Homeಅಂಕಣಗಳುಸಾರಾ ಶಗುಫ್ತಾ: ‘ನೋವಿನ ಗಾಯಗಳಿಗೆ ಸಾಕ್ಷಿಯಾದ ಕಾವ್ಯ’

ಸಾರಾ ಶಗುಫ್ತಾ: ‘ನೋವಿನ ಗಾಯಗಳಿಗೆ ಸಾಕ್ಷಿಯಾದ ಕಾವ್ಯ’

ಸಾರಾ 1984ರ ಒಂದು ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಾಗ ಆಕೆಗೆ ಮೂವತ್ತು ವರ್ಷವೂ ತುಂಬಿರಲಿಲ್ಲ. ಆಕಾಶದಲ್ಲಿ ಕೆಲವೇ ಕ್ಷಣಗಳ ಕಾಲ ಮಿಂಚಿ ಮಾಯವಾಗುವ ಉಲ್ಕಾಪಾತದಂತೆ ಉರಿದು ಹೋದವಳು ಸಾರಾ ಶಗುಫ್ತಾ.

- Advertisement -
- Advertisement -

ಪಾಕಿಸ್ತಾನದ ಕವಯಿತ್ರಿ ಸಾರಾ ಶಗುಫ್ತಾ ಒಂದು ವೇಳೆ ಬದುಕಿದ್ದರೆ ಈಗ ಅರವತ್ತು ವರ್ಷ ದಾಟಿರುತ್ತಿತ್ತು. ಸಾರಾ ಪಾಕಿಸ್ತಾನದ ಗುಜರಾಂವಾಲಾದ ಬರೋಜ್ ಮಂಗಲ್‍ದಲ್ಲಿ 1954ರಂದು ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದಳು. ಭಾರತದ ವಿಭಜನೆಯ ಸಂದರ್ಭದಲ್ಲಿ ಆಕೆಯ ಕುಟುಂಬವು ಪಂಜಾಬಿನಿಂದ ಕರಾಚಿಗೆ ವಲಸೆ ಹೋಗಿತ್ತು. ಸಾರಾಳ ಜೀವನವು ಬರಿ ಗಾಯಗಳಿಂದಲೇ ತುಂಬಿ ಹೋಗಿತ್ತು. ಸಾರಾ ತನ್ನ ಬದಕಿನಲ್ಲಿ ನಡೆದ ಘಟನೆಗಳಿಂದ ರೋಸಿ ಹೋಗಿ ಟಾಲ್‍ಸ್ಟಾಯ್‍ನ ‘ಅನ್ನಾ ಕರೆನೀನ’ ಕಾದಂಬರಿಯ ನಾಯಕಿ ಅನ್ನಾಳಂತೆ ಚಲಿಸುವ ಟ್ರೇನ್ ಎದುರು ಹಾರಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಸಾರಾ 1984ರ ಒಂದು ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಾಗ ಆಕೆಗೆ ಮೂವತ್ತು ವರ್ಷವೂ ತುಂಬಿರಲಿಲ್ಲ. ಆಕಾಶದಲ್ಲಿ ಕೆಲವೇ ಕ್ಷಣಗಳ ಕಾಲ ಮಿಂಚಿ ಮಾಯವಾಗುವ ಉಲ್ಕಾಪಾತದಂತೆ ಉರಿದು ಹೋದವಳು ಸಾರಾ ಶಗುಫ್ತಾ. ಸಾರಾಳ ಬದುಕನ್ನು ಕುರಿತು ಪಂಜಾಬಿ ಭಾಷೆಯ ಪ್ರಖ್ಯಾತ ಲೇಖಕಿ ಅಮೃತಾ ಪ್ರೀತಂ ಬರೆದ ‘ಏಕ್ ಥೀ ಸಾರಾ’ ಎಂಬ ಕೃತಿಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗದವರಾದ ಹಸನ್ ನಯೀಂ ಸುರಕೋಡ ಅವರು ‘ಸಾರಾ ಶಗುಫ್ತಾ: ಜೀವನ ಮತ್ತು ಕಾವ್ಯ’ (2016) ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ತಂದಿದ್ದಾರೆ. ಇದು ಲಡಾಯಿ ಪ್ರಕಾಶನದಿಂದ ಪ್ರಕಟವಾಗಿದೆ.

