Homeಮುಖಪುಟಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಹೇಗೆ?

ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಹೇಗೆ?

- Advertisement -
- Advertisement -

ಏಕರೂಪ ನಾಗರಿಕ ಸಂಹಿತೆ ಇರಬೇಕೋ ಇಲ್ಲವೋ ಎಂಬ ಪ್ರಶ್ನೆ ಭಾರತದ ಸಂವಿಧಾನದಲ್ಲಿ ನಂಬಿಕೆ ಇರುವ ಯಾವದೇ ವ್ಯಕ್ತಿಗೆ ಇರಬಾರದು. ಅಸಲಿ ಪ್ರಶ್ನೆ ಏನೆಂದರೆ, ಏಕರೂಪ ನಾಗರಿಕ ಸಂಹಿತೆ ಹೇಗೆ, ಯಾವಾಗ ಮತ್ತು ಯಾವ ಸಿದ್ಧಾಂತದ ಆಧಾರದಲ್ಲಿ ಜಾರಿಗೊಳಿಸಬೇಕು ಎಂಬುದು. ಆದರೆ ಪ್ರಸಕ್ತ ಸರಕಾರದ ನಿಯತ್ತನ್ನು ನೋಡಿ ಅನ್ನಿಸುವುದೇನೆಂದರೆ, ಮತ್ತೊಮ್ಮೆ ಈ ವಿಷಯ ಎತ್ತಿರುವುದರ ಹಿಂದೆ, ಅಸಲಿ ಪ್ರಶ್ನೆಗಳನ್ನು ಕೇಳದೆ ದಿಕ್ಕು ತಪ್ಪಿಸಿ 2024ರ ಚುನಾವಣೆಗಳಿಗೆ ಮುನ್ನ ಕೋಮುವಾದದ ಆತಂಕ ಹುಟ್ಟಿಸುವ ಹುನ್ನಾರವಿದೆ ಎಂದು.

ದೇಶದ ಕಾನೂನು ಆಯೋಗವು ಕಳೆದ ವಾರ ಈ ವಿಷಯದಲ್ಲಿ ಜನರಿಂದ ಅಭಿಪ್ರಾಯ ಕೇಳಿದೆ. ಗಮನಿಸಬೇಕಾದ ವಿಷಯವೇನೆಂದರೆ, ಇದಕ್ಕಿಂತ ಮುಂಚೆ ಬಿಜೆಪಿ ಸರಕಾರದಿಂದಲೇ ನೇಮಿಸಲಾಗಿದ್ದ ಕಳೆದ ಕಾನೂನು ಆಯೋಗವೂ ನವೆಂಬರ್ 2016ರಲ್ಲಿ ಇದೇ ವಿಷಯದ ಬಗ್ಗೆ ಜನರ ಅಭಿಪ್ರಾಯ ಕೇಳಿತ್ತು. ಅದಕ್ಕೆ ಒಂದಿಷ್ಟಲ್ಲ, ಒಟ್ಟು 75,378 ಸಲಹೆಗಳು ಬಂದಿದ್ದವು. ಅದರ ಆಧಾರದ ಮೇಲೆ 2018ರಲ್ಲಿ ಕಾನೂನು ಆಯೋಗವು 185 ಪುಟಗಳ ಒಂದು ದೀರ್ಘವಾದ ವರದಿಯನ್ನು ಸಲ್ಲಿಸಿತ್ತು. ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆಂದರೆ, ಈ ಸಮಯದಲ್ಲಿ ಎಲ್ಲಾ ಸಮುದಾಯಗಳ ಬೇರೆಬೇರೆ ಕೌಟುಂಬಿಕ ಕಾನೂನುಗಳನ್ನು ಬದಲಿಸಿ ಒಂದು ಸಂಹಿತೆ ರಚಿಸುವುದು ಅವಶ್ಯಕವೂ ಇಲ್ಲ ಹಾಗೂ ಅಪೇಕ್ಷಣೀಯವೂ ಅಲ್ಲ ಎಂದು. ಅದರ ನಂತರ 2023ರಲ್ಲಿ ಇನ್ನೊಮ್ಮೆ ಇದೇ ಪ್ರಕ್ರಿಯೆಯನ್ನು ಪುನರಾವರ್ತನೆ ಮಾಡುವುದನ್ನು ನೋಡಿದರೆ ಕಳೆದ ಆಯೋಗ ನೀಡಿದ ವರದಿ ಎಲ್ಲೋ ಬಿಜೆಪಿಯ ರಾಜಕೀಯಕ್ಕೆ ಅನುಕೂಲಕರವಾಗಿಲ್ಲ ಎಂಬ ಸಂದೇಹ ಉಂಟಾಗುತ್ತದೆ. ಹಾಗಾಗಿಯೇ ಮತ್ತೊಮ್ಮೆ ವಿವಾದವನ್ನು ಹೊಸ ರೀತಿಯಲ್ಲಿ ತೆರೆದಿಟ್ಟು 2024ರ ಚುನಾವಣೆಯ ತಯ್ಯಾರಿ ಮಾಡಲಾಗುತ್ತಿದೆ.

