ರಾಜ್ಯ ಸರಕಾರ ಪಠ್ಯದಲ್ಲಿ ಸಾಹಿತಿ ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಪಾಠವನ್ನು ಪಠ್ಯದಲ್ಲಿ ಸೇರ್ಪಡೆ ಮಾಡಿ, ಆದೇಶ ಹೊರಡಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಆಗ್ರಹಿಸಿತ್ತು. ಇದಕ್ಕೆ ದೇವನೂರ ಮಾಹದೇವ ಅವರೇ ಪ್ರತಿಕ್ರಿಯಿಸಿದ್ದಾರೆ.
”ಯಾವುದೇ ಪಠ್ಯಪುಸ್ತಕಕ್ಕೆ ಪುಟಗಳ ಇತಿಮಿತಿಯ ಹಿನ್ನೆಲೆಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕು ಹಾಗೂ ಪಠ್ಯ ಆಯ್ಕೆ ಸಮಿತಿಯ ಅಭಿರುಚಿಯನ್ನೂ ನಾವು ಗೌರವಿಸಬೇಕು. ಇಂದಿನ ದಿನಗಳಲ್ಲಿ ನಾವು ನೋಡಬೇಕಾದ್ದು ಇಷ್ಟೆ: ಸಂವಿಧಾನ ವಿರೋಧಿಯಾದ ಚಾತುರ್ವರ್ಣ ಪ್ರತಿಪಾದಿಸುವ ಹಿಂದುತ್ವದ ಆಶಯದ ವಿಷ ಇಲ್ಲದಂತೆ ನೋಡಿಕೊಳ್ಳಬೇಕು. ಬದಲಿಗೆ ಸಂವಿಧಾನದ ಆಶಯಗಳಿಗೆ ಪೂರಕವಾದ ವಿಶಾಲ ಹಿಂದೂ ಧರ್ಮಗಳ ಸಮತ್ವದ ನೋಟ ಇರುವಂತೆ ನೋಡಿಕೊಳ್ಳಬೇಕು” ಎಂದು ಹೇಳಿದ್ದಾರೆ.
”ಈ ಲೋಕದ ಎಲ್ಲಾ ಧರ್ಮ, ಪಂಥ, ಮತಗಳಲ್ಲಿ ಚಿಗುರಿರುವ ಐಕ್ಯತೆ, ಸಮಾನತೆ, ಮಾನವೀಯ ಅಂಶಗಳನ್ನೂ ನಾವು ಒಳಗೊಳ್ಳಬೇಕಾಗಿದೆ. ಜೊತೆಗೆ ಜ್ಞಾನದೊಳಕ್ಕು ಮೌಢ್ಯ ನುಸುಳುತ್ತಿರುವುದನ್ನು ಎಚ್ಚರಿಕೆಯಿಂದ ತಡೆಗಟ್ಟಬೇಕು. ಬಹುಶಃ ಇದಿಷ್ಟೆ. ಇದನ್ನು ನಾವು ನೋಡದೆ, ‘ನನಗೆ ಇಷ್ಟವಾಗುವ ಪಠ್ಯ ಇರಲಿ, ಇಷ್ಟವಾಗುವವರ ಪಠ್ಯ ಇರಲಿ ಅಥವಾ ನನಗೆ ಒಪ್ಪಿತ ಐಡಿಯಾಲಜಿ ಪಠ್ಯ ಇರಲಿ’ ಎಂದುಕೊಂಡರೆ, ಪಠ್ಯ ಪುಸ್ತಕ ರಚನೆಯೇ ಮುಗಿಯದ ಕತೆಯಾಗಿ ಬಿಡುತ್ತದೆ. ಇದನ್ನು ಎಸ್‍ಎಫ್‍ಐ ಸಂಘಟನೆಯ ಗೆಳೆಯರು ದಯವಿಟ್ಟು ಗಮನಿಸಲಿ” ಎಂದು ತಿಳಿಸಿದ್ದಾರೆ.
ಪಠ್ಯದಲ್ಲಿ ದೇವನೂರರ ‘ಎದೆಗೆ ಬಿದ್ದ ಅಕ್ಷರ’ ಪಾಠ ಸೇರ್ಪಡೆ ಎಸ್‌ಎಫ್‌ಐ ಒತ್ತಾಯ
ರಾಜ್ಯ ಸರಕಾರದ ಪಠ್ಯದಲ್ಲಿ ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಪಾಠವನ್ನು ಸೇರ್ಪಡೆ ಮಾಡಿ, ಆದೇಶ ಹೊರಡಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಆಗ್ರಹಿಸಿದೆ.
