Homeಕರ್ನಾಟಕಬಜರಂಗದಳ ಬ್ಯಾನ್ ಚರ್ಚೆಯ ಸುತ್ತ

ಬಜರಂಗದಳ ಬ್ಯಾನ್ ಚರ್ಚೆಯ ಸುತ್ತ

- Advertisement -
- Advertisement -

ಕಳೆದ ಫೆಬ್ರವರಿಯಲ್ಲಿ ನಡೆದ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸುವಂಥದ್ದು. ರಾಜಸ್ಥಾನ-ಹರಿಯಾಣ ಗಡಿಯಲ್ಲಿನ ಘಟಮೀಕ ಗ್ರಾಮದ ಇಬ್ಬರು ಮುಸ್ಲಿಮರು (ನಾಸಿರ್ ಮತ್ತು ಜುನೈದ್) ಶವವಾಗಿ ಪತ್ತೆಯಾಗಿದ್ದರು. ಅವರ ಶವಗಳು ಕಾರಿನೊಳಗೆ ಸುಟ್ಟ ಸ್ಥಿತಿಯಲ್ಲಿದ್ದವು. ಗೋರಕ್ಷಣೆ ಹೆಸರಲ್ಲಿ ದಾಂಧಲೆ ಎಬ್ಬಿಸುವ ಬಜರಂಗದಳದ ಮುಖಂಡ ಮೋನು ಮಾನೇಸರ್ ಮತ್ತು ಆತನ ಸಂಗಡಿಗರು ಈ ಹತ್ಯೆಯ ಹಿಂದೆ ಇದ್ದಾರೆಂದು ಎಫ್‌ಐಆರ್ ಆಯಿತು. ರಾಜಸ್ಥಾನ ಮತ್ತು ಹರ್ಯಾಣ ಸರ್ಕಾರಗಳ ನಡುವೆ ತಿಕ್ಕಾಟಕ್ಕೂ ಈ ಘಟನೆ ಕಾರಣವಾಯಿತು. ಮೋನು ಈ ಭಾಗದಲ್ಲಿ ಪ್ರಭಾವಿ ಹಾಗೂ ನಟೋರಿಯಸ್ ಹಿಂದುತ್ವ ಮುಖಂಡ. ಗೋರಕ್ಷಣೆ ಮಾಡುತ್ತಿದ್ದೇನೆಂದು ಹೇಳಿಕೊಳ್ಳುವ ಈತನ ಗ್ಯಾಂಗ್, ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವಿಡಿಯೊಗಳನ್ನು, ಫೋಟೋಗಳನ್ನು ಹರಿಬಿಟ್ಟು ಸುದ್ದಿಯಲ್ಲಿತ್ತು. ಶಸ್ತ್ರಾಸ್ತ್ರ ಬಳಕೆಯಲ್ಲೂ ಇವರದ್ದು ಎತ್ತಿದ ಕೈ.

ದೂರದ ಹರ್ಯಾಣಕ್ಕೆ ಹೋಗುವುದು ಬೇಡ. ನಮ್ಮ ರಾಜ್ಯದಲ್ಲಿಯೇ ಹಲವಾರು ದಾಂಧಲೆಗಳನ್ನು ಬಜರಂಗದಳ ನಡೆಸಿದೆ. ಹಿಂದೂ- ಮುಸ್ಲಿಂ ಯುವಕ, ಯುವತಿಯರು ಒಟ್ಟಿಗೆ ಮಾತನಾಡಿದರೆ ನೈತಿಕ ಗೂಂಡಾಗಿರಿ ನಡೆಸುವುದು, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸುವುದು- ಇವೆಲ್ಲಾ ಕರಾವಳಿ ಭಾಗದಲ್ಲಿ ಉತ್ತುಂಗಕ್ಕೆ ಹೋದ ಕರಾಳ ದಿನಗಳಿವೆ.

2012ರ ಇಸವಿಯಲ್ಲಿ ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇ ಮೇಲೆ ಹಿಂದುತ್ವ ಕಾರ್ಯಕರ್ತರು ದಾಳಿ ಮಾಡಿದ್ದನ್ನು ರಾಜ್ಯದ ಜನತೆ ಮರೆಯುವುದಿಲ್ಲ. ಆ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ವರ್ತನೆಗಳು ಆತಂಕಕಾರಿಯಾಗಿದ್ದವು ಎನ್ನುತ್ತಾರೆ ಸ್ಥಳದಲ್ಲಿದ್ದ ಪತ್ರಕರ್ತರು. ವರದಿ ಮಾಡಿದ ಪತ್ರಕರ್ತರ ವಿರುದ್ಧವೇ ಪ್ರಕರಣ ದಾಖಲಿಸಿದ್ದು ಭಾರೀ ಸುದ್ದಿಯಾಗಿತ್ತು.

ಬಜರಂಗದಳ ಅಥವಾ ಹಿಂದುತ್ವ ಕಾರ್ಯಕರ್ತರು ನಡೆಸುವ ಗೂಂಡಾಗಿರಿಗೆ ಪೊಲೀಸ್ ವ್ಯವಸ್ಥೆಯ ಸಹಕಾರ ಅಥವಾ ಪೊಲೀಸರಲ್ಲಿನ ಮತೀಯ ಮನಸ್ಥಿತಿಯೂ ಕಾರಣವಾಗಿವೆ; ಕರಾವಳಿಯ ಕೋಮು ಹಿಂಸೆಯ ನೈಜ ಪ್ರಕರಣಗಳನ್ನು ಪತ್ರಕರ್ತ ನವೀನ್ ಸೂರಿಂಜೆ ಅವರು ’ನೇತ್ರಾವತಿಯಲ್ಲಿ ನೆತ್ತರು’ ಕೃತಿಯಲ್ಲಿ ವಿಸ್ತೃತವಾಗಿ ದಾಖಲಿಸಿದ್ದಾರೆ.

