Homeಮುಖಪುಟಲೋಕಸಭಾ ಕ್ಷೇತ್ರಗಳ ಮರುಹಂಚಿಕೆ; ಪ್ರಜಾಪ್ರಭುತ್ವ-ಒಕ್ಕೂಟ ತತ್ವಗಳ ಅಪಾಯಕಾರಿ ತಾಕಲಾಟ

ಲೋಕಸಭಾ ಕ್ಷೇತ್ರಗಳ ಮರುಹಂಚಿಕೆ; ಪ್ರಜಾಪ್ರಭುತ್ವ-ಒಕ್ಕೂಟ ತತ್ವಗಳ ಅಪಾಯಕಾರಿ ತಾಕಲಾಟ

- Advertisement -
- Advertisement -

ಹೊಸದಾಗಿ ಉದ್ಘಾಟಿಸಲಾಗಿರುವ ಲೋಕಸಭೆಯಲ್ಲಿ ಆಸನಗಳ ಸಂಖ್ಯೆಯನ್ನು 888ಕ್ಕೆ ವಿಸ್ತರಿಸಲಾಗಿದೆ. ಕ್ಷುಲ್ಲಕವೆಂದು ಕಾಣಬಹುದಾದ ಈ ವಿವರವು ಒಂದು ರಾಜಕೀಯ ಹಿಮಪಾತವನ್ನೇ ಸೃಷ್ಟಿಸಬಹುದಾದ ಸಾಧ್ಯತೆಯನ್ನು ಹೊಂದಿದೆ. ಬಿಜೆಪಿಯು ಮುಂದಿನ ಲೋಕಸಭಾ ಕ್ಷೇತ್ರಗಳ ಮರುವಿಂಗಡನೆಯಲ್ಲಿ ಪ್ರತಿಯೊಂದು ರಾಜ್ಯದ ಸ್ಥಾನಗಳ ಪಾಲನ್ನು ಏರಿಳಿಕೆ ಮಾಡಲು ಕಾತುರವಾಗಿದೆ ಎಂಬ ಊಹೆಗೆ ಇದು ಈಗಾಗಲೇ ಮರುಜೀವ ನೀಡಿದೆ. ಇದು ಕೇವಲ ಹುರುಳೇ ಇಲ್ಲದ ಊಹಾಪೋಹವಲ್ಲ, ಬದಲಾಗಿ ದೂರದ ಸಾಧ್ಯತೆ ಮಾತ್ರವೇ ಆಗಿದ್ದರೂ, ನಿಜವಾದ ಊಹಾಪೋಹವಂತೂ ಆಗಿದೆ. ಇದು ಕೇವಲ ಹುಚ್ಚುತನದ ಪ್ರಸ್ತಾಪವೂ ಅಲ್ಲ; ವಾಸ್ತವಿಕ ಮತ್ತು ತಾತ್ವಿಕವಾದ ಸಮರ್ಥನೆಯ ಬೆಂಬಲವನ್ನೂ ಹೊಂದಿದೆ. ಆದರೂ, ಇದು ಈ ಹಂತದಲ್ಲಿ ಭಾರತಕ್ಕೆ ಅಗತ್ಯವಿರುವಂತದಲ್ಲ.

