕುವುದಿಲ್ಲ ಎಂಬ ಆರೋಪಗಳಿವೆ. ಅವರು ಮತ್ತೆ ಜೆಡಿಎಸ್‌ನಿಂದ ಅಭ್ಯರ್ಥಿಯಾಗಿದ್ದಾರೆ. ಟಿಕೆಟ್ ವಂಚಿತ ತಗ್ಗಹಳ್ಳಿ ವೆಂಕಟೇಶ್‌ರವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಸೋಲುಂಡಿರುವ ಕಾಂಗ್ರೆಸ್‌ ಪಕ್ಷದ ರಮೇಶ್‌ಬಾಬು ಬಂಡಿಸಿದ್ಧೇಗೌಡರು ಜನರ ನಡುವೆಯೆ ಇದ್ದುಕೊಂಡು ಚುನಾವಣಾ ತಯಾರಿ ನಡೆಸಿದ್ದಾರೆ. ಈ ಬಾರೀ ಶತಾಯಗತಾಯ ಗೆಲ್ಲಲು ಪಣತೊಟ್ಟಿದ್ದು, ಈ ಚುನಾವಣೆಯನ್ನು ಅಳಿವು ಉಳಿವಿನ ಪ್ರಶ್ನೆಯನ್ನಾಗಿ ತೆಗೆದುಕೊಂಡಿದ್ದಾರೆ.

ಇಷ್ಟು ದಿನ ಕಾಂಗ್ರೆಸ್‌ನಲ್ಲಿದ್ದ ಎಸ್.ಎಲ್ ಲಿಂಗರಾಜುರವರ ಅಳಿಯ, ಕೆಪಿಸಿಸಿ ಸದಸ್ಯರಾಗಿದ್ದ ಸಚ್ಚಿದಾನಂದ ಬಿಜೆಪಿ ಸೇರಿ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ಇಲ್ಲದ ಕಾರಣ ಇಲ್ಲಿಯೂ ಜೆಡಿಎಸ್-ಕಾಂಗ್ರೆಸ್ ನಡುವೆಯೇ ಪೈಪೋಟಿ ನಡೆಯುತ್ತಿದೆ.

ಮೇಲುಕೋಟೆ

ಪಾಂಡವಪುರ/ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 15 ಚುನಾವಣೆಗಳು ನಡೆದಿದ್ದು, ಕಾಂಗ್ರೆಸ್ 5 ಬಾರಿ, ಜೆಡಿಎಸ್: 3 ಬಾರಿ, ರೈತಸಂಘ : 02 ಬಾರಿ, ಜನತಾಪಕ್ಷ: 02 ಸ್ವತಂತ್ರ ಅಭ್ಯರ್ಥಿ ಮತ್ತು ಪಿಎಸ್‌ಪಿ ಪಕ್ಷ ತಲಾ ಒಮ್ಮೊಮ್ಮೆ ಜಯ ಸಾಧಿಸಿವೆ.

ಮೂರನೇ ಬಾರಿಗೆ ಶಾಸಕರಾದ ಸಿ.ಎಸ್ ಪುಟ್ಟರಾಜುರವರು ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು. ಸದ್ಯ ನಾಲ್ಕನೇ ಬಾರಿ ವಿಧಾನಸೌಧಕ್ಕೆ ಹೋಗಲು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.

ಕಳೆದ ಚುನಾವಣೆಯ ಸೋಲಿನ ನಂತರ ಮತ್ತೆ ಅಮೆರಿಕಕ್ಕೆ ಮರಳಿದ್ದ ದರ್ಶನ್ ಪುಟ್ಟಣ್ಣಯ್ಯನವರು ಆಗಾಗ್ಗೆ ಕ್ಷೇತ್ರಕ್ಕೆ ಭೇಟಿ ನೀಡಿ ರೈತರ ಹೋರಾಟಗಳನ್ನು ಸಂಘಟಿಸುತ್ತಿದ್ದರು. ಸದ್ಯ ಅಲ್ಲಿನ ತಮ್ಮ ಕಂಪನಿಯನ್ನು ಮಾರಿ ಸ್ವಗ್ರಾಮಕ್ಕೆ ಮರಳಿದ್ದಾರೆ. ಕಳೆದ ಐದಾರು ತಿಂಗಳುಗಳಿಂದ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತಿರುವ ಅವರಿಗೆ ಸರ್ವೋದಯ ಕರ್ನಾಟಕ ಪಕ್ಷ ಟಿಕೆಟ್ ಘೋಷಿಸಿದೆ. ಇನ್ನು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಕಳೆದ ಬಾರಿಯಂತೆ ಈ ಬಾರಿಯೂ ದರ್ಶನ್‌ ಪುಟ್ಟಣ್ಣಯ್ಯನವರಿಗೆ ಬೆಂಬಲ ಘೋಷಿಸಿದೆ.

