Homeಮುಖಪುಟ2026ರ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ: ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳಿಗೆ ಶಿಕ್ಷೆ- ಕುಗ್ಗಲಿರುವ ರಾಜಕೀಯ ಪ್ರಾತಿನಿಧ್ಯ

2026ರ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ: ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳಿಗೆ ಶಿಕ್ಷೆ- ಕುಗ್ಗಲಿರುವ ರಾಜಕೀಯ ಪ್ರಾತಿನಿಧ್ಯ

ಪುನರ್‌ ವಿಂಗಡಣೆ ಮಾಡಿದ್ದಲ್ಲಿ ಜನಸಂಖ್ಯಾನುಪಾತವಾಗಿ ಲೋಕಸಭೆಯು 848 ಸ್ಥಾನಗಳಿಗೆ ಏರಿಕೆಯಾಗಲಿದೆ. ಆಗ ಉತ್ತರ ಪ್ರದೇಶವು 80 ಸ್ಥಾನಗಳಿಂದ 143 ಸ್ಥಾನಗಳಿಗೆ ಬೃಹತ್ ಏರಿಕೆ ಕಂಡರೆ, ದಕ್ಷಿಣದ ಕೇರಳವು 20 ಸ್ಥಾನಗಳಿಂದ ಕೇವಲ 20 ಸ್ಥಾನಗಳಲ್ಲಿಯೇ ಉಳಿಯಲಿದೆ.

- Advertisement -
- Advertisement -

ಭಾರತ ದೇಶವು ರಾಜ್ಯಗಳ ಒಕ್ಕೂಟವಾಗಿದೆ. ರಾಜ್ಯ ರಾಜ್ಯಗಳ ನಡುವೆ ಮತ್ತು ರಾಜ್ಯಗಳು ಹಾಗೂ ಕೇಂದ್ರದ ನಡುವೆ ಸಮನ್ವಯತೆಯಿರಬೇಕೆಂಬುದು ಪ್ರಜಾಪ್ರಭುತ್ವದ ಆಶಯ. ಆದರೆ ಹಲವು ಕಾರಣಗಳಿಂದಾಗಿ ದೇಶದ ರಾಜ್ಯಗಳ ನಡುವೆ ಅಸಮಾನತೆ ಮನೆ ಮಾಡಿದೆ. ದಕ್ಷಿಣದ ಮತ್ತು ಇತರ ರಾಜ್ಯಗಳು ಆರ್ಥಿಕ ಅಭಿವೃದ್ದಿ, ಜನಸಂಖ್ಯೆ ನಿಯಂತ್ರಣ, ಮಾನವ ಅಭಿವೃದ್ದಿ ಸೂಚ್ಯಂಕಗಳಲ್ಲಿ ಮೇಲುಗೈ ಸಾಧಿಸಿದರೆ ಉತ್ತರದ ಕೆಲ ರಾಜ್ಯಗಳು ವಿರುದ್ಧ ದಿಕ್ಕಿನಲ್ಲಿ ಚಲಿಸಿವೆ. ಇನ್ನು ಕೇಂದ್ರದಿಂದ ರಾಜ್ಯಗಳಿಗೆ ಬರಬೇಕಾದ ಅನುದಾನ, ತೆರಿಗೆ ಪಾಲು ಇತ್ಯಾದಿಗಳಿಗೆ ಜನಸಂಖ್ಯೆಯನ್ನು ಮಾನದಂಡವನ್ನಾಗಿಸಿದ ನಂತರ ದಕ್ಷಿಣದ ರಾಜ್ಯಗಳು ಹೆಚ್ಚು ತೆರಿಗೆ ಪಾವತಿಸಿಯೂ ಕಡಿಮೆ ಅನುದಾನ ಪಡೆದರೆ, ಉತ್ತರದ ಕೆಲ ರಾಜ್ಯಗಳು (ಮುಖ್ಯವಾಗಿ ಹಿಂದಿ ಬೆಲ್ಟ್ ರಾಜ್ಯಗಳು) ಕಡಿಮೆ ತೆರಿಗೆ ಕಟ್ಟಿಯೂ ಹೆಚ್ಚಿನ ಅನುದಾನ ಪಡೆಯುತ್ತಿವೆ. ಈ ತಾರತಮ್ಯಗಳ ಕುರಿತು ಚರ್ಚೆಯಾಗುತ್ತಿರುವ ಹೊತ್ತಿನಲ್ಲಿಯೇ 2026ರಲ್ಲಿ ಜನಸಂಖ್ಯೆಯ ಆಧಾರದಲ್ಲಿಯೇ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಾದಲ್ಲಿ ಮತ್ತೆ ದಕ್ಷಿಣದ ರಾಜ್ಯಗಳಿಗೆ ಭಾರೀ ಅನ್ಯಾಯವಾಗಲಿದ್ದು, ಸಂಸತ್ತಿನಲ್ಲಿ, ರಾಷ್ಟ್ರ ರಾಜಕಾರಣದಲ್ಲಿ ದಕ್ಷಿಣದ ರಾಜ್ಯಗಳು ಸೇರಿದಂತೆ ಹಲವು ರಾಜ್ಯಗಳ ದನಿ ಮತ್ತಷ್ಟು ಕ್ಷೀಣಸಲಿದೆ ಎಂಬ ಆತಂಕಗಳು ಎದುರಾಗಿವೆ.