ಮೊದಲಿಗೆ ಈ ಊಹಾಪೋಹಗಳೇನು ಎಂಬುದನ್ನು ಆರ್ಥಮಾಡಿಕೊಳ್ಳೋಣ. ಲೋಕಸಭೆಯು ಪ್ರಸ್ತುತ 543 ಸ್ಥಾನಗಳನ್ನು ಹೊಂದಿದೆ (ಜೊತೆಗೆ ಎರಡು ಆಂಗ್ಲೋ ಇಂಡಿಯನ್ ಮೀಸಲಾತಿ ಸ್ಥಾನಗಳೂ ಇವೆ). ಸಂವಿಧಾನದಲ್ಲಿ ಅವಕಾಶವಿರುವ ಗರಿಷ್ಠ ಸ್ಥಾನಗಳು ಎಂದರೆ 552. ಆಯಾ ರಾಜ್ಯಗಳ ಜನಸಂಖ್ಯೆಯ ಪಾಲಿಗೆ ಅನುಗುಣವಾಗಿ ವಿವಿಧ ರಾಜ್ಯಗಳ ನಡುವೆ ಈ ಸ್ಥಾನಗಳನ್ನು ಹೇಗೆ ಹಂಚಬೇಕು ಎಂಬುದನ್ನೂ ಸಂವಿಧಾನವು ವಿಧಿಸಿದೆ. ಪ್ರಶ್ನೆ ಎಂದರೆ, ದೇಶದ ಜನಸಂಖ್ಯೆಯಲ್ಲಿ ಬದಲಾವಣೆಯಾದಾಗ, ರಾಜ್ಯಗಳ ಜನಸಂಖ್ಯೆಯ ಪ್ರಮಾಣಕ್ಕನುಗುಣವಾಗಿ ವಿವಿಧ ರಾಜ್ಯಗಳ ಲೋಕಸಭಾ ಸೀಟುಗಳ ಪಾಲಿನಲ್ಲಿ ಬದಲಾವಣೆ ಹೇಗಾಗುತ್ತದೆ? ಇತ್ತೀಚಿನ ದಶವಾರ್ಷಿಕ ಜನಗಣತಿಯಲ್ಲಿನ ಜನಸಂಖ್ಯೆಯಲ್ಲಿ ರಾಜ್ಯಗಳ ಪಾಲಿಗೆ ಅನುಗುಣವಾಗಿ ಪ್ರತೀ ಹತ್ತು ವರ್ಷಗಳಿಗೆ ಒಮ್ಮೆ ಪುನರ್ವಿಮರ್ಶೆ ಮಾಡುವುದಕ್ಕೆ ಸಂವಿಧಾನವು ಅವಕಾಶ ಒದಗಿಸುತ್ತದೆ. ಈ ಮರುವಿಂಗಡಣೆಯನ್ನು 1961 ಮತ್ತು 1971ರ ಜನಗಣತಿಯ ಬಳಿಕ ಮಾಡಲಾಗಿತ್ತು. ಆದರೆ 1973ರಲ್ಲಿ-2001ರ ಜನಗಣತಿಯ ಮಾಡುವ ತನಕ ಈ ಮರುವಿಂಗಡಣೆಯನ್ನು ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸ್ಥಗಿತಗೊಳಿಸಲಾಗಿತ್ತು. ಆ ಸಮಯ ಮುಗಿದಾಗ, ಈ ನಿಲುಗಡೆಯನ್ನು 2026ರ ತನಕ ವಿಸ್ತರಿಸಲಾಯಿತು.

ಕೊನೆಯ ವಿಸ್ತರಣೆಯ ನಂತರ, ಈ ಮರುವಿಂಗಡಣೆಯ ಸ್ಥಗಿತ ಶಾಶ್ವತವಾಗಿ ಮುಂದುವರಿಯಲಿದೆ ಎಂದು ವ್ಯಾಪಕವಾಗಿ ನಂಬಲಾಗಿತ್ತು. ಆದರೆ, ಇತ್ತೀಚೆಗೆ ಬಿಜೆಪಿಯು ಹೊಸ ವಿಂಗಡನೆಯ ಪ್ರಸ್ತಾಪವನ್ನು ಮತ್ತೆ ಪರಿಗಣಿಸುವ ಕುರಿತು ಒಲವು ತೋರಿಸುತ್ತಿದೆ. ಇದನ್ನು ಎರಡು ರೀತಿಗಳಲ್ಲಿ ಮಾಡಲಾಗಬಹುದು. ಒಂದೋ ಕೆಲವು ರಾಜ್ಯಗಳ ಸ್ಥಾನವನ್ನು ಕಡಿತಗೊಳಿಸಿ, ಇತರ ಕೆಲವು ರಾಜ್ಯಗಳಿಗೆ ಹೆಚ್ಚುವರಿ ಸ್ಥಾನಗಳನ್ನು ನೀಡಲು ಅವಕಾಶ ಕಲ್ಪಿಸಬಹುದು ಅಥವಾ ಯಾವುದೇ ರಾಜ್ಯದ ಸ್ಥಾನಗಳನ್ನು ಕಡಿತಗೊಳಿಸದೆ, ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿ, ಅದರ ಗಾತ್ರವನ್ನು ವಿಸ್ತರಿಸುವುದರ ಮೂಲಕ ಇದೇ ಫಲಿತಾಂಶವನ್ನು ಪಡೆಯಬಹುದು. ಆಗ, ಜನಸಂಖ್ಯೆಯಲ್ಲಿ ಹೆಚ್ಚಳವಾಗಿರುವ ರಾಜ್ಯಗಳಿಗೆ ಈ ಹೆಚ್ಚುವರಿ ಸ್ಥಾನಗಳು ಸಿಗುತ್ತವೆ. ಈ ಎರಡನೇ ಹಾದಿಯನ್ನು ನೀವು ಅನುಸರಿಸಲು ಬಯಸಿದರೆ ಮತ್ತು ಕೇರಳವು ಈಗಿರುವ 20 ಸ್ಥಾನಗಳನ್ನು ಉಳಿಸಿಕೊಳ್ಳುವುದನ್ನು ಖಾತರಿಪಡಿಸಲು ನೀವು ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು 866ಕ್ಕೆ ಏರಿಸಬೇಕಾಗುತ್ತದೆ. ಇದಕ್ಕಾಗಿಯೇ, ಹೊಸ ಲೋಕಸಭಾ ಕಟ್ಟಡದಲ್ಲಿನ ಆಸನಗಳ ಹೆಚ್ಚಿದ ಸಂಖ್ಯೆಯು ಹುಬ್ಬು ಮೇಲೇರುವಂತೆ ಮಾಡಿರುವುದು.

