Homeಕರ್ನಾಟಕಕರಾವಳಿ: ಬೆಚ್ಚಿ ಬೀಳಿಸಿದ ಬುದ್ಧಿವಂತರ ಸೀಮೆಯ "ತಿರುಚು" ಫಲಿತಾಂಶ!

ಕರಾವಳಿ: ಬೆಚ್ಚಿ ಬೀಳಿಸಿದ ಬುದ್ಧಿವಂತರ ಸೀಮೆಯ “ತಿರುಚು” ಫಲಿತಾಂಶ!

- Advertisement -
- Advertisement -

ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಎರಡು ನಮೂನೆಯ ಫಲಿತಾಂಶ ಪ್ರಕಟವಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಅಸೆಂಬ್ಲಿ ಫಲಿತಾಂಶವನ್ನು ಒಟ್ಟಾರೆಯಾಗಿ ಗಮನಿಸಿದರೆ ಮುರುಟಿದ್ದ ಹಸ್ತದ ಎರಡ್ಮೂರು ಬೆರಳುಗಳು ಮೇಲೆದ್ದಂತೆ, ನಳನಳಿಸುತ್ತಿದ್ದ ಕಮಲದ ಕೆಲವು ದಳಗಳು ಉದುರಿದಂತೆ ಕಾಣಿಸುತ್ತದೆ. ಆದರೆ ದಕ್ಷಿಣ ಕನ್ನಡ ಹಾಗು ಉಡುಪಿಯ ಸೋಲು-ಗೆಲುವನ್ನು ಪ್ರತ್ಯೇಕವಾಗಿ ಅವಲೋಕಿಸಿದಾಗ “ಅವ್ಯಕ್ತ ಆತಂಕ”ದ ಭ್ರಮೆಯಿಂದ “ಬುದ್ಧಿವಂತ”ರು ಹಿಂದುತ್ವವನ್ನು ಅಪ್ಪಿಕೊಂಡಿರುವುದು ಸ್ಪಷ್ಟವಾಗುತ್ತದೆ. 2018ರ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ ಹಿಂದುತ್ವದ ಪ್ರಯೋಗಶಾಲೆ ಎಂಬ ಸಾಂಪ್ರದಾಯಿಕ ಛಾಪು ಮೂಡಿಸಿರುವ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೇಸರಿ ಪಾಳೆಯ ಕಳೆದುಕೊಂಡಿದ್ದು ಕೇವಲ ಒಂದೇ ಒಂದು ಸ್ಥಾನ; ಒಮ್ಮೊಮ್ಮೆಯಷ್ಟೇ ಹಿಂದುತ್ವ ಆವಾಹನೆ ಆಗುವ ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಬಿಜೆಪಿ ಕೈಯಿಂದ ಮೂರು ಕ್ಷೇತ್ರಗಳನ್ನು ಕಿತ್ತುಕೊಂಡಿದೆ.

2018ರ ಚುನಾವಣೆಯಲ್ಲಿ ದಕ್ಷಿಣ ಕನ್ನಡದ 8 ಕ್ಷೇತ್ರಗಳ ಪೈಕಿ ಉಳ್ಳಾಲ(ಮಂಗಳೂರು)ದಲ್ಲಿ ಕಾಂಗ್ರೆಸ್ ಗೆದ್ದಿದ್ದು ಬಿಟ್ಟರೆ ಉಳಿದೆಲ್ಲ ಕ್ಷೇತ್ರ ಬಿಜೆಪಿ ವಶವಾಗಿತ್ತು; ಉಡುಪಿಯ ಐದಕ್ಕೆ ಐದೂ ಸ್ಥಾನ ಬಿಜೆಪಿ ಬುಟ್ಟಿಗೆ ಬಿದ್ದಿತ್ತು. ಉತ್ತರ ಕನ್ನಡದಲ್ಲಿ ಹಳಿಯಾಳ ಮತ್ತು ಯಲ್ಲಾಪುರ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರದಲ್ಲಿ ಕಮಲ ಪಡೆ ಪಾರಮ್ಯ ಮೆರೆದಿತ್ತು. ಈ ಬಾರಿಯ ಚುನಾವಣಾ ಪೂರ್ವ ಅಥವಾ ಚುನಾವಣೋತ್ತರ ಸಮೀಕ್ಷೆಗಳಲ್ಲೂ ಸಹ ದಕ್ಷಿಣ ಕನ್ನಡ ಹಾಗು ಉಡುಪಿಯ 13 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ದೊಡ್ಡ ಲಾಭ ಆಗಬಹುದೆಂಬ ನಿರೀಕ್ಷೆಗಳೇನೂ ಇರಲಿಲ್ಲ. ಆಡಳಿತ ವಿರೋಧಿ ಅಲೆಯನ್ನೂ ಮೀರಿದ ಹಿಂದುತ್ವದ ಸೆಳೆತ ದಕ್ಷಿಣ ಕರಾವಳಿಯಲ್ಲಿ ಗುಪ್ತಗಾಮಿಯಾಗಿ ಇರುವುದನ್ನು ಅಂದಾಜಿಸಲಾಗಿತ್ತು. ಅದರಂತೆ ಉಡುಪಿಯ ಎಲ್ಲ ಕ್ಷೇತ್ರಗಳನ್ನು ಮತ್ತೆ ಗೆದ್ದುಕೊಂಡ ಸಂಘ ಪರಿವಾರ ದಕ್ಷಿಣ ಕನ್ನಡದ ಆರು ಕ್ಷೇತ್ರದಲ್ಲಿ ಕಾಂಗ್ರೆಸ್‌ಅನ್ನು ಸುಲಭವಾಗಿ ಹಿಮ್ಮೆಟ್ಟಿಸಿದೆ.

ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿರುವ ಉಳ್ಳಾಲದಲ್ಲಿ ಎಸ್‌ಡಿಪಿಐ ಸ್ಪರ್ಧೆಯನ್ನು ಬಳಸಿಕೊಂಡು ಗೆಲ್ಲುವ ಯೋಜನೆ ಕೇಸರಿ ಪಡೆ ಹಾಕಿತ್ತು. ಆದರೆ ಎಸ್‌ಡಿಪಿಐಯನ್ನು ಮುಸ್ಲಿಮರು ಹತ್ತಿರ ಬಿಟ್ಟುಕೊಳ್ಳದಿದ್ದರಿಂದ ಬಿಜೆಪಿ ಪರಿವಾರದ ಪ್ಲಾನ್ ಫ್ಲಾಪ್ ಆಯಿತು. ಸಂಘ ಪರಿವಾರದ ಗಟ್ಟಿ ನೆಲೆಯಾಗಿದ್ದ ಪುತ್ತೂರು ಟಿಕೆಟ್ ಹಂಚಿಕೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಎಡವಿದ್ದು ಕಾಂಗ್ರೆಸ್‌ಗೆ ಅನಿರೀಕ್ಷಿತ ಜಯ ತಂದುಕೊಟ್ಟಿದೆ. ಕ್ಷೇತ್ರದ ಹೊರಗಿನ (ಸುಳ್ಯ) ಅಪರಿಚಿತ ಮಹಿಳೆ ಆಶಾ ತಿಮ್ಮಪ್ಪ ಗೌಡರನ್ನು ತವರಲ್ಲಿ ಅಭ್ಯರ್ಥಿಯನ್ನಾಗಿಸಿದ್ದರಿಂದ ನಳಿನ್‌ಗೆ ಕೇಸರಿ ಸಂಘಟನೆಗಳ ಪ್ರಲ ವಿರೋಧ ಎದುರಾಯಿತು. ಉಗ್ರ ಹಿಂದುತ್ವದ “ಅಭಿಯಾನ”ಗಳ ಮುಂಚೂಣಿಯಲ್ಲಿ ಇರುತ್ತಿದ್ದ ಅರುಣ್‌ಕುಮಾರ್ ಪುತ್ತಿಲ ಬಂಡೆದ್ದು ಆಖಾಡಕ್ಕೆ ಇಳಿದಿದ್ದು ಬಿಜೆಪಿಗೆ ದುಬಾರಿಯಯಿತು. ಹಿಂದುತ್ವ ಪರಿವಾರದ ಮತ ವಿಭಜನೆಯಾಗಿ ಬಿಜೆಪಿ ಸೋಲುವಂತಾಯಿತು.

ದಕ್ಷಿಣ ಕರಾವಳಿ ಬುದ್ಧಿವಂತರ ಸೀಮೆ ಎಂದೇ ಪರಿಗಣಿತವಾಗಿರುವ ಪ್ರದೇಶ. ರಾಜ್ಯಾದ್ಯಂತ ಕೇಸರಿ ಪರಿವಾರವನ್ನು ಗುಡಿಸಿ ಗುಂಡಾಂತರ ಮಾಡಿರುವ ಆಡಳಿತ ವಿರೋಧಿ ಅಲೆ ಜಾಣರ ತುಳುನಾಡಿನಲ್ಲೇಕೆ ಪರಿಣಾಮ ಬೀರಿಲ್ಲ? ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಉತ್ತರ ಕನ್ನಡದಲ್ಲಿ ತಿರಸ್ಕೃತವಾದ ಹಿಂದುತ್ವದ ಹಿಕಮತ್ತು ಆರ್ಥಿಕ-ಶೈಕ್ಷಣಿಕವಾಗಿ ತೀರಾ ಮುಂದುವರಿದಿರುವ ಪಕ್ಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅದು ಹೇಗೆ ವರ್ಕ್‌ಔಟ್ ಆಯಿತು? ಇಡೀ ಕರ್ನಾಟಕ ಒಂದು ದಿಕ್ಕಿಗೆ ಹೋದರೆ ಅವಿಭಜಿತ ದಕ್ಷಿಣ ಕನ್ನಡ ತದ್ವಿರುದ್ಧ ದಿಕ್ಕಿಗೆ ಸಾಗಿದ್ದು ಹೇಗೆ? ಎಂಬ ಜಿಜ್ಞಾಸೆ ಕರಾವಳಿಲಿ ಈಗ ಶುರವಾಗಿದೆ.

