Homeಮುಖಪುಟದೇವೇಗೌಡರ ರಾಜಕೀಯ ತಂತ್ರಗಳ ಎದುರು ಗೆದ್ದ ಶ್ರೇಯ: ಕೃಷಿ ಸಚಿವ ಚಲುವರಾಯಸ್ವಾಮಿಯವರ ಹಾದಿ

ದೇವೇಗೌಡರ ರಾಜಕೀಯ ತಂತ್ರಗಳ ಎದುರು ಗೆದ್ದ ಶ್ರೇಯ: ಕೃಷಿ ಸಚಿವ ಚಲುವರಾಯಸ್ವಾಮಿಯವರ ಹಾದಿ

- Advertisement -
- Advertisement -

ಮಂಡ್ಯ ಜಿಲ್ಲೆಯ ನಾಗಮಂಗಲದ ಶಾಸಕರಾದ ಎನ್. ಚಲುವರಾಯಸ್ವಾಮಿಯವರು ಸಿಎಂ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕೃಷಿ ಮಂತ್ರಿಗಳಾಗಿದ್ದಾರೆ. ಮಾಜಿ ಪ್ರಧಾನಿ, ಜೆಡಿಎಸ್ ಮುಖ್ಯಸ್ಥ ಹೆಚ್.ಡಿ ದೇವೇಗೌಡರ ರಾಜಕೀಯ ತಂತ್ರಗಳ ಎದುರು ಗೆದ್ದ ಅವರಿಗೆ ಈ ಶ್ರೇಯ ದೊರಕಿದೆ.

ಹೊಡಿ-ಬಡಿ ರಾಜಕಾರಣಕ್ಕೆ ಕುಖ್ಯಾತಿಯಾದ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ದೇವೇಗೌಡರ ಕುಟುಂಬದ್ದೇ ಪ್ರಾಬಲ್ಯವಿತ್ತು. ಅವರ ಮರ್ಜಿಯಲ್ಲಿಯೇ ಬೆಳೆದುಬಂದಿದ್ದ, ಹೆಚ್.ಡಿ ಕುಮಾರಸ್ವಾಮಿಯವರ ಆಪ್ತರಾಗಿದ್ದ ಎನ್.ಚಲುವರಾಯಸ್ವಾಮಿಯವರು ಅವರ ಜೊತೆಗಿನ ಮನಸ್ತಾಪಕ್ಕೆ ಬೇಸತ್ತು 2017ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಇದು ಜೆಡಿಎಸ್ ಪಕ್ಷಕ್ಕೆ ಮತ್ತು ಹೆಚ್.ಡಿ ದೇವೇಗೌಡರಿಗೆ ಮಾಡಿದ ದ್ರೋಹ ಎಂದು ಬಿಂಬಸಲಾಗಿತ್ತು. ಹಾಗಾಗಿ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಭದ್ರಕೋಟೆಯಲ್ಲಿಯೇ 47,667 ಮತಗಳ ಬೃಹತ್ ಅಂತರದಿಂದ ಸೋಲು ಕಂಡಿದ್ದರು! ದೇವೇಗೌಡರನ್ನು ಎದುರು ಹಾಕಿಕೊಂಡವರಿಗೆ ಎಂತಹ ಗತಿ ಬರುತ್ತದೆ ನೋಡಿ ಎಂಬ ಸಂದೇಶ ನೀಡಲಾಗಿತ್ತು. ಆದರೆ ಧೃತಿಗೆಡದ ಚಲುವರಾಯಸ್ವಾಮಿಯವರು ಅದನ್ನು ಸವಾಲಾಗಿ ಸ್ವೀಕರಿಸಿ ಕ್ಷೇತ್ರದಲ್ಲಿ ಮತ್ತು ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬೆಳೆಸಿದರು. 2023ರ ಚುನಾವಣೆಯಲ್ಲಿ ದೇವೇಗೌಡರ ರಾಜಕೀಯ ತಂತ್ರವನ್ನು ಮೀರಿ 4,414 ಮತಗಳ ಅಂತರದಲ್ಲಿ ಗೆದ್ದು ಬಂದಿದ್ದಾರೆ. ಹಾಗಾಗಿ ಅವರಿಗೆ ಮೂರನೇ ಬಾರಿ ಸಚಿವರಾಗುವ ಅವಕಾಶ ದೊರೆತಿದೆ.