ಈ ಪ್ರಸ್ತಾಪದ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳೋಣ. 2026ರಲ್ಲಿನ ಪ್ರತಿಯೊಂದು ರಾಜ್ಯದ ಜನಸಂಖ್ಯೆಯ ಪಾಲಿಗೆ ಅನುಗುಣವಾಗಿ ನಾವು ಲೋಕಸಭಾ ಸ್ಥಾನಗಳನ್ನು ಮರುಹಂಚಿಕೆ ಮಾಡಿದಲ್ಲಿ, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಸ್ಥಾನಗಳನ್ನು ಕಳೆದುಕೊಳ್ಳುತ್ತವೆ. ಅತ್ಯಂತ ಹೆಚ್ಚು ಬಾಧಿತವಾಗುವ ರಾಜ್ಯ ಕೇರಳವಾಗಿದ್ದು, ಅದು ಎಂಟು ಸ್ಥಾನಗಳನ್ನು ಕಳೆದುಕೊಳ್ಳುತ್ತದೆ (ಈಗಿರುವ 20 ಸ್ಥಾನಗಳಿಂದ ಕೇವಲ 12 ಸ್ಥಾನಗಳಿಗೆ ಇಳಿಕೆ). ದೊಡ್ಡ ಪ್ರಮಾಣದಲ್ಲಿ ಸ್ಥಾನಗಳನ್ನು ಕಳೆದುಕೊಳ್ಳಲಿರುವ ರಾಜ್ಯಗಳಲ್ಲಿ- ತಮಿಳುನಾಡು (8 ಸ್ಥಾನಗಳು), ಆಂಧ್ರಪ್ರದೇಶ ಮತ್ತು ತೆಲಂಗಾಣ ಜೊತೆಗೆ (8 ಸ್ಥಾನಗಳು), ಪಶ್ಚಿಮ ಬಂಗಾಳ (4 ಸ್ಥಾನಗಳು), ಒಡಿಶಾ (3 ಸ್ಥಾನಗಳು) ಮತ್ತು ಕರ್ನಾಟಕ (2 ಸ್ಥಾನಗಳು), ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಉತ್ತರಾ ಖಂಡ (ತಲಾ 1 ಸ್ಥಾನ) ಪ್ರಮುಖವಾಗಿವೆ. ಇದರಿಂದ ಲಾಭ ಪಡೆಯುವ ರಾಜ್ಯಗಳು ಹಿಂದಿ ಮಾತನಾಡುವ ಉತ್ತರ ಪ್ರದೇಶದ ರಾಜ್ಯಗಳಾಗಿರುತ್ತವೆ: ಉತ್ತರ ಪ್ರದೇಶ (11 ಸ್ಥಾನಗಳು), ಬಿಹಾರ (10 ಸ್ಥಾನಗಳು), ರಾಜಸ್ಥಾನ (6 ಸ್ಥಾನಗಳು) ಮತ್ತು ಮಧ್ಯಪ್ರದೇಶ (4 ಸ್ಥಾನಗಳು). ದಿಲ್ಲಿ, ಹರ್ಯಾಣ, ಗುಜರಾತ್, ಛತ್ತೀಸಗಢ, ಜಾರ್ಖಂಡ್ ಒಂದೊಂದು ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆಯಲಿವೆ. ಮಹಾರಾಷ್ಟ್ರ, ಅಸ್ಸಾಂ, ಹಿಂದಿನ ಜಮ್ಮು ಮತ್ತು ಕಾಶ್ಮೀರಕ್ಕೆ ಯಾವುದೇ ಪರಿಣಾಮ ಆಗುವುದಿಲ್ಲ.

