ರಾಜ್ಯದಲ್ಲಿ ಚುನಾವಣೆ ಮುಗಿದು, ಸರ್ಕಾರ ರಚನೆಯಾಗಿ ತಿಂಗಳು ಕಳೆದರೂ ಬಿಜೆಪಿಯಲ್ಲಿ ಇನ್ನೂ ವಿರೋಧ ಪಕ್ಷದ ಸ್ಥಾನ ಭರ್ತಿ ಆಗಿಲ್ಲ, ಮತ್ತೊಂದೆಡೆ ಹೀನಾಯವಾಗಿ ಸೋತಿರುವ ಬಿಜೆಪಿಯು, ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಯ ಚರ್ಚೆಗಳು ಜೋರಾಗಿದೆ. ಇದೀಗ ರಾಜ್ಯ ಬಿಜೆಪಿ ನಾಯಕರಲ್ಲಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಮುಂದುವರಿದಿದೆ.
ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಬಲ ಆಕಾಂಕಿಗಳಾಗಿದ್ದು, ಉಭಯ ನಾಯಕರು ಈ ಬಗ್ಗೆ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಇದರ ಹೊರತಾಗಿ, ಆರ್.ಅಶೋಕ್, ಅಶ್ವತ್ಥ ನಾರಾಯಣ ಅವರ ಹೆಸರೂ ವಿಪಕ್ಷ ನಾಯಕನ ಸ್ಥಾನಕ್ಕೆ ಕೇಳಿಬಂದಿದೆ.
ಇನ್ನು ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಯ ಬೇಡಿಕೆ ಪಕ್ಷದ ಆಂತರಿಕ ವಲಯಗಳಲ್ಲಿ ಕೇಳಿಬಂದಿದೆ. ಮಾಜಿ ಸಚಿವ ವಿ. ಸೋಮಣ್ಣ ಹಾಗೂ ಹಿರಿಯ ಸಂಸದ ರಮೇಶ್ ಜಿಗಜಿಣಗಿ ತಾವು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳೆಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಜುಲೈ 3ರಂದು ವಿಧಾನ ಸಭೆಯ ಜಂಟಿ ಅಧಿವೇಶನ ನಡೆಯಲಿರುವುದರಿಂದ ಅದಕ್ಕೂ ಮುನ್ನ ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
ದಲಿತರು ಬಿಜೆಪಿ ಅಧ್ಯಕ್ಷ ಆಗಬಾರದೇ? ನಾನೂ ಆಕಾಂಕ್ಷಿ ಎಂದ ಜಿಗಜಿಣಗಿ
ಮಾಜಿ ಸಚಿವ ವಿ ಸೋಮಣ್ಣ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಆಗುವ ಬಯಕೆಯನ್ನು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಹೊರ ಹಾಕಿದ್ದಾರೆ. ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲು ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಯಾರು ಆಗಬೇಕು ಎಂಬುದನ್ನು ಬಹಿರಂಗ ಚರ್ಚೆ ಮಾಡುವುದು ಸರಿಯಲ್ಲ. ನಮ್ಮದು ರಾಷ್ಟ್ರೀಯ ಪಕ್ಷ ರಾಷ್ಟ್ರೀಯ ನಾಯಕರ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡ್ತಾರೆ. ಎಲ್ಲರಿಗೂ ರಾಜ್ಯಾಧ್ಯಕ್ಷ ಆಗಬೇಕು ಎಂಬ ಆಶಯ ಇರುವುದು ಸಹಜ. ನಾನೂ ಬಿಜೆಪಿಯ ಹಿರಿಯ ನಾಯಕ ಅವಕಾಶ ಕೊಟ್ಟರೆ ನಾನು ಕೂಡ ರಾಜ್ಯಾಧ್ಯಕ್ಷನಾಗುವೆ. ಬಿಜೆಪಿಯಲ್ಲಿ ದಲಿತರು ರಾಜ್ಯದ ಅಧ್ಯಕ್ಷ ಆಗಬಾರದೇ? ಎಂದು ಪ್ರಶ್ನಿಸಿದರು.
ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಕೇಳಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಎಲ್ಲಿ ಕೇಳಬೇಕು ಎಂಬುದು ನನಗೆ ಗೊತ್ತಿದೆ. ನನಗೂ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಕೋರುತ್ತೇನೆ ಎಂದು ರಮೇಶ ಜಿಗಜಿಣಗಿ ತಮ್ಮ ಆಶಯ ವ್ಯಕ್ತಪಡಿಸಿದರು.

ನನಗಿಂತ ಬುದ್ಧಿವಂತರು ಇದ್ದರೆ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಿ: ಸೋಮಣ್ಣ
”ಪಕ್ಷ ನೀಡಿದ ಕೆಲಸ ಒಪ್ಪಿಕೊಂಡ ಕಾರಣಕ್ಕಾಗಿ ನಾನು ಈಗ ನಿರುದ್ಯೋಗಿಯಾಗಿದ್ದೇನೆ. ಆದರೆ, ಸುಮ್ಮನೆ ಕೂರುವವನಲ್ಲ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸಲು ಸಿದ್ಧ” ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.
ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಭಾನುವಾರ ನಡೆದ ಪಕ್ಷದ ಕಾನೂನು ಪ್ರಕೋಷ್ಠದ ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ”ಬಿಜೆಪಿ ಸೇರಿದ ಬಳಿಕ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ಯಾವುದಕ್ಕೂ ವಿಚಲಿತನಾಗಿಲ್ಲ. ನಾನು ಸನ್ಯಾಸಿ ಅಲ್ಲ ಎಂದು ಈಗಾಗಲೇ ಹೇಳಿರುವೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಹೌದು ಎಂಬುದನ್ನು ಬಹಿರಂಗಪಡಿಸಿದ್ದೇನೆ” ಎಂದರು.
”ಅಧಿಕಾರ ಇರಲಿ, ಇಲ್ಲದಿರಲಿ ಜನರ ಜತೆಗಿದ್ದು ಕೆಲಸ ಮಾಡುತ್ತೇನೆ. ಒಳಗೊಂದು, ಹೊರಗೊಂದು ಮಾತನಾಡಲು ನನಗೆ ಬರುವುದಿಲ್ಲ. ಹಿಂದೆ, ಮುಂದೆ ಮಾತನಾಡಿದವರ ನೀತಿಪಾಠ ನನಗೆ ಗೊತ್ತಿದೆ. ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುವವರೆಗೆ ಕಾಯೋಣ. ನನಗಿಂತ ಬುದ್ಧಿವಂತರು ಯಾರಾದರೂ ಇದ್ದರೆ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಿ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
”ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೆ ನಾನು ನಿರಾಯಾಸವಾಗಿ ಗೆಲ್ಲುತ್ತಿದ್ದೆ. ಪಕ್ಷದ ವರಿಷ್ಠರ ಸೂಚನೆಯಂತೆ ‘ಫೋರ್’, ‘ಸೆಕ್ಸ್’ ಹೊಡೆಯಲು ಹೋಗಿ ಎರಡೂ ಕಡೆ ಸೋತು, ನಿರುದ್ಯೋಗಿಯಾಗಿದ್ದೇನೆ” ಎಂದು ಬೇಸರ ವ್ಯಕ್ತಪಡಿಸಿದರು.



