ಈ ಸಂಚಿಕೆಯಲ್ಲಿ ಡಾ.ಕಫೀಲ್‌ ಖಾನ್‌ರವರ ಸಂದರ್ಶನವಿದೆ. ಇವರೊಂದು ಸೋಜಿಗ. ಜೆಎನ್‌ಯು ಕಾಣೆಯಾದ ವಿದ್ಯಾರ್ಥಿ ನಜೀಬ್‌ನ ತಾಯಿಯಂತೆ. ಇವರು ಕೆಲಕಾಲದ ಹಿಂದೆ ʼಸುತ್ತಲಿನ ನಾಲ್ಕು ಜನರಿಗೆ ಒಳ್ಳೆಯದುʼ ಮಾಡಿಕೊಂಡು ತಮ್ಮ ಪಾಡಿಗೆ ಇದ್ದವರು. ಆದರೆ ತಮ್ಮ ಬದುಕಿನಲ್ಲಾದ ʼಬೇರೆಯವರಾದರೆ ತತ್ತರಿಸಿ ಮೂಲೆಯಲ್ಲಿ ಕೂತುಬಿಡುವʼ ಭಯಾನಕ ಘಟನೆಗಳ ನಂತರ ಗಟ್ಟಿಯಾದವರು. ಕಫೀಲ್‌ ಖಾನ್‌ ಗೋರಖಪುರದ ತಾನು ಕೆಲಸ ಮಾಡುತ್ತಿದ್ದ ಬಿಆರ್‌ಡಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಮಕ್ಕಳ ಸರಣಿ ಸಾವುಗಳಾಗುತ್ತಿದ್ದಾಗ ಸ್ವಂತ ಖರ್ಚಿನಿಂದ ನೆರವಾಗಿದ್ದರು. ಆಕ್ಸಿಜನ್‌ ಕೊರತೆಗೆ ಕಾರಣವಾಗಿದ್ದ ಸರ್ಕಾರವು, ಅಂತಹ ವ್ಯಕ್ತಿಯನ್ನು ಅಮಾನತು ಮಾಡಿತು, ಬಂಧಿಸಿತು.

ಬಂಧನದ ನಂತರ ಹೊರಬಂದ ವ್ಯಕ್ತಿ ಮತ್ತಷ್ಟು ಜನರ ಸೇವೆಯಲ್ಲಿ ತೊಡಗಿದರು. ಶಾಂತಿ ಸಾರುವ ಮಾತುಗಳನ್ನಾಡುತ್ತಾ ಹೋದವರನ್ನು, ಗಲಭೆಗೆ ಪ್ರಚೋದನೆ ನೀಡಿದರು ಎಂದು ಮತ್ತೆ ಬಂಧಿಸಲಾಯಿತು. ಬಂಧನದಿಂದ ಮತ್ತೆ ಹೊರಬಂದ ಮೇಲೆ ʼನನಗೆ ದೇಶದ ಜನರ ಸೇವೆ ಮಾಡಲು ಅವಕಾಶ ಕೊಡಿʼ ಎಂದು ಕೇಳಿದರು. ಇಡೀ ವ್ಯವಸ್ಥೆಯ ಮೇಲೆ, ದೇಶದ ಜನರ ಮೇಲೆ ಸಿಟ್ಟು ಮಾಡಿಕೊಂಡು ʼಎಲ್ಲಾ ಹಾಳಾಗಲಿʼ ಎನ್ನಬೇಕು, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ವಾತಾವರಣವಿರುವೆಡೆ ಈ ಜೀವ ಪ್ರೀತಿ ಹೇಗೆ ಸಾಧ್ಯವಾಗಿದೆ?

