Homeಎಕಾನಮಿಆರ್ಥಿಕ ಕುಸಿತದ ದುರಂತ : ಜನರ ಬದುಕು ಅತಂತ್ರ - ಡಾ. ಟಿ....

ಆರ್ಥಿಕ ಕುಸಿತದ ದುರಂತ : ಜನರ ಬದುಕು ಅತಂತ್ರ – ಡಾ. ಟಿ. ಆರ್. ಚಂದ್ರಶೇಖರ

ಜಿಡಿಪಿ ಮಹಾಕುಸಿತದ ಚರ್ಚೆಯಲ್ಲಿ ಮುಂಚೂಣಿಗೆ ಬರದಿರುವ ಅಂಶವೆಂದರೆ ಜಿಡಿಪಿ ಬೆಳವಣಿಗೆಗೆ ಆಧಾರಸ್ತಂಭವಾಗಿರುವ ರಾಜ್ಯಗಳ ಹಿತಾಸಕ್ತಿಯ ಬಗ್ಗೆ ಕೇಂದ್ರ ತೋರಿದ ವಿನಾಶಕಾರಿ ಧೋರಣೆ. ರಾಜ್ಯಗಳ ಬೆಳವಣಿಗೆಯಿಲ್ಲದೆ ದೇಶದ ಆರ್ಥಿಕತೆಯು ಬೆಳೆಯುವುದು ಅಸಾಧ್ಯ.

- Advertisement -
- Advertisement -

ಪ್ರಸ್ತುತ ಸಾಲಿನ ಮೊದಲ ತ್ರೈಮಾಸಿಕ(ಏಪ್ರಿಲ್-ಜೂನ್ 2020)ದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ: ರಾಷ್ಟ್ರೀಯ ವರಮಾನ) ಶೇ.23.90 ರಷ್ಟು ಕುಸಿದಿದೆ. ಅನೇಕರು ಭಾವಿಸಿರುವಂತೆ ಇದು ಕೇವಲ ಕೋವಿಡ್/ಲಾಕ್‌ಡೌನ್‌ನ ಪರಿಣಾಮ ಮಾತ್ರವಲ್ಲ. ನಮ್ಮ ಆರ್ಥಿಕತೆಯ ಕುಸಿತವು2017-18ನೆಯ ಸಾಲಿನಲ್ಲಿಯೇ ಆರಂಭವಾಗಿತ್ತು. ಜಿಡಿಪಿ ಬೆಳವಣಿಗೆ ದರ 2016-17ರಲ್ಲಿ ಶೇ.8.26ರಷ್ಟಿದ್ದು 201-18ರಲ್ಲಿ ಶೇ.7.04 ಕ್ಕೆ, 2018-19ರಲ್ಲಿ ಶೇ.6.12ಕ್ಕೆ ಮತ್ತು 2019-20ರಲ್ಲಿ ಶೇ.4.18ಕ್ಕೆ ಕುಸಿಯುತ್ತಾ ನಡೆದಿತ್ತು. ಜಿಡಿಪಿಯು 2018-19ರ ಮೊದಲ ತ್ರೈಮಾಸಿಕದಲ್ಲಿ ಶೇ.7.1ರಷ್ಟಿದ್ದುದು 2019-20ರ ಮೊದಲ ತ್ರೈಮಾಸಿಕದಲ್ಲಿ ಇದು ಶೇ. 5.1ಕ್ಕಿಳಿದು ಕೊನೆಯ ತ್ರೈಮಾಸಿಕದಲ್ಲಿ ಇದು ಶೇ.3.1 ರಷ್ಟಾಗಿತ್ತು. ಈ ಕುಸಿತವು 2019-2020ರಲ್ಲಿ ಉಲ್ಬಣಗೊಂಡು 2020-21ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ.23.90ರಷ್ಟು ಹಿಮಾಲಯ ಸದೃಶ ಕುಸಿತದಲ್ಲಿ ಪರ್ಯಾವಸಾನ ಕಂಡಿದೆ.

ಅರ್ಥಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಮತ್ತು ರಾಜಕೀಯ ವಿಶ್ಲೇಷಕರು ಹೇಳುವಂತೆ ಇದು ’ಮಾನವ ನಿರ್ಮಿತ’ ದುರಂತವೇ ವಿನಾ ’ದೇವರ ಆಟ’ವೂ ಅಲ್ಲ ಅಥವಾ ಕೋವಿಡ್ ವೈರಸ್ ಪರಿಣಾಮವೂ ಅಲ್ಲ. ನಿಜ, ಕೋವಿಡ್ ಮತ್ತು ಅದರ ನಿಮಿತ್ತ ಹಾಕಲಾದ ಲಾಕ್‌ಡೌನ್‌ನಿಂದ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿವೆ. ಆದರೆ ಇದು ಶೇ.23.9ರಷ್ಟು ಕುಸಿತಕ್ಕೆ ಕಾರಣವೆಂದು ಹೇಳುವುದು ಸರಿಯಲ್ಲ. ಏಕೆಂದರೆ ಜಿಡಿಪಿ ಕುಸಿತದ ಪರ್ವವು ಕೋವಿಡ್ ಪೂರ್ವದಲ್ಲಿಯೇ ಆರಂಭವಾಗಿತ್ತು. ಇದರ ಮೂಲದಲ್ಲಿ ಆರ್ಥಿಕ ನಿರ್ವಹಣೆಯಲ್ಲಿನ ವೈಫಲ್ಯ, ಆಡಳಿತ ಅದಕ್ಷತೆ, ಸಾಮಾಜಿಕ ಅಜೆಂಡಾಕ್ಕೆ ಆದ್ಯತೆ ನೀಡಿ ಆರ್ಥಿಕ ಅಜೆಂಡಾವನ್ನು ಕಡೆಗಣಿಸಿದ್ದು, ಅಸಹಿಷ್ಣುತೆಯ ವಾತಾವರಣವನ್ನು ಸಮಾಜದಲ್ಲಿ ಹರಡುತ್ತಿರುವುದು, ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ, ಖಾಸಗೀಕರಣ, ಕಾರ್ಮಿಕ ಸಂಘಟನೆಗಳ ಮೇಲಿನ ದಮನಕಾರಿ ಕ್ರಮಗಳು ಮುಂತಾದವು ಕ್ರಿಯಾಶೀಲವಾಗಿವೆ.