ಸೈದ್ಧಾಂತಿಕವಾಗಿ ಏಕರೂಪ ನಾಗರಿಕ ಸಂಹಿತೆ ನಮ್ಮ ಸಂವಿಧಾನದ ಆದರ್ಶಗಳಿಗೆ ಅನುಗುಣವಾಗಿ ಸರಿಯಾದ ದಿಕ್ಕಿನಲ್ಲಿ ಒಂದು ಸರಿಯಾದ ಹೆಜ್ಜೆಯಾದೀತು. ಸಿದ್ಧಾಂತವೇನೆಂದರೆ, ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳಿರುವ ಹಾಗೂ ಕೇವಲ ಧರ್ಮದ ಅಥವಾ ಪಂಥದ ಆಧಾರದ ಮೇಲೆ ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು. ಇದೇ ಆಶಯವನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದ ರಚನೆಕಾರರು ಸುದೀರ್ಘವಾದ ಚರ್ಚೆಯ ನಂತರ ರಾಜ್ಯದ ನೀತಿ ನಿರ್ದೇಶಕ ತತ್ವಗಳ ಅಡಿಯಲ್ಲಿ ಸಂವಿಧಾನದ 44ರ ಅನುಚ್ಛೇದದಲ್ಲಿ ಸರಕಾರಕ್ಕೆ ಸಲಹೆ ನೀಡಲಾಗಿತ್ತು; “ಭಾರತದ ಎಲ್ಲಾ ರಾಜ್ಯ ಕ್ಷೇತ್ರಗಳಲ್ಲಿ ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸುವ ಪ್ರಯತ್ನ ಮಾಡಲಾಗುವುದು.” ಸಂವಿಧಾನ ಸಭೆಯಲ್ಲಿ ಜವಾಹರಲಾಲ್ ನೆಹರು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ನಂತರ ರಾಮ್ ಮನೋಹರ್ ಲೋಹಿಯಾ ಕೂಡ ಈ ಸಿದ್ಧಾಂತದ ಪರವಾಗಿ ವಕಾಲತ್ತು ವಹಿಸಿದ್ದರು.