ಮೋನು ಮಾನೇಸರ್

2014ರ ಏಪ್ರಿಲ್ 18ರಂದು ನಡೆದ ಘಟನೆ. ದನದ ವ್ಯಾಪಾರ ಮಾಡಿಕೊಂಡಿದ್ದ 23 ವರ್ಷದ ಮಹಮ್ಮದ್ ಕಬೀರ್ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿರುವ ಶೃಂಗೇರಿ ತನಿಕೋಡು ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ಎಎನ್‌ಎಫ್ ಪೊಲೀಸರು ತಡೆದಿದ್ದರು. ರೈತರಿಂದ ಖರೀದಿ ಮಾಡಿ ತಂದಿದ್ದ ಮುದಿ ದನಗಳನ್ನು ನೋಡಿ ಎಎನ್‌ಎಫ್ ಅಧಿಕಾರಿ ಕೆಂಡಮಂಡಲವಾದ. ಆತನೊಳಗಿದ್ದ ಹಿಂದುತ್ವ ಮೈಮೇಲೆ ಬಂದು, ಕಬೀರ್ ಮೇಲೆ ಗುಂಡುಹಾರಿಸಿ ಕೊಂದಿದ್ದ. ಅಂದಿನ ಸಿದ್ದರಾಮಯ್ಯನವರ ಸರ್ಕಾರ ಕಬೀರ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿತು. ಶೂಟೌಟ್ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಯಿತು. ಈ ಪ್ರಕರಣವನ್ನು ಪೊಲೀಸರು ಮುಚ್ಚಿಹಾಕಲು ಬಜರಂಗದಳವನ್ನು ಬಳಸಿಕೊಂಡರು. ಅಂದು ಕಬೀರ್ ಜೊತೆಯಲ್ಲಿದ್ದದ್ದು ಹಿಂದೂ ಧರ್ಮಕ್ಕೆ ಸೇರಿದ ಪ್ರಮೋದ್. ಆತ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ. ಆದರೆ ದಾಳಿಯ ವೇಳೆ ತಪ್ಪಿಸಿಕೊಂಡಿದ್ದ. ಪ್ರಮೋದ್‌ನನ್ನು ಅಕ್ರಮವಾಗಿ ಎರಡು ತಿಂಗಳ ಕಾಲ ಅಜ್ಞಾತ ಸ್ಥಳದಲ್ಲಿ ಕೂಡಿಹಾಕಿದ್ದ ಬಜರಂಗದಳದವರು, ಕಬೀರ್ ವಿರುದ್ಧ ಆತನ ಮೂಲಕ ವಿಡಿಯೋ ಮಾಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದರು. ಪತ್ರಿಕೆಗಳಲ್ಲೂ ಬಂತು. ಕಬೀರ್‌ನನ್ನು ಕೊಂದ ಎಎನ್‌ಎಫ್ ಪರವಾಗಿ ಸಿಐಡಿ ಮುಂದೆ ಹೇಳಿಕೆ ಕೊಟ್ಟಿದ್ದರ ಹಿಂದೆ ಬಜರಂಗದಳವಿತ್ತು. ಅಂದು ಅಧಿಕಾರದಲ್ಲಿದ್ದದ್ದು ಇದೇ ಕಾಂಗ್ರೆಸ್ ಸರ್ಕಾರ. ಈಗ ಅದೇ ಕಾಂಗ್ರೆಸ್ ಬಜರಂಗದಳವನ್ನು ನಿಷೇಧಿಸುತ್ತದೆ ಎಂಬುದು ಭಾರೀ ಸುದ್ದಿಯಾಗಿದೆ.

2023ರ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ಒಂದೆರಡು ದಿನ ಮಾಧ್ಯಮಗಳ ಚರ್ಚಾ ವಿಷಯವಾಗಿತ್ತು. ಮಹತ್ತರವಾದ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದ್ದು ವಿಮರ್ಶೆಗೆ ಒಳಪಟ್ಟಿದ್ದಕ್ಕಿಂತ, “ಸಂವಿಧಾನ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುವ ಯಾವುದೇ ಸಂಘಟನೆ ಇರಲಿ (ಬಜರಂಗದಳವಾಗಲೀ, ಪಿಎಫ್‌ಐ ಆಗಿರಲಿ) ಕ್ರಮ ಜರುಗಿಸುತ್ತೇನೆ, ನಿಷೇಧಿಸುತ್ತೇವೆ” ಎಂಬ ಭರವಸೆಯನ್ನು ಕಾಂಗ್ರೆಸ್ ನೀಡಿದ್ದು ವಿವಾದವನ್ನು ಸೃಷ್ಟಿಸಿದೆ. ಮಾಧ್ಯಮಗಳು ಪ್ರಚೋದಿಸಿದ ಕಟುಟೀಕೆಗಳ ಬೆನ್ನಲ್ಲೇ ಯೂಟರ್ನ್ ಹೊಡೆದ ಕಾಂಗ್ರೆಸ್, “ಯಾವುದೇ ಸಂಘಟನೆಗಳನ್ನು ಬ್ಯಾನ್ ಮಾಡುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ” ಎಂದು ಹೇಳುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದೆ.

ಕೋಮುದ್ವೇಷ ಕಾರುವ ಸಂಘಟನೆಗಳನ್ನು ನಿಷೇಧಿಸಬೇಕು ಎಂಬ ಕೂಗು ಇಂದು ಮೊನ್ನೆಯದ್ದಲ್ಲ. ಧರ್ಮಾಧಾರಿತವಾಗಿ ಯಾವುದೇ ಕೊಲೆಯಾದಾಗ ಸಂಘಟನೆಗಳನ್ನು ನಿಷೇಧ ಮಾಡಬೇಕೆಂಬ ಆಗ್ರಹಗಳು ಕೇಳಿಬರುತ್ತವೆ; ಮುಸ್ಲಿಂ ದ್ವೇಷ ಮತ್ತು ಕೋಮು ರಾಜಕಾರಣವನ್ನು ಪ್ರಚೋದಿಸುವ ಆರೋಪಗಳನ್ನು ಹೊತ್ತಿರುವ, ಹಿಂದುತ್ವ ಸಂಘಟನೆಗಳ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವೇ (ಆರ್‌ಎಸ್‌ಎಸ್) ಭಾರತದ ಸ್ವಾತಂತ್ರೋತ್ತರ ಇತಿಹಾಸದಲ್ಲಿ ಮೂರು ಬಾರಿ ನಿಷೇಧಕ್ಕೊಳಗಾಗಿದೆ.

ಬ್ರಾಹ್ಮಣಶಾಹಿ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದ ಸಕ್ರಿಯ ಕಾರ್ಯಕರ್ತನಾಗಿದ್ದ, ಸ್ವಾತಂತ್ರ್ಯ ಭಾರತದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆ 1948, ಜನವರಿ 30ರಂದು ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ್ದನು. ಹೀಗಾಗಿ 1999ರ ಫೆಬ್ರವರಿಯಲ್ಲಿ ಹಿಂದೂ ಮಹಾಸಭಾದ ಮುಖ್ಯಸ್ಥ ಸಾವರ್ಕರ್‌ರನ್ನು ಬಂಧಿಸಲಾಯಿತು. ಆರ್‌ಎಸ್‌ಎಸ್ ನಿಷೇಧಿಸಿ ಅದರ ಸರಸಂಘಚಾಲಕ ಗೋಳ್ವಾಲ್ಕರ್ ಅವರನ್ನೂ ಒಳಗೊಂಡಂತೆ ಹಲವಾರು ಆರೆಸ್ಸೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ನಂತರದಲ್ಲಿ ನಿರ್ಬಂಧ ತೆರವು ಮಾಡಿ, ಆರ್‌ಎಸ್‌ಎಸ್ ಸದಸ್ಯತ್ವ ತೊರೆದವರನ್ನು ಕಾಂಗ್ರೆಸ್ ಪಕ್ಷಕ್ಕೂ ಸೇರಿಸಿಕೊಳ್ಳಲಾಗಿತ್ತು.

