Homeಕರ್ನಾಟಕಸಂಭ್ರಮ-ಅಸಮಾಧಾನಗಳ ನಡುವೆ ಸಂಪುಟ ರಚನೆ ಮತ್ತು ಖಾತೆ ಹಂಚಿಕೆ

ಸಂಭ್ರಮ-ಅಸಮಾಧಾನಗಳ ನಡುವೆ ಸಂಪುಟ ರಚನೆ ಮತ್ತು ಖಾತೆ ಹಂಚಿಕೆ

- Advertisement -
- Advertisement -

ಮೊದಲನೆಯದಾಗಿ ಬಹುತೇಕರು ಊಹಿಸದ ರೀತಿಯಲ್ಲಿ ಅಭೂತಪೂರ್ವ ಬಹುಮತ ಪಡೆದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಎರಡನೆಯದಾಗಿ ಮುಖ್ಯಮಂತ್ರಿ ಯಾರಾಗಬೇಕೆಂಬ ಸಮಸ್ಯೆಯನ್ನು ಬಗೆಹರಿಸಿಕೊಂಡಿದೆ. ಮೂರನೆಯದಾಗಿ ಸಂಪುಟ ರಚನೆ ಮತ್ತು ಖಾತೆ ಹಂಚಿಕೆಯಂತಹ ಗಜಪ್ರಸವವೂ ಸುಸೂತ್ರವಾಗಿ ನಡೆದಿದೆ. ಈ ಮೂರು ಕಾರ್ಯಗಳು ಕಾಂಗ್ರೆಸ್‌ನೊಳಗೆ ದೊಡ್ಡ ಬಂಡಾಯವನ್ನೇ ಸೃಷ್ಟಿಸುತ್ತವೆ, ಆಂತರಿಕ ಕಚ್ಚಾಟ ನಡೆಯುತ್ತದೆ ಎಂಬ ರೀತಿಯಲ್ಲಿಯೇ ಮಾಧ್ಯಮಗಳು ವರದಿ ಮಾಡಿದ್ದವು. ಅದರಲ್ಲಿಯೂ ಟಿವಿ ಚಾನೆಲ್‌ಗಳು ಈ ಪ್ರಕ್ರಿಯೆಗಳ ಬಗ್ಗೆ ಕಾಂಗ್ರೆಸ್ ವಿರುದ್ಧ ದೊಡ್ಡ ಆಪಾದನೆಯ ರೀತಿಯಲ್ಲಿ ಪ್ರಸಾರ ಮಾಡಿದ್ದವು. ಆದರೆ ಗ್ರ್ಯಾಂಡ್ ಓಲ್ಡ್ ಪಾರ್ಟಿ ಕಾಂಗ್ರೆಸ್‌ನ ಹೈಕಮಾಂಡ್ ತಮ್ಮ ಸುದೀರ್ಘ ಅನುಭವದಿಂದ ಮತ್ತು ರಾಜ್ಯ ಮುಖಂಡರ ಜೊತೆಗಿನ ಸಮಯೋಚಿತ ಸಮಾಲೋಚನೆಯಿಂದ ಇವೆಲ್ಲವನ್ನು ಸಮರ್ಥವಾಗಿ ನಿಭಾಯಿಸಿದೆ. ಆ ಮೂಲಕ ಕಾಂಗ್ರೆಸ್‌ನಲ್ಲಿ ಭಿನ್ನಮತ, ಬಂಡಾಯವನ್ನು ನಿರೀಕ್ಷಿಸಿದ್ದ ಗೋಧಿ ಮೀಡಿಯಾಗಳಿಗೆ ನಿರಾಶೆಯಾಗಿದೆ.

