Homeಕರ್ನಾಟಕ2023ರ ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶದ ಪರಿಣಾಮಗಳು

2023ರ ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶದ ಪರಿಣಾಮಗಳು

- Advertisement -
- Advertisement -

ಕರ್ನಾಟಕದಲ್ಲಿ ಇತ್ತೀಚಿಗಷ್ಟೇ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪು ಬಿಜೆಪಿಯ ಕೇಂದ್ರೀಕರಣ ಮತ್ತು ಕೋಮು ಧ್ರುವೀಕರಣಾಧಾರಿತ ರಾಜಕಾರಣವನ್ನು ಮತ್ತು ಎಲ್ಲರನ್ನು ಒಳಗೊಳ್ಳದ, ಜನರನ್ನು ಹೊರಗಿಡುವ ಆರ್ಥಿಕ ಅಭಿವೃದ್ಧಿ ಮಾದರಿಯ ವಿರುದ್ಧದ ಜನಾದೇಶವಾಗಿದೆ. ಎಲ್ಲರನ್ನು ಒಳಗೊಳ್ಳುವ ರಾಜಕೀಯ ಮತ್ತು ಕಲ್ಯಾಣ-ಕೇಂದ್ರಿತ ಅಭಿವೃದ್ಧಿಯನ್ನು (welfare-centric development) ನೀಡುವ ಭರವಸೆಯ ಮೇಲೆ ಕಾಂಗ್ರೆಸ್ ಭಾರಿ ಗೆಲುವು ದಾಖಲಿಸಿದೆ. ಈ ಪ್ರಕ್ರಿಯೆಯಲ್ಲಿ, ರಾಜ್ಯ ರಾಜಕೀಯದಲ್ಲಿ ಎಡ-ಬಲಗಳ ನಡುವೆ ಸೆಂಟ್ರಿಸ್ಟ್ ನಿಲುವನ್ನು ಹೊಂದಿರುವ ಮೂರನೇ ಪಕ್ಷವಾದ ಜನತಾ ದಳ-ಎಸ್ (ಜೆಡಿಎಸ್) ಭಾರಿ ನಷ್ಟವನ್ನು ಅನುಭವಿಸಿದ್ದು, ಅದರ ಉಳಿವಿನ ಬಗ್ಗೆಯೇ ಸಂದೇಹಗಳು ಕೇಳಿಬರುತ್ತಿವೆ. ಚುನಾವಣಾ ಫಲಿತಾಂಶಗಳು ಎಲ್ಲಾ ಮೂರು ಪಕ್ಷಗಳು ತಮ್ಮ ಹಿಂದಿನ ನಡೆಗಳ ಬಗ್ಗೆ ಮರುಚಿಂತನೆ ನಡೆಸಲು ಮತ್ತು ಭವಿಷ್ಯಕ್ಕೆ ತನ್ನನ್ನು ತಾನು ಹೇಗೆ ಪ್ರಸ್ತುತಗೊಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತಿಸಲು ಒತ್ತಾಯಿಸುತ್ತದೆ. ರಾಜ್ಯ ರಾಜಕಾರಣದ ಈ ಮರುವ್ಯಾಖ್ಯಾನವು ರಾಜ್ಯದ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದ ಮೇಲೂ ಕೂಡ ದೊಡ್ಡ ಪರಿಣಾಮವನ್ನು ಉಂಟುಮಾಡಲಿದೆ.

ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಈ ರಾಜ್ಯದ ಕರಾವಳಿ ಪ್ರದೇಶವನ್ನು ಹೊರತುಪಡಿಸಿ ದೊಡ್ಡ ಹಿಡಿತವಿಲ್ಲ ಎಂಬುದು ಈ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಆದಾಗ್ಯೂ, ಹಿಂದುತ್ವವೇ ಬಿಜೆಪಿಯ ಮೂಲ ಸಿದ್ಧಾಂತವಾಗಿರುವ ಕಾರಣ ಹಾಗೂ ಅದರ ಮೂಲಕವೇ ಶೇ.36 ಮತದಾರರನ್ನು ಸೆಳೆಯಲು ಸಾಧ್ಯವಾಗಿರುವ ಬಿಜೆಪಿಯು ಹಿಂದುತ್ವವನ್ನು ಬಿಟ್ಟುಕೊಡುವ ಸಾಧ್ಯತೆಯಿಲ್ಲ. ಬಿಜೆಪಿಯ ರಾಜ್ಯ ಘಟಕದ ಮುಂದಿನ ಪೀಳಿಗೆಯ ನಾಯಕರುಗಳಲ್ಲಿ ಅನೇಕರು ಈ ತಂತ್ರದೊಂದಿಗೆ ಹೆಚ್ಚು ಗುರುತಿಸಿಕೊಂಡಿದ್ದಾರೆ. ಕೋಮು ರಾಜಕಾರಣದ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರು ತಮ್ಮ ಮಾತು ಮತ್ತು ನಡೆ-ನುಡಿಗಳಲ್ಲಿ ಅಲ್ಪ ಮಟ್ಟಿನ ಸಂಯಮ ಕಾಯ್ದುಕೊಂಡಿದ್ದರು. ಆದರೆ ಬಿಜೆಪಿಯ ಯುವ ನಾಯಕರುಗಳು ಸಂಯಮದಿಂದ ವರ್ತಿಸುತ್ತಿಲ್ಲ. ವಾಸ್ತವವಾಗಿ, ಹಿಂದುತ್ವವನ್ನು ಮುಂದುಮಾಡುತ್ತಲೇ ಅವರು ತಮ್ಮ ಪಕ್ಷದಲ್ಲಿ ಬೆಳೆದಿರುವುದು. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ತಾನು ಪ್ರಯತ್ನಿಸಿದಂತೆ ಹಿಂದುತ್ವದ ಅಜೆಂಡಾವನ್ನು ಬಲವಾಗಿ ಹೇರಬೇಕೇ ಅಥವಾ ಅದನ್ನು ನಿಧಾನವಾಗಿ ಉಣಬಡಿಸಬೇಕೆ ಎಂಬುದು ಬಿಜೆಪಿಯ ಮುಂದಿರುವ ಆಯ್ಕೆಯಾಗಿದೆ. ಎರಡೂ ಮಾರ್ಗದಲ್ಲಿ ಪಕ್ಷ ತನ್ನದೇ ಆದ ಸವಾಲುಗಳನ್ನು ಎದುರಿಸಲಿದೆ. ಮೊದಲನೆಯದಾಗಿ, ಹಿಂದುತ್ವದ ಹೇರಿಕೆಯು ಕರ್ನಾಟಕದಲ್ಲಿ ಬಿಜೆಪಿಯ ತಳಹದಿಯೇ ಆಗಿರುವ ಲಿಂಗಾಯತ ಸಮುದಾಯಕ್ಕೆ ಸರಿಕಾಣುವುದಿಲ್ಲ. ಲಿಂಗಾಯತರು 2004ರಿಂದಲೂ ಬಿಜೆಪಿಯನ್ನು ಬೆಂಬಲಿಸುತ್ತಿರುವುದಕ್ಕೆ ಹಿಂದುತ್ವವನ್ನು ಅವರು ಒಪ್ಪಿದ್ದಾರೆ ಎಂಬುದಕ್ಕಲ್ಲ. ಬದಲಿಗೆ, ಇತರ ಎರಡು ಪಕ್ಷಗಳಿಗೆ ಹೋಲಿಸಿದಲ್ಲಿ ಬಿಜೆಪಿಯಲ್ಲಿ ಅವರಿಗೆ ಹೆಚ್ಚಿನ ರಾಜಕೀಯ ಅವಕಾಶಗಳಿವೆ ಎಂಬ ಕಾರಣಕ್ಕೆ. ಬಿಜೆಪಿಯು ತನ್ನ ಕೋಮು ಧ್ರುವೀಕರಣದ ಅಜೆಂಡಾವನ್ನು ಮುಂದುವರಿಸಿದಂತೆಲ್ಲಾ ಲಿಂಗಾಯತರಿಗೆ ಇರುಸುಮುರುಸಾಗುತ್ತದೆ. ಏಕೆಂದರೆ, ಬ್ರಾಹ್ಮಣ್ಯದ ಪ್ರಾಬಲ್ಯವನ್ನು ಎದುರಿಸಲು ಲಿಂಗಾಯತ ಧರ್ಮವನ್ನು ಬಸವೇಶ್ವರರು ಸ್ಥಾಪಿಸಿದ್ದರು. ಲಿಂಗಾಯತರು ತಮ್ಮದೇ ವಿಶಿಷ್ಟವಾದ ಹಾಗೂ ಮುಖ್ಯವಾಹಿನಿ ಹಿಂದೂ ಸಂಪ್ರದಾಯಗಳಿಗೆ ವಿರುದ್ಧವಾದ ಸಂಪ್ರದಾಯಗಳನ್ನು ಇಂದಿಗೂ ಅನುಸರಿಸುತ್ತಾರೆ. ಧಾರ್ಮಿಕ ಆಚರಣೆಗಳನ್ನು ಏಕರೂಪಗೊಳಿಸುವ ಬಿಜೆಪಿಯ ಹಿಂದುತ್ವದ ಅಜೆಂಡಾವು ಲಿಂಗಾಯತ ಅಸ್ಮಿತೆಗೇ ಧಕ್ಕೆ ತರುತ್ತದೆ. ಬಿಜೆಪಿಯ ಹಿಂದುತ್ವವನ್ನು ಒಪ್ಪದ ಹಾಗೂ ಅದನ್ನು ಗಟ್ಟಿದನಿಯಲ್ಲಿ ವಿರೋಧಿಸುವ ದನಿಗಳು ಕಡಿಮೆಯಾಗುತ್ತಿದ್ದರೂ ಹಾಗೂ ಎಲ್ಲಾ ಸಂದರ್ಭಗಳಲ್ಲಿಯೂ ಅಧಿಕಾರಸ್ಥರ ವಿರುದ್ಧ ಅವರು ಬಹಿರಂಗವಾಗಿ ಸೊಲ್ಲೆತ್ತದಿದ್ದರೂ ಕೂಡ ಬಿಜೆಪಿಯ ಕೋಮುವಾದಿ ಹಾದಿಯನ್ನು ತಾವೂ ಅನುಸರಿಸುವ ಬಗ್ಗೆ ತೀವ್ರವಾದ ಅಸಮಾಧಾನ ಸಮುದಾಯದಲ್ಲಿದೆ. ಕೆಲವು ಲಿಂಗಾಯತ ಮಠಾಧೀಶರುಗಳು ಹಿಂದುತ್ವವನ್ನು ಬಹಿರಂಗವಾಗಿಯೇ ಪ್ರಶ್ನಿಸುತ್ತಾರೆ. ಅಂತಹವರ ಸಂಖ್ಯೆ ಚಿಕ್ಕದಾಗಿರಬಹುದು; ಆದರೆ ಬೇರೆಲ್ಲಾ ಜಾತಿ ಮಠಗಳ ಸ್ವಾಮೀಜಿಗಳು ನೇರವಾಗಿ ಅಥವಾ ಪರೋಕ್ಷವಾಗಿ ಹಿಂದುತ್ವ ರಾಜಕಾರಣವನ್ನು ಬೆಂಬಲಿಸುತ್ತಿರುವ ಅಥವಾ ಅದರ ಬಗ್ಗೆ ಮೌನವಹಿಸಿರುವ ಕಾಲದಲ್ಲಿಯೂ ಒಂದಷ್ಟು ಲಿಂಗಾಯತ ಮಠಾಧೀಶರುಗಳು ಹಿಂದುತ್ವವನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಲಿಂಗಾಯತರೊಂದಿಗಿನ ದೀರ್ಘಕಾಲದ ಒಡನಾಟವು ಕೇಸರಿ ಪಕ್ಷಕ್ಕೆ ತನ್ನ ಪ್ರಮುಖ ಕಾರ್ಯಸೂಚಿಯಾದ ಹಿಂದುತ್ವವನ್ನು ಜಾರಿಗೊಳಿಸಲು ಅಡಚಣೆಯಾಗಲಿದೆ. ಪಕ್ಷವು ಸ್ವಂತವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮತ್ತು ತನ್ನ ನಿಜ ಬಣ್ಣವನ್ನು ಅನಾವರಣಗೊಳಿಸಲು ವಿಶಾಲವಾದ ಜನಸಮುದಾಯಗಳ ಬೆಂಬಲವನ್ನು ಪಡೆದುಕೊಳ್ಳಬೇಕಿದೆ. ಆದರೆ, ಬಿಜೆಪಿಯು ಇದರಲ್ಲಿ ಎದುರಿಸಬೇಕಾದ ಸವಾಲೊಂದಿದೆ. ಬೇರೆಬೇರೆ ಜಾತಿಗಳ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ತನ್ನ ಬೆಂಬಲದ ನೆಲೆಯನ್ನು ಬಿಜೆಪಿಯು ಮರುಸಂರಚಿಸಿಕೊಳ್ಳಲು ಮುಂದಾದರೆ, ಲಿಂಗಾಯತರಲ್ಲಿ ’ಬಿಜೆಪಿ ನಮ್ಮ ಪಕ್ಷ’ ಎಂಬ ಭಾವ ಇಲ್ಲದಾಗಿ ಅವರು ಆಯಾ ಕಾಲದ ರಾಜಕೀಯಕ್ಕೆ ಅನುಗುಣವಾಗಿ ತಮ್ಮ ನಿಷ್ಠೆಯನ್ನು ಬದಲಾಯಿಸಿಕೊಳ್ಳಲು ಪ್ರಾರಂಭಿಸುತ್ತಾರೆ

ಒಕ್ಕಲಿಗರು ಹೆಚ್ಚಿರುವ ಪ್ರದೇಶಗಳಲ್ಲಿಯೂ ತನ್ನ ಬೇರುಗಳನ್ನೂರಲು ಬಿಜೆಪಿ ಹರಸಾಹಸವನ್ನೇ ಪಡುತ್ತಿದ್ದರೂ ಈವರೆಗೂ ಅದರಲ್ಲಿ ಹೆಚ್ಚು ಯಶಸ್ಸು ಸಾಧಿಸದ ಹಿಂದುತ್ವದ ರಾಜಕಾರಣಕ್ಕೆ ಅಲ್ಲಿಯೂ ಸವಾಲುಗಳು ಎದುರಾಗಲಿವೆ. ಈ ಬಾರಿಯ ಚುನಾವಣೆಯಲ್ಲಿ ಒಕ್ಕಲಿಗರ ಪ್ರಾಬಲ್ಯವಿರುವ ಪ್ರದೇಶದಲ್ಲಿ ಬಿಜೆಪಿ ಬೇರೂರಲು ಪ್ರಯತ್ನಿಸಿದ್ದು ಗೆಲುವು ಸಾಧಿಸುವ ಭರವಸೆಯಿಂದಲ್ಲ. ಬದಲಿಗೆ, ಭವಿಷ್ಯದಲ್ಲಿ ನೆಲೆಯೊಂದನ್ನು ಕಂಡುಕೊಳ್ಳಲು. ಈ ತಂತ್ರದಿಂದಾಗಿ ಬಿಜೆಪಿಯು ತಾನು ಪಡೆಯುತ್ತಿದ್ದ ಮತಗಳ ಪಾಲನ್ನು ಶೇ.18.85ರಿಂದ ಶೇ.22.67ಕ್ಕೆ ಏರಿಸಿಕೊಂಡಿದೆ. ಬಿಜೆಪಿಯು ಈ ಪ್ರದೇಶದಲ್ಲಿ ತನ್ನ ಪ್ರಯತ್ನಗಳನ್ನು ಮುಂದುವರೆಸಲಿದೆಯಾದರೂ ಅದು ಅಷ್ಟು ಸುಲಭವಲ್ಲ. ಒಕ್ಕಲಿಗರು ಕನ್ನಡ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಮತ್ತು ಉಪರಾಷ್ಟ್ರೀಯ ಭಾವನೆಗಳನ್ನು ಹತ್ತಿಕ್ಕುವ ಬಿಜೆಪಿಯ ರಾಜಕೀಯವನ್ನು ಅವರು ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಒಕ್ಕಲಿಗರು ಐಕಾನ್ ಎಂದು ಪರಿಗಣಿಸಲ್ಪಡುವ ಕನ್ನಡದ ಮೇರು ಕವಿ ಕುವೆಂಪು ಅವರು ಬ್ರಾಹ್ಮಣ್ಯದ ಪ್ರಾಬಲ್ಯವನ್ನು ವಿರೋಧಿಸಲು ಯುವ ಪೀಳಿಗೆಯನ್ನು ಪ್ರೇರೇಪಿಸಿದವರು. ಚುನಾವಣಾ ಪೂರ್ವದಲ್ಲಿ, ಬಿಜೆಪಿಯು ಎರಡು ಕಾಲ್ಪನಿಕ ಒಕ್ಕಲಿಗ ಯೋಧರ ಪಾತ್ರವನ್ನು ಸೃಷ್ಟಿಸಿ ಅವರೇ ಮುಸ್ಲಿಂ ಧರ್ಮೀಯ ದೊರೆ ಟಿಪ್ಪು ಸುಲ್ತಾನನನ್ನು ಕೊಂದವರು ಎಂದು ಜನಪ್ರಿಯಗೊಳಿಸಲು ಪ್ರಯತ್ನಿಸಿತು. ಆ ಮೂಲಕ ಒಕ್ಕಲಿಗರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ನಡೆಸಿತು. ಇದನ್ನು ಗಮನಿಸಿದ ಒಕ್ಕಲಿಗ ಮಠಾಧೀಶರೊಬ್ಬರು ಬಿಜೆಪಿ ನಾಯಕರನ್ನು ಕರೆದು ಕಟ್ಟುಕತೆಯನ್ನು ಇತಿಹಾಸವೆಂದು ಪ್ರಚಾರ ಮಾಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರು. ಬೊಮ್ಮಾಯಿ ಅವರ ಸರಕಾರವು ಒಕ್ಕಲಿಗರಿಗೆ ಮೀಸಲಾತಿಯನ್ನು ಹೆಚ್ಚಿಸುವ ಸಲುವಾಗಿ ಮುಸ್ಲಿಮರಿಗೆ ಮೀಸಲಾತಿಯನ್ನು ರದ್ದುಗೊಳಿಸಿದ್ದನ್ನು, ಮತ್ತೊಬ್ಬರು ಒಕ್ಕಲಿಗ ಮಠಾಧೀಶರು ’ಬೇರೆಯವರಿಂದ ಕಿತ್ತುಕೊಂಡು ನಮಗೆ ಕೊಡುತ್ತಿದ್ದರೆ (ಮೀಸಲಾತಿ ಹೆಚ್ಚಳ) ನಮಗದು ಬೇಕಾಗಿಲ್ಲ’ ಎಂದು ವಿರೋಧಿಸಿ ನೀಡಿದ ಹೇಳಿಕೆಯ ವಿಡಿಯೋ ತುಣುಕು ಎಲ್ಲೆಡೆ ವೈರಲ್ ಆಗಿತ್ತು.