ಸಾವರ್ಕರ್‌

1975-77ರ ಅವಧಿಯಲ್ಲಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿ ಹೇರಿದ್ದ ಕಾಲಘಟ್ಟದಲ್ಲಿ ತಮ್ಮನ್ನು ವಿರೋಧಿಸುತ್ತಿದ್ದ ಎಲ್ಲ ವಿರೋಧಪಕ್ಷಗಳ ಮೇಲೆ ನಿಷೇಧ ಹೇರಿ ಸರ್ವಾಧಿಕಾರವನ್ನು ಪ್ರದರ್ಶಿಸಿದ್ದರು. ಇಂದಿರಾಗಾಂಧಿಯವರನ್ನು ವಿರೋಧಿಸಿದ ಕಾರಣಕ್ಕೆ ಆರ್‌ಎಸ್‌ಎಸ್ ಕೂಡಾ ಆಗ ಎರಡನೇ ಬಾರಿಗೆ (1975ರ ಜುಲೈನಲ್ಲಿ) ನಿಷೇಧಕ್ಕೊಳಗಾಗಿತ್ತು. ಆದರೆ ಅಂದಿನ ಸರಸಂಚಾಲಕ ಬಾಳಾ ಸಾಹೇಬ್ ಅವರು ಇಂದಿರಾ ಗಾಂಧಿಯವರನ್ನು ಹೊಗಳಿ ಅಟ್ಟಕ್ಕೇರಿಸಿ ಪತ್ರಗಳನ್ನು ಬರೆದಿದ್ದರು. ಆರ್‌ಎಸ್‌ಎಸ್ ಹಿತೈಷಿಯೂ, ಇಂದಿರಾ ಗಾಂಧಿಯವರ ಅಭಿಮಾನಿಯೂ ಆಗಿದ್ದ ವಿನೋಭಾ ಭಾವೆಯವರ ಮಧ್ಯಪ್ರವೇಶವನ್ನು ಆರ್‌ಎಸ್‌ಎಸ್ ಬಯಸಿತು. ಈ ಎಲ್ಲದರ ಪರಿಣಾಮವಾಗಿ ಆರೆಸ್ಸೆಸ್‌ನ ಮೇಲೆ ಅಧಿಕೃತವಾಗಿ ಬ್ಯಾನ್ ತೆಗೆಯದಿದ್ದರೂ ಆರೆಸ್ಸೆಸ್‌ನ ಬಹುಪಾಲು ಕಾರ್ಯಕರ್ತರು ಬಿಡುಗಡೆಯಾದರು. ಸಿಖ್ ಉಗ್ರವಾದಿಗಳನ್ನು ಹತ್ತಿಕ್ಕುವ ಕಾಲದಲ್ಲಿ ಕೈಗೊಂಡ ಬರ್ಬರ ಕ್ರಮಗಳಲ್ಲೂ ಇಂದಿರಾ ಪರವಾಗಿ ಆರ್‌ಎಸ್‌ಎಸ್ ನಿಂತಿತ್ತು.

1992ರ ಡಿಸೆಂಬರ್ 6ರಂದು ಆರ್‌ಎಸ್‌ಎಸ್ ಅಂಗಸಂಸ್ಥೆಗಳು ಬಾಬರಿ ಮಸೀದಿ ಧ್ವಂಸದಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಸಂವಿಧಾನಬದ್ಧ ಆಡಳಿತವನ್ನು ಧ್ವಂಸ ಮಾಡುವ ಆರೋಪಗಳು ಆರ್‌ಎಸ್‌ಎಸ್ ಮೇಲಿದ್ದವು. ಬೆಂಕಿ ಉಗುಳುವ ಭಾಷಣಗಳನ್ನು ಆರ್‌ಎಸ್‌ಎಸ್ ನಾಯಕರು ಮಾಡಿದ್ದರು. ಹೀಗಾಗಿ ಆ ಸಂಘಟನೆಯನ್ನು ಅಲ್ಪ ಕಾಲದವರೆಗೆ ನಿಷೇಧ ಮಾಡಲಾಗಿತ್ತು. ಆದರೆ ಆರೇ ತಿಂಗಳಲ್ಲಿ ನಿಷೇಧ ತೆರವು ಮಾಡಲಾಗಿತ್ತು. ಸರ್ಕಾರ ಯಾವುದೇ ಪುರಾವೆಗಳನ್ನು ಒದಗಿಸದೆ ಇದ್ದುದರಿಂದ ಟ್ರಿಬ್ಯುನಲ್ ಆರ್‌ಎಸ್‌ಎಸ್ ಪರವಾಗಿ ತೀರ್ಪು ನೀಡಿತ್ತು.

ಸಂಘಪರಿವಾರದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ತನ್ನ ಸೈದ್ಧಾಂತಿಕ ವಿರೋಧಿ ಸಂಘಟನೆಗಳನ್ನು ಬ್ಯಾನ್ ಮಾಡುವ ಕೆಲಸಗಳಿಗೆ ಕೈಹಾಕಿತು. ಅಂಥವುಗಳಲ್ಲಿ ಪಿಎಫ್‌ಐ (ಪಾಪುಲರ್ ಫ್ರಂಟ್ ಆಫ್ ಇಂಡಿಯಾ) ಪ್ರಮುಖವಾಗಿ ಸೇರಿದೆ. ಬಿಜೆಪಿ ಮಾಡಿದ ಈ ಬ್ಯಾನ್ ಹಿಂದೆ ಮುಸ್ಲಿಮರ ವಿರುದ್ಧದ ದ್ವೇಷ ರಾಜಕಾರಣವಿತ್ತು. “ಹಾಗೆ ನೋಡಿದರೆ ಪಿಎಫ್‌ಐ ಬ್ಯಾನ್ ಮಾಡುವುದಾದರೆ ಬಜರಂಗದಳವನ್ನೂ ಬ್ಯಾನ್ ಮಾಡಬೇಕಾಗುತ್ತದೆ. ಈ ವಿಚಾರದಲ್ಲಿ ಬಿಜೆಪಿ ಪಕ್ಷಪಾತವನ್ನು ತೋರಿದೆ” ಎನ್ನುತ್ತಾರೆ ಚಿಂತಕ ಶಿವಸುಂದರ್.