Image Courtesy: Business Today

ನಾವು ಇಂದು ಎದುರಿಸುತ್ತಿರುವ ಆರ್ಥಿಕ ದುರಂತದಿಂದ ಜನರ ಬದುಕು ಮೂರಾಬಟ್ಟೆಯಾಗಿದ್ದರೆ ದುಡಿಮೆಗಾರರು ದಮನಕಾರಿ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಬೆವರು, ಕಣ್ಣೀರು ಮತ್ತು ರಕ್ತ ಹರಿಸಿ ಬಿಸಿಲು-ಮಳೆ ಎನ್ನದೆ ಹಗಲು-ರಾತ್ರಿ, ಮಹಿಳೆಯರು, ಮಕ್ಕಳು, ಪುರುಷರನ್ನು ಒಳಗೊಂಡು ಶ್ರಮಪಡುವ ದುಡಿಮೆಗಾರರನ್ನು ತುಳಿದು, ಕಾರ್ಮಿಕ ಸಂಘಟನೆಗಳನ್ನು ಹೀಗಳೆದು ಆರ್ಥಿಕತೆಯನ್ನು ಕಟ್ಟಲು ಸಾಧ್ಯವೇ? ದುಡಿಮೆಗಾರರನ್ನು ದೇಶದ್ರೋಹಿಗಳೆಂದು ಹೀಯಾಳಿಸಿ, ವೆಲ್ತ್ ಕ್ರಿಯೇಟರ್‍ಸ್‌ಗಳು ಬಂಡವಾಳಿಗರೇ ವಿನಾ ಪಂಚರ್ ಹಾಕುವವರಲ್ಲ, ಕೂಲಿಕಾರರಲ್ಲ ಎನ್ನುವ ಆಳುವ ಪಕ್ಷವು ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ಹೇಗೆ ನಡೆಸಿಕೊಂಡಿತು ಎಂಬುದರ ಹಿನ್ನೆಲೆಯಲ್ಲಿ ಜಿಡಿಪಿಯ ಮಹಾ ಕುಸಿತವನ್ನು ನಾವು ವಿಶ್ಲೇಷಿಸಬೇಕಾಗಿದೆ.

ಆಯ್ದ ಆರ್ಥಿಕ ಸೂಚಿಗಳು
ಅಭಿವೃದ್ಧಿಯ ಅಂದರೆ ಜಿಡಿಪಿಯ ಬೆಳವಣಿಗೆಯ ಮೂಲ ದ್ರವ್ಯ ಉಳಿತಾಯ ಮತ್ತು ಬಂಡವಾಳ ಹೂಡಿಕೆ. ಉಳಿತಾಯದ ಪ್ರಮಾಣವು2011-12ರಲ್ಲಿ ಜಿಡಿಪಿಯ ಶೇ.34.6ರಷ್ಟಿದ್ದುದು 2019-20ರಲ್ಲಿ ಶೇ.30.1ಕ್ಕಿಳಿದಿದೆ. ಉಳಿತಾಯಕ್ಕೆ ಹೆಚ್ಚಿನ ಪ್ರಮಾಣವನ್ನು ನೀಡುವುದು ಕೌಟುಂಬಿಕ ಉಳಿತಾಯ. ಇದು 2011-12ರಲ್ಲಿ ಜಿಡಿಪಿಯ ಶೇ.23ರಷ್ಟಿದ್ದುದು ಈಗ ಶೇ.18ಕ್ಕಿಳಿದಿದೆ. ನಮ್ಮ ಆರ್ಥಿಕತೆಯಲ್ಲಿನ 2020-21ರ ಮೊದಲ ತ್ರೈಮಾಸಿಕದಲ್ಲಿ ಒಟ್ಟು ಸ್ಥಿರ ಬಂಡವಾಳ ಸಂಚಯವು ಶೇ.47ರಷ್ಟು ಕುಸಿದಿದೆ. ಅಭಿವೃದ್ಧಿಯ ಮತ್ತೆರಡು ಎಂಜಿನ್ನುಗಳೆಂದರೆ ಸಾರ್ವಜನಿಕ ವೆಚ್ಚ ಮತ್ತು ಅನುಭೋಗ ವೆಚ್ಚ. ಸರ್ಕಾರದ ಸಾರ್ವಜನಿಕ ವೆಚ್ಚವು ಪ್ರಸ್ತುತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಶೇ.10 ರಷ್ಟು ಕುಸಿತ ಕಂಡಿದ್ದರೆ ಅನುಭೋಗ ವೆಚ್ಚದಲ್ಲಿ ಶೇ.54.3ರಷ್ಟು ಕುಸಿತ ಉಂಟಾಗಿದೆ. ಕೃಷಿವಲಯವನ್ನು ಬಿಟ್ಟು ಉಳಿದ ಎಲ್ಲ ವಲಯಗಳಲ್ಲಿಯೂ ಕುಸಿತ ಉಂಟಾಗಿದೆ (ಕೃಷಿಯ ಸಮೃದ್ಧತೆಯು ತರುವ ಸಮಸ್ಯೆಯನ್ನು ಮುಂದೆ ಚರ್ಚಿಸಲಾಗಿದೆ). ತಯಾರಿಕಾ ವಲಯದಲ್ಲಿನ ಕುಸಿತದ ಪ್ರಮಾಣ ಶೇ.39.3, ನಿರ್ಮಾಣ ವಲಯದಲ್ಲಿನ ಕುಸಿತ ಶೇ.50.3 ವ್ಯಾಪಾರ, ಹೋಟೆಲುಗಳು, ಸಾರಿಗೆ, ಸಂವಹನ ಮುಂತಾದವುಗಳನ್ನು ಒಳಗೊಂಡ ವಲಯದಲ್ಲಿನ ಕುಸಿತ ಶೇ.47.0ಆಳುವ ಪಕ್ಷವು ತೀರ್ಥಯಾತ್ರೆಗೆ (ಅಯೋಧ್ಯೆ) ನೀಡಿದಷ್ಟು ಮಹತ್ವವನ್ನು ಆರ್ಥಿಕ ನಿರ್ವಹಣೆಗೆ ನೀಡುತ್ತಿಲ್ಲ. ಈರುಳ್ಳಿ ಬೆಲೆಗಳು ಗಗನಸದೃಶವಾಗಿವೆಯೆಲ್ಲ ಎಂದು ಕೇಳಿದರೆ ವಿತ್ತ ಮಂತ್ರಿ ’ನಾನು ಅದನ್ನು ತಿನ್ನುವುದಿಲ್ಲ ಎಂಬ ಧಾರ್ಮಿಕ ಅಂಧಶ್ರದ್ಧೆಯ ಉತ್ತರ ನೀಡುತ್ತಾರೆ. ಜಿಡಿಪಿ ದರ ಕುಸಿಯುತ್ತಿದೆಯಲ್ಲಾ ಅಂದರೆ ಅವರು ’ದೇವರ ಆಟ’ ಎನ್ನುತ್ತಾರೆ. ಇಂತಹ ನಿರ್ವಹಣಾ ವ್ಯವಸ್ಥೆಯಲ್ಲಿ ಜಿಡಿಪಿಯು ಕುಸಿಯದೆ ಇರಲು ಸಾಧ್ಯವೇ?