ಇದು ಈ ವಿಷಯದ ಮುಖ್ಯಾಂಶ. ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳು ಎಂಬುದರ ಅರ್ಥವೆಂದರೆ, ಹಿಂದಿ ಮಾತನಾಡುವ ರಾಜ್ಯಗಳು- ಹಿಂದಿ ಮಾತನಾಡದ ರಾಜ್ಯಗಳ ನಷ್ಟದಲ್ಲಿ- 33 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆಯುತ್ತವೆ. ಈಗಾಗಲೇ 543 ಸ್ಥಾನಗಳಲ್ಲಿ 226ನ್ನು ನಿಯಂತ್ರಿಸುತ್ತಿರುವ “ಹಿಂದಿ ಹೃದಯಭಾಗ” ಎಂದು ಕರೆಯಲಾಗುವ ಪ್ರದೇಶಗಳು ಮುಂದೆ 259 ಸ್ಥಾನಗಳು ಅಂದರೆ, ಹೆಚ್ಚುಕಡಿಮೆ ಬಹುಮತದ (ಅಥವಾ, ಹಿಂದಿ ಮಾತನಾಡದ ರಾಜ್ಯಗಳ ಕೆಲವು ದೊಡ್ಡ ನಗರಗಳಲ್ಲಿ ಹಿಂದಿ ಮಾತನಾಡುವವರ ಸಂಖ್ಯೆಯನ್ನು ಪರಿಗಣಿಸಿದರೆ, ಸ್ಪಷ್ಟ ಬಹುಮತದ) ಸ್ಥಾನಗಳನ್ನು ನಿಯಂತ್ರಿಸಲಿದೆ.

ಇದನ್ನೂ ಓದಿ: 2026ರ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ: ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳಿಗೆ ಶಿಕ್ಷೆ- ಕುಗ್ಗಲಿರುವ ರಾಜಕೀಯ ಪ್ರಾತಿನಿಧ್ಯ

ಸದನದ ಗಾತ್ರವನ್ನು ವಿಸ್ತರಿಸುವುದರಿಂದ ಅದರ ತೋರಿಕೆ ಬದಲಾಗಬಹುದು, ಹೂರಣ ಬದಲಾಗುವುದಿಲ್ಲ. ಒಂದು ವೇಳೆ ಸದನದ ಬಲವನ್ನು 848ಕ್ಕೆ ಏರಿಸಿದರೆ, ಕೇರಳವು 20 ಸ್ಥಾನಗಳನ್ನು ಉಳಿಸಿಕೊಂಡ ಸಮಾಧಾನವನ್ನಷ್ಟೇ ಹೊಂದಬಹುದು; ಆದರೆ, ಆದೇ ಹೊತ್ತಿಗೆ ಉತ್ತರಪ್ರದೇಶವು 143 ಸ್ಥಾನಗಳನ್ನು ಹೊಂದಿರುತ್ತದೆ, ಬಿಹಾರದ ಸ್ಥಾನಗಳು 79ಕ್ಕೂ, ರಾಜಸ್ಥಾನದ ಸ್ಥಾನಗಳು 50ಕ್ಕೂ ಏರಿರುತ್ತವೆ. ಅಂದರೆ, ಹಿಂದಿ ಪ್ರದೇಶವು ಹೆಚ್ಚುಕಡಿಮೆ ಬಹುಮತವನ್ನು ಹೊಂದಿರುವ ಸ್ಥಿತಿಯು ಆಗಲೂ ಮುಂದುವರಿಯುತ್ತದೆ. ಈ ಹೊಸ ಮರುವಿಂಗಡಣೆಯಿಂದ ಲಾಭ ಪಡೆಯುವವರು ಯಾರಾಗಬಹುದು ಎಂದು ಊಹಿಸಿದ್ದಕ್ಕೆ ಬಹುಮಾನವೇನೂ ಇಲ್ಲ. 2021ರ ಜನಗಣತಿಯ ಬಳಿಕದ ಬಿಜೆಪಿಯ ಸ್ಥಾನಗಳನ್ನು ಪರಿಗಣಿಸಿದರೆ, ಅದು ನಿರ್ಣಾಯಕವಾದ 17 ಹೆಚ್ಚುವರಿ ಸ್ಥಾನಗಳನ್ನು ಪಡೆಯಲಿದೆ. ಹೆಚ್ಚಾಗಿ ಇವು ಪ್ರಾದೇಶಿಕ ಪಕ್ಷಗಳ ನಷ್ಟಗಳಾಗಿರುತ್ತವೆ.

