Homeಅಂಕಣಗಳುಉಡುಪಿ: ಹಿಂದುತ್ವದ ಹಿತಾನುಭವ ಭ್ರಮನಿರಸನವಾಗುವ ಆತಂಕದಲ್ಲಿ ಕೇಸರಿ ಪಡೆ?!

ಉಡುಪಿ: ಹಿಂದುತ್ವದ ಹಿತಾನುಭವ ಭ್ರಮನಿರಸನವಾಗುವ ಆತಂಕದಲ್ಲಿ ಕೇಸರಿ ಪಡೆ?!

- Advertisement -
- Advertisement -

ಕಡಲ ತಡಿಯ ಉಡುಪಿ ಜಿಲ್ಲೆಯಲ್ಲೀಗ ಒಂದೆಡೆ ವಿಪರೀತ ಬಿಸಿಲಿನ ಝಳ; ಮತ್ತೊಂದೆಡೆ ಚುನಾವಣಾ ಜಿದ್ದಾಜಿದ್ದಿಯ ಹೈವೋಲ್ಟೇಜ್ ಡ್ರಾಮಾ. ಉಡುಪಿಯೆಂದರೆ ಹೇಳಿಕೇಳಿ ಹಿಂದುತ್ವದ ಆಡುಂಬೊಲ; ಈ ಕೇಸರಿ ಕಾಳಗಕ್ಕೆ ಶೂದ್ರರೆ ಕಾಲಾಳುಗಳು. ಮೀನುಗಾರ ಸಮುದಾಯದ ಮೊಗವೀರರು ಮತ್ತ ಈಡಿಗ ಸಂಬಂಧಿ ಬಿಲ್ಲವರ ಹೊಸ ತಲೆಮಾರಿನ ಪೀಳಿಗೆ ಹಿಂದುತ್ವದ ಮಾಯಾಜಾಲಕ್ಕೆ ಸಿಲುಕಿ ದಶಕಗಳೇ ಕಳೆದುಹೋಗಿದೆ. ಈಗಿತ್ತಲಾಗಿ ಮೊಗವೀರ ತರುಣರಿಗೆ ಧರ್ಮೋನ್ಮಾದ ಕೆರಳಿಸಿ ಬೇಳೆ ಬೇಯಿಸಿಕೊಳ್ಳುತ್ತಿರುವವರ ಸಂಚು ಅರ್ಥವಾಗುತ್ತಿದ್ದು, ನಿಧಾನಕ್ಕೆ ಹಿಂದುತ್ವದ ’ಹಿಡಿತ’ದಿಂದ ಹೊರಗೆ ಬರಲಾರಂಭಿಸಿದ್ದಾರೆ. ಆದರೆ ಬಿಲ್ಲವ ಯುವಸಮೂಹ ಮಾತ್ರ ಕೇಸರಿ ಚಕ್ರವ್ಯೂಹದಿಂದ ಹೊರಬರದೆ ಅಲ್ಲೇ ಗಿರಕಿ ಹೊಡೆಯುತ್ತಿದೆ. ಶೂದ್ರ ಸಮೂಹವನ್ನು ದಿಕ್ಕುತಪ್ಪಿಸಿ ಹುಟ್ಟುಹಾಕಲಾಗಿದ್ದ ಹಿಜಾಬ್, ಬ್ಯಾರಿ(ಮುಸ್ಲಿಮ್)ಗಳಿಗೆ ಜಾತ್ರೆಗಳಲ್ಲಿ ವ್ಯಾಪಾರ-ವಹಿವಾಟಿಗೆ ಅವಕಾಶ ನಿರಾಕರಿಸುವುದು ಮತ್ತು ಹಲಾಲ್‌ನಂಥ ’ಧರ್ಮ ಸೂಕ್ಷ್ಮ’ದ ಲಾಭದ ನಿರೀಕ್ಷೆಯಲ್ಲಿ ಸಂಘ ಪರಿವಾರವಿದೆ. ಇಷ್ಟಾಗಿಯೂ ಜಿಲ್ಲೆಯ ಅಷ್ಟೂ ಕ್ಷೇತ್ರದಲ್ಲಿದ್ದ ಕೇಸರಿ ಶಾಸಕರ ಕರ್ಮಗೇಡಿತನ, ಅವ್ಯವಹಾರದ ಆರೋಪಗಳಿಂದಾಗಿ ಬಿಜೆಪಿ ವಿರುದ್ಧ ಅಂಡರ್ ಕರೆಂಟ್ ಪ್ರವಹಿಸುತ್ತಿದೆ ಎಂದು ಜಿಲ್ಲೆಯ ರಾಜಕಾರಣದ ಮರ್ಮ ಬಲ್ಲವರು ಹೇಳುತ್ತಾರೆ.

ಬಿಜೆಪಿಯ ಅತಿರೇಕದ ಧರ್ಮಕಾರಣದ ದೌರ್ಬಲ್ಯವೇ ಸಂಘಟನಾತ್ಮಕ-ತಾತ್ವಿಕ ಸಿದ್ಧತೆ-ಬದ್ಧತೆಗಳಿಲ್ಲದ ಸ್ಥಳೀಯ ಕಾಂಗ್ರೆಸ್‌ಗೆ ಬಲವೆಂಬಂತಾಗಿದೆ. ಉಡುಪಿ ಅಸೆಂಬ್ಲಿ ಕ್ಷೇತ್ರದಂಥ ಕಡೆ ಟಿಕೆಟ್ ನಿರ್ಧರಿಸುವಾಗ ಎಡವಿದೆ ಎನ್ನಲಾಗುತ್ತಿರುವ- ಹೊಸಬರನ್ನು ಪರಿಚಯಿಸುವ ಕೇಸರಿ ಪಾಳೆಯದ ಅವಸರದ ಪ್ರಯೋಗದಿಂದಾಗಿ- ಕಾಂಗ್ರೆಸ್ ಎಲ್ಲ ಆರೂ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಕೊಡುವ ನಿರೀಕ್ಷೆ ಮೂಡಿಸಿದೆ. ಸಚಿವ ಸುನೀಲ್‌ಕುಮಾರ್‌ರ ಕಾರ್ಕಳ ಒಂದನ್ನು ಬಿಟ್ಟು ಉಳಿದೆಲ್ಲೆಡೆ ಬಿಜೆಪಿ ಹಳಬರಿಗೆ ಗೇಟ್‌ಪಾಸ್ ಕೊಟ್ಟಿದೆ; ಕಾಂಗ್ರೆಸ್ ಕಾಪು ಮತ್ತು ಬೈಂದೂರು, ಈ ಎರಡು ಕ್ಷೇತ್ರಗಳನ್ನು ಹೊರತುಪಡಿಸಿ ಇನ್ನಿತರ ಮೂರು ಕಡೆ ಹೊಸಬರನ್ನು ಅಖಾಡಕ್ಕಿಳಿಸಿದೆ. ಕಾಂಗ್ರೆಸ್‌ಗೆ ಇದು ಅನಿವಾರ್ಯ ಬದಲಾವಣೆಯಾದರೆ, ಸಂಘ ಪರಿವಾರದ ಸೂತ್ರಧಾರರಿಗೆ ಹಿಂದುತ್ವದ ಪ್ರಯೋಗಶಾಲೆಯಾದ ಉಡುಪಿ ಜಿಲ್ಲೆಯಲ್ಲಿ ಯಾರನ್ನು ಬೇಕಿದ್ದರೂ ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತೇವೆಂಬ ಧಾರ್ಷ್ಟ್ಯ ಎಂಬ ಮಾತು ರಣಕಣದಲ್ಲಿ ಕೇಳಿಬರುತ್ತಿದೆ.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರನ್ನು ಹಣಿಯಲು ಸಂಘ ಶ್ರೇಷ್ಠರು ಹೆಣೆದ ತಂತ್ರಗಾರಿಕೆ ಬಿಜೆಪಿಯ ಜಾತಿ ಸೂತ್ರ-ಸಮೀಕರಣವನ್ನು ಉಲ್ಟಾ-ಪಲ್ಟಾ ಮಾಡಿಬಿಟ್ಟಿತು. ಸಂಘ ಪರಿವಾರದ ಪ್ರಶ್ನಾತೀತ ನಾಯಕಾಗ್ರೇಸರನ್ನೇ ಮೀರಿ ಬೆಳೆದಿದ್ದ ಹಾಲಾಡಿ ಶೆಟ್ಟರ ಕಡ್ಡಾಯ ನಿವೃತ್ತಿಗೆ ಬಿಜೆಪಿಯಲ್ಲಿ ಸ್ಕೆಚ್ ತುಂಬ ಹಿಂದೆಯೇ ಹಾಕಲಾಗಿತ್ತೆನ್ನಲಾಗಿದೆ. ಆದರಿದು ಗೊತ್ತಾಗದಂತೆ, ಹಾಲಾಡಿ ಶೆಟ್ಟಿ ಬಿಜೆಪಿ ಟಿಕೆಟ್ ಘೋಷಿಸಿಸುವ ಒಂದು ವಾರದ ಮುಂಚಿನ ತನಕ ತಾನೇ ಬಿಜೆಪಿ ಅಭ್ಯರ್ಥಿಯೆಂದು ಪ್ರಚಾರ ಶುರುಹಚ್ಚಿಕೊಂಡಿದ್ದರು. ಹಾಲಾಡಿಯನ್ನು ದಿಢೀರ್ ಬೆಂಗಳೂರಿಗೆ ಕರೆಸಿಕೊಂಡ ಕೇಸರಿ ಟಿಕೆಟ್ ಕಮಿಟಿ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವಂತೆ ’ಆಜ್ಞೆ’ ಮಾಡಿತು. ತಬ್ಬಿಬ್ಬಾದ ಹಾಲಾಡಿ ಪ್ರತಿರೋಧ ವ್ಯಕ್ತ ಮಾಡದೆ ಒಪ್ಪಿಕೊಂಡರಾದರೂ ತನ್ನ ಗುರು ದಿ.ಅಮಾಸೆಬೈಲ್ ಗೋಪಾಲಕೃಷ್ಣ ಕೊಡ್ಗಿ ಪುತ್ರ ಕಿರಣ್‌ಕುಮಾರ್ ಕೊಡ್ಗಿಗೆ ಕ್ಯಾಂಡಿಡೇಟ್ ಮಾಡುವ ಶರತ್ತು ವಿಧಿಸಿದರು.