ಡಾ.ಕಫೀಲ್ ಖಾನ್

ನಿನ್ನೆ ರಾತ್ರಿ ಹುಬ್ಬಳ್ಳಿಯಲ್ಲಿ ಒಬ್ಬರ ಭೇಟಿಯಾಯಿತು. ಮೂರು ಮಹಾನಗರಗಳಲ್ಲಿ ದೊಡ್ಡ ಹೋಟೆಲುಗಳ ಒಡೆಯರಾದ ಅಶ್ರಫ್‌ ಅಲಿಯವರು ಭಾರೀ ದೊಡ್ಡ ಕುಳ. ಅವರು ನಿನ್ನೆ ರಾತ್ರಿ ಖಾಸಗಿ ಆಸ್ಪತ್ರೆಗೆ ಸೇರಲಾಗದ ಜನರಿಗೆ ಸರ್ಕಾರೀ ಆಸ್ಪತ್ರೆಯಲ್ಲಿ ದಾಖಲಿಸಲು ಒದ್ದಾಡುತ್ತಿದ್ದರು. ಆಕ್ಸಿಜನ್‌ ಇರುವ ಬೆಡ್‌ ಇಲ್ಲ ಎಂದು ವೈದ್ಯರು ಹೇಳಿದಾಗ, ತಾನೇ ವಾರ್ಡ್‌ ವಾರ್ಡ್‌ ಸುತ್ತಾಡಿ, ಅಲ್ಲೊಂದು ಬೆಡ್‌ ಹುಡುಕಿ ರೋಗಿಯನ್ನು ದಾಖಲಿಸಿ ನಂತರ ನಮ್ಮನ್ನು ನೋಡಲು ಬಂದರು. ಹೋಟೆಲ್‌ಗಳನ್ನು ಕೊರೊನಾ ಐಸೋಲೇಷನ್‌ ವಾರ್ಡುಗಳಾಗಿ ಮಾಡಿ ದುಡ್ಡು ಮಾಡುವ ಸಂದರ್ಭ ಬರುವ ಮುಂಚೆಯೇ ತಮ್ಮ ಹೋಟೆಲ್‌ಅನ್ನು ಉಚಿತವಾಗಿ ಅದಕ್ಕಾಗಿ ಬಿಟ್ಟುಕೊಟ್ಟಿದ್ದರು. ಇದೆಲ್ಲಾ ಮಾಡಲು ಪ್ರೇರಣೆ ಏನು?

ಕೊರೊನಾದಿಂದ ಗುಣಮುಖನಾಗಿ ಬಂದ ನಾನು ಪ್ಲಾಸ್ಮಾ ಕೊಡಬಹುದು. ಆದರೆ, ಸ್ವಲ್ಪ ಸಮಯವೂ ಇಲ್ಲದಂತಹ ಸುತ್ತಾಟ ಮತ್ತು ಪ್ಲಾಸ್ಮಾ ಥೆರಪಿ ಬಗ್ಗೆ ವಿಶ್ವಾಸ ಇಲ್ಲದಿರುವ ಕಾರಣದಿಂದ ಅಷ್ಟು ಗಮನ ಹರಿಸಲಿಲ್ಲ. ಆದರೆ, ಯಾವುದೋ ಆಸ್ಪತ್ರೆಯಲ್ಲಿ ಯಾರೋ ಬಡ ರೋಗಿಗೆ ಪ್ಲಾಸ್ಮಾ ಹೊಂದಿಸಲು ಪ್ರಯತ್ನಿಸುತ್ತಿರುವ ಮರ್ಸಿ ಮಿಷನ್‌ (ಸ್ವಯಂಸೇವಕ ಮುಸ್ಲಿಂ ಯುವಕರ ಗುಂಪು) ವಾಲಂಟಿಯರ್‌ಗಳು ನಾನು ಪ್ಲಾಸ್ಮಾ ಕೊಡುವತನಕ ಬಿಡುವಂತೆ ಕಾಣುತ್ತಿಲ್ಲ. ಆ ಕಡೆ ಇರುವ ರೋಗಿಯನ್ನು ಅವರು ಧರ್ಮ ನೋಡಿ ನೆರವು ಕೊಡುತ್ತಿಲ್ಲ ಎಂಬುದು ಮಾತ್ರ ಖಚಿತ. ಬೆಂಗಳೂರಿನಲ್ಲಿ ಕ್ರಿಶ್ಚಿಯನ್‌, ಹಿಂದೂ ಜನರ ಅಂತ್ಯ ಸಂಸ್ಕಾರವನ್ನೂ, ಸತ್ತವರ ನಂಬಿಕೆಗನುಗುಣವಾಗಿ ಮಾಡಿದವರು. ಇವರನ್ನು ಕೈ ಹಿಡಿದು ನಡೆಸುತ್ತಿರುವುದು ಏನು?

