Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮುಧೋಳ ಚುನಾವಣಾ ಕಣದಲ್ಲಿ ಹಳೆ ಹುರಿಯಾಳುಗಳು; ಕಾರಜೋಳ-ತಿಮ್ಮಾಪೂರ ಮಧ್ಯೆ ಟೈಟ್...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮುಧೋಳ ಚುನಾವಣಾ ಕಣದಲ್ಲಿ ಹಳೆ ಹುರಿಯಾಳುಗಳು; ಕಾರಜೋಳ-ತಿಮ್ಮಾಪೂರ ಮಧ್ಯೆ ಟೈಟ್ ಫೈಟ್

- Advertisement -
- Advertisement -

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕು ಕನ್ನಡ ಸಂಸ್ಕೃತಿಯ ಒಂದು ಮುಖ್ಯ ತಾಣ. ಕವಿ ಚಕ್ರವರ್ತಿ ರನ್ನ ಜನಿಸಿದ್ದು ಈ ಮುಧೋಳ ತಾಲೂಕಿನ ಬೆಳಗಲಿ ಎಂಬ ಗ್ರಾಮದಲ್ಲಿ. ಈಗಲೂ ಈ ಗ್ರಾಮ ರನ್ನಬೆಳಗಲಿ ಎಂದೇ ಹೆಸರಾಗಿದೆ. ಭಾರತದ ಮೊದಲ ಸ್ವಾತಂತ್ರ ಸಂಗ್ರಾಮ ಎಂದು ಪರಿಗಣಿಸಲಾಗುವ 1857ರ ಸಂದರ್ಭದಲ್ಲಿ ಬ್ರಿಟಿಷರು ನಿಶಸ್ತ್ರೀಕರಣ ಕಾಯ್ದೆ ಜಾರಿಗೆ ತಂದಿದ್ದರು. ಆದರೆ ಮುಧೋಳದ ಹಲಗಲಿ ಬೇಡರು ಈ ಕಾಯ್ದೆಯನ್ನು ವಿರೋಧಿಸಿ ಬ್ರಿಟಿಷರ ಎದೆಯಲಿ ನಡುಕ ಹುಟ್ಟಿಸಿದ್ದರು.

ಮುಧೋಳವು ಘಟಪ್ರಭ ನದಿಯ ತೀರದಲ್ಲಿ ಚಾಚಿಕೊಂಡಿದೆ. ಇಲ್ಲಿ ಕೃಷಿಯನ್ನೇ ಹೆಚ್ಚು ಅವಲಂಬಿಸಿದ್ದಾರೆ. ಅದರಲ್ಲೂ ಕಬ್ಬು ಬೆಳೆಗಾರರ ಸಂಖ್ಯೆಯು ಹೇರಳವಾಗಿದೆ. ಅದಕ್ಕೆ ಪೂರಕವಾಗಿ ಸಕ್ಕರೆ ಕಾರ್ಖಾನೆಗಳನ್ನು ಹೊಂದಿದೆ. ಇಲ್ಲಿಯ ’ಮುಧೋಳ ಹೊಂಡ’ ಎಂಬ ನಾಯಿಯ ತಳಿಯು ಪ್ರಸಿದ್ಧಿ ಪಡೆದಿದೆ. ಈ ತಳಿಯನ್ನು ಜರ್ಮನ್ ಶೆಪರ್ಡ್ ಅಥವಾ ಸ್ವಿಸ್ ನಾಯಿಯ ಬದಲು ಭಾರತೀಯ ಸೈನ್ಯದಲ್ಲಿ ಕಾಣಬಹುದಾಗಿದೆ.

ಕ್ಷೇತ್ರದ ಚುನಾವಣಾ ಇತಿಹಾಸ

ಮುಧೋಳ ಮತಕ್ಷೇತ್ರದಲ್ಲಿ 1952ರಿಂದ 2018ರವರೆಗೆ ಒಟ್ಟು 15 ಸಾರ್ವತ್ರಿಕ ವಿಧಾನಸಭಾ ಚುನಾವಣೆಗಳು ನಡೆದಿವೆ. 8 ಬಾರಿ ಕಾಂಗ್ರೆಸ್, ನಾಲ್ಕು ಬಾರಿ ಬಿಜೆಪಿ ಗೆಲುವು ಕಂಡಿದೆ. ಸ್ವತಂತ್ರ ಪಕ್ಷ, ಜನತಾ ಪಕ್ಷ ಹಾಗೂ ಜೆಡಿಎಸ್ ತಲಾ ಒಂದೊಂದು ಬಾರಿ ಗೆಲುವು ಕಂಡಿವೆ.