ಪ್ರಶ್ನೆ ಏನೆಂದರೆ, ಸಂವಿಧಾನದಲ್ಲಿ ವರ್ಣಿಸಲಾದ ’ಯುನಿಫಾರ್ಮ್’ ಅಥವಾ ’ಏಕರೂಪ’ ನಾಗರಿಕ ಸಂಹಿತೆಯ ಅರ್ಥವೇನು? ಇದರ ಒಂದು ಅಕ್ಷರಶಃ ಅರ್ಥ, ಇಂದು ದೇಶದ ವಿವಾಹ, ವಿಚ್ಛೇದನ, ಉತ್ತರಾಧಿಕಾರ ಹಾಗೂ ಕೌಟುಂಬಿಕ ಸಂಪತ್ತಿನಂತಹ ವಿಷಯಗಳ ಬಗ್ಗೆ ಹಿಂದೂ, ಮುಸ್ಲಿಂ, ಪಾರಸಿ ಹಾಗೂ ಕ್ರೈಸ್ತ ಸಮುದಾಯಗಳಿಗಾಗಿ ಯಾವ ಕಾನೂನುಗಳನ್ನು ರಚಿಸಲಾಗಿದೆಯೋ ಅವುಗಳನ್ನು ಕೊನೆಗೊಳಿಸಿ ಎಲ್ಲ ಭಾರತೀಯ ನಾಗರಿಕರಿಗಾಗಿ ಈ ಎಲ್ಲ ವಿಷಯಗಳ ಮೇಲೆ ಒಂದೇ ಕಾನೂನು ಮಾಡಬೇಕು ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಯಾವ ರೀತಿಯಲ್ಲಿ ಅಪರಾಧದ ವಿಷಯಗಳಲ್ಲಿ, ತೆರಿಗೆ ಮತ್ತು ಇತರ ಕಾನೂನುಗಳಲ್ಲಿ ಬೇರೆಬೇರೆ ಸಮುದಾಯಗಳಿಗೆ ಬೇರೆಬೇರೆ ಕಾನೂನುಗಳಿಲ್ಲವೋ, ಅದೇ ರೀತಿಯಲ್ಲಿ ಕೌಟುಂಬಿಕ ವಿಷಯಗಳಿಗಾಗಿಯೂ ದೇಶದಲ್ಲಿ ಕೇವಲ ಒಂದು ಕಾನೂನು ಇರಬೇಕೆಂಬುದು. ಮೊದಲ ನೋಟದಲ್ಲಿ ಇದು ಸುಂದರವಾಗಿ ಕಾಣಿಸುವ ವ್ಯವಸ್ಥೆಯಂತೆ ಕಂಡರೂ, ಇದರಲ್ಲಿ ಇರುವ ತೊಡಕೇನೆಂದರೆ ನಮ್ಮ ದೇಶದಲ್ಲಿ ವಿವಾಹ, ವಿಚ್ಛೇದನ ಹಾಗೂ ಉತ್ತರಾಧಿಕಾರದ ಬಗ್ಗೆ ಬೇರೆಬೇರೆ ಪದ್ಧತಿಗಳು ನಡೆದುಕೊಂಡು ಬಂದಿವೆ. ಬೇರೆ ಧರ್ಮದ ಅನುಯಾಯಿಗಳ ವಿಷಯ ಬಿಟ್ಟರೂ, ಆಗ ಸ್ವತಃ ಹಿಂದೂ ಸಮುದಾಯದ ಒಳಗಡೆಯೇ ಸಾವಿರಾರು ರೀತಿಯ ರೀತಿನೀತಿಗಳು ನಡೆದುಕೊಂಡು ಬಂದಿವೆ.

ಇದನ್ನೂ ಓದಿ: ಉತ್ತರಾಖಂಡ್: ‘ಸಾಮಾಜಿಕ ಸಾಮರಸ್ಯ’ ಸಾರಿದರೆ ಏಕರೂಪ ನಾಗರಿಕ ಸಂಹಿತೆಗೆ ಒಪ್ಪಿಗೆ- ಕಾಂಗ್ರೆಸ್ ನಾಯಕ

ಸ್ವಾಭಾವಿಕವಾಗಿಯೇ, ಈ ಎಲ್ಲವನ್ನೂ ಕೊನೆಗೊಳಿಸಿ ’ಸ್ಪೆಷಲ್ ಮ್ಯಾರೇಜ್ ಆಕ್ಟ್’ನಂತಹ ಯಾವುದೇ ಕಾನೂನನ್ನು ಎಲ್ಲಾ ಜನರ ಮೇಲೆ ಅನುಷ್ಠಾನಗೊಳಿಸುವುದು ಅಸಾಧ್ಯವಾದ ಕಸರತ್ತಾಗುವುದು ಹಾಗೂ ಸುಖಾಸುಮ್ಮನೇ ದೇಶದಲ್ಲಿ ದೊಡ್ಡ ಅಲ್ಲೋಲಕಲ್ಲೋಲ ಸೃಷ್ಟಿಸುವ ಕೆಲಸವಾಗುತ್ತದೆ. ಇದರಲ್ಲಿ ಒಂದು ಸಮುದಾಯದ ಸಂಹಿತೆಯನ್ನು ಮಿಕ್ಕ ಎಲ್ಲಾ ಸಮುದಾಯಗಳ ಮೇಲೆ ಹೇರುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನವೂ ಇದರಿಂದ ಹುಟ್ಟುಕೊಳ್ಳುತ್ತದೆ. ಹಾಗಾಗಿ, ಕಾನೂನು ಆಯೋಗದ ಈ ಹೊಸ ಆರಂಭದಿಂದ ಅನುಮಾನ ಮತ್ತು ವಿವಾದ ಸೃಷ್ಟಿಯಾಗಿದೆ. ಈ ವಿವಾದವನ್ನು ಸೃಷ್ಟಿಸುವುದೇ ಬಹುಶಃ ಇದರ ಉದ್ದೇಶವಾಗಿರಬಹುದು.