ಸಂವಿಧಾನದ ಅನುಚ್ಛೇದ 81ರ ಪ್ರಕಾರ ಪ್ರಮಾಣಾನುಗುಣ ಪ್ರಾತಿನಿಧ್ಯದ ತತ್ವದ ಆಧಾರದಲ್ಲಿ ಲೋಕಸಭಾ ಸ್ಥಾನಗಳನ್ನು ರಚಿಸಲಾಗಿದೆ. ಪ್ರತಿ ರಾಜ್ಯವು ತನ್ನ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಸ್ಥಾನಗಳನ್ನು ಪಡೆಯುತ್ತಿತ್ತು. ಆದರೆ ಕೇಂದ್ರಾಡಳಿತ ಪ್ರದೇಶಗಳು ಮತ್ತು 60 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ರಾಜ್ಯಗಳಿಗೆ ಈ ನಿಯಮ ಅನ್ವಯಿಸದೆ, ಅಲ್ಲಿನ ಸಂಸತ್ ಕ್ಷೇತ್ರಗಳನ್ನು ಪಾರ್ಲಿಮೆಂಟ್ ನಿರ್ಧರಿಸುತ್ತದೆ.

ಭಾರತ 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ಎದುರಿಸಿದಾಗ 489 ಲೋಕಸಭೆ ಕ್ಷೇತ್ರಗಳಿದ್ದವು. ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆದ ನಂತರ ಅದರ ಆಧಾರದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗುತ್ತಿತ್ತು. ಅದರಂತೆ 1961ರ ಜನಗಣತಿಯ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 525ಕ್ಕೆ ಏರಿದ್ದವು. ನಂತರ 1971ರ ಜನಗಣತಿಯ ತರುವಾಯ 1973ರಲ್ಲಿ ಅವುಗಳ ಸಂಖ್ಯೆ 545ಕ್ಕೆ ಏರಿತು. ಆದರೆ  1976ರಲ್ಲಿ (ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ) 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಲೋಕಸಭಾ ಸ್ಥಾನಗಳ ಹೆಚ್ಚಳವನ್ನು ಮುಂದಿನ 25 ವರ್ಷಗಳವರೆಗೆ ತಡೆಹಿಡಿಯಲಾಯಿತು. ಏಕೆಂದರೆ ಆ ಸಂದರ್ಭದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಒತ್ತು ನೀಡಿದ ಸರ್ಕಾರ ಜನನ ದರ ಕಡಿತಗೊಳಿಸಲು ರಾಜ್ಯಗಳನ್ನು ಉತ್ತೇಜಿಸುವುದಕ್ಕಾಗಿ ಈ ಕ್ರಮ ಕೈಗೊಂಡಿತು. 2001ರಲ್ಲಿಯೂ ಮತ್ತೆ ಲೋಕಸಭಾ ಸ್ಥಾನಗಳ ಹೆಚ್ಚಳವನ್ನು ಮುಂದಿನ 25 ವರ್ಷಗಳವರೆಗೆ ತಡೆಹಿಡಿಯಲಾಯಿತು.