ಸಾರಾ ಪಂಜಾಬಿಯ ಪ್ರಖ್ಯಾತ ಕವಯಿತ್ರಿ ಮತ್ತು ಲೇಖಕಿಯಾದ ಅಮೃತಾ ಪ್ರೀತಂ ಅವರ ಅತ್ಯಂತ ಆಪ್ತ ಗೆಳತಿಯಾಗಿದ್ದಳು. ಸಾರಾ ಭಾರತಕ್ಕೆ ಬಂದು ಅಮೃತಾಳನ್ನು ಭೇಟಿಯಾಗಿದ್ದಳು. ಆಕೆ ಅಮೃತಾಳನ್ನು ನೆರಳು ನೀಡುವ ಮರದಂತೆ ಆಶ್ರಯಿಸಿದ್ದಳು. ಸಾರಾ ಯಾವುದೇ ಮುಜುಗರವಿಲ್ಲದೇ ಅಮೃತಾಳಿಗೆ ಪತ್ರಗಳನ್ನು ಬರೆದು ತನ್ನ ಒಡಲ ಬೇಗುದಿಯನ್ನು ತೋಡಿಕೊಂಡಿದ್ದಾಳೆ. ಸಾರಾ ಬರೆದ ಒಂದೊಂದು ಪತ್ರಗಳು ಆಕೆಯ ಬದುಕಿನ ದುರಂತಮಯ ಕತೆಯನ್ನು ಹೇಳುತ್ತವೆ. ಆ ಪತ್ರಗಳಲ್ಲಿದ್ದ ಒಂದೊಂದು ಕವಿತೆಗಳು ಕೂಡ ಆಕೆಯ ಜೀವನದ ಚರಮಗೀತೆಗಳಾಗಿವೆ. ಆಕೆಯ ಪತ್ರಗಳಲ್ಲಿ ಒಂಟಿತನ, ಹತಾಶೆ ಮತ್ತು ಮಾನಸಿಕ ಅಸ್ವಸ್ಥತೆಯ ಮುಖಗಳಿವೆ; ಸಾರಾಳ ಪ್ರಖರ ವೈಚಾರಿಕ ಆಕ್ರೋಶವಿದೆ. ಅಂದಿನ ಸಮಾಜವು ಸಾರಾಳ ಬಗ್ಗೆ ಎಷ್ಟೊಂದು ಅಮಾನುಷವಾಗಿ ನಡೆದುಕೊಂಡಿದೆ ಎಂಬುದರ ವಿವರಗಳಿವೆ. ಸಾರಾಳ ಗದ್ಯವು ಕೂಡ ಕಾವ್ಯದಷ್ಟೇ ಕಲಾತ್ಮಕವಾಗಿದೆ. ಆಕೆಯ ಪ್ರತಿಭೆ ತನ್ನ ಕಾಲಕ್ಕಿಂತ ಎಷ್ಟೋ ಮುಂದಿತ್ತು. ಆದರೆ ಸಮಾಜಿಕ ವ್ಯವಸ್ಥೆಯು ಆಕೆಯನ್ನು ಆಹುತಿ ತೆಗೆದುಕೊಂಡಿತು. ಆಕೆ ಅಮೃತಾಗೆ ಬರೆದ ಸರಣಿ ಪತ್ರಗಳ ಗುಚ್ಚವೇ ಈ ಪುಸ್ತಕವಾಗಿದೆ.

