90ರ ದಶಕದಿಂದ 2012ರತನಕದ್ದು ಭಾರತದ ಜಿಡಿಪಿಯ ಮೇಲೇರುತ್ತಿದ್ದ ಸಮಯ, ಆಗ ಮೆಕ್ಸಿಕೋದಲ್ಲಿ ನಾನು ಕೇಳಿದ ಕಥೆಯೊಂದು ಪದೇ ಪದೇ ನೆನಪಾಗುತ್ತಿತ್ತು. ಚಿಲಿಯಲ್ಲಿ (1973) ಬಲಪಂಥೀಯ ಶಕ್ತಿಗಳು ಅಧಿಕಾರಕ್ಕೆ ಬಂದ ನಂತರ ಲ್ಯಾಟಿನ್ ಅಮೇರಿಕದ ಬಹುತೇಕ ದೇಶಗಳಲ್ಲಿ ಅಮೆರಿಕದ ಸಿಐಎ ತಾಳಕ್ಕೆ ತಕ್ಕಂತೆ ಕುಣಿಯುವ ಮಿಲಿಟರಿ ಸರ್ವಾಧಿಕಾರಿಗಳು ರಾಜ್ಯಭಾರ ಮಾಡುತ್ತಿದ್ದಾಗ ನಡೆದ ಕಥೆ. ಅಂತಹ ಒಬ್ಬ ಮಿಲಿಟರಿ ಸರ್ವಾಧಿಕಾರಿಯು ವರದಿಯೊಪ್ಪಿಸುವ ಕ್ರಮವಾಗಿ ತನ್ನ ನಿಯಮಿತ ಅಮೆರಿಕ ಪ್ರವಾಸದಲ್ಲಿದ್ದಾಗ, ಅಮೆರಿಕದ ಅಧ್ಯಕ್ಷ ಆ ದೇಶದ ಪರಿಸ್ಥಿತಿಯ ಬಗ್ಗೆ ವಿಚಾರಿಸಿದನಂತೆ, ಆಗ ಅವನ ಉತ್ತರ ಹೀಗಿತ್ತು, “ಆರ್ಥಿಕತೆ ಚೆನ್ನಾಗಿಯೇ ಇದೆ ಆದರೆ ಜನರು ಚೆನ್ನಾಗಿಲ್ಲ.” ಈ ಹೇಳಿಕೆ, ಭಾರತದ ದೊಡ್ಡ ಮಟ್ಟದ ಆರ್ಥಿಕತೆಯ ಅಭಿವೃದ್ಧಿಯ ಬಗ್ಗೆಯೂ ಅನ್ವಯವಾಗುತ್ತದೆ. ಆ ಆರ್ಥಿಕ ಬೆಳವಣಿಗೆಯ ಸಮಯದಲ್ಲಿ, ಭಾರತದ ಆರ್ಥಿಕತೆ ಅಂದರೆ ಜಿಡಿಪಿಯು ಶೇಕಡಾ 7 ರ ದರದಲ್ಲಿದ್ದು, ವಿಶ್ವದ ಸರಾಸರಿಗಿಂತ ದುಪ್ಪಟ್ಟಾಗಿತ್ತು. ಅದೇ ಸಮಯದಲ್ಲಿ ಅಧಿಕೃತ ಅಂಕಿಅಂಶಗಳ ಪ್ರಕಾರವೇ ಭಾರತದ ಉದ್ಯೋಗದ ದರದ ಬೆಳವಣಿಗೆ ಶೇಕಡಾ 1 ಕ್ಕಿಂತ ಕಡಿಮೆಯಿತ್ತು. ಉದಾರೀಕರಣಕ್ಕಿಂತ ಮುಂಚೆಯ ಸಮಯದಲ್ಲಿ (1991 ಕ್ಕಿಂತ ಮುಂಚೆ) ಜಿಡಿಪಿ ಅಭಿವೃದ್ಧಿ ದರವು ಅರ್ಧದಷ್ಟಿದ್ದಾಗ(3.5-4) ಉದ್ಯೋಗ ದರದ ಬೆಳವಣಿಗೆ 2% ಇತ್ತು. ಅಂದರೆ, ಉದಾರೀಕರಣದ ಸಮಯದ ಸರಾಸರಿಗಿಂತ ದುಪ್ಪಟ್ಟು.