2026ರಲ್ಲಿಯೂ ಸಹ ಡಿಲಿಮಿಟೇಶನ್ ಜಾರಿ ಮಾಡುವುದಿಲ್ಲ. ಬದಲಿಗೆ ಮತ್ತೆ 25 ವರ್ಷಗಳ ಕಾಲ ಲೋಕಸಭಾ ಸ್ಥಾನಗಳ ಹೆಚ್ಚಳವನ್ನು ತಡೆ ಹಿಡಿಯಲಾಗುತ್ತದೆ ಎಂಬ ವಾದವೂ ಚಾಲ್ತಿಯಲ್ಲಿದೆ. ಆದರೆ 50 ವರ್ಷಗಳ ಹಿಂದಿನ ಜನಸಂಖ್ಯೆಯನ್ನು ಆಧಾರಿಸಿಯೇ ಇಂದಿಗೂ ಸಂಸತ್ ಸದಸ್ಯರ ಪ್ರಾತಿನಿಧ್ಯ ನಿರ್ಧಾರವಾಗುತ್ತಿರುವುದು ವೈಜ್ಞಾನಿಕವಲ್ಲ. ಒಂದೊಂದು ರಾಜ್ಯಗಳಲ್ಲಿ ಒಬ್ಬ ಸಂಸದರು 10 ಲಕ್ಷ ಜನರನ್ನು ಪ್ರತಿನಿಧಿಸಿದರೆ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ 25 ಲಕ್ಷಕ್ಕೂ ಹೆಚ್ಚಿನ ಜನರನ್ನು ಪ್ರತಿನಿಧಿಸುತ್ತಿದ್ದಾರೆ. ಈ ಅಸಮಾನತೆ ಹೋಗಬೇಕಾದರೆ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಸ್ಥಾನಗಳ ಹೆಚ್ಚಳವಾಗಬೇಕು ಎಂಬ ವಾದದಲ್ಲಿ ಹುರುಳಿದೆ.

ಈಗ ಸದ್ಯಕ್ಕೆ ಲೋಕಸಭಾ ಸ್ಥಾನಗಳನ್ನು ಹೆಚ್ಚಿಸದೇ ಇರುವಷ್ಟೇ ಜನಸಂಖ್ಯೆಗೆ ಅನುಗುಣವಾಗಿ ಮರು ಹಂಚಿದರೆ ಉತ್ತರ ಭಾರತದ ರಾಜ್ಯಗಳು ಈಗ ಇರುವುದಕ್ಕಿಂತ 32 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಬಹುದು. ಜನಸಂಖ್ಯೆ ನಿಯಂತ್ರಣದ ಸಾಧನೆ ಮಾಡಿದ ತಪ್ಪಿಗೆ ದಕ್ಷಿಣದ ರಾಜ್ಯಗಳು ಈಗ ಇರುವುದಕ್ಕಿಂತ ಸುಮಾರು 24 ಸ್ಥಾನಗಳನ್ನು ಕಳೆದುಕೊಳ್ಳಬಹುದು ಎನ್ನಲಾಗಿದೆ. ಜನಸಂಖ್ಯೆ ಹೆಚ್ಚಿರುವ ಉತ್ತರದ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳೆರಡೆ 21 ಹೆಚ್ಚುವರಿ ಸ್ಥಾನಗಳನ್ನು ಪಡೆದರೆ, ದಕ್ಷಿಣದ ಕೇರಳ ಮತ್ತು ತಮಿಳುನಾಡು ರಾಜ್ಯಗಳು 16 ಸ್ಥಾನಗಳನ್ನು ಕಳೆದುಕೊಳ್ಳಲಿವೆ!

