ಹದಿನೇಳು ಮತ್ತು ಹದಿನೆಂಟನೇ ಶತಮಾನದ ದಕ್ಷಿಣ ಭಾರತದ ರಾಜಕಾರಣ, ಆರ್ಥಿಕತೆ, ಸಾಮ್ರಾಜ್ಯ ವಿಸ್ತರಣೆಯ ದಾಹ, ವಾಣಿಜ್ಯ ನೀತಿ, ಸಂಘರ್ಷ, ಸಂಧಾನ, ಸಮಾಧಾನ, ದೇಶೀಯ ಮತ್ತು ವಿದೇಶೀಯರ ಉದ್ದೇಶ ಮತ್ತು ಧೋರಣೆಗಳು, ತಂತ್ರ ಮತ್ತು ಪ್ರತಿತಂತ್ರ ಎಲ್ಲವನ್ನೂ ಒಳಗೊಂಡಿರುವ ಕೃತಿಯಿದು. ಯುದ್ಧ ಮತ್ತು ಒಪ್ಪಂದಗಳು ಪ್ರದೇಶದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಚಿತ್ರಣವನ್ನು ಬದಲು  ಮಾಡುವುದರಿಂದ ವ್ಯವಸ್ಥೆಯ ಬಲಿಪಶುಗಳಾಗುವರು ಜನರು. ಈ ಕೃತಿಯ ಅಧ್ಯಯನದ ಮಹತ್ವವೇ ಚರಿತ್ರೆಯಲ್ಲಿ ಮಾಡಿರುವ ತಪ್ಪುಗಳನ್ನು ವರ್ತಮಾನದಲ್ಲಿ ಮಾಡದಿರಲು ಎಚ್ಚೆತ್ತುಕೊಳ್ಳುವುದು. ಆದರೆ ಇದನ್ನು ತಿಳಿಯಬೇಕಾದವರು ಯಾರು? ಬಲಿಪಶುಗಳಾಗುವ ಸಾಮಾನ್ಯರು ಮಾತ್ರವಲ್ಲ, ಆಡಳಿತ ಚುಕ್ಕಾಣಿ ಹಿಡಿದಿರುವವರು. ಹಿಂದಿನದನ್ನು ಅವಲೋಕಿಸಿ ಮುಂದೆ ಎಚ್ಚರಿಕೆಯಿಂದ ಹೆಜ್ಜೆ ಇಡುವಂತಹ ದೂರದೃಷ್ಟಿಯನ್ನು ಹೊಂದಲು ಸಹಾಯವಾಗುವ ಒಳನೋಟಗಳನ್ನು ಕೊಡುವ ಡಾ. ಕೆ ಮೋಹನ್ ಕೃಷ್ಣ ರೈರವರ ಕೃತಿ ಇದಾಗಿದೆ.