ನೂತನ ಸರ್ಕಾರವು ಒಂದೇ ವಾರದಲ್ಲಿ, ಎರಡು ಕಂತುಗಳಲ್ಲಿ ಎಲ್ಲಾ 34 ಸಚಿವ ಸ್ಥಾನಗಳನ್ನು ತುಂಬುವ ಮೂಲಕ ಸುಸೂತ್ರ ಆಡಳಿತಕ್ಕೆ ಸಜ್ಜಾಗಿದ್ದೇವೆ ಎಂಬ ಸಂದೇಶ ರವಾನಿಸಿದೆ. ಅತೃಪ್ತ ಶಾಸಕರನ್ನು ಓಲೈಸಲು ಮೂರ್ನಾಲ್ಕು ಸಚಿವ ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳುವ ಇತ್ತೀಚಿನ ಸಂಪ್ರದಾಯಕ್ಕೆ ಬ್ರೇಕ್ ಹಾಕಿದೆ. ಇದೇ ತಮ್ಮ ಕೊನೆಯ ಚುನಾವಣೆ ಎಂದು ಗೆದ್ದುಬಂದವರಿಗೆ, ಸ್ಪೀಕರ್ ಸ್ಥಾನ ಬೇಡ, ಸಚಿವ ಸ್ಥಾನವೇ ಬೇಕು ಎಂದು ಹಠ ಹಿಡಿದಿದ್ದ ಹಲವು ಹಿರಿಯ ಶಾಸಕರಿಗೂ ಸಚಿವ ಸ್ಥಾನ ನೀಡದೆ ಅನುಭವಿಗಳು ಮತ್ತು ಹೊಸಬರ ಸಮತೋಲಿತ ಸಚಿವ ಸಂಪುಟ ರಚಿಸುವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿದೆ. ಅಲ್ಲದೆ ಸಚಿವ ಸ್ಥಾನ ವಂಚಿತರಾದ ಬಹುತೇಕ ಶಾಸಕರು ಬಂಡಾಯವೇಳದೆ ಪಕ್ಷದ ಸಾಮೂಹಿಕ ನಿರ್ಧಾರಕ್ಕೆ ತಲೆದೂಗಿದ್ದಾರೆ. ಇನ್ನು ರಾಜ್ಯದ ವಿಧಾನಸಭಾ ಚುನಾವಣೆ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್- ಈ ಮೂವರೂ, ಇದ್ದ ಕೆಲವು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಒಗ್ಗಟ್ಟಾಗಿ ಮುಂದುವರಿಯುತ್ತಿರುವುದು ಸ್ಥಿರ ಸರ್ಕಾರದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯಾಗಿದೆ.

ಹಿರಿಯರಿಗೆ ಕೈತಪ್ಪಿದ ಸಚಿವ ಸ್ಥಾನ ? ಕಿರಿಯರಿಗೂ ಜವಾಬ್ದಾರಿ

ಆರ್.ವಿ ದೇಶಪಾಂಡೆ, ಬಿ.ಆರ್ ಪಾಟೀಲ, ಟಿ.ಬಿ ಜಯಚಂದ್ರ, ಹೆಚ್ ವೈ ಮೇಟಿಯಂತಹ ಹಿರಿಯ ಕಾಂಗ್ರೆಸ್ ನಾಯಕರಿಗೆ ಮತ್ತು ಮಾಜಿ ಸಚಿವರಿಗೆ ಈ ಸಾರಿ ಸಚಿವ ಸ್ಥಾನ ನೀಡಲಾಗಿಲ್ಲ. ಬಿಜೆಪಿಯಿಂದ ವಲಸೆ ಬಂದು ಗೆದ್ದ ಲಕ್ಷ್ಮಣ ಸವದಿಯಂತವರಿಗೂ ಮಣೆ ಹಾಕಿಲ್ಲ. ಆ ಮೂಲಕ ಕಾಂಗ್ರೆಸ್ ಈಗಾಗಲೇ ಹಲವು ಬಾರಿ ಸಚಿವ ಸ್ಥಾನ ಪಡೆದ ಕೆಲವರನ್ನು ಪಕ್ಕಕ್ಕೆ ಸರಿಸಿದೆ. ಅದೇ ಸಂದರ್ಭದಲ್ಲಿ ಚಿಂತಾಮಣಿ ಕ್ಷೇತ್ರದ ಡಾ. ಎಂ.ಸಿ ಸುಧಾಕರ್, ಭಟ್ಕಳದಿಂದ ಮಂಕಾಳ್ ವೈದ್ಯ, ಮಧುಗಿರಿಯಿಂದ ಕೆ.ಎನ್ ರಾಜಣ್ಣ, ಪಿರಿಯಾಪಟ್ಟಣದಿಂದ ಕೆ. ವೆಂಕಟೇಶ್, ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಲಕ್ಷ್ಮಿ ಹೆಬ್ಬಾಳ್ಕರ್, ಹೆಬ್ಬಾಳ ಕ್ಷೇತ್ರದ ಬೈರತಿ ಸುರೇಶ್, ಸೊರಬ ಕ್ಷೇತ್ರದ ಮಧು ಬಂಗಾರಪ್ಪ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಬಿ. ನಾಗೇಂದ್ರ, ರಾಯಚೂರಿನ ಎನ್.ಎಸ್ ಬೋಸರಾಜುರವರು ಸೇರಿ 9 ಜನರು ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.