ಉದಾರೀಕರಣದ ಅವಧಿಗೆ ಮುನ್ನ, ಉದ್ಯೋಗಸೃಷ್ಟಿ, ಉದ್ಯೋಗ ದರ(ನಿರುದ್ಯೋಗ ದರ)ಗಳನ್ನು ಉತ್ಪಾದನಾ ವೃದ್ಧಿಯ ದರದೊಂದಿಗೆ ತಾಳೆ ಮಾಡಲಾಗುತ್ತಿತ್ತು ಆದರೆ, ಉದಾರೀಕರಣದ ನಂತರ ಸಮಯದಲ್ಲಿ ಉದ್ಯೋಗಸೃಷ್ಟಿ, ಉದ್ಯೋಗ ದರಗಳನ್ನು ಉತ್ಪಾದನಾ ದರದೊಂದಿಗೆ ತಳುಕುಹಾಕುವುದನ್ನು ಕೈಬಿಡಲಾಗಿದೆ. ಏಕೆಂದರೆ, ಯಾಂತ್ರೀಕರಣದ ಕಾರಣದಿಂದ ಪ್ರತಿ ಒಬ್ಬ ಉದ್ಯೋಗಿಯಿಂದ ಹೊರಬರುವ ಉತ್ಪಾದನೆಯು ತೀವ್ರವಾಗಿ ಹೆಚ್ಚುತ್ತದೆ. ಹಾಗೂ, ಕೈಗಾರೀಕರಣದ ಈ ಮಾದರಿಯು ಸಂಘಟಿತ ವಲಯದಲ್ಲಿ ಎಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತೋ, ಅದಕ್ಕಿಂತ ಹೆಚ್ಚು ಗ್ರಾಮೀಣ ಬಡಜನರ ಜೀವನೋಪಾಯಗಳನ್ನು ನಾಶಗೊಳಿಸುತ್ತದೆ. ಜಾಗತೀಕರಣದ ಅಡಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನಡೆಸಬೇಕು ಎಂಬ ಮನಸ್ಥಿತಿಯು ಇಂತಹ ಅನಿವಾರ್ಯಗಳಿಗೆ ಎಡೆಮಾಡಿಕೊಡುತ್ತದೆ. ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುವ ಸಮಯದಲ್ಲಿಯೇ ಆಯಾ ಕೈಗಾರಿಕೆಗಳ ಉತ್ಪಾದನೆ ಹೆಚ್ಚುವುದನ್ನು ಈ ಹಂತದಲ್ಲಿ ಅನೇಕ ಕಾರ್ಪೋರೇಟ್ ವಲಯದಲ್ಲಿ ಆಗಿದ್ದನ್ನು ಕಂಡಿದ್ದೇವೆ.

photo courtesy: Edexlive

ವ್ಯಾಪಾರದ ಮತ್ತು ವಿದೇಶಿ ವಿನಿಮಯ ನಿಯಂತ್ರಣದ ಉದಾರೀಕರಣದಿಂದ ವಿದೇಶಿ ವಸ್ತುಗಳಿಗೆ ಸುಲಭ ಅವಕಾಶ ದೊರೆಯಿತು, ಇದರಿಂದ ಭಾರತದ ಮಧ್ಯಮ ವರ್ಗವು ಸಂತುಷ್ಟವಾಯಿತು. ಹಾಗೂ ‘ಪೊಲೀಸ್ – ಇನ್ಸ್ಪೆಕ್ಟರ್ ರಾಜ್’ನ ಉಸಿರುಕಟ್ಟುವ ನಿಯಂತ್ರಣಗಳನ್ನು ಕಿತ್ತುಹಾಕುವ ಬೆಳವಣಿಗೆಯನ್ನು ಜನರು ಮತ್ತು ವ್ಯಾಪಾರಿಗಳಿಬ್ಬರೂ ಸ್ವಾಗತಿಸಿದರು. ಕೈಗಾರಿಕೋದ್ಯಮಿಗಳೂ ಸಂತುಷ್ಟರಾದರು, ಏಕೆಂದರೆ, ಉದಾರೀಕರಣದದಿಂದ ಕೈಗಾರೀಕರಣದ ಉಸ್ತುವಾರಿಯನ್ನು ಅವರ ಕೈಯಲ್ಲೇ ಇರಿಸಲಾಗಿತ್ತು; ಅವರಿಗೆ ಭೂಮಿ, ಜಲಪ್ರದೇಶ, ನದಿಗಳು, ಪರ್ವತಗಳು, ಅರಣ್ಯಪ್ರದೇಶಗಳು ಹಾಗೂ ಸಮುದ್ರತೀರಗಳನ್ನು ಧಾರೆಯೆರೆದು(ಹೆಚ್ಚುಕಡಿಮೆ ಉಚಿತವಾಗಿಯೇ) ಕೊಡಲಾಗಿತ್ತು. ಅದರಿಂದ ಲಕ್ಷಾಂತರ ಜನರ ಹೊಟ್ಟೆಪಾಡನ್ನು ಕಸಿದುಕೊಂಡಂತಾಯಿತು, ಅದರಲ್ಲಿ ಆದಿವಾಸಿ ಮತ್ತು ದಲಿತರ ಪ್ರಮಾಣವೇ ಹೆಚ್ಚು. ನನ್ನ ವೈಯಕ್ತಿಕ ಅಂದಾಜಿನ ಲೆಕ್ಕ ಸೂಚಿಸುವುದೇನೆಂದರೆ, ಸ್ಥಳಾಂತರಗೊಳ್ಳುವ, ಹೊಟ್ಟೆಪಾಡನ್ನು ಕಳೆದುಕೊಳ್ಳುವ ಸಂಭವನೀಯತೆಯು ಆದಿವಾಸಿ ಮತ್ತು ದಲಿತ ಸಮುದಾಯದವರಿಗೆ ಮೂರು ಪಟ್ಟು ಹೆಚ್ಚಾಗಿದೆ. ಅದೇನೇ ಇದ್ದರೂ, ಆರ್ಥಿಕವೃದ್ಧಿಯನ್ನು ಹೆಚ್ಚಿಸಿಕೊಳ್ಳುತ್ತಾ ಅತಿದೊಡ್ಡ ಕಾರ್ಪೊರೇಟ್ ವಲಯವು ಬೆಳೆಯುತ್ತಿದ್ದಾಗ ಮಾಧ್ಯಮಗಳು ಅದನ್ನು ಹುರಿದುಂಬಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದವು. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದು ಉಲ್ಲೇಖಿಸಿದ್ದು ಇಲ್ಲವೇ ಇಲ ಎನ್ನುವಷ್ಟು ಕಡಿಮೆ, ಆದರೆ ತಜ್ಞರೆಲ್ಲಾ ಕಡುಬಡತನವು ಹೇಗೆ ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬುದರ ಚರ್ಚೆಯಲ್ಲಿ ತೊಡಗಿದ್ದರು.