ಒಕ್ಕೂಟ ವ್ಯವಸ್ಥೆಯ ನಾಶ
ಜಿಡಿಪಿ ಮಹಾಕುಸಿತದ ಚರ್ಚೆಯಲ್ಲಿ ಮುಂಚೂಣಿಗೆ ಬರದಿರುವ ಅಂಶವೆಂದರೆ ಜಿಡಿಪಿ ಬೆಳವಣಿಗೆಗೆ ಆಧಾರಸ್ತಂಭವಾಗಿರುವ ರಾಜ್ಯಗಳ ಹಿತಾಸಕ್ತಿಯ ಬಗ್ಗೆ ಕೇಂದ್ರ ತೋರಿದ ವಿನಾಶಕಾರಿ ಧೋರಣೆ. ರಾಜ್ಯಗಳ ಬೆಳವಣಿಗೆಯಿಲ್ಲದೆ ದೇಶದ ಆರ್ಥಿಕತೆಯು ಬೆಳೆಯುವುದು ಅಸಾಧ್ಯ. ಉದಾ: 2018-19ರಲ್ಲಿ ದೇಶದ ಜಿಡಿಪಿಯಲ್ಲಿ ದಕ್ಷಿಣ ಭಾರತದ ಐದು ರಾಜ್ಯಗಳ ಪಾಲು ಶೇ31 (ಕೇಂದ್ರದ ಆರ್ಥಿಕ ಸಮೀಕ್ಷೆ, 2019-20). ದೇಶದ 2011 ಜನಸಂಖ್ಯೆಯಲ್ಲಿ ಇವುಗಳ ಪಾಲು ಕೇವಲ ಶೇ.20 ಮಾತ್ರ. ಈ ರಾಜ್ಯಗಳ ಹಿತಾಸಕ್ತಿಯನ್ನು ಕಡೆಗಣಿಸಿದರೆ ಏನಾಗುತ್ತದೆ ಎಂಬುದನ್ನು ಈಗ ದೇಶ ಅನುಭವಿಸುತ್ತಿದೆ. ಮಹಾಸಂಕಷ್ಟದ ಸಂದರ್ಭಗಳಲ್ಲಿ ಕೇಂದ್ರವು ರಾಜ್ಯಗಳಿಗೆ ಒತ್ತಾಸೆಯಾಗಿ ನಿಲ್ಲಬೇಕು. ಆದರೆ ಈ ಸರ್ಕಾರವು ಸಂವಿಧಾನಾತ್ಮಕ ಒಕ್ಕೂಟ ನೀತಿಯನ್ನು ಗಾಳಿಗೆ ತೂರಿಬಿಟ್ಟಿದೆ. ಕಳೆದ ಮಾರ್ಚನಲ್ಲಿ ಲಾಕ್‌ಡೌನ್ ಘೋಷಿಸುವಾಗ ರಾಜ್ಯಗಳ ಜೊತೆ ಕೇಂದ್ರವು ಸಮಾಲೋಚನೆ ನಡೆಸಲಿಲ್ಲ. ಆದರೆ ವಲಸೆ ಕಾರ್ಮಿಕರ ಬವಣೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ರಾಜ್ಯಗಳಿಗೆ ಬಿಡಲಾಯಿತು. ಕೋವಿಡ್ ಸಂಬಂಧಿಸಿದ ಆರೋಗ್ಯ ವ್ಯವಸ್ಥೆ ನಿರ್ವಹಿಸಲು ಅದು ಬಿಡಿಗಾಸು ನೀಡಲಿಲ್ಲ.

ಈಗ ಜಿಎಸ್‌ಟಿಯಲ್ಲಿನ ರಾಜ್ಯಗಳ ಶಾಸನಬದ್ಧ ಪಾಲನ್ನು ನೀಡಲು ಕೇಂದ್ರ ನಿರಾಕರಿಸುತ್ತಿದೆ. ಕರ್ನಾಟಕಕ್ಕೆ ಇದರ ಬಾಬ್ತು 2020-21ರಲ್ಲಿ ರೂ.13764 ಕೋಟಿ ಬರಬೇಕು (ಗೃಹಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ). ಕೇಂದ್ರದ ತೆರಿಗೆಯಲ್ಲಿ ಕರ್ನಾಟಕದ ಪಾಲು 2019-20ರಲ್ಲಿ ಬಜೆಟ್ ಅಂದಾಜು ರೂ.39866ಕೋಟಿ. ಆದರೆ ಬಂದದ್ದು ಮಾತ್ರ ರೂ.30919 ಕೋಟಿ ಮಾತ್ರ. ಇಲ್ಲಿನ ನಷ್ಟ ರೂ.9947 ಕೋಟಿ (ಕರ್ನಾಟಕ ಬಜೆಟ್ 2020). ಆದರೆ 2020-21ರಲ್ಲಿ ಕೇಂದ್ರ ತೆರಿಗೆಯಲ್ಲಿ ಕರ್ನಾಟಕದ ಪಾಲು ರೂ.28591ಕೋಟಿಗೆ ಕುಸಿದಿದೆ. ಹಾಗಾದರೆ ರಾಜ್ಯಗಳು ಹೇಗೆ ತಮ್ಮ ಆರ್ಥಿಕತೆಗಳನ್ನು ನಿರ್ವಹಿಸಬೇಕು? ಕರ್ನಾಟಕದಂತೆ ಉಳಿದ ರಾಜ್ಯಗಳ ಸ್ಥಿತಿಯೂ ಚಿಂತಾಜನಕವಾಗಿದೆ. ರಾಜ್ಯಗಳ ಅಭಿವೃದ್ಧಿಯಾಗದಿದ್ದರೆ ಜಿಡಿಪಿ ಹೇಗೆ ಬೆಳೆಯುತ್ತದೆ? ಕೇಂದ್ರವು ಹೀಗೆ ಸಂವಿಧಾನಾತ್ಮಕ ಒಕ್ಕೂಟ ತತ್ವಕ್ಕೆ ತಿಲಾಂಜಲಿ ನೀಡುತ್ತಿರುವುದಕ್ಕೆ ಇದೊಂದು ನಿದರ್ಶನ. ಇಂತಹದ್ದೇ ಅನೇಕ ಒಕ್ಕೂಟ ವಿರೋಧಿ ಕ್ರಮಗಳನ್ನು ಕೇಂದ್ರವು ಜಾರಿಗೊಳಿಸುತ್ತಿದೆ (ಒಂದು ದೇಶ-ಒಂದು ಪರೀಕ್ಷೆ – ಎನ್‌ಈಈಟಿ), ಒಂದು ದೇಶ-ಒಂದು ನೇಮಕಾತಿ ವ್ಯವಸ್ಥೆ (ನ್ಯಾಷನಲ್ ರಿಕ್ರೂಟ್‌ಮೆಂಟ್ ಏಜೆನ್ಸಿ), ಒಂದು ದೇಶ-ಒಂದು ಬ್ಯಾಂಕು (ಸ್ಟೇಟ್ ಬ್ಯಾಂಕುಗಳ ವಿಲೀನ), ಒಂದು ದೇಶ-ಒಂದು ಭಾಷೆ: ಹಿಂದಿ ಹೇರಿಕೆ, ಸಂಸ್ಕೃತದ ಪೋಷಣೆ, ಒಂದು ದೇಶ-ಒಂದು ಮಾರುಕಟ್ಟೆ ಇತ್ಯಾದಿ). ವಾಸ್ತವವಾಗಿ ’ಒಂದು’ ಎನ್ನುವದರಲ್ಲಿ ಸರ್ವಾಧಿಕಾರತ್ವದ ವಾಸನೆ ಮತ್ತು ಒಕ್ಕೂಟ ವಿರೋಧಿ ಧೋರಣೆ ಇರುವುದನ್ನು ಗುರುತಿಸುವುದು ಕಷ್ಟವಾಗಬಾರದು.