ಜನನ ನಿಯಂತ್ರಣದಲ್ಲಿ ತಮಿಳುನಾಡು 1.4%, ಕೇರಳ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು 1.5% ಮತ್ತು ಕರ್ನಾಟಕ 1.6%, ಪಶ್ಚಿಮ ಬಂಗಾಳ 1.4% ಹಾಗೂ ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರ ರಾಜ್ಯಗಳು 1.5% ನಷ್ಟು ಫಲವತ್ತತೆಯ ದರದೊಂದಿಗೆ ಅತ್ಯುತ್ತಮ ಸಾಧನೆ ಮಾಡಿ ಜನಸಂಖ್ಯೆಯನ್ನು ನಿಯಂತ್ರಿಸಿವೆ. ಆದರೆ ಉತ್ತರ ಭಾರತದ ರಾಜ್ಯಗಳಾದ ಬಿಹಾರ 3%, ಯುಪಿ 2.7%, ಮಧ್ಯ ಪ್ರದೇಶ 2.6%, ರಾಜಸ್ಥಾನ 2.4 % ಫಲವತ್ತತೆ ದರ ಇದ್ದು ಜನಸಂಖ್ಯೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಹಾಗಾಗಿ ಭಾರತ ಸದ್ಯ ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.

ಇನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ ನೂತನ ಸಂಸತ್ ಭವನದ ಆಸನ ಸಾಮರ್ಥ್ಯ 888 ಇದೆ. ಇದರರ್ಥ 2026ರಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಆಗಲಿದ್ದು, ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಸಂಸತ್ ಸ್ಥಾನಗಳ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಅದರಂತೆ ಪುನರ್‌ ವಿಂಗಡಣೆ ಮಾಡಿದ್ದಲ್ಲಿ ಜನಸಂಖ್ಯಾನುಪಾತವಾಗಿ ಲೋಕಸಭೆಯು 848 ಸ್ಥಾನಗಳಿಗೆ ಏರಿಕೆಯಾಗಲಿದೆ. ಆ ಸಂದರ್ಭದಲ್ಲಿ ಉತ್ತರ ಪ್ರದೇಶವು 80 ಸ್ಥಾನಗಳಿಂದ 143 ಸ್ಥಾನಗಳಿಗೆ ಬೃಹತ್ ಏರಿಕೆ ಕಂಡರೆ, ದಕ್ಷಿಣದ ಕೇರಳವು 20 ಸ್ಥಾನಗಳಿಂದ ಕೇವಲ 20 ಸ್ಥಾನಗಳಲ್ಲಿಯೇ ಉಳಿಯಲಿದೆ.

ಹಲವು ರಾಜ್ಯಗಳಿಗೆ ಹೊಡೆತ

ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಲೋಕಸಭಾ ಸ್ಥಾನಗಳನ್ನು ಹೆಚ್ಚಳಗೊಳಿಸಿದರೆ ಹಿಂದಿ ಬೆಲ್ಟ್ ಎಂದು ಕರೆಯಲಾಗುವ ಉತ್ತರ ಪ್ರದೇಶ 143, ಬಿಹಾರ 79 ಸ್ಥಾನಗಳಿಗೆ ಏರಿಕೆ ಕಂಡರೆ, ಮಹಾರಾಷ್ಟ್ರ 76 ಸ್ಥಾನಗಳಿಗೆ ಏರಿಕೆಯಾಗುತ್ತದೆ. ಮಧ್ಯ ಪ್ರದೇಶ 52, ರಾಜಸ್ಥಾನ 50 ಸ್ಥಾನಗಳನ್ನು ಪಡೆಯುತ್ತದೆ. ಅಂದರೆ ಈ ಐದು ರಾಜ್ಯಗಳೇ 400 ಸೀಟುಗಳನ್ನು (ಬಹುಮತಕ್ಕೆ ಕೇವಲ 25 ಕಡಿಮೆ) ಪಡೆಯುತ್ತವೆ. ಆದರೆ ದಕ್ಷಿಣದ ಭಾರತದ ಕರ್ನಾಟಕ (41), ಕೇರಳ (20), ತಮಿಳುನಾಡು (49) ಆಂಧ್ರ ಪ್ರದೇಶ ಮತ್ತು ತೆಲಂಗಾಣ (54) ಸೇರಿ ಐದು ರಾಜ್ಯಗಳು ಕೇವಲ 164 ಸೀಟುಗಳಿಗೆ ಸೀಮಿತವಾಗುತ್ತವೆ.

