Homeಕರ್ನಾಟಕನಮ್ಮ ಸಚಿವರಿವರು: ಸಭ್ಯ ರಾಜಕಾರಣಕ್ಕೆ ಮತ್ತೊಂದು ಹೆಸರೇ ‘ಕೆ.ವೆಂಕಟೇಶ್‌’

ನಮ್ಮ ಸಚಿವರಿವರು: ಸಭ್ಯ ರಾಜಕಾರಣಕ್ಕೆ ಮತ್ತೊಂದು ಹೆಸರೇ ‘ಕೆ.ವೆಂಕಟೇಶ್‌’

- Advertisement -
- Advertisement -

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾಗಿರುವ, ಈಗ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರೂ ಆಗಿರುವ ಕೆ.ವೆಂಕಟೇಶ್‌ ಸಭ್ಯ ರಾಜಕಾರಣಕ್ಕೆ ಹೆಸರಾದವರು. ಪಿರಿಯಾಪಟ್ಟಣದ ಕಿತ್ತೂರಿನವರಾದ ಇವರು ‘ಪ್ರಚಾರದ ಹಂಗು’ ಇಲ್ಲದವರು.

ರಾಜಕೀಯ ಕುಟುಂಬದ ಹಿನ್ನೆಲೆಯವರಾದ ಕೆ.ವೆಂಕಟೇಶ್‌ ಆರನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿರುವ ಹಿರಿಯ ರಾಜಕಾರಣಿ. ಅವರ ಶುದ್ಧಹಸ್ತ ರಾಜಕಾರಣ, ಪಿತೂರಿಗಳಿಲ್ಲದ ವ್ಯಕ್ತಿತ್ವದ ಫಲವಾಗಿ ಎರಡನೇ ಬಾರಿಗೆ ಸಚಿವರಾಗುವ ಅವಕಾಶ ಬಂದೊದಗಿದೆ.

ರಾಜ್ಯ ರಾಜಕಾರಣದ ಪ್ರಮುಖ ಪಲ್ಲಟಗಳನ್ನು ಗುರುತಿಸುವುದಾದರೆ, ಸಿದ್ದರಾಮಯ್ಯನವರು ಜೆಡಿಎಸ್ ಸಖ್ಯ ಕಳಚಿಕೊಂಡು ಕಾಂಗ್ರೆಸ್ ಸೇರಿದ ಸಮಯವನ್ನು ಉಲ್ಲೇಖಿಸದೆ ಇರಲಾಗದು. 2006 ನಂತರದಲ್ಲಿ ಸಿದ್ದರಾಮಯ್ಯನವರ ರಾಜಕಾರಣದ ವರ್ಚಸ್ಸು ಏರಿಕೆಯಾಯಿತು. ಜನತಾ ಪರಿವಾರದಲ್ಲಿ ರಾಜಕೀಯ ಪಟ್ಟುಗಳನ್ನು ಕಲಿತು, ಜೆಡಿಎಸ್ಸಿನಿಂದ ಹೊರ ಬಂದ ಸಿದ್ದರಾಮಯ್ಯನವರು, ಒಂದಿಷ್ಟು ರಾಜಕೀಯ ಧುರೀಣರನ್ನು ಕಾಂಗ್ರೆಸ್ಸಿಗೆ ಕರೆತಂದರು. ಅಂಥವರಲ್ಲಿ ಪಿರಿಯಾಪಟ್ಟಣವನ್ನು ಪ್ರತಿನಿಧಿಸುತ್ತಿದ್ದ ಕೆ.ವೆಂಕಟೇಶ್ ಒಬ್ಬರು.

ಸಿದ್ದರಾಮಯ್ಯನವರನ್ನು ಹಿಂಬಾಲಿಸಿ ಬಂದ ಕೆ.ವೆಂಕಟೇಶ್, ಕಾಂಗ್ರೆಸ್ಸಿಗೆ ಸೇರಿದ ಬಳಿಕ ಎರಡು ಬಾರಿ ಸತತ ಗೆದ್ದು ಒಂದು ಸಲ ಸೋಲು ಕಂಡವರು. ಈಗ ಮೂರನೇ ಸಲ ಕಾಂಗ್ರೆಸ್‌ ಟಿಕೆಟ್‌ನಿಂದ ಗೆದ್ದಿದ್ದಾರೆ.

1994ರಲ್ಲಿ ಗೆದ್ದಾಗ ಜೆ.ಎಚ್.ಪಟೇಲ್ ಅವರ ಅವಧಿಯಲ್ಲಿ ಕಾಡಾ (ಕಾವೇರಿ ಅಚ್ಚುಕಟ್ಟು ಡೆವಲಪ್ಮೆಂಟ್ ಅಥಾರಿಟಿ) ಸಚಿವರಾಗಿದ್ದರು. 2004ರಲ್ಲಿ ಕಾಂಗ್ರೆಸ್- ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿದ್ದರೂ ಮಂತ್ರಿಯಾಗುವ ಅವಕಾಶ ಅವರಿಗೆ ದೊರಕಲಿಲ್ಲ. ಸಿದ್ದರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡ ಒಕ್ಕಲಿಗ ನಾಯಕರಲ್ಲಿ ಪ್ರಮುಖರಾದ ಇವರಿಗೆ, ಸಿದ್ದರಾಮಯ್ಯನವರು ಮೊದಲ ಸಲ ಸಿಎಂ ಆದಾಗಲೂ ಸಚಿವ ಸ್ಥಾನ ಲಭಿಸಿರಲಿಲ್ಲ. ಪ್ರಾದೇಶಿಕತೆ ಮತ್ತು ಜಾತಿ ಸಮೀಕರಣ ಕೈಕೊಟ್ಟಿತ್ತು. ಹೀಗಾಗಿ ಅವರನ್ನು ಬಿಡಿಎ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

2018ರ ಚುನಾವಣೆಯಲ್ಲಿ ತಮ್ಮ ಶಿಷ್ಯನ ಎದುರು ಕೆ.ವೆಂಕಟೇಶ್ ಸೋಲುಂಡಿದ್ದರು. ವೆಂಕಟೇಶ್ ಅವರು ಕಾಂಗ್ರೆಸ್ಸಿಗೆ ಸೇರಿಕೊಂಡಾಗ ಅವರ ಶಿಷ್ಯ ಕೆ.ಮಹದೇವ್ ಜೆಡಿಎಸ್ಸಿನಲ್ಲಿಯೇ ಉಳಿದರು. ವೆಂಕಟೇಶ್ ಶಾಸಕರಾಗಿದ್ದ ಅವಧಿಯಲ್ಲಿ ಮಹದೇವ್ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿದ್ದರು. ಗುರು-ಶಿಷ್ಯರೆಂದೇ ಇಬ್ಬರನ್ನು ಕ್ಷೇತ್ರದಲ್ಲಿ ಗುರುತಿಸಲಾಗಿತ್ತು. ಯಾವಾಗ ವೆಂಕಟೇಶ್ ಅವರು ಜೆಡಿಎಸ್ಸಿಗೆ ಗುಡ್ ಬೈ ಹೇಳಿದರೋ, ಆಗ ಅವರ ಸ್ಥಾನದಲ್ಲಿ ಮಹದೇವ್ ಬಂದು ಕುಳಿತರು. ಪಕ್ಷದಲ್ಲಿ ಗುರುತಿಸಿಕೊಂಡ ಅವರಿಗೆ ಜೆಡಿಎಸ್ ವರಿಷ್ಠರು ಟಿಕೆಟ್ ಕೂಡ ನೀಡಿದರು. ಆದರೆ 2008 ಮತ್ತು 2013ರ ಚುನಾವಣೆಗಳೆರಡರಲ್ಲೂ ಮಹದೇವ್ ಅವರು ತಮ್ಮ ಗುರುವನ್ನು ಮಣಿಸಲು ಸಾಧ್ಯವಾಗಲಿಲ್ಲ. ಗೆಲುವಿನ ಸಮೀಪಕ್ಕೆ ಬಂದು ಎರಡು ಸಲವೂ ಮುಗ್ಗರಿಸಿದ್ದರು. 2018ರ ವೇಳೆಗೆ ಹತಾಷರಾಗಿದ್ದ ಅವರು ಮತ್ತೊಮ್ಮೆ ಜೆಡಿಎಸ್‌ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾದರು.