ಬಂಡವಾಳದ ಆರಾಧನೆ, ಬಂಡವಾಳಿಗರ ವೈಭವೀಕರಣ
ಜಗತ್ತಿನ ಚರಿತ್ರೆಯಲ್ಲಿ ಆರ್ಥಿಕ ಮಹಾದುರಂತಗಳು ಸಂಭವಿಸಿದಾಗ ಯಾವ ದೇಶದಲ್ಲಿಯೂ, ಯಾವ ಕಾಲದಲ್ಲಿಯೂ ಅದರ ನಿರ್ವಹಣೆಗೆ ಖಾಸಗಿ ವಲಯವನ್ನು ಅವಲಂಬಿಸಿದ ನಿದರ್ಶನಗಳು ನಮಗೆ ದೊರೆಯುವುದಿಲ್ಲ. ಖಾಸಗಿವಲಯ ಅಂತಹ ಜವಾಬ್ದಾರಿಯನ್ನು ನಿರ್ವಹಿಸಿದ ಉದಾಹರಣೆಗಳು ಚರಿತ್ರೆಯಲ್ಲಿ ದೊರೆಯುವುದಿಲ್ಲ. ಏಕೆಂದರೆ ಅವುಗಳ ಮೂಲ ಗುರಿ ’ಲಾಭ’. ಅದು 1930ರ ಮಹಾ ಆರ್ಥಿಕ ಕುಸಿತವಿರಬಹುದು, ಎರಡನೆಯ ಮಹಾಯುದ್ಧದ ನಂತರದ ಆರ್ಥಿಕ ಪುನರ್‌ನಿರ್ಮಾಣದ ಯೋಜನೆಯಿರಬಹುದು. ಅಮೆರಿಕೆಯು 1930ರ ಮಹಾ ಆರ್ಥಿಕ ಕುಸಿತವನ್ನು ಎದುರಿಸಲು ’ನ್ಯೂಡೀಲ್ ಪಾಲಿಸಿ’ ಎಂಬ ಸರ್ಕಾರಿ ಬೃಹತ್ ಕಾರ್ಯಕ್ರಮವನ್ನು ಜಾರಿಗೊಳಿಸಿ ದುರಂತದಿಂದ ಹೊರಬಂತು. ಅಧ್ಯಕ್ಷ ಫ್ರಾಂಕ್‌ಲೀನ್ ಡಿ. ರೂಸ್‌ವೆಲ್ಟ್ ಆಡಳಿತವು ಲೆಸೈಫೈರ್ ತತ್ವಕ್ಕೆ ತಿಲಾಂಜಲಿಯಿಟ್ಟು ಬಡತನ ನಿವಾರಿಸಲು, ಉದ್ಯೋಗಗಳನ್ನು ಬೃಹತ್ ಪ್ರಮಾಣದಲ್ಲಿ ಸೃಷ್ಟಿಸಲು, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಲು, ಮನೆಯಿಲ್ಲದವರಿಗೆ ಮನೆ ನೀಡಲು, ವಿಕಲಚೇತನರಿಗೆ, ಮಹಿಳೆಯರಿಗೆ ಪರಿಹಾರ ನೀಡುವ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನೇಕ ಸಾವಿರ ಬಿಲಿಯನ್ ಡಾಲರ್‌ಗಳನ್ನು ವೆಚ್ಚ ಮಾಡಿತು. ಇದೇರೀತಿಯಲ್ಲಿ ಎರಡನೆಯ ಮಹಾಯುದ್ಧದಿಂದ ಉಂಟಾಗಿದ್ದ ಆರ್ಥಿಕ ವಿನಾಶವನ್ನು ತಡೆಯಲು ಅಮೆರಿಕೆಯ ನೇತೃತ್ವದಲ್ಲಿ ಯೂರೋಪಿಯನ್ ಆರ್ಥಿಕ ಪುನಶ್ಚೇತನ ಕಾರ್ಯಕ್ರಮ (ಮಾರ್ಷ್‌ಲ್ ಪ್ಲಾನ್) ಹಮ್ಮಿಕೊಳ್ಳಲಾಯಿತು. ಸರ್ಕಾರಗಳ ಸಕ್ರಿಯ ಪಾತ್ರದಿಂದ ಮಾತ್ರ ಮಹಾ ಆರ್ಥಿಕ ಕುಸಿತವನ್ನು ಎದುರಿಸುವುದು ಸಾಧ್ಯ. ಕೋವಿಡ್ ದುರಂತದಲ್ಲಿ ಖಾಸಗಿ ಆರೋಗ್ಯ ವ್ಯವಸ್ಥೆಯು ಹೇಗೆ ಕುಸಿಯಿತು ಮತ್ತು ಅದು ಹೇಗೆ ಲಾಭ ಮಾಡುವುದು ಎಂಬುದರಲ್ಲಿ ಮಾತ್ರ ತೊಡಗಿತ್ತು ಎಂಬುದು ಈಗ ರಹಸ್ಯವಾಗೇನು ಉಳಿದಿಲ್ಲ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಇದನ್ನು ಹೇಗೆ ಎದುರಿಸುತ್ತಿದೆ, ಆಶಾ ಕಾರ್ಯಕರ್ತೆಯರು, ನರ್ಸ್‌ಗಳು, ವೈದ್ಯರು ಮತ್ತು ಇತರೆ ಸಿಬ್ಬಂದಿ ಹೇಗೆ ದುಡಿಯುತ್ತಿದ್ದಾರೆ ಎಂಬ ನಿಜ ಕೂಡ ಈಗ ನಮ್ಮ ಮುಂದಿದೆ. ಇದನ್ನು ಖಾಸಗಿ ಆರೋಗ್ಯ ವ್ಯವಸ್ಥೆಯು ನಿರ್ವಹಿಸುವುದು ಕನಸು-ಮನಸಿನಲ್ಲಿಯೂ ಸಾಧ್ಯವಿಲ್ಲ.

