ದಕ್ಷಿಣ ಕನ್ನಡದಲ್ಲಿ ರಾಜಕೀಯ ಪ್ರೇರಿತ ಕೋಮು ಹತ್ಯೆಗಳ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ಮಾಜಿ ಸಚಿವ ರಮಾನಾಥ್ ರೈ ಆಗ್ರಹಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, “ದಕ್ಷಿಣ ಜಿಲ್ಲೆಯಲ್ಲಿ ರಾಜಕೀಯ ಪ್ರೇರಿತ ಕೊಲೆಗಳಲ್ಲಿ ಶರತ್ ಮಡಿವಾಳ, ಪ್ರವೀಣ್ ನೆಟ್ಟಾರು, ಅಶ್ರಫ್, ಜಲೀಲ್, ಮಸೂದ್ ಅವರಂತಹ ಅಮಾಯಕ ಹಿಂದೂ ಮತ್ತು ಮುಸ್ಲಿಂ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ” ಎಂದಿದ್ದಾರೆ.
“ಈ ಹತ್ಯೆಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ಹೊಸದಾಗಿ ರಚನೆಯಾಗಿರುವ ರಾಜ್ಯ ಸರ್ಕಾರಕ್ಕೆ ಶೀಘ್ರವೇ ಮನವಿ ಸಲ್ಲಿಸಲಿದ್ದೇವೆ. ಈ ಹತ್ಯೆಯ ಹಿಂದೆ ಯಾರ ಕೈವಾಡವಿದೆ ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಬಿಜೆಪಿ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಭಾಗಿಯಾಗಿರಬಹುದು, ಆದರೆ ಒಬ್ಬ ಕಾಂಗ್ರೆಸ್ ಕಾರ್ಯಕರ್ತರೂ ಆರೋಪಿಯಾಗಿಲ್ಲ. ಜನರು ಸತ್ಯವನ್ನು ತಿಳಿದುಕೊಳ್ಳಲು ಅರ್ಹರು” ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು 24 ಹಿಂದುತ್ವವಾದಿಗಳನ್ನು ಕೊಂದಿದ್ದಾರೆ ಎಂಬ ಬಿಜೆಪಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ವಿವಾದಾತ್ಮಕ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, “ಪೂಂಜಾ ವಿರುದ್ಧ ಕಾಂಗ್ರೆಸ್ ಮಾನನಷ್ಟ ಮೊಕದ್ದಮೆ ಹೂಡಲಿದೆ, ಅವರ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಎಂದು ಒತ್ತಾಯಿಸಿದ್ದಾರೆ.
ಮೇ 22ರಂದು ನಡೆದ ವಿಜಯೋತ್ಸವ ಕಾರ್ಯಕ್ರಮದ ವೇಳೆ ಮಾತನಾಡಿದ್ದ ಬಿಜೆಪಿ ಶಾಸಕ ಹರೀಶ್ ಪೂಂಜಾ, “ಸಿದ್ದರಾಮಯ್ಯನವರು 24 ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ” ಎಂದಿದ್ದರು. ಅವರ ಹೇಳಿಕೆಯ ವಿಡಿಯೋ ವೈರಲ್ ಆದ ನಂತರ ಎಫ್‌ಐಆರ್ ದಾಖಲಾಗಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, “ಪೂಂಜಾ ಮತ್ತು ಮಾಜಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ವಿರುದ್ಧದ ಎಫ್‌ಐಆರ್‌ಗಳು ಕಾಂಗ್ರೆಸ್ ದ್ವೇಷದ ರಾಜಕಾರಣಕ್ಕೆ ಉದಾಹರಣೆ. ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ” ಎಂದು ಭವಿಷ್ಯ ನುಡಿದಿದ್ದಾರೆ.
ಎಂಟು ತಿಂಗಳಲ್ಲಿ 71 ಕೋಮುದ್ವೇಷ ಪ್ರಕರಣ
ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಕರ್ನಾಟಕ (ಪಿಯುಸಿಎಲ್-ಕ) ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (ಎಐಎಲ್‌ಎಜೆ), ಆಲ್ ಇಂಡಿಯಾ ಪೀಪಲ್ಸ್ ಫೋರಮ್ (ಎಐಪಿಎಫ್) ಮತ್ತು ಗೌರಿ ಲಂಕೇಶ್ ನ್ಯೂಸ್.ಕಾಂ (gaurilankeshnews.com) ಬಿಡುಗಡೆ ಮಾಡಿರುವ ವರದಿಯು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ’ಕೋಮುದ್ವೇಷ ಅಪರಾಧ’ಗಳ ಕುರಿತು ಆತಂಕ ವ್ಯಕ್ತಪಡಿಸಿದೆ.