ರಾಜಕೀಯ ಹಾದಿ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಇಜ್ಜಲಘಟ್ಟ ಗ್ರಾಮದಲ್ಲಿ ಜೂನ್ 1, 1960ರಲ್ಲಿ ಚಲುವರಾಯಸ್ವಾಮಿ ಜನಿಸಿದರು. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮೊ ಪದವಿ ಪಡೆದ ಅವರು ರಾಜಕೀಯದತ್ತ ಹೊರಳಿದರು. 1994 ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅವರು 1996ರಲ್ಲಿ ಜಿ.ಪಂ ಉಪಾಧ್ಯಕ್ಷರಾದರು. 1999ರ ಚುನಾವಣೆ ವೇಳೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಲ್.ಆರ್ ಶಿವರಾಮೇಗೌಡರನ್ನು ಮಣಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

2004ರಲ್ಲಿಯೂ ಸಹ ಇವರಿಬ್ಬರ ನಡುವೆ ಕಾದಾಟ ನಡೆಯುತ್ತದೆ. ಜೆಡಿಎಸ್‌ನ ಚಲುವರಾಯಸ್ವಾಮಿಯವರು ಮತ್ತೆ ಗೆಲುವು ಸಾಧಿಸುತ್ತಾರೆ. ಧರ್ಮಸಿಂಗ್‌ರವರ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಆರೋಗ್ಯ ಇಲಾಖೆ ಸಚಿವರಾಗುತ್ತಾರೆ. ಆನಂತರ ಕುಮಾರಸ್ವಾಮಿಯವರು ಸಿಎಂ ಆದಾಗ ಚಲುವರಾಯಸ್ವಾಮಿ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ. ಈ ವೇಳೆಗೆ ಕುಮಾರಸ್ವಾಮಿಯವರ ಬಂಟನಾಗಿ ಚಲುವರಾಯಸ್ವಾಮಿ ಗುರುತಿಸಿಕೊಳ್ಳುತ್ತಾರೆ.

ಮೊದಲ ಸೋಲು

2008ರ ಚುನಾವಣೆ ವೇಳೆಗೆ ಚಲುವರಾಯಸ್ವಾಮಿಯವರು ಮೂರನೇ ಬಾರಿಗೆ ಜೆಡಿಎಸ್‌ನಿಂದ ಸ್ಪರ್ಧಿಸುತ್ತಾರೆ. ಆಗ ಕಾಂಗ್ರೆಸ್ ಪಕ್ಷವು ಕೆ.ಸುರೇಶ್‌ಗೌಡರಿಗೆ ಟಿಕೆಟ್ ನೀಡುತ್ತದೆ. ಅವರು 69,259 ಮತಗಳನ್ನು ಪಡೆಯುವ ಮೂಲಕ 5,493 ಮತಗಳ ಅಂತರದಿಂದ ಚಲುವರಾಯಸ್ವಾಮಿಯವರನ್ನು (63,766 ಮತಗಳು) ಮಣಿಸಿ ಶಾಸಕರಾಗುತ್ತಾರೆ. ಸೋತ ಚಲುವರಾಯಸ್ವಾಮಿಯವರು 2009ರಲ್ಲಿ ನಡೆಯುವ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಅಂಬರೀಶ್‌ರವರನ್ನು ಮಣಿಸಿ ಸಂಸದರಾಗುತ್ತಾರೆ.