ನಮ್ಮ ಸಾಮಾನ್ಯ ಪ್ರಜೆಗಳಿಂದ ಹಿಡಿದು ವ್ಯವಸ್ಥೆಯನ್ನು ರೂಪಿಸುವವರ ತನಕ ಇರುವ ಬಹುದೊಡ್ಡ ಸಾಮಾನ್ಯ ಸಮಸ್ಯೆ ಎಂದರೆ ಯಾವುದಕ್ಕೆ ಆದ್ಯತೆಯನ್ನು ನೀಡುವುದು ಎಂದು ತಿಳಿಯದಿರುವುದು. ಈಗಲೂ ಮತ್ತು ಆಗಲೂ ಸ್ಥೂಲವಾಗಿ ರಾಜಕೀಯ ಸಂಘರ್ಷಗಳಾಗಿ ಕಾಣುವ ವಿದ್ಯಮಾನಗಳು ಸಾಮಾಜಿಕ ನಿಯಂತ್ರಣವನ್ನು ಹೊಂದುತ್ತಿರುತ್ತವೆ ಮತ್ತು ಆರ್ಥಿಕತೆಯು ಸ್ವಾರ್ಥದಿಂದ ತಮ್ಮ ವಲಯಕ್ಕೆ ಸೀಮಿತಗೊಳ್ಳುತ್ತಿರುತ್ತವೆ. ಆಗ ಈಸ್ಟ್ ಇಂಡಿಯಾ ಕಂಪನಿಗಳು ಸ್ಥಳೀಯ ಅರಸರನ್ನು ಎತ್ತಿಕಟ್ಟುತ್ತಾ, ಅವರ ನಡುವೆ ಯುದ್ಧಗಳನ್ನು ಹುಟ್ಟು ಹಾಕುತ್ತಿದ್ದವು. ಹಾಗೆ ಮಾಡುವಾಗ ಸ್ಥಳೀಯ ಅರಸರಿಗೆ ಅವರ ಮರ್ಕಂಟೈಲ್ ಮತ್ತು ಇಂಪೀರಿಯಲ್ ದೃಷ್ಟಿಯನ್ನು ಅರ್ಥೈಸಿಕೊಳ್ಳಲಾಗದೇ ಪ್ರಾದೇಶಿಕ ವಾಣಿಜ್ಯ ನೀತಿಗಳನ್ನು, ಆರ್ಥಿಕ ನಿಯಂತ್ರಣಗಳನ್ನು ಅವರ ಕೈವಶವಾಗಲು ಅನುವು ಮಾಡಿಕೊಟ್ಟು, ತಮ್ಮ ತಲೆದಂಡದಿಂದ ಅವರಿಗೆ ಲಾಭವನ್ನು ಮಾಡಿಕೊಡುತ್ತಿದ್ದರು. ಇದನ್ನು ಅರ್ಥಮಾಡಿಕೊಂಡ ಕೆಲವರಾದರೂ ಇದ್ದ ಪ್ರಾದೇಶಿಕ ಅರಸರಿಗೆ ಇತರರ ಒಣಪ್ರತಿಷ್ಟೆ ಮತ್ತು ಅಸೂಯೆಗಳು ಸಹಕರಿಸಲಿಲ್ಲ. ಅದೇ ಈಸ್ಟ್ ಇಂಡಿಯಾ ಕಂಪನಿಯ ಗೆಲುವಿಗೆ ಮುಖ್ಯ ಕಾರಣಗಳಲ್ಲಿ ಒಂದು ಎಂದು ಪುಸ್ತಕದ ಮೊದಮೊದಲ ಸಾಲುಗಳಲ್ಲೇ ಇದೆ. ಈಗ ಅಂತಹುದೇ ಪರಿಸ್ಥಿತಿ ವರ್ತಮಾನದಲ್ಲಿಯೂ ಇದೆ. ಈಗ ಈಸ್ಟ್ ಇಂಡಿಯಾ ಕಂಪನಿಯ ಕೆಲಸ ಮಾಡುತ್ತಿರುವುದು ಇಂಗ್ಲಿಷರಲ್ಲ. ಜನರಿಂದ ಚುನಾಯಿತರಾಗಿರುವ ಭಾರತೀಯ ಸರ್ಕಾರವೇ. ಆಗ ಪ್ರಾದೇಶಿಕ ರಾಜರುಗಳಲ್ಲಿ ಇದ್ದ ಅಸಹನೆ, ಹುಸಿಪ್ರತಿಷ್ಠೆ ವಿವೇಚನಾಶೂನ್ಯ ಸಂಘರ್ಷಗಳನ್ನು ವಿವಿಧ ರಾಜಕೀಯ ಪಕ್ಷಗಳಲ್ಲಿ ಕಾಣುತ್ತಿದ್ದೇವೆ. ಚರಿತ್ರೆ ಮರುಕಳಿಸುತ್ತಿದೆ.