ಈಗ ಆಗಿರುವುದೇನೆಂದರೆ, ಆರ್ಥಿಕತೆಯು ಕುಸಿಯುತ್ತಲೇ ಇದೆ, ಮತ್ತು ಈ ಪ್ರಕ್ರಿಯೆ ನಿಲ್ಲುವ ಲಕ್ಷಣಗಳೂ ಕಾಣುತ್ತಿಲ್ಲ. ಆರ್ಥಿಕತೆ ಚೆನ್ನಾಗಿದೆ ಎಂದು ಹೇಳುವ ಧೈರ್ಯ ಸರಕಾರಕ್ಕೆ ಕೂಡ ಇಲ್ಲ. ಅದರ ಬದಲಿಗೆ ಸರಕಾರ ಮಾಡುತ್ತಿರುವುದೇನೆಂದರೆ ಇಳಿಮುಖದ ಅಧಿಕೃತ ಅಂಕಿಅಂಶಗಳನ್ನು ಹೇಗಾದರೂ ನಿಗ್ರಹಿಸಿ ಅಥವಾ ಹೊಸ ಅಧಿಕೃತ ಅಂಶಗಳನ್ನು ಉತ್ಪಾದಿಸಿ, ಮಾರಿಕೊಂಡ ಮಾಧ್ಯಮಗಳಲ್ಲಿ ತಮಗೆ ಬೇಕಿರುವ ಸುದ್ದಿಗಳನ್ನು ತೂರಿಸಿ, ಆರ್ಥಿಕತೆಗೆ ಆಗಿರುವ ಹೊಡೆತವನ್ನು ಯಾವ ಪೆಟ್ಟೂ ಆಗಿಲ್ಲವೆಂಬಂತೆ ಬಿಂಬಿಸುವುದು. ಅಸಂಘಟಿತ ವಲಯದಲ್ಲಿರುವ ಬಡವರು, ಅದರಲ್ಲೂ ದಿನಗೂಲಿ ಮಾಡಿ ಹೊಟ್ಟೆಪಾಡು ನಡೆಸುತ್ತಿದ್ದ ಹೆಚ್ಚಿನವರಿಗೆ ಮೊದಲ ಆಘಾತ ದಿಢೀರ್ ಆಗಿ ಬಂದ ನೋಟುರದ್ದತಿಯದ್ದಾಗಿತ್ತು. ಅವರ ಸಂಪಾದನೆ ಕುಸಿದುಹೋಯಿತು, ಮಾರುಕಟ್ಟೆಯಿಂದ ಕೊಂಡುಕೊಳ್ಳುವ ಶಕ್ತಿ ದಿಢೀರನೇ ಕಾಣೆಯಾಯಿತು. ನೋಟುರದ್ದತಿಯಿಂದ ಕಪ್ಪುಹಣವನ್ನು ನಿರ್ಮೂಲನೆ ಮಾಡಬಹುದು ಎಂಬುದು ಮತ್ತು ಕಪ್ಪುಹಣವನ್ನು ರಿಕವರಿ ಮಾಡಿ ಎಲ್ಲರ ಖಾತೆಗಳಲ್ಲಿ ಹದಿನೈದು ಲಕ್ಷ ರೂಪಾಯಿಗಳನ್ನು ಹಾಕಲಾಗುವುದು ಎಂಬ ಚುನಾವಣಾಪೂರ್ವ ಆಶ್ವಾಸನೆಯು ಜನತೆಗೆ ಮಾಡಿದ ಒಂದು ಕ್ರೂರ ತಮಾಷೆ ಎಂದು ತಿಳಿಯಲು ಹೆಚ್ಚು ಕಾಲ ಬೇಕಾಗಲಿಲ್ಲ. ಹಾಗಾಗಿ, ಅದೊಂದು ಭರವಸೆಯಾಗಿರಲಿಲ್ಲ, ಅದೊಂದು ಚುನಾವಣಾ ಗಿಮಿಕ್ (ಜುಮ್ಲಾ) ಎಂದು ಗೃಹಸಚಿವರೇ ಹೇಳಬೇಕಾಯಿತು. ಬಡವರಿಗಾಗಿ ಸರಕಾರವು ಎಂತೆಂತಹ ಶ್ರೇಷ್ಠ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎರಡು ದಿನಕ್ಕೊಮ್ಮೆ ಘೋಷಣೆಗಳನ್ನು ಮಾಡುತ್ತ ತಮ್ಮ ಇಂತಹ ಕ್ರೂರ ಜೋಕುಗಳನ್ನು ಮುಂದುವರೆಯುತ್ತಲೇ ಇದ್ದಾರೆ. ಒಂದರ್ಥದಲ್ಲಿ ಇಂತಹ ಕ್ರೂರ ಮತ್ತು ಸುಳ್ಳು ಆಶ್ವಾಸನೆಗಳೇ ಈ ಸರಕಾರದ ಲಕ್ಷಣಗಳಾಗಿವೆ. ತಳಮಟ್ಟದ ವರದಿ ಮಾಡಿ, ಈ ಭರವಸೆಗಳನ್ನು ಪ್ರಶ್ನಿಸುವ ವರದಿಗಾರರನ್ನು ಕಡೆಗಣಿಸಲಾಗುತ್ತಿದೆ. ಈಡೇರಿಸಲಾಗದ ಭರವಸೆಗಳ ಆಧಾರದ ಮೇಲೆ, ದೇಶ ಕಟ್ಟುವ ಈ ಒಂದು ಭವ್ಯ ಕಥನವನ್ನು ಪ್ರಶ್ನಿಸಿ ಬರೆಯುವವರನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿದೆ. ಅವರನ್ನು ಕೆಲಸದಿಂದ ವಜಾಗೊಳಿಸಲಾಗುತ್ತಿದೆ. ಉದಾಹಣೆಗೆ, ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆಗಳು ಕೊನೆಗೆ ಮೂಡಿಸಿದ ಅಘೋರ ಫಲಿತಾಂಶಗಳನ್ನು ತನಿಖೆ ಮಾಡಿ ವರದಿ ಮಾಡಿದ ಪತ್ರಕರ್ತರೊಬ್ಬರು ತನ್ನ ಕೆಲಸವನ್ನೇ ಕಳೆದುಕೊಂಡರು. ಇನ್ನುಳಿದ ನಮ್ಮಂತಹ ಪತ್ರಕರ್ತರು ಹೀರೋಗಳಾಗಬೇಕಿಲ್ಲ ಬದಲಿಗೆ ವಿವೇಕಯುತ ಪ್ರಾಮಾಣಿಕರಾಗಿದ್ದರೆ ಸಾಕು. ದಿನಕಳೆದಂತೆ, ಇದನ್ನು ಮಾಡುವುದು ಕಷ್ಟವಾಗುತ್ತಿದೆ, ನಮ್ಮಲ್ಲಿ ಅನೇಕರಿಗೆ ಯಾವ ರೀತಿ ಪತ್ರಿಕೋದ್ಯಮ ಮಾಡಿದರೆ ಲಾಭ ಆಗುತ್ತೆ, ಅದಕ್ಕೆ ಏನೇನು ಮಾಡಬೇಕು ಎಂಬುದನ್ನು ಪತ್ತೆ ಹಚ್ಚಿ, ಅದರಂತೆ ನಡೆದುಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ಅಂದರೆ ಬೆಣ್ಣೆ ಯಾವಕಡೆ ಇದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ, ಹೆಚ್ಚಿನ ಬೆಣ್ಣೆ ಆಫರ್ ಮಾಡಿರುವುದು ಸರಕಾರ ಹಾಗೂ ಹೆಚ್ಚಿನ ಮಾಧ್ಯಮಗಳ ಒಡೆತನ ಹೊಂದಿರುವ ಕಾರ್ಪೋರೇಷನ್‍ಗಳು. ಆದರೆ ಆಯಾ ಸುದ್ದಿವಾಹಿನಿಗಳು ಅವರು ತೋರಿಸಿದ ಸಾಲಿನಲ್ಲಿ ಬಂದು ನಿಂತರೆ ಮಾತ್ರ ಆ ಬೆಣ್ಣೆಗೆ ಅವರು ಅರ್ಹರಾಗುವರು. ಇದರ ಪರಿಣಾಮವಾಗಿ ಆಗಿದ್ದೇನೆಂದರೆ,