ಹಾಲಾಡಿ ಶ್ರೀನಿವಾಸ್ ಶೆಟ್ಟಿ

ಇಷ್ಟು ಸುಲಭವಾಗಿ ಹಾಲಾಡಿ ಶರಣಾಗಬಹುದು ಎಂದುಕೊಂಡಿರದ ಸಂಘದ ದೊಡ್ಡವರಿಗೆ ಬ್ರಾಹ್ಮಣ ಸಮುದಾಯದ ಕಿರಣ್ ಕೊಡ್ಗಿಯ ಹೆಸರು ಸೂಚಿಸಿದ್ದು ಸಹ್ಯವಾಗಿತ್ತು. 2013ರಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರನಾಗಿ ಸ್ಪರ್ಧಿಸಿ ದೊಡ್ಡ ಅಂತದಲ್ಲಿ ಗೆದ್ದು ಸಂಘ ಸರದಾರರಿಗೆ ಮುಖಭಂಗ ಮಾಡಿದ್ದ ಹಾಲಾಡಿಗೀಗ ಮೊದಲಿನ ತಾಕತ್ತು ಉಳಿದಿಲ್ಲ; ಬಿಜೆಪಿ-ಸಂಘದ ಹೈಕಮಾಂಡಿಗೂ ಹಾಲಾಡಿಯನ್ನು ಎದುರು ಹಾಕಿಕೊಳ್ಳುವ ಧೈರ್ಯವಿರಲಿಲ್ಲ. ಹಾಲಾಡಿ ಮಾತಿನಂತೆ ಕಿರಣ್ ಕೊಡ್ಗಿಗೆ ಟಿಕೆಟ್ ಕೊಡಲು ಸಮ್ಮತಿಸಿದ ಕೇಸರಿ ಕಮಿಟಿ ಜಿಲ್ಲೆಯ ಕಡಲ ತಡಿ ಗುಂಟದ ಇನ್ನಿತರ ಮೂರು ಕ್ಷೇತ್ರದ ಹಾಲಿ ಶಾಕರಿಗೆ ಕೊಕ್ ಕೊಡಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿತು. ಬಿಜೆಪಿ ಟಿಕೆಟ್ ಹಂಚಿಕೆಯ ಹಳೆಯ ಜಾತಿ ಲೆಕ್ಕಾಚಾರ ಸರಿದೂಗಿಸಲು ಹೊಸಬರಿಗೆ ಯುದ್ಧಾಂಗಣಕ್ಕೆ ಇಳಿಸಬೇಕಾಗಿ ಬಂದಿದೆ. ತಮಗೆ ವಿಧೇಯನಲ್ಲದ ಹಾಲಾಡಿಯನ್ನು ಸುಲಭವಾಗಿ ಮಣಿಸಿದ ಸಂಘ ಪರಿವಾರ ಈಗ ಕಠಿಣ ಸವಾಲು ಎದುರಿಸಬೇಕಾಗಿದೆ ಎಂದು ಜಿಲ್ಲೆಯ ರಾಜಕೀಯ ಕಟ್ಟೆಯಲ್ಲಿ ವಿಶ್ಲೇಷಣೆಗಳು ಆಗುತ್ತದೆ.

ಅಖಾಡದಲ್ಲೀಗ ಕಾಂಗ್ರೆಸ್-ಬಿಜೆಪಿಯ ಜಗ ಜಟ್ಟಿಗಳು ಕುಸ್ತಿಗೆ ಬಿದ್ದಿದ್ದಾರೆ; ಜೆಡಿಎಸ್‌ಗೆ ಕರಾವಳಿಯಲ್ಲಿ ನೆಲೆಯಿಲ್ಲ. ಅಸಹಾಯಕರಿಗೆ ತಮ್ಮ ಟ್ರಸ್ಟ್ ಮೂಲಕ ನೆರವಾಗುತ್ತಾ ಸ್ವಜಾತಿ ಮೊಗವೀರ ಸಮುದಾಯದಲ್ಲಿ ಪ್ರಭಾವಿಯಾಗಿದ್ದ ಉದ್ಯಮಿ ಜಿ.ಶಂಕರ್ ಮೇಲೆ ಐಟಿ ದಾಳಿಯಾಗಿರುವುದು ಇಡೀ ಜಿಲ್ಲೆಯಲ್ಲಿ ಬಿಜೆಪಿ ವಿರುದ್ಧ ದೊಡ್ಡ ಸದ್ದು ಮಾಡುತ್ತಿದೆ. ಮೊಗವೀರರು ಬಿಜೆಪಿ ಎದುರು ತಿರುಗಿ ಬೀಳುತ್ತಿದ್ದಾರೆ. ಕಾಪುವಿನಲ್ಲಿ ಎಸ್‌ಡಿಪಿಐ ಚುನಾವಣೆಗೆ ಅಣಿಯಾಗಿರುವುದು ಕಾಂಗ್ರೆಸ್‌ಗೆ ಹಾನಿ ಎನ್ನಲಾಗುತ್ತಿದ್ದರೆ, ಕಾರ್ಕಳದಲ್ಲಿ ಅತ್ಯುಗ್ರ ಹಿಂದುತ್ವಾದಿ ಪ್ರಮೋದ್ ಮುತಾಲಿಕ್ ಅಬ್ಬರಿಸುತ್ತಿರುವುದು ಬಿಜೆಪಿ ಮತ ಬ್ಯಾಂಕ್‌ಗೆ ಕನ್ನ ಕೊರೆಯುತ್ತಿದೆ. ಉಡುಪಿ ಮತ್ತು ಕಾಪು ಖಂಡಿತ ಗೆಲ್ಲುತ್ತೇವೆನ್ನುವ ಬಿಜೆಪಿಗರಿಗೆ ಉಳಿದ ಮೂರು ಕ್ಷೇತ್ರಗಳ ಬಗ್ಗೆ ಭರವಸೆಯಿಲ್ಲ; ಬೈಂದೂರು ಹಾಗು ಕಾಪು ಗೆಲ್ಲುವ ಮಾತಾಡುವ ಕಾಂಗ್ರೆಸಿಗರು ಉಳಿದ ಮೂರು ಕ್ಷೇತ್ರದಲ್ಲಿ ಎರಡರಲ್ಲಾದರೂ ಪ್ರಯಾಸದ ವಿಜಯ ಸಿಗಬಹುದೆನ್ನುತ್ತಾರೆ.

’ನ್ಯಾಯಪಥ’ ಉಡುಪಿ ಜಿಲ್ಲೆಯ ಚುನಾವಣಾ ಸೋಲು ಗೆಲುವಿನ ಸಾಧ್ಯಾಸಾಧ್ಯತೆಯ ಸಮೀಕ್ಷೆ ನಡಸಿದಾಗ ಕಂಡು ಬಂದ ಗಣಿತ ಇಲ್ಲಿದೆ.

ಉಡುಪಿ: ಬಿಜೆಪಿಗೆ ಅಭ್ಯರ್ಥಿಯೇ ಹೊರೆಯಾದರೆ?

ಒಲ್ಲದ ಮನಸ್ಸಿನಿಂದ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿರುವ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅನುಯಾಯಿ- ಬ್ರಾಹ್ಮಣ ಜಾತಿಯ- ಕಿರಣ್ ಕೊಡ್ಗಿಗೆ ಕುಂದಾಪುರದಲ್ಲಿ ಅವಕಾಶ ಮಾಡಿಕೊಡುವ ಹೊಂದಾಣಿಕೆಯಲ್ಲಿ ಅದೇ ಸಮುದಾಯಕ್ಕೆ ಸೇರಿದ ಉಡುಪಿ ಎಮ್ಮೆಲ್ಲೆ ರಘುಪತಿ ಭಟ್ ಟಿಕೆಟ್‌ಗೆ ಸಂಚಕಾರ ಬಂದಿದೆ. ಹಿಂಸಾತ್ಮಕ ಹಿಂದುತ್ವವಾದಿ ಎಂಬ ಆರೋಪದ, ಚಾಕು ಇರಿತವೆ ಮುಂತಾದ ಹಲವು ಕ್ರಿಮಿನಲ್ ಕೇಸುಗಳನ್ನು ಎದುರಿಸಿ ಕ್ಷೇತ್ರದಲ್ಲಿ ’ಚಿರಪರಿಚಿತ’ವಾಗಿದ್ದಾರೆ ಎನ್ನಲಾಗುತ್ತಿರುವ ಯಶ್ಪಾಲ್ ಸುವರ್ಣರಿಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿಸಿದೆ. ಕಾಂಗ್ರೆಸ್ ಅಳೆದು ತೂಗಿ ಹುಂಡೈ ಕಾರು ಮಾರಾಟಗಾರ ಉದ್ಯಮಿ-ಸೌಮ್ಯ ಸ್ವಭಾವದ ಪ್ರಸಾದ್‌ರಾಜ್ ಕಾಂಚನ್‌ಗೆ ಟಿಕೆಟ್ ಘೋಷಿಸಿದೆ. ಇಬ್ಬರೂ ಕ್ಷೇತ್ರದ ಮೀನುಗಾರ ಸಮುದಾಯದ ಪ್ರಥಮ ಬಹುಸಂಖ್ಯಾತ ಮೊಗವೀರ ಜಾತಿಗೆ ಸೇರಿದವರು.