ಅಕ್ಟೋಬರ್ 1984ರಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಯೋಧ್ಯೆಯಲ್ಲಿ ತಾಲೀಮು ಮೆರವಣಿಗೆಗಳನ್ನು ಆರಂಭಿಸಿತು. ವಿಎಚ್‌ಪಿಯ ಯುವ ಘಟಕವಾಗಿ ಅಸ್ತಿತ್ವಕ್ಕೆ ಬಂದ ಬಜರಂಗದಳ ಈಗ ದೇಶದೆಲ್ಲೆಡೆ ತನ್ನ ಕಾರ್ಯಕರ್ತರನ್ನು ಹೊಂದಿದೆ. ’ಬಜರಂಗಿ’ (ಹನುಮಾನ್) ಹೆಸರಲ್ಲಿ ಬಂದ ಈ ಸಂಘಟನೆ ಸೌಮ್ಯ ರೂಪಿ ಹನುಮಂತನನ್ನು ಉಗ್ರರೂಪಿಯಾಗಿ ಚಿತ್ರಿಸಿತು. “ಯಾವ ಧರ್ಮದ ವಿರುದ್ಧವೂ ನಾವಿಲ್ಲ, ನಮ್ಮ ಧರ್ಮ ರಕ್ಷಣೆಯ ಕೆಲಸವನ್ನಷ್ಟೇ ನಾವು ಮಾಡುತ್ತೇವೆ” ಎಂದು ಹೇಳಿಕೊಳ್ಳುವ ಬಜರಂಗದಳದ ಅಪರಾಧ ಕೃತ್ಯಗಳಿಗೆ ದೊಡ್ಡ ಇತಿಹಾಸವೇ ಇದೆ.

ಬಜರಂಗದಳವನ್ನು ಬ್ಯಾನ್ ಮತ್ತು ಅದರ ಅಪರಾಧ ಕೃತ್ಯಗಳ ಕುರಿತು ಹೈಕೋರ್ಟ್ ವಕೀಲರಾದ ಎಸ್.ಬಾಲನ್ ’ನ್ಯಾಯಪಥ’ದೊಂದಿಗೆ ವಿಸ್ತೃತವಾಗಿ ಹಂಚಿಕೊಂಡರು. ಹಿಂದುತ್ವ ಭಯೋತ್ಪಾದಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೂಡ ಆಗಿರುವ ಅವರು ಯುಎಪಿಎ (ಕಾನೂನು ಬಾಹಿರಕೃತ್ಯಗಳ ತಡೆ ಕಾಯ್ದೆ) ಅಡಿಯಲ್ಲಿ ಸಿಲುಕಿರುವ ಸಂತ್ರಸ್ತರ ಪರವೂ ಹೋರಾಡುತ್ತಿದ್ದಾರೆ.

“ಯುಎಪಿಎ ಸೆಕ್ಷನ್ 3, 4, 5 ಅಡಿಯಲ್ಲಿ ಸಂಘಟನೆಗಳನ್ನು ಬ್ಯಾನ್ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಗೃಹ ಸಚಿವಾಲಯ ಕ್ರಮಗಳನ್ನು ಜರುಗಿಸುತ್ತದೆ. ನಂತರದಲ್ಲಿ ಪ್ರಕರಣ ಟ್ರಿಬ್ಯುನಲ್‌ಗೆ ಹೋಗುತ್ತದೆ. ಆರು ತಿಂಗಳಲ್ಲಿ ವಿಚಾರಣೆ ಮುಗಿಯಬೇಕು. ಹೈಕೋರ್ಟ್‌ನ ಸಿಟ್ಟಿಂಗ್ ಜಡ್ಜ್ ಪ್ರಕರಣವನ್ನು ಆಲಿಸುತ್ತಾರೆ. ಬಜರಂಗದಳವನ್ನು ಬ್ಯಾನ್ ಮಾಡಿದರೆ- ಈ ಸಂಘಟನೆಯ ಮೇಲೆ ಎಷ್ಟು ಪ್ರಕರಣ ದಾಖಲಾಗಿವೆ, ಎಲ್ಲಿಲ್ಲಿ ಇವರು ದಾಳಿ ಮತ್ತು ಹತ್ಯೆಗಳನ್ನು ಮಾಡಿದ್ದಾರೆ, ಬಂದೂಕು ಬಳಸಿದ್ದಾರೆ, ಬಾಂಬ್ ಸಿಡಿಸಿದ್ದಾರೆ, ಮಾಬ್ ಲಿಂಚಿಂಗ್ ಮಾಡಿದ್ದಾರೆ- ಎಂಬುದನ್ನು ಪೊಲೀಸರು ಸಾಕ್ಷ್ಯಗಳನ್ನು ಒದಗಿಸಬೇಕು. ಬ್ಯಾನ್ ಮಾಡಿದ್ದು ಸರಿಯೋ ತಪ್ಪೋ ಎಂದು ಟ್ರಿಬ್ಯುನಲ್ ನಿರ್ಧರಿಸುತ್ತದೆ. ನಂತರ ಸುಪ್ರೀಂಕೋರ್ಟ್‌ಗೆ ಹೋಗಬಹುದು” ಎಂದು ಬಾಲನ್ ವಿವರಿಸಿದರು.

“ಭಾರತದಲ್ಲಿ 44 ಸಂಘಟನೆಗಳು ಬ್ಯಾನ್ ಆಗಿವೆ. ಮಾವೋಯಿಸ್ಟ್, ಕಮ್ಯುನಿಸ್ಟ್‌ಗೆ ಸಂಘಟನೆಯ ಎಂಟು ಸಂಘಟನೆಗಳು, 22 ಇಸ್ಲಾಮಿಕ್ ಸಂಘಟನೆಗಳು, ಉಳಿದಂತೆ ಪ್ರತ್ಯೇಕವಾದಿ ಹೋರಾಟದಲ್ಲಿರುವ ಬೋಡೋ ಲ್ಯಾಂಡ್, ನಾಗಾಲ್ಯಾಂಡ್, ತಮಿಳುನಾಡಿನ ಎಲ್‌ಟಿಟಿಇ ಥರದ 13 ಇತರೆ ಸಂಘಟನೆಗಳನ್ನು ಈವರೆಗೆ ಬ್ಯಾನ್ ಮಾಡಲಾಗಿದೆ. ಈ ಪಟ್ಟಿಯೊಳಗೆ ಬಜರಂಗದಳ, ಸನಾತನ ಸಂಸ್ಥೆಗಳೂ ಸೇರಬೇಕು” ಎಂದು ಅಭಿಪ್ರಾಯಪಟ್ಟರು.

ಬಾಲನ್

“ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ 4500 ಭಯೋತ್ಪಾದನಾ ಕೃತ್ಯಗಳು ನಡೆದಿವೆ ಎಂದು ಅಮೆರಿಕದಲ್ಲಿರುವ ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದ ಅಧ್ಯಯನ ವರದಿಯೊಂದು ಹೇಳುತ್ತದೆ. ಇತರರಿಗೆ ಹೋಲಿಸಿದರೆ ಹಿಂದುತ್ವ ಸಂಘಟನೆಗಳ ಪಾತ್ರವೇ ಹೆಚ್ಚಿದೆ. ಇಸ್ಲಾಮಿಕ್ ಸಂಘಟನೆಗಳ ಭಯೋತ್ಪಾದನಾ ಕೃತ್ಯ 1%ನಷ್ಟು ಇಲ್ಲ ಎನ್ನುತ್ತದೆ ವರದಿ. ಆದರೆ 22 ಮುಸ್ಲಿಂ ಸಂಘಟನೆಗಳು ಬ್ಯಾನ್ ಆಗಿವೆ. ಸನಾತನ ಸಂಸ್ಥಾ, ಬಜರಂಗದಳ, ಆರ್‌ಎಸ್‌ಎಸ್ ಥರದ ಸಂಘಟನೆಗಳು ಮಾಡಿರುವ ಭಯೋತ್ಪಾದನೆ ಪಟ್ಟಿ ಶೇ.35ರಷ್ಟಿದೆ ಎನ್ನಲಾಗುತ್ತಿದೆ. ಇಂಥವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ” ಎಂದು ಬಾಲನ್ ವಿಷಾದಿಸಿದರು.