’ಸರ್ಕಾರ ಯಾವುದೇ ಬರಲಿ ಮುಧೋಳ ಮತಕ್ಷೇತ್ರಕ್ಕೆ ಮಂತ್ರಿ ಸ್ಥಾನ ಫಿಕ್ಸ್’ ಎನ್ನುವ ಮಾತಿದೆ. ’ಶಾಶ್ವತ ಸಚಿವರ ಕ್ಷೇತ್ರ’ ಅಂತಲೇ ಹೆಸರಾಗಿರುವ ಈ ಕ್ಷೇತ್ರದಿಂದ ಗೆದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರಿಗೆ ಹಲವು ಬಾರಿ ಮಂತ್ರಿ ಸ್ಥಾನ ದಕ್ಕಿದೆ.

ಚುನಾವಣಾ ಇತಿಹಾಸ

ಮುಧೋಳ ಮತಕ್ಷೇತ್ರದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆ 1952ರಲ್ಲಿ ಹೀರಾಲಾಲ್ ಶಾ ಕಾಂಗ್ರೆಸ್‌ನಿಂದ ಗೆದ್ದು, ಮುಧೋಳದ ಮೊದಲ ಶಾಸಕರಾಗುತ್ತಾರೆ. 1957ರಲ್ಲೂ ಹೀರಾಲಾಲ್ ಅವರೇ ಕಾಂಗ್ರೆಸ್ ಪಕ್ಷದಿಂದ ಗೆಲುವಿನ ಓಟ ಮುಂದುವರಿಸುತ್ತಾರೆ. 1962ರ ಚುನಾವಣೆಯಲ್ಲಿ ನಿಂಗಪ್ಪ ನಾಯ್ಕ ಎಂಬುವವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ.

ಸತತ ಮೂರು ಬಾರಿ ಗೆಲುವು ಕಂಡ ಕಾಂಗ್ರೆಸ್ ಪಕ್ಷಕ್ಕೆ ಮುಧೋಳದಲ್ಲಿ ಮೊದಲ ಸೋಲಿನ ರುಚಿಯುಣಿಸಿದ್ದು ’ಸ್ವತಂತ್ರ ಪಕ್ಷ’. ಎನ್.ಕೆ ಪಾಂಡಪ್ಪ ಅವರು 1967ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿ ಸ್ವತಂತ್ರ ಪಕ್ಷದಿಂದ ಗೆಲುವು ಸಾಧಿಸಿದರು. 1972ರ ಚುನಾವಣೆಯಲ್ಲಿ ಎನ್.ಕೆ ಪಾಂಡಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎರಡನೇ ಅವಧಿಗೆ ಶಾಸಕರಾದರು.

ಸ್ವತಂತ್ರ ಪಕ್ಷದ ಹಿನ್ನೆಲೆ

ಸ್ವತಂತ್ರ ಪಕ್ಷವು 1959ರಿಂದ 1974ರವರೆಗೆ ಅಸ್ತಿತ್ವದಲ್ಲಿತ್ತು. ಇದು ಒಂದು ಉದಾರವಾದಿ ರಾಜಕೀಯ ಪಕ್ಷವಾಗಿತ್ತು. ಜವಾಹರಲಾಲ್ ನೆಹರು ಪ್ರಾಬಲ್ಯ ಹೊಂದಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಪರ್ಯಾಯವಾಗಿ ಸಮಾಜವಾದಿ ಸಿದ್ಧಾಂತದ ಮೇಲೆ ಸಿ. ರಾಜಗೋಪಾಲಾಚಾರಿ ಸ್ಥಾಪಿಸಿದ ಪಕ್ಷವಿದು. ಈ ಪಕ್ಷ ಹಲವಾರು ಪ್ರತಿಷ್ಠಿತ ನಾಯಕರನ್ನು ಹೊಂದಿತ್ತು. ಅವರಲ್ಲಿ ಹೆಚ್ಚಿನವರು ಹಳೆಯ ಕಾಂಗ್ರೆಸ್ಸಿನವರೇ ಆಗಿದ್ದು, ಸಿ. ರಾಜಗೋಪಾಲಾಚಾರಿ, ಟಂಗಟೂರಿ ಪ್ರಕಾಶಂ ಪಂತುಲು, ಮಿನೂ ಮಸಾನಿ, ಎನ್ ಜಿ ರಂಗ, ದರ್ಶನ್ ಸಿಂಗ್ ಫೆರುಮಾನ್, ಉದಮ್ ಸಿಂಗ್ ನಾಗೋಕೆ ಹಾಗೂ ಕೆಎಂ ಮುನ್ಷಿ ಪ್ರಮುಖರಾಗಿದ್ದರು. 1972ರಲ್ಲಿ ರಾಜಾಜಿಯವರ ಮರಣದ ನಂತರ ಪಕ್ಷವು ತನ್ನ ವೇಗವನ್ನು ಕಳೆದುಕೊಂಡಿತು. 1974ರಲ್ಲಿ, ಸ್ವತಂತ್ರ ಪಕ್ಷವು ಭಾರತೀಯ ಲೋಕದಳವನ್ನು ರಚಿಸಲು ಇತರ ಆರು ವಿರೋಧ ಪಕ್ಷಗಳೊಂದಿಗೆ ಸೇರಿಕೊಂಡಿತು.