ಈ ವರದಿಯು ದಕ್ಷಿಣ ಕನ್ನಡದಲ್ಲಿ ಜನವರಿ 2021ರಿಂದ ಸೆಪ್ಟೆಂಬರ್ 2021ರವರೆಗೆ ನಡೆದ ಮತೀಯ ಗೂಂಡಾಗಿರಿ ಮತ್ತು ದ್ವೇಷದ ಅಪರಾಧಿ ಘಟನೆಗಳನ್ನು ವಿಶ್ಲೇಷಿಸಿದೆ. ಎಂಟು ತಿಂಗಳಲ್ಲಿ 71 ಕೋಮುದ್ವೇಷ ಪ್ರಕರಣಗಳು ಜಿಲ್ಲೆಯಲ್ಲಿ ಘಟಿಸಿವೆ ಎಂದು ತಿಳಿಸಿದೆ.
ಕೋಮುದ್ವೇಷವನ್ನು ತಡೆಯುವಲ್ಲಿ ಪೊಲೀಸರ ಪಾತ್ರವನ್ನು ಈ ವರದಿ ಉಲ್ಲೇಖಿಸಿದೆ. ಜೊತೆಗೆ ಪೊಲೀಸರ ತಪ್ಪುಗಳನ್ನು ವರದಿ ಉಲ್ಲೇಖಿಸಿದೆ. ಅಂತರ ಧರ್ಮೀಯ ಸಂಬಂಧಗಳಿಗೆ ತೊಂದರೆಯುಂಟುಮಾಡಿದ ಹೆಚ್ಚಿನ ಸಂಖ್ಯೆಯ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲ. ಬದಲಾಗಿ ಅಂತರ ಧರ್ಮೀಯ ಸ್ನೇಹಿತರು ಅಥವಾ ದಂಪತಿಗಳನ್ನೇ ಪೊಲೀಸ್ ಠಾಣೆಗೆ ಕರೆಸಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಒಂದೆಡೆ ಹಿಂಸಾಚಾರ ಎಸಗಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೂ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ಸಂತ್ರಸ್ತರನ್ನು ಠಾಣೆಗೆ ಕರೆದೊಯ್ದು ಪ್ರಶ್ನಿಸುವ ಮೂಲಕ ತಪ್ಪಿತಸ್ಥರೆಂದು ಪರಿಗಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅಂತರ ಧರ್ಮೀಯ ಸಂಬಂಧಗಳನ್ನು ಬಲವಂತವಾಗಿ ಪ್ರತ್ಯೇಕಿಸುವ ಪ್ರಕ್ರಿಯೆಯಲ್ಲಿ ಪೊಲೀಸರು ಆರೋಪಿಗಳ ಮಿತ್ರರಾಗಿದ್ದಾರೆ ಎಂದು ವರದಿಯು ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿರಿ: ಬಜರಂಗದಳ ಬ್ಯಾನ್ ಚರ್ಚೆಯ ಸುತ್ತ
ಪೊಲೀಸರ ವರ್ತನೆ ಕಾನೂನಿಗೆ ವಿರುದ್ಧವಾಗಿದ್ದು, ತೆಹ್ಸೀನ್ ಪೂನಾವಾಲಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯ ನೀಡಿದ ಆದೇಶಕ್ಕೆ ವಿರುದ್ಧವಾಗಿದೆ. ಈ ಪ್ರಕರಣದಲ್ಲಿ, ‘ಅವ್ಯವಸ್ಥೆ ಮತ್ತು ಅರಾಜಕತೆಯ ಸಮಯದಲ್ಲಿ ರಾಜ್ಯವು ತನ್ನ ನಾಗರಿಕರಿಗೆ ಸಾಂವಿಧಾನಿಕ ಭರವಸೆಗಳನ್ನು ರಕ್ಷಿಸಲು ಮತ್ತು ಭದ್ರಪಡಿಸಲು ಧನಾತ್ಮಕವಾಗಿ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು’ ಎಂದು ಕೋರ್ಟ್ ಆದೇಶಿಸಿದೆ ಎಂದು ವರದಿ ಉಲ್ಲೇಖಿಸಿದೆ.
ರಾಜ್ಯ ಸರ್ಕಾರಕ್ಕೆ ಈ ವರದಿಯು ಹಲವು ಶಿಫಾರಸ್ಸುಗಳನ್ನು ಮಾಡಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು. ಸರ್ವೋಚ್ಚ ನ್ಯಾಯಾಲಯ ವಿವರಿಸಿರುವ ಪ್ರೀತಿಯ ಹಕ್ಕು ಸೇರಿದಂತೆ ಆಯ್ಕೆ ಮಾಡುವ ಹಕ್ಕನ್ನು ಎತ್ತಿಹಿಡಿಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಲತಾ ಸಿಂಗ್ ವಿರುದ್ಧ ಸ್ಟೇಟ್ ಆಫ್ ಯು.ಪಿ. ಮತ್ತು ಇತರರು ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆಯ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ವರದಿ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.