ಇನ್ನು ಬಿಜೆಪಿಗೆ ಈ ಕ್ಷೇತ್ರದಲ್ಲಿ ನೆಲೆ ಇಲ್ಲ. ಆದರೂ ಒಂದಷ್ಟು ಸಂಖ್ಯೆಯ ಓಟುಗಳನ್ನು ಪಡೆದು ತಾವೂ ನೆಲೆ ಕಂಡು, ಪಕ್ಷಕ್ಕೂ ನೆಲೆ ಕಾಣಿಸಲು ಡಾ.ಇಂದ್ರೇಶ್‌ರವರು ಮುಂದಾಗಿದ್ದಾರೆ.

ಕಳೆದ ಬಾರಿಯ ಸೋಲಿನ ಅನುಕಂಪ ದರ್ಶನ್ ಪುಟ್ಟಣ್ಣಯ್ಯನವರ ಪರವಾಗಿದೆ. ಅವರ ಮತ್ತು ಸಿ.ಎಸ್ ಪುಟ್ಟರಾಜುರವರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.

ನಾಗಮಂಗಲ

ದೇವೇಗೌಡರ ಪ್ರಭಾವ ಹೊಂದಿರುವ ಜಿದ್ದಾಜಿದ್ದಿನ ಹೊಡಿಬಡಿ ರಾಜಕೀಯದ ಕ್ಷೇತ್ರ ಇದಾಗಿದೆ. ಒಕ್ಕಲಿಗ ಪ್ರಾಬಲ್ಯದ ಇಲ್ಲಿ ಎರಡು ಬಾರಿ ಕುರುಬ ಸಮುದಾಯದ ಅಭ್ಯರ್ಥಿಗಳು ಜಯ ಕಂಡಿದ್ದಾರೆ. ಈ ಚುಣಾವಣೆಯಲ್ಲಿ ಕಣದಲ್ಲಿ ಇರುವವರೆಲ್ಲ ಒಕ್ಕಲಿಗ ಸಮುದಾಯದವರೆ ಆಗಿದ್ದಾರೆ. ಒಟ್ಟು 18 ಚುನಾವಣೆಗಳು ನಡೆದಿದ್ದು, ಕಾಂಗ್ರೆಸ್; 7 ಬಾರಿ, ಸ್ವತಂತ್ರ ಅಭ್ಯರ್ಥಿಗಳು; 6 ಬಾರಿ, ಜೆಡಿಎಸ್; 04 ಬಾರಿ ಮತ್ತು ಜನತಾ ಪರಿವಾರ: ಒಂದು ಬಾರಿ ಗೆಲುವನ್ನು ಸಾಧಿಸಿವೆ.

ಒಟ್ಟು: 2,23,000 ಮತಗಳಿದ್ದು, ಒಕ್ಕಲಿಗರು: 1 ಲಕ್ಷ, ಎಸ್.ಸಿ 34,000, ಮುಸ್ಲಿಂ: 20,000, ಕುರುಬ : 18,000, ಲಿಂಗಾಯತ : 10,000, ಒಬಿಸಿ ಸಮುದಾಯದ 40,000 ಮತಗಳಿವೆ.

ಹಾಲಿ ಕೆ.ಸುರೇಶ್ ಗೌಡ ಎರಡನೇ ಬಾರಿಗೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ನಿರೀಕ್ಷಿತ ಕೆಲಸ ಮಾಡಿಲ್ಲವೆಂಬ ಆರೋಪ ಅವರ ಮೇಲಿದೆ. ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಮತ್ತೆ ಕಣಕ್ಕಿಳಿದಿದ್ದಾರೆ. ಎಲ್.ಆರ್ ಶಿವರಾಮೇಗೌಡರ ಪತ್ನಿ ಸುಧಾ ಶಿವರಾಮೇಗೌಡ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಟಿಕೆಟ್ ವಂಚಿತ ಫೈಟರ್ ರವಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಎಲ್.ಆರ್ ಶಿವರಾಮೇಗೌಡ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದು ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿ ಪಕ್ಷೇತರವಾಗಿ ಸ್ಪರ್ಧಿಸಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುವ ಸಾಧ್ಯತೆಯಿದೆ.