photo courtesy: Amar Ujala

ಸಾರಾ ಗಂಡು ಪ್ರಧಾನ ಸಾಮಾಜಿಕ ವ್ಯವಸ್ಥೆಯನ್ನು ಒಪ್ಪಿಕೊಳ್ಳಲಿಲ್ಲ. ಈ ವ್ಯವಸ್ಥೆಯು ಸಾರಾಳನ್ನು ಪಂಜರದ ಗಿಳಿಯನ್ನಾಗಿಸಲು ಇನ್ನಿಲ್ಲದಂತೆ ಪ್ರಯತ್ನಿಸಿತು. ಆಕೆ ತನ್ನನ್ನು ಬಂಧಿಸಿಡುವುದರ ವಿರುದ್ಧವಾಗಿ ಕೊನೆಯ ಉಸಿರಿನತನಕವು ದಿಟ್ಟವಾಗಿ ಸೆಣಸಾಡಿದಳು. ಬೊಗಸೆಯಷ್ಟು ಪ್ರೀತಿಗಾಗಿ ತನ್ನ ಜೀವನಪೂರ್ತಿ ಹಂಬಲಿಸಿದಳು; ಸಮಾಜವು ಇಲ್ಲಸಲ್ಲದ ಆಪಾದನೆಗಳ ಮೂಟೆಯನ್ನು ಆಕೆಯ ಮೇಲೆ ಹೊರಿಸಿತು. ಇದನ್ನೆಲ್ಲ ಮೌನವಾಗಿ ಸಹಿಸಿಕೊಳ್ಳುವ ಜಾಯಮಾನ ಅವಳದ್ದಾಗಿರಲಿಲ್ಲ. ಸಾರಾ ಎಷ್ಟೆಲ್ಲ ದಮನಕ್ಕೆ ಒಳಗಾದಳೋ ಅಷ್ಟೇ ತೀವ್ರವಾಗಿ ಕೆಂಡದಂತಹ ಕಾವ್ಯವನ್ನೇ ರಚಿಸಿದಳು. ಆಕೆಯ ಕಾವ್ಯದ ಕಾವು ಪುರುಷಪ್ರಧಾನ ವ್ಯವಸ್ಥೆಯ ತಳಪಾಯವನ್ನು ಅಲುಗಾಡಿಸಿತು. ಇದರಿಂದ ಆಕೆಯನ್ನು ವಿರೋಧಿಸುವವರ ಸಂಖ್ಯೆಯು ಹೆಚ್ಚಾಯಿತು. ಇದನ್ನೆಲ್ಲ ನಿರೀಕ್ಷಿಸಿದಂತೆಯೇ ಸಾರಾ ಎಲ್ಲವನ್ನು ತನ್ನ ಮೈಮೇಲೆ ಎಳೆದುಕೊಂಡು ಹೋರಾಟಕ್ಕೆ ಸಿದ್ಧಳಾಗಿದ್ದಳು.