ಡಾ. ರೈ ಹೇಳುವಂತೆ, ‘ಪೋರ್ಚುಗೀಸರ ಆಗಮನವಾದ ಬಳಿಕ ಯುರೋಪಿನ ವ್ಯಾಪಾರಿ ಕಂಪನಿಗಳು ಭಾರತದಲ್ಲಿ ಯುದ್ಧಗಳ ಯುಗವನ್ನೇ ಹುಟ್ಟುಹಾಕಿದವು. 17 ಮತ್ತು 18ನೆಯ ಶತಮಾನಗಳ ದಕ್ಷಿಣ ಭಾರತದ ರಾಜಕಾರಣದಲ್ಲಿ ಪೋರ್ಚುಗೀಸರು, ಬ್ರಿಟಿಷರು, ಡಚ್ಚರು ಮತ್ತು ಫ್ರೆಂಚರು ವಿದೇಶಿ ವ್ಯಾಪಾರಿಶಕ್ತಿಗಳಾಗಿ ಒಂದು ಕಡೆಗಾದರೆ, ಮೊಗಲರು, ಮರಾಠರು, ಹೈದರಾಬಾದಿನ ನಿಜಾಮರು, ಆರ್ಕಾಟಿನ ನವಾಬರು, ಮೈಸೂರಿನ ಹೈದರ್ ಅಲಿ ಮತ್ತು ಟಿಪ್ಪು, ತಿರುವಾಂಕೂರಿನ ಅರಸರು, ಮಲಬಾರಿನ ನಾಯಕರು ಮುಂತಾದ ಸ್ಥಳೀಯ ರಾಜಕೀಯ ಶಕ್ತಿಗಳು ಯುದ್ಧ ಹಾಗೂ ಒಪ್ಪಂದದಲ್ಲಿ ನಿರತವಾಗಿದ್ದವು. ಇದರ ಪರಿಣಾಮವೇ ಕರ್ನಾಟಿಕ್ ಯುದ್ಧಗಳು, ಆಂಗ್ಲೋ-ಮೈಸೂರು ಯುದ್ಧಗಳು, ಆಂಗ್ಲೋ-ಮರಾಠರ ಯುದ್ಧಗಳು, ಮೈಸೂರು-ಮರಾಠರ ಯುದ್ಧಗಳು. ಈ ಎಲ್ಲ ಯುದ್ಧಗಳ ಸಂದರ್ಭದಲ್ಲಿ ಯೂರೋಪಿನ ವ್ಯಾಪಾರಿಶಕ್ತಿಗಳು ತಮ್ಮ ಪಾಲ್ಗೊಳ್ಳುವಿಕೆಯನ್ನು ಅನಿವಾರ್ಯವನ್ನಾಗಿಸಿದವು.’

ಸ್ಥಳೀಯ ಅರಸುಮನೆತನಗಳು ವಿದೇಶಿಯರನ್ನು ಓಲೈಸಬೇಕಾದ ಒತ್ತಡ ಹೇಗೆ ಸೃಷ್ಟಿಗೊಂಡಿತು? ಪ್ರಾದೇಶಿಕತೆಯಲ್ಲಿ ಬಿಕ್ಕಟ್ಟುಗಳು ಮೂಡಿದ ಬಗೆ ಹೇಗೆ? ಶತ್ರುವಿನ ಶತ್ರು ಮಿತ್ರನಾಗುವುದು ಹೇಗೆ? ಒಪ್ಪಂದಗಳ ಭೌತಿಕ ಮತು ತಾತ್ವಿಕ ಸ್ವರೂಪಗಳೇನು? ಇವೆಲ್ಲವನ್ನೂ ವಿವರಿಸುವ ಜೊತೆಗೆ ಪ್ರಸ್ತುತ ರಾಜಕೀಯ ಮತ್ತು ಆರ್ಥಿಕತೆ ಪರಿಸ್ಥಿತಿಗಳನ್ನು ಈ ಹಿನ್ನೆಲೆಯಲ್ಲಿ ಅವಲೋಕಿಸುವ ಎಚ್ಚರಿಕೆಯ ಕರೆಗಂಟೆ ಈ ಕೃತಿಯಾಗುತ್ತದೆ.