ಚೀನಾ, ಪಾಕಿಸ್ತಾನ್, ಅರ್ಬನ್ ನಕ್ಸಲ್, ಜೆಎನ್‍ಯು ವಿದ್ಯಾರ್ಥಿಗಳು, ಸಿಎಎ ವಿರೋಧಿಗಳು, ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಭಿನ್ನಮತ ಹೊಂದಿರುವ ಯಾರೇ ಆಗಿರಲಿ ಅವರಿಂದ ನಮ್ಮ ರಾಷ್ಟ್ರೀಯತೆಗೆ ಅಪಾಯ ಎಂಬ ವಿಮರ್ಶೆಯಿಲ್ಲದ ಸರಕಾರಿ ಆವೃತ್ತಿಯನ್ನು ಗಟ್ಟಿಯಾಗಿ ಪದೇ ಪದೇ ಹೇಳುತ್ತಲೇ ಇರುವುದು. ಅದೇ ಸಮಯದಲ್ಲಿ ಈ ವಿಧೇಯ ವಾಹಿನಿಗಳು ದೇಶದ ಸೌಹಾರ್ದತೆಗೆ ರಾಮಮಂದಿರ ಹೇಗೆ ಅವಶ್ಯಕ ಹಾಗೂ ರಾಷ್ಟ್ರೀಯ ಸುರಕ್ಷತೆಗೆ ರಫೇಲ್ ಜೆಟ್‍ಗಳು ಹೇಗೆ ಅವಶ್ಯಕ ಎಂಬುದನ್ನೂ ಸಾರಿ ಸಾರಿ ಹೇಳಬೇಕಾಗುತ್ತದೆ. ಅದರೊಂದಿಗೆ, ಹೆಚ್ಚುತ್ತಿರುವ ನಿರುದ್ಯೋಗ, ಕೆಲವೇ ಕೆಲವು ವ್ಯಕ್ತಿಗಳಿಂದ ಬ್ಯಾಂಕುಗಳ ಲೂಟಿ ಆಗಿದ್ದು, ಲೂಟಿಮಾಡಿ ಓಡಿಹೋಗಿದ್ದು, ಗುತ್ತಿಗೆದಾರರು ಮತ್ತು ಕೈಗಾರಿಕೋದ್ಯಮಗಳಿಂದ ಉದ್ದೇಶಪೂರ್ವಕವಾಗಿ ಮಾಡಿದ ಪರಿಸರ ನಾಶ ಮತ್ತಿತರ ಅನಾನುಕೂಲ ಸುದ್ದಿಗಳ ಬಗ್ಗೆ ಮೌನ ವಹಿಸಲೂಬೇಕಾಗುತ್ತದೆ. ನಮ್ಮ ಮಾಧ್ಯಮದಲ್ಲಿಯ ಅನೇಕರು ಅತ್ಯಂತ ಉತ್ಸಾಹಿ ಕಲಿಕಾ ಅಭ್ಯರ್ಥಿಗಳಾಗಿದ್ದು, ಸತ್ಯವನ್ನು ಕೈಬಿಡುವ(ಒಮಿಷನ್) ಮತ್ತು ತಮ್ಮ ಅನುಕೂಲಕ್ಕೆ ತಕ್ಕ ಅರ್ಧಸತ್ಯಗಳನ್ನು ಹೇಳುವ (ಕಮಿಷನ್) ಪಾಪಗಳನ್ನು ಮಾಡುವಲ್ಲಿ ನಿಪುಣರಾಗಿಬಿಟ್ಟಿದ್ದಾರೆ.