ಇದನ್ನೂ ಓದಿ: ನಾನು ಕಂಡಂತೆ ಸಿದ್ದರಾಮಯ್ಯ: ಲೇಖಕ ಕೆ. ಶ್ರೀನಾಥ್

2023ರ ಚುನಾವಣೆಯುಲ್ಲಿ ನಾಗರಿಕ ಸಮಾಜವು ಬಿಜೆಪಿಯ ಕೋಮುವಾದಿ ರಾಜಕೀಯಕ್ಕೆ ಹಲವು ರೀತಿಗಳಲ್ಲಿ ಸವಾಲೆಸೆದದ್ದು ಕಂಡುಬಂತು. ಬಹುತ್ವ ಕರ್ನಾಟಕ, ಸಹಬಾಳ್ವೆ, ಜಾಗೃತ ಕರ್ನಾಟಕ ಸೇರಿದಂತೆ ಹಲವಾರು ಸಂಘಟನೆಗಳು ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಪ್ರೇರೇಪಿಸಿದವು. ಹಲವಾರು ನಾಗರಿಕ ಹಾಗೂ ಸಾಮಾಜಿಕ ಸಂಘಟನೆಗಳು ’ಎದ್ದೇಳು ಕರ್ನಾಟಕ’ ಎಂಬ ಹೆಸರಿನಡಿ ಒಗ್ಗೂಡಿ, ವಿಭಜಕ ರಾಜಕಾರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಕವಿ ಕುವೆಂಪು ಕೊಂಡಾಡಿದ್ದ ’ಸರ್ವ ಜನಾಂಗದ ಶಾಂತಿಯ ತೋಟ’ದ ಕಲ್ಪನೆಗೆ ಅದು ಹೇಗೆ ಧಕ್ಕೆ ಉಂಟು ಮಾಡಿದೆಯೆಂದೂ ಜನರಿಗೆ ತಿಳಿಸಿದವು. ಕೋಮುವಾದದ ವಿರುದ್ಧದ ಹೋರಾಟವು ನಿಲ್ಲುವ ಮುನ್ಸೂಚನೆಗಳೇನೂ ಕಂಡುಬರುತ್ತಿಲ್ಲ. ’ಎದ್ದೇಳು ಕರ್ನಾಟಕ’ದ ಪ್ರತಿನಿಧಿಯೊಬ್ಬರ ಹೇಳಿಕೆಯಂತೆ ಕೋಮುವಾದವನ್ನು ಸೈದ್ಧಾಂತಿಕವಾಗಿ ಸೋಲಿಸುವುದು, ಚುನಾವಣೆಯಲ್ಲಿ ರಾಜಕೀಯವಾಗಿ ಬಿಜೆಪಿಯನ್ನು ಸೋಲಿಸುವುದಕ್ಕಿಂತಲೂ ಮುಖ್ಯವಾಗಿದೆ. ಚುನಾವಣಾ ಹೋರಾಟವು ಈಗಷ್ಟೇ ಮುಗಿದಿದ್ದು, ಸುಂದರ ಕರ್ನಾಟಕದ ಕಲ್ಪನೆಯನ್ನು ಪುನರುಜ್ಜೀವನಗೊಳಿಸಲು ಈಗ ಸಾಂಸ್ಕೃತಿಕ ಹೋರಾಟ ನಡೆಯಬೇಕಿದೆ. ಈ ಚುನಾವಣೆಯ ಫಲಿತಾಂಶವು ನಾಗರಿಕ ಸಮಾಜಕ್ಕೆ ಶಕ್ತಿ ತುಂಬಿದೆ ಮತ್ತು ಕೋಮು ರಾಜಕೀಯವು- ಅದು ಹೇರಿಕೆಯಾಗಿಯೇ ಇರಬಹುದು ಅಥವಾ ಸೌಮ್ಯವಾಗಿಯೇ ಇರಬಹುದು; ಯಾವುದೇ ರೀತಿಯಲ್ಲಿ ಕಾಣಿಸಿಕೊಂಡರೂ ಅದಕ್ಕೆ ಪ್ರತಿರೋಧ ವ್ಯಕ್ತವಾಗಲಿದೆ.