ಈ ಪ್ರಶ್ನೆಗಳಿಗೆ ಉತ್ತರ ಅಷ್ಟು ಸುಲಭವಾಗಿ ಸಿಗದು. ವೈದಿಕವಾದಿ ಹುನ್ನಾರಗಳ ಜಾಡು ಹಿಡಿದು ಹೋದರಷ್ಟೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ, ಧರ್ಮಕಾರಣ ಆಕ್ರಮಣಕಾರಿಯಾಗಿ ಬೆಳೆಯಲು ಕಾರಣವೇನೆಂಬುದು ಸ್ಪಷ್ಟವಾಗುತ್ತದೆ. ಆರ್ಥಿಕ ಪ್ರಗತಿ ಕಾಣದಿರುವ ಉತ್ತರ ಕನ್ನಡಕ್ಕಿಂತ ಮಹತ್ತರ ಔದ್ಯೋಗಿಕ, ಶೈಕ್ಷಣಿಕ, ಆರ್ಥಿಕ ಬದಲಾವಣೆಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಮಾಚಾರ, ಮೂಢನಂಬಿಕೆ, ದೈವ-ದೇವ ಭೀತಿ, ಅಜಲು ಪದ್ಧತಿ, ಪಂಕ್ತಿ ಭೇದವೇ ಮುಂತಾದ ಸಾಮಾಜಿಕ ತಾರತಮ್ಯ ಜಾಸ್ತಿ; ಆರ್ಥಿಕ-ಶೈಕ್ಷಣಿಕವಾಗಿ ಬಲಗೊಂಡಿರುವ ಟಿಪಿಕಲ್ ಮಧ್ಯಮ ವರ್ಗ ಹೆಚ್ಚಿದೆ. ಒಂಥರಾ ಕನ್‌ಫ್ಯೂಷನ್‌ಗೆ ಒಳಗಾದಂತಿರುವ ಈ ಪ್ರದೇಶದಲ್ಲಿ ಸಹಜವಾಗಿಯೇ ವೈದಿಕ ಹುನ್ನಾರಗಳು ಸಲೀಸಾಗಿ ಫಲಿಸುತ್ತಿವೆ. ನಾಜೂಕಾಗಿ ಪುರೋಹಿತಶಾಹಿ ತಂತ್ರಗಾರಿಕೆ ಪ್ರಯೋಗಿಸಿ ದ.ಕ. ಮತ್ತು ಉಡುಪಿ ಹಿಂದುತ್ವದ ವಶೀಕರಣಕ್ಕೆ ಒಳಗಾಗುವಂತೆ ಮಾಡಲಾಗಿದೆ ಎಂದು ಸಮಾಜ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಅಯೋಧ್ಯೋತ್ತರ ರಾಜಕೀಯ ಕೇಸರಿ ಪಡೆಯ ಕಪಿಮುಷ್ಠಿಗೆ ಸಿಲುಕಿದೆ. ಬೂತ್ ಮಟ್ಟದಲ್ಲಿ ಚುನಾವಣೆಗಳನ್ನು ಮೈಕ್ರೋಮ್ಯಾನೇಜ್ ಮಾಡುವ ಸಂಘ ಪರಿವಾರ ಕೆಳಮಟ್ಟದಲ್ಲಿ ಅರ್ಪಣಾಭಾವದ ವಿಸ್ತೃತ ಕಾರ್ಯಕರ್ತರ ಪಡೆ ಸೃಷ್ಟಿಯಾಗುವಂತೆ ನೋಡಿಕೊಂಡಿದೆ. ಅಸುರಕ್ಷತತೆಯ ಮೂಲದ ತತ್ವ-ಪಕ್ಷ ನಿಷ್ಠೆ ಮಧ್ಯಮ ಮತ್ತು ಮೇಲು ಮಧ್ಯಮ ವರ್ಗದ ನಡುವೆ ವ್ಯಾಪಕವಾಗಿ ವ್ಯಾಪಿಸಿದೆ. ಈ ಕರ್ಮಠತೆ ಯಾವ ಮಟ್ಟ ತಲುಪಿದೆ ಎಂದರೆ, ಗ್ಯಾಸ್ ಸಿಲೆಂಡರ್ ಬೆಲೆ 2,000 ರೂ. ಆಗಲಿ, ಪೆಟ್ರೋಲ್ ರೇಟ್ ಲೀಟರಿಗೆ ಬೇಕಿದ್ದರೆ ರೂ.200 ಆಗಲಿ; ಹಿಂದುತ್ವ ನಿಷ್ಠೆ ಬಿಡಬಾರದು ಎಂಬಂಥ ವಿವೇಚನಾಶೂನ್ಯತೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಆವರಿಸಿದೆ. ಈ ವಿಕ್ಷಿಪ್ತ ಅಸುರಕ್ಷತೆಯ ಭಾವನೆಗಳನ್ನು ಜಿಹಾದ್, ಹಿಜಾಬ್, ಹಲಾಲ್, ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ, ಟಿಪ್ಪು, ಮುಂತಾದ ಭಾವಾವೇಷದ ಅತಿರೇಕಗಳ ಮೂಲಕ ಸಂಘ ಸರದಾರರು ಕಾಪಾಡಿಕೊಂಡು ಬಂದಿದ್ದಾರೆ.

ಅಭ್ಯರ್ಥಿ ಯಾರೇ ಇರಲಿ; ಆತನ ಮುಖ ನೋಡಬೇಡಿ. ಮೋದಿ ಮುಖ ನೋಡಿ ಮತ ಕೊಡಿ; ಹಿಂದುತ್ವ ಉಳಿಸಲು ಮತ ಕೊಡಿ; ಮನೆಯ ಹೆಣ್ಣುಮಕ್ಕಳ ಸಂರಕ್ಷಿಸಿಕೊಳ್ಳಬೇಕೆಂದಿದ್ದರೆ ಗಟಾರ, ರಸ್ತೆಯಂಥ ಸಣ್ಣ-ಪುಟ್ಟ ಬೇಡಿಕೆ ಬದಿಗಿಟ್ಟು ಬಿಜೆಪಿಗೆ ಓಟು ಹಾಕಿರಿ ಎನ್ನುತ್ತ ಸಂಘ ಪರಿವಾರ ಚುನಾವಣೆ ಮಾಡಿತ್ತು. ಈ “ಪ್ರಚಾರ”ದ ಮುಂದೆ ಆಡಳಿತ ವಿರೋಧಿ ಅಲೆ, ಸ್ಥಳೀಯ ಸಮಸ್ಯೆ-ಸಂಕಟಗಳೆಲ್ಲ ಲೆಕ್ಕಕ್ಕೇ ಬರಲಿಲ್ಲ!

ಅಸುರಕ್ಷತೆಯ ಅಂಜಿಕೆ ಮತ್ತು ಅವ್ಯಕ್ತದ ಆತಂಕ ಹುಟ್ಟುಹಾಕಿ ಬಿಜೆಪಿ ಬೆಳೆಸುತ್ತಿರುವ ಸಂಘ ಶ್ರೇಷ್ಠರಿಗೆ ಸ್ಥಳೀಯ ಕಾಂಗ್ರೆಸ್‌ನ ತಾತ್ವಿಕ ಬದ್ಧತೆಯ ನಾಯಕತ್ವದ ಕೊರತೆ ನೆರವಾಗಿದೆ. ಅವಳಿ ಜಿಲ್ಲೆಯ ಅಯೋಧ್ಯೋತ್ತರ ರಾಜಕೀಯ ರಂಗದಲ್ಲಿ ಕಾಂಗ್ರೆಸ್‌ನ ತ್ರಿಮೂರ್ತಿ ದಿಗ್ಗಜರಾದ ವೀರಪ್ಪ ಮೊಯ್ಲಿ, ಜನಾರ್ದನ ಪೂಜಾರಿ ಮತ್ತು ಆಸ್ಕರ್ ಫರ್ನಾಂಡಿಸ್ ವೈಷಮ್ಯ ತಾರಕ ತಲುಪಿತು. ಈ ಮದ್ದಾನೆಗಳ ಗುದ್ದಾಟದಲ್ಲಿ ಕಾಂಗ್ರೆಸ್ ನಜ್ಜುಗುಜ್ಜಾಯಿತು. ಈ ಕಿತ್ತಾಟ ಅನುಕೂಲಕರವಾಗಿ ಸಂಘ ಪರಿವಾರದ “ಚಿಂತನ ಚಿಲುಮೆ” ಬಳಸಿಕೊಂಡಿತು. ಈಗ ಕಾಂಗ್ರೆಸ್ ಚುನಾವಣೆಯಲ್ಲಿ ದುಡಿಯುವ ಪೇಯ್ಡ್ ತಂಡಗಳ ಮೇಲೆ ಅವಲಂಬಿತ ಪಕ್ಷವಾಗಿದೆ; ಚುನಾವಣೆಗೆ ಬೇಕಾದಷ್ಟೆ ಸಂಘಟನೆ ಮಾಡುವ, ಧರ್ಮ-ಜಾತಿ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳ ಹುಡುಕಾಟ ನಡೆಸುವ ಕಾಂಗ್ರೆಸ್ ಬಿಜೆಪಿಯ ಹಿಂದುತ್ವ ಕೇಡರ್ ಎದುರು ಕಂಗೆಡುತ್ತಿದೆ. ಕೇವಲ ಲೀಡರ್ ಬೇಸ್ಡ್ ಪಕ್ಷವಾಗಿರುವ ಕಾಂಗ್ರೆಸ್‌ಗೆ ಬಿಜೆಪಿಯ ಮೈಕ್ರೋ ಮ್ಯಾನೇಜ್‌ಮೆಂಟ್‌ನ ಆಳಕ್ಕೆ ಹೋಗಲಾಗದೆ ಮಕಾಡೆ ಬೀಳುತ್ತಿದೆ. ಕಾಂಗ್ರೆಸ್ಸಿಗೆ ಮತದಾರರಿದ್ದಾರೆ; ಆದರೆ ಮತ ಕ್ರೋಢೀಕರಿಸುವ ವಿಶ್ವಾಸಾರ್ಹ ನಾಯಕತ್ವ ಇಲ್ಲದಾಗಿದೆ.

ಕಡು ಕೇಸರಿ ದಕ್ಷಿಣ ಕನ್ನಡ

ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣ ಎರಡೂ ಕ್ಷೇತ್ರಗಳಲ್ಲಿ ಬಹುತೇಕ ಒಂದೇ ತೆರನಾದ ಮತೀಯ ರಾಜಕೀಯ ನೆಲೆಯಾಗಿತ್ತು. ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಮುಸ್ಲಿಮ್ ಸಮುದಾಯದ ಇನಾಯತ್ ಅಲಿಯವರನ್ನು ಅಭ್ಯರ್ಥಿಯನ್ನಾಗಿಸಿದರೆ, ಮಂಗಳೂರು ದಕ್ಷಿಣದಲ್ಲಿ ಮಾಜಿ ಶಾಸಕ ಜೆರಾಲ್ಡ್ ಲೋಬೋರನ್ನು ನಿಲ್ಲಿಸಿತ್ತು. ಕಾಂಗ್ರೆಸ್‌ನ ಅಲ್ಪಸಂಖ್ಯಾತ ಹುರಿಯಾಳುಗಳನ್ನು ಕಂಡೊಡನೆ ’ಹಿಂದು’ ಮತಗಳನ್ನು ಜಿದ್ದಿನಿಂದ ಧ್ರುವೀಕರಣ ಆಗುವ “ವಾತಾವರಣ” ಸಂಘ ಪರಿವಾರ ನಿರ್ಮಾಣಮಾಡಿ ಅದ್ಯಾವುದೋ ಕಾಲವಾಗಿಹೋಗಿದೆ. ಇದೆಲ್ಲ ಗೊತ್ತಿದ್ದರೂ ಕಾಂಗ್ರೆಸ್ ಸೋಷಿಯಲ್ ಇಂಜಿನಿಯರಿಂಗ್ ನಡೆಸದೆ ಇದ್ದದ್ದು ಬಿಜೆಪಿಗೆ ಫಾಯ್ದೆ ಮಾಡಿದೆ ಎಂದು ಚುನಾವಣಾ ಚಾಣಕ್ಯರು ಹೇಳುತ್ತಾರೆ.