18ನೆಯ ಶತಮಾನದ ದ್ವಿತೀಯಾರ್ಧ ಬ್ರಿಟಿಷರ ಪಾಲಿಗೆ ಮುಳ್ಳಿನಹಾದಿಯನ್ನಾಗಿ ಮಾಡಿದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನ ಪ್ರತಿರೋಧಗಳನ್ನು ಮತ್ತು ನಡೆಗಳನ್ನು ಕೃತಿ ತೆರೆದಿಡುತ್ತದೆ. ಮೈಸೂರು ಬೆಂಗಳೂರು ಒಳಗೊಂಡಂತೆ ಈ ಎಲ್ಲಾ ಭಾಗಗಳಿಗೆ ಹೈದರ್ ಅಲಿ ಇಲ್ಲದೇಹೋಗಿದ್ದರೆ ಏನಾಗುತ್ತಿತ್ತೆಂದು ಕಲ್ಪಿಸಿಕೊಳ್ಳಲು ಯತ್ನಿಸುತ್ತೇನೆ. ಆಗ ಹೈದರ್ ಅಲಿಯ ದೃಢತೆ ಮತ್ತು ಎದೆಗಾರಿಕೆಯೇ ಮಗ್ಗುಲು ಮುಳ್ಳಾಗಿದ್ದ ಮರಾಠರನ್ನೂ ಮತ್ತು ಬ್ರಿಟಿಷರನ್ನೂ ಎದುರಿಸಲು ಸಮರ್ಥವಾಗಿದ್ದದ್ದು. ಪರದೇಶೀಯರಾಗಿದ್ದು, ಸಂಸ್ಕೃತಿ ಮತ್ತು ಉದ್ದೇಶಗಳಿಂದ ಪರಕೀಯರೇ ಆಗಿದ್ದ ಬ್ರಿಟಿಷರನ್ನು ಬಿಡಿ, ನಮ್ಮದೇ ನೆಲದ ಭಾಗವೆನ್ನುವ ಮರಾಠರ ಮತ್ತು ನಿಜಾಮರ ರಾಜಕಾರಣದ ಸ್ವರೂಪ ಆಗಿನ ಬಿಕ್ಕಟ್ಟಿನ ಕರಾಳ ಸ್ವರೂಪವನ್ನು ಅನಾವರಣ ಮಾಡುತ್ತದೆ.

ಅಸ್ತಿತ್ವವನ್ನು ಕಂಡುಕೊಳ್ಳುವುದಕ್ಕೆ ಹಾಗೂ ತಮ್ಮತನದ ಛಾಪನ್ನು ಮೂಡಿಸುವುದಕ್ಕೆ ಯುದ್ಧ ಘಟಿಸುವುದು ಒಂದು ವಿಧಾನವಾದರೆ, ಆಕ್ರಮಣಕಾರಿ ಪ್ರವೃತ್ತಿಗೆ ಹಾಗೂ ಸಮಾಜದ ನಾಶಕ್ಕೆ ಯುದ್ಧ ಘಟಿಸುವುದು ಇನ್ನೊಂದು ವಿಧಾನ ಎನ್ನುವ ಡಾ ರೈ ಅವರ ಮಾತನ್ನು ಗಮನಿಸಿದರೆ, ಸ್ಥಳೀಯ ಅರಸುಮನೆತನದವರ ನಡೆಗಳಲ್ಲಿ ಈ ಎರಡೂ ಬೆರೆತಂತಾಗಿರುತಿತ್ತು, ಕೆಲವೊಮ್ಮೆ ಎರಡನ್ನೂ ಮೀರಿದಂತಾಗಿರುತ್ತಿತ್ತು. ಒಟ್ಟಾರೆ ಅವರವರ ಪ್ರತಿಷ್ಠೆ ಮತ್ತು ಹಠಗಳಿಗೆ ಸಾಮಾಜಿಕ ವ್ಯವಸ್ಥೆಯನ್ನು ಹದಗೆಡಿಸುತ್ತಿದ್ದದ್ದು, ಜನತೆಯ ಬದುಕನ್ನು ಹಾಳುಗೆಡುವುತ್ತಿದ್ದದ್ದಂತೂ ಸ್ಪಷ್ಟ. ಸಿಂಹಾಸನಕ್ಕಾಗಿ ನಡೆಯುವ ಯುದ್ಧಗಳು ಯಾವತ್ತೂ ರಕ್ತಸಂಬಂಧಕ್ಕೇ ಬೆಲೆ ಕೊಡದಿರುವಾಗ ಯಾರದೋ ಪ್ರಜೆಗಳ ಬದುಕನ್ನು ಹೇಗೆ ಪರಿಗಣಿಸಿಯಾರು!

