ವಾಕ್‌
PC; https: Scroll.in

ಭಾರತೀಯ ಸಂವಿಧಾನದ 19 ನೇ ವಿಧಿಯ ಅನ್ವಯ ಒದಗಿಸಲಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ಯ್ರ ಪರಿಪೂರ್ಣವಾದ ಹಕ್ಕಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ವಿರುದ್ದ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬರ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯಪಟ್ಟಿದೆ.

19 ನೇ ವಿಧಿಯ ಅಡಿಯಲ್ಲಿ ಒದಗಿಸಲಾದ ಮುಕ್ತ ವಾಕ್ ಮತ್ತು ಅಭಿವ್ಯಕ್ತಿ ಹಕ್ಕು ಸಂಪೂರ್ಣವಲ್ಲ ಎಂದು ನ್ಯಾಯಪೀಠ ನೆನಪಿಸಿದ್ದು, “ಬಹುಶಃ ನಾಗರಿಕರು ಯಾವುದೇ ನಿರ್ಬಂಧಗಳಿಲ್ಲದೆ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಸಂಪೂರ್ಣ ಹಕ್ಕು ಎಂದು ಭಾವಿಸಿರುವಂತಿದೆ” ಎಂದು ಹೇಳಿದೆ.

ಇದನ್ನೂ ಓದಿ: ಕ್ರಿಮಿನಲ್ ಕಾನೂನುಗಳನ್ನು ಬದಲಿಸಲು ಕೇಂದ್ರ ಸಮಿತಿ; ಅಬ್ಜೆಕ್ಶನ್, ಮೈ ಲಾರ್ಡ್

ಸುನೈನಾ ಹೋಲೆ ಎಂಬುವವರು ಉದ್ದವ್‌ ಮತ್ತು ಆದಿತ್ಯ ಠಾಕ್ರೆಯ ಬಗ್ಗೆ ಟ್ವಿಟ್ಟರ್‌ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಶಿವಸೇನೆಯ ಯುವಸೇನಾ ವಿಭಾಗದ ರೋಹ್ ಚೌಹಾಣ್ ಮತ್ತು ಇತರರು ನೀಡಿರುವ ದೂರಿನ ಅಧಾರದ ಮೇಲೆ ಮೂರು ಎಫ್‌ಐಆರ್‌ ದಾಖಲಾಗಿದ್ದವು.

ಸುನೈನಾ ಹೋಲೆ ತನ್ನನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಬಂಧನಕ್ಕೆ ತಡೆ ನೀಡಲು ನಿರಾಕರಿಸಿದೆ. ಆದರೆ ಮುಂದಿನ ಎರಡು ವಾರಗಳವರೆಗೆ ಅವರನ್ನು ಬಂಧಿಸುವುದಿಲ್ಲ ಎಂಬ ಮಹಾರಾಷ್ಟ್ರ ಸರ್ಕಾರದ ಮೌಖಿಕ ಭರವಸೆಯನ್ನು ನ್ಯಾಯಪೀಠ ಅಂಗೀಕರಿಸಿದೆ.

ಇದನ್ನೂ ಓದಿ: ನ್ಯಾಯಮೂರ್ತಿ ಮುರಳೀಧರ್‌ಗೆ ಅವಮಾನ ಮಾಡಿದ್ದು ನ್ಯಾಯಾಂಗ ನಿಂದನೆಯಲ್ಲವೇ?

ಅಭಿವ್ಯಕ್ತಿ ಸ್ವಾತಂತ್ರವಿದೆ ಎಂದ ಮಾತ್ರಕ್ಕೆ ತಮಗಿಷ್ಟ ಬಂದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

ಅಪರೂಪದ ಪ್ರಕರಣದಲ್ಲಿ ಮಾತ್ರ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಬಹುದು ಎಂದಿರುವ ನ್ಯಾಯಪೀಠ, 41(ಎ) ಸೆಕ್ಷನ್ ಅಡಿಯಲ್ಲಿ ಒಬ್ಬ ವ್ಯಕ್ತಿಯನ್ನು ಪೊಲೀಸರ ತನಿಖೆಗೆ ಸಹಕರಿಸುತ್ತಿರುವವರೆಗೂ ಬಂಧಿಸಬೇಕಾಗಿಲ್ಲ. ಯಾರನ್ನೇ ಬಂಧಿಸಬೇಕಾದರೆ, ಅಂತಹ ಬಂಧನಕ್ಕೆ ಪೊಲೀಸರು ಪೂರ್ವ ಸೂಚನೆ ನೀಡಬೇಕು ಎಂದು ಹೇಳಿದೆ.

ಅಲ್ಲದೆ, ಪೊಲೀಸರು ಆಕೆಯ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದರೆ, ಯಾವುದೇ ಹಕ್ಕುಗಳನ್ನು ಉಲ್ಲಂಘಿಸಿದರೆ ಅಂತಹ ಸಂದರ್ಭದಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಸುನೈನಾ ಹೋಲೆ ಅವರಿಗೆ ತಿಳಿಸಿದೆ.

ಟ್ವೀಟ್‌ಗೆ ಸಂಬಂಧಿಸಿದಂತೆ ಎಲ್ಲಾ ಆರೋಪಗಳನ್ನು ಕೈಬಿಡಬೇಕು. ಪ್ರಕರಣಗಳ ಅಂತಿಮ ವಿಚಾರಣೆವರೆಗೂ ತನ್ನನ್ನು ಬಂಧಿಸದಂತೆ ರಕ್ಷಣೆ ನೀಡಬೇಕು. ತನ್ನ ವಿರುದ್ಧ ಇರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು ಎಂದು ಸುನೈನಾ ಹೋಲೆ ಅವರು ಹೈಕೋರ್ಟ್‌ನಲ್ಲಿ ಕೋರಿದ್ದರು. ಮುಂದಿನ ವಿಚಾರಣೆ ಸೆಪ್ಟೆಂಬರ್ 29ಕ್ಕೆ ನಡೆಯಲಿದೆ.


ಇದನ್ನೂ ಓದಿ: ಭಾರತದ ಸ್ವಾತಂತ್ರ್ಯ ಸಂಗ್ರಾಮ: ಹಿಂದೂ ಮುಸ್ಲಿಂ ಐಕ್ಯತೆಯ ಅಪೂರ್ವ ಕಥನ

LEAVE A REPLY

Please enter your comment!
Please enter your name here