1978ರಿಂದ ಮುಧೋಳ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರ

ಮುಧೋಳ ವಿಧಾನಸಭಾ ಮತಕ್ಷೇತ್ರವು ಜಿಲ್ಲೆಯ ಅತ್ಯಂತ ಪ್ರತಿಷ್ಠಿತ ಹಾಗೂ ಜಿದ್ದಾಜಿದ್ದಿನ ಕಣವಾಗಿದೆ. 1978ರ ಚುನಾವಣೆಗೂ ಮುನ್ನ ಮುಧೋಳವು ಬಲಾಢ್ಯ ವರ್ಗದ ನಾಯಕರ ಹಿಡಿತದಲ್ಲಿ ಇತ್ತು. ಆನಂತರದಲ್ಲಿ ಇದು ಎಸ್ಸಿ ಮೀಸಲು ಕ್ಷೇತ್ರವಾಯಿತು. ಆ ಬಳಿಕ ಶಾಸಕ ಸ್ಥಾನದಲ್ಲಿ ದಲಿತ ಸಮುದಾಯದ ನಾಯಕರಿದ್ದರೂ, ಈ ಕ್ಷೇತ್ರದಲ್ಲಿ ಮಾತ್ರ ಪ್ರಬಲ ವರ್ಗದವರು ಹೇಳಿದಂತೆ ನಡೆಯಬೇಕು ಎನ್ನುವ ಅಲಿಖಿತ ನಿಯಮವಿದೆ.

1978ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಹಾದಿಮನಿ ಅಲಿಯಾಸ್ ಜಯವಂತ ಕಾಳೆ ಅವರು ಗೆಲುವು ಸಾಧಿಸಿದರು. ಈ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಶೋಕ್ ಕಟ್ಟಿಮನಿ ಕೇವಲ 4,390 ಮತಗಳ ಅಂತರದಿಂದ ಸೋತಿದ್ದರು. ಮುಂದೆ 1983ರ ಚುನಾವಣೆಯಲ್ಲಿ ಅಶೋಕ್ ಕಟ್ಟೀಮನಿ ಕಾಂಗ್ರೆಸ್ ಸೇರಿ ಗೆಲುವು ಸಾಧಿಸಿದರು. 1985ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಭೀಮಪ್ಪ ಜಮಖಂಡಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಓಟಕ್ಕೆ ತಡೆಯೊಡ್ಡಿದರು.

ಆ ಬಳಿಕ ಮುಧೋಳದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲುವಂತೆ ಮಾಡಿದ್ದು ಆರ್.ಬಿ ತಿಮ್ಮಾಪೂರ. 1989ರ ಚುನಾವಣಾ ಕಣದಲ್ಲಿ ಕಾಂಗ್ರೆಸ್‌ನಿಂದ ಹುರಿಯಾಳಾಗಿದ್ದ ಅವರು ಜನತಾ ಪಕ್ಷದ ಜಮಖಂಡಿಯವರನ್ನು 17,239 ಮತಗಳ ಅಂತರದಿಂದ ಪರಾಭವಗೊಳಿಸಿದರು. 1994ರ ಚುನಾವಣೆಯಲ್ಲಿ ಜೆಡಿಯು ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಗೋವಿಂದ ಕಾರಜೋಳ ಅವರು ತಿಮ್ಮಾಪೂರರಿಗೆ ತೊಡೆತಟ್ಟಿ ಗೆಲುವು ಕಂಡರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬಾಗಲಕೋಟೆ: ಚರಂತಿಮಠ ವಿರುದ್ಧ ತಿರುಗಿಬಿದ್ದ ಸಂಘ ಪರಿವಾರದ ನಾಯಕರು;…