ಕೆ.ಆರ್ ಪೇಟೆ

ಇದುವರೆಗಿನ 17 ಚುನಾವಣೆಗಳಲ್ಲಿ ಕಾಂಗ್ರೆಸ್: 7 ಬಾರಿ, ಜೆಡಿಎಸ್: 3 ಬಾರಿ, ಜನತಾ ಪರಿವಾರ: 3 ಬಾರಿ, ಸ್ವತಂತ್ರ ಅಭ್ಯರ್ತಿಗಳು 3 ಬಾರಿ ಜಯಕಂಡರೆ, ಆಪರೇಷನ್ ಕಮಲಕ್ಕೆ ಒಳಗಾದ ಕೆ.ಸಿ ನಾರಾಯಣಗೌಡ ಬಿಜೆಪಿ ಸೇರಿ 2019ರ ಉಪಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ.

ಒಟ್ಟು ಮತದಾರರು: 2,20,000; ಒಕ್ಕಲಿಗರು: 90,000, ಕುರುಬರು: 35,000, ಪರಿಶಿಷ್ಟ ಜಾತಿ: 34,000, ಲಿಂಗಾಯತ: 15,000, ಮುಸ್ಲಿಂ: 15,000, ಇತರೆ: 31,000 ದಷ್ಟು ಅಂದಾಜು ಮತಗಳಿವೆ.

ಎರಡು ಅವಧಿಗೆ 3 ಬಾರಿ ಶಾಸಕರಾಗಿರುವ ಕೆ.ಸಿ ನಾರಾಯಣಗೌಡರವರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಹಾಗಾಗಿ ಅವರು ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಅಮಿತ್ ಶಾ ಅವರನ್ನು ಸಮಾಧಾನ ಪಡಿಸಿ ಬಿಜೆಪಿ ಅಭ್ಯರ್ಥಿಯನ್ನಾಗಿಸಿದ್ದಾರೆ.

ಜೆಡಿಎಸ್ ಪಕ್ಷವು ಮನ್‌ಮುಲ್ ನಿರ್ದೇಶಕ ಹೆಚ್.ಟಿ ಮಂಜುರವರಿಗೆ ಟಿಕೆಟ್ ನೀಡಿದೆ. ಇದರಿಂದ ಬಂಡಾಯವೆದ್ದ ಹಿರಿಯ ಜೆಡಿಎಸ್ ಮುಖಂಡ ಬಿ.ಎಲ್ ದೇವರಾಜುರವರು ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ನ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.

ಬಿಎಸ್‌ಪಿಯಿಂದ ಪ್ರದೀಪ್ ಬಸ್ತಿ ಕಣದಲ್ಲಿದ್ದರೆ, ಯೂಟ್ಯೂಬರ್ ಚಂದನ್ ಗೌಡ ಪಕ್ಷೇತರ ಅಭ್ಯರ್ಥಿಯಾಗಿ ಗಮನ ಸೆಳೆದಿದ್ದಾರೆ. ಸದ್ಯಕ್ಕೆ ಕೆ.ಆರ್ ಪೇಟೆಯಲ್ಲಿ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದೆ. ಆದರೆ ಬಿಜೆಪಿ ಗೆಲ್ಲಲು ಸಾಧ್ಯತೆ ಇರುವ ಕೆ.ಆರ್ ಪೇಟೆಯಲ್ಲಿಯೂ ತಿಣುಕಾಡುತ್ತಿದೆ. ನಾರಾಯಣಗೌಡರು ಹೆಸರು ಕೆಡಿಸಿಕೊಂಡಿದ್ದಾರೆ. ಹಾಗಾಗಿ ಬಿಜೆಪಿ ಜಿಲ್ಲೆಯಲ್ಲಿ ಇರುವ ಒಂದು ಕ್ಷೇತ್ರವೂ ಕೈತಪ್ಪುವ ಭೀತಿ ಎದುರಿಸುತ್ತಿದೆ. ಸದ್ಯಕ್ಕೆ ಮಂಡ್ಯದ 07 ಕ್ಷೇತ್ರಗಳಲ್ಲಿ ಜೆಡಿಎಸ್ 03, ಕಾಂಗ್ರೆಸ್ 03 ಮತ್ತು ಸರ್ವೋದಯ ಕರ್ನಾಟಕ ಪಕ್ಷ ಒಂದು ಕಡೆ ಗೆಲುವು ಸಾಧಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಉಡುಪಿ: ಹಿಂದುತ್ವದ ಹಿತಾನುಭವ ಭ್ರಮನಿರಸನವಾಗುವ ಆತಂಕದಲ್ಲಿ ಕೇಸರಿ ಪಡೆ?!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...