ಇದನ್ನೂ ಓದಿ: ಪ್ರಧಾನಿ ವಿರುದ್ಧ ಹೆಚ್ಚಿದ ಆಕ್ರೋಶ: ಉದ್ಯೋಗಕ್ಕಾಗಿ ತಟ್ಟೆ, ಲೋಟ ಬಡಿಯುತ್ತಿರುವ ಯುವಸಮೂಹ!

ಕೇಂದ್ರ ಸರಕಾರವು ಟ್ರಂಪ್‍ಗೆ ಆತಿಥ್ಯ ನೀಡುವುದರಲ್ಲಿ, ಪೌರತ್ವ ಕಾಯಿದೆ ತಿದ್ದುಪಡಿ ಮಾಡುವುದರಲ್ಲಿ ಹಾಗೂ ರಾಜ್ಯಗಳಲ್ಲಿ ವಿರೋಧಪಕ್ಷದ ಸರಕಾರಗಳನ್ನು ಉರುಳಿಸುವಲ್ಲಿಯೇ ಮಾರ್ಚ್‍ತನಕ ವ್ಯಸ್ತವಾಗಿತ್ತು, ಅದೇ ಸಮಯದಲ್ಲಿ ಸಾಂಕ್ರಾಮಿಕ ರೋಗವೊಂದು ಬಾಗಿಲು ತಟ್ಟುತ್ತಿತ್ತು. ಕೇರಳ ಒಂದನ್ನು ಬಿಟ್ಟರೆ ಬೇರೆ ಯಾವ ರಾಜ್ಯಗಳು ಲಕ್ಷ್ಯ ನೀಡಲಿಲ್ಲ.

ಆಗ ಬಂದಿದ್ದು ನೋಟುರದ್ದತಿಯ ಬಂದ ಹಾಗೆ ಒಂದು ದಿಢೀರ್ ಘೋಷಣೆ; ಕೆಲವೇ ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಮಾಡಬೇಕೆಂಬ ಘೋಷಣೆ. ಈಡೇರಿಸದ ಭರವಸೆಗಳ ಮಾಹಾಪೂರ ಬೆಳೆಯುತ್ತಿರುವಂತೆಯೇ ದಿಢೀರ್ ಘೋಷಣೆಗಳು ಕೂಡ ನಮ್ಮನ್ನು ಆಳುತ್ತಿರುವ ಸರಕಾರದ ಶೈಲಿ ಎನ್ನಬಹುದು.