ಇನ್ನು ಈಗಾಗಲೇ ಈಶಾನ್ಯ ರಾಜ್ಯಗಳು ತಾರತಮ್ಯ ಅನುಭವಿಸುತ್ತಿದ್ದೇವೆ ಎಂದು ದೂರುತ್ತಿವೆ. ಸ್ವಾಯುತ್ತತೆ ಬೇಕೆಂಬ ಕೂಗು ಕೇಳತ್ತಿದೆ. ಇಂತಹ ಸಂದರ್ಭದಲ್ಲಿ ಡಿಲಿಮಿಟೇಶನ್ ಜಾರಿಯಾದಲ್ಲಿ ಅಸ್ಸಾಂ ರಾಜ್ಯವೊಂದನ್ನು ಹೊರತುಪಡಿಸಿ ಉಳಿದ ರಾಜ್ಯಗಳ ಲೋಕಸಭಾ ಸ್ಥಾನಗಳು ಇದ್ದಷ್ಟೆ ಇರುತ್ತವೆ. ಹಾಗಾಗಿ ಅವುಗಳ ದನಿ ಕೂಡ ಕ್ಷೀಣಿಸುವ ಅಪಾಯವಿದೆ.

ಅಲ್ಲದೇ ಪಂಜಾಬ್, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ, ಉತ್ತರಾಖಂಡ್ ಮತ್ತು ಓಡಿಸ್ಸಾದಂತಹ ರಾಜ್ಯಗಳು ಸಹ ಜನಸಂಖ್ಯೆ ನಿಯಂತ್ರಣದಲ್ಲಿ ಉತ್ತಮ ಸಾಧನೆಗೈದಿವೆ. ಹಾಗಾಗಿ ಆ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಸಹ ಮುಂಬರುವ ಡಿಲಿಮಿಟೇಶನ್‌ನಿಂದ ಹೆಚ್ಚಾಗುವುದಿಲ್ಲ. ಬದಲಿಗೆ ಆರೇಳು ರಾಜ್ಯಗಳ ಲೋಕಸಭಾ ಸ್ಥಾನಗಳು ಡಬಲ್ ಆಗುತ್ತವೆ. ಆ ಹಿಂದಿ ಬೆಲ್ಟ್ ರಾಜ್ಯಗಳೇ ದೇಶದ ರಾಜಕೀಯ ಆಗು ಹೋಗುಗಳಲ್ಲಿ ಪ್ರಧಾನ ಪಾತ್ರವಹಿಸುವ ಅಪಾಯ ಇದರಲ್ಲಿ ಅಡಗಿದೆ.

ಅಂದರೆ ದಕ್ಷಿಣದ ರಾಜ್ಯಗಳು ಕೇವಲ ಸ್ಥಾನಗಳನ್ನು ಕಳೆದುಕೊಳ್ಳುವುದು ಮಾತ್ರವಲ್ಲದೇ ಉತ್ತರದ ರಾಜ್ಯಗಳಲ್ಲಿ ಭದ್ರಕೋಟೆಗಳನ್ನು ಹೊಂದಿರುವ ಬಿಜೆಪಿಯಂತಹ ಪಕ್ಷಗಳು ಕೇವಲ ಐದಾರು ರಾಜ್ಯಗಳ ಬಲದಿಂದಲೇ ಅಧಿಕಾರ ಹಿಡಿಯಬಹುದಾದ ವ್ಯವಸ್ಥೆ ನಿರ್ಮಾಣವಾಗಲಿದೆ.  ಅಂದರೆ ದಕ್ಷಿಣದ ರಾಜ್ಯಗಳನ್ನು ಸಂಪೂರ್ಣ ನಿರ್ಲಕ್ಷಿಸಿಯೂ ಸಹ ಅಧಿಕ್ಕಾರಕ್ಕೇರಬಹುದು ಎಂಬ ಪರಿಸ್ಥಿತಿ ಬಂದಲ್ಲಿ, ಹೆಚ್ಚು ಸೀಟುಗಳನ್ನು ಹೊಂದಿರುವ ಕೆಲವೇ ರಾಜ್ಯಗಳನ್ನು ಮಾತ್ರ ಒಲೈಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