1999ರಲ್ಲಿ ಕಾಂಗ್ರೆಸ್ ಹುರಿಯಾಳು ಆರ್.ಬಿ ತಿಮ್ಮಾಪೂರ ಮತ್ತೆ ಗೆಲುವು ಕಾಣುವ ಮೂಲಕ ಜೆಡಿಯುಯಿಂದ ಸ್ಪರ್ಧಿಸಿದ್ದ ಕಾರಜೋಳಗೆ ಸೋಲುಣಿಸಿದರು. ಆ ಬಳಿಕ ಜೆಡಿಯು ತೊರೆದ ಕಾರಜೋಳ 2004ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. ಆ ಬಳಿಕ ಸತತವಾಗಿ ನಾಲ್ಕು ಬಾರಿ ಜಯಭೇರಿ ಭಾರಿಸಿದರು.

2004ರ ಚುನಾವಣೆಯಲ್ಲಿ 71,814 ಮತ ಪಡೆಯುವ ಮೂಲಕ ಗೋವಿಂದ ಕಾರಜೋಳ ಕಾಂಗ್ರೆಸ್‌ನ ಆರ್.ಬಿ ತಿಮ್ಮಾಪೂರ ವಿರುದ್ಧ 32,942 ಮತಗಳ ಅಂತರದಿಂದ ದೊಡ್ಡ ಗೆಲುವು ಸಾಧಿಸಿದರು. 2008ರಲ್ಲೂ ಕಾಂಗ್ರೆಸ್‌ನತಿಮ್ಮಾಪೂರ ಹಾಗೂ ಬಿಜೆಪಿಯ ಕಾರಜೋಳ ನಡುವೆಯೇ ಫೈಟ್ ಮುಂದುವರೆಯಿತು. ಕಾರಜೋಳ ಗೆಲುವಿನ ಓಟವನ್ನು ಮುಂದುವರೆಸಿದರು.ತಿಮ್ಮಾಪೂರ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಚುನಾವಣೆಯಲ್ಲಿ ಇಬ್ಬರ ನಡುವಿನ ಮತಗಳಿಕೆಯ ಅಂತರ ಕೇವಲ 7,378 ಆಗಿತ್ತು.

2013ರ ಚುನಾವಣೆಯಲ್ಲೂ ಕೈ-ಕಮಲದಿಂದ ಸಾಂಪ್ರದಾಯಿಕ ಎದುರಾಳಿಗಳಾದ ಕಾರಜೋಳತಿಮ್ಮಾಪೂರ ಸ್ಪರ್ಧೆಗಿಳಿದರು. ಈ ಬಾರಿಯ ಮತಗಳಿಕೆಯ ಅಂತರ ಕಡಿಮೆಯಾಯಿತೇ ವಿನಃ ಗೆಲುವು-ಸೋಲಿನಲ್ಲಿ ವ್ಯತ್ಯಾಸವಾಗಲಿಲ್ಲ. ಕಾರಜೋಳ ಅವರು ಕೇವಲ 5,178 ಮತಗಳಿಂದ ಗೆಲುವು ಸಾಧಿಸಿದರು.

ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್, 2018ರ ಚುನಾವಣೆಯಲ್ಲಿ ಕಾರಜೋಳ ವಿರುದ್ಧ ತನ್ನ ಅಭ್ಯರ್ಥಿಯನ್ನೇ ಬದಲಾಯಿಸಿತು. ಕಾಂಗ್ರೆಸ್‌ನಿಂದ ಸತೀಶ್ ಬಂಡಿವಡ್ಡರಗೆ ಟಿಕೆಟ್ ನೀಡಲಾಯಿತಾದರೂ ಪ್ರಬಲ ನಾಯಕನಾಗಿ ಬೆಳೆದುನಿಂತಿದ್ದ ಬಿಜೆಪಿಯ ಕಾರಜೋಳ ವಿರುದ್ಧ ಆಟ ನಡೆಯಲಿಲ್ಲ. ಮತ್ತೆ ಕಾರಜೋಳ ವಿಜಯಪತಾಕೆ ಹಾರಿಸಿದರು. ಆ ಮೂಲಕ ಸತತ ನಾಲ್ಕನೇ ಅವಧಿಗೆ ಕಾರಜೋಳ ಶಾಸಕರಾಗಿ ಆಯ್ಕೆಯಾದರು.