ನಿಷ್ಪಕ್ಷಪಾತವಾಗಿ ಹೇಳುವುದಾದಲ್ಲಿ, ಈ ಪ್ರಸ್ತಾವನೆಯು ತರ್ಕವಿಲ್ಲದ್ದಲ್ಲ. ನೇರವಾಗಿ ಹೇಳಬೇಕೆಂದರೆ, ಅದು ಒಬ್ಬ ವ್ಯಕ್ತಿ- ಒಂದು ಮತ- ಒಂದು ಮೌಲ್ಯದ ಅತ್ಯುನ್ನತ ಪ್ರಜಾಸತ್ತಾತ್ಮಕ ತತ್ವಕ್ಕೆ ಅನುಗುಣವಾಗಿಯೇ ಇದೆ. ಈಗಿನ ಸ್ಥಾನ ಹಂಚಿಕೆಯು ಆ ತತ್ವದ ಗಂಭೀರವಾದ ಉಲ್ಲಂಘನೆ ಎಂದು ವಾದಿಸಲು ಸಾಧ್ಯವಿದೆ. ಪ್ರಸ್ತುತ ಉತ್ತರಪ್ರದೇಶದ- ಹತ್ತಿರಹತ್ತಿರ ಪ್ರತೀ 30 ಲಕ್ಷ- ಮತದಾರರಿಗೆ ಒಬ್ಬ ಸಂಸದರು ಇದ್ದರೆ, ತಮಿಳುನಾಡಿನಲ್ಲಿ ಪ್ರತೀ 18 ಲಕ್ಷಕ್ಕೆ ಒಬ್ಬ ಸಂಸದರಿದ್ದಾರೆ. ಆದುದರಿಂದ, ತಮಿಳುನಾಡಿನ ಒಬ್ಬ ನಾಗರಿಕ/ಮತದಾರರ ರಾಜಕೀಯ ಮೌಲ್ಯವು- ಉತ್ತರಪ್ರದೇಶದಲ್ಲಿ ವಾಸಿಸುವ ಯಾರೇ ಒಬ್ಬರಿಗಿಂತ ದ್ವಿಗುಣವಾಗಿದೆ. ಇದು ಅಪೇಕ್ಷಣೀಯ ವಿಷಯವಲ್ಲ. ಅದಕ್ಕಾಗಿಯೇ ನಮ್ಮ ಸಂವಿಧಾನವು ರಾಜ್ಯವಾರು ಸ್ಥಾನಗಳ ಹಂಚಿಕೆಯ ದಶವಾರ್ಷಿಕ ಮರುವಿಮರ್ಶೆಗೆ ಅವಕಾಶ ಒದಗಿಸಿರುವುದು. ಸಾಮಾನ್ಯವಾಗಿ ಒಬ್ಬ ಪ್ರಜಾಪ್ರಭುತ್ವವಾದಿಯು ಈ ಅವಕಾಶ ಮತ್ತು ಪಾಲಿನ ಮರುಹಂಚಿಕೆಯನ್ನು ಬೆಂಬಲಿಸಬೇಕಾಗುತ್ತದೆ.