ಎದ್ದೇಳು ಕರ್ನಾಟಕದ ಹೊರತಾಗಿಯೂ, ಬಹಳ ಕಾಲದಿಂದ ನಿಷ್ಕ್ರಿಯವಾಗಿದ್ದ ಹಾಗೂ ಚದುರಿಹೋಗಿದ್ದ ಹೋರಾಟಗಳು ಕೂಡ, 2023ರ ಚುನಾವಣೆಯಲ್ಲಿ ಹಿಂದುತ್ವವನ್ನು ಸೋಲಿಸಲು ಪಣತೊಟ್ಟು ಅನೇಕ ಸಣ್ಣಸಣ್ಣ ಕ್ರಮಗಳ ಮೂಲಕ ಮರುಹುಟ್ಟು ಪಡೆದುಕೊಂಡಿವೆ. ಚುನಾವಣೆಗೆ ಎರಡು ತಿಂಗಳ ಮೊದಲು ಹಲವಾರು ದಲಿತ ಬಣಗಳು ಮತ್ತೆ ಒಟ್ಟುಗೂಡಿ ದಲಿತರು ಬಿಜೆಪಿಗೆ ಮತ ನೀಡದಂತೆ ಜಾಗೃತಿ ಮೂಡಿಸಿದವು. ಇನ್ನೇನು ಚುನಾವಣೆ ಹತ್ತಿರವಾದಾಗ ಎಸ್‌ಸಿ/ಎಸ್‌ಟಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುವುದಾಗಿ ಬಿಜೆಪಿ ಘೋಷಿಸಿತು. ಈ ಮೂಲಕ ದಲಿತರ ಬೆಂಬಲವನ್ನೂ ಪಡೆಯಲು ಯತ್ನಿಸಿತು. ಆದರೆ, ಇದು ಕೇವಲ ಚುನಾವಣಾ ತಂತ್ರವಾಗಿದೆಯೆಂದೂ, ಬಿಜೆಪಿಯು ಮೊದಲಿನಿಂದಲೂ ಮೀಸಲಾತಿ ವಿರೋಧಿಯೆಂದೂ ದಲಿತ ಮುಖಂಡರುಗಳು ಎತ್ತಿ ತೋರಿಸುವಲ್ಲಿ ಸಫಲರಾಗಿದ್ದಾರೆ. ದಲಿತರ ಜನಸಂಖ್ಯೆ ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿಜೆಪಿಯು ಶೇ.27ರಷ್ಟು ಮತಗಳನ್ನು ಪಡೆದಿದ್ದು ಕಾಂಗ್ರೆಸ್‌ಗೆ ಶೇ.46ರಷ್ಟು ಮತಗಳು ಪಡೆದಿವೆ ಎಂದು ಫಲಿತಾಂಶಗಳು ತೋರಿಸುತ್ತವೆ. ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಹಿಂಪಡೆದುಕೊಂಡರೂ ಕೂಡ ಕರ್ನಾಟಕದಲ್ಲಿ ಅದನ್ನು ಹಿಂಪಡೆದುದುಕೊಳ್ಳಲಾಗಿಲ್ಲ ಎಂಬುದು ಮುಖ್ಯವೆನಿಸಿತು. ಹಿಂದಿನ ಕರ್ನಾಟಕ ರಾಜ್ಯ ರೈತ ಸಂಘದ (ಇಂದಿನ ಕರ್ನಾಟಕ ಸರ್ವೋದಯ ಪಕ್ಷ) ಸದಸ್ಯರೊಬ್ಬರು ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಇವೆಲ್ಲವನ್ನು ಗಮನಿಸಿದರೆ, ರಾಜಕೀಯ ಮತ್ತು ಆಡಳಿತದ ಮೇಲಿನ ಜನಪ್ರಿಯ ಜನಪರ ಚಳವಳಿಗಳ ಒಟ್ಟಾರೆ ಒತ್ತಡವು ಬಲಗೊಳ್ಳುವ ಸಾಧ್ಯತೆಯಿದೆ.

ಮುಂದಿನ ದಿನಗಳಲ್ಲಿ ಘರ್ಷಣೆಗೆ ಕಾರಣವಾಗಲಿರುವ ಬಿಜೆಪಿಯ ಅಜೆಂಡಾದಲ್ಲಿನ ಮತ್ತೊಂದು ಅಂಶವೆಂದರೆ ಭಾರತದ ಒಕ್ಕೂಟ ವ್ಯವಸ್ಥೆಯ ಬಗ್ಗೆ ಕೇಸರಿ ಪಕ್ಷಕ್ಕಿರುವ ಧೋರಣೆ. ಬಿಜೆಪಿಯ ರಾಷ್ಟ್ರೀಯ ನಾಯಕತ್ವದ ಕೇಂದ್ರೀಕರಣದ ಪ್ರವೃತ್ತಿಗಳು ಮತ್ತು ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕರ್ನಾಟಕದ ಬಗ್ಗೆ ಅದು ತೋರಿರುವ ಮಲತಾಯಿಯ ಧೋರಣೆಯು ಹೊಸ ರೀತಿಯ ಪ್ರಾದೇಶಿಕ ರಾಜಕಾರಣದ ಅಗತ್ಯತೆಗೆ ದನಿಗೂಡಿಸಬಹುದು. ಎರಡು