ಆದರೆ ಸಮಾನ ನಾಗರಿಕ ಸಂಹಿತೆಯ ಸಿದ್ಧಾಂತದ ಇನ್ನೊಂದು ವ್ಯಾಖ್ಯಾನವು ಹೆಚ್ಚು ತಾರ್ಕಿಕವಾಗಿದ್ದು, ಸಂವಿಧಾನದ ಆಶಯಗಳೊಂದಿಗೆ ಸಮ್ಮತವಾಗಿವೆ ಹಾಗೂ ನಮ್ಮ ಪರಿಸ್ಥಿತಿಗೆ ಉಪಯುಕ್ತವೆನಿಸುತ್ತಿದೆ. ಈ ವ್ಯಾಖ್ಯಾನದ ಅನುಗುಣವಾಗಿ ನಾಗರಿಕ ಸಂಹಿತೆಯನ್ನು ಸಮಾನವಾಗಿಸಲು ಬೇರೆಬೇರೆ ಧರ್ಮದ ಅನುಯಾಯಿಗಳ ಬೇರೆಬೇರೆ ರೀತಿರಿವಾಜು ಹಾಗೂ ವ್ಯವಸ್ಥೆಗಳನ್ನು ಕೊನೆಗೊಳಿಸುವ ಅವಶ್ಯಕತೆ ಇಲ್ಲ, ಆದರೆ ಅವುಗಳಲ್ಲಿ ಸಮಾನತೆಯನ್ನು ಸ್ಥಾಪಿಸುವ ಅವಶ್ಯಕತೆ ಇದೆ. ಬೇರೆಬೇರೆ ಕೌಟುಂಬಿಕ ಕಾನೂನುಗಳಲ್ಲಿ, ಸಾಂವಿಧಾನದ ಮೌಲ್ಯಗಳು ಮತ್ತು ಮೌಲಿಕ ಹಕ್ಕುಗಳೊಂದಿಗೆ ತಾಳೆಯಾಗದೇ ಇರುವ ಯಾವೆಲ್ಲ ಅಂಶಗಳಿವೆಯೋ ಅವುಗಳನ್ನು ಬದಲಿಸಬೇಕು. ವಿವಿಧ ಧಾರ್ಮಿಕ ಸಮುದಾಯಗಳ ಪರಂಪರಾಗತ ರೀತಿ ರಿವಾಜುಗಳು ಹಾಗೂ ಕಾನೂನುಗಳಲ್ಲಿ ಮಹಿಳೆಯರಿಗೆ ತಾರತಮ್ಯ ಮಾಡುವ ಅನೇಕ ವ್ಯವಸ್ಥೆಗಳಿವೆ, ಮಕ್ಕಳ ಹಿತಾಸಕ್ತಿಗಳನ್ನು ಕಡೆಗಣಿಸುವ ಹಾಗೂ ಟ್ರಾನ್ಸ್‌ಜೆಂಡರ್ ಮತ್ತು ವಿವಾಹೇತರ ಮಕ್ಕಳನ್ನು ಅಮಾನ್ಯಗೊಳಿಸುವ ವ್ಯವಸ್ಥೆಗಳಿವೆ. ಇಂತಹ ಎಲ್ಲಾ ಕಾನೂನುಗಳನ್ನು ಬದಲಿಸಬೇಕಿದೆ, ಅವು ಯಾವ ಧಾರ್ಮಿಕ ಸಮುದಾಯದ ಸಂಹಿತೆಯ ಭಾಗವೇ ಆಗಿರಲಿ.