ಸಾರಾಳಿಗೆ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಬುರ್ಖಾದ ಶಿಕ್ಷೆಗೆ ಒಳಪಡಿಸಲಾಯಿತು. ಮದುವೆಯಾದ ಮೂರು ವರ್ಷದಲ್ಲಿ ಮೂವರು ಮಕ್ಕಳಿಗೆ ಜನ್ಮ ನೀಡಿದಳು. ತಾನು ಹೆಂಡತಿಯಾಗಿರಲಿಲ್ಲ; ಅದೊಂದು ಶರಣಾಗತ ಬದುಕಾಗಿತ್ತು; ಒಂದು ರೂಪಾಯಿ ಖರ್ಚು ಮಾಡಲು ಕೂಡ ಗಂಡನ ಅನುಮತಿ ಪಡಯಬೇಕಾಗಿತ್ತು; ಗಂಡ ತನಗೆ ಬೇಕಾದಾಗ ಒಂದು ರಬ್ಬರ್ ಗೊಂಬೆಯಂತೆ ತನ್ನನ್ನು ಭೋಗಿಸುತ್ತಿದ್ದ; ಗಂಡನ ದೈಹಿಕ ಹಲ್ಲೆಗಳಿಂದ ತನ್ನ ದೇಹವೇ ಕಪ್ಪಿಟ್ಟು ಹೋಗುತ್ತಿತ್ತು; ಆತನ ಚಿತ್ರಹಿಂಸೆಗಳಿಂದ ಅನುಭವಿಸಿದ ಆಘಾತಗಳನ್ನು ದೀರ್ಘವಾಗಿಯೇ ಸಾರಾ ತನ್ನ ಪತ್ರಗಳಲ್ಲಿ ಬರೆದುಕೊಂಡಿದ್ದಾಳೆ. ಸಾರಾ ಇಂತಹ ದೌರ್ಜನ್ಯವನ್ನು ಖಂಡಿಸಿ ಗಂಡನಿಗೆ ತಲಾಕ್ ನೀಡುವಷ್ಟು ಧೈರ್ಯಗಾರ್ತಿಯಾಗಿದ್ದಾಳೆ. ಆದರೆ ಸಾರಾ ತನ್ನ ಮಕ್ಕಳನ್ನು ಪಡೆಯಲು ನ್ಯಾಯಾಲಯದ ಮೆಟ್ಟಿಲೇರುತ್ತಾಳೆ. ಕಟಕಟೆಯಲ್ಲಿ ನಿಂತು ಈ ಮಕ್ಕಳು ತನ್ನ ಗಂಡನಿಗೆ ಹುಟ್ಟಿದ್ದಲ್ಲವೆಂದು ಹೇಳುವಷ್ಟು ಬಂಡುಕೋರಳಾಗುತ್ತಾಳೆ. ಸಾರಾಳಿಗೆ ಮಕ್ಕಳು ಸಿಗುತ್ತಾರೆ. ಆದರೆ ಕೆಲವೇ ತಿಂಗಳಲ್ಲಿ ಪುನಃ ವಿಚ್ಛೇದಿತ ಗಂಡನ ಕಿರುಕುಳ ಶುರುವಾಗುತ್ತದೆ. ಸಾರಾಳ ಬದುಕು ಬೀದಿ ಪಾಲಾಗುತ್ತದೆ. ಆಕೆಯ ಎಷ್ಟೋ ಕವಿತೆಗಳಲ್ಲಿ ಮಕ್ಕಳ ಮೇಲಿನ ತಾಯ್ತನದ ಮಮಕಾರವೇ ಹೆಪ್ಪುಗಟ್ಟಿದೆ.

ಗಂಡನ ಸ್ನೇಹಿತನೊಬ್ಬ ಸಾರಾಳನ್ನು ಇಷ್ಟಪಡುತ್ತಾನೆ. ಸಾರಾ ಎರಡನೇ ಮದುವೆಯಾಗುತ್ತಾಳೆ. ಆಗ ಪುನಃ ಈ ಗಂಡನ ಕಾಟ ಶುರುವಾಗುತ್ತದೆ. ಮೊದಲ ಗಂಡನಿಗೆ ತಲಾಕ್ ನೀಡಿದಂತೆಯೇ ಸಾರಾ ಎರಡನೇ ಗಂಡನಿಂದಲೂ ಕಳಚಿಕೊಳ್ಳುತ್ತಾಳೆ. ಆಕೆ ತನ್ನ ತಾಯಿಯ ಒತ್ತಾಯಕ್ಕೆ ಮಣಿದು ನಾಲ್ಕನೆಯ ಮದುವೆಗೆ ಮನಸ್ಸಿಲ್ಲದ ಮನಸ್ಸಿಂದ ಒಪ್ಪಿಕೊಳ್ಳುತ್ತಾಳೆ. ಈ ಗಂಡನ ಶೋಷಣೆಯಿಂದಲೂ ಸಾರಾ ಜರ್ಜರಿತಳಾಗುತ್ತಾಳೆ; ಯಥಾಪ್ರಕಾರ ತಲಾಕ್ ನೀಡುತ್ತಾಳೆ. ಹೀಗೆ ಸಾರಾಳ ಜೀವನದಲ್ಲಿ ನಾಲ್ಕುಜನ ಗಂಡಂದಿರು ಬಂದು ಹೋಗುತ್ತಾರೆ. ಈ ಗಂಡಂದಿರು ಸಾರಾಳ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ಸಹಿಸಿಕೊಳ್ಳಲಿಲ್ಲ. ಸಾರಾ ತನ್ನ ಸಹೋದರ ಮತ್ತು ಸಹೋದರಿಯರಿಂದಲೂ ಹಿಂಸೆಯನ್ನು ಎದುರಿಸಬೇಕಾಯಿತು. ಆಕೆ ಪತ್ರಿಕೆಗಳಿಗೆ ಕವನ ಮತ್ತು ಲೇಖನಗಳನ್ನು ಬರೆಯುವುದನ್ನು ಇವರು ವಿರೋಧಿಸುತ್ತಿದ್ದರು. ಆಕೆಯ ಎಷ್ಟೋ ಕವಿತೆ ಮತ್ತು ಲೇಖನಗಳನ್ನು ಸುಟ್ಟು ಹಾಕಲಾಗಿದೆ. ಮನೆತನದ ಮಾನ ಮರ್ಯಾದೆಯನ್ನು ನಾಶ ಮಾಡುತ್ತಿದ್ದಾಳೆ ಎಂದು ದೂಷಿಸಲಾಗಿದೆ. ಸಾರಾ ಅತಿಕಾಮಿಯಾಗಿದ್ದಳು ಎನ್ನುವ ಆರೋಪಗಳ ಹಣೆಪಟ್ಟಿಯನ್ನು ಆಕೆಗೆ ಅಂಟಿಸಲಾಯಿತು. ಸಾರಾ ಅನೇಕ ಗಂಡಸರೊಂದಿಗೆ ಮಲಗುತ್ತಾಳೆ ಎನ್ನುವ ಅಪಪ್ರಚಾರದ ಮೂಲಕ ಆಕೆಯ ಚಾರಿತ್ರ್ಯಹರಣ ಮಾಡಲಾಯಿತು. ಸಾರಾ ಇಂತಹ ಆರೋಪಗಳಿಂದ ನೊಂದುಕೊಳ್ಳುತ್ತಾಳೆ. ಆದರೆ ಏಕಾಂಗಿಯಾಗಿಯೇ ತನ್ನೊಳಗಿನ ಸೃಜನಶೀಲತೆಯ ಮೂಲಕವೇ ಎದುರೇಟು ನೀಡಿದ್ದಾಳೆ.