ನಿರೀಕ್ಷೆಯಂತೆ ಈ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಜನಸಾಮಾನ್ಯರಿಗೆ ಪ್ರಯೋಜನಕ್ಕೆ ಬಾರದ ಭರತ್ ಶೆಟ್ಟಿ 32,922 ಮತದಿಂದ ಮತ್ತು ವೇದವ್ಯಾಸ ಕಾಮತ್ 23,962 ಮತದಂತರದಿಂದ ಗೆಲುವು ಸಾಧಿಸಿದ್ದಾರೆ.

ಕ್ಷೇತ್ರದ ಸಕಲ ಜಾತಿ-ಧರ್ಮದವರೊಂದಿಗೆ ಒಡನಾಡುವ ಕಾಂಗ್ರೆಸ್‌ನ ಯು.ಟಿ.ಖಾದರ್‌ರನ್ನು ಉಗ್ರ ಹಿಂದುತ್ವದಿಂದಲೂ ಸೋಲಿಸಲಾಗದೆಂಬುದು ಸಂಘ ಸರದಾರರಿಗೂ ಗೊತ್ತಿತ್ತು. ಬಹುಸಂಖ್ಯಾತ ಬಿಲ್ಲವ ಸಮುದಾಯದ ಸತೀಶ ಕುಂಪಲರನ್ನು ಬಿಜೆಪಿ ಆಖಾಡಕ್ಕೆ ಇಳಿಸಿತ್ತು. ಅವಿಭಜಿತ ದಕ್ಷಿಣ ಕನ್ನಡದಲ್ಲಿ ತಮಗೆ ಏಕೈಕ ಸವಾಲಾಗಿರುವ ಖಾದರ್ ಸುತ್ತ ಸಂಘ ಪರಿವಾರ ಕೇಸರಿ ಚಕ್ರವ್ಯೂಹ ನಿರ್ಮಿಸಿತ್ತು. ಎಸ್‌ಡಿಪಿಐಗೆ ಪರೋಕ್ಷವಾಗಿ ಕುಮ್ಮಕ್ಕು ಕೊಡಲಾಗಿತ್ತು. ಎಸ್‌ಡಿಪಿಐ 15,154 ಮತ ಪಡೆದಿದೆಯಾದರೂ ಖಾದರ್ ನಾಗಾಲೋಟಕ್ಕೆ ತೊಂದರೆಯೇನಾಗಿಲ್ಲ. 22,790 ಮತದಂತರದಿಂದ ಶಾಸಕನಾಗಿರುವ ಜನಾನುರಾಗಿ ಖಾದರ್ ಸತತ ಐದನೇ ಬಾರಿ ದಿಗ್ವಿಜಯ ಸಾಧಿಸಿದಂತಾಗಿದೆ.

ಯು.ಟಿ.ಖಾದರ್‌

ಬಂಟ್ವಾಳದಲ್ಲಿ ಬಿಜೆಪಿ ಹುರಿಯಾಳು ಹಾಲಿ ಶಾಸಕ ರಾಜೇಶ್ ನಾಯ್ಕ್ ಮತ್ತು ಕಾಂಗ್ರೆಸ್‌ನ ಮಾಜಿ ಮಂತ್ರಿ ರಮಾನಾಥ್ ರೈ ನಡುವೆ ಸಮಬಲದ ಹೋರಾಟವಾಗುವ ಅಂದಾಜಿತ್ತು. ರಮಾನಾಥ್ ರೈ ಪ್ರಬಲ ಪೈಪೋಟಿ ಕೊಟ್ಟರಾದರೂ ಹಿಂದುತ್ವದ ಅಲೆಯಲ್ಲಿ ಕೊಚ್ಚಿಹೋಗಿದ್ದಾರೆ. ಕಳೆದೈದು ವರ್ಷ ವ್ಯರ್ಥವಾಗಿ ಕಳೆದರೂ 8,282 ಮತದಂತರದಿಂದ ಗೆಲುವು ಕಂಡಿರುವ ರಾಜೇಶ್ ನಾಯ್ಕ್ ದಕ್ಷಿಣ ಕನ್ನಡದಲ್ಲಿ ನೆಲೆನಿಂತಿರುವ ಧರ್ಮಕಾರಣದ ಪಕ್ಕಾ ಫಲಾನುಭವಿ ಎನ್ನಲಾಗುತ್ತಿದೆ.

ಬಿಜೆಪಿ ಟಿಕೆಟ್ ಕಮಿಟಿ ಸ್ಥಳೀಯರನ್ನು ಕಡೆಗಣಿಸಿ ಕ್ಷೇತ್ರದಾಚೆಯ ಸುಳ್ಯದ ಜಿಪಂ ಮಾಜಿ ಅಧ್ಯಕ್ಷೆ ಆಶಾ ಗೌಡರನ್ನು ಪುತ್ತೂರಿನಲ್ಲಿ ಕಣಕ್ಕಿಳಿಸಿದಾಗಲೇ ಸೋಲು ಖಚಿತ ಎಂಬ ಮಾತು ವ್ಯಾಪಕವಾಗಿತ್ತು. ಇದು ನಿಜವಾಗಿದೆ. ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್ ಪುತ್ತಿಲರ ಬೆನ್ನಿಗೆ ಸ್ವಜಾತಿ ಬ್ರಾಹ್ಮಣ ಲಾಬಿ ಪ್ರಬಲವಾಗಿ ನಿಂತಿತ್ತು. ಆದರೆ ಕ್ಷೇತ್ರದ ಬಹುಸಂಖ್ಯಾತ ಅರೆ ಭಾಷೆ ಗೌಡರ ಮತ ಹೆಚ್ಚು ಪಡೆಯಲಾಗಲಿಲ್ಲ. ಪುತ್ತಿಲ ಬಿಜೆಪಿ ಬುಟ್ಟಿಯಿಂದ ಮತ ತೆಗೆದಂತೆ ಕಾಂಗ್ರೆಸ್‌ನ ಅಶೋಕ್‌ಕುಮಾರ್ ರೈ ಗೆಲುವಿನ ಸಾಧ್ಯತೆ ಹೆಚ್ಚುತ್ತಾ ಹೋಯಿತು. ಅಂತಿಮವಾಗಿ ರೈ 4,149 ಮತಗಳ ಅಂತರದಿಂದ ಗೆದ್ದು ಶಾಸಕ ಭಾಗ್ಯ ಕಂಡರು; ಸಂಸದ-ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಪ್ರತಿಷ್ಠೆಯ ಹಠಕ್ಕೆ ಬಿಜೆಪಿ ಒಂದು ಕ್ಷೇತ್ರ ಕಳೆದುಕೊಳ್ಳಬೇಕಾಯಿತೆಂಬುದು ದ.ಕನ್ನಡ ಬಿಜೆಪಿಯಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದೆ.

ಸುಮಾರು ಮೂರು ದಶಕದ ಹಿಂದೆ ದಿವಂಗತ ಪೇಜಾವರ ಸ್ವಾಮಿ ಕಾರಿಗೆ ಮುಸಲ್ಮಾನರು ಕಲ್ಲು ಹೊಡೆದರೆಂದು ಪುಕಾರು ಹಬ್ಬಿಸಿ ಕೋಮುಗಲಭೆ ಹುಟ್ಟುಹಾಕಿದ ನಂತರ ಸುಳ್ಯ ಬಿಜೆಪಿಯ ಭದ್ರ ಕೋಟೆಯಾಗಿ ಮಾರ್ಪಟ್ಟಿತು. ಆ ನಂತರ ಮಂತ್ರಿ ಅಂಗಾರ ಸ್ಥಳೀಯ ಬಿಜೆಪಿ ಯಜಮಾನರಾದ ಪ್ರಬಲ ಅರೆಭಾಷೆ ಗೌಡ ಸಮುದಾಯದ ಮುಂದಾಳುಗಳ ಮರ್ಜಿ ಕಾಯುತ್ತ ಆರು ಬಾರಿ ಗೆಲುವು ಸಾಧಿಸಿದ್ದರು. ಈ ಬಾರಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಒತ್ತಾಸೆಯಿಂದ ಜಿಪಂನ ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯರಿಗೆ ಅವಕಾಶ ಕೊಡಲಾಗಿತ್ತು. ಆರಂಭದಲ್ಲಿ ಬಿಜೆಪಿಯಲ್ಲಿ ಅಸಮಾಧಾನವಿತ್ತಾದರೂ ಹಿಂದುತ್ವ ಅಜೆಂಡಾ ಒಂದಾಗಿಸಿತ್ತು.

ಕಾಂಗ್ರೆಸಲ್ಲಿ ಬೇಗುದಿ ಜೋರಾಗಿತ್ತು. ನಂದಕುಮಾರ್ ಮತ್ತು ಕೃಷ್ಣಪ್ಪರಿಗೆ ಟಿಕೆಟ್ ಆಸೆ ಹುಟ್ಟಿಸಿ ಕಾಂಗ್ರೆಸ್‌ನ ದೊಡ್ಡವರು ಅಖಾಡಕ್ಕೆ ಬಿಟ್ಟು ಎಡವಟ್ಟು ಮಾಡಿಕೊಂಡಿದ್ದರು. ಇಬ್ಬರೂ ಟಿಕೆಟ್ ಸಿಗುವ ಆಸೆಯಿಂದ ಕೋಟಿಗಳ ಲೆಕ್ಕದಲ್ಲೇ ಖರ್ಚು ಮಾಡಿದ್ದರು. ಕೊಡಗು ಮೂಲದ ನಂದಕುಮಾರ್‌ಗೆ ಜನಬೆಂಬಲ ಜಾಸ್ತಿಯಿತ್ತು. ಆದರೆ ಡಿಕೆಶಿ ಬಲದಿಂದ ಕೃಷ್ಣಪ್ಪ ಹುರಿಯಾಳಾದರು. ಹೊರನೋಟಕ್ಕೆ ಒಂದಾಗಿ ಕಾಣಿಸಿಕೊಂಡರೂ ಕಾಲೆಳೆದಾಟ ನಡೆದೇ ಇತ್ತು. ಮೊದಲೇ ಹಿಂದುತ್ವದ ಆಡುಂಬೊಲವಾದ ಸುಳ್ಯದಲ್ಲಿ ಕಾಂಗ್ರೆಸ್‌ನ ಅಸಮಾಧಾನ ಬೆರೆತು ಬಿಜೆಪಿಯ ಭಾಗೀರಥಿ ಮರುಳ್ಯರಿಗೆ 30,874 ಮತದಂತರದ ಭರ್ಜರಿ ಜಯ ತಂದುಕೊಟ್ಟಿದೆ.