ಉದಾಹರಣೆಗೆ, ಮುಸ್ಲಿಂ ಸಮುದಾಯದಲ್ಲಿಯ ತ್ರಿವಳಿ ತಲಾಕ್ ಮತ್ತು ತಲಾಕ್ ಎ ಬಿದ್ದತ್ ನಂತಹ ವ್ಯವಸ್ಥೆಗಳು ಅಮಾನವೀಯವಾಗಿವೆ ಹಾಗೂ ಮಹಿಳೆಯ ವಿರುದ್ಧವಾಗಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈ ವಿಷಯಗಳ ಮೇಲೆ ರಾಷ್ಟ್ರೀಯ ಚರ್ಚೆ ಆಗುವುದಕ್ಕಿಂತ ಮುನ್ನವೇ ಸರ್ವೋಚ್ಚ ನ್ಯಾಯಾಲಯವು ಈ ಪದ್ಧತಿಗಳು ಇಸ್ಲಾಂಗೆ ಮತ್ತು ಸಂವಿಧಾನಕ್ಕೆ ಅನುಗುಣವಾಗಿಲ್ಲ ಎಂದು ಹೇಳಿ ಇವುಗಳನ್ನು ಅಮಾನ್ಯಗೊಳಿಸಿದೆ. ಇದೇ ರೀತಿ ಹಿಂದು ಸಮುದಾಯದಲ್ಲಿ ಬಾಲ್ಯ ವಿವಾಹ, ಸತಿ ಮತ್ತು ದೇವದಾಸಿ ಪದ್ಧತಿಗಳನ್ನು ಕಾನೂನುಬಾಹಿರ ಎಂದು ಘೋಷಿಸಲಾಗಿದೆ. ಆದರೆ ಎಲ್ಲಾ ಕೌಟುಂಬಿಕ ಕಾನೂನುಗಳಲ್ಲಿ ಮಹಿಳಾವಿರೋಧಿ ಅಂಶಗಳು ಇನ್ನೂ ಉಳಿದುಕೊಂಡಿವೆ. ಭಾರತೀಯ ಕಾನೂನು ಮುಸ್ಲಿಮ ಪುರುಷನಿಗೆ ಬಹುಪತ್ನಿತ್ವವನ್ನು ಅನುಮತಿಸುತ್ತದೆ, ಈ ವ್ಯವಸ್ಥೆಯನ್ನು ಪಾಕಿಸ್ತಾನ, ಈಜಿಪ್ಟ್ ಹಾಗೂ ಅಲ್ಜೀರಿಯಾದಂತಹ ಅನೇಕ ಮಸ್ಲಿಂ ಬಾಹುಳ್ಯವುಳ್ಳ ದೇಶಗಳು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಅಂದಹಾಗೆ ತ್ರಿವಳಿ ತಲಾಕ್‌ನಂತೆಯೇ ಮುಸ್ಲಿಮರಲ್ಲಿ ಬಹುಪತ್ನಿತ್ವದ ವ್ಯವಸ್ಥೆಯೂ ಈಗ ಹೆಸರಿಗೆ ಮಾತ್ರ ಉಳಿದುಕೊಂಡಿದೆ. (ಹೆಚ್ಚುಕಡಿಮೆ ಹಿಂದೂಗಳಲ್ಲಿ ಎಷ್ಟು ಪ್ರಮಾಣದಲ್ಲಿದೆಯೋ ಅಷ್ಟೇ ಪ್ರಮಾಣದಲ್ಲಿ, ಆದರೆ ಹಿಂದೂಗಳಲ್ಲಿ ಈ ಪದ್ಧತಿ ಕಾನೂನುಬಾಹಿರವಾಗಿದೆ.) ಆದರೂ ಇದು ಅನ್ಯಾಯದಿಂದ ಕೂಡಿದ್ದಾಗಿದೆ. ನಮ್ಮಲ್ಲೂ ಈ ಕಾನೂನುಗಳಲ್ಲಿ ಬದಲಾವಣೆ ಮಾಡಿ, ಇವನ್ನು ಸೀಮಿತಗೊಳಿಸಬೇಕಿದೆ. ಅದೇ ರೀತಿಯಲ್ಲಿ ಹಿಂದೂ ಸಮುದಾಯದ ಮೇಲೆ ಜಾರಿ ಆಗುವ ಕೌಟುಂಬಿಕ ಕಾನೂನುಗಳಲ್ಲಿ ಇಂದಿಗೂ ಹೆಣ್ಣುಮಕ್ಕಳಿಗೆ ಉತ್ತರಾಧಿಕಾರದ ಸಮಾನ ಹಕ್ಕುಗಳು ಸಂಪೂರ್ಣವಾಗಿ ಸಿಕ್ಕಿಲ್ಲ, ಬಾಲ್ಯ ವಿವಾಹವನ್ನು ರದ್ದುಗೊಳಿಸುವ ಹಕ್ಕುಗಳಿಲ್ಲ ಹಾಗೂ ಅವಿವಾಹಿತ ಹೆಣ್ಣುಮಕ್ಕಳನ್ನು ಅಪ್ರಾಪ್ತೆ ಎಂಬಂತೆ ಕಾಣಲಾಗುತ್ತದೆ. ಉತ್ತರಾಧಿಕಾರದ ವಿಷಯದಲ್ಲಿ ’ಮಿತಾಕ್ಷರ’ ಕಾನೂನಿನ (ಹಿಂದೂ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಕಾನೂನು) ಅಡಿಯಲ್ಲಿ ಪಿತ್ರಾರ್ಜಿತ ಆಸ್ತಿಯ ಕಾನೂನು ಬದಲಾಗಬೇಕು ಹಾಗೂ ತೆರಿಗೆಗೆ ’ಹಿಂದೂ ಅವಿಭಾಜ್ಯ ಕುಟುಂಬ’ (HUF) ನಂತಹ ವ್ಯವಸ್ಥೆಯ ಯಾವುದೇ ಔಚಿತ್ಯ ಉಳಿದುಕೊಂಡಿಲ್ಲ. ಸಿಖ್ ಸಮುದಾಯದ ಮೇಲೆ ಹಿಂದೂ ಕೌಟುಂಬಿಕ ಕಾನೂನು ಜಾರಿಗೊಳಿಸುವುದರ ಮೇಲೆ ಗಂಭೀರ ಆತಂಕಗಳು ಉಂಟಾಗಿವೆ. ಅದೇ ರೀತಿಯಲ್ಲಿ ಕ್ರೈಸ್ತ ಸಮುದಾಯದ ಕಾನೂನುಗಳಲ್ಲಿ ವಿಚ್ಛೇದನ ವಿರೋಧಿ ವ್ಯವಸ್ಥೆ ಮತ್ತು ದತ್ತು ಪಡೆಯುವ ಕಾನೂನುಗಳಲ್ಲಿ ಬದಲಾವಣೆಯ ಅವಶ್ಯಕತೆ ಇದೆ.

