Homeಕರ್ನಾಟಕನಾನು ಕಂಡಂತೆ ಸಿದ್ದರಾಮಯ್ಯ: ಲೇಖಕ ಕೆ. ಶ್ರೀನಾಥ್

ನಾನು ಕಂಡಂತೆ ಸಿದ್ದರಾಮಯ್ಯ: ಲೇಖಕ ಕೆ. ಶ್ರೀನಾಥ್

- Advertisement -
- Advertisement -

ಸಿದ್ದರಾಮಯ್ಯನವರನ್ನು ನಾನು ಮೊದಲು ಭೇಟಿಯಾಗಿದ್ದು ಮೈಸೂರಿನಲ್ಲಿ. 1983ರ ಆಸುಪಾಸಿನಲ್ಲಿ. ಅವರಾಗಲೇ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಕೆಲವು ಕಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಆಗ ತಾನೆ ಲೋಕದಳ ಪಕ್ಷವು ಅವರ ರಾಜಕೀಯ ಚಟುವಟಿಕೆಯ ವೇದಿಕೆಯಾಗಿತ್ತು. ನನ್ನ ಸಂಬಂಧಿಯೊಬ್ಬರು ಐಡಿಯಲ್ ಜಾವ ಮೋಟರ್ ಸೈಕಲ್ ಕಂಪನಿಯಲ್ಲಿ ಪ್ರಭಾವೀ ಸ್ಥಾನದಲ್ಲಿದ್ದರು. ಅವರ ಮನೆಗೆ ಯಾವುದೋ ಕೆಲಸದ ನಿಮಿತ್ತ ಸಿದ್ದರಾಮಯ್ಯನವರು ಬಂದಿದ್ದರು. ಅವರ ಮಾತಿನಲ್ಲಿನ ದೃಢತೆ, ದಿಟ್ಟತನ ಮತ್ತು ಅವರ ಗಡುಸು ಧ್ವನಿ ನನ್ನನ್ನು ಅಂದು ಆಕರ್ಷಿಸಿತ್ತು. ಅದು ಹೇಗೋ ನನ್ನ ಮನಸ್ಸಿನಲ್ಲಿಯೇ ಅಂದು ಇವರೊಬ್ಬರು ಪ್ರಭಾವಶಾಲೀ ರಾಜಕಾರಿಣಿಯಾಗುತ್ತಾರೆ ಎಂದನಿಸಿತ್ತು. ಮೊದಲ ಭೇಟಿಯಲ್ಲಿಯೇ ಒಬ್ಬರ ವ್ಯಕ್ತಿತ್ವದ ಬಗ್ಗೆ ತಿಳಿದುಬಿಡುವುದು ಸಾಮಾನ್ಯ ಸಂಗತಿ ಇರಬಹುದೇನೋ!

ರಾಮಕೃಷ್ಣ ಹೆಗಡೆಯವರು ಆಗ ತಾನೇ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಸಮಾಜವಾದೀ ಪಕ್ಷದಲ್ಲಿ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದ ಮತ್ತು ತುರ್ತು ಪರಿಸ್ಥಿತಿಯ ನಂತರ ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದಿದ್ದ ರಮೇಶ್ ಬಂದಗದ್ದೆಯವರು, ಆಗ ನಾನು ಸಹಭಾಗಿತ್ವದಲ್ಲಿ ನಡೆಸುತ್ತಿದ್ದ ಕಾರ್ಖಾನೆಯಲ್ಲಿ ಪಾಲುದಾರರಾದರು. ಟಿ.ಎನ್. ಸೀತಾರಾಮ್ ಅವರು ಮತ್ತೊಬ್ಬರು. ರಮೇಶ್ ಬಂದಗದ್ದೆ ಮತ್ತು ನನ್ನದು ಅಕ್ಕ ಪಕ್ಕದ ಮನೆ. ಅಲ್ಲಿಗೆ ಆಗ ಸಿದ್ದರಾಮಯ್ಯನವರು ಬಂದಿದ್ದರು. ಜನತಾಪಕ್ಷ ಉದಯವಾಗಿದ್ದೂ ಆ ಸಂದರ್ಭದಲ್ಲೇ. ರಮೆಶ್ ಮನೆಯಲ್ಲಿ ನಾನು ಅವರನ್ನು ಎರಡನೇ ಬಾರಿಗೆ ಭೇಟಿಯಾಗಿದ್ದು. ಮೊದಲು ಬಾರಿಗೆ ಅವರನ್ನು ಭೇಟಿಯಾಗಿದ್ದರ ಬಗ್ಗೆ ನಾನೇನೂ ಮಾತನಾಡಲಿಲ್ಲ. ಆದರೆ ರಮೇಶ್ ಮನೆಯಲ್ಲಿನ ಭೇಟಿ ನಿಜವಾಗಲೂ ಅವರ ಸ್ವಭಾವವನ್ನು ಭಾಗಶಃ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಅವರ ಒರಟುತನ, ನೇರ ನುಡಿ, ಗ್ರಾಮೀಣ ಭಾಷೆ, ಯಾರನ್ನು ಬೇಕಾದರೂ ಆಕರ್ಷಿಸುವಂತಹ ನೆಲಮೂಲದ ವ್ಯಕ್ತಿತ್ವದ ಅನನ್ಯತೆಯ ಪರಿಚಯವಾದದ್ದು! ಇದಾದ ನಂತರದಲ್ಲೆ ಅವರು ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ಪಶುಸಂಗೋಪನಾ ಸಚಿವರಾಗಿದ್ದು.