ಜಾತಿ ಲೆಕ್ಕಾಚಾರ

ರೆಡ್ಡಿ ಸಮುದಾಯದ ಮತಗಳು 30,000, ಕುರುಬ-25,000, ಮುಸ್ಲಿಂ- 25,000, ದಲಿತ ಮತದಾರರು 20,000, ವಾಲ್ಮೀಕಿ ಮತಗಳು 15,000 ಹಾಗೂ ಅಂಬಿಗರ ಮತಗಳು 15,000 ಇವೆ. ಉಳಿದಂತೆ ಬಣಜಿಗ, ಮರಾಠ, ಪಂಚಮಸಾಲಿ, ಬಂಜಾರ ಸಮುದಾಯಗಳ ಮತಗಳು ಹೆಚ್ಚಾಗಿವೆ.

ಸತೀಶ್ ಬಂಡಿವಡ್ಡರ

ಗೋವಿಂದ ಕಾರಜೋಳ ಮತ್ತು ಆರ್.ಬಿ ತಿಮ್ಮಾಪೂರ ಇಬ್ಬರೂ ಮಾದಿಗ ಸಮುದಾಯಕ್ಕೆ ಸೇರಿದವರು. ಮಾದಿಗ ಮತಗಳೇ ನಿರ್ಣಾಯಕವಾಗಿರುವ ಮುಧೋಳ ಕ್ಷೇತ್ರದಲ್ಲಿ ಮಾದಿಗ ಸಮುದಾಯದ ನಾಯಕರೇ ಹೆಚ್ಚಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿ ಮತಗಳು ಅಧಿಕವಾಗಿದ್ದು, ಸಹಜವಾಗಿ ಮತ ಗಳಿಕೆಗೆ ಪೈಪೋಟಿ ನಡೆಯುತ್ತದೆ. ಲಿಂಗಾಯತ ಹಾಗೂ ರೆಡ್ಡಿ ಮತಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದು, ಈ ಸಮುದಾಯಗಳು ಯಾರನ್ನು ಬೆಂಬಲಿಸುತ್ತವೆ ಎಂಬುದರ ಮೇಲೆ ಅಭ್ಯರ್ಥಿಯ ಗೆಲುವು ಇಲ್ಲಿ ನಿರ್ಧಾರವಾಗಲಿದೆ. ಕುರುಬ, ಮುಸ್ಲಿಂ ಮತಗಳು ನಂತರದ ಸ್ಥಾನಗಳಲ್ಲಿವೆ.

2023ರ ಚುನಾವಣೆಗೆ ಸಜ್ಜಾದ ಮುಧೋಳ ಮೀಸಲು ಕ್ಷೇತ್ರ

ಬಾಗಲಕೋಟೆ ಜಿಲ್ಲೆಯ ಭಾರೀ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಮುಧೋಳದಲ್ಲಿ ಹಳೆ ಹುರಿಯಾಳುಗಳ ಕಾದಾಟ ಶುರುವಾಗಿದೆ. ಬಿಜೆಪಿಯಿಂದ ಗೋವಿಂದ್ ಕಾರಜೋಳ ಹಾಗೂ ಕಾಂಗ್ರೆಸ್‌ನಿಂದ ಆರ್.ಬಿತಿಮ್ಮಾಪೂರ ನಡುವೆ ನೇರ ಪೈಪೋಟಿ ಇದೆ ಎಂದು ಹೇಳಲಾಗುತ್ತದೆ. ಪಕ್ಷೇತರರಾಗಿ ಕಣಕ್ಕಿಳಿದಿರುವ ಸತೀಶ್ ಬಂಡಿವಡ್ಡರ ಅವರು ಈ ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಇದೀಗ ಕಾಂಗ್ರೆಸ್ ತೊರೆದು ಪಕ್ಷೇತರರಾಗಿ ಕಣದಲ್ಲಿದ್ದಾರೆ.