“ವಿಪರ್ಯಾಸವೆಂದರೆ ಜನಸಂಖ್ಯೆ ನಿಯಂತ್ರಣದ ಬಗ್ಗೆ ಭಾರತ ಸರ್ಕಾರದ ನಿರ್ಧಾರಕ್ಕೆ ಕಿವಿಗೊಡದ ರಾಜ್ಯಗಳಿಗೆ ಪುರಸ್ಕಾರ ನೀಡಲಾಗುತ್ತಿದೆ. ಜನಸಂಖ್ಯೆ ನಿಯಂತ್ರಣದಲ್ಲಿ ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸಿದ ತಮಿಳುನಾಡು, ಕೇರಳ, ಆಂಧ್ರ, ಕರ್ನಾಟಕ ಮತ್ತು ತೆಲಂಗಾಣಗಳಿಗೆ ದಂಡ ವಿಧಿಸಲಾಗುತ್ತದೆ! ಭಾರತದ 18% ಜನಸಂಖ್ಯೆಯನ್ನು ಒಳಗೊಂಡಿರುವ ದಕ್ಷಿಣದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಮತ್ತು ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಸಾಧನೆಗೈದುದ್ದು ಮಾತ್ರವಲ್ಲದೆ ಭಾರತದ GDPಗೆ  35% ಕೊಡುಗೆ ನೀಡುತ್ತವೆ. ಆ ರಾಜ್ಯಗಳನ್ನು ಕಡೆಗಣಿಸಬಾರದು” ಎಂದು ತೆಲಂಗಾಣದ ಸಚಿವ ಕೆ.ಟಿ ರಾಮರಾವ್ ಅಭಿಪ್ರಾಯಪಟ್ಟಿದ್ದಾರೆ.

ಇದು ನಿಜಕ್ಕೂ ಒಂದು ಹಾಸ್ಯಾಸ್ಪದ ಮತ್ತು ದುರಂತವಾಗಿದೆ. ಭಾರತದ ದಕ್ಷಿಣ ರಾಜ್ಯಗಳು ಸ್ವಾತಂತ್ರ್ಯದ ನಂತರ ಎಲ್ಲಾ ರಂಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿವೆ. ಹಾಗಾಗಿ ಈ ಅನ್ಯಾಯದ ವಿರುದ್ಧ ಎಲ್ಲಾ ದಕ್ಷಿಣದ ರಾಜ್ಯಗಳ ನಾಯಕರು ಮತ್ತು ಜನರು ಒಟ್ಟಾಗಿ ದನಿ ಎತ್ತಬೇಕಾಗಿದೆ ಎಂದು ಅವರು ಕರೆ ನೀಡಿದ್ದಾರೆ.

“2026 ರ ಡಿಲಿಮಿಟೇಶನ್ ನಂತರ ಲೋಕಸಭೆಯಲ್ಲಿ ಕರ್ನಾಟಕದಿಂದ ಆಯ್ಕೆಯಾಗುವ ಸದಸ್ಯರ ಶೇಕಡಾವಾರು ಸಂಖ್ಯೆ ಕಡಿಮೆಯಾಗಲಿದೆ. ಭಾರತ ಒಕ್ಕೂಟದ ರಾಜಕೀಯದಲ್ಲಿ ಹಿಂದಿಗಿಂತಲೂ ಕಡಿಮೆ ಪ್ರಭಾವವನ್ನು ಕರ್ನಾಟಕ ಹೊಂದಲಿದೆ. ಹೊಸ ಲೊಕಸಭೆಯ ಕಟ್ಟಡವನ್ನು ಸಂಭ್ರಮಿಸುವ ಕರ್ನಾಟಕದ ನಾಗರೀಕರಿಗೆ ಇದು ತಿಳಿದಿರಬೇಕಿದೆ” ಎಂದು ಕನ್ನಡ ಹೋರಾಟಗಾರ ಅರುಣ್ ಜಾವಗಲ್ ಅಭಿಪ್ರಾಯ ಪಟ್ಟಿದ್ದಾರೆ.