ಅದಾದ ಎರಡು ವರ್ಷಗಳಲ್ಲಿಯೇ ಸರ್ಕಾರ ಪತನಗೊಂಡಿತು. ಸ್ವಾಭಾವಿಕವಾಗಿಯೇ ಸಿದ್ದರಾಮಯ್ಯನವರೂ ಸಚಿವಸ್ಥಾನವನ್ನು ಕಳೆದುಕೊಂಡರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಆಗ ಟಿ.ಎನ್. ಸೀತಾರಾಮ್ ಮತ್ತು ಬಂದಗದ್ದೆ ರಮೇಶ್ ಅವರ ಪಾಲುದಾರಿಕೆಯಲ್ಲಿ ನಮ್ಮ ಕಾರ್ಖಾನೆ ಕುಂಟುತ್ತಾ ನಡೆಯುತ್ತಿತ್ತು. ಹೀಗೆ ಯಾವುದೋ ಕೆಲಸದ ನಿಮಿತ್ತ ನಾನು ಸೀತಾರಮ್ ಸ್ಕೂಟರಿನಲ್ಲಿ ಬರುತ್ತಿದ್ದೆವು. ನಾನು ಪಿಲಿಯನ್, ಹಿಂದೆ ಕುಳಿತಿದ್ದೆ. ಆನಂದರಾವ್ ಸರ್ಕಲ್ಲಿನಲ್ಲಿ ಸಿಗ್ನಲ್ ಲೈಟ್‌ನಲ್ಲಿ ಕೆಂಪುದೀಪ ಬಂದಾಗ ನಾವು ಸ್ಕೂಟರ್ ನಿಲ್ಲಿಸಿದೆವು. ನಮ್ಮ ಪಕ್ಕದಲ್ಲೇ ಇನ್ನೊಂದು ಸ್ವಲ್ಪ ಹಳೆಯದೇ ಆದ ಸ್ಕೂಟರ್ ಬಂದು ನಿಂತಿತು. ಆವ್ಯಕ್ತಿ “ಏನ್ರೊಲೊ ಎಲ್ಲಿಂದ ಬತ್ತಾ ಇದೀರ?” ಅಂತ ಕೇಳಿತು. ತಾವ್ಯಾರೆಂದು ತೋರಿಸಲು ತಮ್ಮ ಹೆಲ್ಮೆಟ್ ತೆಗೆದರು. ತಿರುಗಿ ನೋಡಿದರೆ ಅದು ಇನ್ನ್ಯಾರೂ ಅಲ್ಲ ಎರಡು ವರ್ಷಗಳ ಕಾಲ ಸಚಿವರಾಗಿದ್ದ ಸಿದ್ದರಾಮಯ್ಯನವರು. ಮಾಮೂಲಾಗಿ ಒಂದು ತಿಂಗಳು ಸಚಿವರಾದರೇ ಸಾಕು ಕೋಟಿ ಆಸ್ತಿ ಮಾಡುವವರೆಲ್ಲಿ? ಅಂತಹದೇ ಕಾಲದಲ್ಲಿ ಒಂದು ಕಾರನ್ನೂ ಇಟ್ಟುಕೊಳ್ಳದೆ ತಮ್ಮ ಹಳೇ ಸ್ಕೂಟರ್‌ಗೆ ಹಿಂದಿರುಗಿದ ಸಿದ್ದರಾಮಯ್ಯನವರೆಲ್ಲಿ? ಇಲ್ಲಿ ಯಾವ ರೀತಿಯ ಉತ್ಪ್ರೇಕ್ಷೆಯೂ ಇಲ್ಲ. ನಮಗಾಗಿದ್ದು ಆಶ್ಚರ್ಯದ ಜೊತೆಗೆ ದಿಗ್ಭ್ರಮೆ; ಇಂತಹವರೂ ಇದ್ದಾರ ಎಂದು. ಅದೇನೇ ಇರಲಿ ಅದೇ ರೀತಿಯ ನೀತಿ-ನಿಷ್ಟೆಯನ್ನು ಇಲ್ಲಿಯವರೆಗೂ ಕಾಪಾಡಿಕೊಂಡು ಬಂದ ಮುತ್ಸದ್ಧಿ ಇವರು.