ಯಶ್ಪಾಲ್ ಸುವರ್ಣ

ಹಿಂದು ಯುವ ಸೇನೆಯಲ್ಲಿದ್ದ ಯಶ್ಪಾಲ್ ಸುವರ್ಣ ಹಿಂದುತ್ವದ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದು, ಆದಿ ಉಡುಪಿಯಲ್ಲಿ 1990ರ ದಶಕದಲ್ಲಿ ಹಾಜಬ್ಬ, ಹಸನಬ್ಬ ಎಂಬ ಅಮಾಯಕ ಬ್ಯಾರಿ ಅಪ್ಪ-ಮಗನನ್ನು ಬೆತ್ತಲೆ ಮಾಡಿ ಥಳಿಸಿದ ಕುಖ್ಯಾತ ಪ್ರಕರಣದ ಬಳಿಕ. ದನದ ಕಳ್ಳ ಸಾಗಣೆದಾರರೆಂದು ಆರೋಪಿಸಿ ಮಾರಣಾಂತಿಕ ಹಲ್ಲೆ ನಡೆದದ್ದು ವಿಧಾನಸಭೆಯಲ್ಲಿ ಕೋಲಾಹಲದ ಚರ್ಚೆಗೆ ಕಾರಣವಾಗಿತ್ತು. ಇಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆ ಅಂದು ಬ್ರಹ್ಮಾವರದ ಶಾಸಕರಾಗಿದ್ದರು. ಜಯಪ್ರಕಾಶ್ ಹೆಗ್ಡೆ ಉಡುಪಿ ದುರ್ಘಟನೆಯನ್ನು ಅಸೆಂಬ್ಲಿ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ದೇಶವಿದೇಶದಲ್ಲಿ ದೊಡ್ಡ ಸುದ್ದಿಯಾಗಿದ್ದ ಈ ಪ್ರಕರಣದ ಪ್ರಮುಖ ರೂವಾರಿ ಯಶ್ಪಾಲ್ ಸುವರ್ಣ ಎಂಬುದು ಇಂದಿಗೂ ಜನ ಮರೆತಿಲ್ಲ. ಈ ’ಸಾಹಸ’ಕ್ಕೆ ಇನಾಮು ಎಂಬಂತೆ ಬಿಜೆಪಿ ಸರಕಾರ ಬಂದಾಗ ಸುವರ್ಣರನ್ನು ಉಡುಪಿ ನಗರಸಭೆಯ ನಾಮ ನಿರ್ದೇಶಿತ ಸದಸ್ಯನಾಗಿ ಮಾಡಲಾಯಿತು; ಆ ಬಳಿಕ ಕೋಟ್ಯಂತರ ರೂ. ವ್ಯವಹಾರದ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಸುವರ್ಣ ದಶಕಗಳಿಂದ ಆ ಪೀಠವನ್ನು ಭದ್ರ ಮಾಡಿಕೊಂಡಿದ್ದಾರೆ ಎಂಬುದು ಉಡುಪಿಯ ಕರಾಳ ಕೋಮು ಚರಿತ್ರೆಯ ಒಂದು ಅಧ್ಯಾಯ ಎಂದು ಸೆಕ್ಯುಲರ್ ಮಂದಿ ಕಳವಳಿಸುತ್ತಾರೆ.

ಸುಧಾಕರ ಪೂಜಾರಿ ಎಂಬ ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕುವಿನಿಂದ ಇರಿದ ಕೇಸ್ ಎದುರಿಸಿದ್ದ ಸುವರ್ಣ ಇತ್ತೀಚೆಗೆ ಮಹಾಲಕ್ಷ್ಮೀ ಕೋ-ಆಪ್.ಬ್ಯಾಂಕಿನ ಮ್ಯಾನೇಜರ್ ಆತ್ಮಹತ್ಯೆಗೆ ಕಾರಣರಾಗಿದ್ದಾರೆಂಬ ಗುನ್ಹೆ ದಾಖಲಾಗಿದೆ. ಈ ದಲಿತ ವರ್ಗದ ಮ್ಯಾನೇಜರ್ ಸಾವಿನ ಹಿನ್ನೆಲೆಯಲ್ಲಿ ದಲಿತ ದೌರ್ಜನ್ಯ ಎಫ್‌ಐಆರ್ ಸಹ ಸುವರ್ಣ ವಿರುದ್ಧ ಹಾಕಲಾಗಿತ್ತು. ಆದರೆ ಆಡಳಿತಾರೂಢ ಪಕ್ಷದ ನಾಯಕನೆಂಬ ಕಾರಣಕ್ಕೆ ತ್ವರಿತವಾಗಿ ಬಿ-ರಿಪೋರ್ಟ್ ಸಲ್ಲಿಕೆಯಾಯಿತೆಂದು ಜನರು ಹೇಳುತ್ತಾರೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಇಡೀ ದೇಶ ಸ್ತಬ್ಧವಾಗಿದ್ದಾಗ ಶಾಸಕ ರಘುಪತಿ ಭಟ್ ಬೆಂಬಲದಿಂದ ಯಶ್ಪಾಲ್ ಸುವರ್ಣ ಸೀತಾ ನದಿಯ ಕೋಟ್ಯಂತರ ರೂ.ಬೆಲೆಯ ಮರಳನ್ನು ಅಕ್ರಮವಾಗಿ ತೆಗೆದು ಸಾಗಿಸಿದ್ದಾರೆಂಬ ದೂರು ಲೋಕಾಯುಕ್ತಕ್ಕೆ ಕೊಡಲಾಗಿತ್ತು.

ಇತ್ತೀಚೆಗೆ ಉಡುಪಿಯಲ್ಲಿ ಭುಗಿಲೆಬ್ಬಿಸಲಾಗಿದ್ದ ಹಿಜಾಬ್ ವಿವಾದದ ಹಿಂದಿನ ರೂವಾರಿ ಯಶ್ಪಾಲ್ ಸುವರ್ಣ ಎಂಬ ಆರೋಪ ಕೇಳಿಬಂದಿತ್ತು. ಒಂದು ಹಂತದಲ್ಲಿ ಶಾಸಕ ರಘುಪತಿ ಭಟ್ ಹಿಜಾಬ್ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಪ್ರಯತ್ನಿಸಿದರೂ ಯಶ್ಪಾಲ್ ಸುವರ್ಣ ಅಡ್ಡಗಾಲು ಹಾಕಿದ್ದರೆನ್ನಲಾಗಿತ್ತು. ಶಾಸಕ ರಘುಪತಿ ಭಟ್ ಮೇಲೆ ಅಸಮಾಧಾನದಲ್ಲಿರುವ ಕಲ್ಲಡ್ಕದ ದೊಡ್ಡ ಆರೆಸ್ಸೆಸ್ ಮುಖಂಡನ ಮಾರ್ಗದರ್ಶನದಲ್ಲಿ ಸುವರ್ಣ ಹಿಜಾಬ್ ವಿವಾದ ಬಿಗಡಾಯಿಸುವಂತೆ ಮಾಡಿದ್ದರು; ಕಾಪು ಕ್ಷೇತ್ರದ ಕೇಸರಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಸುವರ್ಣರಿಗೆ ಈಗ ಉಡುಪಿ ಜಾಕ್‌ಪಾಟ್ ಹೊಡೆದಿದೆ ಎಂಬ ಚರ್ಚೆ ಜಿಲ್ಲೆಯಾದ್ಯಂತ ನಡೆಯುತ್ತಿದೆ.

ಪ್ರಸಾದ್‌ರಾಜ್ ಕಾಂಚನ್‌

ಟಿಕೆಟ್ ತಪ್ಪಿದ ಬೇಸರದಲ್ಲಿ ಶಾಸಕ ಭಟ್ ಬಹಿರಂಗವಾಗಿಯೇ ಕಣ್ಣೀರುಹಾಕಿದ್ದಾರೆ. ಬೆಂಬಲಿಗರ ಸಭೆ ಕರೆದು ನಿರ್ಧಾರ; ಮಾಡುತ್ತೇನೆಂದಿದ್ದ ಭಟ್ ರಾತ್ರೋರಾತ್ರಿ ತಣ್ಣಗಾಗಿದ್ದಾರೆ; ಕೋಟ್ಯಂತರ ರೂ. ಫೈನಾನ್ಸ್ ವ್ಯವಹಾರ ಮಾಡುವ ಭಟ್ಟರ ಹೆಂಡತಿ ಪದ್ಮಪ್ರಿಯಾ ಭಟ್ ಕೆಲವು ವರ್ಷದ ಹಿಂದೆ ದೂರದ ದಿಲ್ಲಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಐಟಿ-ಸಿಬಿಐಗೆ ಭಟ್ಟರು ಹೆದರಿದರಾ ಎಂಬ ಅನುಮಾನ ಬಿಜೆಪಿ ಕಾರ್ಯಕರ್ತನ್ನು ಕಾಡುತ್ತಿದೆ. ಈಗ ಭಟ್ ತೋರಿಕೆಗೆ ಬಿಜೆಪಿ ಪರವಾಗಿ ಓಡಾಡುತ್ತಿದ್ದಾರೆ. ಆದರೆ ಭಟ್‌ರ ಬೆನ್ನಿಗಿದ್ದ ಬ್ರಾಹ್ಮಣರು ಮತ್ತು ಅಷ್ಟ ಮಠಗಳು ಸುವರ್ಣರನ್ನು ಬೆಂಬಲಿಸುತ್ತವೆಂದು ಹೇಳಲಾಗದು; ಬಿಲ್ಲವರ ಹೆಚ್ಚು ಮತ ಬಿಜೆಪಿ ಪಡೆದರೂ ಮೊಗವೀರರ ಮತ ಕಾಂಗ್ರೆಸ್-ಬಿಜೆಪಿ ನಡುವೆ ಸಮಪಾಲಾಗಲಿದೆ. 34 ಸಾವಿರದಷ್ಟಿರುವ ಬಂಟರ ಮತಗಳಲ್ಲಿ ಹೆಚ್ಚು ಕಾಂಗ್ರೆಸ್‌ಗೆ ಹೋಗಲಿವೆ ಎಂಬ ಅಂದಾಜಿದೆ. ದ್ವೇಷ ರಾಜಕಾರಣದ ಯಶ್ಪಾಲ್ ಸುವರ್ಣರಿಗಿಂತ ನಿರುಪದ್ರವಿ ಇಮೇಜಿನ ಕಾಂಗ್ರೆಸ್ ಕ್ಯಾಂಡಿಡೇಟ್ ಕಾಂಚನ್ ಬೆಟರ್ ಮತ್ತು ಅವರಿಗೆ ಈ ಬಾರಿ ಚಾನ್ಸ್ ಇದೆ ಎಂಬ ಭಾವನೆ ಕ್ಷೇತ್ರದಲ್ಲಿದೆ.