ಹಿರಿಯರಿಗೆ ಸ್ಥಾನ ಕೊಡದಿದ್ದು ಸರಿ. ಆದರೆ ಕಾಂಗ್ರೆಸ್ ಟಿಕೆಟ್‌ನಿಂದ ಮೊದಲ ಬಾರಿ ಗೆದ್ದಿರುವ ಮಧು ಬಂಗಾರಪ್ಪನವರಿಗೆ ಸಚಿವ ಸ್ಥಾನ ಕೊಡುವ ಅಗತ್ಯವಿತ್ತೆ ಎಂಬ ಪ್ರಶ್ನೆ ಎದ್ದಿದೆ. ಇನ್ನು ರಾಯಚೂರಿನ ಎನ್.ಎಸ್ ಬೋಸರಾಜುರವರಿಗೆ ಯಾವ ಆಧಾರದಲ್ಲಿ ಸಚಿವ ಸ್ಥಾನ ಕೊಡಲಾಗಿದೆ. ಹಿಂದೆ ಎರಡು ಬಾರಿ ಎಂಎಲ್‌ಎ ಮತ್ತು ಒಂದು ಅವಧಿಗೆ ವಿಧಾನಪರಿಷತ್ ಸದಸ್ಯರಾಗಿದ್ದೆ ಅವರ ಸಾಧನೆಯೇ? ಬೋಸರಾಜುರವರು ತೆಲಂಗಾಣ ರಾಜ್ಯದ ಎಐಸಿಸಿ ಉಸ್ತುವಾರಿಯಾಗಿದ್ದೆ ಮಾನದಂಡವೇ? ಅಥವಾ ಅವರು ಕ್ಷತ್ರಿಯ ಸಮುದಾಯಕ್ಕೆ ಸೇರಿದ್ದರಿಂದ ಸಚಿವ ಸ್ಥಾನ ಸಿಕ್ಕಿತೆ? ಏಕೆಂದರೆ ರಾಯಚೂರಿನಲ್ಲಿ ಕಾಂಗ್ರೆಸ್ ಕಟ್ಟುವುದರಲ್ಲಿ ಅವರ ಪಾತ್ರ ಅಷ್ಟೇನಿಲ್ಲ ಎನ್ನುವ ಮಾತುಗಳ ಜೊತೆಗೆ ಅವರು ಸದ್ಯಕ್ಕೆ ಶಾಸಕರೂ ಅಲ್ಲ ಮೇಲ್ಮನೆ ಸದಸ್ಯರೂ ಆಗಿಲ್ಲ.

ವಿಧಾನಪರಿಷತ್ತಿನ ಸದಸ್ಯರೊಬ್ಬರನ್ನು ಸಚಿವರನ್ನಾಗಿಸುವ ಸಂಪ್ರದಾಯದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆಂಬ ನಿರೀಕ್ಷೆ ಕಾಂಗ್ರೆಸ್ ಕಾರ್ಯಕರ್ತರ ಹಲವರಲ್ಲಿ ದೊಡ್ಡಮಟ್ಟದಲ್ಲಿತ್ತು. ಆದರೆ ಟಿಕೆಟ್ ಕೈತಪ್ಪಿರುವುದರ ಬಗ್ಗೆ ಅವರೇ ಪರೋಕ್ಷವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ರಾಮಲಿಂಗಾ ರೆಡ್ಡಿ ತಮಗೆ ದೊರೆತ ಖಾತೆಯ ಬಗ್ಗೆ ತೋರಿಸಿರುವ ಅಸಮಾಧಾನವನ್ನು ಹೊರತುಪಡಿಸಿದರೆ, ಬಿ.ಕೆ. ಹರಿಪ್ರಸಾದ್ ಅವರ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿವೆ.