ದಶಕಗಳಿಂದ ರಾಜ್ಯ ರಾಜಕೀಯದಲ್ಲಿ ಮೂರನೇ ಪಕ್ಷವಾಗಿ ಉಳಿದಿರುವ ಜೆಡಿ(ಎಸ್) ಈಗ ಪ್ರಾದೇಶಿಕ ರಾಜಕೀಯ ಸಂಘಟನೆಯಾಗಿ ಕಂಡುಬಂದರೂ, ಪ್ರಾದೇಶಿಕ ಆಕಾಂಕ್ಷೆಗಳ ಗಟ್ಟಿದನಿಯಾಗಿ ರೂಪುಗೊಳ್ಳಲು ಅದು ವಿಫಲವಾಗಿದೆ. ಜೆಡಿ(ಎಸ್) ಪಕ್ಷವು ಕನ್ನಡ ಭಾಷೆಯ ಪ್ರಶ್ನೆಯ ಸುತ್ತಲಾಗಲೀ ಅಥವಾ ಅಖಿಲ ಕರ್ನಾಟಕದ ಅಸ್ಮಿತೆಯ ಪ್ರಶ್ನೆಯ ಸುತ್ತಲಾಗಲೀ ಸಂಘಟಿತವಾಗಿಲ್ಲ. ಚುನಾವಣೆಗಳಲ್ಲಿ ಅದರ ಪ್ರಭಾವ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದೇಕೆ ಎಂಬುದಕ್ಕೆ ಭಾಗಶಃ ಉತ್ತರವೂ ಅದರಲ್ಲಿ ಅಡಗಿದೆ. ಬಿಜೆಪಿಯ ’ಡಬಲ್ ಇಂಜಿನ್ ಸರ್ಕಾರ’ದ ಭರವಸೆ ಮತ್ತೆ ಕೈಗೂಡದಿದ್ದರೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಅಭಿವೃದ್ಧಿ ವಿಚಾರದಲ್ಲಿ ಕೈಜೋಡಿಸುವುದಿಲ್ಲ ಎಂಬ ಬೆದರಿಕೆ ಒಡ್ಡುತ್ತಿರುವಾಗಲೂ, ಜೆಡಿ(ಎಸ್)ನಿಂದಾಗಲೀ ಅಥವಾ ಕಾಂಗ್ರೆಸ್‌ನಿಂದಾಗಲೀ ಸೂಕ್ತ ಮತ್ತು ಸಮಂಜಸ ಉತ್ತರ ಕೇಳಿಬರಲಿಲ್ಲ. ಹೀಗಿರುವಾಗ, ’ರಾಜ್ಯದಲ್ಲಿ ಬೇರೆ ಪಕ್ಷವನ್ನು ಚುನಾಯಿಸಬೇಕೆ? ಕರ್ನಾಟಕಕ್ಕೆ ಪ್ರಾದೇಶಿಕ ರಾಜಕೀಯ ಪಕ್ಷ ಬೇಕು!’ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜೆಡಿ(ಎಸ್)ನ ಕಳಪೆ ಪ್ರದರ್ಶನವು ಅದಕ್ಕೆ ಹೊಸ ಹುಟ್ಟು ನೀಡುವ ಮೂಲಕ ಇಲ್ಲವೇ ಹೊಸ ಪ್ರಯತ್ನಗಳ ಮೂಲಕ ಪ್ರಾದೇಶಿಕ ಪಕ್ಷವನ್ನು ಕಟ್ಟಿಕೊಳ್ಳಬೇಕಿದೆ ಎಂಬ ಬೇಡಿಕೆಯನ್ನು ಅದು ಬಲಪಡಿಸುತ್ತದೆ. ಪ್ರಾದೇಶಿಕ ಪಕ್ಷವೊಂದು ರಚನೆಯಾಗುತ್ತದೆಯೋ ಇಲ್ಲವೋ, ಬಿಜೆಪಿಯ ಕೇಂದ್ರೀಕರಣದ ರಾಜಕಾರಣವು ಅತ್ಯಂತ ಕ್ಲಿಷ್ಟ ಸವಾಲನ್ನು ಕರ್ನಾಟಕದಲ್ಲಿ ಎದುರಿಸಲಿದೆ. ಚುನಾವಣಾ ಪ್ರಚಾರದ ವೇಳೆ ಮೋದಿಯವರು ತನ್ನದೇ ಪಕ್ಷದ ರಾಜ್ಯ ನಾಯಕತ್ವವನ್ನು ಅಕ್ಷರಶಃ ಮರೆಮಾಚುತ್ತಾರೆ ಎಂಬುದನ್ನು ಕನ್ನಡಿಗರು ಒಪ್ಪುವುದಿಲ್ಲ ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಮೋದಿ ಅವರು ರ್‍ಯಾಲಿ ನಡೆಸಿದ 43 ಕ್ಷೇತ್ರಗಳಲ್ಲಿ ಕಾಂಗ್ರೆಸ್ 22 ಸ್ಥಾನಗಳನ್ನು ಗೆದ್ದುಕೊಂಡಿತು. ಅಂದರೆ, ಬಿಜೆಪಿಗಿಂತಲೂ ಎರಡು ಸ್ಥಾನಗಳು ಹೆಚ್ಚಾಗಿಯೇ ಪಡೆದುಕೊಂಡಿತು. ರಾಜ್ಯದೆಲ್ಲೆಡೆ ಶೇ.72.85ರಷ್ಟು ಮತದಾನವಾಗಿದ್ದರೆ, ಈ ಕ್ಷೇತ್ರಗಳಲ್ಲಿ ಸರಾಸರಿ ಶೇ.60.48ರಷ್ಟು ಮತದಾನವಾಗಿದೆ.

