ಕಾಂಗ್ರೆಸ್‌ನ ಹಿರಿಯ ದಲಿತ ಮುಖಂಡ, ಮಾಜಿ ಕೇಂದ್ರ ಸಚಿವ ಕೆ.ಎಚ್ ಮುನಿಯಪ್ಪನವರು ರಾಜ್ಯ ರಾಜಕಾರಣಕ್ಕೆ ಕಾಲಿಟ್ಟಿದ್ದು, ಇಂದು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಸುದೀರ್ಘ ರಾಜಕೀಯ ಜೀವನದ ಇಣುಕು ನೋಟ ಇಲ್ಲಿದೆ.
ಅವಿಭಜಿತ ಕೋಲಾರ ಜಿಲ್ಲೆಯು ರಾಜ್ಯದಲ್ಲೆ ಅತ್ಯಂತ ಹೆಚ್ಚು ದಲಿತ ಸಮುದಾಯವಿರುವ ಜಿಲ್ಲೆಗಳಲ್ಲೊಂದು. ಹಾಗಾಗಿಯೇ ಕೋಲಾರ ಲೋಕಸಭಾ ಕ್ಷೇತ್ರವು ಎಸ್.ಸಿ. ಮೀಸಲು ಕ್ಷೇತ್ರವಾಗಿದೆ. ಕಂಬದಹಳ್ಳಿ ಹನುಮಪ್ಪ ಮುನಿಯಪ್ಪನವರು ಮಾಚ್ 07, 1948ರಂದು ಕೋಲಾರ ಜಿಲ್ಲೆಯ ಶಿಢ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿಯ ಹನುಮಪ್ಪ ಹಾಗೂ ವೆಂಕಟಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ದಲಿತ ಎಡಗೈ ಸಮುದಾಯದ ಕೆ.ಎಚ್ ಮುನಿಯಪ್ಪನವರು ವೃತ್ತಿಯಲ್ಲಿ ವಕೀಲರಾಗಿದ್ದ ಸಂದರ್ಭದಲ್ಲಿ ಈ ಹಿಂದೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಸಲ ಸಂಸದರಾಗಿ ಆಯ್ಕೆಯಾಗಿದ್ದ ಬ್ರಾಹ್ಮಣ ಸಮುದಾಯದ ವಿ.ಕೃಷ್ಣರಾವ್‌ರವರ ಆಪ್ತರಾಗಿದ್ದರು.
ಹಾಗಾಗಿ ದೆಹಲಿಯ ಕಾಂಗ್ರೆಸ್ ಮುಖಂಡರ ಪರಿಚಯವಿದ್ದ ಮುನಿಯಪ್ಪನವರು ರಾಜಕೀಯ ಪ್ರವೇಶಿಸಿ 1991 ರಲ್ಲಿ ಕೋಲಾರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಆನಂತರ 1996, 1998, 1999, 2004, 2009, 2014ರವರೆಗೂ ಸತತ ಏಳು ಬಾರಿ ಸಂಸದರಾಗಿ ಆಯ್ಕೆಯಾದ ಕೀರ್ತಿ ಅವರಿಗೆ ಸಲ್ಲುತ್ತದೆ.
2004ರಲ್ಲಿ ಸಾಗಾಣೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಸಚಿವರಾಗಿದ್ದ ಅವರು 2009ರಲ್ಲಿ ರೈಲ್ವೇ ಸಚಿವರಾದರು. ಆನಂತರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಮೊದಲ ಸೋಲು
ಕೆ.ಎಚ್ ಮುನಿಯಪ್ಪನವರಿಗೆ ಇಡೀ ಕೋಲಾರ ಜಿಲ್ಲೆಯ ಮೇಲೆ ತಮ್ಮದೇ ಹಿಡಿತ ಹೊಂದಿದ್ದಾರೆ. ಆದರೆ, ತಾಲೂಕುಗಳಲ್ಲಿ ಕಾಂಗ್ರೆಸ್ ವಿರುದ್ಧ ಇರುವ ಬೇರೆ ಪಕ್ಷದ ಎಂಎಲ್‌ಎಗಳು ಅಥವಾ ಎಂಎಲ್‌ಎ ಅಭ್ಯರ್ಥಿಗಳಿಂದ ಲೋಕಸಭಾ ಚುನಾವಣೆಗಳಿಗೆ ಬೆಂಬಲ ಪಡೆದು, ನಂತರದ ವಿಧಾನಸಭಾ ಚುನಾವಣೆಯಲ್ಲಿ ಸ್ವಪಕ್ಷೀಯರ ವಿರುದ್ಧವೇ ಕೆಲಸ ಮಾಡುತ್ತಾರೆ ಎಂಬ ಆರೋಪವು ಅವರ ಮೇಲಿದೆ. ಹಾಗಾಗಿ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಮುನಿಯಪ್ಪ ಬಣ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣ ಸಕ್ರಿಯವಾಗಿದೆ. ಮುನಿಯಪ್ಪನವರ ಮೇಲೆ ಕೋಪಗೊಂಡಿದ್ದ ಜಿಲ್ಲೆಯ ಕಾಂಗ್ರೆಸ್ ಶಾಸಕರು 2019ರ ಲೋಕಸಭಾ ಚುನಾವಣೆಯಲ್ಲಿ ಅವರ ವಿರುದ್ಧ ಕೆಲಸ ಮಾಡಿದ ಪರಿಣಾಮ ಮುನಿಯಪ್ಪನವರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋತರು. ಜಿಲ್ಲೆಯಲ್ಲಿನ ರಮೇಶ್ ಕುಮಾರ್ ಬಣವೇ ಅದಕ್ಕೆ ಕಾರಣ ಎಂದು ಕೋಪಿಸಿಕೊಂಡಿದ್ದ ಅವರು ಪಕ್ಷ ತೊರೆಯುವ ಸೂಚನೆ ಸಹ ನೀಡಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಸಮಾಧಾನ ಮಾಡಿತ್ತು. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಮನವೊಲಿಸಿ ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದರು. ಅದರ ಫಲವಾಗಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡ ಅವರು ಸಿದ್ದರಾಮಯ್ಯನವರ ಸಂಪುಟದ ಭಾಗವಾಗಿದ್ದಾರೆ.
ಮುನಿಯಪ್ಪನವರು ಸಚಿವರಾಗುವ ಮೂಲಕ ದೇವನಹಳ್ಳಿ ತಾಲ್ಲೂಕಿಗೆ ಮೊದಲ ಬಾರಿಗೆ ಮಂತ್ರಿ ಸ್ಥಾನ ದಕ್ಕಿದಂತಾಗಿದೆ. ಕೆ.ಎಚ್ ಮುನಿಯಪ್ಪನವರು ಸಿಎಂ ಸಿದ್ದರಾಮಯ್ಯನವರನ್ನು ಹೊರತುಪಡಿಸಿ ಸಚಿವ ಸಂಪುಟದಲ್ಲಿನ ಹಿರಿಯ ಮಂತ್ರಿಯಾಗಿದ್ದಾರೆ.
ಇದನ್ನೂ ಓದಿ: 2023ರ ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶದ ಪರಿಣಾಮಗಳು