ಸಾರಾ ತನ್ನದೊಂದು ಕವಿತೆಯಲ್ಲಿ ‘ಒಂದು ಸರಹದ್ದು ಇದೆಯೇ ಹೆಣ್ಣಿಗೆ| ತನ್ನ ದೇಹದ ಹೊರತಾಗಿ?’ ಎಂದು ಪ್ರಶ್ನಿಸುತ್ತಾಳೆ. ಹೆಣ್ಣಿನ ಚೈತನ್ಯವನ್ನು ದಮನಿಸುವ ಎಲ್ಲ ಬಗೆಯ ವ್ಯವಸ್ಥೆಯನ್ನೂ ವಿರೋಧಿಸುತ್ತಾಳೆ. ಮತ್ತೊಂದು ಕವಿತೆಯಲ್ಲಿ ‘ನಾನು ಬರೆಯುತ್ತಿಲ್ಲ ಉರಿಯುತ್ತೇನೆ| ಈ ನಾಲಾಯಕ ಜನರಿಗೆ ಬೇಕಿಲ್ಲ ಕಮಲ| ಅಲೆಗಳಿಲ್ಲದ ಸಮುದ್ರವಿರಲಾರದು| ಹೆಣ್ಣು ಸಂಧಿಸಲೇಬೇಕು ಒಬ್ಬ ಪುರುಷನನ್ನು’ ಎಂದು ಲಿಂಗತಾರತಮ್ಯವನ್ನು ಪ್ರತಿರೋಧಿಸುತ್ತಾಳೆ; ಸಾರಾಗೆ ಹೆಣ್ಣು ಗಂಡುಗಳ ಸೌಹಾರ್ದಯುತ ಬಾಳ್ವೆಯಲ್ಲಿ ನಂಬಿಕೆಯಿತ್ತು. ಸಾರಾಳ ಕವಿತೆಗಳಲ್ಲಿ ‘ಮನಸ್ಸಾಕ್ಷಿ’, ‘ದಫನ್’, ‘ಗೋರಿ’, ‘ದೇವರು’ ಮತ್ತು ‘ಸಮಾಧಿ’ ಎಂಬ ಪದಗಳು ಹೇರಳವಾಗಿ ಬಳಕೆಯಾಗುತ್ತವೆ. ಈ ಸಮಾಜವು ತನಗೆ ಜೀವವಿರುವಾಗಲೇ ‘ಗೋರಿ ಕಟ್ಟಿದೆ’ ಎಂದು ರೋದಿಸಿದ್ದಾಳೆ. ಸಾರಾ ತಮ್ಮ ಕವಿತೆಯೊಂದರಲ್ಲಿ ‘ನಾನು ದೇವರಿಗಿಂತಲೂ ಹೆಚ್ಚು ಒಂಟಿ| ಆದರೆ ನಾನು ಹಾಜರು ನನ್ನ ಪಾಪಗಳಲ್ಲಿ| ಮನಸ್ಸಾಕ್ಷಿಯ ವಿಷ ಸಾಕ್ರೇಟಿಸ್‍ನ ಬಟ್ಟಲೊಳಗಿನ ವಿಷಕ್ಕಿಂತಲೂ ಘೋರ’ ಎಂದಿದ್ದಾಳೆ. ಈ ಜನರಿಗೆ ‘ಮನಸ್ಸಾಕ್ಷಿ’ ಇದ್ದಿದ್ದರೆ ತನ್ನ ವಿಷಯದಲ್ಲಿ ಇಷ್ಟೊಂದು ಬರ್ಬರವಾಗಿ ನಡೆದುಕೊಳ್ಳುತ್ತಿದ್ದರೆ ಎಂದು ನೇರವಾಗಿಯೇ ಕೇಳುತ್ತಾಳೆ. ‘ನಾನೊಂದು ದೇವರ ನಿರ್ಜೀವ ಪ್ರತಿಮೆ’ ಎಂದಿರುವ ಸಾರಾ ‘ಬದುಕು ಎಂದೂ ಸ್ನೇಹಮಯಿಯಾಗಿರಲಿಲ್ಲ ನನಗೆ| ಆದಿಯಿಂದಲೇ ಮರಳಿ ಬರುವೆ| ದೂಷಿಸಲು ದೇವರನ್ನು|’ ಎನ್ನುತ್ತಾಳೆ. ಆಕೆಯ ಎಷ್ಟೋ ಕವಿತೆಗಳು ದೇವರನ್ನು ತರಾಟೆಗೆ ತೆಗೆದುಕೊಳ್ಳುತ್ತವೆ.