ನನಗೊಬ್ಬರು ಎಂ.ಎಲ್.ಎ. ಬಹಳ ಆತ್ಮೀಯ ಸ್ನೇಹಿತರಾಗಿದ್ದರು. ಆಗ ಸಿದ್ದರಾಮಯ್ಯನವರು ಹಣಕಾಸು ಸಚಿವ. ಆ ಎಂ.ಎಲ್.ಎ ಒಮ್ಮೆ, ‘ಸಾರ್ ಸಿದ್ದರಾಮಯ್ಯನವರ ಬಳಿ ಹೋಗುತ್ತಿದ್ದೇನೆ, ನೀವೂ ಬನ್ನಿ’ ಅಂತ ಅವರ ಕಾರಿನಲ್ಲಿಯೇ ಕರೆದುಕೊಂಡುಹೋದರು. ನಾವು ಸೀದ ಅವರ ಚೇಂಬರಿಗೆ ಹೋಗಿ ಕುಳಿತೆವು. ಸಿದ್ದರಾಮಯ್ಯನವರು ನಮಗೆ ಕೂತ್ಕೊಳ್ರಯ್ಯ ಅಂತ ಹೇಳಿ ಕೈಕಟ್ಟಿ ನಿಂತಿದ್ದವನೊಬ್ಬನ ಜೊತೆ ಮಾತನ್ನು ಮುಂದುವರಿಸಿದರು. ಅವರ ಮಾತು ತುಂಬಾ ಒರಟಾಗಿತ್ತು. ಈಗ ಎಲ್ಲಿ ಇದೀಯಪ್ಪ? ಅಂತ ಆ ವ್ಯಕ್ತಿಯನ್ನು ಕೇಳಿದರು. ಅವನು ಗದಗ್ ಸಾರ್ ಅಂತ ವಿನಮ್ರತೆಯಿಂದ ಹೇಳಿದ. ಎಲ್ಲಿಗೆ ವರ್ಗಾವಣೆ ಕೇಳ್ತಿದೀಯ? ಅಂತ ಕೇಳಿದರು. ಅವನು ಬೆಳಗಾವಿ ಸಾರ್ ಅಂದ. “ಯಾಕೆ ಇಲ್ಲಿ ಮಾಡ್ತಿರೊ ದುಡ್ಡು ಸಾಕಾಗ್ತಿಲ್ವ? ಬೆಳಗಾವಿಯಲ್ಲಿ ಇನ್ನೂ ಲೂಟಿ ಹೊಡಿಬೋದು ಅಂತಾನ? ಹೋಗಯ್ಯಾ ಸುಮ್ಮನೆ” ಅಂತ ಏಕವಚನದಲ್ಲೇ ಹಿಂದುಮುಂದು ನೋಡದೇ ಬೈದು ಕಳುಹಿಸಿದರು. ಆ ವ್ಯಕ್ತಿ ಮೆಲ್ಲಗೆ ಜಾಗ ಖಾಲಿ ಮಾಡಿದ. ನಂತರ ನಮ್ಮನ್ನು ನೋಡಿ “ಅವನು ಯಾರು ಗೊತ್ತಾ ಸಿ.ಟಿ.ಒ. ಪೊಸಿಷನ್ ನಲ್ಲಿರೋನು; ಪ್ರಾಮಾಣಿಕ ಆಗಿದ್ದಿದ್ರೆ ಹೀಗೆ ಕೈಕಟ್ಟಿ ನಿಲ್ಲುತ್ತಿದ್ದನಾ?” ಅಂತ ಗಹಗಹಿಸಿ ನಕ್ಕರು. ಆದರೆ ನನ್ನ ಜೊತೆಯಲ್ಲಿ ಬಂದಿದ್ದ ಎಂ.ಎಲ್.ಎ. ಯಾವುದೋ ವರ್ಗಾವಣೆಯ ಕೇಸ್ ಹಿಡ್ಕೊಂಡೇ ಬಂದಿದ್ದು. ಆದರೆ ಆತ ಹೆದರಿ ಅದರ ವಿಷಯವನ್ನೇ ಬಾಯಿ ಬಿಡಲಿಲ್ಲ. ಗಪ್ ಚಿಪ್ ಅಂತ ಕಾಫಿ ಕುಡಿದು ಅಲ್ಲೇ ಕೂತಿದ್ದೆವು. ಆಗಲೇ ಮೂರು ನಾಲ್ಕು ಜನ ಬಂದರು. ಅವರಲ್ಲಿ ಒಬ್ಬ ಸಿನೆಮಾ ನಿರ್ಮಾಪಕ, ಮಿಕ್ಕವರು ಬಹುಶಃ ನಿರ್ದೇಶಕ ಮತ್ತು ಅವನ ಸ್ನೇಹಿತರಿರಬೇಕು. ಆಗ ನಿರ್ಮಾಪಕ “ಸಾರ್ ಸಬ್ಸಿಡಿಗೆ ಅಪ್ಲೈ ಮಾಡಿದೀವಿ, ಒಂದು ವರ್ಷವಾದರೂ ಬಂದಿಲ್ಲ” ಅಂದರು. ಅದಕ್ಕೆ ಸಚಿವರು “ಇಲ್ಲಪ್ಪ, ನಮಗೆ ಜನಪರ ಯೋಜನೆಗಳಿಗೇ ಹಣ ಸಾಕಾಗ್ತಾ ಇಲ್ಲ, ಇನ್ನೂ ಒಂದು ವರ್ಷ ಆಗ್ಲಿ” ಅಂದ್ರು. ಅದಕ್ಕೆ ನಿರ್ಮಾಪಕ “ನಿಮ್ಮ ಮಗನೇ ಹೀರೊ ಸಾರ್” ಅಂತ ಹೇಳಿದ. ಸಿದ್ದರಾಮಯ್ಯನವರಿಗೆ ಕೋಪ ನೆತ್ತಿಗೇರಿಬಿಟ್ಟಿತು. “ನನ್ನ ಮಗನ್ನ ಹೀರೋ ಮಾಡಿ ಅಂತ ನಾನೇನಾದ್ರೂ ನಿಮ್ಮನ್ನ ಕೇಳಕೊಂಡಿದ್ದೆನೇನಯ್ಯಾ? ಸುಮ್ನೆ ತಲೆ ತಿನ್ನಬೇಡಿ ಹೋಗ್ರಯ್ಯ” ಅಂತ ಬೈದು ಕಳುಹಿಸಿಬಿಟ್ಟರು. ಇವೆಲ್ಲವೂ ಅವರ ನೇರ ನುಡಿ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಧೋರಣೆಯ ವ್ಯಕ್ತಿತ್ವಕ್ಕೆ ನಿದರ್ಶನಗಳು.

