Homeಕರ್ನಾಟಕನಮ್ಮ ಸಚಿವರಿವರು: ದಲಿತ ಚಳವಳಿಗಾರರ ಕಣ್ಮಣಿ ಡಾ.ಎಚ್.ಸಿ.ಮಹದೇವಪ್ಪ

ನಮ್ಮ ಸಚಿವರಿವರು: ದಲಿತ ಚಳವಳಿಗಾರರ ಕಣ್ಮಣಿ ಡಾ.ಎಚ್.ಸಿ.ಮಹದೇವಪ್ಪ

- Advertisement -
- Advertisement -

ಪ್ರಸ್ತುತ ಮೈಸೂರು ಭಾಗದ ರಾಜಕಾರಣದ ಮೇಲೆ ಪ್ರಭಾವಿಸಿರುವ ಪ್ರಭಾವಿ ದಲಿತ ನಾಯಕರನ್ನು ಗುರುತಿಸುವುದಾದರೆ ಮೂವರ ಹೆಸರನ್ನು ತಪ್ಪದೇ ಹೇಳಬಹುದು. ಒಂದು- ವಿ.ಶ್ರೀನಿವಾಸ ಪ್ರಸಾದ್ (ಬಿಜೆಪಿ), ಎರಡು- ಡಾ.ಎಚ್.ಸಿ.ಮಹದೇವಪ್ಪ (ಕಾಂಗ್ರೆಸ್), ಮೂರು- ದಿವಂಗತ ಆರ್‌.ಧ್ರುವನಾರಾಯಣ (ಕಾಂಗ್ರೆಸ್).

ಆರ್‌.ಧ್ರುವನಾರಾಯಣ ಅವರ ಹಠಾತ್ ನಿರ್ಗಮನದಿಂದಾಗಿ ಮೈಸೂರು, ಚಾಮರಾಜನಗರ ಜಿಲ್ಲೆಯ ರಾಜಕಾರಣದಲ್ಲಿ ಒಂದಿಷ್ಟು ಪಲ್ಲಟಗಳಾಗಿರುವುದು ಸುಳ್ಳಲ್ಲ. ಬಹುಶಃ ಇಂದು ಧ್ರುವ ಇದ್ದಿದ್ದರೆ ನಂಜನಗೂಡು ಕ್ಷೇತ್ರದಿಂದ ಗೆದ್ದು, ಸಚಿವರೂ ಆಗುತ್ತಿದ್ದರೇನೋ. ಬಹುಶಃ ಧ್ರುವ ಮತ್ತು ಎಚ್‌.ಸಿ.ಮಹದೇವಪ್ಪ ಅವರ ನಡುವೆ ಸಚಿವ ಸ್ಥಾನದ ಪೈಪೋಟಿಯೋ ಏರ್ಪಡುತ್ತಿತ್ತೇನೋ. ಈಗ ಇದೆಲ್ಲವೂ ಊಹಾಪೋಹದ ಮಾತಾದೀತು, ಇರಲಿ. ಅಂತಿಮವಾಗಿ ಮಹದೇವಪ್ಪ ಅವರು ಗೆದ್ದು, ಮತ್ತೆ ಸಚಿವರೂ ಆಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಖಾತೆ ಅವರಿಗೆ ದೊರೆತಿದೆ.

ದಲಿತ ಚಳವಳಿಗಳ ಸಂಗಾತಿಯಾಗಿರುವ ಎಚ್.ಸಿ.ಮಹದೇವಪ್ಪ ಅವರ ರಾಜಕಾರಣ ವರ್ಣರಂಜಿತವಾದದ್ದು. ಟಿ.ನರಸೀಪುರ ವಿಧಾನಸಭಾ ಕ್ಷೇತ್ರವನ್ನು ಆರನೇ ಬಾರಿಗೆ ಪ್ರತಿನಿಧಿಸುತ್ತಿರುವ ಎಚ್‌.ಸಿ.ಎಂ. ಅವರಿಗೆ ನಿರೀಕ್ಷೆಯಂತೆ ಈ ಬಾರಿಯೂ ಸಚಿವ ಸ್ಥಾನ ದೊರೆತಿದೆ.