 

ಆದರೆ ದುರದೃಷ್ಟದ ಸಂಗತಿಯೆಂದರೆ ನಮ್ಮ ಸರ್ಕಾರವು ಖಾಸಗಿವಲಯದ ಆರಾಧನೆಯಲ್ಲಿ ತೊಡಗಿದೆ. ಬಂಡವಾಳಿಗರನ್ನು ’ವೆಲ್ತ್ ಕ್ರಿಯೇಟರ್‍ಸ್’ ಎಂದೂ, ಅವರು ದೇಶದ ಸಂಪತ್ತು ಎಂದೂ, ಅವರನ್ನು ಅವಮಾನಿಸಬಾರದೆಂದು ಹೇಳಿ ಅವರಿಗೆ ಇನ್ನಿಲ್ಲದ ತೆರಿಗೆ ವಿನಾಯಿತಿ, ತೆರಿಗೆ ರಜೆ, ರಿಯಾಯತಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ರೆವಿನ್ಯೂ ಸ್ವೀಕೃತಿಯ 2019-2020ರಲ್ಲಿ ಬಜೆಟ್ ಅಂದಾಜು ರೂ.16.49 ಲಕ್ಷ ಕೋಟಿಯಿದ್ದರೆ ವಾಸ್ತವವಾಗಿ ಸಂಗ್ರಹವಾದ್ದು ರೂ. 15.04 ಲಕ್ಷ ಕೋಟಿ. ಇದು ಕೋವಿಡ್ ಪೂರ್ವದ ಸಾಲಿನಲ್ಲಿನ ಕೇಂದ್ರದ ತೆರಿಗೆ ಸಂಗ್ರಹದ ಸಾಧನೆ. ಈಗ ಕೋವಿಡ್ ದುರಂತದ ಹಿನ್ನೆಲೆಯಲ್ಲಿ ಮತ್ತು ಜಿಡಿಪಿಯು ಶೇ.23.90ರಷ್ಟು ಕುಸಿದಿರುವುದರಿಂದ 2020-2021ರಲ್ಲಿ ಸರ್ಕಾರ ಅಂದಾಜು ಮಾಡಿರುವ ರೂ. 16.35 ಲಕ್ಷ ಕೋಟಿ ರೆವಿನ್ಯೂ ಸಂಗ್ರಹ ಸಾಧ್ಯವಿಲ್ಲ.

ಸಮಸ್ಯೆ ಉತ್ಪಾದನೆಯದಲ್ಲ: ಸಮಗ್ರ ಬೇಡಿಕೆಯದ್ದು!
ತನ್ನ ತೆರಿಗೆ ಸಂಪನ್ಮೂಲ ನೆಲ ಕಚ್ಚಿರುವ ಸಂದರ್ಭದಲ್ಲಿ, ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವುದು ಕಷ್ಟವಾಗಿರುವಾಗ, 2019ರ ಸೆಪ್ಟಂಬರ್‌ನಲ್ಲಿ ವಿತ್ತಮಂತ್ರಿಯವರು ಉದ್ದಿಮೆದಾರರಿಗೆ ರೂ.1.45 ಲಕ್ಷ ಕೋಟಿ ತೆರಿಗೆ ವಿನಾಯಿತಿ ಘೋಷಿಸಿದರು. ಕಾರ್ಪೊರೆಟ್ ತೆರಿಗೆಯನ್ನು ಶೇ.30 ರಿಂದ ಶೇ.22ಕ್ಕೆ, ಹೊಸ ಉದ್ದಿಮೆಗಳಿಗೆ ಶೇ.15ರಷ್ಟಕ್ಕೆ ಇಳಿಸಿದರು. ಹಾಗಾದರೆ ಸರ್ಕಾರಕ್ಕೆ ಸಂಪನ್ಮೂಲ ಹೇಗೆ ದೊರೆಯುತ್ತದೆ? ಸಾರ್ವಜನಿಕ ವೆಚ್ಚ ಭರಿಸಲು ಸಂಪನ್ಮೂಲವಿಲ್ಲದಿದ್ದಾಗ ಜಿಡಿಪಿಯು ಕುಸಿಯದೆ ಇರಲು ಸಾಧ್ಯವೆ? ಜಯತಿ ಘೋಷ್ ಹೇಳುತ್ತಿರುವಂತೆ, ಪರಕಾಲ ಪ್ರಭಾಕರ್ ಟೀಕಿಸುತ್ತಿರುವಂತೆ ಈ ಸರ್ಕಾರಕ್ಕೆ ನಿಶ್ಚಿತವಾದ ಆರ್ಥಿಕ ನೀತಿ ಎಂಬುದೇ ಇಲ್ಲ. ನಿರುದ್ಯೋಗವು ಕಳೆದ 45ವರ್ಷಗಳಲ್ಲಿ ಅತ್ಯಧಿಕ ಎಂದು ಸರ್ಕಾರಿ ಸಂಸ್ಥೆಯ ವರದಿಯು ಹೇಳುತ್ತ್ತಿರುವಾಗ ಅದರ ಬಗ್ಗೆ ಒಂದೇ ಒಂದು ಕಾರ್ಯಕ್ರಮವನ್ನು ರೂಪಿಸುವುದು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಬಂಡವಾಳಸಾಂದ್ರ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ, ಶ್ರಮ ಉಳಿತಾಯ ಕ್ರಮವನ್ನು ಅನುಸರಿಸುವ ಖಾಸಗಿ ವಲಯವು ಉದ್ಯೋಗ ನಿರ್ಮಿಸುವುದು ಸಾಧ್ಯವೇ? ಮುಖ್ಯ ಆರ್ಥಿಕ ಸಲಹೆಗಾರ ಕೆ. ಸುಬ್ರಮಣಿಯನ್, ನೀತಿ ಆಯೋಗದ ರಾಜೀವ್ ಕುಮಾರ್, ಅಮಿತಾಬ್ ಕಾಂತ್, ಆರ್‌ಬಿಐನ ಗೌವರ್ನರ್ ಶಕ್ತಿದಾಸ್ ಕಾಂತ್, ವಿತ್ತಮಂತ್ರಿ, ಪ್ರಧಾನಮಂತ್ರಿ ಮುಂತಾದವರೆಲ್ಲ ಬಂಡವಾಳ ಹೂಡಿಕೆ, ತೆರಿಗೆ ವಿನಾಯಿತಿ, ಕಾರ್ಮಿಕ ಶಾಸನಗಳ ಬರಖಾಸ್ತು ಮುಂತಾದ ಸರಬರಾಜು ಕೇಂದ್ರಿತ ಕ್ರಮಗಳ ಬಗ್ಗೆ ಮಾತನಾಡುತ್ತಿದ್ದಾರೆ.