ಕಾಂಗ್ರೆಸ್‌ನ ಪ್ರಸಾದ್‌ರಾಜ್ ಕಾಂಚನ್‌ಗೆ ತಾಯಿ ಸರಳಾ ಕಾಂಚನ್ ಬಗ್ಗೆ ಕ್ಷೇತ್ರದಲ್ಲಿರುವ ಸದ್ಭಾವನೆ ನೆರವಿಗೆ ಬಂದಿದೆ. ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಸರಳಾ ಕಾಂಚನ್ ಜಿ.ಪಂ ಸದಸ್ಯೆಯಾಗಿ ಜನಪ್ರಿಯರಾಗಿದ್ದರು. ಬ್ರಹ್ಮಾವರ ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗಡೆ ವಿರುದ್ಧ ಸಣ್ಣ ಅಂತರದಲ್ಲಿ ಸೋತಿದ್ದರು. ಅಂದು ಮನೋರಮಾ ಮಧ್ವರಾಜ್ ಫ್ಯಾಮಿಲಿ ಸರಿಯಾಗಿ ಕೆಲಸ ಮಾಡಿದ್ದರೆ ಗೆದ್ದೇಬಿಡುತ್ತಿದ್ದರು; ಈಗಲೇ ಹಿಡಿಯಲಾಗದ ಯಶ್ಪಾಲ್ ಸುವರ್ಣ ಶಾಸಕನಾದರೆ ಕೈಗೆ ಸಿಗುವುದುಂಟೇ ಎಂದು ನಿಷ್ಠಾವಂತ ಬಿಜೆಪಿಗರು ಗೊಣಗುತ್ತಿದ್ದಾರೆ. ಬಿಜೆಪಿ ಹುರಿಯಾಳಿನ “ಪ್ರಖರತೆ”ಯಲ್ಲಿ ಹಿಂದುತ್ವ ಮಂದವಾಗಿದೆ. ಅಸಹಿಷ್ಣುತೆ-ಸಹಿಷ್ಣುತೆ ಸಂಘರ್ಷ ಸದ್ಯಕ್ಕೆ ಸಮಬಲದಲ್ಲಿದೆ. ಆರಂಭದಲ್ಲಿ ಸೋಲುತ್ತದೆನ್ನಲಾಗಿದ್ದ ಕಾಂಗ್ರೆಸ್ ನಿಧಾನಕ್ಕೆ ಪಿಕ್‌ಅಪ್ ಆಗುತ್ತಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಕಾಪು: ಸೊರಕೆ, ಕೇಸರಿ ಕಾಸು ಮತ್ತು ಎಸ್‌ಡಿಪಿಐ

ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಹೆಲಿಕಾಪ್ಟರ್‌ನಲ್ಲಿ ಹಣದ ಚೀಲ ಹೊತ್ತುಕೊಂಡು ಕಾಪುಗೆ ಬಂದಿದ್ದರೆ? ಹೌದು, ಇಂಥದೊಂದು ಅನುಮಾನವಿದೆ ಎಂದು ಕಾಂಗ್ರೆಸ್ ಕ್ಯಾಂಡಿಡೇಟ್ ಮಾಜಿಮಂತ್ರಿ ವಿನಯ್‌ಕುಮಾರ್ ಸೊರಕೆ ಆರೋಪಿಸುತ್ತಾರೆ. ಇನ್ನೊಂದೆಡೆ ದುಡ್ಡಿನ ಚೀಲ ಹಿಡಿದುಕೊಂಡೆ ಅಖಾಡಕ್ಕೆ ಇಳಿದಿದ್ದಾರೆ ಎನ್ನಲಾಗಿರುವ ಬಿಜೆಪಿ ಅಭ್ಯರ್ಥಿ- ಗಣಿ, ಹೊಟೇಲ್ ಉದ್ಯಮಿ- ಗುರ್ಮೆ ಸುರೇಶ್ ಶೆಟ್ಟಿಗೆ ನಾಡು-ಹೊರನಾಡಲ್ಲಿರುವ ಸ್ವಜಾತಿ ಬಂಟರ ಬಿಸ್ನೆಸ್ ಲಾಬಿಯಿಂದಲೂ ಯಥೇಚ್ಛವಾಗಿ ಕಾಸು ಹರಿದು ಬರುತ್ತಿದೆ ಎಂಬ ಮಾತು ಸಾಮಾನ್ಯವಾಗಿದೆ. ಬಿಜೆಪಿ ಟಿಕೆಟ್ ಒಂದು ಸಿಕ್ಕರೆ ಸಾಕು, ’ಹಣಾ’ಹಣಿಯಿಂದ ಗೆಲ್ಲುತ್ತೆನೆಂಬ ಧೈರ್‍ಯ ಶೆಟ್ಟರದೆಂದು ಬಿಜೆಪಿ ಕಾರ್ಯಕರ್ತರೇ ಪಿಸುಗುಡುತ್ತಾರೆ.

ವಿನಯ್‌ಕುಮಾರ್ ಸೊರಕೆ

ಈ ಬಾರಿಯೂ ಶೆಟ್ಟರಿಗೆ ಕೇಸರಿ ಟಿಕೆಟ್ ಖಾತ್ರಿಯಿರಲಿಲ್ಲ. ವಿಪರೀತ ಆಂಟಿ ಇನ್‌ಕಂಬೆನ್ಸ್‌ಯಿಂದ ಬಣ್ಣಗೆಟ್ಟಿದ್ದ ಶಾಸಕ ಲಾಲಾಜಿ ಮೆಂಡನ್‌ಗೆ ಮತ್ತೆ ಛಾನ್ಸ್ ಕೊಡುವ ಮನಸ್ಸು ಪರಿವಾರ ಪ್ರಮುಖರಿಗಿರಲಿಲ್ಲ. ಮೀನುಗಾರ ಸಮುದಾಯದ ಲಾಲಾಜಿ ಬದಲಿಗೆ ಅದೇ ಜಾತಿಯ ಯಶ್ಪಾಲ್ ಸುವರ್ಣರಿಗೆ ಕಣಕ್ಕಿಳಿಸಲು ಸಂಘಿಗಳು ಒಂದು ಹಂತದಲ್ಲಿ ತೀರ್ಮಾನ ಮಾಡಿದ್ದರೆನ್ನಲಾಗಿದೆ.

ಆದರೆ ಯಾವಾಗ ಕುಂದಾಪುರದ ಹಾಲಾಡಿ ಶೆಟ್ರು ಸಂಘದ ಫರ್ಮಾನಿಗೆ ತಲೆಬಾಗಿ ಸ್ವಯಂ ನಿವೃತ್ತಿಯಾದರೋ ಆಗ ಕೋಟಾದಲ್ಲಿ ಬಂಟ ಸಮುದಾಯದ ಗುರ್ಮೆ ಶೆಟ್ಟರ ಅದೃಷ್ಟ ಖುಲಾಯಿಸಿತು.

2018ರಲ್ಲೇ ಬಿಜೆಪಿ ಹುರಿಯಾಳಾಗಲು ಶೆಟ್ಟರು ಶತಾಯಗತಾಯ ಪ್ರಯತ್ನ ನಡೆಸಿದ್ದರು. ಬಿಜೆಪಿ ಟಿಕೆಟ್ ಸಿಗದಿದ್ದಾಗ ಕಾಂಗ್ರೆಸ್ ಸೇರುತ್ತಾರೆಂಬ ಗುಲ್ಲೆದ್ದಿತ್ತು. ಆದರೆ ಕಾಂಗ್ರೆಸ್‌ನ ಸೊರಕೆ ಕಾಪು ರಾಜಕಾರಣದಲ್ಲಿ ಇರುವತನಕ ತನಗಲ್ಲಿ ಎಮ್ಮೆಲ್ಲೆಯಾಗುವ ಅವಕಾಶವಿಲ್ಲ ಎಂದು ಬಿಜೆಪಿಯಲ್ಲೆ ಉಳಿದು ದಾನ-ಧರ್ಮ ಮಾಡುತ್ತ ಅಸ್ತಿತ್ವ ಉಳಿಸಿಕೊಂಡರು. ಕ್ಷೇತ್ರದಲ್ಲಿ ಬಿಲ್ಲವರು ಬಹು ಸಂಖ್ಯಾತರಾದರೂ 2018ರಲ್ಲಿ ಸೊರಕೆ ಸೋತರು; 2013ರಲ್ಲಿ ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದರು. ಬಿಲ್ಲವ ಸಮುದಾಯದ ಮೇಲೆ ಹಿಂದುತ್ವ ಮಾಡಿರುವ ಮೋಡಿಯ ಪರಿಣಾಮವಿದು. ಆದರೆ, ಸೋತರೂ ಸೊರಕೆ ಜನರ ನಡುವೆಯೇ ಉಳಿದರು; ಜನಪರ ರಾಜಕಾರಣಿಯೊಬ್ಬ ಮಾಡಬೇಕಿರುವಂತೆ ಜನರ ಕಷ್ಟ-ನಷ್ಟಕ್ಕೆ ಸ್ಪಂದಿಸಿದರು. ಜನರಿಗೆ ಅನ್ಯಾಯವಾದಾಗ ಬೀದಿಗಿಳಿದು ಪ್ರತಿಭಟಿಸಿದರು.