ಡಾ.ಮಹದೇವಪ್ಪ ಅವರು 1985, 1994, 2004ರ ಚುನಾವಣೆಯಲ್ಲಿ ಜನತಾ ಪರಿವಾರದಿಂದ, 2008, 2013, 2023ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. 1994ರಲ್ಲಿ ಎಚ್.ಡಿ.ದೇವೇಗೌಡ ಹಾಗೂ ಜೆ.ಎಚ್.ಪಟೇಲ್‌ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. 2004ರಲ್ಲಿ ಎನ್‌.ಧರಂಸಿಂಗ್‌ ನೇತೃತ್ವದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯ ಮಂತ್ರಿಯಾಗಿದ್ದರು. ಬಾಗಲಕೋಟೆ, ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯೂ ಆಗಿದ್ದರು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ಹಾಸನ, ಕೊಡಗು, ಮೈಸೂರು ಜಿಲ್ಲಾ ಉಸ್ತುವಾರಿಯನ್ನು ಮಹದೇವಪ್ಪನವರಿಗೆ ವಹಿಸಲಾಗಿತ್ತು. 2018ರ ಚುನಾವಣೆಯಲ್ಲಿ ಸೋತಿದ್ದರು. ಈಗ 2023ರಲ್ಲಿ ಮರು ಆಯ್ಕೆಯಾಗಿದ್ದು, ನಿರೀಕ್ಷೆಯಂತೆ ಖಾತೆ ದೊರೆತಿದೆ. ದಲಿತ ಬಲಗೈ ಸಮುದಾಯದ ಪ್ರಾತಿನಿಧ್ಯದಲ್ಲಿ ಸಚಿವರಾದ ಮೂವರ ಪೈಕಿ ಡಾ.ಎಚ್‌.ಸಿ.ಮಹದೇವಪ್ಪ ಒಬ್ಬರಾಗಿದ್ದಾರೆ.

ಇದನ್ನೂ ಓದಿರಿ: ನಮ್ಮ ಸಚಿವರಿವರು; ಕರ್ನಾಟಕ ಕಾಂಗ್ರೆಸ್‌ನಲ್ಲಿ ಕ್ರಿಶ್ಚಿಯನ್ ಸಮುದಾಯದ ಏಕೈಕ ಶಾಸಕ ಹಿರಿಯ ಮುಖಂಡ ಕೆ.ಜೆ. ಜಾರ್ಜ್

ಕಾವೇರಿ, ಕಪಿಲಾ, ಸ್ಪಟಿಕ ನದಿಗಳ ಸಂಗಮ ಕ್ಷೇತ್ರ ತಿರುಮಕೂಡಲು ನರಸೀಪುರ. ಜೊತೆಗೆ ಐತಿಹಾಸಿಕ ತಲಕಾಡು, ಸೋಮನಾಥಪುರದಂತಹ ಸ್ಥಳಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿರುವ ಈ ತಾಲ್ಲೂಕು, ವರುಣಾ ಮತ್ತು ಟಿ.ನರಸೀಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಹೋಗಿದೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿರುವ ಟಿ.ನರಸೀಪುರ, ಮಹದೇವಪ್ಪ ಅವರು ಪ್ರತಿನಿಧಿಸುವ ಕಾರಣಕ್ಕೆ ಎಂದಿಗೂ ಚರ್ಚೆಯ ವಿಷಯ.

ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಸೇರುವ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಆರ್.ಧ್ರುವನಾರಾಯಣ ಮತ್ತು ಎಚ್.ಸಿ.ಮಹದೇವಪ್ಪ ಅವರ ಕೊಡುಗೆ ಅಪಾರ. ಮಹದೇವಪ್ಪನವರು ಸಿದ್ದರಾಮಯ್ಯನವರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಅವಧಿಯಲ್ಲಂತೂ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಾದವು. ಉಕ್ಕಲಗೆರೆ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಬನ್ನೂರು ಭಾಗದಲ್ಲಿ ಕುಡಿಯುವ ನೀರಿನ ಬರ ನೀಗಿಸಲು ಕ್ರಮ, ಬನ್ನೂರಿನ ಬಳಿ ಕಾವೇರಿ ನದಿ ಸೇತುವೆ ನಿರ್ಮಾಣ, ಟಿ.ನರಸೀಪುರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ, ತಾಲ್ಲೂಕು ಕಚೇರಿ, ಪುರಸಭೆ ನೂತನ ಕಟ್ಟಡ ಅಭಿವೃದ್ಧಿ, ಬನ್ನೂರಿನ ಒಳಚರಂಡಿ ಯೋಜನೆ, ಮಲಿಯೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಬನ್ನೂರು- ಮುಡುಕುತೊರೆ ನಾಲೆ ಅಭಿವೃದ್ಧಿ, ಬನ್ನೂರು ಕೆರೆ ಅಭಿವೃದ್ಧಿ, ನರಸೀಪುರ-ಬನ್ನೂರು ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ವಸತಿಗಳ ನಿರ್ಮಾಣ – ಹೀಗೆ ಅನೇಕ ಕಾರ್ಯಕ್ರಮಗಳಿಗೆ ಕೋಟಿಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತಂದ ಶ್ರೇಯಸ್ಸು ಮಹದೇವಪ್ಪನವರಿಗೆ ಸಲ್ಲುತ್ತದೆ. ಲೋಕೋಪಯೋಗಿ ಸಚಿವರಾಗಿದ್ದಾಗ ಸುಮಾರು 40,000 ಕಿಮೀ ರಸ್ತೆ ಅಭಿವೃದ್ಧಿಯಾಯಿತು ಎಂದು ಶ್ಲಾಘಿಸಲಾಗುತ್ತದೆ. ಇಷ್ಟೆಲ್ಲ ಕೆಲಸಗಳನ್ನು ಮಾಡಿದ ಮಹದೇವಪ್ಪ ಅವರು 28,324 ಮತಗಳ ಅಂತರದಲ್ಲಿ 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅಶ್ವಿನ್‌ ಕುಮಾರ್‌ ವಿರುದ್ಧ ಸೋಲು ಕಂಡಿದ್ದರು.

ಮಹದೇವಪ್ಪನವರ ಏಳುಬೀಳಿನ ಜೊತೆಯಲ್ಲಿಯೇ ಕ್ಷೇತ್ರದ ರಾಜಕಾರಣವನ್ನು ನೋಡುವುದು ಸೂಕ್ತ. ಇಲ್ಲಿ ಮಹದೇವಪ್ಪ 6 ಬಾರಿ ಆಯ್ಕೆಯಾದರೆ, ಸತತವಾಗಿ ನಾಲ್ಕು ಬಾರಿ ಎಂ. ರಾಜಶೇಖರಮೂರ್ತಿ ಅವರು ಗೆದ್ದು ದಾಖಲೆ ನಿರ್ಮಿಸಿದ್ದರು. 1952ರಲ್ಲಿ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹಾಗೂ ಛತ್ರ ಹೋಬಳಿ, ನಂತರ 1978ರಲ್ಲಿ ಟಿ.ನರಸೀಪುರ ತಾಲ್ಲೂಕಿನ ಕಸಬಾ, ಮೂಗೂರು ಹೋಬಳಿ ಮತ್ತು ಪಟ್ಟಣ ಒಳಗೊಂಡಂತೆ ಟಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರವನ್ನು ರೂಪಿಸಲಾಯಿತು. ಟಿ. ನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ 2008ರಲ್ಲಿ ಬನ್ನೂರು ವಿಧಾನಸಭಾ ಕ್ಷೇತ್ರವನ್ನು ವಿಲೀನಗೊಳಿಸಿ, ಬಿಳಿಗೆರೆ, ಕಸಬಾ ಹಾಗೂ ಛತ್ರ ಹೋಬಳಿಯನ್ನು ನೂತನ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲಾಯಿತು. ಬನ್ನೂರು, ತಲಕಾಡು, ಸೋಸಲೆ, ಮೂಗೂರು ಹೋಬಳಿ ಹಾಗೂ ಪಟ್ಟಣವನ್ನು ಒಳಗೊಂಡು ಟಿ.ನರಸೀಪುರ ಕ್ಷೇತ್ರ ಪುನರ್ ವಿಂಗಡಣೆಯಾಯಿತು.