ಗೋವಿಂದ್ ಕಾರಜೋಳ ಗೆಲುವಿನ ಓಟಕ್ಕೆ ಬೀಳುತ್ತಾ ಬ್ರೇಕ್?

ಹಾಲಿ ನೀರಾವರಿ ಸಚಿವರಾಗಿರುವ ಗೋವಿಂದ ಕಾರಜೋಳ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನವನ್ನೂ ಅಲಂಕರಿಸಿದ್ದರು. ಬಿಜೆಪಿಯಲ್ಲಿ ಪ್ರಬಲ ದಲಿತ ಸಮುದಾಯದ ಮುಖಂಡರಾಗಿರುವ ಅವರು 6 ಬಾರಿ ಸ್ಪರ್ಧಿಸಿ 5 ಬಾರಿ ಗೆಲುವು ಸಾಧಿಸಿದ್ದು, ಒಂದು ಬಾರಿ ಸೋಲು ಕಂಡಿದ್ದಾರೆ.

ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಮೂಲಕ ಒಳ್ಳೆಯ ಹೆಸರು ಗಳಿಸಿರುವ ಕಾರಜೋಳ, ಜನಸಂಪರ್ಕದಿಂದ ದೂರ ಉಳಿದಿದ್ದಾರೆ ಎನ್ನುವ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ ರೆಡ್ಡಿ ಸಮುದಾಯದ ಮತದಾರರ ಒಲವು ಯಾರ ಕಡೆ ಇರುತ್ತದೋ ಆ ಅಭ್ಯರ್ಥಿಯ ಗೆಲುವು ನಿಶ್ಚಿತ. ಕಾರಜೋಳ ಅವರು ಈ ರೆಡ್ಡಿ ಸಮುದಾಯದೊಂದಿಗೆ ಇಷ್ಟು ವರ್ಷಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎನ್ನುವ ಕಾರಣಕ್ಕೆ ಗೆಲುವು ಸಾಧ್ಯವಾಗಿತ್ತು. ಆದರೆ ಈ ಬಾರಿ ರೆಡ್ಡಿ ಸಮುದಾಯವು ಕಾರಜೋಳ ಅವರನ್ನು ಕೈ ಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಭಾಗದಲ್ಲಿ ಕಬ್ಬು ಬೆಳೆಗಾರರ ಸಂಖ್ಯೆ ಅತ್ಯಧಿಕವಾಗಿದ್ದು, ಕಾರಜೋಳ ಅವರ ರನ್ನ ಕಾರ್ಖಾನೆಯಿಂದ ರೈತರಿಗೆ ಅನ್ಯಾಯವಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಇದರಿಂದ ಕಾರಜೋಳಗೆ ಒಂದು ಮಟ್ಟದ ಹೊಡೆತ ಬೀಳುವುದು ಸ್ಪಷ್ಟ. ಇನ್ನು ಕಾರಜೋಳ ಆಪ್ತರಾಗಿದ್ದ ತಳೆವಾಡ ಬ್ರದರ್ಸ್ ಈ ಬಾರಿ ಬಿಜೆಪಿ ತೊರೆದಿರುವುದು ಕಾರಜೋಳಗೆ ತುಂಬದ ನಷ್ಟ ಎಂದು ಹೇಳಲಾಗುತ್ತಿದೆ.

ಕಾರಜೋಳ ತಮ್ಮ ರಾಜಕೀಯ ಜೀವನದುದ್ದಕ್ಕೂ ಸಂಘಪರಿವಾರದಿಂದ ಅಂತರ ಕಾಯ್ದುಕೊಂಡು ಬಂದಿದ್ದಾರೆ. ಪಕ್ಷದ ಚಿಹ್ನೆಯನ್ನು ಅವಲಂಬಿಸಿಯೇ ಸಂಘಪರಿವಾರದ ಮತಗಳನ್ನು ಗಳಿಸಿದ್ದರು. ಆದರೆ ಈ ಬಾರಿ ಸಂಘ ಪರಿವಾರದ ಮತಗಳು ಬಿಜೆಪಿ ಕೈತಪ್ಪಿ, ಪಕ್ಷೇತರನ ಪಾಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಬಿಜೆಪಿಯ ಸ್ಟಾರ್ ಪ್ರಚಾರಕರಾದ ನರೇಂದ್ರ ಮೋದಿ ಅವರು ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದರೆ, ಮತ್ತೆ ಈ ಲೆಕ್ಕಾಚಾರಗಳು ಬದಲಾಗುವ ಸಾಧ್ಯತೆ ಇದೆ.