ಕುಟುಂಬ ಯೋಜನೆಯಲ್ಲಿ ಯಶಸ್ವಿಯಾದ ರಾಜ್ಯಗಳಿಗೆ ಈ ಮರುಹಂಚಿಕೆಯಿಂದ ಅನ್ಯಾಯವಾಗುತ್ತದೆ ಎಂಬ ಸಾಮಾನ್ಯವಾದ ವಾದವು ತಪ್ಪು ತರ್ಕದಿಂದ ಕೂಡಿದ್ದು, ನ್ಯಾಯಯುತವಾದದ್ದಲ್ಲ ಎಂಬುದನ್ನೂ ಒಪ್ಪಿಕೊಳ್ಳಬೇಕು. ಜನನ ಮತ್ತು ಮರಣದ ದರಗಳ ಪ್ರವೃತ್ತಿಗಳು ಸಮೃದ್ಧಿ ಮತ್ತು ಸಾಕ್ಷರತೆಯ ಪರಿಣಾಮಗಳಾಗಿದ್ದು ಕುಟುಂಬ ಯೋಜನೆಗಳ ಫಲವಲ್ಲ. ಜೊತೆಗೆ, ಇದೇ ವಾದವನ್ನು ಹೆಚ್ಚಿನ ಜನಸಂಖ್ಯಾ ಬೆಳವಣಿಗೆ ದರ ಹೊಂದಿರುವ ಸಮಾಜದ ದುರ್ಬಲ ವರ್ಗಗಳ- ಎಸ್‌ಸಿ, ಎಸ್‌ಟಿ, ಮುಸ್ಲಿಮರು ಅಥವಾ ಬಡವರ ವಿರುದ್ಧವೂ ಬಳಸಬಹುದು ಅಥವಾ ಜಾಗತಿಕ ಪ್ರಮಾಣದಲ್ಲಿ, ಭಾರತದಂಥ ಹೆಚ್ಚು ಜನಸಂಖ್ಯೆಯ ಬಡ ರಾಷ್ಟ್ರಗಳ ವಿರುದ್ಧವೂ ಬಳಸಬಹುದು.

ಹೀಗಿದ್ದರೂ, ಅದು ನಮ್ಮ ಸಂವಿಧಾನದ “ಮೂಲ ಸಂರಚನೆ”ಯ ಒಂದು ಮುಖ್ಯ ಘಟಕವೆಂದು ದೀರ್ಘಕಾಲದಿಂದ ಒಪ್ಪಿತವಾದ ಇನ್ನೊಂದು ತತ್ವಕ್ಕೆ- ಅಂದರೆ, ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ ಎಂಬ ಕಾರಣಕ್ಕಾಗಿ ಈ ಪ್ರಸ್ತಾಪವನ್ನು ವಿರೋಧಿಸಬೇಕಾಗಿದೆ. ಇದು ಹೇಗಾಗಿಬಿಟ್ಟಿದೆಯೆಂದರೆ- ಲಾಭ ಪಡೆಯುವವರು ಮತ್ತು ನಷ್ಟ ಅನುಭವಿಸುವವರು ಸ್ಪಷ್ಟವಾಗಿ ಭೌಗೋಳಿಕವಾದ, ಭಾಷಾವಾರು, ಆರ್ಥಿಕವಾದ ಮತ್ತು ರಾಜಕೀಯವಾದ ಬಿರುಕಿನ ಗೆರೆಯ ಆ ಕಡೆ, ಈ ಕಡೆ ನಿಲ್ಲುವಂತಾಗಿದೆ. ಲಾಭ ಪಡೆಯುವವರು ಉತ್ತರ ಭಾರತದಲ್ಲಿ ನೆಲೆಸಿದ್ದರೆ, ನಷ್ಟ ಅನುಭವಿಸುವವರು ದಕ್ಷಿಣ ಮತ್ತು ಪೂರ್ವದವರು. ಬಹುತೇಕ ಲಾಭಪಡೆಯುವವರು ಹಿಂದಿ ಭಾಷಿಕರಾಗಿದ್ದರೆ, ಬಹುತೇಕ ಹಿಂದಿಯೇತರ ಭಾಷೆ ಮಾತನಾಡುವವರು (ಒಡಿಯಾ, ಬಂಗಾಳಿ ಮತ್ತು ಪಂಜಾಬಿ ಭಾಷೆ ಮಾತನಾಡುವವರು ಸೇರಿದಂತೆ) ನಷ್ಟ ಅನುಭವಿಸುವವರ ಕಡೆಯಲ್ಲಿ ಇರುತ್ತಾರೆ. ಈ ರಾಜ್ಯಗಳ ಗುಂಪು- ದೇಶದ ಆರ್ಥಿಕ ಬೆಳವಣಿಗೆಯ ಇಂಜಿನ್‌ಗಳಾಗಿರುವ ಮತ್ತು ಮುಖ್ಯವಾಗಿ ಜಿಎಸ್‌ಟಿ ಬಳಿಕ- ತಾರತಮ್ಯದ್ದೆಂದು ತಾವು ಭಾವಿಸುವ ತೆರಿಗೆ ವ್ಯವಸ್ಥೆಯ ಬಗ್ಗೆ ಹಳೆಯ ಸಿಟ್ಟು ಹೊಂದಿರುವ- ರಾಜ್ಯಗಳನ್ನು ಅತಿಕ್ರಮಿಸುತ್ತದೆ.