ಜನತಾ ಪರಿವಾರದ ಸಕ್ರಿಯ ಕಾರ್ಯಕರ್ತರಾಗಿ ರಾಜಕೀಯ ಪ್ರವೇಶ ಪಡೆದ ಎಚ್.ಸಿ.ಮಹದೇವಪ್ಪನವರು ನರಸೀಪುರ ಕ್ಷೇತ್ರದ ತಾಲ್ಲೂಕು ಅಧ್ಯಕ್ಷರಾಗಿ ಜನತಾ ಪಕ್ಷವನ್ನು ಬಲಪಡಿಸಿದರು. 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಪುಟ್ಟಬಸವಯ್ಯನವರನ್ನು ಸೋಲಿಸಿದರು. 1989ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಶ್ರೀನಿವಾಸಯ್ಯ ಅವರ ಎದುರು ಸೋತರು. 1994ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಶ್ರೀನಿವಾಸಯ್ಯನವರಿಗೆ ಸೋಲುಣಿಸಿ ಮತ್ತೆ ಶಾಸಕರಾದರು. ಆ ವೇಳೆಗೆ ಜೆಡಿಎಸ್ ಹುಟ್ಟಿಕೊಂಡಿತ್ತು. 1999ರಲ್ಲಿ ಜೆಡಿಎಸ್ ಅಭ್ಯರ್ಥಿಯಾದ ಮಹದೇವಪ್ಪನವರು ಬಿಜೆಪಿಯ ಭಾರತಿ ಶಂಕರ್ ಎದುರು ಸೋಲು ಕಂಡರು. ಜೆಡಿಎಸ್‌ನಲ್ಲಿ ಪ್ರಬಲ ನಾಯಕರಾಗಿ ಬೆಳೆದಿದ್ದ ಎಚ್‌ಸಿಎಂ ಮತ್ತೆ 2004ರಲ್ಲಿ ಜೆಡಿಎಸ್‌ನಿಂದಲೇ ಸ್ಪರ್ಧಿಸಿ, ಕಾಂಗ್ರೆಸ್‌ನ ಶ್ರೀನಿವಾಸಯ್ಯನವರನ್ನು ಮಣಿಸಿದರು.