ಈ ಬಗ್ಗೆ ಭಾರತ ವಿದ್ಯಾರ್ಥಿ ಫೆಡರೇಶನ್ ರಾಜ್ಯಾಧ್ಯಕ್ಷ ಅಮರೇಶ ಕಡಗದ ಪ್ರಕಟನೆ ಹೊರಡಿಸಿದ್ದು, ”ರಾಜ್ಯ ಸರಕಾರವು ಆರರಿಂದ ಹತ್ತನೇ ತರಗತಿವರೆಗಿನ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಕೆಲವು ಪಾಠಗಳನ್ನು ಸೇರ್ಪಡೆ ಮಾಡಲು ತಿದ್ದುಪಡಿ ಮತ್ತು ಸೇರ್ಪಡೆಗೊಳಿಸಲು ಆದೇಶ ಮಾಡಿರುವುದು ಸ್ವಾಗತಾರ್ಹವಾಗಿದೆ. ಹಾಗೆಯೇ ‘ಎದೆಗೆ ಬಿದ್ದ ಅಕ್ಷರ’ ಪಾಠವನ್ನು ಸೇರಿಸಲು ಸಂಘಟನೆ ಆಗ್ರಹಿಸಿದೆ. ಹಿಂದಿನ ವರ್ಷ ಬಿಜೆಪಿ ಸರಕಾರ ಆರರಿಂದ ಹತ್ತನೇ ತರಗತಿವರೆಗೆ ಕೆಲವು ಪಾಠಗಳನ್ನು ತಿದ್ದುಪಡಿ, ಸೇರ್ಪಡೆ ಮಾಡುವುದರ ಮೂಲಕ ಪಠ್ಯ ಪರಿಷ್ಕರಣೆ ಮಾಡಿ ವಿದ್ಯಾರ್ಥಿಗಳ ಮನಸ್ಸಿನೊಳಗೆ ಕೋಮು ಭಾವನೆಯ ವಿಷ ಬೀಜ ಬಿತ್ತಲು ಪ್ರಯತ್ನಿಸಿತ್ತು. ಮಹಿಳೆಯರು ಕೇವಲ ಭೋಗದ ವಸ್ತು ಹಾಗೂ ಮನೆ ಕೆಲಸಕ್ಕೆ ಸೀಮಿತ ಎಂಬ ಅರ್ಥದಲ್ಲಿ ಇರುವಂತ ಕೆಲವು ಪಾಠವನ್ನು ಸೇರಿಸಿತ್ತು. ಇದನ್ನು ಸರಿಪಡಿಸಿ, ಸುತ್ತೋಲೆ ಹೋರಡಿಸಿರುವುದು ಸ್ವಾಗತಾರ್ಹ” ಎಂದು ಸಂಘಟನೆ ತಿಳಿಸಿದೆ.
”ಬಿಜೆಪಿ ಸರಕಾರ ಕೈ ಬಿಟ್ಟಿರುವ ಬಹುತೇಕ ಎಲ್ಲ ಪಾಠಗಳನ್ನು ಇಂದಿನ ಕಾಂಗ್ರೆಸ್ ಸರಕಾರ ಮರುಸೇರ್ಪಡೆ ಮಾಡಿದೆ. ಆದರೆ 10ನೇ ತರಗತಿ ಪ್ರಥಮ ಭಾಷೆಯಾದ ಕನ್ನಡ ಗದ್ಯ ಭಾಗದಲ್ಲಿ ರಾಜ್ಯದ ಹಿರಿಯ ಸಾಹಿತಿ ದೇವನೂರು ಮಹಾದೇವರ ಎದೆಗೆ ಬಿದ್ದ ಅಕ್ಷರ ಎಂಬ ಪಾಠವು ರಾಜ್ಯ ಸರಕಾರ ಬಿಡುಗಡೆ ಮಾಡಿರುವ ತಿದ್ದೋಲೆಯಲ್ಲಿ ಇಲ್ಲದಿರುವುದು ನೋವಿನ ವಿಷಯ ಆಗಿದೆ” ಎಂದು ಸಂಘಟನೆ ಹೇಳಿದೆ.
ಎದೆಗೆ ಬಿದ್ದ ಅಕ್ಷರ ಪಾಠವು ಅನೇಕ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ ಹಿಂದೆ ಬಿಜೆಪಿ ಸರಕಾರದ ಕೋಮುವಾದದ ವಿರುದ್ಧ ದೇವನೂರು ಮಹಾದೇವ ಬಹಿರಂಗವಾಗಿ ಪ್ರತಿಭಟನೆಯನ್ನು ಮಾಡಿದ್ದರು. ತಮ್ಮ ಪುಸ್ತಕವಾದ ಎದೆಗೆ ಬಿದ್ದ ಅಕ್ಷರ ಭಾಗವನ್ನು ಗದ್ಯಭಾಗದಲ್ಲು ಪ್ರಕಟಿಸಲು ನೀಡಿದ್ದ ಅನುಮತಿ ವಾಪಸ್ ಪಡೆದಿದ್ದರು.
ಕೂಡಲೇ ರಾಜ್ಯದ ಮುಖ್ಯಮಂತ್ರಿಯವರು ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಸಚಿವರು ಗಮನಹರಿಸಿ 10ನೇ ತರಗತಿ ಕನ್ನಡ ಪ್ರಥಮ ಭಾಷೆ ವಿಷಯದಲ್ಲಿ ಸೇರ್ಪಡೆ ಮಾಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ ರಾಜ್ಯಾಧ್ಯಕ್ಷ ಅಮರೇಶ ಕಡಗದ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.