2013ರ ವಿಧಾನಸಭಾ ಚುನಾವಣೆ ಎದುರಾದಾಗ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್‌ನ ಸುರೇಶ್‌ಗೌಡರನ್ನು 20,363 ಮತಗಳ ಅಂತರದಲ್ಲಿ ಸೋಲಿಸುತ್ತಾರೆ. ಚಲುವರಾಯಸ್ವಾಮಿಯವರಿಂದ ತೆರವಾದ ಸಂಸತ್ ಸ್ಥಾನಕ್ಕೆ ಚಿತ್ರನಟಿ ರಮ್ಯಾರವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ. ಆನಂತರ ಅವರ ಮತ್ತು ಹೆಚ್.ಡಿ ಕುಮಾರಸ್ವಾಮಿಯವರ ನಡುವೆ ಮನಸ್ತಾಪ ಉಂಟಾಗುತ್ತದೆ. 2017ರ ರಾಜ್ಯಸಭಾ ಚುನಾವಣೆಯಲ್ಲಿ ಅವರು ಜೆಡಿಎಸ್ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪರವಾಗಿ ಅಡ್ಡ ಮತದಾನ ಮಾಡುತ್ತಾರೆ. 2018ರ ವೇಳೆಗೆ ದೇವೇಗೌಡರ ಕುಟುಂಬವು ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿ ಚಲುವರಾಯಸ್ವಾಮಿಯವರು ಇತರ ಹಲವರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ. ಹಾಗಾಗಿ ಇಷ್ಟು ದಿನ ಕಾಂಗ್ರೆಸ್‌ನಲ್ಲಿದ್ದ ಸುರೇಶ್‌ಗೌಡರು ಜೆಡಿಎಸ್ ಸೇರುತ್ತಾರೆ. 2018ರಲ್ಲಿ ಇವರಿಬ್ಬರ ನಡುವೆ ಮತ್ತೆ ಸ್ಪರ್ಧೆ ನಡೆಯುತ್ತದೆ. ಆದರೆ ಚಲುವರಾಯಸ್ವಾಮಿ ದೇವೇಗೌಡರಿಗೆ ದ್ರೋಹ ಮಾಡಿದರು ಎಂಬ ಆರೋಪ, ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂಬ ಒಕ್ಕಲಿಗರ ಅಲೆಯಲ್ಲಿ ಜೆಡಿಎಸ್‌ನ ಸುರೇಶ್‌ಗೌಡರು 47,667 ಮತಗಳ ಬೃಹತ್ ಅಂತರದಿಂದ ಗೆದ್ದುಬರುತ್ತಾರೆ. ಅವರು 1,12,396 ಮತಗಳನ್ನು ಪಡೆದರೆ ಚಲುವರಾಯಸ್ವಾಮಿ ಕೇವಲ 64,729 ಮತಗಳಿಗೆ ಕುಸಿಯುತ್ತಾರೆ.

ಚಲುವರಾಯಸ್ವಾಮಿಯವರು ಆಯುರ್ವೇದಿಕ್ ಕಾಲೇಜು ಸ್ಥಾಪನೆ, ಮಾರ್ಕೋನಹಳ್ಳಿ ಡ್ಯಾಂನಿಂದ ಕುಡಿಯುವ ನೀರು ತಂದಿದ್ದು, ನಾಗಮಂಗಲಕ್ಕೆ ಆರ್‌ಟಿಓ ಕಚೇರಿ ತಂದಿದ್ದು ಸೇರಿ ತಾನು ಶಾಸಕ-ಸಚಿವನಾಗಿದ್ದಾಗ ಮಾಡಿದ ಕೆಲಸಗಳನ್ನು ಮುಂದಿಟ್ಟುಕೊಂಡು ಈ ಚುನಾವಣೆ ಎದುರಿಸಿದರು. ಕಾಂಗ್ರೆಸ್ ಪಕ್ಷದ ಪರವಾಗಿನ ಅಲೆಯ ಜೊತೆಗೆ ಅವರು ಕಳೆದ ಬಾರಿಗಿಂತ 25,905 ಹೆಚ್ಚುವರಿ ಮತಗಳನ್ನು ಪಡೆದ ಅವರು ಜೆಡಿಎಸ್ ಪಕ್ಷದ ಸುರೇಶ್ ಗೌಡರನ್ನು 4,414 ಮತಗಳಿಂದ ಸೋಲಿಸಿ ನಾಲ್ಕನೇ ಬಾರಿಗೆ ಶಾಸಕರಾದರು. ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡರಾಗಿ ಗುರುತಿಸಿಕೊಂಡಿದ್ದ ಅವರಿಗೆ ಕೃಷಿ ಮಂತ್ರಿ ಸ್ಥಾನ ದೊರಕಿದೆ.

ಇದನ್ನೂ ಓದಿ; ನಮ್ಮ ಸಚಿವರಿವರು; ಬೆಂಗಳೂರಿನ ಪ್ರಭಾವಿ ಮುಸ್ಲಿಂ ಶಾಸಕರಲ್ಲಿ ಒಬ್ಬರಾದ ಜಮೀರ್ ಅಹ್ಮದ್ ಖಾನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹುಬ್ಬಳ್ಳಿ : ಕೈ ಕೈ ಮಿಲಾಯಿಸಿಕೊಂಡ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು

0
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಮುಂಭಾಗ ಇಂದು (ಏ.30) ಮಧ್ಯಾಹ್ನ ನಡೆದಿದೆ. ಜೆಡಿಎಸ್‌ ಪಕ್ಷ ಖಾಸಗಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕದ 14...