“ಹೈದ್ರಾಬಾದ್ ಮೆಕ್ಕಾ ಮದೀನಾ ಬಾಂಬ್ ಬ್ಲಾಸ್ಟ್‌ನಲ್ಲಿ 20 ಜನರು ಸತ್ತರು. ಅದರಲ್ಲಿ ಬಜರಂಗದಳದ ಪಾತ್ರವಿತ್ತು. ಮಾಲೇಗಾಂವ್ ಬಾಂಬ್ ಬ್ಲಾಸ್ಟ್, ಸಂಜೋತ ಎಕ್ಸ್‌ಪ್ರೆಸ್ ಬಾಂಬ್ ಬ್ಲಾಸ್ಟ್, ಅಜ್ಮೀರ್ ಬಾಂಬ್ ಬ್ಲಾಸ್ಟ್, ಬಿಲ್ಕಿಸ್ ಬಾನೋ ಅತ್ಯಾಚಾರ- ಇವೆಲ್ಲದರ ಹಿಂದೆ ಬಜರಂಗದಳ ಮತ್ತು ಇತರ ಹಿಂದುತ್ವ ಸಂಘಟನೆಗಳ ಪಾತ್ರವಿದೆ. ಗುಜರಾತ್ ಗಲಭೆಯಲ್ಲಿ 2000 ಮುಸಲ್ಮಾನರ ಹತ್ಯೆ, ಮುಜಫರ್‌ನಗರ ಗಲಭೆ, ದನದ ಮಾಂಸ ಸಾಗಿಸುತ್ತಿದ್ದಾರೆಂದು ಮಾಬ್ ಲಿಂಚಿಂಗ್, ಹಿಜಾಬ್ ವಿಚಾರದಲ್ಲಿ ಹೆಣ್ಣುಮಕ್ಕಳ ದೌರ್ಜನ್ಯ- ಇವೆಲ್ಲದರಲ್ಲೂ ಬಜರಂಗದಳ ಮತ್ತು ಇತರ ಹಿಂದುತ್ವ ಸಂಘಟನೆಗಳ ಪಾತ್ರವಿದೆ. ಇದೊಂದು ಭಯೋತ್ಪಾದಕ ಸಂಘಟನೆ. ಆದರೆ ಇದಕ್ಕೆ ಆಡಳಿತಾರೂಢ ಸರ್ಕಾರದ ಬೆಂಬಲವಿದೆ. ಬ್ಯಾನ್ ಮಾಡಲು ಬಿಡುವುದಿಲ್ಲ. ಬಿಜೆಪಿ ಸರ್ಕಾರದ ಆಪ್ತ ಸಂಘಟನೆ ಬಜರಂಗದಳ. ಅದು ಬ್ಯಾನ್ ಆಗಲು ಸಾಧ್ಯವೇ?” ಎಂದು ಪ್ರಶ್ನಿಸಿದರು.

“ಮುಸ್ಲಿಮರನ್ನು ಅರೆಸ್ಟ್ ಮಾಡಿದಾಗ, ಅವರನ್ನು ಐಎಸ್‌ಐಎಸ್‌ಗೆ ಲಿಂಕ್ ಮಾಡುವುದೋ ಅಥವಾ ಭಯೋತ್ಪಾದನೆಗೆ ಥಳುಕು ಹಾಕುವುದೋ ನಡೆಯುತ್ತದೆ. ನಕಲಿ ನರೆಟಿವ್ ಕಟ್ಟಲಾಗುತ್ತದೆ. ಸನಾತನ ಸಂಸ್ಥಾ, ಬಜರಂಗದಳ ಸಂಘಟನೆಗಳು ಬಲಪಂಥೀಯ ಟೆರರಿಸ್ಟ್ ಸಂಘಟನೆಗಳಾಗಿವೆ. ಮಾಫಿಯಾಗಳು, ರೌಡಿಗಳು, ಗಡಿಪಾರಾದವರು, ಭೂ ಮಾಫಿಯಾದವರೆಲ್ಲ- ಬಜರಂಗದೊಳಗೆ ಇದ್ದಾರೆ. ಕರ್ನಾಟಕದಲ್ಲಿ ಗೌರಿ ಲಂಕೇಶ್, ಎಂ.ಎಂ.ಕಲ್ಬುರ್ಗಿಯವರನ್ನು ಹಿಂದುತ್ವವಾದಿಗಳು ಹತ್ಯೆ ಮಾಡಿದರು. ಮಸೀದಿ ಮೇಲೆ ಇವರೇ ಪಾಕಿಸ್ತಾನದ ಬಾವುಟ ಹಾರಿಸಿ ಮುಸ್ಲಿಮರ ಮೇಲೆ ಗೂಬೆ ಕೂರಿಸುತ್ತಾರೆ, ಕ್ರೈಸ್ತರ ಮೇಲೆ ದಾಳಿ, ನನ್‌ಗಳ ಮೇಲೆ ಅತ್ಯಾಚಾರ, ದಲಿತ ಹೆಣ್ಣುಮಕ್ಕಳ ಮೇಲೆ ಬಲಾತ್ಕಾರದಂತಹ ಪ್ರಕರಣದಲ್ಲೂ ಬಜರಂಗದಳದ ಹೆಸರುಗಳಿವೆ. ದಲಿತರು ಮೀಸೆ ಬಿಟ್ಟರೆ ಹೊಡೆದಿದ್ದಾರೆ. ಇಂಥವರನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಲೇಬೇಕು. ಆದರೆ ಆಗಲ್ಲ. ಕಾನೂನು ಮೇಕರ್, ಲಾ ಬ್ರೇಕರ್, ಲಾ ಕೀಪರ್- ಎಲ್ಲವೂ ಅವರೇ ಆಗಿರುವಾಗ ಬ್ಯಾನ್ ಸಾಧ್ಯವೇ? ಭಯೋತ್ಪಾದನೆ ಮಾಡುವವರ ಬಳಿಯೇ ಅಧಿಕಾರವಿದೆ. ಹಿಟ್ಲರ್ ತಾನಾಗಿಯೇ ನಾಜಿ ಪಾರ್ಟಿಯನ್ನು ಬ್ಯಾನ್ ಮಾಡಲು ಸಾಧ್ಯವೇ?” ಎಂದು ಕೇಳಿದರು.

ಇದನ್ನೂ ಓದಿ: ನೈತಿಕತೆಗೂ, ಮೊಟ್ಟೆ-ಮಾಂಸದಂಗಡಿಗೂ ಎತ್ತನಿಂದೆತ್ತ ಸಂಬಂಧವಯ್ಯಾ?