ಒಂದು ವೇಳೆ ಈ ವಿಷಯದಲ್ಲಿ ಸರಕಾರದ ನಿಯತ್ತು ನಿಷ್ಕಲ್ಮಶವಾಗಿದ್ದರೆ, ಬಹುಸಂಖ್ಯಾತ ಸಮಾಜದ ಕೌಟುಂಬಿಕ ಕಾನೂನುಗಳನ್ನು ಅಲ್ಪಸಂಖ್ಯಾತರ ಮೇಲೆ ಹೇರುವ ಉದ್ದೇಶ ತನ್ನದಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಪ್ರಶ್ನೆಯ ಮೇಲೆ ಒಂದು ಹೊಸ ವಿವಾದ ಸೃಷ್ಟಿಸುವ ಬದಲಿಗೆ ಮೋದಿ ಸರಕಾರ ತಾನೇ ನೇಮಿಸಿದ ಕಳೆದ ಕಾನೂನು ಆಯೋಗದ ಶಿಫಾರಸ್ಸನ್ನು ಸ್ವೀಕರಿಸಬೇಕು ಹಾಗೂ ಎಲ್ಲಾ ಸಮುದಾಯಗಳ ಕೌಟುಂಬಿಕ ಕಾನೂನುಗಳಲ್ಲಿ ತಾರ್ಕಿಕವಾದ ಮತ್ತು ಸಂವಿಧಾನ ಸಮ್ಮತ ಬದಲಾವಣೆ ಮಾಡುವ ಕೆಲಸ ಆರಂಭಿಸಬೇಕು.

ಇದನ್ನೂ ಓದಿ: ಬಿಜೆಪಿಗೆ ಬೇಕಿರುವ ಏಕರೂಪ ನಾಗರಿಕ ಸಂಹಿತೆ ನ್ಯಾಯಸಮ್ಮತವಾದದ್ದೇ?

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...