ಈ ವೇಳೆಗೆ ಜೆಡಿಎಸ್‌ನೊಳಗೆ ಪಲ್ಲಟಗಳು ಶುರುವಾದವು. ಸಿದ್ದರಾಮಯ್ಯನವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಸಿದ್ದರಾಮಯ್ಯನವರ ವಲಯದಲ್ಲಿ ಗುರುತಿಸಿಕೊಂಡಿದ್ದ ಎಚ್‌ಸಿಎಂ ಅವರೂ ಕಾಂಗ್ರೆಸ್ ಸೇರಿಕೊಂಡರು. 2008ರ ಚುನಾವಣೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ಬನ್ನೂರು ಕ್ಷೇತ್ರವನ್ನು ನರಸೀಪುರದೊಂದಿಗೆ ವಿಲೀನಗೊಳಿಸಲಾಯಿತು. ಒಕ್ಕಲಿಗ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿರುವ ಬನ್ನೂರು ಕ್ಷೇತ್ರ ಮಹದೇವಪ್ಪನವರ ಕೈತಪ್ಪಲಿಲ್ಲ. ಈ ವೇಳೆಗಾಗಲೇ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರಿಂದ, 2008ರ ಚುನಾವಣೆಯಲ್ಲಿ ಜೆಡಿಎಸ್‌ನ ಎಂ.ಸಿ.ಸುಂದರೇಶನ್ ಅವರನ್ನು 13724 ಮತಗಳ ಅಂತರದಲ್ಲಿ ಮಹದೇವಪ್ಪ ಮಣಿಸಿದರು. 2013ರಲ್ಲಿ ಅದೇ ಸುಂದರೇಶನ್ ಟಫ್ ಫೈಟ್ ನೀಡಿದರು. ಈ ಚುನಾವಣೆಯಲ್ಲಿ ಕೇವಲ 323 ಮತಗಳ ಅಂತರದಲ್ಲಿ ಗೆದ್ದ ಮಹದೇವಪ್ಪ ಗೆಲುವಿನ ದಡ ಮುಟ್ಟಿದರು. ಆದರೆ 2018ರಲ್ಲಿ ಎಚ್‌ಸಿಎಂ ಭಾರೀ ಸೋಲು ಕಂಡರು. 28324 ಮತಗಳ ಭಾರೀ ಅಂತರದಲ್ಲಿ ಅಶ್ವಿನ್ ಎದುರು ಸೋಲು ಕಂಡಿದ್ದು ಎಚ್‌ಸಿಎಂ ರಾಜಕೀಯದಲ್ಲಿ ಮಾಸದ ಗಾಯವಾಗಿ ಉಳಿಯಿತು. ಹೀಗಾಗಿಯೇ 2023ರ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಅವರು ಮುಂದಾಗಿದ್ದರು ಎನ್ನಲಾಗುತ್ತದೆ. ಧ್ರುವ ನಾರಾಯಣ ಅವರು ನಂಜನಗೂಡಿನಿಂದ ಸ್ಪರ್ಧಿಸುವ ಎಲ್ಲಾ ಸೂಚನೆಗಳಿದ್ದವು. ಧ್ರುವ ಅವರ ಸಾವಿನಿಂದಾಗಿ ಅವರ ಪುತ್ರ ದರ್ಶನ್ ಧ್ರುವ ಅವರಿಗೆ ಟಿಕೆಟ್ ದೊರಕಿತು. ಅಂತಿಮವಾಗಿ ಮಹದೇವಪ್ಪ ಸ್ವಕ್ಷೇತ್ರದತ್ತ ಗಮನ ಹರಿಸಿದರು. ಮತ್ತೆ ಅಶ್ವಿನ್‌ ಕುಮಾರ್‌ ಎದುರು ನಿಂತು, ತಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಮನ ಸೆಳೆದು 18,619 ಮತಗಳ ಅಂತರದಲ್ಲಿ ಜಯಭೇರಿ ಭಾರಿಸಿದ್ದಾರೆ.

ಧ್ರುವ ಅವರ ಸಾವಿನ ಸಂದರ್ಭದಲ್ಲಿ ಮಹದೇವಪ್ಪ ಅವರು ಎದುರಿಸಿದ ಮಾನಸಿಕ ವೇದನೆ ಮತ್ತು ಅವರು ನೀಡಿದ ಪ್ರಬುದ್ಧ ಪ್ರತಿಕ್ರಿಯೆ ಅವರ ರಾಜಕೀಯ ವ್ಯಕ್ತಿತ್ವಕ್ಕೊಂದು ಹಿಡಿದ ಕನ್ನಡಿ.