ಅಮೃತಾ ಪ್ರೀತಂ

ಅಮೃತಾ ಪ್ರೀತಂ ಮತ್ತು ಸಾರಾ ಶಗುಫ್ತಾ-ಇಬ್ಬರ ಬದುಕಿನ ನಡುವೆ ಕೆಲವು ಸಮಾನ ಅಂಶಗಳಿವೆ. ಈರ್ವರೂ ಉರ್ದು ಮತ್ತು ಪಂಜಾಬಿ ಭಾಷೆಯಲ್ಲಿ ಬರೆದವರು. ಅಮೃತಾ ಪ್ರೀತಂ ಅವರು ಕೂಡ ಕುಟುಂಬದ ಕಟ್ಟುಪಾಡಿಗೆ ಬಲಿಬಿದ್ದು ಬಾಲ್ಯದಲ್ಲಿಯೇ ಮದುವೆಯಾಗಿದ್ದರು. ಅಮೃತಾ ತಮ್ಮ ಮೊದಲ ಮದುವೆಯಿಂದ ವಿಚ್ಛೇದನ ಪಡೆದುಕೊಂಡಿದ್ದರು; ಆದರೆ ಕಾವ್ಯ ಲೋಕದ ಮಾಯಾವಿ ಸಾಹಿರ್ ಲುಧಿಯಾನ್ವಿಯನ್ನು ಗಾಢವಾಗಿ ಪ್ರೇಮಿಸಿದ್ದರು. ಅಮೃತಾ ಮತ್ತು ಸಾರಾ ಮದುವೆಯ ವಿಷಯದಲ್ಲಿ ಸಮಾನ ದುಃಖಿಗಳಾಗಿದ್ದಾರೆ. ಅಮೃತಾ ಮತ್ತು ಸಾರಾ-ಇಬ್ಬರೂ ತಮ್ಮ ಆಳದ ನೋವುಗಳಿಗೆ ಕಾವ್ಯದ ರೂಪವನ್ನು ನೀಡಿದವರು; ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವನ್ನು ಪ್ರತಿರೋಧಿಸಿದವರು. ನಂತರದಲ್ಲಿ ಅಮೃತಾರ ಬಾಳ ಸಂಗಾತಿಯಾಗಿ ಕಲಾವಿದ ಇಮ್ರೋಜ್ ಬಂದರು. ಆದರೆ ಸಾರಾಳ ಬದುಕಿನಲ್ಲಿ ಇಮ್ರೋಜ್‍ನಂತಹ ಉದಾತ್ತ ವ್ಯಕ್ತಿತ್ವದವರೊಬ್ಬರು ಬಾಳ ಸಂಗಾತಿಯಾಗಿ ಬರಲಿಲ್ಲ.

