“2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಕೈಸರ್‌ಗಂಜ್ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ” ಎಂದು ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ, ಕುಸ್ತಿ ಫೆಡರೇಶನ್ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಅಪ್ರಾಪ್ತ ವಯಸ್ಸಿನ ಕುಸ್ತಿಪಟು ಸೇರಿದಂತೆ ಏಳು ಮಂದಿ ಮಹಿಳಾ ಕುಸ್ತಿಪಟುಗಳು ನೀಡಿರುವ ದೂರುಗಳಿಗೆ ಸಂಬಂಧಿಸಿದಂತೆ ಬ್ರಿಜ್ ಭೂಷಣ್ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.
ಏಪ್ರಿಲ್‌ನಲ್ಲಿ ಬ್ರಿಜ್ ಭೂಷಣ್ ವಿರುದ್ಧ ತನಿಖೆ ಆರಂಭವಾಗಿದೆ. ಇದರ ನಡುವೆ ಭಾನುವಾರ ನಡೆದ ರ್‍ಯಾಲಿಯಲ್ಲಿ ಅವರು ಮಾತನಾಡಿದ್ದಾರೆ. 2024ರ ಚುನಾವಣೆಗಾಗಿ ಬಿಜೆಪಿಯ ಮಹಾಸಂಪರ್ಕ್ ಅಭಿಯಾನದ ಭಾಗವಾಗಿ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ರ್‍ಯಾಲಿ ಆಯೋಜನೆಗೊಂಡಿತ್ತು.
2024ರ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಗೆಲ್ಲಲಿದೆ ಎಂದು ಬ್ರಿಜ್ ಭೂಷಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ. “ಲೋಕಸಭೆಯ ಎಲ್ಲಾ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ನಾನು ಕೈಸರ್‌ಗಂಜ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಅವರ ವಿರುದ್ಧದ ಆರೋಪಗಳ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. “ನಾನು ಈ ಪ್ರಕರಣ ಸಂಬಂಧ ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇನೆ” ಎಂದಿದ್ದಾರೆ.
ಬ್ರಿಜ್ ಭೂಷಣ್ ಆರು ಬಾರಿ ಸಂಸದರಾಗಿದ್ದಾರೆ, ಐದು ಬಾರಿ ಬಿಜೆಪಿ ಟಿಕೆಟ್‌ನಲ್ಲಿ ಮತ್ತು ಒಮ್ಮೆ (2009 ರಲ್ಲಿ) ಎಸ್‌ಪಿ ಟಿಕೆಟ್‌ನಲ್ಲಿ ಗೆದ್ದಿದ್ದಾರೆ. ಅವರು ಗೊಂಡಾ ಲೋಕಸಭಾ ಕ್ಷೇತ್ರದಿಂದ 1991 ಮತ್ತು 1999ರಲ್ಲಿ ಮೊದಲ ಎರಡು ಚುನಾವಣೆಗಳನ್ನು ಗೆದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಇವರಿಗೆ ಬಲರಾಂಪುರ ಕ್ಷೇತ್ರದಿಂದ ಟಿಕೆಟ್ ನೀಡಿತು, ಗೊಂಡಾದಿಂದ ಘನಶ್ಯಾಮ್ ಶುಕ್ಲಾ ಅವರನ್ನು ನಿಲ್ಲಿಸಿತ್ತು. ಮತದಾನದ ದಿನ ರಸ್ತೆ ಅಪಘಾತದಲ್ಲಿ ಶುಕ್ಲಾ ಸಾವನ್ನಪ್ಪಿದ್ದರು.
ಸ್ಕ್ರಾಲ್‌ನೊಂದಿಗಿನ ಸಂದರ್ಭದಲ್ಲಿ ಒಮ್ಮೆ ಮಾತನಾಡಿದ್ದ ಬ್ರಿಜ್ ಭೂಷಣ್, “ನನ್ನ ವಿರೋಧಿಗಳು- ಇದು ಅಪಘಾತವಲ್ಲ ಕೊಲೆ ಎಂದು ವದಂತಿಗಳನ್ನು ಹರಡಿದರು. ಅಟಲ್ ಬಿಹಾರಿ ವಾಜಪೇಯಿ ಅವರು ನನಗೆ ಕರೆ ಮಾಡಿ, ‘ಮಾರ್ವಾ ದಿಯಾ (ನೀವು ಅವನನ್ನು ಕೊಂದಿದ್ದೀರಿ) ಎಂದಿದ್ದರು” ಎಂದು ಸ್ಮರಿಸಿದ್ದರು.
ಇದು ಬಿಜೆಪಿಯೊಂದಿಗಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು ಎಂದು ಬ್ರಿಜ್ ಭೂಷಣ್ ಅಭಿಪ್ರಾಯಪಡುತ್ತಾನೆ. ಪರಿಣಾಮವಾಗಿ, ಆತ 2008ರಲ್ಲಿ ಮಾಡಿದ್ದೇನು ಗೊತ್ತೆ? ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದ ವಿರುದ್ಧ ವಿರೋಧ ಪಕ್ಷ ವಿಶ್ವಾಸ ನಿರ್ಣಯ ಮಾಡಿದಾಗ ತಮ್ಮದೇ ಪಕ್ಷದ ವಿರುದ್ಧ ಅಡ್ಡ ಮತದಾನ ಮಾಡಿ ಸುದ್ದಿಯಾಗಿದ್ದರು. ಬಿಜೆಪಿ ಅವರನ್ನು ಹೊರಹಾಕಿತ್ತು, ಆದರೆ ಸಮಾಜವಾದಿ ಪಾರ್ಟಿ ಬ್ರಿಜ್ ಭೂಷಣ್‌ಗೆ ಬಾಗಿಲು ತೆರೆದಿತ್ತು.