ಚುನಾವಣೆಯ ಫಲಿತಾಂಶವನ್ನು, ಜನರಿಗೆ ಆರ್ಥಿಕ ಸಂಕಷ್ಟವನ್ನು ಉಂಟುಮಾಡಿದ ರಾಜ್ಯ ಮತ್ತು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಬಡವರ ದಂಗೆ ಎಂದು ಅರ್ಥೈಸಲಾಗುತ್ತದೆ. ಆದ್ದರಿಂದ, ರಾಜ್ಯಾಭಿವೃದ್ಧಿಯು ಕಲ್ಯಾಣ ನೀತಿಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ ಕಲ್ಯಾಣ ನೀತಿಗಳಿಗೆ ಹೆಸರಾಗಿತ್ತು. ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಹೊಂದಿರುವ ಸಿದ್ದರಾಮಯ್ಯನವರು 10 ಕೆಜಿ ಅಕ್ಕಿಯ ಉಚಿತ ವಿತರಣೆ ಮತ್ತು ಕಡಿಮೆ ದರದಲ್ಲಿ ಕ್ಯಾಂಟೀನ್‌ಗಳು ಸೇರಿದಂತೆ ಇತರೆ ಕಾರ್ಯಕ್ರಮಗಳ ಮೂಲಕ ’ತಮಗೆ ತಾವು ಸಹಾಯ ಮಾಡಿಕೊಳ್ಳಲಾಗದ ವರ್ಗಗಳ ಸಹಾಯ’ಕ್ಕೆ ನಿಂತಿದ್ದರು ಮತ್ತು ಇವೆರಡೂ ಕಾರ್ಯಕ್ರಮಗಳು ಜನಸಾಮಾನ್ಯರ ನಡುವೆ ಜನಪ್ರಿಯವೂ ಆಗಿತ್ತು. ಬಡವರಿಗೆ ಬಹಳ ಮಹತ್ವದ್ದಾಗಿದ್ದ ಕೆಲವು ಯೋಜನೆಗಳನ್ನು ಬಿಜೆಪಿ ಹಿಂತೆಗೆದುಕೊಂಡದ್ದು ಕೂಡ ರಾಜ್ಯಾದ್ಯಂತ ಭಾರಿ ಆಡಳಿತ ವಿರೋಧಿ ನಿಲುವು ವ್ಯಕ್ತವಾಗಲು ಮುಖ್ಯಕಾರಣಗಳಲ್ಲಿ ಒಂದಾಗಿತ್ತು, ಚುನಾವಣಾ ಪ್ರಚಾರದ ಭಾಗವಾಗಿ ಕಾಂಗ್ರೆಸ್ ತನ್ನ ಐದು ಕಲ್ಯಾಣ ಯೋಜನೆಯ ಭರವಸೆಗಳನ್ನು ಖಾತರಿ ರೂಪದಲ್ಲಿ ನೀಡಲು ಮುಂದಾದಾಗ- ಅದು 200 ಯೂನಿಟ್ ಉಚಿತ ವಿದ್ಯುತ್ ಇರಬಹುದು, 10 ಕೆಜಿ ಉಚಿತ ಅಕ್ಕಿಯಿರಬಹುದು, ಕುಟುಂಬದ ಮಹಿಳೆಗೆ 2000 ರೂ ಪಾವತಿಯಿರಬಹುದು, ನಿರುದ್ಯೋಗಿಗಳಿಗೆ ಭತ್ಯೆಯಿರಬಹುದು ಅಥವಾ ಮಹಿಳೆಯರಿಗೆ ಉಚಿತ ಬಸ್ ಪಾಸ್ ಇರಬಹುದು- ಬಿಜೆಪಿ ಆರಂಭದಲ್ಲಿ ’ಫ್ರೀಬೀ’ ಸಂಸ್ಕೃತಿ ಎಂದು ಇದನ್ನು ಅಪಹಾಸ್ಯ ಮಾಡಿತು. ಆದರೆ, ಚುನಾವಣಾ ಪೂರ್ವ ಸಮೀಕ್ಷೆಗಳು ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಕ್ಕೆ ಸಾರ್ವಜನಿಕ ಅಸಮಾಧಾನವಿರುವುದನ್ನು ಹಾಗೂ ಕಾಂಗ್ರೆಸ್ ಭರವಸೆಗಳ ಜನಪ್ರಿಯತೆಯ ಬಗ್ಗೆ ವರದಿ ಮಾಡಲು ಪ್ರಾರಂಭಿಸಿದಾಗ, ಬಿಜೆಪಿ ತನ್ನದೇ ಆದ ಕಲ್ಯಾಣ ಕಾರ್ಯಕ್ರಮಗಳ ಪಟ್ಟಿಯನ್ನು ಪ್ರಕಟಿಸಿತು. ಅಂತಿಮವಾಗಿ ಇದು ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ರಾಜಕೀಯ ಒಮ್ಮತಕ್ಕೆ ಕಾರಣವಾಯಿತು. ಇದಕ್ಕೆ ಬೃಹತ್ ಸಂಪನ್ಮೂಲ ಹಂಚಿಕೆಯ ಅಗತ್ಯವಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಸಹಕಾರ ಅತ್ಯಗತ್ಯ. ರಾಜ್ಯಕ್ಕೆ ತುರ್ತಾಗಿ ಸಂಪನ್ಮೂಲಗಳು ಬೇಕಾದಾಗ ಮೋದಿ ಸರ್ಕಾರವು ತನ್ನ ಇಬ್ಬಗೆಯ ನೀತಿಯನ್ನೇ ಮುಂದುವರೆಸಿದರೆ, ಅದು ಕೇಂದ್ರ ಸರ್ಕಾರದೊಂದಿಗಿನ ರಾಜ್ಯದ ಘರ್ಷಣೆಗೆ ಕಾರಣವಾಗಬಹುದು. ಇದು ಪ್ರಾದೇಶಿಕ ರಾಜಕೀಯದ ಕಲ್ಪನೆಯನ್ನು ಮತ್ತಷ್ಟು ಸದೃಢಗೊಳಿಸಲಿದೆ. ಕೇಂದ್ರದ ಸಹಕಾರದ ಹೊರತಾಗಿಯೂ, ಕಲ್ಯಾಣ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸುವುದಕ್ಕೆ ತನ್ನದೇ ಆದ ಹೊಸ ದಾರಿಗಳನ್ನು ಕಂಡುಕೊಳ್ಳುವ ಒತ್ತಡದಲ್ಲಿದೆ ರಾಜ್ಯ ಸರ್ಕಾರ. ಹೆಚ್ಚಿನ ಬಾರಿ ಕಲ್ಯಾಣ ಕಾರ್ಯಕ್ರಮಗಳು ಮೂಲಸೌಕರ್ಯ ಅಭಿವೃದ್ಧಿ ಮತ್ತು ಇತರ ಬೆಳವಣಿಗೆ-ಆಧಾರಿತ ಖರ್ಚುಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತವೆ. ಮಧ್ಯಮ ವರ್ಗದ ನಡುವೆ ತನ್ನ ಜನಪ್ರಿಯತೆಯನ್ನು ಈಗಾಗಲೇ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ಸನ್ನು ಇದು ಸಂಕಷ್ಟಕ್ಕೆ ದೂಡಲಿದೆ.