ಸಾರಾ ಶಗುಫ್ತಾಗೆ ನಾಲ್ಕು ಸಂಗತಿಗಳಿಂದ ನಿಷೇಧಗಳು ವ್ಯಕ್ತವಾಗಿವೆ. 1. ಲಿಂಗ ತಾರಮ್ಯತೆಯ ಕಾರಣಕ್ಕಾಗಿಯೇ ಸಾರಾಳ ಜೀವನ ದುಸ್ತರವಾಯಿತು. ಇದರಲ್ಲಿ ಗಂಡು ಹೆಣ್ಣೆಂಬ ಭೇದಭಾವವಿಲ್ಲದೇ ಎಲ್ಲರೂ ಭಾಗಿಗಳಾಗಿದ್ದಾರೆ. 2. ಹೆಣ್ಣನ್ನು ಅಧೀನದಲ್ಲಿಟ್ಟುಕೊಳ್ಳುವುದರಲ್ಲಿ ವೈವಾಹಿಕ ಸಂಸ್ಥೆಯು ಪ್ರಧಾನ ಅಸ್ತ್ರವಾಗಿದೆ. ಪುರುಷರ ಲೈಂಗಿಕ ಯಜಮಾನಿಕೆಯು ಮಹಿಳೆಯರ ದೇಹದ ಮೇಲೆ ಅಧಿಪತ್ಯವನ್ನು ಸಾಧಿಸುತ್ತದೆ. 3. ಸಾಮಾಜಿಕ ನಿಂದನೆಗಳು ಮಹಿಳೆಯ ಆಂತರಿಕ ಚೈತನ್ಯವನ್ನು ಕುಗ್ಗಿಸುತ್ತವೆ. ಇದರಿಂದಾಗುವ ಅವಮಾನವು ಮಹಿಳೆಯ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. 4. ಧಾರ್ಮಿಕ ಕಟ್ಟುಪಾಡುಗಳು ಮಹಿಳೆಯನ್ನು ಯಥಾಸ್ಥಿತಿವಾದಕ್ಕೆ ಕಟ್ಟಿ ಹಾಕುತ್ತವೆ. ಇಂತಹ ಸ್ಥಾಪಿತ ಮೌಲ್ಯಗಳಿಂದ ಚಲನಶೀಲತೆ ಸಾಧ್ಯವಾಗುವುದಿಲ್ಲ. ಹೆಣ್ಣನ್ನು ‘ಅನ್ಯ’ಳನ್ನಾಗಿಯೇ ನೋಡುವುದರಿಂದ ಇಂತಹ ದಮನಗಳು ನಿರಂತರವಾಗಿರುತ್ತದೆ. ಸಮಾನತೆ, ಸ್ವಾತಂತ್ರ್ಯ, ಗೌರವಯುತ ಜೀವನ ನಡೆಸುವ ಹಕ್ಕುಗಳಿಂದಷ್ಟೇ ಮಹಿಳೆಯ ವ್ಯಕ್ತಿತ್ವ ಅರಳಬಲ್ಲದು.