ಸಾಮಾಜಿಕ ನ್ಯಾಯ

ಸಿದ್ದರಾಮಯ್ಯ ಸಂಪುಟದ 34 ಸಚಿವರಲ್ಲಿ 8 ಲಿಂಗಾಯಿತ, 6 ಪರಿಶಿಷ್ಟ್ಟ ಜಾತಿ (ಬಲಗೈ 3, ಎಡಗೈ 2, ಭೋವಿ 1), 5 ಒಕ್ಕಲಿಗ, 4 ಅಲ್ಪಸಂಖ್ಯಾತ ಸಮುದಾಯ (ಎರಡು ಮುಸ್ಲಿಂ, ಒಂದು ಕ್ರಿಶ್ಚಿಯನ್, ಒಂದು ಜೈನ), 3 ಪರಿಶಿಷ್ಟ್ಟ ಪಂಗಡ (ವಾಲ್ಮೀಕಿ), 2 ಕುರುಬ ಮತ್ತು ಬ್ರಾಹ್ಮಣ, ರೆಡ್ಡಿ, ಮೊಗವೀರ, ಈಡಿಗ, ಮರಾಠ, ರಾಜು ಕ್ಷತ್ರಿಯ ಸಮುದಾಯದ ತಲಾ ಒಬ್ಬರಿದ್ದಾರೆ.

ಮಧು ಬಂಗಾರಪ್ಪ

ಮೇಲ್ನೋಟಕ್ಕೆ ಸಾಮಾಜಿಕ ನ್ಯಾಯ ಪಾಲಿಸಲು ಸಾಧ್ಯವಾಗಿದೆ ಎನಿಸಿದರೂ, ಈಗಾಗಲೇ ಹಲವು ಹುದ್ದೆ, ಸಚಿವ ಸ್ಥಾನ ಪಡೆದಿರುವ ಬ್ರಾಹ್ಮಣ ಸಮುದಾಯದ ದಿನೇಶ್ ಗುಂಡೂರಾವ್ ಬದಲಿಗೆ, ಉಪ್ಪಾರ ಸಮುದಾಯದ ಏಕೈಕ ಶಾಸಕ ಚಾಮರಾಜನಗರದ ಸಿ. ಪುಟ್ಟರಂಗಶೆಟ್ಟಿಯವರಿಗೆ ಸಚಿವ ಸ್ಥಾನ ನೀಡಬೇಕಿತ್ತು ಎಂಬ ಕೂಗುಗಳೆದಿದ್ದವು. ಇನ್ನು 34 ಜನರ ಸಂಪುಟದಲ್ಲಿ ಕೇವಲ ಒಬ್ಬ ಮಹಿಳೆಗೆ ಮಾತ್ರ ಅವಕಾಶ ನೀಡಿದ್ದು ಕೂಡ ಸಮರ್ಪಕವಾಗಿಲ್ಲ. ಕೆ.ಎಚ್ ಮುನಿಯಪ್ಪನವರ ಬದಲಿಗೆ ಅವರ ಪುತ್ರಿ ರೂಪಕಲಾ ಶಶಿಧರ್ ಅವರಿಗೆ ಅವಕಾಶ ನೀಡಬೇಕಿತ್ತು; ಫಾತಿಮಾ ಕನೀಜ್ ಸಹ ಸಚಿವರಾಗಿ ದುಡಿಯುವ ಸಾಮರ್ಥ್ಯವಿದ್ದವರು ಅಲ್ಲವೇ? ಎಂಬ ಹಲವು ಪ್ರಶ್ನೆಗಳು ಎದ್ದಿವೆ.