1990ರ ದಶಕದ ಆರಂಭದಿಂದಲೂ ಕರ್ನಾಟಕದ ರಾಜಕಾರಣದಲ್ಲಿ ಚಾಲ್ತಿಯಲ್ಲಿರುವ ತ್ರಿಕೋನ ಸ್ಪರ್ಧೆಯ ಮೇಲೂ ಕೂಡ ಈ ಬಾರಿಯ ಚುನಾವಣೆಯು ಪ್ರಶ್ನೆಗಳನ್ನೆತ್ತಿವೆ. ಕರ್ನಾಟಕದ ದಕ್ಷಿಣ ಭಾಗಗಳಲ್ಲಿ ನಿರ್ಣಾಯಕ ಪಾತ್ರವಹಿಸಿರುವ ಮೂರನೇ ಪಕ್ಷವಾದ ಜನತಾ ದಳ (ಎಸ್) ತನ್ನ ಸಾಂಪ್ರದಾಯಿಕ ಭದ್ರಕೋಟೆಯಲ್ಲಿ ಶೇ.5ರಷ್ಟು ಮತಗಳ ಕುಸಿತದೊಂದಿಗೆ ಭಾರಿ ಹಿನ್ನಡೆಯನ್ನು ಅನುಭವಿಸಿದೆ. ಆದರೂ, ಕನಿಷ್ಠ ಎರಡು ಕಾರಣಗಳಿಗಾಗಿ ಕರ್ನಾಟಕದಲ್ಲಿ ಎಡವೂ ಅಲ್ಲದ ಬಲವೂ ಅಲ್ಲದ ಸೆಂಟ್ರಸ್ಟ್ ಆದ ಮೂರನೇ ಪಕ್ಷದ ಅಂತ್ಯವನ್ನು ಇದು ಸೂಚಿಸುವುದಿಲ್ಲ. ಮೊದಲನೆಯದಾಗಿ, ಜೆಡಿ(ಎಸ್) ಈ ಹಿಂದೆಯೂ ಕೂಡ ಇದೇ ರೀತಿಯ ಪೆಟ್ಟುಗಳಿಂದ ಚೇತರಿಸಿಕೊಂಡಿದೆ. ಅದರೆ, ಈ ಬಾರಿಯ ಸವಾಲು ವಿಭಿನ್ನವಾಗಿರಲಿದೆ. ಹಿರಿಯ ರಾಜಕಾರಣಿ ದೇವೇಗೌಡರ ವಯಸ್ಸು ಅವರಿಗೆ ಸಹಾಯ ಮಾಡುತ್ತಿಲ್ಲವಾದ ಕಾರಣ ಜೆಡಿಎಸ್‌ಗೆ ಹೊಸ ನಾಯಕತ್ವದ ಅಗತ್ಯತೆಯೂ ಇದೆ. ಕುಮಾರಸ್ವಾಮಿಯವರು ನಾಯಕರಾಗಿ ಹೊರಹೊಮ್ಮಿದ್ದರೂ ಕೂಡ, 2023ರ ಚುನಾವಣೆಯ ನಂತರದ ಪಕ್ಷಕ್ಕೆ ಮರುಹುಟ್ಟು ನೀಡಬೇಕಾದರೆ ಅದರ ನಾಯಕತ್ವ ಮತ್ತು ರಾಜಕೀಯ ನೀತಿಗಳೆರಡೂ ಬದಲಾಗಬೇಕಿದೆ. ಜೆಡಿ(ಎಸ್) ಒಂದು ಕುಟುಂಬದವರ ಪಕ್ಷ ಆಗಿಯೇ ಉಳಿದಿರುವುದನ್ನು ಅದರ ಪ್ರಮುಖ ಬೆಂಬಲಿಗರಾಗಿರುವ ಒಕ್ಕಲಿಗರೂ ಕೂಡ ಒಪ್ಪಲು ಸಾಧ್ಯವಿಲ್ಲ. ಎರಡನೆಯದಾಗಿ, ಕರ್ನಾಟಕದ ರಾಜಕೀಯದಲ್ಲಿ ಮೂರನೇ ಪಕ್ಷವೆಂದರೆ ಜೆಡಿ(ಎಸ್) ಮಾತ್ರವೇ ಆಗಿರಬೇಕಿಲ್ಲ. ಜೆಡಿ(ಎಸ್)ನ ಪುನರುಜ್ಜೀವನದ ಮೇಲೆ ಅದು ಅವಲಂಬಿತವಾಗಿಲ್ಲ. ಬಿಜೆಪಿ ಅನುಸರಿಸುತ್ತಿರುವ ಮರುಕೇಂದ್ರೀಕರಣದ ನೀತಿಯಿಂದಾಗಿ ಉಪರಾಷ್ಟ್ರೀಯ ರಾಜಕೀಯ ಭಾವನೆಗಳು ಶೀಘ್ರವಾಗಿ ರಾಜಕೀಯ ರೂಪ ಪಡೆದುಕೊಳ್ಳುವ ಭರವಸೆ ಮೂಡಿಸುತ್ತಿವೆ.

ಇದನ್ನೂ ಓದಿ: ಹಿಂದುತ್ವಕ್ಕೆ ವಿರುದ್ಧವಾದ ಧ್ರುವೀಕರಣಕ್ಕೆ ನಾಂದಿ ಹಾಡಿದ ಚುನಾವಣಾ ಫಲಿತಾಂಶ

ಎ. ನಾರಾಯಣ

ಕನ್ನಡಕ್ಕೆ: ಶಶಾಂಕ್ ಎಸ್.ಆರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...