“ಕಲ್ಲನ್ನು ಮುಸಲ್ಮಾನರು ಎಸೆದರೆ ಯುಎಪಿಎ ಹಾಕುತ್ತಾರೆ. ಸಂಘಪರಿವಾರದವರು ಬಾಂಬ್ ಎಸೆದರೆ ಸಣ್ಣಪುಟ್ಟ ಪ್ರಕರಣ ದಾಖಲಿಸುತ್ತಾರೆ. ಆದರೆ ಸನಾತನ ಸಂಸ್ಥೆ ಮೇಲೆ ಯುಎಪಿಎ ಪ್ರಕರಣ (ದಾಬೋಲ್ಕರ್ ಹತ್ಯೆ ಸಂಬಂಧ) ದಾಖಲಾಗಿದೆ. ಹೇಮಂತ್ ಕರ್ಕರೆಯಂತಹ ಅಧಿಕಾರಿಗಳು ಇದ್ದಾಗ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿತ್ತು. ಮಹಾರಾಷ್ಟ್ರದಲ್ಲಿ ಭಯೋತ್ಪಾದಕ ನಿಗ್ರಹ ದಳ ಸಕ್ರಿಯವಾಗಿತ್ತು. ಹಿಂದುತ್ವ ಸಂಘಟನೆಗಳ ಮೇಲೆ ಪ್ರಕರಣಗಳನ್ನು ಹಾಕಿದ್ದರು. 2014ರ ನಂತರ ಅಧಿಕಾರ ಬದಲಾಗಿದೆ. ಈಗ ನಿಗ್ರಹಿಸುವವರು ಯಾರು?” ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್ ರೂಪಿಸುವ ಕೋಮುವಾದಿ ತಂತ್ರಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಹಲವಾರು ಅಂಗಸಂಸ್ಥೆಗಳು ಉಗ್ರವಾಗಿ ಕೆಲಸ ಮಾಡುತ್ತವೆ. ಅಂಥವುಗಳಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದಂತಹ ಸಂಘಟನೆಗಳು ಸೇರಿವೆ. ಮಾನಸಿಕವಾಗಿಯಷ್ಟೇ ಅಲ್ಲದೆ, ದೈಹಿಕ ಹಲ್ಲೆಯನ್ನೂ ನಡೆಸಬಲ್ಲ ಬಜರಂಗದಳವನ್ನು ನಿಷೇಧ ಮಾಡುವ ಕುರಿತು ಭಿನ್ನ ಅಭಿಪ್ರಾಯಗಳು ಇವೆ. ಬ್ಯಾನ್ ಸಂಸ್ಕೃತಿ ಯಾವುದೇ ಬದಲಾವಣೆಯನ್ನು ತರುವುದಿಲ್ಲ ಎಂಬ ಮಾತುಗಳೂ ಕೇಳಿಬರುತ್ತವೆ.

ವಿಚಾರಗಳನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ: ಶಿವಸುಂದರ್

ಚಿಂತಕರಾದ ಶಿವಸುಂದರ್ ’ನ್ಯಾಯಪಥ’ಕ್ಕೆ ಪ್ರತಿಕ್ರಿಯಿಸಿ, “ಸೈದ್ಧಾಂತಿಕ ವಿಚಾರಗಳನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ. ಅವರ ಕ್ರಿಮಿನಲ್ ಅಥವಾ ವಿಧ್ವಂಸಕ ಕೃತ್ಯಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸುವುದು ಬೇರೆ, ಇಡೀ ಸಂಘಟನೆಯ ಚಟುವಟಿಕೆಗಳನ್ನೇ ತಡೆಯುವುದು ಬೇರೆ. ಯಾವುದೇ ರೀತಿಯ ಅನುಕೂಲವನ್ನು ಈ ಬ್ಯಾನ್‌ಗಳು ಮಾಡುವುದಿಲ್ಲ” ಎಂದು ಎಚ್ಚರಿಸಿದರು.

“ಬಲಪಂಥೀಯ ಸಂಘಟನೆಗಳನ್ನು ಆಡಳಿತಾರೂಢ ಪಕ್ಷಗಳು ಯಾವುದೇ ಕಾರಣಕ್ಕೂ ಬ್ಯಾನ್ ಮಾಡುವುದಿಲ್ಲ. ಬ್ಯಾನ್ ಎಂಬುದನ್ನು ನೆಪಮಾತ್ರಕ್ಕೆ ಮಾತ್ರ ಆಗಿರುತ್ತದೆ. ಉದಾಹರಣೆಗೆ ಆರ್‌ಎಸ್‌ಎಸ್ ಮೂರು ಸಲ ಬ್ಯಾನ್ ಆಗಿತ್ತು. ಆದರೆ ಬ್ಯಾನ್ ಆದ ಮರುದಿನವೇ ಬೇರೆ ಹೆಸರಲ್ಲಿ ಕೆಲಸ ಮಾಡುವುದನ್ನು ಆರ್‌ಎಸ್‌ಎಸ್ ಶುರು ಮಾಡಿತ್ತು. ಅಂದರೆ ಸಂಪೂರ್ಣವಾಗಿ ಯಾವುದನ್ನೂ ಅಳಿಸಿಹಾಕಲು ಸಾಧ್ಯವಿಲ್ಲ. ಬ್ಯಾನ್ ಮಾಡಿ ಎಂದು ಆಗ್ರಹಿಸುವವರು ಈ ಎಚ್ಚರಿಕೆಯನ್ನು ಇಟ್ಟುಕೊಳ್ಳಬೇಕು. ಮುಂದೊಂದು ದಿನ ಸರ್ಕಾರ ನಮ್ಮನ್ನೂ ಬ್ಯಾನ್ ಮಾಡಲು ಅವಕಾಶ ನೀಡಿದಂತಾಗುತ್ತದೆ” ಎಂದು ಹೇಳಿದರು.

ಶಿವಸುಂದರ್

“ಬ್ಯಾನ್ ವಿಚಾರದಲ್ಲಿ ಬಿಜೆಪಿಯು ಹಿಪೋಕ್ರಸಿ ಪ್ರದರ್ಶಿಸಿದೆ. ಭಯೋತ್ಪಾದನೆಯ ವ್ಯಾಪ್ತಿಯಲ್ಲಿ ಪಿಎಫ್‌ಐ ಬರುವುದಾದರೆ ಬಜರಂಗದಳವೂ ಬರುತ್ತದೆ. ಆದರೆ ಧರ್ಮದ ಪಕ್ಷಪಾತ ಇಲ್ಲಿ ಎದ್ದು ಕಾಣುತ್ತದೆ. ಮುಖ್ಯವಾಗಿ ಯಾರನ್ನೂ ಬ್ಯಾನ್ ಮಾಡದೆ ಜನರೇ ಅವರನ್ನು ತಿರಸ್ಕರಿಸುವಂತೆ ಅರಿವು ಮೂಡಿಸಿ, ಅವರ ಅಸ್ತಿತ್ವವನ್ನು ಇಲ್ಲವಾಗಿಸುವುದು ಸರಿಯಾದ ರಾಜಕೀಯ ಪ್ರಕ್ರಿಯೆ” ಎಂದು ಅಭಿಪ್ರಾಯಪಟ್ಟರು.