ಅವರ ಪ್ರಕಾರ ಅವರು ಧರ್ಮದ ಕಾರ್ಯ ಮಾಡುತ್ತಿದ್ದಾರೆ. ಈ ದೇಶದ ಸಹಮನುಷ್ಯರಿಗೆ ಸಹಾಯ ಮಾಡುವುದು, ಸಂವಿಧಾನದ ತತ್ವಗಳಿಗನುಗುಣವಾಗಿ ನಡೆದುಕೊಳ್ಳುವುದು ಎಲ್ಲವೂ ಧರ್ಮದ ಭಾಗವೇ. ಇದೇ ದೇಶದಲ್ಲಿ, ಅವರದ್ದೇ ದೇಶವಾದರೂ ಅವರನ್ನು ಸತತವಾಗಿ ಅನ್ಯರನ್ನಾಗಿಸುತ್ತಿರುವ ದೇಶದಲ್ಲಿ ಅವರ ನಂಬಿಕೆ ಅವರನ್ನು ಮನುಷ್ಯರನ್ನಾಗಿ ಉಳಿಸಿದೆ.

ಹೌದು ಬಾಂಬ್‌ ಕಟ್ಟಿಕೊಂಡು ಸ್ಫೋಟಿಸಿ ಅಮಾಯಕರನ್ನು ಕೊಂದವರೂ ಈ ಧರ್ಮದಲ್ಲಿದ್ದರು. ಆದರೆ ಅವರ ಸಂಖ್ಯೆ ಬಹಳ ಬಹಳ ಕಡಿಮೆ. ಈ ದೇಶದ ಶೇ.1ರಷ್ಟು ಜನ ಮುಸ್ಲಿಮರು ಹಾಗೆ ಮಾಡಿದ್ದರೂ, ದೇಶವೇ ಉಳಿಯುತ್ತಿರಲಿಲ್ಲ. ಸಾಯಲು ಸಿದ್ಧರಾದವರಿಗೆ ಯಾವ ಭಯ?

ಆದರೆ ಅದೇ ಧರ್ಮ ಅವರಲ್ಲಿ ಮನುಷ್ಯಪ್ರೀತಿಯನ್ನು ಅರಳಿಸಿದ್ದಿದೆಯಲ್ಲಾ ಅದಕ್ಕೇನು ಹೇಳುವುದು? ಈ ದೇಶದ ಮುಸ್ಲಿಮರನ್ನು ನೋಡಲು ಮುಸ್ಲಿಮೇತರರಿಗೆ ಇನ್ನೊಂದು ಕಣ್ಣೂ ಬೇಕಿದೆ. ಇಲ್ಲವಾದರೆ ಧರ್ಮವೂ ಉಳಿಯುವುದಿಲ್ಲ, ದೇಶವೂ.


ಇದನ್ನೂ ಓದಿ: ಸೇನಾ V/s ಕಂಗನಾ ವಿವಾದ: ದೂರ ಉಳಿಯಲು ಕಾಂಗ್ರೆಸ್ ಯತ್ನ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

Avatar
ಡಾ. ಎಚ್. ವಿ ವಾಸು
+ posts