“ಮಹದೇವಪ್ಪನವರ ಒತ್ತಡಗಳಿಂದಾಗಿಯೇ ಧ್ರುವ ಸಾವಿಗೀಡಾದರು” ಎಂಬ ಮೂದಲಿಕೆಯನ್ನು ಕೇಳಿ ಮಹದೇವಪ್ಪ ಜರ್ಜರಿತರಾಗಿದ್ದರು. “ಈ ಹೊಲಸು ರಾಜಕೀಯಕ್ಕೂ ಮೀರಿದ ನೋವಿನಲ್ಲಿರುವ ನನ್ನ ಮಗನಂತಹ ದರ್ಶನ್ ಜೊತೆಗೆ ಈ ವೇಳೆ ನಾವೆಲ್ಲರೂ ಬೆಂಬಲವಾಗಿ ನಿಲ್ಲೋಣ. ಏಕೆಂದರೆ ಮನುಷ್ಯನ ಕ್ಲಿಷ್ಟ ಸಂದರ್ಭದಲ್ಲಿ ಧೈರ್ಯ ಮತ್ತು ಸಾಂತ್ವನಕ್ಕೆ ಮಿಗಿಲಾದ ಸಂಗತಿ ಇನ್ನೊಂದಿಲ್ಲ” ಎಂದು ಮಹದೇವಪ್ಪ ನುಡಿದರು. ಮಹದೇವಪ್ಪನವರ ಮೇಲೆ ಆಗುತ್ತಿದ್ದ ವೈಯಕ್ತಿಕ ದಾಳಿಯ ಸಂದರ್ಭದಲ್ಲಿ ದಸಂಸ ಐಕ್ಯತಾ ಸಮಿತಿಯ ನಾಯಕರು ಅವರ ಪರ ನಿಂತರು. ಎಸ್‌ಸಿಎಸ್‌ಪಿ, ಟಿಎಸ್‌ಪಿಯಂತಹ ಕಾನೂನು ಜಾರಿಗಳಿಗೆ ಕಾರಣರಾಗಿರುವ ಮಹದೇವಪ್ಪನವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಸಲ್ಲದು ಎಂದರು. ಪರಿಸ್ಥಿತಿ ತಿಳಿಯಾಯಿತು. ಅಂತಿಮವಾಗಿ ಮಹದೇವಪ್ಪ ಅವರಿಗೆ ಗೆಲುವಾಗಿದೆ.

2018ರಲ್ಲಿ ಮಹದೇವಪ್ಪ ಸೋತಿದ್ದೇಕೆ?

2018ರ ಚುನಾವಣೆಯಲ್ಲಿ ಎಚ್‌ಸಿಎಂ ಭಾರೀ ಅಂತರದಲ್ಲಿ ಸೋತಿದ್ದಕ್ಕೆ ಕ್ಷೇತ್ರದ ಜನತೆ ಹಲವು ಕಾರಣಗಳನ್ನು ನೀಡುತ್ತಾರೆ. ಲೋಕೋಪಯೋಗಿ ಸಚಿವರಾದ ಮೇಲೆ ಮಹದೇವಪ್ಪನವರು ಕ್ಷೇತ್ರದ ಮೇಲೆ ಹಿಡಿತ ಕಳೆದುಕೊಳ್ಳಲಾರಂಭಿಸಿದರು. ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾದ ಅವರು ಕ್ಷೇತ್ರವನ್ನು ತಮ್ಮ ಪುತ್ರ ಸುನಿಲ್ ಬೋಸ್ ಕೈಗಿತ್ತರು. ಸುನಿಲ್ ಬೋಸ್ ಅವರ ನಿಷ್ಕ್ರಿಯತೆ, ಆಲಸ್ಯ, ವೈಯಕ್ತಿಕ ದೌರ್ಬಲ್ಯಗಳ ಕಾರಣಕ್ಕೆ ನಿಧಾನವಾಗಿ ನರಸೀಪುರ ಕ್ಷೇತ್ರವು ಮಹದೇವಪ್ಪನವರಿಂದ ಜಾರುತ್ತಾ ಹೋಯಿತು. ಬೆಂಗಳೂರಿಗೆ ಹುಡುಕಿಕೊಂಡ ಹೋದ ಕ್ಷೇತ್ರದ ಜನತೆಗೆ, “ನನ್ನ ಮಗ ಸುನಿಲ್ ಇದ್ದಾನೆ. ಅವನಲ್ಲಿ ವಿಷಯ ತಿಳಿಸಿ, ಸಮಸ್ಯೆ ಬಗೆಹರಿಸುತ್ತಾನೆ” ಎಂದು ಎಚ್‌ಸಿಎಂ ಹೇಳಿ ಕಳಿಸುತ್ತಿದ್ದರು. ಸುನಿಲ್ ಜನಪರವಾಗಿ ಯೋಚಿಸುವ ಯುವಕನಾದರೂ ಜನರ ಕೈಗೆ ಸಿಗುತ್ತಿದ್ದದ್ದು ಮಾತ್ರ ದುರ್ಲಭವಾಗಿತ್ತು. ಜನಸಾಮಾನ್ಯರ ಕೈಗೆ ಮಹದೇವಪ್ಪನವರು ಸಿಗುವುದಿಲ್ಲ ಎಂಬ ಸಂದೇಶ ರವಾನೆಯಾಯಿತು.