2009ರಲ್ಲಿ ಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಮತ್ತೆ ಬಿಜೆಪಿ ಮರಳಿದರು. ಕೈಸರ್‌ಗಂಜ್‌ನಿಂದಲೇ 2019ರಲ್ಲೂ ಗೆದ್ದು ಸಂಸದನಾಗಿ ಮುಂದುವರಿದರು.
ಬಿಜೆಪಿ ಅಭ್ಯರ್ಥಿಯನ್ನು ಹತ್ಯೆ ಮಾಡಿರುವ ಬಗ್ಗೆ ಅಂದಿನ ಪ್ರಧಾನಿ ಭೂಷಣ್ ಮೇಲೆ ಶಂಕೆ ವ್ಯಕ್ತಪಡಿಸಿದ ಬಳಿಕವೂ ಅವರು ಬಿಜೆಪಿಯಲ್ಲೇ ಉಳಿದುಕೊಂಡಿರುವುದು ಗಮನಾರ್ಹ. ಅಡ್ಡ ಮತದಾನದ ನಂತರವೇ ಅವರು ಬಿಜೆಪಿಯಿಂದ ಉಚ್ಚಾಟಿತನಾಗಿದ್ದು!
ಇದನ್ನೂ ಓದಿರಿ: ಕುಸ್ತಿಪಟುಗಳಿಗೆ ಸವಾಲಾಗಿರುವ ‘ಬ್ರಿಜ್ ಭೂಷಣ್ ಶರಣ್ ಸಿಂಗ್’ ಯಾರು? ಆತನ ಹಿನ್ನಲೆ, ಪ್ರಭಾವವೇನು?
ಇದ್ಯಾವುದೂ ಬ್ರಿಜ್ ಭೂಷಣ್‌ನ ರಾಜಕೀಯದ ಮೇಲೆ ಪರಿಣಾಮ ಬೀರಲಿಲ್ಲ. ಒಂದು ಕೊಲೆ ಮಾಡಿದ್ದೇನೆ ಎಂಬ ತಪ್ಪೊಪ್ಪಿಗೆ ಮತ್ತು ಆಗಿನ ಪ್ರಧಾನಿ ಮತ್ತೊಂದು ಕೊಲೆಯ ಆರೋಪ ಹೊರಿಸಿದರೂ, ಬಿಜೆಪಿ ಮತ್ತು ಪ್ರತಿಪಕ್ಷ ಎಸ್‌ಪಿ ಎರಡೂ ಬ್ರಿಜ್‌ಭೂಷಣ್‌ನನ್ನು ಅಪ್ಪಿಕೊಂಡಿವೆ! ಇವರ ಅಪರಾಧಗಳನ್ನು ಮುಚ್ಚಿಹಾಕಿವೆ. ಏಕೆಂದರೆ ಚುನಾವಣೆಯ ನಂತರ ಚುನಾವಣೆಯಲ್ಲಿ ಗೆಲ್ಲುವುದನ್ನು ಬ್ರಿಜ್ ಮುಂದುವರಿಸಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ರಾಷ್ಟ್ರೀಯ ಕ್ರೀಡಾ ಸಂಘದ ಅಧ್ಯಕ್ಷರಾಗಿದ್ದಾರೆ.
ಲೈಂಗಿಕ ಕಿರುಕುಳ ನೀಡಿರುವ ಬ್ರಿಜ್ ಭೂಷಣ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ದೇಶದ ಪ್ರಮುಖ ಕುಸ್ತಿಪಟುಗಳು ಕಳೆದ ಏಪ್ರಿಲ್‌ನಿಂದಲೂ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಬುಧವಾರ ಭೇಟಿಯಾದ ನಂತರ ಕುಸ್ತಿಪಟುಗಳು ಒಂದು ವಾರ ಕಾಲ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧದ ತನಿಖೆಯನ್ನು ಜೂನ್ 15 ರೊಳಗೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಸರ್ಕಾರ ಕುಸ್ತಿಪಟುಗಳಿಗೆ ಭರವಸೆ ನೀಡಿದೆ.
ಶನಿವಾರ ಪ್ರತಿಕ್ರಿಯೆ ನೀಡಿದ್ದ ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲ್ಲಿಕ್, “ಪ್ರಕರಣ ಇತ್ಯರ್ಥವಾಗುವವರೆಗೂ ಪ್ರತಿಭಟನಾನಿರತ ಕುಸ್ತಿಪಟುಗಳು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವುದಿಲ್ಲ. ದೂರನ್ನು ಹಿಂಪಡೆದು ಪ್ರತಿಭಟನೆಯನ್ನು ಅಂತ್ಯಗೊಳಿಸುವಂತೆ ಬ್ರಿಜ್ ಭೂಷಣ್ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ” ಎಂದು ಆರೋಪಿಸಿದ್ದರು.