ಬೆಳ್ತಂಗಡಿಯಲ್ಲಿ ಹಣ ಮತ್ತ ಹಿಂದುತ್ವ ಹದವಾಗಿ ಬೆರೆಸಿ ಬಿಜೆಪಿಯ ಹರೀಶ್ ಪೂಂಜಾ ಗೆಲುವು ಸಾಧಿಸಿದ್ದಾರೆಂಬ ಮಾತು ಸಾಮಾನ್ಯವಾಗಿದೆ. ಚುನಾವಣೆಗೆ ಎರಡು ದಿನ ಇರುವಾಗಲೂ ಕಾಂಗ್ರೆಸ್‌ನ ರಕ್ಷಿತ್ ಶಿವರಾಮ್ ಶಾಸಕ ಪೂಂಜಾ ಜತೆ ಕತ್ತು-ಕತ್ತಿನ ಕಾದಾಟದಲ್ಲಿದ್ದರು. ಯಾರು ಬೇಕಿದ್ದರೂ ಸಣ್ಣ ಅಂತರದಲ್ಲಿ ಗೆಲ್ಲಬಹುದೆಂಬ ರೋಚಕತೆ ಸೃಷ್ಟಿಯಾಗಿತ್ತು. ಆದರೆ ಪೂಂಜಾ 18,216 ಮತದಂತರದಿಂದ ಪುನರಾಯ್ಕೆ ಆಗಿದ್ದಾರೆ. ಬಿಲ್ಲವರು ಹೆಚ್ಚಿರುವ ಈ ಕ್ಷೇತ್ರದಲ್ಲಿ ಮುಸ್ಲಿಮರೂ ಗಣನೀಯವಾಗಿದ್ದಾರೆ. ಈ ಕ್ಯಾಸ್ಟ್ ಕೆಮಿಸ್ಟ್ರಿ ಪ್ರಕಾರ ಬಿಲ್ಲವರ ರಕ್ಷಿತ್ ತುಂಬ ಸಲೀಸಾಗಿ ಗೆಲ್ಲಬೇಕು. ಬಿಲ್ಲವ ಸಮುದಾಯದ ಹುಡುಗರು ಹಿಂದುತ್ವದ ಮೋಡಿಯಿಂದ ಹೊರಬಂದಿದ್ದಾರೆಂಬ ಮಾತು ಸಹ ಕೇಳಿಬಂದಿತ್ತು. ಆದರೆ ಫಲಿತಾಂಶ ನೋಡಿದರೆ ಬಿಲ್ಲವ ಯುವಸಮೂಹ ಸ್ವಜಾತಿ ಅಭ್ಯರ್ಥಿಯನ್ನೂ ಕಡೆಗಣಿಸುವಷ್ಟು ಹಿಂದುತ್ವದ ಸೆಳೆತದಲ್ಲಿದ್ದಾರೆಂಬುದು ಖಾತ್ರಿಯಾಗುತ್ತದೆ. ಪ್ರಬಲ ಆಂಟಿ ಇನ್‌ಕಂಬೆನ್ಸ್ ಬಿಜೆಪಿಯ ಹರೀಶ್ ಪೂಂಜಗಿತ್ತು. ಆದರೆ ಹಿಂದುತ್ವ ಅದೆಲ್ಲವನ್ನು ಅರಗಿಸಿಕೊಂಡಿದೆ ಎನ್ನಲಾಗುತ್ತಿದೆ.

ಹರೀಶ್ ಪೂಂಜಾ

ಮೂಡಬಿದಿರೆಯಲ್ಲಿ ಕಾಂಗ್ರೆಸ್‌ನ ಮಿಥುನ್ ರೈ ಆರೆಂಟು ತಿಂಗಳಿಂದ “ಕ್ಷೇತ್ರ ಕಾರ್ಯ” ಮಾಡಿಕೊಂಡಿದ್ದರು. ಮಾಜಿ ಮಂತ್ರಿ ಅಭಯ್‌ಚಂದ್ರ ಜೈನ್ ಬೆನ್ನಿಗೆ ನಿಂತಿದ್ದರು. ಸ್ವಜಾತಿ ಬಂಟರು ಮತ್ತು ಮುಸ್ಲಿಮ್ ಮತ ಪಡೆದರೂ ಹಿಂದುತ್ವ ಮೋಡಿಗೊಳಗಾಗಿದ್ದ ಜೈನ ಮತ್ತಿತರ ಒಬಿಸಿ ಮತ ಪಡೆಯಲು ಮಿಥುನ್ ರೈ ವಿಫಲರಾದರು. ಮತ್ತೊಂದು ಚರ್ಚೆಯ ಪ್ರಕಾರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಎಮ್ಮೆಲ್ಸಿ ಐವಾನ್ ಡಿಸೋಜಾರಿಂದಾಗಿ ಕ್ರಿಶ್ಚಿಯನ್ ಮತಗಳಲ್ಲಿ ಒಂದು ಪಾಲು ತಟಸ್ಥವಾಗಿತ್ತು ಎನ್ನಲಾಗುತ್ತಿದೆ. ಕ್ಷೇತ್ರದಲ್ಲಿ ಅಭಯರ ಬಗೆಗಿರುವ ಅಸಮಾಧಾನ ರೈಗೆ ಮುಳುವಾಯಿತು ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಸಮಾನಾಂತರವಾಗಿ ಬಿಜೆಪಿಯ ಉಮಾನಾಥ್ ಕೊಟ್ಯಾನ್ ಬಹುಸಂಖ್ಯಾತ ಸ್ವಜಾತಿ ಬಿಲ್ಲವರ ಮತಗಳನ್ನು ಏಕಗಂಟಲ್ಲಿ ಪಡೆದರಷ್ಟೇ ಅಲ್ಲ, “ಹಣಾ”ಹಣಿಯಿಂದ ಇತರ ಓಬಿಸಿಗಳನ್ನು ಸೆಳೆಯಲು ಸಫಲರಾದರೆನ್ನಲಾಗಿದೆ. ಎಲ್ಲಕಿಂತ ಮಿಗಿಲಾಗಿ ಕೋಟ್ಯಾನರ 22,468 ಮತದಂತರದ ವಿಜಯದಲ್ಲಿ ಹಿಂದುತ್ವ ಜಾದೂವೇ ಪ್ರಮುಖವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಉಡುಪಿ: ಜನತಂತ್ರ ಅಣಕಿಸುತ್ತಿರುವ ಧರ್ಮಕಾರಣ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗದ್ದೇಗೆಲ್ಲುವ ಏಕೈಕ ಕ್ಷೇತ್ರ ಬೈಂದೂರು ಎಂಬ ಮಾತು ಆರಂಭದಿಂದಲೂ ಕೇಳಿಬರುತ್ತಿತ್ತು. ಕಳೆದ ಬಾರಿ ಸೋತ ದಿನದಿಂದ ಕಾಂಗ್ರೆಸ್‌ನ ಗೋಪಾಲ ಪೂಜಾರಿ ಕ್ಷೇತ್ರದ ಕಷ್ಟ-ಸುಖಕ್ಕೆ ಸ್ಪಂದಿಸುತ್ತ ಓಡಾಡಿಕೊಂಡಿದ್ದರು. ಸ್ವಜಾತಿ ಬಿಲ್ಲವರ ಹುಡುಗರನ್ನು ಹಿಂದುತ್ವದ ಹಿಡಿತದಿಂದ ಹೊರತರಲು ಪ್ರಯತ್ನಿಸಿದ್ದರು. ಬಿಲ್ಲವರು ಈ ಬಾರಿ ಸಾರಾಸಗಟಾಗಿ ಪೂಜಾರಿ ಬೆನ್ನಿಗೆ ನಿಲ್ಲುತ್ತಾರೆಂಬ ವಾತಾವರಣ ಕಂಡುಬಂದಿತ್ತು. ಆದರೆ ಆರೆಸ್ಸೆಸ್ ಪ್ರಚಾರಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಗೆಲ್ಲಿಸಲು ಆರೆಸ್ಸೆಸ್‌ನ ಚುನಾವಣಾ ಪ್ರಚಾರದಲ್ಲಿ ನುರಿತ ಪಡೆ ನಾಗಪುರವೇ ಮುಂತಾದೆಡೆಯಿಂದ ಬಂದು ವ್ಯವಸ್ಥಿತ ತಂತ್ರಗಾರಿಕೆಯಲ್ಲಿ ನಿರತವಾಗಿತ್ತು ಎನ್ನಲಾಗುತ್ತಿದೆ.

ಈ ಕೇಡರ್ ಬೇಸ್ಡ್ ಪ್ರಚಾರದ ಮುಂದೆ ಕಾಂಗ್ರೆಸ್‌ನ ಚುನಾವಣೆಯಲ್ಲಷ್ಟೇ ಕಾಸಿಗಾಗಿ ದುಡಿಯುವವರ ತಂಡಗಳು ಸಪ್ಪ್ಪೆಯಾಗಿ ಹೋದವು. ಹಿಂದುತ್ವದ ಸದ್ದಿಲ್ಲದ ಸುನಾಮಿ ಅದೆಷ್ಟು ಬಿರುಸಾಯಿತೆಂದರೆ ಟಿಕೆಟ್ ನಿರಾಕರಣೆಯ ಅಸಮಾಧಾನದಲ್ಲಿ ಬುಸುಗುಡುತ್ತಿದ್ದ ಶಾಸಕ ಸುಕುಮಾರ ಶೆಟ್ಟರ ಸೊಲ್ಲಡಗಿಹೋಯಿತು. ಎರಡು ಮೂರು ರೌಂಡ್ ಮನೆ-ಮನೆ ಪ್ರಚಾರ ಮಾಡಿದ ಸಂಘಿ ಕಾರ್ಯಕರ್ತರು ಕಾಲಿಗೆ ಚಪ್ಪಲಿಯಿಲ್ಲದಿದ್ದರೂ ಕೋಟಿಗಳ ಆಸ್ತಿ-ವ್ಯವಹಾರ ಮಾಡುವ “ಬರಿಗಾಲಿನ ಸಂತ”ನನ್ನು 16,153 ಮತದಂತರದಿಂದ ಗೆಲ್ಲಿಸಿಕೊಂಡಿದ್ದಾರೆ.