ಗುರ್ಮೆ ಸುರೇಶ್ ಶೆಟ್ಟಿ

ಕ್ಷೇತ್ರದಲ್ಲಿ ಸೊರಕೆ ಬಗ್ಗೆ ಅನುಕಂಪವಿದೆ. ಕೆಲಸಗಾರ ಎಂಬ ಅಭಿಪ್ರಾಯವಿದೆ. ಹಿಂದುತ್ವದ ಸೆಳೆತದಲ್ಲೂ ಸೊರಕೆ ತಮ್ಮನ್ನು ಸಮರ್ಥವಾಗಿ ಪ್ರತಿನಿದಿಸಬಲ್ಲರೆಂಬ ಎಚ್ಚರ ಬಿಲ್ಲವರಿಗೆ ಮೂಡಿದಂತಿದೆ. ಸೊರಕೆ ಸೋತರೆ ತಮ್ಮ ಅಸ್ತಿತ್ವಕ್ಕೆ ಹೊಡೆತ ಬೀಳಬಹುದೆಂಬ ಆತಂಕ ಬಿಲ್ಲವರಲ್ಲಿದೆ. ದಿನಕಳೆದಂತೆ ಹೋರಾಟ ಬಿಗಿಯಾಗುತ್ತಿದೆ. ಈಗಿನ ಅಂದಾಜಿನಂತೆ ಬಿಜೆಪಿ-ಕಾಂಗ್ರೆಸ್ ಸಮನಾಗಿ ತೂಗುತ್ತಿವೆ. ಕಾಪು ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಸದಸ್ಯರನ್ನು ಗೆಲ್ಲಿಸಿಕೊಂಡಿರುವ ಎಸ್‌ಡಿಪಿಐ ಮತ ಬಾಚಿದಷ್ಟು ಕಾಂಗ್ರೆಸ್‌ನ ಸೋಲಿನ ಸಾಧ್ಯತೆ ಹೆಚ್ಚಾಗುತ್ತದೆ; ಈ ಹಾನಿ ಸ್ವಸಮುದಾಯದ ಬಿಲ್ಲವರ ಕಡೆಯಿಂದ ಸರಿದೂಗಿಸಿಕೊಳ್ಳುವ ಯೋಜನೆಯನ್ನು ಸೊರಕೆ ಹಾಕಿಕೊಂಡಿದ್ದಾರೆಂಬ ಲೆಕ್ಕಾಚಾರ ಕ್ಷೇತ್ರದಲ್ಲಿದೆ.

ಕಾರ್ಕಳ: ಮುತಾಲಿಕ್ ಮಜಬೂತಾದಂತೆ ಸೊರಗುತ್ತಿರುವ ಸುನಿಲ್!

ರಾಜ್ಯದ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಕಾರ್ಕಳ ಒಂದಾಗಿದೆ. ಆಕ್ರಮಣಶೀಲ ಹಿಂದುತ್ವದ ಮುಂದಾಳೆಂದು “ಖ್ಯಾತ”ವಾಗಿರುವ ಪ್ರಮೋದ್ ಮುತಾಲಿಕ್ ಎಂಟ್ರಿಯಿಂದ ಕಾರ್ಕಳ ಅಖಾಡದ ಕುಸ್ತಿ ಖದರು ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಚುನಾವಣೆ ಘೋಷಣೆಗಿಂತ ತುಂಬ ಮೊದಲೇ ಕಾರ್ಕಳದಲ್ಲಿ ಮುತಾಲಿಕ್ ಓಡಾಟ ಶುರುಹಚ್ಚಿಕೊಂಡಿದ್ದರು. ಮುತಾಲಿಕ್ ಟಾರ್ಗೆಟ್ ಕಾಂಗ್ರೆಸ್ ಅಲ್ಲ; ಬದಲಿಗೆ ಹಿಂದುತ್ವ ರಾಜಕಾರಣದ ಪ್ರಮುಖ ಫಲಾನುಭವಿ, ಚಿಕ್ಕಮಗಳೂರಿನ ಬಾಬಾಬುಡನ್-ದತ್ತಗಿರಿ ಸುತ್ತ ಗಿರಕಿ ಹೊಡೆಯುತ್ತಿರುವ ಧರ್ಮಕಾರಣದ ಬೈಪ್ರಾಡಕ್ಟ್ ಎಂದೇ ಗುರುತಿಸಲಾಗುತ್ತಿರುವ ಸಚಿವ ಸುನಿಲ್‌ಕುಮಾರ್ ಎಂಬುದು ಕಾರ್ಕಳ ಕಣದ ಕುತೂಹಲದ ಮೂಲ!

ಪ್ರಮೋದ್ ಮುತಾಲಿಕ್

ಸಚಿವ ಸುನಿಲ್ ಸಂಘ ಪರಿವಾರದ ಕಾರ್ಯಕರ್ತರನ್ನು ಕ್ಷುಲ್ಲಕವಾಗಿ ಪರಿಗಣಿಸಿ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ; ಕ್ಷೇತ್ರದ ಅಭಿವೃದ್ಧಿಗಿಂತ ಸ್ವಜೀರ್ಣೋದ್ಧಾರ ಭರ್ಜರಿಯಾಗಿ ಮಾಡಿಕೊಂಡಿದ್ದಾರೆ ಎಂದು ನಿಷ್ಠಾವಂತ ಬಿಜೆಪಿ-ಪರಿವಾರಿಗರು ನೇರವಾಗಿಯೇ ಆರೋಪಿಸುತ್ತಾರೆ. ಮುತಾಲಿಕ್ ಅಂತೂ ಕಂಡಕಂಡಲ್ಲಿ, ಸುನಿಲ್ ಮಂತ್ರಿ ಶಾಸಕನಾಗುವ ಸ್ವಲ್ಪ ಮೊದಲಿನ ಗತಿ ಮತ್ತು ಈಗಿನ ಸ್ಥಿತಿವಂತಿಕೆ ಹೋಲಿಸಿ ಎತ್ತಿ ಆಡುತ್ತಿದ್ದಾರೆ. ಬಿಜೆಪಿ ಎದುರಾಳಿ ಸುನಿಲ್ ಎಲ್ಲೆಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ; ಹೇಗೆ ದುಡ್ಡು ದೋಚಿದ್ದಾರೆ ಎಂದು ಆರೋಪಸಿ ಪತ್ರಿಕಾಗೋಷ್ಠಿಯಲ್ಲೇ ಪ್ರಸ್ತುತಪಡಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆ: ಬಿಜೆಪಿಯ ಕಳೆಗುಂದಿದ ಹಳೆ ಮುಖಗಳು ವರ್ಸಸ್ ಕಂಗೆಟ್ಟ ಕಾಂಗ್ರೆಸಿಗರು!

ಸಜ್ಜನ-ಜನಾನುರಾಗಿ ರಾಜಕಾರಣಿಯಾಗಿದ್ದ ಮಾಜಿ ಶಾಸಕ ಗೋಪಾಲ ಭಂಡಾರಿಯವರ ಅಕಾಲಿಕ ಮರಣದ ನಂತರ ಕ್ಷೇತ್ರದಲ್ಲಿ ತನಗ್ಯಾರೂ ಪ್ರತಿಸ್ಪರ್ಧಿಗಳಿಲ್ಲ ಎಂಬ ಭಾವನೆಯಲ್ಲಿ ಬಿಜೆಪಿಗರನ್ನೇ ಧಿಕ್ಕರಿಸಹತ್ತಿದ ಸುನಿಲ್‌ಗೆ ಪಾಠ ಕಲಿಸಲು ಕೇಸರಿ ಸದಸ್ಯರೇ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಸುಮಾರು 10 ಸಾವಿರವಿರುವ ಬಿಜೆಪಿಯ ಸಾಂಪ್ರದಾಯಿಕ ಮತದಾರರಾದ ಕೊಂಕಣಿ(ಜಿಎಸ್‌ಬಿ)ಗರು ಸುನಿಲ್ ಮೇಲೆ ಸಿಟ್ಟಲ್ಲಿದ್ದಾರೆ. ಆರೆಸ್ಸೆಸ್ ಕೇಡರ್ ಕೂಡ ಸುನಿಲ್‌ಗೆ ತಿರುಗಿ ಬಿದ್ದಿದೆ. ಸುಮಾರು 30 ಸಾವಿರದಷ್ಟಿರುವ ಬಂಟರ ಮತ ಕಳೆದ ಸಲದಂತೆ ಸಾರಾಸಗಟಾಗಿ ಬಿಜೆಪಿಗೆ ಬರಲಾರದು; ಬಹುತೇಕ ಬಂಟರ ಓಟು ಸ್ವಜಾತಿಯ ಕಾಂಗ್ರೆಸ್ ಅಭ್ಯರ್ಥಿ ಉದಯ್‌ಕುಮರ್ ಶೆಟ್ಟಿ ಮುನಿಯಾಲ್ ಮಡಿಲಿಗೆ ಬೀಳಲಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಬಂಡಾಯದ ಕಿರಿಕಿರಿ ಇಲ್ಲ. ತನ್ನ ಮಗ ಹರ್ಷ ಮೊಯ್ಲಿ ಕಾರ್ಕಳದ ಶಾಸಕ ಆಗುವವರೆಗೆ ಕ್ಷೇತ್ರ ಬಿಜೆಪಿಯ ಸುನಿಲ್ ಕೈಲಿರಲೆಂಬ ಮಾಜಿ ಸಿಎಂ ವೀರಪ್ಪ ಮೊಯ್ಲಿ ’ಆಟ’ ನಡೆಯುತ್ತಿಲ್ಲ ಎನ್ನಲಾಗುತ್ತಿದೆ.