“ಎರಡು ಸಲ ಸೋತಿದ್ದೇನೆ, ಈ ಬಾರಿಯೂ ಸೋತರೆ ವಿಷ ಕುಡಿಯಬೇಕಾಗುತ್ತದೆ’’ ಎಂದು ಭಾವುಕವಾಗಿ ನುಡಿದರು. ಅಂದಿನ ಸನ್ನಿವೇಶಗಳ ಜೊತೆಗೆ ಮತದಾರರಲ್ಲಿ ಮೂಡಿದ್ದ ಅನುಕಂಪ ಮಹದೇವ್ ಅವರಿಗೆ ವರದಾನವಾಯಿತು. ಹೀಗಾಗಿ 7,493 ಮತಗಳ ಅಂತರದಲ್ಲಿ ಗೆದ್ದರು. ಪಿರಿಯಾಪಟ್ಟಣದಲ್ಲಿ ತೆನೆಹೊತ್ತ ಮಹಿಳೆ ಮತ್ತೆ ಮರುಜೀವ ಪಡೆದಿದ್ದಳು. ಆದರೆ ಕೆ.ಮಹದೇವ್ ಐದೇ ವರ್ಷಗಳಲ್ಲಿ ಹೆಸರು ಕೆಡಿಸಿಕೊಂಡರು. ತಮ್ಮವರಿಗಷ್ಟೇ ಮಣೆ ಹಾಕುತ್ತಾರೆಂಬ ಟೀಕೆಗೆ ಗುರಿಯಾದರು. ಇದೆಲ್ಲದರ ಕಾರಣವಾಗಿ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ತಮ್ಮ ಗುರುವಿನ ಎದುರು ಈ ಚುನಾವಣೆಯಲ್ಲಿ 19,675 ಮತಗಳ ಅಂತರದಲ್ಲಿ ಕೆ.ಮಹದೇವ್ ಸೋಲುಂಡಿದ್ದಾರೆ.

ಕೆ.ವೆಂಕಟೇಶ್ ಅವರ ರಾಜಕೀಯ ಏಳು- ಬೀಳು

1985ರಲ್ಲಿ ಕೆ.ವೆಂಕಟೇಶ್ ಅವರ ಪ್ರವೇಶ ಪಿರಿಯಾಪಟ್ಟಣಕ್ಕೆ ಕ್ಷೇತ್ರಕ್ಕೆ ಆಯಿತು. ಜನತಾ ಪಾರ್ಟಿ ಅವರಿಗೆ ಟಿಕೆಟ್ ನೀಡಿತು. ವೆಂಕಟೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಎಲ್.ಆನಂದ್ ಅವರನ್ನು 9,813 ಮತಗಳ ಅಂತರದಲ್ಲಿ ಮಣಿಸಿದರು. 1989ರಲ್ಲಿ ಕಾಳಮರಿಗೌಡರು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದರು. ಜನತಾ ದಳದಿಂದ ಸ್ಪರ್ಧಿಸಿದ್ದ  ಎಸ್.ಎಂ.ಅನಂತರಾಮು ಭಾರೀ ಅಂತರದಲ್ಲಿ ಸೋತರು. 1994ರಲ್ಲಿ ವೆಂಕಟೇಶ್ ಅವರಿಗೆ ಮತ್ತೆ ಜನತಾ ದಳ ಟಿಕೆಟ್ ನೀಡಿತು. ಕಾಂಗ್ರೆಸ್ಸಿನ ಕಾಳಮರಿಗೌಡರಿಗೆ 18,785 ಮತಗಳ ಅಂತರದಲ್ಲಿ ಸೋಲುಣಿಸಿ ಎರಡನೇ ಬಾರಿ ಗೆಲುವು ಸಾಧಿಸಿದರು. 1999ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಖಾತೆ ತೆರೆಯಿತು. ಎಚ್.ಸಿ.ಬಸವರಾಜು ಅವರು ಕಾಂಗ್ರೆಸ್ ಅಭ್ಯರ್ಥಿ ಕಾಳಮರಿಗೌಡರಿಗೆ ಪೈಪೋಟಿ ನೀಡಿ, 3079 ಮತಗಳ ಅಂತರದಲ್ಲಿ ಗೆಲುವು ಪಡೆದರು. 2004ರಲ್ಲಿ ವೆಂಕಟೇಶ್ ಮತ್ತೆ ತಮ್ಮ ಹಿಡಿತಕ್ಕೆ ಕ್ಷೇತ್ರವನ್ನು ಪಡೆದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅವರು ಕಾಂಗ್ರೆಸ್ಸಿನ ಕೆ.ಚಂದ್ರೇಗೌಡರಿಗೆ 8985 ಮತಗಳಂತರದಲ್ಲಿ ಸೋಲುಣಿಸಿದರು.