ಕುಂದಾಪುರದಲ್ಲಿ ಬಿಜೆಪಿಯ ಕಿರಣ್‌ಕುಮಾರ್ ಕೊಡ್ಗಿಯನ್ನು ಗೆಲ್ಲಿಸುವುದು ಶಾಸಕ ಹಲಾಡಿ ಶ್ರಿನಿವಾಸ್ ಶೆಟ್ಟಿಗೆ ಪ್ರತಿಷ್ಠೆಯ ಸವಾಲಾಗಿತ್ತು. ಬಿಜೆಪಿ ಹೈಕಮಾಂಡ್ ನಿವೃತ್ತಿ ಒತ್ತಡ ಹಾಕಿದಾಗ ಹಾಲಾಡಿ ತನ್ನ ಗುರುವಿನ ಮಗ ಕಿರಣ್‌ಗೆ ಕೇಸರಿ ಟಿಕೆಟ್‌ನ ಷರತ್ತು ವಿಧಿಸಿದ್ದರು. ಬ್ರಾಹ್ಮಣ ಸಮುದಾಯುದ ಕಿರಣ್ ಸಂಘ ಶ್ರೇಷ್ಠರಿಗೆ ಸಹ್ಯವಾಗಿದ್ದರು. ಕುಂದಾಪುರ ಕಣ ಹೇಗೆಂದರೆ, ಬಹು ಸಂಖ್ಯಾತ ಬಂಟರು ಬ್ರಾಹ್ಮಣರಿಗೆ ಮತ ಹಾಕುವುದು ಕಷ್ಟ. ಕಿರಣ್ ತಂದೆ ಬಿಜೆಪಿ ಭೀಷ್ಮ ಎನಿಸಿದ್ದ ಎ.ಜಿ.ಕೊಡ್ಗಿಗೆ ಬಂಟರ ವಿಶ್ವಾಸ ಪಡೆಯಲಾಗಲಿಲ್ಲ.

ಐದು ಬಾರಿ ಎಮ್ಮೆಲ್ಲೆಯಾಗಿದ್ದ ಹಾಲಾಡಿ ಸ್ಪರ್ಧೆಗಿಳಿದಾಗೆಲ್ಲ ಜತೆಗಿರುತ್ತಿದ್ದ ಹೋಬಳಿ ಮಟ್ಟದ ಬಂಟರ ಲೀಡರ್‌ಗಳು ಕಾಣಿಸಲಿಲ್ಲ. ಕಾಂಗ್ರೆಸ್ ಕ್ಯಾಂಡಿಡೇಟ್ ಮೊಳಹಳ್ಳಿ ದಿನೇಶ್ ಹೆಗ್ಡೆ ಬಂಟರಾದ್ದರಿಂದ ಅತ್ತ ಸಹಜವಾಗೆ ವಾಲಿದ್ದರು. ಗಾಬರಿಗೆ ಬಿದ್ದ ಹಾಲಾಡಿ ಸ್ವಜಾತಿ ಬಂಟರನ್ನು ಒಲಿಸಿಕೊಳ್ಳುವ ತಂತ್ರಗಾರಿಕೆ ನಡೆಸಿದರು. ಜತೆಗೆ ಕೇಸರಿ ಬೇಸ್ ಓಟುಗಳು ಸೇರಿಕೊಂಡವು. ಕಾಂಗ್ರೆಸ್ ಹುರಿಯಾಳು ಒನ್ ಮ್ಯಾನ್ ಆರ್ಮಿಯಂತಾದರು. ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಆಸ್ಕರ್ ಫರ್ನಾಂಡಿಸ್‌ರಂತ ಕಾಂಗ್ರೆಸ್ ಘಟಾನುಘಟಿಗಳ ಉಡಾಫೆ ರಾಜಕಾರಣದಿಂದ ಕುಂದಾಪುರದಲ್ಲಿ ಕಾಂಗ್ರೆಸ್ ದುರ್ಬಲವಾಗಿದೆ. ಜನ ಸಂಪರ್ಕವಿಲ್ಲದ ತೆರೆಮರೆಯ ತಂತ್ರಗಾರಿಕೆಯಲ್ಲಿ ನಿಸ್ಸೀಮನೆನ್ನಲಾಗುತ್ತಿರುವ ಕಿರಣ್ ಕೊಡ್ಗಿ, ಹಾಲಾಡಿ ಮುಖಬೆಲೆಯಿಂದ 41,556 ಮತದಂತರದ ಗೆಲುವು ಕಾಣಲು ಸಾಧ್ಯವಾಗಿದೆ ಎಂದು ಕಟ್ಟಾ ಕಾಂಗ್ರೆಸ್ಸಿಗರು ಅಲವತ್ತುಕೊಳ್ಳುತ್ತಾರೆ.

ಯಶ್‌ಪಾಲ್ ಸುವರ್ಣ

ಉಡುಪಿ ಮತ್ತು ಕಾರ್ಕಳ ಹಿಂದುತ್ವ ಪ್ರಬಲ ನೆಲೆಗಳೆಂದು ಪರಿಗಣಿತವಾಗಿವ ಕ್ಷೇತ್ರಗಳು. ಕೌ ಬ್ರಿಗೇಡ್, ಜಾನುವಾರು ವ್ಯಾಪಾರಿ ಬ್ಯಾರಿಗಳನ್ನು ಅಟ್ಟಾಡಿಸಿ ಹಲ್ಲೆ ಮಾಡುವುದು, ಚಾಕು ಇರಿತ, ಮರಳು ಮಾಫಿಯಾ ದಂಧೆಯೇ ಮುಂತಾದ “ಕಲ್ಯಾಣ ಕಾರ್ಯಗಳಿಂದ ಕೇಸರಿ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದವರೆಂದು ಆರೋಪಿತರಾಗಿರುವ ಯಶ್‌ಪಾಲ್ ಸುವರ್ಣಗೆ ಬಿಜೆಪಿ ಟಿಕೆಟ್ ಘೋಷಿಸಿದಾಗ ಮತದಾರರಿಗೆ ತಪ್ಪು ಸಂದೇಶ ಹೋಗುತ್ತದೆಂಬ ನಿಷ್ಠಾವಂತ ಬಿಜೆಪಿಗರೇ ದಿಗಿಲುಗೊಂಡಿದ್ದರು. ಶಾಸಕ ರಘುಪತಿ ಭಟ್‌ಗೆ ಟಿಕೆಟ್ ನಿರಾಕರಿಸಿರುವುದು ಬ್ರಾಹ್ಮಣ, ಕೊಂಕಣಿ ಮತದಾರರಿಗೆ ಬೇಸರ ತಂದಿದೆ ಎನ್ನಲಾಗಿತ್ತು. ಈ ಅನಾನುಕೂಲಕರ ಅಂಶಗಳಲ್ಲ ಹಿಂದುತ್ವದ ಬಿರುಗಾಳಿಯಲ್ಲಿ ತೂರಿಹೋಗಿ ಹಿಜಾಬ್ ಹರಾಕಿರಿಯ ಹೀರೋ ಎನ್ನಲಾಗುತ್ತಿರುವ ಯಶ್‌ಪಾಲ್ ಸುವರ್ಣಗೆ 32,776 ಮತದಂತರದ ಜಯ ತಂದುಕೊಟ್ಟಿತು ಎಂಬ ಮಾತು ಕೇಳಿಬರುತ್ತಿದೆ.

ಕಾರ್ಕಳದಲ್ಲಿ ಹಿಂದುತ್ವ ಮಧ್ಯೆ ತ್ರಿಕೋನ ಕಾಳಗದ ಸನ್ನಿವೇಶ ಕಂಡುಬಂದಿತ್ತು. ಚಿಕ್ಕಮಗಳೂರಿನ ದತ್ತ ಅಭಿಯಾನದ ಬೈ ಪ್ರಾಡಕ್ಟ್-ಸಚಿವ ಸುನಿಲ್‌ಕುಮಾರ್‌ಗೆ ಶ್ರೀರಾಮಸೇನೆಯ ಸೇನಾಧಿಪತಿ ಪ್ರಮೋದ್ ಮುತಾಲಿಕ್ ಸೆಡ್ಡುಹೊಡೆದಿದ್ದರು; ಕಾಂಗ್ರೆಸ್ ಕ್ಯಾಂಡಿಡೇಟ್ ಮುನಿಯಾಲು ಉದಯ್‌ಕುಮರ್ ಶೆಟ್ಟಿಯೂ ಹಿಂದುತ್ವದೊಂದಿಗೆ ಗುರುತಿಸಿಕೊಂಡವರೇ ಆಗಿತ್ತು. ಮುತಾಲಿಕ್ ಅಬ್ಬರ ಜೋರಾಗಿತ್ತು. ಮುತಾಲಿಕ್ ಗೆಲ್ಲುವುದಿಲ್ಲ; ಆದರೆ ಬಿಜೆಪಿಯ ಸುನಿಲ್‌ಗೆ ಕಂಟಕಕಾರಿ ಆಗುತ್ತಾರೆಂದು ಭಾವಿಸಲಾಗಿತ್ತು. ಮುತಾಲಿಕ್ 10 ಸಾವಿರ ಓಟು ಪಡೆದರೆ ಮಾತ್ರ ಕಾಂಗ್ರೆಸ್ ಗೆಲ್ಲುತ್ತದೆಂಬ ಲೆಕ್ಕಾಚಾರ ಹಾಕಲಾಗಿತ್ತು. ಇದು ನಿಜವಾಗಿದೆ. ಮುತಾಲಿಕ್ 4,508 ಮತ ಪಡೆಯುವಷ್ಟರಲ್ಲೇ ಸುಸ್ತಾಗಿಹೋಗಿದ್ದಾರೆ. ಹಾಗಾಗಿ ಸುನಿಲ್ ಕೇವಲ 4,602 ಮತದಿಂದ ಬಚಾವಾಗಲು ಸಾಧ್ಯವಾಯಿತು ಎಂಬ ರಣರೋಚಕ ಚರ್ಚೆಗಳು ಕರಾವಳಿಯ ರಾಜಕೀಯ ಪಡಸಾಲೆಯಲ್ಲಿ ನಡೆದಿದೆ.

