2024ರಲ್ಲಿ ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಅವರು ಒಪ್ಪುವ ಪಕ್ಷಗಳು ಅಥವಾ ನಾಯಕರು ಮಾತ್ರ 2029ರ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭೋಪಾಲ್‌ನ ಗಾಂಧಿ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ”2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಮರಳಿದರೆ, ಅವರು ಅನುಮೋದಿಸುವ ನಾಯಕರು ಅಥವಾ ಪಕ್ಷಗಳು ಮಾತ್ರ 2029ರ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತದೆ. ಅನೇಕ ದೇಶಗಳಲ್ಲಿ ಇದಕ್ಕೆ ಪೂರ್ವನಿದರ್ಶನವಿದೆ ಎಂದು ಟೀಕಿಸಿದರು.
”ನಮ್ಮ ಸರ್ವೋಚ್ಚ ನಾಯಕ (ಪಿಎಂ ಮೋದಿ) ಮಾತನಾಡುವ ಕಲೆಯಲ್ಲಿ ಪರಿಣತರಾಗಿದ್ದಾರೆ ಆದರೆ ಕೇಳುವಲ್ಲಿ ಅಲ್ಲ. ಇದು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದ ಸರ್ವಾಧಿಕಾರಿಯ ವಿಶಿಷ್ಟ ಲಕ್ಷಣವಾಗಿದೆ” ಎಂದು ಸಿಂಗ್ ಹೇಳಿದರು.
ಕಳೆದ ಒಂಬತ್ತು ವರ್ಷಗಳ ಆಡಳಿತದಲ್ಲಿ ಪ್ರಧಾನಿ ಮೋದಿ ಅವರು ತಮ್ಮನ್ನ ತಾವು ಪ್ರಚಾರಪಡಿಸಿಕೊಳ್ಳುವುದನ್ನೇ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೋದಿಯನ್ನು ದೇವರೊಂದಿಗೆ ಚರ್ಚೆಗೆ ಕೂರಿಸಿದರೆ, ದೇವರೇ ಗೊಂದಲಕ್ಕಿಡಾಗುತ್ತಾನೆ: ರಾಹುಲ್ ವ್ಯಂಗ್ಯ
”ದೇಶದ ಸಾಮಾಜಿಕ ಆರ್ಥಿಕತೆ ಹಾಳಾಗಿದೆ, ಅವರು (ಪ್ರಧಾನಿ ಮೋದಿ) ದೇಶಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದ್ದಾರೆ, ಅವರು ಧರ್ಮದ ಹೆಸರಲ್ಲಿ ಇಡೀ ದೇಶದ ಜನರನ್ನು ರಸ್ತೆಗೆ ತಂದಿದ್ದಾರೆ. ಒಬ್ಬ ವ್ಯಕ್ತಿ ಮೋದಿಯ ಅಭಿಮಾನಿಯಾಗದಿದ್ದರೆ ಅವರನ್ನು ದೇಶದ್ರೋಹಿ ಎಂದು ಬ್ರಾಂಡ್ ಮಾಡಲಾಗಿದೆ ಮತ್ತು ಉಳಿದವರು ದೇಶಪ್ರೇಮಿಗಳು, ಯಾರಾದರೂ ಪ್ರಧಾನಿ ಮೋದಿಯನ್ನು ಟೀಕಿಸಿದರೆ, ಇಡಿ, ಐಟಿ ಮತ್ತು ಸಿಬಿಐ ಬಿಟ್ಟು ದಾಳಿ ಮಾಡಿಸಲಾಗುತ್ತದೆ” ಎಂದು ಸಿಂಗ್ ಆರೋಪಿಸಿದರು.
ಬುಧವಾರ ರಾಹುಲ್ ಗಾಂಧಿ ಅವರು ಅಮೆರಿಕಾದಲ್ಲಿ ನಡೆದ ‘ಮೊಹಬ್ಬತ್ ಕಿ ದುಕಾನ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಗೂ ಆಡಳಿತರೂಢ ಬಿಜೆಪಿಯನ್ನು ಟೀಕಿಸಿದ್ದರು. ”ಬಿಜೆಪಿಗರು ವಿಜ್ಞಾನಿಗಳಿಗೆ ವಿಜ್ಞಾನವನ್ನು ವಿವರಿಸುತ್ತಾರೆ. ಇತಿಹಾಸಕಾರರಿಗೆ ಇತಿಹಾಸವನ್ನು ವಿವರಿಸುತ್ತಾರೆ. ಅಲ್ಲದೆ ಸೈನ್ಯ ಹಾಗೂ ವಾಯುಪಡೆಗೂ ಪಾಠ ಮಾಡಲು ಹೋಗುತ್ತಾರೆ. ಆದರೆ ಅವರಿಗೆ ಅದ್ಯಾವುದರ ಬಗ್ಗೆಯೂ ತಿಳುವಳಿಕೆ ಇಲ್ಲ” ಎಂದು ಕುಟುಕಿದ್ದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ದೇವರೊಂದಿಗೆ ಚರ್ಚೆಗೆ ಕೂರಿಸಿದರೆ, ಅವರು ಬ್ರಹ್ಮಾಂಡ ಕಾರ್ಯನಿರ್ವಹಿಸುವ ಬಗ್ಗೆ ಮಾಡುವ ವಿವರಣೆಗೆ ದೇವರು ನಾನೇನು ಸೃಷ್ಠಿ ಮಾಡಿದ್ದೇನೆ ಎಂಬ ಗೊಂದಲಕ್ಕೊಳಗಾಗುತ್ತಾನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವ್ಯಂಗ್ಯವಾಡಿದ್ದರು.