ಸಿದ್ದರಾಮಯ್ಯನವರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ವೆಂಕಟೇಶ್ ಅವರಿಗೆ 2008ರಲ್ಲಿ ಪ್ರತಿಸ್ಪರ್ಧಿಯಾಗಿದ್ದು ತಮ್ಮ ಶಿಷ್ಯನೇ ಆದ ಕೆ.ಮಹದೇವ್. ಒಕ್ಕಲಿಗ ಸಮುದಾಯದ ಈ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟು ವೆಂಕಟೇಶ್ ಕೇವಲ 879 ಮತಗಳ ಅಂತರದಲ್ಲಿ ಪ್ರಾಯಾಸದ ಗೆಲುವು ಪಡೆದುಕೊಂಡರು. 2013ರಲ್ಲೂ ಗುರು- ಶಿಷ್ಯರ ಕಾಳಗ ಏರ್ಪಟ್ಟಿತು. ಆ ಚುನಾವಣೆಯಲ್ಲೂ ವೆಂಕಟೇಶ್ ಅವರ ಗೆಲುವಿನ ಅಂತರ ದೊಡ್ಡ ಮಟ್ಟದಲ್ಲೇನೂ ಇರಲಿಲ್ಲ. ಕೇವಲ 2,088 ಮತದಂತರದಲ್ಲಿ ವೆಂಕಟೇಶ್ ಗೆದ್ದರು. ಕೆ.ಮಹದೇವ್ ಮೇಲಿನ ಅನುಕಂಪ ಒಂದು ಕಡೆಯಾದರೆ, ಕೆಲವು ಒಳರಾಜಕಾರಣಗಳು ವೆಂಕಟೇಶ್ ಸೋಲಿಗೆ ಕಾರಣವಾಗಿದ್ದವು.

2013ರ ಅವಧಿಯಲ್ಲಿ ವೆಂಕಟೇಶ್ ಅವರು ತಾವು ಕ್ಷೇತ್ರಕ್ಕೆ ಕಾಮಗಾರಿಗಳನ್ನು ತಂದರೂ ಅವುಗಳನ್ನು ಮುಗಿಸದೆ ಹಾಗೆಯೆ ಉಳಿಸಿಕೊಂಡಿದ್ದರು. ಮರು ಆಯ್ಕೆಯಾಗಿ, ಈ ಎಲ್ಲ ಕೆಲಸಗಳನ್ನು ಮಾಡುತ್ತೇನೆಂಬ ಅತೀವ ವಿಶ್ವಾಸ ಅವರಿಗಿತ್ತು. ಒಳಚರಂಡಿ ನಿರ್ಮಾಣ, 150 ಕೆರೆಗಳಿಗೆ ನೀರು ಹರಿಸುವ ಕಾರ್ಯ- ಪೂರ್ಣಗೊಳ್ಳದೆ ಉಳಿದವು. ಇವು ಕೂಡ ವೆಂಕಟೇಶ್ ಅವರ ಮೇಲೆ ಮತದಾರರು ಕೋಪಗೊಳ್ಳಲು ಕಾರಣವಾಗಿದ್ದವು. ಆದರೆ ಕೆ.ಮಹದೇವ್ ಐದೇ ವರ್ಷಗಳಲ್ಲಿ ತಿರಸ್ಕರಿಸಲ್ಪಟ್ಟರು. ಇವರು ವಿವಾದಗಳ ಕೇಂದ್ರವಾಗಿಬಿಟ್ಟಿದ್ದರು. ತಮ್ಮ ಪಕ್ಷದ ಕಾರ್ಯಕರ್ತರು ಅಥವಾ ಹಿಂಬಾಲಕರಿಗಷ್ಟೇ ಮಣೆ ಹಾಕುತ್ತಾರೆ, ಬೇರೆಯವರು ಇರುವಲ್ಲಿ ತಲೆಹಾಕುವುದಿಲ್ಲ ಎಂಬ ಗಂಭೀರ ಆರೋಪ ಇವರ ಮೇಲಿತ್ತು. ಜೊತೆಗೆ ಅಧಿಕಾರಿಗಳೊಂದಿಗಿನ ವರ್ತನೆ ಸರಿಯಾಗಿರಲಿಲ್ಲ. ನಾಲಿಗೆ ಕೆಡಿಸಿಕೊಂಡಿದ್ದಾರೆಂಬ ದೂರುಗಳು ಬಂದವು.