ಜಿಲ್ಲೆಯ ಚಾಣಾಕ್ಷ ರಾಜಕಾರಣಿಯಾಗಿರುವ ಕಾರಜೋಳ ಅವರು ಗೆಲ್ಲಲು ಯಾವ ಯಾವ ತಂತ್ರ ಹೂಡುತ್ತಾರೆ ಎನ್ನುವುದನ್ನು ಊಹಿಸುವುದು ಕಷ್ಟ. ಈಗಾಗಲೇ ಕ್ಷೇತ್ರದಲ್ಲಿ ;ಇದು ನನ್ನ ಕೊನೆಯ ಚುನಾವಣೆ ಎಂದು ಹೇಳುವ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳಲು ಕಾರಜೋಳ ಮುಂದಾಗಿದ್ದಾರೆ.

ಸತತ ಸೋಲಿನ ಹೊಡೆತಕ್ಕೆ ಬೆಂಡಾದತಿಮ್ಮಾಪೂರ; ಅನುಕಂಪ ತೋರಲಿದ್ದಾರಾ ಮತದಾರರು?

1989ರ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದತಿಮ್ಮಾಪೂರ, ಒಟ್ಟು ಆರು ಬಾರಿ ಮುಧೋಳ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ನಾಲ್ಕು ಬಾರಿ ಸೋಲು ಕಂಡಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದ ಸಮಯದಲ್ಲಿ ತಿಮ್ಮಾಪೂರ ಅವರು ಎಂಎಲ್‌ಸಿಯಾಗಿದ್ದರು. ಆ ವೇಳೆ 2016ರಿಂದ 2018ರ ವರೆಗೆ ಅಬಕಾರಿ ಸಚಿವರಾಗಿದ್ದರು.

ಸ್ಪರ್ಧಿಸಿದ ಪ್ರತಿ ಚುನಾವಣೆಯಲ್ಲೂ ಪ್ರಬಲ ಪೈಪೋಟಿಯನ್ನೇ ಕೊಟ್ಟಿರುವತಿಮ್ಮಾಪೂರ ಅವರು ಕ್ಷೇತ್ರದಲ್ಲೂ ಒಳ್ಳೆಯ ಹೆಸರು ಗಳಿಸಿದ್ದಾರೆ; ಜನಸಂಪರ್ಕದಿಂದ ಯಾವತ್ತೂ ದೂರ ಉಳಿದಿಲ್ಲ. ಇಷ್ಟೊಂದು ಸೋಲುಕಂಡ ಬಳಿಕವೂ ಸ್ಪರ್ಧೆ ಮಾಡುತ್ತಿರುವತಿಮ್ಮಾಪೂರ ಅವರಿಗೆ ಈ ಬಾರಿ ಜನರ ಅನುಕಂಪ ವರವಾಗಲಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ತಿಮ್ಮಾಪುರ ಅವರು ಪ್ರತಿಬಾರಿಯೂ ದಲಿತ ಸಮುದಾಯದ ಮತಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತಾ ಬಂದಿದ್ದಾರೆ. ಆದರೆ, ಈ ಬಾರಿ ಒಳಮೀಸಲಾತಿ ಜಾರಿ ಮಾಡಿದ ಕಾರಣಕ್ಕೆ ದಲಿತ ಮತದಾರರ ಒಂದು ಭಾಗ ಬಿಜೆಪಿಯತ್ತ ವಾಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈವರೆಗೂ ರೆಡ್ಡಿ ಸಮುದಾಯದ ಮತಗಳನ್ನು ಸೆಳೆಯಲುತಿಮ್ಮಾಪೂರ ಹಿಂದೆಬಿದ್ದಿದ್ದರು. ಹಾಗಾಗಿಯೇ ಪ್ರತಿ ಬಾರಿ ಕಡಿಮೆ ಅಂತರದಲ್ಲಿ ಪರಾಭವಗೊಳ್ಳುತ್ತಿದ್ದರು. ಆದರೆ ಈ ಬಾರಿ ರೆಡ್ಡಿ ಸಮುದಾಯದ ಹಲವು ಜನರುತಿಮ್ಮಾಪೂರರ ಮೇಲೆ ಅನುಕಂಪ ತೋರುತ್ತಿದ್ದು, ಅದು ಎಷ್ಟರ ಮಟ್ಟಿಗೆ ಅನುಕೂಲವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಕಾರಜೋಳ ಸೋಲಿಗೆ ಕಾರಣವಾಗ್ತಾರಾ ಪಕ್ಷೇತರ ಅಭ್ಯರ್ಥಿ?