photo courtesy: The spectator Australia

ಲಾಕ್‍ಡೌನ್‍ನ ಆ ಹಠಾತ್ತತೆಯು ಆರ್ಥಿಕತೆಯನ್ನು ಗಿರಕಿ ಹೊಡೆಯುವಂತೆ ಮಾಡಿದೆ. ಈಗ ಪ್ರಶ್ನೆಯು ನಿಧಾನಗತಿಯ ಬೆಳವಣಿಗೆಯದ್ದಲ್ಲ, ಆರ್ಥಿಕ ವೃದ್ಧಿಯು ನಿಂತುಬಿಡುವ ಪ್ರಶ್ನೆಯೂ ಇಲ್ಲ, ಈಗ ಇರುವ ಪ್ರಶ್ನೆ, ಆರ್ಥಿಕತೆ ಎಷ್ಟು ಪಾತಾಳಕ್ಕೆ ಕುಸಿಯಲಿದೆ ಎಂಬುದು. ವಲಸೆ ಕಾರ್ಮಿಕರು ಎಂದು ಕರೆಯಲಾಗುವ ಜನರು ಮೊದಲು ಗೋಚರಿಸಿದ ಈ ಹಠಾತ್ ಕ್ರಮದ ಬಲಿಪಶುಗಳು. ಆರ್ಥಿಕತೆಯ ಸಂಘಟಿತ ಭಾಗದಲ್ಲಿ ನಿಯಮಿತ ಉದ್ಯೋಗಗಳ ಒಟ್ಟಾರೆ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿತು, ನಿಯಮಿತ ವೇತನಪಡೆಯುವ ಉದ್ಯೋಗಗಳಲ್ಲಿ ಇಂತಹ ಅತಿದೊಡ್ಡ ಕಡಿತ ಹಿಂದೆಂದೂ ಕಂಡುಬಂದಿರಲಿಲ್ಲ ಎಂದು ಇತ್ತೀಚಿನ ಅಂಕಿಅಂಶಗಳು ಹೇಳುತ್ತಿವೆ. ಇದು ದೇಶದ ಮಧ್ಯಮವರ್ಗಕ್ಕೆ ದೊಡ್ಡ ಪೆಟ್ಟು ನೀಡಿದೆ. ಕೆಲವೊಮ್ಮೆ ಬಹಿರಂಗವಾಗಿ ಕಾಣಿಸಿಕೊಳ್ಳುವ ಮತ್ತೆ ಕೆಲವೊಮ್ಮೆ ಮರೆಮಾಚಿಕೊಂಡಿರುವ, ಬೃಹತ್ ಆಗಿ ಬೆಳೆದಿರುವ ಮತ್ತು ಹೆಚುತ್ತಲೇ ಇರುವ ನಿರುದ್ಯೋಗವು ಬಡಜನರ ಮೇಲೆ ಪ್ರಹಾರ ಮಾಡುತ್ತಲೇ ಇರುವಾಗ, ಲಾಕ್‍ಡೌನ್ ಅನ್ನು ಸಡಿಲಗೊಳಿಸುತ್ತಿರುವ ಕಾರಣದಿಂದ ಕೆಲವು ಕುತೂಹಲಕಾರಿ ಅಂಶಗಳೂ ಹೊರಬರುತ್ತಿವೆ; ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅನೌಪಚಾರಿಕ ಮತ್ತು ಅರೆಔಪಚಾರಿಕ ಆರ್ಥಿಕತೆಯಲ್ಲಿ ಕೆಲವು ಉದ್ಯೋಗಗಳು ಮರಳುತ್ತಿವೆ. ಕೆಲವು ಅತ್ಯಂತ ಸರಳ ವಿವರಣೆಗಳನ್ನು ನುರಿತ ತಜ್ಞರು ಸಾಮಾನ್ಯವಾಗಿ ಕೊನೆಯಲ್ಲೇ ಹೇಳುತ್ತಾರೆ. ತಮ್ಮ ಎಲ್ಲಾ ಉಳಿತಾಯವನ್ನು ಲಾಕ್‍ಡೌನ್‍ನಲ್ಲಿ ಬಳಸಿ ಮುಗಿಸಿದ ಈ ಉದ್ದಿಮೆಗಳಿಗೆ ಇನ್ನು ಮುಂದೆ ಕೆಲಸ ಶುರು ಮಾಡದೇ ಬೇರೆ ದಾರಿಯಿಲ್ಲ; ದಿನಗೂಲಿ ಕಾರ್ಮಿಕರಿಗೆ ಏನಾದರೊಂದು ಕೆಲಸ ಮಾಡಿ ದುಡಿಯುವ ಪ್ರಯತ್ನ ಮಾಡದಿದ್ದರೆ ಉಳಿಗಾಲವಿಲ್ಲ. ಬಡವರಿಗೆ ನಿರುದ್ಯೋಗಿಯಾಗಿರುವ ಅವಕಾಶ ಎಂದಿಗೂ ಇರುವುದಿಲ್ಲ. ಹಾಗಾಗಿಯೇ ಈ ವರ್ಗದಲ್ಲಿ ನಿರುದ್ಯೋಗ ದರವು ಅಸಂಬದ್ಧ ಎಂಬಂತೆ ಅತ್ಯಂತ ಕಡಿಮೆ ಇದೆ. ಭಾರತಕ್ಕೆ ಸಂಬಂಧಿಸಿದ ಈ ಒಂದು ಅಂಕಿಅಂಶದ ಮಾಹಿತಿ ನನಗೆ ನೆನಪಾಗುತ್ತಿದೆ; ಅತ್ಯಂತ ಕಡಿಮೆ ಶಿಕ್ಷಣ ಪಡೆದ ಭೂರಹಿತ ಜನರಲ್ಲಿ ನಿರುದ್ಯೋಗ ದರ ಅತ್ಯಂತ ಕಡಿಮೆ ಇದ್ದು, 12ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರುವವರಲ್ಲಿ ನಿರುದ್ಯೋಗ ದರ ಅತ್ಯಂತ ಹೆಚ್ಚಿರುತ್ತದೆ. ಇದು ಅಮೇರಿಕದ ಇರುವ ಪರಿಸ್ಥಿತಿಗೆ ತದ್ವಿರುದ್ಧ. ಇದಕ್ಕೆ ಕಾರಣ, ಭಾರತದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಹೊಂದಿದವರು ಸಾಮಾನ್ಯವಾಗಿ ಹೆಚ್ಚಿನ ಆದಾಯ ವರ್ಗದಿಂದ ಬಂದಿರುವವರಾಗಿರುತ್ತಾರೆ ಹಾಗೂ ತಮಗೆ ಸೂಕ್ತವೆನಿಸುವ ಉದ್ಯೋಗಕ್ಕಾಗಿ ಕಾಯಬಲ್ಲವರಾಗಿರುತ್ತಾರೆ. ಆದರೆ ನಿಜವಾದ ಬಡವರು ನಿರುದ್ಯೋಗಿಗಳಾಗಿ ಇರಲು ಸಾಧ್ಯವಿಲ್ಲ. ಒಂದುವೇಳೆ ಇದರ ಬಗ್ಗೆ ವಿವರವಾದ ದತ್ತಾಂಶ ಲಭ್ಯವಾದಲ್ಲಿ, ಅದು ಇನ್ನೂ ಕೆಲವು ವಿಷಯಗಳ ಮೇಲೆ ಬೆಳಕು ಚೆಲ್ಲಬಹುದು; ಬಡವರು ಘಂಟೆಗಳ ಆಧಾರದಲ್ಲಿ ಇತರರಿಗಿಂತ ಹೆಚ್ಚು ಸಮಯ ಉದ್ಯೋಗದಲ್ಲಿರುವುದು ಆದರೆ ಆದಾಯದ ವಿಷಯದಲ್ಲಿ ಪ್ರತಿಗಂಟೆಗೆ ಇತರರಿಗಿಂತ ಅತಿ ಕಡಿಮೆ ಆದಾಯ ಉಳ್ಳವರು ಎಂಬ ಸತ್ಯವೂ ಹೊರಬೀಳಬಹುದಾಗಿದೆ.