ಆದರೆ ಸಾಮಾನ್ಯ ಅರ್ಥಶಾಸ್ತ್ರ ವಿದ್ಯಾರ್ಥಿಗೂ ತಿಳಿದಿರುವ ಸಂಗತಿಯೆಂದರೆ ನಮ್ಮ ಆರ್ಥಿಕತೆಯಲ್ಲಿನ ಇಂದಿನ ಸಮಸ್ಯೆ ಸಮಗ್ರ ಬೇಡಿಕೆಯಲ್ಲಿನ ಕೊರತೆ. ರಘುರಾಮ್ ರಾಜನ್, ಅರವಿಂದ್ ಸುಬ್ರಮಣಿಯನ್, ಅಮರ್ತ್ಯ ಸೇನ್, ಅಭಿಜಿತ್ ಬ್ಯಾನರ್ಜಿ, ಗೀತಾ ಗೋಪಿನಾಥ್, ಜಯತಿ ಘೋಷ್ ಮುಂತಾದವರೆಲ್ಲ ಸಮಗ್ರ ಬೇಡಿಕೆಯನ್ನು ಬಲಪಡಿಸುವ ಬಗ್ಗೆ, ಸಾರ್ವಜನಿಕ ವೆಚ್ಚವನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಬಂಡವಾಳಿಗರ ಆರಾಧನೆಯಲ್ಲಿ ಮುಳುಗಿರುವ ಕೇಂದ್ರವು ಬೇಡಿಕೆಯನ್ನು ಬಲಪಡಿಸುವ ಕ್ರಮಗಳನ್ನಾಗಲಿ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಕಾರ್ಯಕ್ರಮಗಳನ್ನಾಗಲಿ ಯೋಜಿಸುತ್ತಿಲ್ಲ. ಕಾರ್ಪೊರೆಟ್ ವಲಯದ ಮೇಲೆ ಹೆಚ್ಚು ತೆರಿಗೆ ವಿಧಿಸುವ ಬಗ್ಗೆಯೂ ಅದು ಚಿಂತಿಸುತ್ತಿಲ್ಲ. ಕಾರ್ಪೊರೆಟ್‌ಗಳ ಲಾಭವು ಕೋವಿಡ್ ದುರಂತದಲ್ಲಿಯೂ ಅವಿಚ್ಛಿನ್ನವಾಗಿ ಏರಿಕೆಯಾಗುತ್ತಿದೆ. ಮುಖೇಶ್ ಅಂಬಾನಿ ಆಸ್ತಿಯ ಮೌಲ್ಯವೇ ಇಂದು ರೂ.5.6 ಲಕ್ಷ ಕೋಟಿಯಾಗಿದೆ. ಇಂತಹ ನೂರಾರು ಕಾರ್ಪೊರೆಟ್‌ಗಳಿವೆ. ಅವುಗಳ ಮೇಲೆ ಶೇ.10 ವಿಶೇಷ ತೆರಿಗೆ ವಿಧಿಸಿದರೂ ಸಾಕು ಲಕ್ಷಾಂತರ ಕೋಟಿ ಸಂಪನ್ಮೂಲವನ್ನು ಕೇಂದ್ರ ಪಡೆದುಕೊಳ್ಳಬಹುದು.