ಪಕ್ಷೇತರ ಅಭ್ಯರ್ಥಿಯಾಗಿರುವ ಸತೀಶ್ ಬಂಡಿವಡ್ಡರ್ ಅವರಿಗೆ 2018ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ನೀಡಲಾಗಿತ್ತು. ಆದರೆ ಭಾರೀ ಅಂತರದಲ್ಲಿ ಸೋಲು ಕಂಡಿದ್ದರು. 2023ರ ಚುನಾವಣೆಗೂ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಟಿಕೆಟ್ ಕೈತಪ್ಪಿತು. ಟಿಕೆಟ್ ಸಿಗದಿದ್ದರೂ ಪಕ್ಷದಲ್ಲೇ ಉಳಿಯುವುದಾಗಿ ಹೇಳಿದ್ದರು. ಆದರೆ ಇದೀಗ ಇದ್ದಕ್ಕಿಂದತೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದಾರೆ.

ಸತೀಶ್ ಬಂಡಿವಡ್ಡರ್ ಸ್ಪರ್ಧೆ ಮೇಲ್ನೋಟಕ್ಕೆ ಕಾಂಗ್ರೆಸ್‌ನಿಂದ ಬಂಡಾಯವೆದ್ದು ತಮ್ಮ ಮೂಲ ಪಕ್ಷಕ್ಕೆ ಹೊಡೆತ ಕೊಡುತ್ತದೆಂದು ಅನಿಸುತ್ತದೆ. ಆದರೆ ಅದು ಅಂತಿಮ ಸತ್ಯವಲ್ಲ. ಸತೀಶ್ ಬಂಡಿವಡ್ಡರ್ ಅವರನ್ನು ರಾಜಕೀಯವಾಗಿ ಮುನ್ನೆಲೆಗೆ ತಂದಿದ್ದು ರೆಡ್ಡಿ ಸಮುದಾಯ, ಈಗ ಪಕ್ಷೇತರರಾಗಿ ಸ್ಪರ್ಧೆ ಮಾಡಲು ಅದೇ ಸಮುದಾಯ ಕೆಲಸ ಮಾಡಿದೆ ಎಂದು ಹೇಳಲಾಗಿದೆ. ರೆಡ್ಡಿ ಸಮುದಾಯದ ಕೆಲವು ನಾಯಕರು ಈ ಭಾಗದಲ್ಲಿ ಕಾರಜೋಳಗೆ ಸೋಲಿನ ರುಚಿ ತೋರಿಸಲು ಈ ಬಾರಿ ಬಂಡಿವಡ್ಡರ್‌ರನ್ನು ಕಣಕ್ಕಿಳಿಸಿದೆ ಎಂದು ಹೇಳಲಾಗಿದೆ. ಮತ್ತೊಂದೆಡೆ, ಸಂಘಪರಿವಾರವೂ ಬಹಿರಂಗವಾಗಿಯೇ ಬಂಡಿವಡ್ಡರ್ ಬೆಂಬಲಕ್ಕೆ ನಿಂತಿದೆ.

ಸತೀಶ್ ಬಂಡಿವಡ್ಡರ್ ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರೂ ಪ್ರಬಲ ಸ್ಪರ್ಧಾಳು ಏನಲ್ಲ; ಆದರೆ ಬಿಜೆಪಿ ಹಾಗೂ ಕಾಂಗ್ರೆಸ್ ಮತಗಳನ್ನು ಬಾಚಿಕೊಳ್ಳುವುದಂತೂ ಸತ್ಯ. ಅದರಲ್ಲೂ ಇವರ ಸ್ಪರ್ಧೆ ಕಾಂಗ್ರೆಸ್‌ಗಿಂತ ಬಿಜೆಪಿಗೆ ಹೆಚ್ಚಿನ ಆತಂಕ ತಂದಿದೆ ಎಂದು ಹೇಳಬಹುದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...