ಬಜರಂಗದಳದ ಹಿಂಸಾ ಕೃತ್ಯಗಳು; ಒಂದು ಕಿರುಪಟ್ಟಿ

ಬಜರಂಗದಳವನ್ನು ಬ್ಯಾನ್ ಮಾಡುವ ಸಂಬಂಧ ಚರ್ಚೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಅದರ ಅಪರಾಧದ ಇತಿಹಾಸವನ್ನು ಮೆಲುಕು ಹಾಕುವುದು ಸೂಕ್ತವೆನಿಸುತ್ತದೆ. ಬಲವಂತದ ಮತಾಂತರದ ಆರೋಪದಲ್ಲಿ ಚರ್ಚ್‌ಗಳ ಮೇಲೆ ದಾಳಿ, ಹಿಂದೂ-ಮುಸ್ಲಿಂ ಸ್ನೇಹಿತರು ಮಾತನಾಡಿದರೆ ಮಾರಲ್ ಪೊಲೀಸಿಂಗ್, ಗೋರಕ್ಷಣೆ ಹೆಸರಲ್ಲಿ ಹತ್ಯೆ- ಹೀಗೆ ಧಾರ್ಮಿಕ ಮೂಲಭೂತವಾದ ಹಿನ್ನೆಲೆಯಲ್ಲಿ ಬಜರಂಗದಳ ಹಲವು ದಾಳಿಗಳನ್ನು ನಡೆಸಿರುವುದನ್ನು ಕಾಣಬಹುದು. ಅಂತಹ ಕೆಲವು ಪ್ರಕರಣಗಳ ಪಟ್ಟಿಯನ್ನು ’ಇಂಡಿಯಾ ಟುಡೇ’ ಪಟ್ಟಿ ಮಾಡಿದೆ. ಅವುಗಳು ಕಾಲಾನುಕ್ರಮದಲ್ಲಿ ಇಲ್ಲಿ ನೀಡಿಲ್ಲ; ನಡೆದ ವರ್ಷಗಳು ಮೇಲುಕೆಳಗಾಗಿವೆ.

2008 ಚರ್ಚ್ ದಾಳಿ: 2008ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕರಾವಳಿ ಕರ್ನಾಟಕದಲ್ಲಿ ಚರ್ಚ್‌ಗಳು ಮತ್ತು ಕ್ರಿಶ್ಚಿಯನ್ ಸಂಸ್ಥೆಗಳ ಮೇಲೆ ಸರಣಿ ದಾಳಿಗಳು ನಡೆದವು. ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರ್ಕಾರ ತನಿಖೆಗಾಗಿ ಜಸ್ಟಿಸ್ ಬಿ.ಕೆ.ಸೋಮಶೇಖರ ಆಯೋಗವನ್ನು ರಚಿಸಿತ್ತು.

2009ರ ಸೆಪ್ಟೆಂಬರ್‌ನಲ್ಲಿ ಆಗಿನ ಸರ್ಕಾರದ ಮುಂದೆ ಮಧ್ಯಂತರ ವರದಿ ಸಲ್ಲಿಕೆಯಾಯಿತು. “ಮಂಗಳೂರು ಪ್ರದೇಶದಲ್ಲಿ ಚರ್ಚ್‌ಗಳ ಮೇಲೆ ನಡೆದ ದಾಳಿಯಲ್ಲಿ ಬಜರಂಗದಳದಂತಹ ಬಲಪಂಥೀಯ ಗುಂಪುಗಳ ಕೈವಾಡವಿದೆ” ಎಂದು ಆಯೋಗ ತಿಳಿಸಿತ್ತು.

ಏಪ್ರಿಲ್ 1, 2022: ’ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಿ’ ಎಂಬ ಅಭಿಯಾನವನ್ನು ವಿಎಚ್‌ಪಿ ಮತ್ತು ಬಜರಂಗದಳ ಹಮ್ಮಿಕೊಂಡಿದ್ದವು. ಹಲಾಲ್ ಮಾಂಸವನ್ನು ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಐವರು ಬಜರಂಗದಳ ಕಾರ್ಯಕರ್ತರನ್ನು ಬಂಧಿಸಲಾಯಿತು.

ಜನವರಿ 18, 2022: ಬಜರಂಗದಳದ ಸದಸ್ಯರನ್ನು ಒಳಗೊಂಡ ಗುಂಪು ಗದಗ ಜಿಲ್ಲೆಯಲ್ಲಿ 20 ವರ್ಷದ ಮುಸ್ಲಿಂ ಯುವಕನನ್ನು ಚಾಕುವಿನಿಂದ ಇರಿದು ಕೊಂದಿತ್ತು.

ಏಪ್ರಿಲ್ 1, 2021: ತನ್ನ ಹಿಂದೂ ಸ್ನೇಹಿತೆಯೊಂದಿಗೆ ಖಾಸಗಿ ಬಸ್‌ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಮಂಗಳೂರಿನ ಪಂಪ್‌ವೆಲ್ ಬಳಿ ಬಜರಂಗದಳದವರು ಗುಂಪು ಹಲ್ಲೆ ನಡೆಸಿದ್ದರು. ಮಂಗಳೂರು ನಗರ ಪೊಲೀಸರು ಬಜರಂಗದಳದ ನಾಲ್ವರನ್ನು ಏಪ್ರಿಲ್ 2ರಂದು ಬಂಧಿಸಿ ಗಲಭೆ, ಕೋಮು ದ್ವೇಷ, ಹಲ್ಲೆ ಮತ್ತು ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿದ್ದರು.

ನವೆಂಬರ್ 28, 2021: ಬೇಲೂರು ಪಟ್ಟಣದಲ್ಲಿ ಶಾಂತಿಯುತವಾಗಿ ಪ್ರಾರ್ಥನೆ ಮಾಡುತ್ತಿದ್ದ ಕ್ರಿಶ್ಚಿಯನ್ನರಿಗೆ ಬಜರಂಗದಳದ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಆ ಕಾರ್ಯಕರ್ತರು “ಬಲವಂತದ ಧಾರ್ಮಿಕ ಮತಾಂತರಗಳು ನಡೆಯುತ್ತಿವೆ” ಎಂದು ಆರೋಪಿಸಿದ್ದರು. ಸ್ಥಳದಲ್ಲಿದ್ದ ಮಹಿಳೆಯರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.

ಜೂನ್ 1, 2018: ಜಾನುವಾರು ಸಾಗಾಟ ಮಾಡುತ್ತಿದ್ದ ಹುಸೇನಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಜರಂಗದಳ ಕಾರ್ಯಕರ್ತರನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ 19, 2013: ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲೆಯ ಮೂಡುಬೆಳ್ಳೆಯಲ್ಲಿ ಕ್ರೈಸ್ತರ ಪ್ರಾರ್ಥನಾ ಮಂದಿರದ ಮೇಲೆ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದರು.