ಸಿದ್ದರಾಮಯ್ಯನವರಿಗೆ ಪಕ್ಷದ ಸಾಮಾನ್ಯ ಕಾರ್ಯಕರ್ತರ ಬಗ್ಗೆ ಬಹಳ ಕಾಳಜಿ. ನ್ಯಾಯಬದ್ಧವಾದ ಯಾವುದೇ ಕೆಲಸಕ್ಕಾಗಿ ಕಾರ್ಯಕರ್ತರು ಬಂದರೂ ಅದನ್ನು ಚಾಚು ತಪ್ಪದೇ ಮಾಡಿಕೊಡುತ್ತಿದ್ದರು. ಇದರ ಬಗ್ಗೆ ನನ್ನದೇ ಆದ ಒಂದು ಅನುಭವ ಇದೆ. ನಾನು ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ವಾಸಿಯಾಗಿದ್ದಾಗ ನಮ್ಮ ಮನೆಯ ಹಿಂದೆಯೇ ಒಂದು ವೈನ್ ಸ್ಟೋರ್ ಇತ್ತು. ನಾವೆಲ್ಲಾ ಅಲ್ಲಿಯ ನಿಷ್ಟಾವಂತ ಗಿರಾಕಿಗಳು. ಆಗ ಸಿದ್ದರಾಮಯ್ಯನವರು ಅಬಕಾರಿ ಸಚಿವರೂ ಆಗಿದ್ದರು. ಅಬಕಾರಿ ಇಲಾಖೆಯ ಕೆಲವರು ಆ ವೈನ್ಸ್ ಸ್ಟೋರ್ ಯಜಮಾನನಿಗೆ ಯಾವುದೊ ಖಾಸಗಿ ಕಾರಣದಿಂದ ಬಹಳ ತೊಂದರೆ ಕೊಡುತ್ತಿದ್ದರು. ಮತ್ತು ಅದನ್ನು ಸೀಜ್ ಕೂಡ ಮಾಡಿಬಿಟ್ಟರು. ಆಗ ಕೆಲವು ಕಾರ್ಯ ಕರ್ತರು ಸಿದ್ದರಾಮಯ್ಯನವರ ಬಳಿ ಹೋಗಿ ದೂರನ್ನು ನೀಡಿದಾಗ, ಮರುದಿನವೇ ಆ ಎಕ್ಸೈಜ್ ಇನ್ಸ್ಪೆಕ್ಟರ್ ಬಂದು ಕಾಲು ಹಿಡಿದುಕೊಳ್ಳುವುದೊಂದು ಬಾಕಿ. ಈ ಸಂಬಂಧದಲ್ಲಿ ಒಬ್ಬನ ಅಮಾನತ್ತು ಕೂಡ ಆಯಿತು.