ಇದನ್ನೂ ಓದಿ: ನಮ್ಮ ಸಚಿವರಿವರು: ದಲಿತ ಚಳವಳಿಗಾರರ ಕಣ್ಮಣಿ ಡಾ.ಎಚ್.ಸಿ.ಮಹದೇವಪ್ಪ

ಆದರೆ ಕಳೆದ ಬೊಮ್ಮಾಯಿ ಸರ್ಕಾರದ ಸಂಪುಟಕ್ಕೆ ಹೋಲಿಸಿದರೆ ಸಿದ್ದರಾಮಯ್ಯನವರ ಸಂಪುಟ ವೈವಿಧ್ಯಮಯವಾಗಿ ಕಾಣುತ್ತದೆ. ಬೊಮ್ಮಾಯಿ ಸರ್ಕಾರದಲ್ಲಿ 10 ಲಿಂಗಾಯಿತರು, 7 ಒಕ್ಕಲಿಗರು, 3 ಪ.ಜಾ, 3 ಕುರುಬ, ಇಬ್ಬರು ಬ್ರಾಹ್ಮಣರು, ಇಬ್ಬರು ಬಿಲ್ಲವರು, 1 ಪ.ಪಂ, 1 ನಾಯ್ಡು ಮತ್ತು 1 ರಜಪೂತ ಸಮುದಾಯದ ಸಚಿವರಿದ್ದರು. ಇಲ್ಲಿ ಪ್ರಬಲ ಜಾತಿಗಳೇ ಹೆಚ್ಚಿನ ಪಾಲು ಪಡೆದಿದ್ದನ್ನು, ದಲಿತರು ಮತ್ತು ಅತಿ ಹಿಂದುಳಿದ ಸಮುದಾಯಗಳ ಪಾಲು ಕಡಿಮೆ ಇರುವುದನ್ನು ಕಾಣಬಹುದು. ಇನ್ನು ಅಲ್ಪಸಂಖ್ಯಾತ ಧರ್ಮಗಳ ಒಬ್ಬರೂ ಪ್ರತಿನಿಧಿಗಳಿರಲಿಲ್ಲ. ಆದರೆ ಸಿದ್ದರಾಮಯ್ಯನವರ ಸರ್ಕಾರ ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಬಹುತೇಕರಿಗೆ ಪ್ರಾತಿನಿಧ್ಯ ಇರುವಂತೆ ನೋಡಿಕೊಂಡಿದೆ.

ಪ್ರಾದೇಶಿಕ ಅಸಮತೋಲನ?

ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ಈ ಸಂಪುಟ ವಿಫಲವಾಗಿದೆ ಎಂತಲೇ ಹೇಳಬೇಕಿದೆ. ಏಕೆಂದರೆ ಬೆಂಗಳೂರು ನಗರಕ್ಕೆ 6 ಸಚಿವ ಸ್ಥಾನ ಸಿಗುವ ಮೂಲಕ ಸಿಂಹಪಾಲು ಪಡೆದಿದೆ. ಮೈಸೂರು ಜಿಲ್ಲೆಗೆ ಸಿ.ಎಂ ಸೇರಿ 3 ಸ್ಥಾನ ಸಿಕ್ಕರೆ, ತುಮಕೂರು, ವಿಜಯಪುರ, ಕಲಬುರಗಿ, ಬೀದರ್ ಮತ್ತು ಬೆಳಗಾಂ ಜಿಲ್ಲೆಗಳ ತಲಾ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಉಳಿದಂತೆ 16 ಜಿಲ್ಲೆಗಳ ತಲಾ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಕೋಲಾರ, ಹಾಸನ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ವಿಜಯನಗರ ಜಿಲ್ಲೆಗಳ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಪ್ರತಿ ಜಿಲ್ಲೆಗೂ ಪ್ರಾತಿನಿಧ್ಯ ನೀಡಲು ಸಾಧ್ಯವಾಗದಿದ್ದರೂ ಕನಿಷ್ಠ ಇನ್ನೂ 3-4 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳಬಹುದಿತ್ತು.