ಸಾರಾ ನಾಲ್ಕಾರು ಸಲ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಳು. ಆಕೆ ಮಾನಸಿಕ ಅಸ್ವಸ್ಥೆಯೆಂದು ಪದೇ ಪದೇ ಹುಚ್ಚಾಸ್ಪತ್ರೆಗೆ ಸೇರಿಸಲಾಗುತ್ತದೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಆಕೆ ಆಸ್ಪತ್ರೆಯಲ್ಲಿದ್ದಾಗ ಅಲ್ಲಿಯ ಮಹಿಳಾ ಒಳರೋಗಿಗಳ ಬಗ್ಗೆಯು ಅಂತಃಕರಣದಿಂದ ಬರೆದಿದ್ದಾಳೆ. ಸಾರಾಳ ಲೇಖನಿಯು ಸಾಯುವ ದಿನದವರೆಗೂ ದೀಪದಂತೆ ಬೆಳಗುತ್ತಲೇ ಇತ್ತು. ಆಕೆಯ ಆತ್ಮಹತ್ಯೆಯು ಬರಿ ಆಕೆಯಿಂದಷ್ಟೇ ಆಗಿದ್ದಲ್ಲ. ಅದರಲ್ಲಿ ಈ ಸಮಾಜದ ನೂರಾರು ಕೈಗಳ ಪಾಲಿದೆ. ಇದನ್ನು ಕುರಿತು ಅಮೃತಾ ಪ್ರೀತಂ “ಸಾರಾ ಜಾರಿ ಬಿದ್ದ ಒಂದು ವರ. ಆದರೆ ಅವಳು ಪುರುಷರ ಕೈಗಳಿಂದ ಬೀಳಿಸಲ್ಪಟ್ಟವಳು. ಅವಳು ಒಂದೋ ಅವಳ ಗಂಡಂದಿರು ಇಲ್ಲವೆ ಅವಳ ಕವನಗಳ ವಿಮರ್ಶಕರು. ಅವಳು ಅವರ ಕೈಗಳಿಂದ ಮಣ್ಣಗೂಡಿಸಲ್ಪಟ್ಟ ಪ್ರಾರ್ಥನೆ. ಯಾವುದಾದರೂ ಕಳಚಿ ಬಿದ್ದಿದ್ದರೆ ಅದು ದೇವರು ಮತ್ತು ಮನುಷ್ಯನ ನಡುವಿನ ಸಂಬಂಧ” ಎಂದಿದ್ದಾರೆ. ಸಾರಾಳ ಆತ್ಮಹತ್ಯೆಯ ನಂತರದಲ್ಲಿ ಆಕೆಯ ಸ್ನೇಹಿತರಾಗಿದ್ದ ಸೈಯದ್ ‘ಸಾರಾ ಅಕಾಡೆಮಿ’ಯನ್ನು ಸ್ಥಾಪಿಸಿದ್ದಾರೆ. ಇಂದು ಸಾರಾ ಇಲ್ಲದಿರಬಹದು; ಆದರೆ ಸಾರಾಳ ಕಾವ್ಯವು ಜೀವಂತವಾಗಿದೆ.

ಸುಭಾಷ್ ರಾಜಮಾನೆ: ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಅವರು ಮೂಲತಃ ಬೆಳಗಾವಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಮರ್ಶೆಯಲ್ಲಿ ಜಾತಿ ಆಯಾಮಗಳ ಕುರಿತು ಅಧ್ಯಯನ ನಡೆಸಿ ಪಿಎಚ್‌.ಡಿ.ಪದವಿ ಗಳಿಸಿದ್ದಾರೆ. ಕನ್ನಡ, ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಗಳನ್ನು ಬಲ್ಲ ಸುಭಾಷ್ ಅವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ.

ಇದನ್ನು ಓದಿ: NRC ಕೊಟ್ಟ ನೋವುಗಳ ಗುಚ್ಛ : ‘ನಾಯ್ಸ್ ಆಫ್ ಸೈಲೆನ್ಸ್’ ಚಿತ್ರ ಬಿಡುಗಡೆಗೆ ಸಿದ್ಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...