ಹಣವೊಂದೇ ರಾಜಕೀಯಕ್ಕೆ ಮೂಲ ಎಂಬುದನ್ನು ಯಾವತ್ತೂ ನಂಬಂದೆ ತತ್ವಬದ್ಧ ರಾಜಕಾರಣ ಮಾಡಿದ ವಿರಳ ರಾಜಕಾರಣಿ ಸಿದ್ದರಾಮಯ್ಯ. ಎಲೆಕ್ಷನ್ ವೇಳೆಯಲ್ಲಿ ಕೆಲಸ ಮಾಡುತ್ತಿದ್ದ ಅವರ ಆತ್ಮೀಯ ಬೆಂಬಲಿಗರ ಜೊತೆ ಇದರ ಬಗ್ಗೆ ಹೇಳಿದ್ದುಂಟು: “ಥೂತ್ ಏನ್ರೋ ಈ ದುಡ್ಡುದುಡ್ಡು ಅಂತ ಸಾಯ್ತವೆ”. ಇದನ್ನು ನನಗೆ ಹೇಳಿದ್ದು ಅವರ ಹತ್ತಿರದ ಅನುಯಾಯಿಗಳಾದ ರಾಜಶೇಖರ್ ಮತ್ತು ಗುಂಡೇಗೌಡ.