ಏಪ್ರಿಲ್ 5, 2023: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಬಳಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕನೊಬ್ಬ ಹಿಂದೂ ಸ್ನೇಹಿತೆಯೊಂದಿಗೆ ಮಾತನಾಡಿದ ಎಂಬ ಕಾರಣಕ್ಕೆ ಬಜರಂಗದಳದ ಗ್ಯಾಂಗ್ ಹಲ್ಲೆ ಮಾಡಿತ್ತು.

ಮಾರ್ಚ್ 17, 2023: ಶಿವಮೊಗ್ಗದಲ್ಲಿನ ಹೋಟೆಲ್‌ವೊಂದರಲ್ಲಿ ಮಹಿಳೆಯರು ನೈಟ್ ಔಟ್ ಪಾರ್ಟಿಗಾಗಿ ಸೇರಿದ್ದರು. ಇಂತಹ ಪಾರ್ಟಿಗಳು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದ್ದು, ಹೋಟೆಲ್ ಒಳಗೆ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಹೋಟೆಲ್ ಹೊರಗೆ ಬಜರಂಗದಳ ಪ್ರತಿಭಟನೆ ನಡೆಸಿತ್ತು.

ನವೆಂಬರ್ 24, 2022: ಮಂಗಳೂರಿನಲ್ಲಿ ಹಿಂದೂ ಯುವತಿಯೊಂದಿಗೆ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿತು. ಬಜರಂಗದಳದ ಸದಸ್ಯರು ದಾಳಿ ಮಾಡಿದ್ದಾರೆಂಬ ವರದಿಗಳಿದ್ದರೂ, ಅದನ್ನು ಬಜರಂಗದಳ ತಳ್ಳಿಹಾಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್ 28, 2021: ವಿವಿಧ ಧರ್ಮದ ಹಿನ್ನೆಲೆಯ ಸ್ನೇಹಿತರು ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದರು. ಅವರು ಮಲ್ಪೆ ಬೀಚ್‌ಗೆ ಭೇಟಿ ನೀಡಿದ್ದರು. ಆದರೆ ಸುರತ್ಕಲ್ ಟೋಲ್ ಬಳಿ ಅವರಿಗೆ ಬಜರಂಗದಳ ಸದಸ್ಯರು ಅಡ್ಡಿಪಡಿಸಿದ್ದರು.

ಅಕ್ಟೋಬರ್ 6, 2021: ಸಂತ ಅಲೋಷಿಯಸ್ ಕಾಲೇಜು ಆಡಳಿತ ಮಂಡಳಿಯು ತಮ್ಮ ವ್ಯಾಪ್ತಿಯಲ್ಲಿನ ಪಾರ್ಕ್ ಒಂದಕ್ಕೆ ಫಾದರ್ ಸ್ವಾಮಿಯವರ ಹೆಸರನ್ನು ಇಡಲು ಮುಂದಾಗಿತ್ತು. ಇದನ್ನು ವಿರೋಧಿಸಿದ ಎಬಿವಿಪಿ, ವಿಎಚ್‌ಪಿ ಮತ್ತು ಬಜರಂಗದಳದ ಮುಖ್ಯಸ್ಥರು ಕಾಲೇಜಿಗೆ ಎಚ್ಚರಿಕೆಯನ್ನು ನೀಡಿದ್ದರು. ಯಾವುದೇ ಅಹಿತಕರ ಘಟನೆ ನಡೆದರೆ ಕಾಲೇಜಿನ ಆಡಳಿತ ಮಂಡಲಿಯೇ ಕಾರಣ ಎಂದಿದ್ದರು.

ಇದನ್ನೂ ಓದಿ: ಕರಾವಳಿ: ಯುವಜನರ ಕೈಗೆ ಶಸ್ತ್ರ ನೀಡಿದ ಬಿಜೆಪಿ ಬೆಂಬಲಿತ ಸಂಘಟನೆ ಬಜರಂಗದಳ

ಅಕ್ಟೋಬರ್ 17, 2021: ಬಜರಂಗದಳ ಮತ್ತು ವಿಎಚ್‌ಪಿ ಕಾರ್ಯಕರ್ತರು ಹುಬ್ಬಳ್ಳಿಯ ತಾತ್ಕಾಲಿಕ ಚರ್ಚ್ ಮೇಲೆ ಅಟ್ಯಾಕ್ ಮಾಡಿದ್ದರು. ಮತಾಂತರ ನಡೆಯುತ್ತಿದೆ ಎಂದು ದೂರಿದ್ದ ಇವರು, ಭಜನೆ ಮತ್ತು ಹಿಂದೂ ಪಾರ್ಥನೆಗಳನ್ನು ಮೈಕ್‌ನಲ್ಲಿ ಹಾಕಿ ಕಲಹ ಹುಟ್ಟುಹಾಕಿದ್ದರು.

ಎಂಟು ತಿಂಗಳಲ್ಲಿ 71 ಕೋಮುದ್ವೇಷ ಪ್ರಕರಣ

ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಕರ್ನಾಟಕ (ಪಿಯುಸಿಎಲ್-ಕ) ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (ಎಐಎಲ್‌ಎಜೆ), ಆಲ್ ಇಂಡಿಯಾ ಪೀಪಲ್ಸ್ ಫೋರಮ್ (ಎಐಪಿಎಫ್) ಮತ್ತು ಗೌರಿ ಲಂಕೇಶ್ ನ್ಯೂಸ್.ಕಾಂ (gaurilankeshnews.com) ಬಿಡುಗಡೆ ಮಾಡಿರುವ ವರದಿಯು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ’ಕೋಮುದ್ವೇಷ ಅಪರಾಧ’ಗಳ ಕುರಿತು ಆತಂಕ ವ್ಯಕ್ತಪಡಿಸಿದೆ.

ಈ ವರದಿಯು ದಕ್ಷಿಣ ಕನ್ನಡದಲ್ಲಿ ಜನವರಿ 2021ರಿಂದ ಸೆಪ್ಟೆಂಬರ್ 2021ರವರೆಗೆ ನಡೆದ ಮತೀಯ ಗೂಂಡಾಗಿರಿ ಮತ್ತು ದ್ವೇಷದ ಅಪರಾಧಿ ಘಟನೆಗಳನ್ನು ವಿಶ್ಲೇಷಿಸಿದೆ. ಎಂಟು ತಿಂಗಳಲ್ಲಿ 71 ಕೋಮುದ್ವೇಷ ಪ್ರಕರಣಗಳು ಜಿಲ್ಲೆಯಲ್ಲಿ ಘಟಿಸಿವೆ ಎಂದು ತಿಳಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ

0
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಕಾರಣವಿಲ್ಲದೆ ತನ್ನ ನಾಮಪತ್ರ...