ಕೃಷಿಯಲ್ಲಿನ ಸಮೃದ್ಧತೆ ತರಬಹುದಾದ ಸಮಸ್ಯೆ!
ಜಿಡಿಪಿಯ ಎಲ್ಲ ಅಂಗಗಳಲ್ಲಿಯೂ ಕುಸಿತ ಸಂಭವಿಸುತ್ತಿರುವಾಗ ಕೃಷಿವಲಯ ಮಾತ್ರ 2020-21ರ ಮೊದಲ ತ್ರೈಮಾಸಿಕದಲ್ಲಿ ಸಮೃದ್ಧ ಮಳೆಮಾರುತದಿಂದಾಗಿ ಶೇ.3.4 ರಷ್ಟು ಬೆಳವಣಿಗೆ ಸಾಧಿಸಿದೆ. ರೈತರ ವರಮಾನವನ್ನು 2022ರಲ್ಲಿ ದುಪ್ಪಟ್ಟು ಮಾಡುವುದಾಗಿ ಕೇಂದ್ರ ಗುರಿ ನೀಡಿದೆ. ಆದರೆ ಈಗ ತಜ್ಞರು ಹೇಳುತ್ತಿರುವಂತೆ ಆರ್ಥಿಕತೆಯು ದುಸ್ಥಿತಿಯಲ್ಲಿರುವಾಗ, ಜಿಡಿಪಿ ನಕಾರಾತ್ಮಕ ಶೇ.23.90 ರಷ್ಟು ಕುಸಿದಿರುವಾಗ, ನಿರುದ್ಯೋಗ 45ವರ್ಷಗಳಲ್ಲಿಯೇ ಅತ್ಯಧಿಕವಾಗಿರುವಾಗ ಆಹಾರೋತ್ಪನ್ನಗಳ ಬೆಲೆಯು ಕುಸಿಯುವ ಸಾಧ್ಯತೆಯಿದೆ. ಕೃಷಿಯಲ್ಲಿ ಸಮೃದ್ಧತೆಯು ರೈತರಿಗೆ ವರವಾಗುವುದು ಸಾಧ್ಯವಿಲ್ಲ. ಹಿಂದೆ ಕೃಷಿಯಲ್ಲಿ ಸಮೃದ್ಧತೆಯು ಸಂಭವಿಸಿದಾಗಲೆಲ್ಲ ರೈತರ ವರಮಾನ ಏನಾಗಿತ್ತು ಎಂಬ ಅನುಭವ ನಮ್ಮ ಮುಂದಿದೆ. ಇದನ್ನು ಎದುರಿಸುವ ಬಗ್ಗೆ ಆಹಾರೋತ್ಪನ್ನಗಳ ಬೆಲೆಗಳು ನೆಲ ಕಚ್ಚದಂತೆ ತಡೆಯಲು ಸರ್ಕಾರವು ಮುನ್ನೆಚ್ಚರಿಕೆಯ ಸಿದ್ಧತೆಯನ್ನು ಮಾಡಿಕೊಂಡಿದೆಯೇ? ಅಗತ್ಯ ಕ್ರಮಗಳ ಬಗ್ಗೆ ಆಲೋಚಿಸಿದೆಯೇ? ಅಥವಾ ರೈತರನ್ನು ಖಾಸಗಿ ವ್ಯಾಪಾರಗಾರರ ಕಪಿಮುಷ್ಠಿಗೆ ಸಿಕ್ಕಿಸಿಬಿಡುತ್ತದೆಯೇ? ಇದರ ಸಾಧ್ಯತೆ ಹೆಚ್ಚು. ಏಕೆಂದರೆ ಕೃಷಿ ಮಾರುಕಟ್ಟೆಯನ್ನು ಖಾಸಗಿ ಬಂಡವಾಳಿಗರ ವಶಕ್ಕೆ ನೀಡುವುದಕ್ಕೆ ಎಪಿಎಮ್‌ಸಿ ಕಾಯಿದೆ ತಿದ್ದುಪಡಿ ಮಾಡಲಾಗಿದೆ. ರೈತರು ಮತ್ತು ವ್ಯಾಪಾರಗಾರರ ನಡುವೆ ಬಾರ್‌ಗೈನಿಂಗ್ ಪವರ್ ಯಾರಿಗೆ ಅಧಿಕವಾಗಿದೆ? ಇವರಿಬ್ಬರಲ್ಲಿ ಸರ್ಕಾರವು ಯಾರ ಪರವಾಗಿ ನಿಲ್ಲಬೇಕು? ಕೇಂದ್ರವು ವ್ಯಾಪಾರಗಾರರ ಪರವಾಗಿ ನಿಂತಿದೆ. ಕೃಷಿಯಲ್ಲಿನ ಸಮೃದ್ಧತೆಯು ರೈತರ ಬದುಕನ್ನು ಉತ್ತಮಪಡಿಸುವುದು ಸಾಧ್ಯವಿಲ್ಲ.

ಕೊನೆಯದಾಗಿ, ಪುರೋಹಿತಶಾಹಿಗೆ ಆರ್ಥಿಕತೆಯು ಅರ್ಥವಾಗುವುದು ಸಾಧ್ಯವಿಲ್ಲ. ಈ ವರ್ಗಕ್ಕೆ ದುಡಿಮೆ ಎನ್ನುವುದು ಸೂತಕ, ಅಸಹ್ಯ, ಮೈಲಿಗೆ. ಈ ವರ್ಗದ ಕೈಯಲ್ಲಿ ಇಂದು ನಮ್ಮ ಆರ್ಥಿಕತೆ ಸಿಲುಕಿದೆ. ಪುರೋಹಿತಶಾಹಿ ಎನ್ನುವುದನ್ನು ಇಲ್ಲಿ ತೀರ್ಥಯಾತ್ರೆ, ಗಂಟೆ ಬಾರಿಸುವುದು, ಹಣತೆ ಹಚ್ಚುವುದು, ಗುಡಿ-ಗುಂಡಾರ ಸುತ್ತುವುದರಲ್ಲಿ ನಂಬಿಕೆ. ದಾನ-ದಕ್ಷಿಣೆಗಳಲ್ಲಿ ಮುಳುಗಿರುವವರಿಗೆ ಅನ್ವಯಿಸಿ ಬಳಸಲಾಗಿದೆ. ಕರ್ನಾಟಕದಲ್ಲಿ ನಾಲ್ಕಾರು ತಿಂಗಳಿಂದ ವಿಧವಾ/ವೃದ್ಧಾಪ್ಯ ವೇತನ ನೀಡಿಲ್ಲ ಎನ್ನಲಾಗಿದೆ. ಆದರೆ ಸರ್ಕಾರವು ತನ್ನ ಸಾಮಾಜಿಕ ಅಜೆಂಡಾಕ್ಕೆ ಅನುಗುಣವಾಗಿ ಮಠಗಳಿಗೆ ರೂ.39 ಕೋಟಿ ಅನುದಾನ ನೀಡಲು ಮುಂದಾಗಿದೆ. ಇದನ್ನು ನಾನು ’ಪುರೋಹಿತಶಾಹಿತ್ವ ಎಂದು ಕರೆದಿದ್ದೇನೆ. ಇವರದ್ದು ಸಾಮಾಜಿಕ ಅಜೆಂಡಾ ಮೊದಲು: ಆರ್ಥಿಕ ಅಜೆಂಡಾ ನಂತರದ್ದು. ಉದಾ: ಕರ್ನಾಟಕದ 2019-20ರಲ್ಲಿ ಜಾನುವಾರು ಆರ್ಥಿಕತೆಯು ಒಟ್ಟು ರಾಜ್ಯ ಆಂತರಿಕ ಉತ್ಪನ್ನಕ್ಕೆ (ಜಿಎಸ್‌ಡಿಪಿ) ನೀಡಿದ ಕೊಡುಗೆ ರೂ.35915ಕೋಟಿ. ಈ ಜಾನುವಾರು ಆರ್ಥಿಕತೆಗೆ ಸರ್ಕಾರವು ತನ್ನ ಸಾಮಾಜಿಕ ಅಜೆಂಡಾದ ಕಾರಣವಾಗಿ ದೊಡ್ಡ ಪೆಟ್ಟು ನೀಡುತ್ತಿದೆ. ಇದರಿಂದ ರೈತರಿಗೆ ದೊಡ್ಡ ಹಾನಿಯಾಗುತ್ತದೆ.