ಸುನಿಲ್‌ಕುಮಾರ್

ಬದಲಾವಣೆ ಗಾಳಿ ಕಾರ್ಕಳದಲ್ಲಿ ಬೀಸುತ್ತಿದೆ. ಸ್ವಜಾತಿ ಬಿಲ್ಲವ ಟ್ರಂಪ್ ಕಾರ್ಡ್ ಹಾಕಿಯೆ ಗೆಲ್ಲುತ್ತಿದ್ದ ಸುನಿಲ್ ತಂದೆ ವಾಸುದೇವ್ ರಾವ್ ಬ್ರಾಹ್ಮಣರೆಂಬ ಸತ್ಯ ಪ್ರಜ್ಞಾವಂತ ಬಿಲ್ಲವರನ್ನು ಯೋಚನೆಗೆ ಹಚ್ಚಿದೆ ಎಂದು ಕ್ಷೇತ್ರದ ಜಾತಿ ರಾಜಕಾರಣದ ಮರ್ಮ ಬಲ್ಲವರು ತರ್ಕಿಸುತ್ತಾರೆ. ಮುತಾಲಿಕ್ ಹೋದಲ್ಲೆಲ್ಲ ಜನ ಸೇರುತ್ತಿದ್ದಾರೆ. ಸಚಿವ ಸುನಿಲ್‌ರ ದಬ್ಬಾಳಿಕೆಗೆ ತಬ್ಬಿಬ್ಬಾದ ಕೌ ಬ್ರಿಗೇಡ್, ಭಜರಂಗ ದಳ, ಆರೆಸ್ಸೆಸ್ ಮುಂದಾಳುಗಳು ಮುತಾಲಿಕ್‌ರನ್ನು ಕಾರ್ಕಳಕ್ಕೆ ಕರೆತಂದು ನಿಲ್ಲುವಂತೆ ನೋಡಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಪ್ರಚಾರ ವ್ಯವಸ್ಥಿತವಾಗಿ ನಡೆದರೆ, ಬಿಜೆಪಿ ಕುಂಟುತ್ತಿದೆ. ಬಿಜೆಪಿಯ ಸುನಿಲ್ ಧೃತಿಗೆಟ್ಟಂತಿದ್ದರೆ, ಕಾಂಗ್ರೆಸ್‌ನ ಮುನಿಯಾಲ್ ಉದಯ ಶೆಟ್ಟಿ ಜೋಶ್‌ನಲ್ಲಿದ್ದಾರೆ. ಶ್ರೀರಾಮ ಸೈನ್ಯದ “ಸೇನಾಧಿಪತಿ” ಮುತಾಲಿಕ್ ಹತ್ತು ಸಾವಿರ ಓಟು ಪಡೆದರೂ ಸಾಕು; ಸಚಿವ ಸುನಿಲ್ ಗೋತಾ ಹೊಡೆಯುತ್ತಾರೆ. ಸುನಿಲ್‌ಗೆ ಹಿಂದುತ್ವವೆ ಈಗ ಬೂಮರಾಂಗ್ ಆಗಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಕಾಲದಿಂದಲೂ ಕಾರ್ಕಳದ ರಾಜಕಾರಣ ಹತ್ತಿರದಿಂದ ಕಂಡ ಹಿರಿಯರೊಬ್ಬರು ಹೇಳುತ್ತಾರೆ.

ಕುಂದಾಪುರ: ಕೊಡ್ಗಿಯನ್ನು ಗೆಲ್ಲಿಸಿಕೊಳ್ಳಲಾದೀತೆ ಹಾಲಾಡಿಗೆ?

ಸಂದಿಗ್ಧದಲ್ಲಿ ಸಿಕ್ಕಿಬಿದ್ದು ಸ್ವಯಂ ನಿವೃತ್ತಿ ಘೋಷಿಸಿರುವ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸುತ್ತ ಕುಂದಾಪುರ ಕಾಂಗ್ರೆಸ್-ಬಿಜೆಪಿಗಳ ರಣಕಣದ ತಂತ್ರಗಾರಿಕೆ ಗಿರಕಿಹೊಡೆಯುತ್ತಿದೆ. ಕುಂದಾಪುರದಲ್ಲಿ ಸಂಘ ಪರಿವಾರ, ಹಿಂದುತ್ವ ಮೀರಿದ ವರ್ಚಸ್ಸು ಹಾಲಾಡಿಗಿದೆ. ಈ 71ರ ಹರೆಯದ ಅಖಂಡ ಬ್ರಹ್ಮಚಾರಿಯ ಜನಪ್ರಿಯತೆ ಕುಂದಾಪುರ ಕ್ಷೇತ್ರದಲ್ಲಿ ಹೇಗಿದೆಯೆಂದರೆ, ಖುದ್ದು ಮೋದಿಯೇ ಬಂದು ನಿಂತರೂ ಗೆಲ್ಲಲಾಗುವುದಿಲ್ಲ ಎಂಬ ಮಾತಿದೆ. ಹಿಂದುತ್ವ ಪ್ರಯೋಗಶಾಲೆ ಎನ್ನಲಾಗುತ್ತಿರುವ ದಕ್ಷಿಣ ಕರಾವಳಿಯ ಕುಂದಾಪುರದಲ್ಲಿ ಮಾತ್ರ ಹಾಲಾಡಿ ಎದುರು ಹಿಂದುತ್ವದ ’ಆಟ’ ನಡೆಯುವುದಿಲ್ಲ; ಇದನ್ನು 2013ರಲ್ಲಿ ಬಿಜೆಪಿ ವಿರುದ್ಧ ಬಂಡೆದ್ದು ದೊಡ್ಡ ಅಂತರದಲ್ಲೇ ಗೆದ್ದ ಹಾಲಾಡಿ ಸಂಘ ಸರದಾರರಿಗೆ ಖಾತ್ರಿ ಪಡಿಸಿದ್ದಾರೆ. ಆದರೆ ಹಾಲಾಡಿ ಗೆಲ್ಲಬಹುದೇ ಹೊರತು ಇನ್ಯಾರನ್ನೋ ಬೆಂಬಲಿಸಿ ಎಮ್ಮೆಲ್ಲೆ ಮಾಡುವುದು ಅಷ್ಟು ಸುಲಭವಲ್ಲ ಎಂದು ರಾಜಕೀಯ ವಿಶ್ಲೇಷಕರು ತರ್ಕಿಸುತ್ತಾರೆ.

ಕ್ಷೇತ್ರದ ಬಹುಸಂಖ್ಯಾತ ಬಂಟ ಸಮುದಾಯದ ಹಾಲಾಡಿ ಶೆಟ್ರು ತನ್ನ ಹಿಂಬಾಲಕ ಬ್ರಾಹ್ಮಣ ಜಾತಿಯ ಕಿರಣ್ ಕೊಡ್ಗಿಗೆ ಕೇಸರಿ ಟಿಕೆಟ್ ಕೊಡಿಸಲು ಸಫಲರಾಗಿದ್ದಾರೆ. ಜನ ಸಂಪರ್ಕವಾಗಲಿ, ಹಿಂದುತ್ವದ ಖದರಾಗಲಿ ಇಲ್ಲದ ನಿಧಾನಗತಿಯ ಕೊಡ್ಗಿಯನ್ನು ಕಟ್ಟಿಕೊಂಡು ಹಾಲಾಡಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಕೊಡ್ಗಿಯನ್ನು ಗೆಲ್ಲಿಸಿಕೊಂಡು ಬರುವುದಾಗಿ ಹೇಳುತ್ತಿದ್ದಾರೆ. ಆದರೆ ಕ್ಷೇತ್ರದ ಜಾತಿ ಕೆಮಿಸ್ಟ್ರಿ ಹಾಲಾಡಿ ಸ್ಕೆಚ್‌ಗೆ ಪೂರಕವಾಗಿಲ್ಲ. 1957ರಿಂದ ಕುಂದಾಪುರದಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಒಮ್ಮೆ ಕ್ರಿಶ್ಚಿಯನ್ ಸಮುದಾಯದ ವಿನ್ನಿಫ್ರೆಡ್ ಫರ್ನಾಂಡಿಸ್ ಗೆದ್ದಿದ್ದು ಬಿಟ್ಟರೆ ಉಳಿದೆಲ್ಲ ಬಾರಿ ಕ್ಷೇತ್ರದ ಸಾಮಾಜಿಕ, ರಾಜಕೀಯ, ಆರ್ಥಿಕವೇ ಮುಂತಾದ ಸಕಲ ವಲಯದಲ್ಲಿ ಹಿಡಿತ ಸ್ಥಾಪಿಸಿರುವ ಬಲಾಢ್ಯ ಬಂಟ ಜಾತಿಯವರೆ ಎಮ್ಮೆಲ್ಲೆಯಾಗಿದ್ದಾರೆ.

ಕಿರಣ್ ಕೊಡ್ಗಿ

ದೇವರಾಜ್ ಅರಸು ಕಾಲದಲ್ಲಿ ಪಕ್ಕದ ಬೈಂದೂರಿಂದ ಶಾಸಕನಾಗಿದ್ದ ಕಿರಣ್ ಕೊಡ್ಗಿ ತಂದೆ ಎ.ಜಿ.ಕೊಡ್ಗಿ 1990ರ ದಶಕಾರಂಭದಲ್ಲಿ ಅಂದಿನ ಕಾಂಗ್ರೆಸ್ ಶಾಸಕ-ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿಯೊಂದಿಗಿನ ಮುನಿಸಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸೆಡ್ಡು ಹೊಡೆದಿದ್ದರು. ತನ್ನೆಲ್ಲಾ ಪ್ರತಿಷ್ಠೆ-ಹಿಂದುತ್ವ ಪಣಕ್ಕಿಟ್ಟು ಹೋರಾಡಿದರೂ ಕೊಡ್ಗಿಗೆ ಗೆಲ್ಲಲಾಗಲಿಲ್ಲ. ಅಲ್ಲಿಗೆ ಕುಂದಾಪುರದಲ್ಲಿ ಬಂಟರನ್ನು ಬಿಟ್ಟರೆ ಮತ್ಯಾರಿಗೂ ಗೆಲುವು ಸಾಧ್ಯವಿಲ್ಲವೆಂಬುದು ಹಿರಿಯ ಅನುಭವಿ ರಾಜಕಾರಣಿ ಕೊಡ್ಗಿಗೆ ಪಕ್ಕಾ ಆಗಿತ್ತು. ಬಂಟರ ಬಲದಿಂದ ಪ್ರಬಲ ನಾಯಕನಾಗಿ ರೂಪುಗೊಂಡಿದ್ದ ಪ್ರತಾಪ್‌ರನ್ನು ಮಾಜಿ ಮಾಡಬೇಕೆಂಬ ಹಠಕ್ಕೆ ಬಿದ್ದಿದ್ದ ಕೊಡ್ಗಿ ಬಂಟ ಸಮುದಾಯದ ಇಂದಿನ ಶಾಸಕ ಹಾಲಾಡಿಯನ್ನು ಬಿಜೆಪಿಯಿಂದ ಅಖಾಡಕ್ಕೆ ಇಳಿಸಿದ್ದರು. ಬಂಟರ ಮತ ವಿಭಜನೆ ಜತೆ ಹಿಂದುತ್ವ ಸೇರಿಕೊಂಡು ಹಾಲಾಡಿ ಗೆದ್ದರು. ಸತತ ಐದು ಸಲ ಶಾಸಕನಾದ ಹಾಲಾಡಿಯ ಗೆಲುವಿನಲ್ಲಿ ಬಂಟ “ಅಸ್ಮಿತೆ” ಕಂಡೂಕಾಣದಂತೆ ಕೆಲಸ ಮಾಡಿರುವುದು ಬಹಿರಂಗ ರಹಸ್ಯ.