ಪರಿಹಾರವೇನು?

ಕ್ಷೇತ್ರ ಪುನರ್ ವಿಂಗಡಣೆ ಮಾಡಲೇಬೇಡಿ ಎಂದು ಹೇಳಲಾಗುವುದಿಲ್ಲ. ಆದರೆ ಇಲ್ಲಿ ಸಮಸ್ಯೆ ಮತ್ತು ಆತಂಕ ಇರುವುದು ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯವಾಗಿದೆ. ಹಾಗಾಗಿ ಇದಕ್ಕೆ ಇರುವ ಪರಿಹಾರವೆಂದರೆ ಕೇಂದ್ರ ಸರ್ಕಾರವು ಭಾರತದ ಒಕ್ಕೂಟ ವ್ಯವಸ್ಥೆಗೆ ಅನುಗುಣವಾಗಿ ನಡೆದುಕೊಳ್ಳುವುದೇ ಆಗಿದೆ. ಅಂದರೆ ಕೇಂದ್ರ ಪಟ್ಟಿಯಲ್ಲಿಯ ಹಲವಾರು ಅಧಿಕಾರಗಳನ್ನು ರಾಜ್ಯಗಳಿಗೆ ವರ್ಗಾಹಿಸುವ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೆ ಮುಂದಾಗಬೇಕು. ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಸಿಕ್ಕಿದ್ದಲ್ಲಿ ಕೇಂದ್ರದ ಮೇಲಿನ ಅವಲಂಬನೆ ಕಡಿಮೆ ಆಗಿ ಸ್ವತಂತ್ರವಾಗಿ ತಮ್ಮ ಬೇಕು ಬೇಡಗಳನ್ನು ಈಡೇರಿಸಿಕೊಳ್ಳಬಹುದು. ಈ ಫೆಡರಲ್ ತತ್ವ ಜಾರಿಯಾದರೆ ಲೋಕಸಭೆಯ ಸಂಖ್ಯೆಗಳು ಎಷ್ಟಿವೆ ಎಂಬುದು ಮುಖ್ಯವಾಗುವುದಿಲ್ಲ ಎನ್ನುತ್ತಾರೆ ಅರುಣ್ ಜಾವಗಲ್.

ಅಮೆರಿಕ ಮತ್ತು ಹಲವು ಯೂರೋಪಿಯನ್ ರಾಷ್ಟ್ರಗಳಲ್ಲಿ ಈ ಮಾದರಿಯ ಆಡಳಿತವನ್ನು ನಾವು ಕಾಣಬಹುದು. ವಿದೇಶಾಂಗ ವ್ಯವಹಾರ, ರಕ್ಷಣೆಯಂತಹ ಇಡೀ ದೇಶಕ್ಕೆ ಸಂಬಂಧಿಸಿದ ಅಧಿಕಾರಗಳನ್ನು ಬಿಟ್ಟು ಉಳಿದ ಅಧಿಕಾರಗಳು ಅಲ್ಲಿನ ರಾಜ್ಯಗಳ ಕೈಯಲ್ಲಿವೆ. ಹಾಗಾಗಿ ಆ ದೇಶಗಳು ಪ್ರಾತಿನಿಧ್ಯದ ಸಮಸ್ಯೆಯನ್ನು ಬಗೆಹರಿಸಿಕೊಂಡಿವೆ. ಈ ವ್ಯವಸ್ಥೆ ನಮ್ಮ ದೇಶದಲ್ಲಿಯೂ ಜಾರಿಯಾಗಬೇಕೆಂದು ನಾವೆಲ್ಲರೂ ಒತ್ತಾಯಿಸಬೇಕಿದೆ ಎಂದರು.

ಇದನ್ನೂ ಓದಿ: ಕಲ್ಯಾಣ ಯೋಜನೆಗಳ ಬಗ್ಗೆ ಕುಹಕವಾಡುವ ಪ್ರತಿಷ್ಠಿತ ಪುಂಡರಿಗೆ ಏನೆನ್ನೋಣ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...