ಕೃತಿಯಲ್ಲಿ ವೀರಮರಣ ಎನ್ನುವ ಸ್ವಾಮಿನಿಷ್ಠೆಯ ಅಲೌಕಿಕ ಪ್ರಪಂಚವನ್ನು ಸೃಷ್ಟಿಸಿ ಒಡೆಯನಿಗೆ ತಾವೂ ಸಾಯುವಂತಹ ಮನಸ್ಥಿತಿಯ ಬಗ್ಗೆಯೂ ಉಲ್ಲೇಖಿಸುತ್ತಾ, ‘ಪ್ರಭುತ್ವ ತನ್ನ ಅಸ್ತಿತ್ವಕ್ಕೆ ಧಕ್ಕೆ ಬರುವ ಸಂದರ್ಭದಲ್ಲಿ ಮಾತ್ರ ಪ್ರಜೆಗಳೊಂದಿಗೆ ಉದಾರವಾಗಿ ನಡೆದುಕೊಳ್ಳುವ’ ಪರಿಯನ್ನು ವಿಶ್ಲೇಷಿಸುತ್ತದೆ. ಎಲೈಟ್ ಶಕ್ತಿಗಳ ಧೋರಣೆಗಳು ಮತ್ತು ಅಜೆಂಡಾಗಳು ಒಂದೇ ಸ್ವರೂಪದಾಗಿದ್ದು, ದುಷ್ಟರೆಂದು ಬೆರಳು ಮಾಡುವವರನ್ನು ಮತ್ತು ಶಾಂತಿ ರಕ್ಷಣೆ ಮಾಡುತ್ತೇವೆ ಎನ್ನುವವರನ್ನು ಕೂಡಾ ಅನಾವರಣಗೊಳಿಸುತ್ತದೆ.

ಯುದ್ಧ ಮತ್ತು ದೇಶಭಕ್ತಿಯ ರೋಚಕತೆಯನ್ನು ಸೃಷ್ಟಿಸುವಂತಹ ಸ್ವಾರ್ಥ ಪ್ರಭುತ್ವಗಳಿಗೆ ಇರುತ್ತದೆ. ಆದರೆ ಯುದ್ಧಗಳನ್ನು ವೈಭವೀಕರಿಸುವ ಹಾಗೂ ಅದಕ್ಕೆ ನಾನಾ ಕಾರಣಗಳನ್ನು ಹುಡುಕುವುದರಲ್ಲೇ ಮಗ್ನರಾಗಿರುವ ಚರಿತ್ರೆಕಾರರಿಗೆ ಯುದ್ಧದ ಸಾಮಾಜಿಕ ಹಾಗೂ ಆರ್ಥಿಕ ಆಯಾಮಗಳು ಆದ್ಯತೆಯ ವಿಚಾರವಾಗಿ ಕಂಡುಬರುವುದಿಲ್ಲ. ಹಾಗಾಗಿ ಚರಿತ್ರೆಗಳು ಜನರ ಬದುಕನ್ನು, ವ್ಯಥೆ, ಕಥೆಗಳನ್ನು ಮರೆಮಾಚಿ ಥ್ರಿಲ್ಲರ್ ಆಗಿ ಉಳಿದುಬಿಡುತ್ತವೆ. ಸಮಾಜದ ವ್ಯಾಪಕ ಬದುಕಿನ ಸ್ಥಿತಿಯನ್ನು ಬೆಳಕಿಗೆ ತರುವುದೇ ಇಲ್ಲ.