ಸರ್ಕಾರ ಈಗ ತುರ್ತಾಗಿ ಮಾಡಬೇಕಿರುವುದು ಏನು?
ಕೇಂದ್ರವು ಒಕ್ಕೂಟ ತತ್ವಕ್ಕೆ ಮನ್ನಣೆ ನೀಡಿ ರಾಜ್ಯಗಳೊಂದಿಗೆ ಪ್ರತಿಯೊಂದೂ ಸಂದರ್ಭದಲ್ಲಿ ಸಮಾಲೋಚಿಸಿ ಕ್ರಮ ತೆಗೆದುಕೊಳ್ಳಬೇಕು. ರಾಜ್ಯಗಳ ಆರ್ಥಿಕ ಬೆಳವಣಿಗೆಗೆ ಒತ್ತಾಸೆಯಾಗಿ ಕೇಂದ್ರ ನಿಲ್ಲಬೇಕು.
ಅತಿಯಾದ ಬಂಡವಾಳಿಗರ ಆರಾಧನೆ, ಅವರ ವೈಭವೀಕರಣ ನಿಲ್ಲಿಸಿ, ಅವರ ನಿಯಂತ್ರಣಕ್ಕೆ ಗಮನ ನೀಡಬೇಕು.

ಜಿಎಸ್‌ಟಿಯನ್ನು ಅತಿಯಾಗಿ ಅವಲಂಬಿಸದೆ (ಇದು ಪರೋಕ್ಷ ತೆರಿಗೆ, ದುಡಿಮೆಗಾರರಿಗೆ ಹೆಚ್ಚು ಭಾರ) ಕಾರ್ಪೊರೆಟ್ ವಲಯದಿಂದ ಭಾರಿ ತೆರಿಗೆ ಸಂಗ್ರಹಿಸಿಕೊಳ್ಳಬೇಕು. ಇದು ಜಾಗತಿಕವಾಗಿ ನಡೆಯುತ್ತಿರುವ ಕ್ರಮ.
ಉದ್ಯೋಗಗಳನ್ನು ಸೃಷ್ಟಿಸುವುದು ಸರ್ಕಾರದ ಆದ್ಯತೆಯಾಗಲಿ. ಮನ್‌ರೇಗಾದ ದುಡಿಮೆಯ ದಿನಗಳನ್ನು ವಾರ್ಷಿಕ ಒಂದು ಕುಟುಂಬಕ್ಕೆ ೨೦೦ ದಿನಗಳಿಗೇರಿಸಬೇಕು ಮತ್ತು ಕೂಲಿಯನ್ನು ರೂ.೫೦೦ಕ್ಕೆ ಏರಿಸಬೇಕು. ಅದಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಇಂತಹ ಕಾರ್ಯಕ್ರಮವನ್ನು ನಗರಪ್ರದೇಶದಲ್ಲಿಯೂ ಕೈಗೊಳ್ಳಬೇಕು.
ಜಿಡಿಪಿಯೇ ಅಭಿವೃದ್ಧಿಯಲ್ಲ. ಅಕ್ಷರ, ಆರೋಗ್ಯ, ಆಹಾರ, ಆಶ್ರಯ, ಆದಾಯಗಳನ್ನು ಒಳಗೊಂಡಂತೆ ಜನರ ಬದುಕನ್ನು ಸಮೃದ್ಧಗೊಳಿಸುವುದು ಅಭಿವೃದ್ಧಿ.

ಅಭಿವೃದ್ಧಿಗೆ ಲಿಂಗ ಆಯಾಮ ಮತ್ತು ಜಾತಿ ಆಯಾಮವೂ ಇದೆ. ಆದರೆ ಕೇಂದ್ರವು ನವಉದಾರೀಕರಣದ ಅಖಂಡ ಆರ್ಥಿಕ ನೀತಿಯಲ್ಲಿ ಮಾತ್ರ ನಂಬಿಕೆಯಿಟ್ಟಿದೆ. ಇದರಿಂದ ಪ. ಜಾ. ಮತ್ತು ಪ. ಪಂ. ಸಮುದಾಯಗಳಿಗೆ ಅನ್ಯಾಯವಾಗುತ್ತದೆ.

ಇಂದು ನಮಗೆ ಆರ್ಥಿಕತೆಯನ್ನು ಮರುಕಟ್ಟುವುದು ಇನ್ನಿಲ್ಲದ ಆದ್ಯತೆಯ ಸಂಗತಿಯಾಗಬೇಕು. ಈ ಪಥದಿಂದ ರಾಜಕೀಯ ಕಾರಣಗಳಿಗಾಗಿ ಜನರ ಗಮನವನ್ನು ಬೇರೆಡೆ ಹರಿಸುವುದಕ್ಕೆ ಪ್ರಯತ್ನಿಸುವುದು ಸಲ್ಲ. ಕೋವಿಡ್ ಇರಲಿ ಅಥವಾ ಕೋವಿಡ್ ಇಲ್ಲದಿರಲಿ ಮುಖ್ಯವಾಗಬೇಕಾದುದು ಜನರ ಬದುಕು. ಕೋವಿಡ್ ಇವತ್ತಲ್ಲ ನಾಳೆ ಹೋಗುತ್ತದೆ. ಅತಂತ್ರಕ್ಕೆ ಸಿಲುಕಿರುವ ಜನರ ಬದುಕನ್ನು ಮೊದಲು ಸರಿಪಡಿಸುವುದರ ಬಗ್ಗೆ ಕೇಂದ್ರ ಗಮನ ನೀಡಬೇಕು.

  • ಡಾ. ಟಿ. ಆರ್. ಚಂದ್ರಶೇಖರ
    ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ – ಸಂಸ್ಕೃತಿಗಳ ಬಗ್ಗೆಯೂ ತಮ್ಮ ಚಿಂತನೆಗಳನ್ನು ಪ್ರಸ್ತುತಪಡಿಸುವ ಪ್ರೊ. ಟಿ.ಆರ್.ಸಿ ಅವರು ಇತ್ತೀಚೆಗೆ ’ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ – ಒಂದು ಅಧ್ಯಯನ’ ಎಂಬ ಪುಸ್ತಕವನ್ನು ರಚಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...