ಅಂತಿಮವಾಗಿ, ಹೆಚ್ಚುವರಿ ಸ್ಥಾನಗಳ ಲಾಭ ಗಳಿಸಲಿರುವ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ (ಅಥವಾ ಪ್ರಾದೇಶಿಕ ಸಿದ್ಧಾಂತ ಹೊಂದಿರದಿದ್ದರೂ, ಆಯಾ ರಾಜ್ಯಗಳ ನಿರ್ದಿಷ್ಟ ಪಕ್ಷಗಳ ವಿರುದ್ಧ ಬಿಜೆಪಿ) ಸ್ಪರ್ಧೆ ಹೊಂದಿದೆ. ಅದೇ ಹೊತ್ತಿಗೆ ಸ್ಥಾನಗಳ ನಷ್ಟ ಅನುಭವಿಸುವ ಹೆಚ್ಚಿನ ರಾಜ್ಯಗಳು ಪ್ರಾದೇಶಿಕ ಪಕ್ಷಗಳ ಕುರಿತು ಒಲವು ಹೊಂದಿವೆ. ಜನಸಂಖ್ಯಾಧಾರಿತ ಕ್ಷೇತ್ರಗಳ ಹಂಚಿಕೆಯು ಈಗಾಗಲೇ ಇರುವ- ಬೇರೆ ರಾಜ್ಯಗಳ ಮೇಲೆ ಉತ್ತರ ಭಾರತದ, ಹಿಂದಿ ಮಾತನಾಡುವ ರಾಜ್ಯಗಳ ಪ್ರಾಬಲ್ಯ, ಹೇರಿಕೆಗಳ ಭಾವನೆಯನ್ನು ಇನ್ನಷ್ಟು ಎದ್ದುಕಾಣುವಂತೆ ಮಾಡಲಿದೆ.