ಇದನ್ನೂ ಓದಿರಿ: ನಮ್ಮ ಸಚಿವರಿವರು: ಸಭ್ಯ ರಾಜಕಾರಣಕ್ಕೆ ಮತ್ತೊಂದು ಹೆಸರೇ ‘ಕೆ.ವೆಂಕಟೇಶ್‌’

ಎಚ್‌ಸಿಎಂ ಲೋಕೋಪಯೋಗಿ ಸಚಿವರಾಗಿದ್ದ ಅವಧಿಯಲ್ಲಿ ನರಸೀಪುರದಲ್ಲಿ ಎಂ.ಕೆ.ಸವಿತಾ ತಹಸೀಲ್ದಾರ್ ಆಗಿದ್ದರು. ವಿವಾಹಿತರಾಗಿದ್ದ ಸವಿತಾ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಸವಿತಾ ಮತ್ತು ಸುನಿಲ್ ಬೋಸ್ ನಡುವೆ ಪ್ರೇಮಾಂಕುರವಾಯಿತು. ಈ ವೇಳೆಗೆ ಸವಿತಾ ವಿಚ್ಛೇದನಾ ಪ್ರಕ್ರಿಯೆಯಲ್ಲಿ ಇದ್ದರು. ಮೂಲಗಳು ಹೇಳುವ ಪ್ರಕಾರ, “ಸುನಿಲ್-ಸವಿತಾ ವಿಷಯ ಕೇವಲ ವೈಯಕ್ತಿಕ ನೆಲೆಯಲ್ಲಿ ನಿಲ್ಲದೆ ಜಾತಿ-ಜಾತಿ ನಡುವಿನ ಪ್ರಕರಣವಾಗಿ ಹೊಮ್ಮಿತು. ಹೀಗಾಗಿ ಬನ್ನೂರು ಭಾಗದ ಒಕ್ಕಲಿಗ ಮತಗಳು ಎಚ್‌ಸಿಎಂ ಕೈತಪ್ಪಿ ಹೋಗಲು ಕಾರಣವಾದವು.”

ನರಸೀಪುರದಲ್ಲಿ ಹಳಿ ತಪ್ಪಿದ್ದ ಸಂಪರ್ಕವನ್ನು ಮತ್ತೆ ತಹಬದಿಗೆ ತರುವ ಪ್ರಯತ್ನದಲ್ಲಿ ಮಹದೇವಪ್ಪ ಇದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರವನ್ನು ಸುತ್ತಿದರು. ಸಮುದಾಯದ ಮುಖಂಡರುಗಳನ್ನು ನಿರಂತರ ಸಂಪರ್ಕಿಸಿದರು. ಆಗಿರುವ ಗಾಯಗಳು ಸದ್ಯಕ್ಕೆ ಮಾಸಿದವು. ಅಂತಿಮವಾಗಿ ಹಳೆಹುಲಿ ಮಹದೇವಪ್ಪ ಮತ್ತೆ ಪುಟಿದೆದ್ದು ಗೆದ್ದಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಮೇಲೆ ಅಪಾರ ನಿರೀಕ್ಷೆಗಳನ್ನು ದಲಿತ ಸಮುದಾಯ ಇಟ್ಟುಕೊಂಡಿದೆ. ಅವುಗಳನ್ನು ಈಡೇರಿಸುತ್ತಾರೋ ಇಲ್ಲವೋ ಎಂಬುದು ಸದ್ಯದ ಕುತೂಹಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...