ವೆಂಕಟೇಶ್ ಸಜ್ಜನಿಕೆ

ಹಿರಿಯ ರಾಜಕಾರಣಿ ಕೆ.ವೆಂಕಟೇಶ್ ಅವರ ಮೇಲಿರುವ ಅತಿದೊಡ್ಡ ಆರೋಪವೆಂದರೆ- ಜನಸಾಮಾನ್ಯರೊಂದಿಗೆ ಸಂಪರ್ಕ ಕಡಿಮೆ ಎಂಬುದಷ್ಟೇ. ಆದರೆ ತಾವು ಮಾಡಬೇಕಾದ ಕೆಲಸವನ್ನು, ಪ್ರಚಾರದ ಹಂಗಿಲ್ಲದೆ ಸೈಲೆಂಟಾಗಿ ಮಾಡಿ ಮುಗಿಸುವ ವ್ಯಕ್ತಿ ವೆಂಕಟೇಶ್. ಯಾರನ್ನೂ ವೈಯಕ್ತಿಕವಾಗಿ ನಿಂದಿಸುವ, ಯಾರಿಗಾದರೂ ಕೇಡು ಬಯಸುವ ಗುಣ ಅವರದ್ದಲ್ಲ.

ಕೆ.ಮಹದೇವ್ ಲೂಸ್ ಟಾಕ್ ಗಳಿಗೆ ಹೆಸರಾದರೆ ವೆಂಕಟೇಶ್ ಘನತೆಯ ರಾಜಕಾರಣದಲ್ಲಿ ಪಳಗಿದವರು. ಜನಸಾಮಾನ್ಯರಿಗಿರಲಿ, ಅಧಿಕಾರಿಗಳಿಗಿರಲಿ ತೊಂದರೆ ಕೊಟ್ಟ ಅಪವಾದಗಳು ಇವರ ಮೇಲಿಲ್ಲ. ವಿರೋಧ ಪಕ್ಷದಲ್ಲಿದ್ದವರನ್ನು ಟಾರ್ಗೆಟ್ ಮಾಡುವವರಲ್ಲ. ವೆಂಕಟೇಶ್ ಒಳ್ಳೆಯದನ್ನು ಮಾಡದಿದ್ದರೂ ಕೆಟ್ಟದನ್ನು ಮಾಡಲ್ಲ ಎಂಬ ಅಭಿಪ್ರಾಯ ಜನರಲ್ಲಿದೆ.

ಆರು ಬಾರಿ ಶಾಸಕರಾಗಿರುವ ಅವರ ಮೇಲೆ ಕ್ಷೇತ್ರದ ಜನರ ಅಭಿಮಾನವಿದೆ. “ಈ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಲ್ಲ, ಘನ ವ್ಯಕ್ತಿತ್ವದವರಾದ ಕೆ.ವೆಂಕಟೇಶ್ ಅವರನ್ನು ನೋಡಿ ಕಾಂಗ್ರೆಸ್‌ಗೆ ಮತ ಹಾಕಿದ್ದೇವೆ” ಎನ್ನುತ್ತಾರೆ ಕ್ಷೇತ್ರದ ಜನತೆ.

ಇದನ್ನೂ ಓದಿರಿ: ನಮ್ಮ ಸಚಿವರಿವರು; ಕರ್ನಾಟಕ ಕಾಂಗ್ರೆಸ್‌ನಲ್ಲಿ ಕ್ರಿಶ್ಚಿಯನ್ ಸಮುದಾಯದ ಏಕೈಕ ಶಾಸಕ ಹಿರಿಯ ಮುಖಂಡ ಕೆ.ಜೆ. ಜಾರ್ಜ್

“ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣದಂತಹ ಕೆಲಸಗಳಿಗಿಂತ ಶಾಶ್ವತ ಕಾಮಗಾರಿಗಳಿಗೆ ಹೆಚ್ಚು ಒತ್ತು ಕೊಡುವವರು ಕೆ.ವೆಂಕಟೇಶ್. 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕ್ಷೇತ್ರಕ್ಕೆ ತಂದರು. ಪುರಸಭೆಯ ಆಧುನೀಕರಣ, ಅರಸು ಭವನ, ಅಂಬೇಡ್ಕರ್‌ ಭವನ, ವಿದ್ಯಾರ್ಥಿನಿಲಯಗಳ ಅಭಿವೃದ್ಧಿಯಂತಹ ಕೆಲಸಗಳಿಗೆ ಆದ್ಯತೆ ನೀಡಿದರು. ಮೈಸೂರು ಜಿಲ್ಲೆಯಲ್ಲೇ ಅತಿ ಹೆಚ್ಚು ಗ್ರಾಮ ಸಂಪರ್ಕ ರಸ್ತೆಗಳನ್ನು ಹೊಂದಿರುವ ಕ್ಷೇತ್ರ ಪಿರಿಯಾಪಟ್ಟಣ ಎಂಬ ಮಾತಿದೆ. ತಮ್ಮ ಅಧಿಕಾರವಧಿಗಳಲ್ಲಿ ಗ್ರಾಮ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ವೆಂಕಟೇಶ್ ಮಾಡಿದರು. ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗಲು ಮುಖ್ಯರಸ್ತೆಗೆ ಹೋಗುವ ಅಗತ್ಯವಿರದಂತೆ ನೋಡಿಕೊಂಡರು. ಹಳ್ಳಿಹಳ್ಳಿಗಳ ನಡುವೆ ಸಂಪರ್ಕಗಳನ್ನು ಅಭಿವೃದ್ಧಿಪಡಿಸಿದರು. ಕುಡಿಯುವ ನೀರಿನ ಟ್ಯಾಂಕ್‌ಗಳು, ಶುದ್ಧ ಕುಡಿಯುವ ನೀರಿನ ಘಟಕಗಳು- ಇಂತಹ ಶಾಶ್ವತ ಕಾಮಗಾರಿಗೆ ಗಮನ ಹರಿಸಿದರು. ಹೀಗಾಗಿಯೇ ಕ್ಷೇತ್ರದ ಜನತೆ ಮತ್ತೊಮ್ಮೆ ಅವರನ್ನು ಆಯ್ಕೆ ಮಾಡಿದ್ದಾರೆ” ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

“ಪಕ್ಷದ ಕಾರ್ಯಕರ್ತರಾಗಲಿ, ತಮ್ಮ ಬೆಂಬಲಿಗರಾಗಲಿ ದೂರುಗಳನ್ನು ಹೊತ್ತು ಬಂದಾಗ ಅದಕ್ಕೆ ಮಣೆಹಾಕುವವರಲ್ಲ. ಕಾನೂನು ಏನಿದೆ ಅದರ ಪ್ರಕಾರ ನಡೆಯಿರಿ, ನನ್ನ ಬಳಿ ಇಂತಹ ವಿಚಾರಗಳನ್ನು ತರಬೇಡಿ ಎಂದು ನೇರವಾಗಿ ಹೇಳಿಕಳಿಸುತ್ತಾರೆ. ಕ್ಷೇತ್ರದಲ್ಲಿ ಯಾವುದೇ ಜಗಳಗಳಾಗದಂತೆ ನೋಡಿಕೊಂಡಿದ್ದಾರೆ. ಪೊಲೀಸರು ಶಿಸ್ತು ಕ್ರಮ ಜರುಗಿಸುವಲ್ಲಿ ಯಾವುದೇ ಹಸ್ತಕ್ಷೇಪ ಮಾಡುವವರಲ್ಲ, ಪ್ರಾಮಾಣಿಕ ಅಧಿಕಾರ ವರ್ಗಕ್ಕೆ ವೆಂಕಟೇಶ್ ಎಂದರೆ ಅಚ್ಚುಮೆಚ್ಚು” ಎಂಬ ಮಾತುಗಳು ಕ್ಷೇತ್ರದಲ್ಲಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಕಸ್ಟಡಿ ಅವಧಿ ಮೇ 31ರವರೆಗೆ ವಿಸ್ತರಿಸಿದ...

0
ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಮೇ 31 ರವರೆಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಮಂಗಳವಾರ ವಿಸ್ತರಿಸಿದೆ. ಫೆಬ್ರವರಿ 26,...