ರಾಮಕೃಷ್ಣ ಹೆಗಡೆಯವರ ನವನಿರ್ಮಾಣ ಸಮಿತಿ ಎಂಬ ನೂತನ ಪಕ್ಷವೊಂದನ್ನು ಹುಟ್ಟು ಹಾಕುವುದಕ್ಕೋಸ್ಕರ ಕೆಲದ ಶುರುವಾಯಿತು. ಆ ಸಮಯದಲ್ಲಿ ದೇವೇಗೌಡರು ಮುಖ್ಯಮಂತ್ರಿ ಮತ್ತು ಸಿದ್ದರಾಮಯ್ಯ ಕ್ಯಾಬಿನೆಟ್ ಸಚಿವರು. ನನ್ನ ಸ್ನೇಹಿತ, ನಮ್ಮ ಕಾರ್ಖಾನೆಯಲ್ಲಿ ಪಾಲುದಾರನಾಗಿದ್ದ ಮತ್ತು ಕಟ್ಟಾ ಸಮಾಜವಾದಿ ರಮೇಶ್ ಬಂದಗದ್ದೆ ಈ ಗುಂಪಿನ ಸಕ್ರಿಯ ಸದಸ್ಯರಾಗಿದ್ದರು. ಸಿದ್ದರಾಮಯ್ಯನವರಿಗೆ ಈ ಸಮಾಜವಾದಿ ಪ್ರಾಮಾಣಿಕ ವ್ಯಕ್ತಿಗೆ ಒಂದು ವ್ಯವಸ್ಥೆ ಮಾಡುವ ಆಸೆ. ಒಮ್ಮೆ ಅವರ ಮನೆಗೆ ಬಂದು ರಮೇಶ್‌ರನ್ನು ಕೇಳಿಕೊಂದರು. ನೀನು ನಮ್ಮ ಪಕ್ಷವಾದ ಜನತಾದಳಕ್ಕೆ ಬಂದುಬಿಡು, ನಿನಗೆ ಒಳ್ಳೆಯ ಸ್ಥಾನಮಾನ ಕೊಡುತ್ತೇವೆಂದು. ಅವರ ಸಹೃದಯತೆ ಸದ್ಗುಣಗಳಲ್ಲಿ ಇದೂ ಒಂದು.

ಅವರು ಮುಖ್ಯಮಂತ್ರಿಯಾಗಿದ್ದಾಗ ಈಡೇರಿಸಿದ ಭರವಸೆಗಳು ಅನೇಕ. ಅದರಲ್ಲಿ ಸಣ್ಣಹಿಡುವಳಿದಾರರಿಗೆ ಹನಿ ನೀರಾವರಿ ಯೋಜನೆಯಡಿಯಲ್ಲಿ 90% ಸಹಾಯ ಧನ, ಕೃಷಿ ಹೊಂಡ ಕಾರ್ಯಕ್ರಮ, ಮತ್ತು ಬೀಜಗಳನ್ನು ಆನ್‌ಲೈನ್ ಖರೀದಿಸುವ ವ್ಯವಸ್ಥೆ- ಹೀಗೆ ಮುಂತಾದ ರೈತಪರ ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಆದರೆ ನನಗೆ ರೈತರಿಂದ ಬಂದ ಮಾಹಿತಿಯ ಪ್ರಕಾರ ಸಹಾಯಧನ ಪಡೆಯುವಲ್ಲಿ ಮತ್ತು ಆನ್‌ಲೈನ್ ಬೀಜ ಖರೀದಿಸುವ ಪ್ರಕಿಯೆಯಲ್ಲಿ ಹಲವು ತೊಂದರೆಗಳು ಎದುರಾಗುತ್ತಿವೆ ಎಂದು.

ಈಗ ಪುನಃ ಇನ್ನೂ ಹೆಚ್ಚಿನ ವೇಗದಲ್ಲಿ ಬಡವರ ಕಲ್ಯಾಣಕಾರ್ಯಕ್ರಮಗಳನ್ನು ಈಡೇರಿಸಲು ಪಣತೊಟ್ಟಿರುವ ಸಿದ್ದರಾಮಯನವರು ಅದನ್ನು ಸಾಧಿಸುವರೆಂಬ ವಿಶ್ವಾಸ ಜನತೆಗಿದೆ. ಹದಿಮೂರು ನಿವ್ವಳ ಆಯವ್ಯಯವನ್ನು ಮಂಡಿಸಿರುವ ನೂತನ ಮುಖ್ಯಮಂತ್ರಿಯವರು ಸಂಪನ್ಮೂಲಗಳನ್ನು ಕ್ರೂಢೀಕರಿಸುವಲ್ಲಿ ನಿಷ್ಣಾತರಾಗಿರುವುದರಿಂದ ಕರ್ನಾಟಕ ಒಳ್ಳೆಯ ದಿನಗಳನ್ನು ಕಾಣುತ್ತದೆ ಎಂಬ ಭರವಸೆ ನಮ್ಮೆಲ್ಲರಿಗೂ ಇದೆ.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...