‘ಸೋತವರು ಭವಿಷ್ಯದಲ್ಲಿ ಎಂದಿಗೂ ಜಯಿಸಿದವರನ್ನು ಎದುರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಬಾರದು’ ಎಂಬ ಧೋರಣೆಯ ಒಪ್ಪಂದಗಳಲ್ಲಿ ಮತ್ತದೇ ಬಲಿಪಶುಗಳು ಸಾಮಾನ್ಯ ಜನರು. ಹೈದರನ ಮಟ್ಟ ಹಾಕಲು ಮೈಸೂರನ್ನು ಮುತ್ತುವ ಮರಾಠರು ಕ್ರೂರಿ ಪಿಂಡಾರಿಗಳ ಪಡೆಗಳನ್ನು ಸಾಮಾನ್ಯ ಪ್ರಜೆಗಳ ನಡುವೆ ನುಗ್ಗಿಸಿ ಕೊಲೆ, ಲೂಟಿ, ದಾಂಧಲೆಗಳನ್ನು ಮಾಡಿ ಗೊಂದಲಗಳನ್ನೆಬ್ಬಿಸಿ ಇತ್ತ ಯುದ್ಧಗಳನ್ನು ಮಾಡಿದ್ದೇನೂ ಮಹಾಭಾರತ ಅಥವಾ ರಾಮಾಯಣಗಳಲ್ಲಿ ಹೇಳುವಂತಹ ಕ್ಷತ್ರಿಯ ಧರ್ಮವೇನಲ್ಲ, ಶಾಸ್ತ್ರಗಳಲ್ಲಿ ಹೇಳುವ ಯುದ್ಧನೀತಿಯೂ ಅಲ್ಲ. ಅವರದ್ಯಾರದ್ದೂ ಜನತೆ, ಧರ್ಮ, ನೆಲ ಮತ್ತು ಸಂಸ್ಕೃತಿಗಳ ರಕ್ಷಣೆಯಲ್ಲ. ಬರೀ ಸ್ವಾರ್ಥ ಮತ್ತು ಅಧಿಕಾರ ದಾಹ.

ಬ್ರಿಟೀಷರೊಂದಿಗೆ ಕೈ ಜೋಡಿಸಿದ ಯಾರನ್ನೇ ಆಗಲಿ ಕಠಿಣವಾಗಿ ದಮನ ಮಾಡಿದ ಟಿಪ್ಪುವಿನ ಧೋರಣೆಯನ್ನು ಇಂದು ಮತಾಂಧ ಎಂದು ದೂರುವ ಧರ್ಮನಿಷ್ಟರಿಗಾಗಲಿ, ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುತ್ತಿರುವ ಆಡಳಿತದ ಚುಕ್ಕಾಣಿ ಹಿಡಿದಿರುವ ಚಾಣಾಕ್ಷರಾಗಲಿ, ವಾಟ್ಸಪ್ ಯೂನಿವರ್ಸಿಟಿಗಳಲ್ಲಿ ಕಲಿತು ಪ್ರಖಾಂಡ ಪಂಡಿತರಾಗಿರುವ ವಾದಿಗಳಾಗಲಿ ಈ ಕೃತಿಯಿಂದ ಚರಿತ್ರೆಯನ್ನು ವಿವೇಚಿಸುವುದು ಹೇಗೆ ಎಂದು ಕಲಿಯಬೇಕಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟಗೊಂಡಿರುವ ಈ ಕೃತಿ ಭೂತ ಮತ್ತು ವರ್ತಮಾನದ ಚರಿತ್ರೆಯನ್ನು ಅವಲೋಕಿಸುವವರಿಗೆ ಒಂದು ಕೈದೊಂದಿ.


ಇದನ್ನೂ ಓದಿ: ಆರ್ಥಿಕ ಕುಸಿತದ ದುರಂತ : ಜನರ ಬದುಕು ಅತಂತ್ರ – ಡಾ. ಟಿ. ಆರ್. ಚಂದ್ರಶೇಖರ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

Avatar
ಯೋಗೇಶ್ ಮಾಸ್ಟರ್‍