ಇದನ್ನೂ ಓದಿ: ಹಳೇ ಮೈಸೂರು ಪ್ರಾಂತ್ಯದಲ್ಲಿ ಬೀಸಿದ ಕಾಂಗ್ರೆಸ್ ಅಲೆ

ಕಾಪು ಕಾಂಗ್ರೆಸ್‌ನ ಭರವಸೆಯ ಕ್ಷೇತ್ರವಾಗಿತ್ತು. ಇದಕ್ಕೆ ಕೆಲವು ತರ್ಕಗಳೂ ಇದ್ದವು. ಕಾಪು ಬಿಲ್ಲವ ಬಾಹುಳ್ಯದ ಕ್ಷೇತ್ರ; ಕಳೆದ ಬಾರಿ ಸೋತಿದ್ದ ಮಾಜಿ ಮಂತ್ರಿ ವಿನಯಕುಮಾರ್ ಸೊರಕೆ ಕಳೆದೈದು ವರ್ಷದಿಂದ ಕ್ಷೇತ್ರದಿಂದ ಕದಲಲಿಲ್ಲ; ಬಿಜೆಪಿ ಶಾಸಕ ಲಾಲಾಜಿ ಮೆಂಡನ್ ಜನರ ಕೈಗೆಟುಕದೆ ಓಡಾಡಿಕೊಂಡಿದ್ದರೆ, ಮಾಜಿ ಶಾಸಕ ಸೊರಕೆ ಕ್ಷೇತ್ರದ ಕಷ್ಟ-ಸುಖದ ಜೊತೆಯಾಗಿದ್ದರು. ಆದರೆ ಇದ್ಯಾವುದೂ ಸೊರಕೆಯ ಕೈ ಹಿಡಿಯಲಿಲ್ಲ. ಎಸ್‌ಡಿಪಿಐನಿಂದ ತೊಂದರೆ ಆಗಬಹುದೆಂದು ಲೆಕ್ಕ ಹಾಕಲಾಗಿತ್ತು. ಆದರೆ ಎಸ್‌ಡಿಪಿಐ 1,616 ಮತವನ್ನಷ್ಟೇ ಪಡೆದಿದೆ; ಹಿಂದುತ್ವ ಸೊರಕೆ ಸೋಲಿಗೆ ಪ್ರಮುಖ ಕಾರಣವಾಗಿದೆ. ಕಳೆದ ಹತ್ತು ವರ್ಷದಿಂದ ಬಿಜೆಪಿ ಟಿಕೆಟ್‌ಗೆ ಕಾದುಕೂತಿದ್ದ ಕೋಟ್ಯಾಧೀಶ ಹೋಟೆಲಿಯರ್ ಗುರ್ಮೆ ಸುರೇಶ್ ಶೆಟ್ಟಿ ಸಂಘ ಪರಿವಾರದ ಹೊಸ ಮುಖಗಳ ಅನ್ವೇಷಣೆಯಲ್ಲಿ ಅಚಾನಕ್ ಕೇಸರಿ ಟಿಕೆಟ್ ಪಡೆದಿದ್ದರು. ಹಣ ಹಾಗು ಹಿಂದುತ್ವ ಬಲದಿಂದ ಗರ್ಮೆ ಶೆಟ್ಟಿ 13,004 ಮತದಂತರದಿಂದ ಶಾಸಕರಾಗಿದ್ದಾರೆ ಎಂದು ತರ್ಕಿಸಲಾಗುತ್ತಿದೆ.

ಉತ್ತರ ಕನ್ನಡ: ಬಿಜೆಪಿ ಬುಡ ಅಲುಗಾಡಿಸಿದ ಕಾಂಗ್ರೆಸ್

ಉತ್ತರ ಕನ್ನಡದ ಆರು ಕ್ಷೇತ್ರದಲ್ಲಿ ಕುಮಟಾ ಒಂದನ್ನು ಬಿಟ್ಟು ಉಳಿದೈದು ಕಡೆ ಕಾಂಗ್ರೆಸ್ ಬಿಜೆಪಿಗೆ ಕಠಿಣ ಸವಾಲೆಸೆದಿತ್ತು. ಆಡಳಿತ ವಿರೋಧಿ ಅಲೆ, ಅವ್ಯವಹಾರದ ಆರೋಪ ಮತ್ತು ಒಳೇಟಿನಿಂದ ಅಷ್ಟೂ ಕಡೆ ಬಿಜೆಪಿ ತತ್ತರಿಸಿಹೋಗಿತ್ತು. ಆರು ಬಾರಿ ಶಾಸಕನಾಗಿದ್ದ ಕಾಗೇರಿ ಹೆಗಡೆ ಮತ್ತು ಮಂತ್ರಿ ಹೆಬ್ಬಾರ್ ರಣರಂಗದಲ್ಲಿ ಹೈರಾಣಾಗಿ ಹೋಗಿದ್ದರು. 2018ರ ಇಲೆಕ್ಷನ್‌ಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ ಎರಡು ಸ್ಥಾನ ಹೆಚ್ಚಿಸಿಕೊಂಡಿದೆ. 2019ರ ಆರೇಷನ್ ಕಮಲ ಕಸರತ್ತಿನಲ್ಲಿ ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್ ಬಿಜೆಪಿ ಸೇರಿ ಬೈ ಇಲೆಕ್ಷನ್‌ನಲ್ಲಿ ಶಾಸಕ-ಮಂತ್ರಿ ಆಗಿದ್ದರು. ಆ ಲೆಕ್ಕಾಚಾರದಂತೆ ಕಾಂಗ್ರೆಸ್ ಮೂರು ಸ್ಥಾನ ಹೆಚ್ಚು ಪಡೆದಿದೆ. ತೀರಾ ಸಣ್ಣ ಅಂತರದಲ್ಲಿ ಯಲ್ಲಾಪುರದಲ್ಲಿ ಕಾಂಗ್ರೆಸ್ ಸೋತು ಗೆದ್ದಿದೆ. ಕೇಂದ್ರದ ಮಾಜಿ ಮಂತ್ರಿ ಮಾರ್ಗರೆಟ್ ಆಳ್ವರ ಪತ್ರ ವ್ಯಾಮೋಹ ಮತ್ತು ಕಾಂಗ್ರೆಸ್ ಹೈಕಮಾಂಡ್‌ನ ಮಾರ್ಗರೆಟ್ ಆಳ್ವ ಮೋಹದಿಂದ ಕುಮಟಾದಲ್ಲಿ ಕಾಂಗ್ರೆಸ್ ಗೆಲ್ಲುವ ಅವಕಾಶ ತಪ್ಪಿಸಿಕೊಂಡಿದೆ ಎನ್ನಲಾಗುತ್ತಿದೆ.

ಹಳಿಯಾಳದಲ್ಲಿ ಹಳೆ ಹುಲಿ ಆರ್.ವಿ.ದೇಶಪಾಂಡೆ 3,623 ಮತಗಳ ತೀರಾ ಸಣ್ಣ ಅಂತರದಲ್ಲಿ ಬಚಾವಾಗಿದ್ದಾರೆ. ಇದು ದೇಶಪಾಂಡೆಯವರ 9ನೇ ಗೆಲುವು. ಮರಾಠ ಪ್ರಾಬಲ್ಯದ ಹಳಿಯಾಳದಲ್ಲಿ ಮೈಕ್ರೋಸ್ಕೋಪಿಕ್ ಮೈನಾರಟಿಯ ಕೊಂಕಣಿ (ಜಿಎಸ್‌ಬಿ) ಸಮುದಾಯದ ದೇಶಪಾಂಡೆ 10 ಸಲ ಸ್ಪರ್ಧಿಸಿ ಒಮ್ಮೆ ತಾವೇ ಸಾಕಿ ಸಲುಹಿದ ಸ್ವಜಾತಿ ಹುಡುಗನ ಕೈಲಿ ಸೋತಿದ್ದು ಬಿಟ್ಟರೆ ಉಳಿದೆಲ್ಲ ಸಲ ಗೆದ್ದಿದ್ದಾರೆ. ಈ ಬಾರಿಯೂ ದೇಶಪಾಂಡೆಗೆ 2004ರಿಂದ ಸಾಂಪ್ರದಾಯಿಕ ಎದುರಾಳಿಯಂತಾಗಿರುವ ಈ ಸುನೀಲ್ ಹೆಗ್ಡೆಯೇ ಮುಖಾಮುಖಿಯಾಗಿದ್ದರು. ಬಹುಸಂಖ್ಯಾತ ಮರಾಠರು ಕೇಸರಿ ಕಡೆ ಆಕರ್ಷಿತರಾಗಿದ್ದಾರೆಂಬ ಕಾರಣಕ್ಕೆ ಬಿಜೆಪಿ ಸುನೀಲ್ ಗೆಲ್ಲುತ್ತಾರೆಂಬ ಲೆಕ್ಕಾಚಾರಗಳಿದ್ದವು.

ಆದರೆ ಯಾವಾಗ ದೇಶಪಾಂಡೆಯವರ ಅತ್ಯಾಪ್ತನಾಗಿದ್ದ ಮಾಜಿ ಎಮ್ಮೆಲ್ಸಿ ಶ್ರೀಕಾಂತ್ ಘೋಟನೇಕರ್ ತಿರುಗಿಬಿದ್ದು ಜೆಡಿಎಸ್‌ನಿಂದ ಸ್ಪರ್ಧಿಸಿದರೋ ಆಗ ಅಖಾಡದ ಪಟ್ಟುಗಳೇ ಬದಲಾಗಿಹೋಯಿತು. ನೇರ ಕಾಳಗವಾಗಿದ್ದರೆ ದೇಶಪಾಂಡೆಗೆ ಗೆಲುವು ಕಷ್ಟವಾಗುತ್ತಿತ್ತು ಎನ್ನಲಾಗಿದೆ. ಜೆಡಿಎಸ್‌ನ ಘೋಟನೇಕರ್ ಬಿಜೆಪಿಗೆ ಹೋಗುತ್ತಿದ್ದ ದೇಶಪಾಂಡೆ ವಿರೋಧಿ ಮತದಲ್ಲಿ ಪಾಲು ಪಡೆದರು. ಘೋಟನೇಕರ್ 28,814 ಮತ ಪಡೆದ್ದು ಬಿಜೆಪಿಗೆ ಗೆಲುವಿನ ಸಾಧ್ಯತೆ ಕಡಿಮೆಮಾಡಿ ದೇಶಪಾಂಡೆಗೆ ಲಾಭ ಮಾಡಿತು. ಮತ್ತೊಂದೆಡೆ ಮುಸ್ಲಿಮರ ಓಟು ಘೋಟನೇಕರ್‌ಗೆ ಸೆಳೆಯಲಾಗಲಿಲ್ಲ. ಏಕಗಂಟಲ್ಲಿ ಮುಸಲ್ಮಾನರ ಮತ ಗಿಟ್ಟಿಸಿದ ದೇಶಪಾಂಡೆ ಗೆಲುವಿನ ದಡ ತಲುಪಿದರು.

ಕಾರವಾರದಲ್ಲಿ ಶಾಸಕಿ-ಬಿಜೆಪಿಯ ರೂಪಾಲಿ ನಾಯ್ಕ್ ಮತ್ತು ಮಾಜಿ ಶಾಸಕ-ಕಾಂಗ್ರೆಸ್‌ನ ಸತೀಶ್ ಸೈಲ್ ನಡುವೆ ನೇರ-ನಿಕಟ “ಹಣಾ”ಹಣಿ ನಡೆಯಿತು. ಸ್ವಪಕ್ಷದ ಒಳೇಟು ಮತ್ತು ಶತ್ರು ಪಕ್ಷದ ನೇರ ಹೊಡೆತವನ್ನು ರೂಪಾಲಿ ಎದುರಿಸಬೇಕಾಯಿತು. ರೂಪಾಲಿ ಏಕಾಂಗಿಯಾಗಿ ಸೆಣಸಾಡಿದರು.