ಬಂಟೇತರರನ್ನು ಅದರಲ್ಲೂ ಬ್ರಾಹ್ಮಣ ಜಾತಿಯವರನ್ನು ಕುಂದಾಪುರದಲ್ಲಿ ಎಮ್ಮೆಲ್ಲೆ ಮಾಡುವುದು ಕಷ್ಟವೆಂಬುದು ರಣ ತಂತ್ರ ನಿಸ್ಸೀಮ ಹಾಲಾಡಿಗೆ ಗೊತ್ತಿರದ ಸಂಗತಿಯೇನಲ್ಲ. ಕ್ಷೇತ್ರದ ರಾಜಕೀಯ, ಸಾಮಾಜಿಕ ಬಂಧ ಅದು ಹೇಗೆ ಹೆಣೆದುಕೊಂಡಿದೆಯೆಂದರೆ ಲಾಗಾಯ್ತಿನಿಂದ ಬಂಟರು ಮತ್ತು ಬ್ರಾಹ್ಮಣರು ಹತ್ತಿರವಾಗದಷ್ಟು ದೂರ-ದೂರವಾಗಿದ್ದಾರೆ. ಸ್ವಜಾತಿಯವನೊಬ್ಬ (ಯಾವ ಪಕ್ಷದಿಂದಾದರೂ ಆಗಿರಲಿ) ಆಖಾಡದಲ್ಲಿರುವಾಗ ಬಂಟರು ಬೇರೆ ಜಾತಿಯ ಕ್ಯಾಂಡಿಡೇಟ್‌ಗೆ ಮತ ಹಾಕಿದ ನಿದರ್ಶನವಿಲ್ಲ. ಹಾಲಾಡಿ ನಡೆ ನೋಡಿದರೆ, ’ಬಿಜೆಪಿ ಗೆದ್ದರೆ ತನ್ನಿಂದಲೇ ಗೆದ್ದಿತು ಎಂದಾಗಬೇಕು; ಸೋತರೆ ತಾನಿಲ್ಲದೆ ಕುಂದಾಪುರದಲ್ಲಿ ಬಿಜೆಪಿಗೆ ನೆಲೆ-ಬೆಲೆಯಿಲ್ಲ ಎಂಬ ಸಂದೇಶ ಸಂಘ ಸರದಾರಿಗೆ ಹೋಗಬೇಕು’ ಎಂಬಂತಿದೆ; ಬಿಜೆಪಿ ಪರಿಸ್ಥಿತಿ ಅರ್ಥಾತ್ ಹಾಲಾಡಿ “ರಾಜಕಾರಣ” ಕಾಂಗ್ರೆಸ್‌ನ ಬಂಟ ಜಾತಿಯ ಕ್ಯಾಂಡಿಡೇಟ್ ಮೊಳಹಳ್ಳಿ ದಿನೇಶ್ ಹೆಗ್ಡೆಗೆ ದಿನಗಳೆದಂತೆ ವರವಾಗುತ್ತಿದೆ ಎಂದು ತರ್ಕಿಸಲಾಗುತ್ತಿದೆ.

ಮೊಳಹಳ್ಳಿ ದಿನೇಶ್ ಹೆಗ್ಡೆ

1999ರ ಬಂಟ ವರ್ಸಸ್ ಬಂಟ ರಣ ರೋಚಕ ಬಡಿದಾಟ ಬಿಟ್ಟರೆ ಆನಂತರದ ಚುನಾವಣೆಗಳು ನೀರಸವಾಗಿತ್ತು. ಮೊದಲ ಸೋಲಿಗೇ ರಣರಂಗದಿಂದ ಪಲಾಯನ ಮಾಡಿದ ನಾಲ್ಕು ಬಾರಿಯ ಶಾಸಕ ಪ್ರತಾಪ್‌ಚಂದ್ರ ಶೆಟ್ಟಿಯ ಆನಂತರ ಕಾಂಗ್ರೆಸ್ ಸಂಘಟನಾತ್ಮಕವಾಗಿ ಕಟ್ಟುವ ಪ್ರಯತ್ನ ಮಾಡಲಿಲ್ಲ. ಹಾಗಾಗಿ ಹಾಲಾಡಿ ನಿರಾಯಾಸವಾಗಿ ಗೆಲ್ಲುತ್ತ ಹೋದರು. ಇಪ್ಪತ್ತು ವರ್ಷದ ಬಳಿಕ ಕುಂದಾಪುರ ಕದನ ಕುತೂಹಲ ಕೆರಳಿಸಿದೆ. ಬಂಟರು ಸ್ವಜಾತಿ ಕ್ಯಾಂಡಿಡೇಟ್ ಹಾಕಿರುವ ಕಾಂಗ್ರೆಸ್‌ನತ್ತ ಮುಖ ಮಾಡುತ್ತಿರುವ ಸೂಚನೆ ಗೋಚರಿಸುತ್ತಿದೆ; ಹಿಂದೆಲ್ಲ ಹಾಲಾಡಿ ಹಿಂದೆ-ಮುಂದೆ ಕಾಣಿಸುತ್ತಿದ್ದ ಹೋಬಳಿ ಮಟ್ಟದ ಶಕ್ತಿಶಾಲಿ ಬಂಟ ಮುಂದಾಳುಗಳು ನಿಧಾನಕ್ಕೆ ಕಾಂಗ್ರೆಸ್‌ಗೆ ವಲಸೆ ಹೋಗುತ್ತಿದ್ದಾರೆ.ಕಾಂಗ್ರೆಸ್ ಹುರಿಯಾಳು ದಿನೇಶ್ ಹೆಗ್ಡೆ ’ಹಣಾ’ಹಣಿ ನಡೆಸಿದ್ದಾರೆ. 52 ಸಾವಿರದಷ್ಟಿರುವ ಬಂಟ ಮತಗಳೇ ನಿರ್ಣಾಯಕ. ಸಾಂಕೇತಿಕ ಹೋರಾಟಕ್ಕೆ ಸೀಮಿತವಾಗಿದ್ದ ಕಾಂಗ್ರೆಸ್ ಇಂದು ಬಿಜೆಪಿಗರ ಬೆವರಿಳಿಸುವಷ್ಟು ಪ್ರಬಲವಾಗಿದೆ. ನಿಕಟ ಪೈಪೋಟಿಯಲ್ಲಿ ಯಾರು ಬೇಕಿದ್ದರೂ ಗೆಲ್ಲಬಹುದೆಂಬ ಕಠಿಣ ಹೋರಾಟ ಕುಂದಾಪುರದಲ್ಲಿ ಏರ್‍ಪಟ್ಟಿದೆ.

ಬೈಂದೂರು: ಸಮರಾಂಗಣದಲ್ಲಿ ಸಂಘಿ ಪ್ರಚಾರಕ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಡಲ ತಡಿಯ ಬೈಂದೂರು ಶಾಸಕ ಸುಕುಮಾರ ಶೆಟ್ಟಿಗೆ ಕೇಸರಿ ಟಿಕೆಟ್ ನಿರಾಕರಿಸಲಾಗಿದೆ;ಸಿಡಿಮಿಡಿ ಸ್ವಭಾವದಿಂದ ಜನ ವಿರೋಧ ಕಟ್ಟಿಕೊಂಡಿದ್ದ ಶೆಟ್ಟಿಗೆ ಗೇಟ್ ಪಾಸ್ ಕೊಟ್ಟು ಶುದ್ಧ ಸಂಘ ಸಿದ್ಧಾಂತಿಯೊಬ್ಬನಿಗೆ ಅಭ್ಯರ್ಥಿ ಮಾಡುವ ನಿರ್ಧಾರವನ್ನು ಸಂಘ ಸರದಾರರು ಆರೆಂಟು ತಿಂಗಳ ಹಿಂದೆಯೆ ಕೈಗೊಂಡಿದ್ದರು ಎನ್ನಲಾಗುತ್ತಿದೆ. ಒಂದು ಪಕ್ಷ ಪಕ್ಕದ ಕುಂದಾಪುದಲ್ಲಿ ಹಾಲಾಡಿ ಶೆಟ್ಟರೇ ಕೇಸರಿ ಕ್ಯಾಂಡಿಡೇಟಾಗಿದ್ದರೂ ಬೈಂದೂರಲ್ಲಿ ಮಾತ್ರ ಸುಕುಮಾರ ಶೆಟ್ಟಿಗೆ ಛಾನ್ಸೇ ಇರಲಿಲ್ಲ ಎಂದು ಸಂಘ ಮೂಲಗಳು ಪಿಸುಗುಡುತ್ತಿವೆ. ಮಾಜಿ ಸಿಎಂ ಯಡಿಯೂರಪ್ಪ ಮತ್ತವರ ಪುತ್ರ ಸಂಸದ ರಾಘವೇಂದ್ರರನ್ನು ನಂಬಿಕೊಂಡಿದ್ದ ಸುಕುಮಾರ್ ಶೆಟ್ಟಿ ಕೇಸರಿ ಟಿಕೆಟ್ ದಕ್ಕದ ಸಿಟ್ಟಲ್ಲಿ ಕೆರಳಿದ್ದಾರಾದರೂ ಸಂಘ ಶ್ರೇಷ್ಠರ ’ಎಚ್ಚರಿಕೆ’ಗೆ ಅಂಜಿ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಲಾಗದೆ ಮನೆ ಸೇರಿಕೊಂಡಿದ್ದಾರೆ; ಒಳಗೊಳಗೆ ಬಿಜೆಪಿಗೆ ಡ್ಯಾಮೇಜ್ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಗುರುರಾಜ್ ಶೆಟ್ಟಿ ಗಂಟಿಹೊಳೆ

ಬಿಜೆಪಿ ಹುರಿಯಾಳು ಗುರುರಾಜ್ ಶೆಟ್ಟಿ ಗಂಟಿಹೊಳೆ ಬರಿಗಾಲಲ್ಲಿ ಓಡಾಡುವ ಸರಳ, ಬಡವ, ಆರೆಸ್ಸೆಸ್‌ಗೆ ಸಮರ್ಪಿತ ನಿಷ್ಠಾವಂತ ತ್ಯಾಗ ಜೀವಿ ಎಂಬಂತೆ ಬಿಂಬಿಸಿ ಮತ ಬೇಟೆ ಮಾಡಲಾಗುತ್ತಿದೆ. ಆದರೆ ಆರೆಸ್ಸೆಸ್‌ನ ಪೂರ್ಣಾವಧಿ ಪ್ರಚಾರಕನಾಗಿದ್ದ ಗುರುರಾಜ್ ಶೆಟ್ರ ’ಪ್ರೊಫೈಲ್’ ರೋಚಕವಾಗಿದೆ! ನಾಮಪತ್ರ ಸಲ್ಲಿಸುವಾಗ ಏಳುಕಾಲು ಕೋಟಿ ರೂ. ಆಸ್ತಿ ಇರುವುದಾಗಿ ಗುರುರಾಜ್ ಗಂಟಿಹೊಳೆ ಘೋಷಿಸಿರುವುದು ಅವರ ’ಬಡತನ’ದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ!