ಆದರೆ ಈಗಿನ ಈ ಆಟದ ಹೆಸರು ಉದಾರೀಕರಣ. ವಾಸ್ತವದಲ್ಲಿ ದೊಡ್ಡ ಕೈಗಾರಿಕೋದ್ಯಮಿಗಳಿಗೆ ಅವಿರತ ಬೆಂಬಲ ನೀಡುತ್ತಾ, ಈ ಸರಕಾರ ಆಡಬಯಸುವುದು ಇದೊಂದೇ ಆಟವನ್ನು. ಲಾಕ್‍ಡೌನ್ ಆಗಿರಲಿ, ಸಾಂಕ್ರಾಮಿಕ ಪಿಡುಗಾಗಿರಲಿ, ಸರಕಾರವು ಉದ್ಯಮಗಳಿಗೆ ಸಹಾಯವಾಗುವಂತೆ ಕಾರ್ಮಿಕ ಮತ್ತು ಪರಿಸರ ಕಾಯಿದೆಗಳನ್ನು ಬದಲಿಸುತ್ತಿದೆ. ಕೈಬಿಟ್ಟ ಸರಕಾರಿ ರೆವೆನ್ಯೂ ಎಂದು ಹೇಳಿ ಈ ಉದ್ಯಮಿಗಳಿಗೆ ಎಷ್ಟು ತೆರಿಗೆ ವಿನಾಯಿತಿಗಳನ್ನು ನೀಡುತ್ತದೆ ಎಂದು ನೋಡಿದರೆ, ಅದು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಎಮ್‍ಜಿಎನ್‍ಆರ್‍ಇಜಿಎಕ್ಕೆ (ನರೇಗಾ) ಖರ್ಚು ಮಾಡುತ್ತಿರುವುದಕ್ಕಿಂತಲೂ ದುಪ್ಪಟ್ಟಾಗಿದೆ. ಬ್ಯಾಂಕುಗಳಿಂದ ಲೂಟಿ ಮಾಡಿದ ಚಿರಪರಿಚಿತ ಲೂಟಿಕೋರರ ಕಡೆಗೆ ಸರಕಾರ ಕಣ್ಮುಚ್ಚಿ ಕೂರುತ್ತದೆ. ಮಾನ್ಯ ಪ್ರಧಾನಿಗಳು ಕಪ್ಪುಹಣದ ಬಗ್ಗೆ ಮಾತನಾಡಿರುವುದನ್ನು ಕೇಳಿದ್ದೇವೆ, ಆದರೆ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಗೆ ಏನು ಬಾಧಿಸುತ್ತಿದೆ ಎಂಬುದರ ಬಗ್ಗೆ ನಿರ್ಧಿಷ್ಟವಾಗಿ ಮಾತನಾಡಿದ್ದನ್ನು ಯಾರಾದರೂ ಕೇಳಿದ್ದೀರ? ಒಬ್ಬ ನಟನ ಆತ್ಮಹತ್ಯೆಯ ಬಗ್ಗೆ, ಸಾಮಾಜಿಕ ಕಾರ್ಯಕರ್ತರ ಭಯೋತ್ಪಾದಕರ ಜೊತೆಗಿನ ಸಂಬಂಧಗಳ ಬಗ್ಗೆ ಮುಕ್ತವಾಗಿ ಊಹಾಪೋಹದ ಚರ್ಚೆ ಮಾಡಬಲ್ಲ ಮಾಧ್ಯಮಗಳು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹತ್ತಾರು ಲಕ್ಷ ಕೋಟಿ ರೂಪಾಯಿಗಳ ಮೋಸ ಮಾಡಿದವರ 28 ಹೆಸರುಗಳು ಹೊರಬಂದಾಗ ಏಕೆ ಮೌನವಹಿಸಿದವು? (ವಿಜಯ್ ಮಲ್ಯ ಅವರನ್ನು ಹೊರತುಪಡಿಸಿ ಮಿಕ್ಕ 27 ವ್ಯಕ್ತಿಗಳು ಗುಜರಾತಿಗಳು.) ಭಾರತದ ಆರ್ಥಿಕತೆ ಹಿಂದೆಂದಿಗಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿದೆ. ಸರಕಾರವು ಬ್ಯಾಂಕುಗಳಿಂದ ಲೂಟಿ ಮಾಡಿದ ಮೊತ್ತದ ಅರ್ಧ ಮೊತ್ತವನ್ನಿಟ್ಟುಕೊಂಡೇ ನೆರವಿನ ಪ್ಯಾಕೇಜ್ ನೀಡಬಹುದಾಗಿತ್ತು – ಅದರಿಂದ ಬಡ ನಿರುದ್ಯೋಗಿಗಳಿಗೆ ಆ ಹಣವನ್ನು ನೀಡಿ, ಧಾನ್ಯಗಳ ದಾಸ್ತಾನು ಹೆಚ್ಚಿರುವ ಸಮಯದಲ್ಲಿ ಮತ್ತು ಕೃಷಿ ಉತ್ಪನ್ನ ಚೆನ್ನಾಗಿರುವ ಸಮಯದಲ್ಲಿ ಬೇಡಿಕೆಯನ್ನು ಹೆಚ್ಚಿಸಬಹುದಾಗಿತ್ತು. ಆಗ ಬೆಲೆಯೇರಿಕೆಯ ಕಾರಣದಿಂದ ಆಹಾರಧಾನ್ಯಗಳ ಬೆಲೆ ಏರುವ ಆತಂಕದ ಸಾಧ್ಯತೆ ಕ್ಷೀಣವಾಗಿರುತ್ತಿತ್ತು. ಇಂತಹ ಒಂದು ಪ್ಯಾಕೇಜ್‍ನ ವಿವರಗಳನ್ನು ನೀಡುವ ಅವಶ್ಯಕತೆಯೇ ಇಲ್ಲ ಏಕೆಂದರೆ ದುರದೃಷ್ಟವಷಾತ್ ಅದು ಈಗ ಅಪ್ರಸ್ತುತ.