ಮಾಜಿ ಶಾಸಕ ಗಂಗಾಧರ್ ಭಟ್ ಮತ್ತು ಮಾಜಿ ಮಂತ್ರಿ ಆನಂದ ಅಸ್ನೋಟಿಕರ್ ಅನುಯಾಯಿ-ಜಿಪಂ ಮಾಜಿ ಸದಸ್ಯೆ ಚೈತ್ರಾ ಕೊಠಾರ್‌ಕರ್‌ರನ್ನು ಕಣಕ್ಕಿಳಿಸಿ ರೂಪಾಲಿಗೆ ಹೋಗುವ ಮತ ಕಟ್ ಮಾಡುವ ಪ್ರಯತ್ನ ಮಾಡಲಾಯಿತು. ರೂಪಾಲಿಯ ಹಿತಶತ್ರುಗಳ ಈ ತಂತ್ರಗಾರಿಕೆ ಯಶಸ್ವಿಯೂ ಆಯಿತು. ಜೆಡಿಎಸ್‌ನ ಚೈತ್ರಾ ಪಡೆದ 2,864 ಮತ ಮತ್ತು ಬಂಡಾಯ ಬಿಜೆಪಿಯ ಗಂಗಾಧರ್ ಭಟ್ ಪಡೆದ ಸ್ವಜಾತಿ(ಸೊನಗಾರ)ಯ 2,141 ಮತ ಬಿಜೆಪಿಯ ರೂಪಾಲಿಯ ಸೋಲಿಗೆ ಸಾಕಾಯಿತು. ಕಾಂಗ್ರೆಸ್‌ನ ಸೈಲ್ 2,415 ಮತದಿಂದ ರೂಪಾಲಿಯವರನ್ನು ಮಣಿಸಿ ಅಂತೂ ಎಮ್ಮೆಲ್ಲೆ ಆದರು!

ಕುಮಟಾದಲ್ಲಿ ಸುಲಭವಾಗಿ ಗೆಲ್ಲುವ ಅವಕಾಶವನ್ನು ಕಾಂಗ್ರೆಸ್‌ನ ದೊಡ್ಡವರು ಕೈಯ್ಯಾರೆ ಕೆಡಿಸಿಕೊಂಡಿದ್ದರು. ಚುನಾವಣೆಗೆ ಹತ್ತು ದಿನವಿರುವಾಗ ನಿವೇದಿತ್‌ಗೆ ಸೆಣಸಾಟ ಸಾಧ್ಯವಿಲ್ಲ ಎನಿಸಿತು. ಕಾಂಗ್ರೆಸ್ ಕಚೇರಿ ಖಾಲಿಬಿತ್ತು. ಶುರುವಿನಲ್ಲಿ ತ್ರಿಕೋನ ಕಾಳಗದ ಕಣ ಎನಿಸಿದ್ದ ಕುಮಟಾ-ಹೊನ್ನಾವರ ಕ್ಷೇತ್ರದಲ್ಲಿ ಅಂತಿಮವಾಗಿ ಬಿಜೆಪಿ ಶಾಸಕ ದಿನಕರ ಶೆಟ್ಟಿ ಮತ್ತು ಜೆಡಿಎಸ್‌ನ ಸೂರಜ್ ನಾಯ್ಕ್ ನಡವೆ ನೇರ ಜಿದ್ದಾಜಿದ್ದಿ ಆಯಿತು.

ಪ್ರಬಲ ಆಡಳಿತ ವಿರೋಧಿ ಚಂಡಮಾರುತ, ಅಪಾರ ಆಸ್ತಿ ಗಳಿಕೆ ಆರೋಪ ಮತ್ತು ಸಂಘ ಪರಿವಾರದ ಒಳೇಟುಗಳಿಂದ ಕ್ಷಣಕ್ಷಣಕ್ಕೆ ಬಿಜೆಪಿಯ ದಿನಕರ ಶೆಟ್ಟಿ ಕಳೆಗುಂದಿದರೆ, ಜೆಡಿಎಸ್‌ನ ಸೂರಜ್ ನಾಯ್ಕ್ ಎರಡು ಸಲ ಸೋತ, ಬಿಜೆಪಿ ಮೋಸ ಮಾಡಿತೆಂಬ ಮತ್ತು ಹಿಂದುತ್ವ ನಂಬಿ ವಾರಗಟ್ಟಲೆ ಜೈಲಲ್ಲಿ ಉಳಿದು ಬಂದರೆಂಬ ಸಿಂಪಥಿಯಿಂದ ಬಲಾಢ್ಯರಾಗುತ್ತ ಸಾಗಿದರು. ಆದರೆ ಚಂದಾವರ ಚರ್ಚ್ ಮತ್ತು ಮಸೀದಿ ದಾಳಿ ಪ್ರಕರಣದ ಕಹಿಯಿಂದಾಗಿ ಮುಸಲ್ಮಾನರು ಸೂರಜ್ ನಂಬುವ ಸ್ಥಿತಿಯಲ್ಲಿರಲಿಲ್ಲ.

ಕೊನೆಯ ಹಂತದವರೆಗೆ ದಿನಕರ ಶೆಟ್ಟಿಯೆಂದರೆ ಮೂಗುಮುರಿಯುತ್ತಿದ್ದ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಹವ್ಯಕ ಬ್ರಾಹ್ಮಣರು ರಾಮಚಂದ್ರಾಪುರ ಮಠದ ಫರ್ಮಾನಿಗೆ ವಿಚಲಿತರಾದರು. ಆರಂಭದಿಂದಲೂ ದಿನಕರ ಶೆಟ್ಟಿಯನ್ನು ಮಾಜಿ ಮಾಡುವ ನಿರ್ಧಾರದಲ್ಲಿದ್ದ ಆರೆಸ್ಸೆಸ್ ನಿಷ್ಠ ಕೊಂಕಣಿಗರಿಗೆ ಕೊನೆಯ ಕ್ಷಣದಲ್ಲಿ ಪ್ರಬಲ ನಾಮಧಾರಿ ಪಂಗಡದ ಸೂರಜ್ ನಾಯ್ಕ್‌ಗಿಂತ ದುರ್ಬಲ ಗಾಣಿಗರ ದಿನಕರ ಶೆಟ್ಟಿಯೆ ಸಹ್ಯವಾಗಿ ಕಂಡರು. ಸ್ಥಳೀಯ ಅನಿವಾರ್ಯತೆಗಳು ಸೋಲಿನ ದವಡೆಯಲ್ಲಿದ್ದ ಬಿಜೆಪಿ ದಿನಕರ ಶೆಟ್ಟರನ್ನು ಕೇವಲ 673 ಮತದಿಂದ ಪಾರು ಮಾಡಿತು ಎಂಬ ಮಾತೀಗ ಕ್ಷೇತ್ರದ ರಾಜಕೀಯ ಕಟ್ಟೆಯಲ್ಲಿ ರೋಚಕ ಚರ್ಚೆಯ ಸಂಗತಿಯಾಗಿದೆ. ಮುಸ್ಲಿಮರ ವಿಶ್ವಾಸ ಗಳಿಸಿದ್ದರೆ ಸೂರಜ್ ನಾಯ್ಕ್ ಸೋಲುತ್ತಿರಲಿಲ್ಲ; ಸ್ಥಳೀಯರಿಗೆ ಕಣಕ್ಕಿಳಿಸಿದ್ದರೆ ಕಾಂಗ್ರೆಸ್ ಸುಲಭವಾಗಿ ಗೆಲ್ಲುತ್ತಿತೆಂದು ಚುನಾವಣಾ ಪಂಡಿತರು ಹೇಳುತ್ತಾರೆ.

ದಿನಕರ ಶೆಟ್ಟಿ

ಚುನಾವಣೆ ಘೋಷಣೆಗೂ ಆರು ತಿಂಗಳ ಮುಂಚಿಂದಲೇ ಕಾಂಗ್ರೆಸ್‌ನ ಮಾಜಿ ಎಮ್ಮೆಲ್ಲೆ ಮಂಕಾಳು ವೈದ್ಯ ಗೆಲ್ಲುತ್ತಾರೆಂಬ ಬಹುನಿರೀಕ್ಷೆ ಮೂಡಿಸಿದ್ದ ಕ್ಷೇತ್ರ ಭಟ್ಕಳ. ಕಳೆದ ಬಾರಿಯ ಪರೇಶ್ ಮೇಸ್ತ ಆಕಸ್ಮಿಕ ಸಾವನ್ನು ಹಿಂದುತ್ವದ ಹವಾ ಸೃಷ್ಟಿಗೆ ಬಿಜೆಪಿ ಬಳಸಿಕೊಂಡಾಗಲೂ ಮಂಕಾಳು ವೈದ್ಯ ತೀರಾ ಸಣ್ಣ ಅಂತರದಲ್ಲಿ ಸೋತಿದ್ದರು. ಸೋತ ಕ್ಷಣದಿಂದಲೇ ಕ್ಷೇತ್ರದ ಬೇಕು-ಬೇಡಗಳತ್ತ ಗಮನ ಹರಿಸುತ್ತಾ ಜನರೊಂದಿಗಿನ ಒಡನಾಟ ಮಂಕಾಳು ವೈದ್ಯ ಹೆಚ್ಚಿಸಿಕೊಂಡಿದ್ದರು. ನೊಂದವರಿಗೆ ವೈಯಕ್ತಿಕ ಸಹಾಯ ಮಾಡುತ್ತ ಸಮಷ್ಟಿಯ ಕೆಲಸಗಳನ್ನೂ ಆಸ್ಥೆಯಿಂದ ಮಾಡುವ ಮಂಕಾಳ ವೈದ್ಯ ಉತ್ತರ ಕನ್ನಡದ ವಿಶಿಷ್ಟ ಜನಪರ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದಾರೆ.

ಕಾಂಗ್ರೆಸ್‌ನ ವೈದ್ಯ ಬಿಜೆಪಿ ಎದುರಾಳಿ-ಶಾಸಕ ಸುನೀಲ್ ನಾಯ್ಕರನ್ನು 32,671 ಭರ್ಜರಿ ಮತದಂತರದಿಂದ ಹಿಮ್ಮೆಟ್ಟಿಸಿದ್ದಾರೆ.