ಅನುಭವದ ಆಧಾರದಲ್ಲಿ ಖಾತೆ ಹಂಚಿಕೆ

ಇನ್ನು 34 ಖಾತೆಗಳನ್ನು ಸಚಿವರ ಸಾಮರ್ಥ್ಯ, ಆಸಕ್ತಿ, ಅನುಭವದ ಆಧಾರದಲ್ಲಿ ಹಂಚುವುದು ಸೂಕ್ತ. ಆದರೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಖಾತೆ ಹಂಚಿಕೆ ಆ ರೀತಿ ನಡೆದಂತೆ ಕಾಣುತ್ತಿಲ್ಲ ಎಂಬ ಅಸಮಾಧಾನ ಇರುವುದು ಮೇಲ್ನೋಟಕ್ಕೇ ಕಾಣುತ್ತದೆ. ಸಮಾಜದಲ್ಲಿ ಅಶಾಂತಿ ಉಂಟುಮಾಡುವ ವಿಚ್ಛಿದ್ರಕಾರಿ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ ಎಂದು ಹೇಳಿಕೆ ನೀಡುತ್ತಿರುವ ಪ್ರಿಯಾಂಕ್ ಖರ್ಗೆಯವರಿಗೆ ಗೃಹ ಖಾತೆ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತಾರೆ ಎನ್ನಲಾಗುತ್ತಿತ್ತು. ಆದರೆ ಆ ಖಾತೆ ಯಾವುದೇ ಸಂಘಟನೆಗಳನ್ನು ನಿಷೇಧಿಸುವ ಪ್ರಸ್ತಾಪ ನಮ್ಮ ಮುಂದಿಲ್ಲ ಎನ್ನುವ ಪರಮೇಶ್ವರ್‌ರವರ ಪಾಲಾಗಿದೆ.

ಎನ್.ಎಸ್ ಬೋಸರಾಜು

ಸಚಿವ ಸ್ಥಾನಗಳನ್ನು ನಿಭಾಯಿಸಿದ ಅನುಭವವಿಲ್ಲದ ಮಧು ಬಂಗಾರಪ್ಪನವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಕೊಟ್ಟಿರುವುದರ ಬಗ್ಗೆ ಚರ್ಚೆಗಳಾಗುತ್ತಿವೆ. ಈ ಹಿಂದೆ ಕಾಂಗ್ರೆಸ್‌ನಿಂದ ಕಿಮ್ಮನೆ ರತ್ನಾಕರ್‌ರವರು ಶಿಕ್ಷಣ ಸಚಿವರಾಗಿದ್ದಾಗ ಒಂದಿಷ್ಟು ಬದಲಾವಣೆಗೆ ಪ್ರಯತ್ನಿಸಿದ್ದು ಬಿಟ್ಟರೆ ಆನಂತರ ಬಂದ ಯಾರೂ ಸಹ ಶಿಕ್ಷಣಕ್ಕೆ ಆದ್ಯತೆ ಕೊಟ್ಟ ಉದಾಹರಣೆಗಳಿಲ್ಲ. ಪಠ್ಯ ಪರಿಷ್ಕರಣೆಯ ಅವಾಂತರಗಳನ್ನು ಗಮನದಲ್ಲಿಟ್ಟುಕೊಂಡು ಮಧು ಬಂಗಾರಪ್ಪನವರು ಸರ್ಮಥವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿರುವುದು ಆಶಾವಾದ ಹುಟ್ಟಿಸಿದೆ. ಜಾತ್ಯಾತೀತ ಮನೋಧೋರಣೆಯ ಅವರು ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಅವಾಂತರಗಳನ್ನು ನಿವಾರಿಸಬೇಕೆಂಬ ದೊಡ್ಡ ನಿರೀಕ್ಷೆಯಿದೆ.

ಒಟ್ಟಿನಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆ ಕಾಂಗ್ರೆಸ್‌ಗೆ ಅಧಿಕಾರ ನೀಡಿದೆ. ಬಿಜೆಪಿ ಸರ್ಕಾರವನ್ನು 40% ಕಮಿಷನ್ ಸರ್ಕಾರವೆಂದು ಕರೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ತಾನು ನೀಡಿರುವ ಗ್ಯಾರಂಟಿಗಳನ್ನು ಪೂರೈಸಬೇಕಾದರೆ ಸೋರಿಕೆ ಮತ್ತು ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಆಡಳಿತ ನಡೆಸಬೇಕಿದೆ. ಈಗ ಖಾತೆಗಳನ್ನು ಪಡೆದವರು ಸಹ ಅದನ್ನೊಂದು ದುಡ್ಡು ಮಾಡುವ ಸ್ಥಾನವನ್ನಾಗಿ ಪರಿಗಣಿಸದೇ ಗೌರವ ಮತ್ತು ಜವಾಬ್ದಾರಿ ಎಂದು ಅರಿತು ಕೆಲಸ ಮಾಡಬೇಕು. ಅದರ ಮೇಲೆ ಜನತೆ ಮತ್ತು ಮಾಧ್ಯಮಗಳು ಸದಾ ಕಣ್ಣಿಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...