ಸರಕಾರವು ಅರ್ಥವ್ಯವಸ್ಥೆಯಲ್ಲಿ ಆಸಕ್ತಿಯನ್ನೇ ಹೊಂದಿಲ್ಲ. ಅದರ ಬದಲಿಗೆ, ಚುನಾವಣೆಗಳಲ್ಲಿ ಸಹಾಯ ಮಾಡುವ ಕೆಲವು ಕೈಗಾರಿಕೋದ್ಯಮಿಗಳ ಆಯ್ದ ಗುಂಪಿನ ಸಂಪತ್ತನ್ನು ಹೆಚ್ಚಿಸುವ ಮತ್ತು ಅದನ್ನು ರಕ್ಷಿಸುವದರಲ್ಲಿಯೇ ಹೆಚ್ಚಿನ ಆಸಕ್ತಿ ಹೊಂದಿದೆ. ಇವರಿಗೆ ವಿಶಾಲ ಬಹುಸಂಖ್ಯಾತರ ಆರ್ಥಿಕತೆಗಿಂತ ಷೇರು ಮಾರುಕಟ್ಟೆಯೇ ಪ್ರಮುಖವಾಗಿದೆ. ಈ ಸರಕಾರದವರು ಅಷ್ಟು ಜಾಣರಲ್ಲ, ಆರ್ಥಿಕತೆಗೆ ಏನು ಮಾಡಬೇಕು ಎಂಬುದು ಗೊತ್ತಿಲ್ಲ ಎಂದು ತಿಳಿದುಕೊಳ್ಳಬೇಡಿ. ಅದರ ಬದಲಿಗೆ ಸತ್ಯವನ್ನು ನೇರವಾಗಿ ಎದುರಸಿ. ಆ ಸತ್ಯ: ಭವಿಷ್ಯದ ಹಿಂದೂ ರಾಷ್ಟ್ರದಲ್ಲಿ ತನ್ನ ಮತ್ತು ಆಯ್ದ ಕೈಗಾರಿಕೋದ್ಯಮಿ ಸ್ನೇಹಿತರ ಜೊತೆಗೆ ಕೊಡುಕೊಳ್ಳುವ ಆಟವೊಂದೇ ಈ ಸರಕಾರಕ್ಕೆ ಬೇಕಾಗಿದ್ದು. ತನ್ನ ಮಾರ್ಗವನ್ನು ಸಾಧಿಸುವಂತಿದ್ದರೆ ಮಾತ್ರ.

ಅಮಿತ್ ಬಾಧುರಿ: ಮೂಲತಃ ಕೊಲ್ಕತ್ತಾದವರಾದ ಅಮಿತ್ ಭಾದುರಿಯವರು ಅಂತಾರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞರು. ಎಂಐಟಿ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಿದ ಅವರು ಜಗತ್ತಿನ ಆರೇಳು ದೇಶಗಳ ಪ್ರತಿಷ್ಠಿತ ವಿವಿಗಳಲ್ಲಿ ಬೋಧಿಸಿದ್ದಾರೆ. 60ಕ್ಕೂ ಹೆಚ್ಚು ಪ್ರಬಂಧಗಳನ್ನು ಅಂತಾರಾಷ್ಟ್ರೀಯ ಪತ್ರಿಕೆಗಳಿಗೆ ಬರೆದಿದ್ದು, 6 ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಪ್ರಸ್ತುತ ಇಟಲಿ ಹಾಗೂ ನವದೆಹಲಿಗಳಲ್ಲಿ ನೆಲೆಸಿದ್ದು, ಈಗಲೂ ಬೋಧನೆ ಮತ್ತು ಸಂಶೋಧನೆಯನ್ನು ಮುಂದುವರೆಸಿದ್ದಾರೆ.

ಇದನ್ನು ಓದಿ: ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ವಿಸರ್ಜನೆಯತ್ತ ರಾಯಚೂರು ಜಿ.ಪಂ: ಇದು ನಿಮ್ಮೂರಿನ ಪರಿಸ್ಥಿತಿಯು ಆಗಿರಬಹುದು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಅಮಿತ್ ಬಾಧುರಿ
+ posts

LEAVE A REPLY

Please enter your comment!
Please enter your name here