ಕಾಂಗ್ರೆಸ್‌ನ ವೈದ್ಯ ಗೆದ್ದು ಭಟ್ಕಳಕ್ಕೆ ಬಂದಿಳಿದಾಗ ಸ್ವಾಗತಿಸಲು ಜಾತಿ, ಪಂಥ, ಧರ್ಮ ಮರೆತು ಸಾವಿರಾರು ಮಂದಿ ಸೇರಿದ್ದರು; ಇದರಲ್ಲಿ ಕೇಸರಿ ಪತಾಕೆಯ ಹಿಂದುತ್ವ ಸಂಘಟನೆಯವರು ಹೆಚ್ಚಿದ್ದದ್ದು ವಿಶೇಷವಾಗಿತ್ತು; ಹಸಿರು ಬಾವುಟದ ಮುಸಲ್ಮಾನರೂ ಸೇರಿದ್ದರು. ಕೋಮು ಸೂಕ್ಷ್ಮ ಪ್ರದೇಶ ಭಟ್ಕಳದಲ್ಲಿ ಕಾಂಗ್ರೆಸ್ ವಿಜಯೋತ್ಸವ ಅಪರೂಪದ ಸೌಹಾರ್ದ ಕಾರ್ಯಕ್ರಮದಂತಿತ್ತು ಎಂಬ ಶ್ಲಾಘನೆಗೆ ಪಾತ್ರವಾಗಿದೆ. ಅಲ್ಲಿಗೆ ಬಿಜೆಪಿಯ ನಕಲಿ ಹಿಂದುತ್ವದ ಅಸಲಿಯತ್ತು ಭಟ್ಕಳಿಗರಿಗೆ ಪಕ್ಕಾ ಆದಂತಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

2008ರ ಕ್ಷೇತ್ರ ಪುನರ್ ವಿಂಗಡಣೆ ಪೂರ್ವದಲ್ಲಿ ಬ್ರಾಹ್ಮಣ ಬಾಹುಳ್ಯದ ಅಂಕೋಲಾ ಕ್ಷೇತ್ರದಿಂದ ಮೂರು ಸಲ, ಆನಂತರ ಶಿರಸಿಯಿಂದ ಮೂರು ಬಾರಿ ಶಾಸಕನಾಗಿದ್ದ ಸಂಘ ಮೂಲದ ಬಿಜೆಪಿಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಾರಿ ಕಾಂಗ್ರೆಸ್ಸಿನ “ಸತತ ಸೋಲುಗಾರ” ಎನ್ನಲಾಗಿದ್ದ ಭೀಮಣ್ಣ ನಾಯ್ಕ್ ಎದುರು ಮಂಡಿಯೂರಬೇಕಾಗಿ ಬಂದಿದೆ. ಸೋಲಿಲ್ಲದ ಸರದಾರನಿಗೆ ಶಿರಸಿ-ಸಿದ್ದಾಪುರದ ಜನರು ಸೋಲಿನ ರುಚಿ ತೋರಿಸಿದ್ದಾರೆ.

ಭೀಮಣ್ಣ ನಾಯ್ಕ್

ದೀವರ ಒಂದು ವರ್ಗವನ್ನು ಎದುರು ಹಾಕಿಕೊಂಡಿದ್ದು ಮತ್ತು ಸ್ವಪಕ್ಷದ ಒಳೇಟು ಸೋಲಿಗೆ ಮೂಲವೆಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್‌ನಿಂದ ಸ್ವಜಾತಿ ಕ್ಯಾಂಡಿಡೇಟ್ ಕಣದಲ್ಲಿದ್ದರೂ ದೀವರ ಈ ತಂಡ ಸದಾ ಕಾಗೇರಿ ಪರವಿರುತ್ತಿತ್ತು. ಈ ಉಪಕಾರಕ್ಕೆ ಪ್ರತಿಯಾಗಿ ದೀವರಿಗೆ ಒಂದು ನಿಗಮ-ಮಂಡಳಿ ಹುದ್ದೆಯನ್ನೂ ಕಾಗೇರಿ ಕೊಡಿಸದೆ ಸ್ವಜಾತಿಯವರಿಗೆ ಸ್ಥಾನ-ಮಾನ ಸಿಗುವಂತೆ ನೋಡಿಕೊಂಡರೆಂಬ ಅಸಹನೆ ಕ್ಷೇತ್ರದಲ್ಲಿ ಮಡುಗಟ್ಟಿತ್ತು. ಸಂಸದ ಅನಂತ ಹೆಗಡೆಯೊಂದಿಗೆ ಕಾಗೇರಿ ಸಂಬಂಧ ಅಷ್ಟಕ್ಕಷ್ಟೆ ಆಗಿತ್ತು.ಕಾರ್ಯಕರ್ತರ ಸಂಪರ್‍ಕವೂ ಕಡಿಮೆಯಾಗಿತ್ತು. ಒಳಗಿನ-ಹೊರಗಿನ ವಿರೋಧಿಗಳೆಲ್ಲ ಒಂದಾಗಿ “ಈ ಬಾರಿ ಬದಲಾವಣೆ” ಎಂಬ ಗುಪ್ತ ಘೋಷ ವಾಕ್ಯ ಮುಂದಿಟ್ಟುಕೊಂಡು ಅಖಾಡಕ್ಕಿಳಿದಿದ್ದರು.

ಇದಕ್ಕೆ ಸಮಾನಾಂತರವಾಗಿ ಕಾಂಗ್ರೆಸ್‌ನಲ್ಲಿ ಎಂದೂ ಕಾಣದ ಒಗ್ಗಟ್ಟು ಮೂಡಿತ್ತು. ಮಧು ಬಂಗಾರಪ್ಪ ಮಾವ ಭೀಮಣ್ಣನನ್ನು ಗೆಲ್ಲಿಸಲು ದೀವರನ್ನು ಒಂದು ಮಾಡಿದ್ದರು. ಕಳೆದೆರಡು ದಶಕದಿಂದ ನಿರಂತರ ಸೋಲುಗಳನ್ನೇ ಅನುಭವಿಸಿದ್ದ ಕಾಂಗ್ರೆಸ್‌ನ ಭೀಮಣ್ಣ ನಾಯ್ಕ್‌ಗೆ ಅನುಕಂಪವೂ ಸೃಷ್ಟಿಯಾಗಿತ್ತು. ಬಂಗಾರಪ್ಪನವರ ಭಾಮೈದನಾದ ಭೀಮಣ್ಣ ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್‌ಗೆ ನಾಲ್ಕೈದು ಸಲ ಸ್ಪರ್ಧಿಸಿದರೂ ಗೆಲುವು ಕಂಡಿರಲಿಲ್ಲ. ಕಾಗೇರಿ ಬಗೆಗಿನ ಅಸಮಾಧಾನ ಮತ್ತು ದೀವರ “ಜಾಗೃತಿ”ಯಿಂದ ಭೀಮಣ್ಣ 9,067 ಮತದಂತರದಿಂದ ಗೆದ್ದು ಅಸೆಂಬ್ಲಿ ಪ್ರವೇಶ ಪಡೆದಿದ್ದಾರೆಂದು ತರ್ಕಿಸಲಾಗುತ್ತಿದೆ.

ಕಾಂಗ್ರೆಸ್‌ನಲ್ಲಿದ್ದರೆ ದೇಶಪಾಂಡೆ ಮಂತ್ರಿಯಾಗಲು ಬಿಡುವುದಿಲ್ಲ ಮತ್ತು ಅದಿರು ಅವ್ಯವಹಾರದ ಸಿಬಿಐ ಕೇಸಿನಿಂದ ಮಗನನ್ನು ಬಚಾಯಿಸಲು ಆಗದೆಂಬ ಕಾರಣಕ್ಕೆ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ್ದರೆಂದು ಆರೋಪಿಸಲಾಗಿದ್ದ ಯಲ್ಲಾಪುರದ ಶಿವರಾಮ್ ಹೆಬ್ಬಾರ್ ಮಂತ್ರಿಯೇನೋ ಆದರು. ಆದರೆ ಕ್ಷೇತ್ರದಲ್ಲಿ ಮಾತ್ರ ಮೂಲ ಬಿಜೆಪಿಗೆ ವಿರೋಧ ಎದುರಿಸಲಾಗದೆ ಹೈರಾಣಾಗಿದ್ದರು. ಕಟ್ಟರ್ ಬಿಜೆಪಿಗರು ಹೆಬ್ಬಾರ್‌ಗೆ ಕೇಸರಿ ಟಿಕೆಟ್ ಕೊಡಕೂಡದೆಂಬ ಒತ್ತಡವೂ ಹೈಕಮಾಂಡ್‌ಗೆ ಹಾಕಿದ್ದರು. ಚುನಾವಣೆಗೆ ಮೊದಲು ಮತ್ತೆ ಕಾಂಗ್ರೆಸ್ ಸೇರುವ ವಿಫಲ ಪ್ರಯತ್ನವು ಹೆಬ್ಬಾರ್ ಮಾಡಿದ್ದರೆಂಬ ಸುದ್ದಿಗಳು ಹಾರಾಡಿದ್ದವು.

ಮಾಜಿ ಶಾಸಕ-ಸಭ್ಯ ರಾಜಕಾರಣಿ ಎಂದೆ ಜನಾನುರಾಗಿಯಾಗಿರುವ ವಿ.ಎಸ್.ಪಾಟೀಲ್ ಐದಾರು ತಿಂಗಳ ಹಿಂದೆ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದಾಗಲೆ ಹೆಬ್ಬಾರ್ ಕಂಗಾಲಾಗಿದ್ದರು. ಗಣನೀಯ ಸಂಖ್ಯೆಯಲ್ಲಿರುವ ಲಿಂಗಾಯತ ಕೋಮಿನ ಪಾಟೀಲ್‌ಗೆ ಮುಂಡಗೋಡು ತಾಲೂಕಲ್ಲಿ ಪ್ರಬಲ ನೆಲೆಯಿತ್ತು. ಯಲ್ಲಾಪುರದಲ್ಲಿ ಆರೆಸ್ಸೆಸ್ ಸಿದ್ಧಾಂತ ಬದ್ಧತೆಯ ಸ್ವಜಾತಿ ಹವ್ಯಕರ ಬಳಗವೊಂದು ಹೆಬ್ಬಾರ್‌ಗೆ ಮಗ್ಗಲು ಮುಳ್ಳಾಗಿತ್ತು. ಮಗನ ದರ್ಬಾರು, ಆಂಟಿ ಇನ್‌ಕಂಬೆನ್ಸ್ ಮತ್ತು ಒಳೇಟುಗಳಿಂದ ಹೆಬ್ಬಾರ್ ರಣಕಣದಲ್ಲಿ ದಿನಕಳೆದಂತೆ ದುರ್ಬಲರಾದರೆ, ಕಾಂಗ್ರೆಸ್‌ನ ಪಾಟೀಲ್ ಬಗೆಗಿನ ಸಿಂಪತಿ ಹೆಚ್ಚುತ್ತಾ ಹೋಯಿತು. ಚುನಾವಣೆಗೆ ಎರಡು ದಿನವಿರುವಾಗ ಹೆಬ್ಬಾರ್‌ರ ಚುನಾವಣಾ ಕ್ಯಾಪ್ಟನ್-ಮಗ ವಿವೇಕ್ ಹೆಬ್ಬಾರ್ “ಹಣಾ”ಹಣಿ ಅಸ್ತ್ರ ಪ್ರಯೋಗ ಬಿರುಸುಗೊಳಿಸಿದರು. ಇದು ಬನವಾಸಿ ಹೋಬಳಿಯಲ್ಲಿ ಕೊಂಚ ವರ್ಕ್‌ಔಟ್ ಆಯಿತು. ಏದುಸಿರುಬಿಡುತ್ತಿದ್ದ ಹೆಬ್ಬಾರ್ 3,759 ಮತದ ತಿಣುಕಾಟದ ಗೆಲುವು ಪಡೆದು ನಿಟ್ಟುಸಿರುಬಿಟ್ಟರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. Good analysis .. But some wrong things also there.. people really not agree with freebies of congress manifesto. That’s why only Udupi and dakshina Kannada will get BJP lead..

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...