ಇದು ಭಾರತ ದೇಶವನ್ನು ಜೊತೆಗೆ ಕಟ್ಟಿಡುವ ಅಲಿಖಿತ ಬಂಧ ಒಂದನ್ನು-ಎಂದರೆ, ಒಕ್ಕೂಟ ತತ್ವವನ್ನು ಉಲ್ಲಂಘಿಸುತ್ತದೆ. ಈ ಬಂಧವು ದೇಶದ ಯಾವುದೇ ಒಂದು ಘಟಕವು ಇನ್ನೊಂದರ ಮೇಲೆ ಸವಾರಿ ಮಾಡದಿರುವುದರ ಮೇಲೆ ನಿಂತಿದೆ. ಈಗಿರುವಂತೆ ಹಿಂದಿ ಮಾತನಾಡುವ ರಾಜ್ಯಗಳ ಸಂಖ್ಯಾತ್ಮಕ ಪ್ರಾಬಲ್ಯವು ಒಕ್ಕೂಟದ ಸಮಾನತೆಯ ಅಂಶಕ್ಕೆ ಬೆದರಿಕೆಯೊಡ್ಡುತ್ತಿದೆ. ಇದನ್ನು ಇನ್ನಷ್ಟು ಎದ್ದುಕಾಣುವಂತೆ ಮಾಡುವುದು ಮತ್ತು ಹಿಂದಿ ಭಾಷಿಕ ರಾಜ್ಯಗಳು ಸಂಸತ್ತಿನ ಕೆಳಮನೆಯಲ್ಲಿ ಬಹುಮತದ ಗೆರೆಯನ್ನು ಮುಟ್ಟಲು ಅವಕಾಶ ಮಾಡಿಕೊಡುವುದು ಹಲವಾರು ಹಿಂದಿಯೇತರ ಭಾಷಿಕರ ಕಣ್ಣಿಗೆ ಅಪಾಯದ ಕೆಂಪು ಗೆರೆಯನ್ನು ದಾಟಿದಂತೆ ಕಾಣಿಸಬಹುದು. ಆದುದರಿಂದ, ಈಗ ಇದಕ್ಕೆ ತಡೆ ಹಾಕುವುದು ಮತ್ತು ಉತ್ತರ-ದಕ್ಷಿಣದ (ಅಥವಾ ಹಿಂದಿ-ಹಿಂದಿಯೇತರ ಎಂಬುದು ಹೆಚ್ಚು ಸೂಕ್ತ) ಒಂದು ಬಂಧವನ್ನು ಸಂವಿಧಾನದಲ್ಲಿ ಬರೆದಿದೆ ಎಂಬಂತೆ ಕಾರ್ಯಾಚರಿಸುವುದು ಅತ್ಯಂತ ವಿವೇಚನಾಶೀಲ ನಡೆ.

ರಾಜಕೀಯವು ಬರೇ ಒಂದು ಒಂಟಿ ತತ್ವವನ್ನು ಸರಳವಾಗಿ ಆನ್ವಯಿಸುವುದಲ್ಲ. ಎಲ್ಲಾ ಗಂಭೀರವಾದ ನೈತಿಕ ಆಯ್ಕೆಗಳು- ಹಲವು ಪ್ರತಿಸ್ಪರ್ಧಿ ತತ್ವಗಳ ನಡುವೆ ನ್ಯಾಯ ನಿರ್ಣಯ ಮಾಡುವುದನ್ನು ಒಳಗೊಂಡಿರುತ್ತದೆ. ಇಲ್ಲಿ ಪ್ರಜಾಪ್ರಭುತ್ವದ ತತ್ವಗಳನ್ನು ಒಕ್ಕೂಟ ತತ್ವದೊಂದಿಗೆ ತೂಗಿನೋಡಬೇಕಾಗಿದೆ. ನಮ್ಮ ರಾಷ್ಟ್ರೀಯ ಇತಿಹಾಸದ ಈ ಸಂಧಿಕಾಲದಲ್ಲಿ ಒಕ್ಕೂಟ ತತ್ವವು ಗೆಲ್ಲಬೇಕಾಗಿದೆ. ಈ ಹೊತ್ತಿನಲ್ಲಿ ಇದರ ತಿರಸ್ಕಾರ, ಇಲ್ಲವೇ ಇಬ್ಬಂದಿತನ ಅಥವಾ ಅನಿರ್ಧಾರ ಕೂಡಾ ಭಾರತದ ಏಕತೆಯನ್ನು ಹಾಳುಗೆಡವಬಲ್ಲದು. ನಾವು ಈಗಾಗಲೇ ಹಿಂದೂ-ಮುಸ್ಲಿಂ ವಿಭಜನೆಯನ್ನು ಉಂಟುಮಾಡುವ ರಾಜಕೀಯ ಅಭಿಯಾನದ ವಿರುದ್ಧ ಹೋರಾಡುತ್ತಿರುವಾಗ, ನಮಗೀಗ ಬೇಕಾಗಿರುವ ಕಟ್ಟಕಡೆಯ ವಿಷಯವೆಂದರೆ ಇನ್ನೊಂದು ವಿಭಜನಕಾರಿ ನಡೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...