ಚಿಕ್ಕ ವಯಸ್ಸಿನಲ್ಲಿಯೇ ಆರೆಸ್ಸೆಸ್ ಸಿದ್ಧಾಂತದ ಸೆಳೆತಕ್ಕೆ ಸಿಲುಕಿದ್ದ ಗುರುರಾಜ್ ಗೇರು ಬೀಜ ಉದ್ಯಮ ಮಾಡಲು ಹೋಗಿ ಕೈಸುಟ್ಟುಕೊಂಡಿದ್ದರಂತೆ. ಚೆಕ್ ಬೌನ್ಸ್ ಕೇಸ್, ಸಾಲ ಕೊಟ್ಟವರ ಬಾಧೆ ತಾಳಲಾಗದೆ ಊರುಬಿಟ್ಟು ಮುಂಬೈಗೆ ಓಡಿಹೋಗಿದ್ದರಂತೆ. ಆರೆಸ್ಸೆಸ್‌ನ ಪೂರ್ಣಾವಧಿ ಕಾರ್ಯಕರ್ತನಾಗಿ ಕೊಡಗು, ಕೇರಳ, ಆಂಧ್ರ ಮತ್ತು ತಮಿಳುನಾಡು ಕಡೆ ಓಡಾಡಿಕೊಂಡಿದ್ದರು. ಸಂಘ ಪರಿವಾರದ ಪತ್ರಕರ್ತನೋರ್ವ ಯಲ್ಲಾಪುರದಲ್ಲಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆಯ ಉಸ್ತವಾರಿಯಾಗಿದ್ದರು. ಕಳೆದ ಚುನಾವಣೆ ಹೊತ್ತಲ್ಲಿ ಸಂಘಿ ’ವೀಕ್ಷಕ’ನಾಗಿ ತವರೂರು ಬೈಂದೂರಲ್ಲಿ ಕಾಣಿಸಿಕೊಂಡಿದ್ದರು. ಆನಂತರ ಸಂಘ ಪ್ರತಿನಿಧಿಯಾಗಿ ಉಡುಪಿ ಬಿಜೆಪಿ ಜಿಲ್ಲಾ ಕಮಿಟಿಯಲ್ಲಿ ಸೇರಿಸಲ್ಪಟ್ಟಿದ್ದರು. ಈಗ ಸಂಘ ಪರಿವಾರದ ಒತ್ತಾಸೆಯಿಂದ ಬೈಂದೂರು ಬಿಜೆಪಿಯ ಕಪ್ಪು ಕುದುರೆ ಆಗಿದ್ದಾರೆ.

ಗುರುರಾಜ್ ಗಂಟಿಹೊಳಿಗೆ ಸಂಘದಿಂದ ಕೋಟ್ಯಾಂತರ ರೂ.ಹರಿದು ಬರುತ್ತಿದೆ; ಆರ್ಥಿಕವಾಗಿ ಬಲಾಢ್ಯವಾಗಿರುವ ಸ್ವಜಾತಿ ಬಂಟ ಉದ್ಯಮಿಗಳು ಒಂದಾಗಿ ಗುರುರಾಜ್ ಗಂಟಿಹೊಳೆಗೆ ನೆರವಾಗುತ್ತಿದ್ದಾರೆ ಎಂಬ ಸುದ್ದಿ ಹಾರಾಡುತ್ತಿದೆ. ಬೈಂದೂರಲ್ಲಿ ಬಿಜೆಪಿ ಕಟ್ಟಲು ಯಾವ ಕೊಡುಗೆಯೂ ಕೊಡದ ಗುರುರಾಜ್ ಗಂಟಿಹೊಳೆಗೆ ದಿಢೀರ್ ಕ್ಯಾಂಡಿಡೇಟ್ ಮಾಡಿರುವುದು ಬಿಜೆಪಿ ಸಕ್ರಿಯ ರಾಜಕಾರಣದಲ್ಲಿದ್ದ ಜಿಪಂ ಮಾಜಿ ಸದಸ್ಯರಾದ ಬಾಬು ಹೆಗ್ಡೆ, ಶಂಕರ ಪೂಜಾರಿಯಂಥ ಹಲವು ಗಟ್ಟಿ ನಾಯಕರನ್ನು ಕೆರಳಿಸಿದೆ. ಗ್ರಾಮಾಂತರ ಭಾಗದಲ್ಲಿ ಹಿಡಿತವಿರುವ ಹಲವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿ ಕ್ಯಾಂಡಿಡೇಟ್ ಜತೆ ಲೀಡರ್‌ಗಳಿಲ್ಲಿ; ಸಂಘಿ ಕೇಡರ್ ಹುಡುಗರ ಮೇಲೆಯೇ ಗುರುರಾಜ್ ಗಂಟಿಹೊಳೆ ಅವಲಂಬಿಸಿದ್ದಾರೆ ಎನ್ನಲಾಗಿದೆ.

ಗೋಪಾಲ ಪೂಜಾರಿ

ಅತ್ತ ಕಾಂಗ್ರೆಸ್ ಹುರಿಯಾಳು ಮಾಜಿ ಶಾಸಕ ಗೋಪಾಲ ಪೂಜಾರಿ ಕಳೆದ ಬಾರಿಯ ಹಿನ್ನಡೆಯಿಂದ ಗಣನೀಯವಾಗಿ ಚೇತರಿಸಿಕೊಂಡಿದ್ದಾರೆ. ತಾವು ಹಿಂದುತ್ವದ ಮೋಡಿಗೊಳಗಾಗಿ ಗೋಪಾಲ ಪೂಜಾರಿಗೆ ಕೈಕೊಟ್ಟಿದ್ದರಿಂದ ಸ್ವಜಾತಿ ಶಾಸಕನೊಬ್ಬನನ್ನು ಕಳೆದುಕೊಳ್ಳಬೇಕಾಯಿತೆಂಬ ’ಜಾಗೃತಿ’ ಬಿಲ್ಲವರಲ್ಲಿ ಮೂಡಿದೆ. ಈ ಬಾರಿ ಕ್ಷೇತ್ರದ ಪ್ರಥಮ ಬಹುಸಂಖ್ಯಾತ (ಸುಮಾರು 48 ಸಾವಿರ ಮತದಾರರು) ಬಿಲ್ಲವ ಸಮುದಾಯ ಇಡಿಯಾಗಿ ಕಾಂಗ್ರೆಸ್‌ನ ಗೋಪಾಲ ಪೂಜಾರಿ ಬೆಂಬಲಿಸುತ್ತಿದೆ ಎನ್ನಲಾಗುತ್ತಿದೆ. ತಮಾಷೆಯೆಂದರೆ, ಹಿಂದುತ್ವದ ಹುಡುಗರು ಕೇಸರಿ ಶಾಲು ಸಮೇತ ಕಾಂಗ್ರೆಸ್ ಸಭೆಗಳಲ್ಲಿ ಮಿಂಚುತ್ತಿದ್ದಾರೆ. ನಾಲ್ಕು ಸಲ ಶಾಸಕನಾಗಿರುವ ಗೋಪಾಲ ಪೂಜಾರಿಗೆ ಸ್ವಜಾತಿ ಬಿಲ್ಲವರ ಅಖಂಡ ಬೆಂಬಲ ಸಿಕ್ಕಾಗೆಲ್ಲಾ ಗೆದ್ದಿದ್ದಾರೆ. ಕಳೆದ ಬಾರಿ ಸೋತರೂ ಈ ಐದು ವರ್ಷ ಜನರ ನಡುವೆಯಿರುವ ಗೋಪಾಲ ಪೂಜಾರಿ ಬಗ್ಗೆ ಸಿಂಪಥಿಯಿದ್ದರೆ, ಬಿಜೆಪಿ ಆಳಿತ ವಿರೋಧಿ ಅಂಡರ್‌ಕರೆಂಟ್‌ಗೆ ಬಾಡುತ್ತಿದೆ. ಸದ್ಯಕ್ಕೆ ಸುರಕ್ಷಿತ ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್‌ನ ಗೋಪಾಲ ಪೂಜಾರಿಗೆ ಪಿಚ್ ಮತ್ತಷ್ಟು ಅನುಕೂಲಕರ ಆಗಲಿದೆ ಎಂದು ಕಾಂಗ್ರೆಸ್‌ನ ಜಾತಿ ರಾಜಕಾರಣ ಮತ್ತ ಬಿಜೆಪಿಯ ಧರ್ಮಕಾರಣದ ಪಟ್ಟು-ಪ್ರತಿ ಪಟ್ಟಗಳ ಒಳಗುಟ್ಟು ಗೊತ್ತಿರುವ ವಕೀಲರೊಬ್ಬರು ’ನ್ಯಾಯಪಥ’ಕ್ಕೆ ತಿಳಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...